ಧೀರ ಮಹಿಳೆಯಲ್ಲವೇ ಈಕೆ?
ಸಾಧಾರಣವಾಗಿ ಮಹಿಳೆಯರೆಲ್ಲ ತಮಗಿರುವ ಕಷ್ಟಗಳ ಬಗ್ಗೆ ಅಕ್ಕ-ಪಕ್ಕದವರಲ್ಲಿ, ತುಂಬಾ ಆತ್ಮೀಯರಾದವರಲ್ಲಿ,ಬಂಧುಗಳಲ್ಲಿ ಹಾಗೂ ಪರಿಹಾರ ಸಿಗಬಹುದೆಂಬ ಭರವಸೆಯಿರುವ ಸ್ವಾಮೀಜಿ,ಸಾಧು-ಸಂತರಲ್ಲಿ ಹೇಳಿಕೊಂಡು ಅಳುವುದನ್ನು ನಾವು ನೋಡಿದ್ದೇವೆ. ನಾನು ಅವಲೋಕನ ಮಾಡಿದಂತೆ, ಮದುವೆಯಾದ ಬಳಿಕ 'ನನಗೇನೂ ಕಷ್ಟಗಳೇ ಇಲ್ಲ, ನಾನು ತುಂಬಾ ಚೆನ್ನಾಗಿದ್ದೇನೆ' ಎನ್ನುವ ಮಹಿಳೆಯರು ಒಂದೆರಡು ಶೇಕಡಾ ಇರಬಹುದಷ್ಟೇ. ಇನ್ನುಳಿದ 98% ರಷ್ಟು ಮಹಿಳೆಯರು ಕಷ್ಟಗಳನ್ನು ಅನುಭವಿಸಿಕೊಂಡು, ಎದುರಿಸುತ್ತಾ, ಅವುಗಳೊಡನೆ ಹೊಂದಾಣಿಕೆ ಮಾಡಿಕೊಂಡು, ಸೆರಗಿನಲ್ಲಿ ಕಣ್ಣು ,ಮೂಗೊರೆಸಿಕೊಂಡು ಮಕ್ಕಳಿಗಾಗಿ ಬದುಕುತ್ತಾರೆ.
ಒಂದೆರಡು ಶೇಕಡಾ ಮಹಿಳೆಯರಿದ್ದಾರೆ, ಅವರು ದಿಟ್ಟತನದಿಂದ ತಮಗಿರುವ ಕಷ್ಟಗಳನ್ನೆಲ್ಲಾ ಎದುರಿಸಿ,ತಾನೂ ಏನಾದರೂ ಸಾಧಿಸಬೇಕೆಂದು ಪಣತೊಟ್ಟು ಕೆಲಸ ಮಾಡುವವರು ಇವರು. ನಾನು ನೋಡಿದ ಅಂಥ ಮಹಿಳೆಯರಲ್ಲಿ ಸಾಮಾನ್ಯಾತಿಸಾಮಾನ್ಯ ಮಹಿಳೆ ಸಂಧ್ಯಾ ಒಬ್ಬರು. ಹೆಚ್ಚಿನ ಮಹಿಳೆಯರಂತೆ ಇವರೂ ಕೂಡಾ ಗೃಹಿಣಿ. ಮೂರು ತಿಂಗಳ ಕಾಲ ಆಸ್ಪತ್ರೆಯ ಬೆಡ್ ನ ಮೇಲೆ ಜೀವಚ್ಛವದಂತೆ ಬಿದ್ದುಕೊಂಡು, ಆ ಕೋಮಾ ಸ್ಥಿತಿಯಿಂದ ಈಗ ಎದ್ದು ಬಂದು ತನ್ನೆರಡು ಮಕ್ಕಳನ್ನು ನೋಡಿಕೊಂಡು ಮನೆ ನಿಭಾಯಿಸುತ್ತಿರುವ ದಿಟ್ಟ ಮಹಿಳೆ!
