ಶುಕ್ರವಾರ, ಜನವರಿ 29, 2021

2020 ಅವಲೋಕನ

2020-ಅವಲೋಕನ

ಈ ಹೊಸ ವರ್ಷವಾದರೂ ಚೆನ್ನಾಗಿರಲೆಂದು ಪ್ರತಿ ಆಂಗ್ಲ ಕ್ಯಾಲೆಂಡರಿನ ಹೊಸ ವರ್ಷ ಬಂದಾಗ ಆಶಿಸುವುದು ತಪ್ಪಲ್ಲ. ಅಂತೆಯೆ 2020ನ್ನು ಬರಮಾಡಿಕೊಂಡಾಯ್ತು. ಜನವರಿಯಿಂದ ನಾವೆಲ್ಲ ಎಸ್.ಎಸ್.ಎಲ್.ಸಿ ತರಗತಿಗಳಿಗೆ ಹೆಚ್ಚು ಫೋಕಸ್ ಮಾಡ್ತೇವೆ. ಸ್ಕೋರಿಂಗ್, ಪರೀಕ್ಷಾ ತಯಾರಿ, ರಾತ್ರಿ ತರಗತಿಗಳು, ಚೆನ್ನಾಗಿ ಕಲಿಯುವವರಿಗೆ ಸ್ಕೋರಿಂಗ್ ಐಡಿಯಾಸ್, ಕಲಿಕೆಯಲ್ಲಿ ಹಿಂದುಳಿದವರಿಗೆ ಉತ್ತೀರ್ಣತೆಯ ಟಿಪ್ಸ್, ಪ್ರತಿ ವಿಷಯಗಳಲ್ಲೂ ಉತ್ತಮ ಅಂಕಗಳೊಂದಿಗೆ ಎಲ್ಲಾ ಮಕ್ಕಳನ್ನು ಪಾಸ್ ಮಾಡಿಸುವ, ಶಾಲೆಗೆ ಉತ್ತಮ ಹೆಸರು ತರುವ, ಉತ್ತಮ ಬ್ಯಾಚನ್ನು ಶಾಲೆಯಿಂದ ಹೊರಗೆ ಕಳಿಸುವ ಗುರುತರ ಜವಾಬ್ದಾರಿಯ ನೆರಳಿನಲ್ಲೆ ಪ್ರತಿ ಹೊಸ ವರುಷದಂತೆ ಇದನ್ನೂ ಎದಿರುಗೊಂಡೆವು. ಆ ಕಷ್ಟ ಪಟ್ಟ ಕೆಲಸ ಇನ್ನೇನು ಕೊನೆಗೊಳ್ಳಬೇಕು, ಪರೀಕ್ಷೆಗಳು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಮೊದಲೇ ಚೈನಾದಲ್ಲಿ ಹುಟ್ಟಿದ್ದ ಕೊರೋನಾ ವೈರಸ್ ಭಾರತ, ಕರ್ನಾಟಕಕ್ಕೂ ವಕ್ಕರಿಸಿಕೊಂಡು ಬಿಟ್ಟಿತು. ನೈಟ್ ಕರ್ಫ್ಯೂ, ಸೆಲ್ಫ್ ಕ್ವಾರೆಂಟೈನ್, ಮಧ್ಯಾಹ್ನದ ನಂತರ ಮನೆಯೊಳಗೆ ಹೀಗೆ 21 ದಿನ ಸಂಪೂರ್ಣವಾಗಿ ಒಬ್ಬಳೇ ಮನೆಯೊಳಗೆ ಕಳೆಯುವಂತಾಯ್ತು! ಆ ಇಪ್ಪತ್ತೊಂದು ದಿನಗಳು ಬದುಕಿನಲ್ಲಿ ಬಹಳ ಕಲಿತೆ. ನನ್ನ ಹವ್ಯಾಸಗಳು ನನ್ನ ಜತೆಯಾದವು. ಹಳೆ ಬಟ್ಟೆಯಿಂದ ಡೋರ್ ಮ್ಯಾಟ್ ತಯಾರಿಸುವುದು, ಬ್ಯಾಗ್ ಗಳ ತಯಾರಿಕೆ, ಟೈಲರಿಂಗ್ ಹಾಗೂ ಎಂಬ್ರಾಯ್ಡರಿಯಲ್ಲಿ ಹೊಸ ಹೊಸ ಪ್ರಯೋಗಗಳು, ಡ್ರಾಯಿಂಗ್ ಡಿಸೈನ್ ಗಳ ರಚನೆ, ಅಂಕಣ ಬರಹ, ಕವಿಗಳ ಗುಂಪಿನಲ್ಲಿ ಬರಹ, ಹರಟೆ, ಕಾಂಪಿಟೇಶನ್ ಇವು ಸಮಯವನ್ನು ಬಹಳಷ್ಟು ವೇಗದಲ್ಲಿ ಕಳೆಯುವಂತೆ ಮಾಡಿದವು. 
