ಶನಿವಾರ, ಅಕ್ಟೋಬರ್ 8, 2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -152

ಒಂದಿಷ್ಟು  ರಿಲ್ಯಾಕ್ಸ್ ತಗೊಳ್ಳಿ -152

   " ಸತ್ಯದೊಂದಿಗೆ ನನ್ನ ಪರಿಕಲ್ಪನೆಗಳು"(ಮೈ ಎಕ್ಸ್ಪರಿಮೆಂಟ್ಸ್ ವಿತ್ ಟ್ರುಥ್) ಇದು ಗಾಂಧೀಜಿ ಅವರ ಜೀವನದ ಬಗ್ಗೆ ಅವರೇ ಬರೆದ ಜೀವನ ಚರಿತ್ರೆಯ ಪುಸ್ತಕ. ಹಾಗೆ ನೋಡಿದರೆ ನಮ್ಮ ಬದುಕು ಕೂಡಾ ಇದೇ ಸತ್ಯ ಅಸತ್ಯಗಳ ನಡುವೆ ಇದೆ ಅಲ್ಲವೇ? ಸೋಲು ಗೆಲುವುಗಳ ನಡುವೆ. ನಂಬಿಕೆ ದ್ರೋಹಗಳ ನಡುವೆ. ನ್ಯಾಯ ಅನ್ಯಾಯಗಳ ನಡುವೆ. ಇವೆಲ್ಲವನ್ನು ಅನುಭವಿಸದ ಮನುಷ್ಯ ಜಗತ್ತಿನಲ್ಲಿ ಇದ್ದಾನೆ ಎಂದಾದರೆ ಅವನು ಪಶುವಿಗೂ ಸಮಾನನಲ್ಲ. ಅವುಗಳ ಬದುಕಲ್ಲೂ ಇದೆ ನೋವು-ನಲಿವು. 

