ಶನಿವಾರ, ಅಕ್ಟೋಬರ್ 8, 2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -151

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -151

ಮಾತು ಬೆಳ್ಳಿ ಮೌನ ಬಂಗಾರ ಎಲ್ಲರೂ ತಿಳಿದಿರುವ ಗಾದೆ. ಇಂತಹ ಹೆಚ್ಚಿನ ಗಾದೆಗಳು ಈಗಿನ ಕಾಲಘಟ್ಟಕ್ಕೆ ಅನ್ವಯಿಸುವುದಿಲ್ಲ ಎಂದಾದರೆ ಅವುಗಳ ಸಾಲಲ್ಲಿ ಈ ಗಾದೆಯೂ ಸೇರಬೇಕು ಅಲ್ಲವೇ? ಇಂದು ಮಾತನಾಡದೆ ಮೌನವಾಗಿ ಕುಳಿತವನನ್ನು ಜನ ಏನು ಬೇಕಾದರೂ ಮಾಡಿಯಾರು..ಇಂದಿನ ಗಾದೆ ಮಾತು ಬಲ್ಲವನಿಗೆ ಜಗಳವಿಲ್ಲ, ಬದುಕಬಲ್ಲ! "ಅಯ್ಯೋ..ಅವರು ಬಾರಿ ಒಳ್ಳೆ ಜನ, ಎಲ್ಲಿ ನೋಡಿದರೂ ಮಾತನಾಡದೆ ಹೋಗುವುದಿಲ್ಲ .." ಎನ್ನುವುದಿಲ್ಲವೇ? ಹಾಗೆಯೇ ನೀವು ಬಾಯಿ ಮುಚ್ಚಿಕೊಂಡೆ ಇದ್ದರೆ ನಿಮ್ಮ ಅನುಭವಗಳು, ಮಾತಿನ ವೈಖರಿ, ನಿಮ್ಮ ನೋವು ನಲಿವುಗಳು, ಆಲೋಚನೆಗಳು ಪರರಿಗೆ ತಿಳಿಯುವುದು ಹೇಗೆ? ಪ್ರಾಣಿಗಳು, ಮರ ಹುಟ್ಟಿ, ಮರವಿದ್ದು ಮರ ಸತ್ತ ಹಾಗೆ. ಅದು ಕೆಟ್ಟದೇನೂ ಅಲ್ಲ ಬಿಡಿ, ಆದರೆ ಭೂಮಿಗೆ ಬಂದ ಮೇಲೆ ನಮ್ಮ ಅಸ್ತಿತ್ವದ ಛಾಪನ್ನು  ಉಳಿಸಿ ಹೋಗಬೇಕಲ್ಲ!

ನಾವು ಎಷ್ಟು ಪದವಿಗಳನ್ನು ಪಡೆದಿದ್ದೇವೆ, ಎಷ್ಟು ಜನ ಫಾಲೋವರ್ಸ್ ಗಳನ್ನು ಹೊಂದಿದ್ದೇವೆ ಎನ್ನುವುದಕ್ಕಿಂತಲೂ ನಮ್ಮ ಮಾತು ಎಷ್ಟು ಜನರಿಗೆ ಖುಷಿ ಕೊಡುತ್ತದೆ, ನಮ್ಮ ಮೌನ ಅದೆಷ್ಟು ಜನರಲ್ಲಿ ಬೇಸರ  ಮೂಡಿಸುತ್ತದೆ ಎಂಬುದು ಮುಖ್ಯ ಅಲ್ಲವೇ? ಮೂರು ದಿನದ ಬದುಕಲ್ಲಿ ನಮ್ಮ ಮಾತು ನೂರು ಮನಗಳಲ್ಲಿ ನಗು ಅದಕ್ಕಿಂತ ಬದುಕಿನ ಸಾರ್ಥಕತೆಗೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು ಅಲ್ಲವೇ? ಸಾಧ್ಯವಾದರೆ ಸಹಾಯ, ಇಲ್ಲದೆ ಹೋದರೆ ಮೌನ. ಬೆಸ್ಟ್ ಅಲ್ಲವೇ?