     ಏಪ್ರಿಲ್ 22ಕ್ಕೆ ಅಚಾನಕ್ಕಾಗಿ ನನ್ನ ಅತ್ತೆಯವರು ತೀರಿಕೊಂಡ ಸುದ್ದಿ ಬಂತು. ನಮ್ಮ ಮನೆಗೇ ನನಗೆ ಹೋಗಲು ಅನುಮತಿಯಿರಲಿಲ್ಲ. ಮೂರ್ನಾಲ್ಕು ಎಎಸ್ಐಗಳ ಸಹಾಯದಿಂದ ಹೇಗೇಗೋ ಕುಟುಂಬದ ಸ್ನೇಹಿತರ ಸಹಾಯ ಪಡೆದು ಮನೆ ಸೇರಿಕೊಂಡು ಅಂತಿಮ ವಿಧಿ ವಿಧಾನಗಳ ನೆರವೇರಿಸಿದ್ದಾಯ್ತು. ತದನಂತರ ನಮಗೆ ರಜೆಯೇನೂ ಇರಲಿಲ್ಲವಲ್ಲ, ಅಮ್ಮನ ಮನೆ ಉಡುಪಿ ಜಿಲ್ಲೆ, ಕೆಲಸ ದಕ್ಷಿಣ ಕನ್ನಡ ಜಿಲ್ಲೆ, ಗಂಡನ ಮನೆ ಚಿಕ್ಕಮಗಳೂರು ಜಿಲ್ಲೆ! ಮಗಳು ಅಜ್ಜಿ ಮನೇಲಿ, ಗಂಡ ಮನೇಲಿ, ನಾನು ಸುಳ್ಯದಲ್ಲಿ ಬಾಡಿಗೆ ಮನೇಲಿ ಬಾಕಿಯಾದ ಕಾರಣ ಆಚೀಚೆ ಹೋದಾಗೆಲ್ಲ ಕೈಗೆ ಸೀಲ್ ಹಾಕಿಸಿಕೊಂಡು ಎರಡೆರಡು ಬಾರಿ ಹದಿನಾಲ್ಕು ದಿನಗಳ ಕ್ವಾರೆಂಟೇನ್ ಮಾಡಿಕೊಂಡದ್ದಾಯ್ತು! 
      ಕೊರೋನ, ಸ್ಯಾನಿಟೈಝರ್, ಫೇಸ್ ಮಾಸ್ಕ್,ಕ್ವಾರೆಂಟೇನ್ ಎಂಬ ಹೊಸ ಹೊಸ ಪದಗಳ ಕಲಿತು ಪ್ರಾಯೋಗಿಕವಾಗಿ ಬಳಸಿದ್ದೂ ಆಯ್ತು! ಸರಕಾರದ ಆದೇಶದಂತೆ ಜೀವವನ್ನೇ ಪಣಕ್ಕಿಟ್ಟು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿದ್ದೂ ಆಯ್ತು. ಪ್ರತಿನಿತ್ಯ ಇನ್ನೂರು-ಇನ್ನೂರೈವತ್ತು ಕಿಲೋಮೀಟರ್ ಜರ್ನಿ ಮಾಡಿ ಮಂಗಳೂರಿಗೆ ಹೋಗಿ ಪೇಪರ್ ಗಳ ಇವ್ಯಾಲ್ಯೂವೇಶನ್ ಮಾಡಿ ರಿಸಲ್ಟ್ ಕೊಟ್ಟದ್ದೂ ಆಯ್ತು. ಶಾಲೆಗಳಿಗೆ ಅಡ್ಮಿಶನ್ ಕೂಡಾ ಆಯ್ತು, ಮನೆಮನೆಗೆ ಹೋಗಿ ವಿದ್ಯಾಗಮ ಮಾಡಿದ್ದೂ ಆಯ್ತು. ಕೋವಿಡ್ ಡ್ಯೂಟಿ ನಿರ್ವಹಿಸಿದ್ದೂ ಆಯ್ತು. ವಿದ್ಯಾರ್ಥಿಗಳು ಇಲ್ಲದ ಕಾರಣ ಶಾಲೆಯಲ್ಲಿ ನಾವೇ ಅಡಿಗೆ, ಕ್ಲೀನಿಂಗ್, ತೊಳೆಯುವ, ಗುಡಿಸುವ ಒರೆಸುವ, ಬಲೆ ತೆಗೆಯುವ, ಗಾರ್ಡೆನಿಂಗ್ ಸರ್ವ ಕಾರ್ಯಗಳನ್ನು ಮಾಡಿದ್ದೂ ಆಯ್ತು. ಆನ್ ಲೈನ್ ಪಾಠಗಳನ್ನು ಕೊಟ್ಟದ್ದೂ ಆಯ್ತು!