ಇಂದು ಗಾಂಧೀಜಿ ಅವರು ಬದುಕಿರುತ್ತಿದ್ದರೆ ಅವರಿಗೆ ನೂರ ಐವತ್ತ ಮೂರು ವರ್ಷ ತುಂಬುತ್ತಿತ್ತು. ಅವರ ತತ್ವಾದರ್ಶಗಳಿಗೆ ಅಷ್ಟು ವರ್ಷ ಆಗಿರದೇ ಇದ್ದರೂ, ಇನ್ನೂ ಸಾವಿರ ವರ್ಷ ಕಳೆದರೂ ಆವು ಸಾಯಲಾರವು. ಆದರೆ ವಿಪರ್ಯಾಸ ಎಂದರೆ ಗಾಂಧೀ ತತ್ವಗಳು ಇಂದು ಒಂದು ರಾಜಕೀಯ ಪಕ್ಷಕ್ಕೆ ಸೀಮಿತಗೊಂಡು, ಅವರನ್ನೂ ಪಕ್ಷದ ಒಳಗೆ ಸೇರಿಸಿಕೊಳ್ಳಲಾಗಿದೆ. ಅವರ ಸ್ವಚ್ಛತೆಯ ಸಂದೇಶ ಜನರ ಮನಸ್ಸಿಗೆ ಅದೊಂಚೂರು ನಾಟಿದ್ದಿದ್ದರೆ ಇಂದು ಸ್ವಚ್ಛ ಭಾರತ್ ಅಭಿಯಾನ್ ಮಾಡಿ ನಾವೆಲ್ಲರೂ ಆ ಸೆಸ್ ಕಟ್ಟಲು ಇರುತ್ತಿರಲಿಲ್ಲ. ಅಲ್ಲದೆ ಗಾಂಧಿ ಜಯಂತಿಯ ದಿನ ಎಲ್ಲರೂ ರಸ್ತೆಗೆ ಇಳಿದು ಪ್ಲಾಸ್ಟಿಕ್ ಬಾಟಲಿಗಳು, ಕುರ್ಕುರೆ ಲೇಸ್ ಗಳ ಪ್ಯಾಕೆಟ್ಗಳು, ಚಾಕಲೇಟಿನ ರ್ಯಾಪರ್ ಗಳು ಇವುಗಳನ್ನೆಲ್ಲ ಹೆಕ್ಕುವ ಕಾಲ ಬರುತ್ತಿರಲಿಲ್ಲ. ಅದು ಬಿಡಿ, ಭಾರತೀಯರು ಅನೇಕರು ವಯಸ್ಸಾದ ಬಳಿಕ ತಮ್ಮ ಹೆತ್ತ ತಾಯಿಯನ್ನೇ ತಮಗೆ ಭಾರ ಎಂದು ವೃದ್ಧಾಶ್ರಮಕ್ಕೆ ಅಟ್ಟಿ ಬರುವವರು. ಇನ್ನು ಹೊತ್ತ ಭೂಮಿ ತಾಯಿಯನ್ನು ಅದೆಷ್ಟು ನೋಡಿಯಾರು? ತಮ್ಮನ್ನು ಹೊತ್ತ ಭೂಮಿಯ ಮೇಲೆ ಯಾವ ಕಾಳಜಿಯೂ ಜನರಿಗೆ ಇದ್ದಂತೆ ತೋರುತ್ತಿಲ್ಲ. ಕಾರಣ ವಿಪರೀತ ಚಟುವಟಿಕೆ ಮಾಡುವ ಮೂಲಕ ನೀರು, ಗಾಳಿ, ಮಣ್ಣು, ಆರೋಗ್ಯ ಎಲ್ಲವನ್ನೂ ಕೆಡಿಸಿ ಮುಂದಿನ ಜನಾಂಗಕ್ಕೆ ಸ್ವಲ್ಪ ವಿಷರಹಿತ ಆಹಾರ ಉಳಿಸುವ ಕಾರ್ಯವನ್ನೂ ಮಾಡಿಲ್ಲ ನಾವು.  ವಿಪರೀತ ರಾಸಾಯನಿಕಗಳನ್ನು, ರಸಗೊಬ್ಬರ -ಕೀಟ ನಾಶಕ ರೂಪದಲ್ಲಿ ಮಣ್ಣಿಗೆ ಕೊಟ್ಟು, ಅದರ ನೈಸರ್ಗಿಕ ಶಕ್ತಿಯನ್ನು ಕುಗ್ಗಿಸಿ, ವಿಷ ಬೆರೆಸಿದ್ದೆ ಅಲ್ಲದೆ, ಇರುವ ಬೃಹತ್ ಮರಗಳನ್ನೂ ಕಡಿದು ಹಾಕಿ ಕಟ್ಟಡ, ಕಾರ್ಖಾನೆ, ಅಗಲಗಳ ರಸ್ತೆ ನಿರ್ಮಿಸುವ ನಮಗೆ ಗಾಂಧೀಜಿಯವರ ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ, ಚರಕಗಳ ತಾಳ್ಮೆ ಇದೆಯೇ. ನಮಗೆ ಹೆಚ್ಚು ಉತ್ಪತ್ತಿ, ಹೆಚ್ಚು ಹೆಚ್ಚು ಲಾಭ ಬರಬೇಕು ಅಷ್ಟೇ. ಗಾಂಧೀಜಿ ಅವರ ಮೂಲ ಶಿಕ್ಷಣದ ಬಗ್ಗೆ ನಾವು ಗಮನಿಸದೆ, ಆಂಗ್ಲರ ಕಲಿಕಾ ಪದ್ದತಿ ಅನುಸರಿಸಿ ಪದವಿ ಪಡೆದವನಿಗೂ ಯಾವ ಕೆಲಸವನ್ನೂ ಮಾಡದ ರೀತಿ ತರಬೇತಿ ಕೊರತೆ ಆಗಿಲ್ಲವೇ? 

ವರ್ಷಕ್ಕೆ ಒಂದು ದಿನ ಗಾಂಧೀ ಜಯಂತಿ ಎಂದು ಬಾರ್ ಗಳನ್ನು ಮುಚ್ಚಿ, ಮೊದಲೇ ಶೇಖರಿಸಿ ಇಟ್ಟ ಬಾಟಲಿ ಹಿಡಿದುಕೊಂಡು ದೇವಾಲಯಗಳಿಗೆ ಪ್ರವಾಸ ಮಾಡಿ, ರಾತ್ರಿ ಅಲ್ಲಿನ ರೂಮುಗಳಲ್ಲೂ ಕುಡಿತದ ಕಾಯಕ ಮಾಡುತ್ತಾ ಅದನ್ನು ಬಿಟ್ಟಿರಿಲಾರದ ಮಟ್ಟಿಗೆ ಹೋಗಿದ್ದೇವೆ. ಹೀಗಿದ್ದು ಗಾಂಧೀ ಜಯಂತಿ ಆಚರಿಸಿದರೆ ಏನಾದರೂ ಪ್ರಯೋಜನ ಆದೀತೆ? ಗಾಂಧೀಜಿ ಅವರ ಆತ್ಮಕ್ಕೆ ಶಾಂತಿ ದೊರಕೀತೆ?