ಬದುಕು ನಾವು ಅಂದುಕೊಂಡ ಹಾಗೆ ಇರುವುದಿಲ್ಲ. ಯಾರ ಸಮಯ ಹೇಗೆ ಬರುವುದು ಎಂದು ಯಾರೂ ಹೇಳಲು ಸಾಧ್ಯವೇ ಇಲ್ಲ. ಕಚ್ಚಾ ಬಾದಾಮ್ ಹಾಡುಗಾರನ ಹಾಗೆ ಒಮ್ಮೆ ಜೀಕುಯ್ಯಾಲೆಯಲ್ಲಿ ನಿಮ್ಮ ಒಳ್ಳೆಯ ಗುಣ, ಹವ್ಯಾಸ ನಿಮ್ಮನ್ನು ಮೇಲಕ್ಕೆ ಎತ್ತಲೂ ಬಹುದು, ಗಾಳಿಪಟದಂತೆ ನೀವು ಗಾಳಿಯಲ್ಲಿ ಹಾರಲೂ ಬಹುದು. ಮತ್ತೊಮ್ಮೆ ನೂಲು ತುಂಡಾದ ಗಾಳಿಪಟ ನೆಲಕ್ಕೆ ಉದುರಿದ ಹಾಗೆ ಬೀಳಲೂ ಬಹುದು, ಅದೃಷ್ಟ ಚೆನ್ನಾಗಿ ಇದ್ದರೆ ಕೆಳಗೆ ಬೀಳದೆ ಮರದ ಮೇಲೆ ನೇತಾಡಿಕೊಂಡು ಇರಬಹುದು. 

ಮೌನಕ್ಕೆ ಶರಣಾದವ ಎಲ್ಲಿ ಹೇಗೆ ಇರುತ್ತಾನೆ ಎಂದು ಗೊತ್ತೆ ಆಗುವುದಿಲ್ಲ.  ಅತಿ ನೋವು, ಅತಿ ಬೇಸರವೂ ಮೌನಕ್ಕೆ ಕಾರಣ ಆಗ ಬಲ್ಲದು. ನಾವು ನೋಡುವ ನಗು ಮುಖಗಳ ಹಿಂದೆ ದೊಡ್ಡದಾದ ನೋವಿರಬಹುದು. ನಾವು ಅಂದುಕೊಂಡ ಹಾಗಿಲ್ಲ ಯಾರ ಬದುಕೂ ಕೂಡಾ. ಸದಾ ಏನೂ ಮಾಡದೆ ಇರುವವರನ್ನು ಸೋಮಾರಿಗಳು ಎನ್ನುತ್ತೇವೆ. ಆ ಸೋಮಾರಿತನಕ್ಕೂ ಕಾರಣ ಇಲ್ಲವೇ? ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜಿಕ ತೊಂದರೆಗಳು ಮಾನವನ ಬೇಕು ಬೇಡಗಳನ್ನು ಸರಿಯಾಗಿ ತೂಗಿಸಲು ಸಾಧ್ಯ ಆಗದೆ ಜನ ಕೆಟ್ಟ ಅಥವಾ ಒಳ್ಳೆಯ ಅಥವಾ ಅಸಾಧಾರಣ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಆಗ ಮೌನವೂ ಗೆಳೆಯನಾಗಿ ಬಿಡುತ್ತದೆ.