ಇದೆಲ್ಲವೂ 2020ರ ಹೊಸ ಅನುಭವಗಳೇ. ಕೊರೋನದ ನಡುವೆ ವರ್ಷದ ಕೊನೆಯಲ್ಲಿ ಕೊರೋನದ ಮರಿ ಬಂದು ಹಾಹಾಕಾರ ಎಬ್ಬಿಸುತ್ತಿದ್ದರೂ ಗ್ರಾಮ ಪಂಚಾಯತ್ ಚುಣಾವಣೆ ಮಾಡಿ ಮತಗಳ ಎಣಿಸಿ ಲೆಕ್ಕಾಚಾರ ಕೊಟ್ಟದ್ದೂ ಆಯ್ತು. 
   ಕೊರೋನ ಬಂದು ಹಲವಾರು ನೀತಿ ಪಾಠ ಕಲಿಸಿತು. 
1  ಒಂದೇ ತಾಲೂಕಿನ ಸರಕಾರಿ ನೌಕರರು ಯಾವುದೇ ತೊಂದರೆ, ಗಲಾಟೆಗಳಿಲ್ಲದೆ ತಮ್ಮ ತಾಲೂಕಿನೊಳಗೆ ತಾವೇ ಚುನಾವಣೆ ನಡೆಸಿ, ಫಲಿತಾಂಶ ಕೊಡಲು ಅರ್ಹರಾಗಿರುವರು. ಶಾಂತಿಯುತ ಮತದಾನಕ್ಕಾಗಿ ಬೇರೆ ಬೇರೆ ತಾಲೂಕುಗಳಿಗೆ ಕಳುಹಿಸಿ ಸರಕಾರಿ ನೌಕರರನ್ನು ಗೋಳುಹೊಯಿಸಬೇಕಾಗಿಲ್ಲ.
2. ತಮ್ಮ ಮನೆ, ಕುಟುಂಬ ಮಕ್ಕಳ ಜೊತೆ ಹಾಯಾಗಿ ಸಮಯ ಕಳೆದು ಅವರ ಪ್ರೀತಿಯನ್ನು ಅನುಭವಿಸಿ ಜೀವನದ ಮತ್ತೊಂದು ಮುಖದ ಅನಾವರಣವಾಯ್ತು.
3. ತಿಂಗಳುಗಟ್ಟಲೆ ಡೇಶಿಫ್ಟ್, ನೈಟ್ ಶಿಫ್ಟ್ ಗುಡಿಯದಿದ್ದರೂ, ಧಾವಂತದ ಓಡಾಟವಿಲ್ಲದಿದ್ದರೂ ಯಾರ ಜೀವನವೂ ಕೊನೆಯಾಗಲಿಲ್ಲ. ಯಾವ ಬಡವನೂ ಊಟಕ್ಕಿಲ್ಲದೆ ಸಾಯಲಿಲ್ಲ.
4. ತಮ್ಮ ತಲೆ ಓಡಿಸಿ, ತಮ್ಮ ತಮ್ಮ ಮನೆಯ ಕಾರ್ಯಗಳನ್ನು ತಾವೇ ಮಾಡಿಕೊಳ್ಳುವಂತಾಯ್ತು. 
5. ಕುಟುಂಬ, ಸಂಸಾರದ ಎಲ್ಲರೂ ಒಟ್ಟಾಗಲು ಸಹಾಯಕವಾಯಿತು. ಎಷ್ಟೋ ವರ್ಷಗಳಿಂದ ನೋಡದ ಬಂಧುಗಳ ಮುಖ ನೋಡುವಂತಾಯ್ತು.
6. ಮಕ್ಕಳಿಗೆ ಹಳ್ಳಿಯ ಅಜ್ಜಿಮನೆಯ ದರ್ಶನವಾಯಿತು.
7. ಮದುವೆ, ಕೋಲ, ದೈವದರ್ಶನ, ಪೂಜೆ, ಗೃಹಪ್ರವೇಶ, ನಿಶ್ಚಿತಾರ್ಥ,ಸೀಮಂತ ಮೊದಲಾದ ಸರ್ವ ಸಮಾರಂಭಗಳನ್ನೂ ಸಿಂಪಲ್ಲಾಗಿ ನಡೆಸಬಹುದೆಂಬ ಅರಿವಾಯ್ತು.