ತನ್ನ ಅತ್ತಿಗೆ ನಾದಿನಿಯರು ಸೇರಿಕೊಂಡು ತಮ್ಮ ಅಮ್ಮ ತನ್ನ ಸೊಸೆಯನ್ನು ಚೆನ್ನಾಗಿ ನೋಡಿಕೊಂಡಿರುವುದನ್ನು ಸಹಿಸಲಾಗದೆ ಏನೇನೋ ಮಾಡಿ,ಕೊನೆಗೆ ಕ್ಷುಲ್ಲಕ ಕಾರಣಕ್ಕೆ ತನ್ನನ್ನು ಮನೆಯಿಂದ ಹೊರ ಹಾಕಿದರೂ ಲೆಕ್ಕಿಸದೆ ಬದುಕಿದ ಮಹಿಳೆ ಈಕೆ!
ಅಕ್ಕ -ತಂಗಿಯರ ಮಾತು ಕೇಳಿದ ತನ್ನ ಗಂಡ ತನ್ನೆರಡು ಕೈಗಳನ್ನು ಕಟ್ಟಿ ಹಾಕಿ ಗರ್ಭಿಣಿಯಾದ ತನ್ನ ಹೊಟ್ಟೆಗೆ ಒದ್ದಾಗ ಹೊಟ್ಟೆಯೊಳಗಿದ್ದ ಮಗು (ಭ್ರೂಣ) ಹೆಣದ ರೂಪದಲ್ಲಿ ಹೊರಬಂತು.ಆ ನೋವನ್ನೂ ತುಟಿಕಚ್ಚಿ ಸಹಿಸಿಕೊಂಡ ಸಂಧ್ಯಾ ಹೆದರದೆ ಜೀವನ ನಡೆಸಲು ಮುಂದಾದಾಗ ನಾದಿನಿ ಹಾಕಿದ ಸವಾಲು 'ನೀನು ನನ್ನ ಅಣ್ಣನೊಡನೆ ಅದು ಹೇಗೆ ಬದುಕಿ, ಬಾಳಿ ಜೀವನ ಸಾಗಿಸುತ್ತೀಯಾ ಎಂದು ನೋಡಿಕೊಳ್ಳುತ್ತೇವೆ' ಎಂದು. ಅದನ್ನೂ ಸವಾಲಾಗಿ ಸ್ವೀಕರಿಸಿದಳು ಸಂಧ್ಯ.
ಅತ್ತಿಗೆ ನಾದಿನಿಯರು ಸೇರಿ ತನ್ನ ಗಂಡನಿಗೆ ಕುಡಿತ ಕಲಿಸಿದರು.ಕುಡಿದು ಬಂದು ದಿನಾಲೂ ಜಗಳವಾಡತೊಡಗಿದ ಸಂಧ್ಯಾಳ ಗಂಡ! ಪ್ರತಿನಿತ್ಯ ಜಗಳ, ಹೊಡೆತ. ಹೊಡೆದ ಏಟಿನ ರಭಸಕ್ಕೆ ತಲೆ ಒಡೆದು ರಕ್ತ ಚಿಮ್ಮಿತ್ತು! ಇನ್ನೊಂದು ದಿನ ಕಣ್ಣಿನಿಂದ,ಮತ್ತೊಂದು ದಿನ ಮೂಗಿನಿಂದ,ಕಿವಿ,ಬಾಯಿಯಿಂದ ರಕ್ತ ಒತ್ತರಿಸಿ ಬರುತಿತ್ತು. ದೇಹವಿಡೀ ಬಾಸುಂಡೆಗಳಿಂದ ತುಂಬಿದ, ಏಟಿನ ಕಲೆಗಳಿಂದ ಛಿದ್ರವಾಯಿತು.ಇದಕ್ಕೆಲ್ಲ ಪುಟಾಣಿ ಮಕ್ಕಳು ಮೂಕ ಸಾಕ್ಷಿಗಳಾದರು.ದಿಟ್ಟ ಮಹಿಳೆ ಯಾರು ಯಾರದೋ ಸಹಾಯ ಪಡೆದು,ದೇವರಲ್ಲಿ ಬೇಡಿಕೊಂಡು,ಗಂಡನ ಅಕ್ಕ-ಭಾವನವರಲ್ಲೆ ಕುಟುಂಬದ ಪೂಜೆಯ ದಿನ ಹರಕೆ ಸಲ್ಲಿಸಿ,ಕುಡಿತ ಬಿಡಿಸುವಂತೆ ಬೇಡಿಕೊಳ್ಳುವಂತೆ ಎಲ್ಲರ ಎದುರಿನಲ್ಲೆ ಕೇಳಿಕೊಂಡಾಗ ಅತ್ತಿಗೆ ಮರು ಮಾತನಾಡದೆ ಒಪ್ಪಿಕೊಳ್ಳಲೇ ಬೇಕಾಯಿತು!
ತನ್ನ ಗಂಡನಿಗೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇದೆ ಎಂದು ತಿಳಿದ ಸಂಧ್ಯಾ ಹೆದರಲಿಲ್ಲ,ಕೂಗಾಡಿ ಕಿರುಚಲಿಲ್ಲ! ಅತ್ತು ಕರೆದು ಯಾರಲ್ಲೂ ಹೇಳಿಕೊಳ್ಳಲೂ ಇಲ್ಲ! ಬದಲಾಗಿ ಅದರ ಬಗ್ಗೆ ಪತ್ತೆದಾರಿ ಪ್ರತಿಭಾನಂತೆ ಒಂದೊಂದೇ ಮಾಹಿತಿ ಕಲೆಹಾಕತೊಡಗಿದಳು.ಕೊನೆಗೊಂದು ದಿನ ಬೇರೊಬ್ಬಳ ಮನೆಯಲ್ಲಿದ್ದ ತನ್ನ ಗಂಡನ ಬಟ್ಟೆಗಳನ್ನೆಲ್ಲ ಕದ್ದು ಸಾಗಿಸಿ, ಅವರಿಬ್ಬರೂ ಒಟ್ಟಿಗಿರುವಾಗ ಮನೆಗೆ ನುಗ್ಗಲು ಪ್ರಯತ್ನಿಸಿದಳು. ವಿಷಯ ತಿಳಿದ ಅವರಿಬ್ಬರೂ ಅವಳನ್ನು ಹುಚ್ಚಿಯೆಂದು ಎಲ್ಲ ಕಡೆ ವಿಷಯ ಹಬ್ಬಿಸಿ ಬಿಟ್ಟರು! ಹೊಡೆಯಲು ಓಡಿಸಿಕೊಂಡು ಹೋದಾಗ ಯಾರದೋ ಮನೆಗೆ ನುಗ್ಗಿ,ಗುಡ್ಡ-ಬೆಟ್ಟ ಹತ್ತಿ,ಕಾಂಪೌಂಡ್ ಹಾರಿ,ಕಚ್ಚುವ ನಾಯಿಯಿಂದ ಅಕಸ್ಮಾತಾಗಿ ಪಾರಾಗಿ,ನಡೆದು,ಓಡಿ ಯಾವುದೋ ಊರು ತಲುಪಿ,ಕೈಯಲ್ಲಿ ಕಾಸಿಲ್ಲದ್ದು ನೆನಪಾಗಿ ಅಲ್ಲಿದ್ದ ಅಂಗಡಿಯವರಿಂದ ಒಂದೆರಡು ನಾಣ್ಯ ಪಡೆದು,ಹಿರಿಯರಿಗೆ ಫೋನ್ ಮಾಡಿ ವಿಷಯ ತಿಳಿಸಿ, ಆಟೋ ಮಾಡಿ ತನ್ನ ಮನೆ ಸೇರಿ ಜೀವ ಉಳಿಸಿಕೊಂಡ ದಿಟ್ಟ ಮಹಿಳೆ ಸಂಧ್ಯಾ!
ಆದರೂ ಅವಳು ಡಿವೋರ್ಸ್ ಮೊರೆ ಹೋಗಲಿಲ್ಲ! ಕಾರಣ ಅತ್ತಿಗೆ-ನಾದಿನಿಯರ ಮಾತಿಗೆ ತಾನು ಬಗ್ಗಬಾರದೆಂಬ, ಸಾಧಿಸಿ ತೋರಿಸುವೆನೆಂಬ ಹಠ!