 ಕೆಲವರು ಮಾತಲ್ಲಿ ಮೌನವಾಗಿ ಇದ್ದರೂ ಕೂಡಾ ಕೆಲಸದಲ್ಲಿ, ಬರವಣಿಗೆಯಲ್ಲಿ ತಮ್ಮ ಶಕ್ತಿಯನ್ನು ತೋರುತ್ತಾರೆ, ಇನ್ನು ಕೆಲವರು ತೋರಿಕೆಗಾಗಿ ಬದುಕುತ್ತಾರೆ. ಒಟ್ಟಿನಲ್ಲಿ ಬದುಕಿನ ಘಟನೆಗಳು ಮಾನವನಿಗೆ ಎಲ್ಲವನ್ನೂ ಕಲಿಸುತ್ತವೆ. ಹಾಗಾಗಿ ವಯಸ್ಸು ಹೆಚ್ಚಾದಷ್ಟು ಅನುಭವ ಹೆಚ್ಚು. ಮಾತು ಆಡಬೇಕೋ ಬೇಡವೋ ಎಂಬ ತಿಳುವಳಿಕೆ ಬರುತ್ತದೆ. ಚಿಲ್ಲರೆ ಸದ್ದು ಮಾಡುತ್ತದೆ,  ನೋಟಲ್ಲ. ಹೀಗೂ ಒಂದು ಮಾತಿದೆ, ಅಂದರೆ ಹೆಚ್ಚಿನ ವಿಷಯ ತಿಳಿದುಕೊಂಡವ ಮೌನಕ್ಕೆ ಶರಣಾಗುವನು. ಹೆಚ್ಚು ತಿಳುವಳಿಕೆ ಉಳ್ಳವ ಇನ್ನೂ ಹೆಚ್ಚು ಕೇಳುಗನಾಗುವನು. 
ನಮಗೆ ಅನ್ನಿಸಿದ್ದನ್ನೆಲ್ಲಾ ಹೇಳಲು ಅವಕಾಶ ಇದ್ದಿದ್ದರೆ, ಪ್ರತಿಯೊಬ್ಬರೂ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ತಿಳಿದಿದ್ದರೆ ಮೌನಕ್ಕೆ ಎಲ್ಲಿ ಬೆಲೆ ಇರುತ್ತಿತ್ತು? ಮೌನ ಬಂಗಾರ ಎಲ್ಲಿ ಆಗುತ್ತಿತ್ತು? ಹಾಗಂತ ಮೌನ ಬಂಗಾರವೇ ಆದರೂ ಪ್ರಪಂಚ ಮಾತಿನಲ್ಲೇ ನಡೆಯುತ್ತಿದೆ. ಸಂಜೆ ಐದರ ಬಳಿಕ ಯಾರ ಫೋನಿಗೆ ಕರೆ ಮಾಡಿದರೂ, "ನೀವು ಕರೆಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ.." ಅಲ್ಲವೇ? ಹಾಗಾದರೆ ಬೆಳ್ಳಿ ಅಂತ ಮಾತು ಬಿಟ್ಟಿದ್ದೇವೆಯೇ ನಾವು? 

ಮಾತು ಮಾನವನ ಗುಣ. ಮಾತು ಬಾರದ ಪ್ರಾಣಿಗಳೂ ಕೂಡಾ ಶಬ್ದಗಳಿಂದ ಸಾಧ್ಯವಾಗದ ಅದೆಷ್ಟೋ ಭಾವನೆಗಳನ್ನು ಆರಚುವುದು, ಕಿರುಚುವುದು, ಚೀರುವುದು, ಬೊಗಳುವುದರ ಮೂಲಕ ನಮಗೆ ತಿಳಿಯ ಪಡಿಸುತ್ತವೆ. ತಮ್ಮ ವಿಚಾರಗಳನ್ನು ದೇಹದ ಅಂಗಾಂಗಗಳನ್ನು ಅಲ್ಲಾಡಿಸುವ ಮೂಲಕವಾದರೂ ಹೇಳುತ್ತವೆ. ಅಕ್ಷರ ಅಕ್ಷರಗಳನ್ನು ಪೋಣಿಸಿ ಶಬ್ದ, ಶಬ್ದಗಳ ಆಗರ ವಾಕ್ಯ ಮಾಡುವ ಮನುಷ್ಯ ತಾನು ತನ್ನ ಮನದ ಭಾವನೆಗಳನ್ನು ಪ್ರಕಟಿಸದೇ ಇದ್ದಾಗ ನಾವು ಇದ್ದೂ ಇಲ್ಲದವರ ಹಾಗೆ ಆಗಿ ಬಿಡುತ್ತೇವೆ.

ಸ್ವಲ್ಪ ಮಾತಿರಲಿ. ಅದು ಸಮಯಕ್ಕೆ ತಕ್ಕ ಹಾಗಿರಲಿ. ಮೌನವೂ ಇರಲಿ ಆದರೆ ಆ ಮೌನ ಹಾಗೂ ಮಾತಿನಿಂದ ಇತರರ ಮನ ನೋಯದೆ ಇರಲಿ. ಬದುಕಿಗೆ ಸಹಾಯಕ ಆಗುವಲ್ಲಿ ಮೌನ ಮತ್ತು ಮಾತಿಗೆ ಸ್ಥಳ ಖಂಡಿತಾ ಇರಲಿ. ಮಾತು ಮನೆ ಕೆಡಿಸದೆ ಇರಲಿ, ಮೌನಕ್ಕೆ ಇರುವ  ಬಂಗಾರದ ಬೆಲೆ ಕಡಿಮೆ ಆಗದೆ ಇರಲಿ. ನೀವೇನಂತೀರಿ?
@ಹನಿಬಿಂದು@
22.09.2022


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