8. ಕಷ್ಟ ಕಾಲದಲ್ಲಿ ನಮ್ಮ ಕುಟುಂಬ ವರ್ಗದವರೂ ಕೂಡ ನಮ್ಮ ಸಹಾಯಕ್ಕೆ ಬರಲಾರರು, ನಮಗೆ ನಾವೇ, ನಾವು ಯಾರನ್ನೂ ಅವಲಂಬಿಸಿರಬಾರದೆಂಬ ಪಾಠ ಕಲಿತಂತಾಯ್ತು.
9. ತಾವು ಸಾಯುತ್ತೇವೆಯೆಂಬ ಭಯ ಬಂದರೆ ಮಾನವ ಯಾರ ಬಗ್ಗೆಯೂ ಚಿಂತೆ ಮಾಡಲಾರ, ತನ್ನ ಬಗ್ಗೆ ಮಾತ್ರ ಯೋಚಿಸುತ್ತಾನೆ. ತಾನು, ತನ್ನದು, ತನಗೆ ಎಂಬುದೇ ಬದುಕಿನ ಮಂತ್ರವಾಯ್ತು. ಯಾರು ಬಿದ್ದರೂ, ಕಷ್ಟದಲ್ಲಿ ನರಳಾಡಿದರೂ ಸಹಾಯ ಹಸ್ತ ಚಾಚುವವರಾರೂ ಇಲ್ಲ ಮುಂದಕ್ಕೆ ನೆನಪಿರಲಿ!
10. ಪಕ್ಕದ ಮನೆ, ಆಚೀಚೆ ಮನೆ, ಬಂಧುಗಳು ಯಾರೂ ಯಾರಿಗೂ ಸಹಾಯ ಮಾಡದ ಪರಿಸ್ಥಿತಿ ಬಂದೊದಗಿತು.
11. ರೈತ, ಕೃಷಿಯ ಬದುಕೇ ಶಾಶ್ವತವೆಂಬ ವಿಷಯ ಸರ್ವರಿಗೂ ಅರಿವಾಯ್ತು.
    2020ನೇ ಇಸವಿ ಜನಜೀವನ ಅಸ್ತವ್ಯಸ್ತವಾದರೂ ಆಯುರ್ವೇದ ಪದ್ಧತಿಯನ್ನೊಪ್ಪದ ಜನರೂ ಕಷಾಯ ಕುಡಿಯಲು ಪ್ರಾರಂಭಿಸಿದರು! ಆರೋಗ್ಯ, ಕ್ಲೀನಿಂಗ್ ಕಡೆ, ತಮ್ಮ ದೇಹದ ಕಡೆ ಗಮನ ಕೊಟ್ಟರು. ಮಾಸ್ಕ್ ಬಳಕೆಯಿಂದ ಧೂಳಿನ ಅಲರ್ಜಿ ಕಡಿಮೆಯಾಯಿತು. ವಾಹನಗಳ ನಿಲುಗಡೆಯಿಂದ ಪರಿಸರ ನಾಶ, ವಾಯುಮಾಲಿನ್ಯ ಕಡಿಮೆಯಾಗಿ, ಪೆಟ್ರೋಲ್, ಡೀಸಲ್ ಉಳಿಕೆಯಾಯ್ತು. ತನ್ನನ್ನು ತಾನು ಸರಿಪಡಿಸಿಕೊಳ್ಳಲು ಭೂಮಿಗೊಂದಿಷ್ಟು ಸಮಯ ಸಿಕ್ಕಿತು! 
  ಪರಿಸರದ ಮಾಲಿನ್ಯ ಕಡಿಮೆಯಾದಂತಾಯಿತು. ಗಾಳಿ, ನೀರು, ಮಣ್ಣು ಒಂದಷ್ಟು ದಿನ ನೆಮ್ಮದಿಯಿಂದ ಉಸಿರಾಡಿದವು. 
  ಒಟ್ಟಿನಲ್ಲಿ 2020 ಹೊಸ ಅನುಭವ ನೀಡಿದ ಮರೆಯಲಾಗದ, ಹೊಸ ಪಾಠ ಕಲಿಸಿದ, ಅತಿಯಾದರೆ ಅಮೃತವೂ ವಿಷವೆಂದು ತಿಳಿಸಿದ ವರುಷವೆಂದರೆ ತಪ್ಪಾಗಲಾರದು. ನೀವೇನಂತೀರಿ?
@ಪ್ರೇಮ್@
31.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