ಎಲ್ಲಾ ಸರಿಯಾಗಿ ಒಂದು ಹಂತಕ್ಕೆ ಬರುವಾಗ ತನ್ನ ಆರೋಗ್ಯವನ್ನು ಕಳೆದುಕೊಂಡಿದ್ದಾಳೆ ಅವಳು! ದಂತದ ಗೊಂಬೆಯಂತಿದ್ದ ಸಂಧ್ಯಳಿಗೀಗ ರಕ್ತದ ಒತ್ತಡ ಕಡಿಮೆಯಾಗಿದೆ, ಅದರೊಂದಿಗೆ ರಕ್ತದಲ್ಲಿ ಸಕ್ಕರೆಯ ಅಂಶವೂ ಕಡಿಮೆ. ಆದರೂ ಯಾವುದೇ ದೈಹಿಕ ಅನಾರೋಗ್ಯಕ್ಕೆ ಜಗ್ಗದೆ,ಬಗ್ಗದೆ,ವೈದ್ಯರ ಸಲಹೆಯನ್ನು ಸರಿಯಾಗಿ ಪಡೆದು ಅದರಂತೆ ಪಾಲಿಸುತ್ತಿದ್ದಾಳೆ. ಪ್ರತಿನಿತ್ಯ ಯೋಗ, ಧ್ಯಾನ,ಪ್ರಾಣಾಯಾಮ ಮಾಡಿ ಮನಸ್ಸಿನ ಹಾಗೂ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾಳೆ ಸಂಧ್ಯ.
ಸಂಧ್ಯಾಳಿಂದ ನಮ್ಮ ಜೀವನದಲ್ಲಿ ನಾವು ಕಲಿಯೋದು ತುಂಬಾ ಇದೆ. ಗಂಡ ಕುಡಿತದಿಂದ ತನ್ನ ಕೆಲಸ ಕಳೆದುಕೊಂಡಾಗ ತನ್ನಲ್ಲಿದ್ದ ಚಿನ್ನವನ್ನು ಮಾರಿ ಸಂಸಾರ ಸಾಗಿಸಿದ್ದಾಳೆ ಸಂಧ್ಯ! ಅವಳ ಗಂಡನಿಗೀಗ ತನ್ನ ಜೀವನದಲ್ಲಿ ತನ್ನ ಹೆಂಡತಿಯ ಪಾತ್ರದ ಅರಿವಾಗಿದೆ! ತನ್ನ ಕುಟುಂಬಕ್ಕಾಗಿ ಹೊಸ ಮನೆಯೊಂದನ್ನು ಕಟ್ಟಿಸುತ್ತಿದ್ದಾನೆ! ಪತ್ನಿ ಸಹಾಯಕಳಾಗಿ ನಿಂತಿದ್ದಾಳೆ...
ತಾಳ್ಮೆ, ದಿಟ್ಟತನ,ಧೈರ್ಯ,ಸ್ಥೈರ್ಯಗಳಿದ್ದರೆ ಕುಟುಂಬ ಹಾಗೂ ಸಮಾಜದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದೆಂಬ ನೀತಿಯನ್ನು ತೋರಿಸಿಕೊಟ್ಟ ಉದಾತ್ತ ಮಹಿಳೆ ಸಂಧ್ಯ! ಯಾವುದೇ ಪ್ರಶಸ್ತಿಗೆ ಅರ್ಹಳಲ್ಲವೇ ಇವಳು? ಇವಳ ಜೀವನದಿಂದ ನೂರಾರು ಮಹಿಳೆಯರು ಕಲಿಯಬೇಕಾದದ್ದು ತುಂಬಾ ಇದೆ ಅನ್ನಿಸುವುದಿಲ್ಲವೇ?ನೀವೇನಂತೀರಿ?
@ಪ್ರೇಮ್@