ಗಾಂಧೀಜಿ ಹುಟ್ಟಿದ ದಿನಾಂಕದಂದೇ ಶ್ರೀಯುತ ಲಾಲ್ ಬಹದೂರ್ ಶಾಸ್ತ್ರೀ ಅವರೂ ಜನಿಸಿರುವರು. ಭಾರತ ಕಂಡ ಮಹಾನ್ ಮುಖಂಡರಲ್ಲಿ ಇವರೂ ಒಬ್ಬರು. ಅವರ ತ್ಯಾಗ, ತಾಳ್ಮೆ, ದೂರ ದೃಷ್ಟಿಯ ಆಡಳಿತ, ರೈಲ್ವೆ ಮಂತ್ರಿಯಾಗಿ, ಪ್ರಧಾನಿಯಾಗಿ ನಿರ್ವಹಿಸಿದ ಸೇವೆ ಅನನ್ಯ. ಎರಡನೇ ಪ್ರಧಾನಿಯಾಗಿ, ಆರನೇ ಗೃಹ ಮಂತ್ರಿಯಾಗಿ, ರೈಲ್ವೆ ಮಂತ್ರಿಯಾಗಿ ಭಾರತದಲ್ಲಿ ಅವರ ದಿಟ್ಟ ನಿರ್ಧಾರ, ಪಾಕಿಸ್ತಾನದ ಯುದ್ಧಕ್ಕೆ ಉತ್ತರವಾಗಿ ಅವರು ಸೈನಿಕರಿಗೆ ಕೊಟ್ಟ ಸ್ವಾತಂತ್ರ್ಯ ಎಲ್ಲವೂ ಅತ್ಯದ್ಭುತ. 

ಇಂತಹ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮ ದಿನವಾದ ಇಂದು ಅವರಿಗಿಂತ ಕಿರಿಯರಾದ ನಾಸ್ವು ಅವರ ಉತ್ತಮ ಗುಣಗಳನ್ನು ಪಾಲಿಸೋಣ. ನಮ್ಮ ಹುಟ್ಟುಹಬ್ಬವನ್ನು ನಮ್ಮ ಮುಂದಿನ ತಲೆಮಾರಿನ ಜನತೆ ಆಚರಿಸಬೇಕು ಹಾಗೆ ಬದುಕೋಣ. ಹಾಗೆಯೇ ನಾಳೆಯಿಂದ ಶಾಲಾ ಮಕ್ಕಳಿಗೆ ದಸರಾ ರಜೆ ಪ್ರಾರಂಭ. ತದ ನಂತರ ಪರೀಕ್ಷೆಗಳು. ಹಾಗಾಗಿ ಪರೀಕ್ಷೆಯನ್ನು ಬರೆಯಲು ಮಕ್ಕಳಿಗೆ ತಯಾರಿ ಮಾಡಿಸೋಣ. ಅವರನ್ನು ಮಕ್ಕಳಾಗಿ ಆಟವಾಡಿ ಅವರಷ್ಟಕ್ಕೆ ಸ್ವಲ್ಪ ಬಿಟ್ಟು ಬಿಡೋಣ. ಅವರೂ ಸಂತಸ ಪಡಲಿ. ಕಾರಣ ಭಾರತದ ಮುಂದಿನ ನಾಯಕರು ಅವರಿಯಲ್ಲವೇ? ಗಾಂಧಿ ಶಾಸ್ತ್ರೀ ಜೀ ಅವರಂತಹ ಮಹಾನ್ ನಾಯಕರ ಗುಣಗಳು ನಮ್ಮ ಮಕ್ಕಳಲ್ಲೂ ಬರಲಿ ಅಲ್ಲವೇ?
@ಹನಿಬಿ0ದು@
02.10.2022

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