ಶುಕ್ರವಾರ, ಮಾರ್ಚ್ 10, 2023

ಕಾಡುವ ಮನ

ಕಾಡುವ ಮನ

ಆ ಮನಕೆ ಗೊತ್ತು ತಾನಿಲ್ಲದೆ ಆ ಹೂವು ತೀರಾ ಒಂಟಿಯೆಂದು!
ಆದರೂ ದಿನದ ಸಾವಿರದ ನಾಲ್ಕು ನೂರ ನಲವತ್ತು ನಿಮಿಷಗಳಲ್ಲಿ ಪ್ರೀತಿ ಕಾವು ಕೊಡಲು ಒಂದು ನಿಮಿಷವೂ ಇಲ್ಲ ಹೃದಯದ ಬಳಿ ಎಂದೂ..

ಲೆಕ್ಕಾಚಾರದಲ್ಲೇನೋ ಬಹಳ ಬುದ್ಧಿವಂತನಂತೆ ಕೆಲಸದಲಿ
ಆದರೆ ಮನದ ನೋವುಗಳ ಲೆಕ್ಕಾಚಾರದಲಿ ಶೂನ್ಯ ಫಲಿತಾಂಶ ಸರ್ವ ದಿನಗಳಲಿ 
ಸಮಾಂತರ ರೇಖೆಗಳಂತೆ ಬಾಳು ನಿತ್ಯ ಸಾಗುತಿದೆ ಜಗದಲಿ
ಕೂಡಿ ಕಳೆವುದೆಂತೋ ನೋವು ನಲಿವುಗಳ ಕ್ಷಣಗಳಲಿ

ಮೆದುಳಿಗೆ  ಕಾಣದು ಕಾಡುವ ವಿರಹ ವೇದನೆಯ ಗುಣಾಕಾರ
ಭಾಗಿಸುತಿಹನಲ್ಲ ಮಾಡಿ ಹಲವಾರು ಕೆಲಸಗಳ ಲೆಕ್ಕ ಪೂರಾ!
ಪರರ ಚಿಂತೆ ನಮಗೆತಕಯ್ಯಾ ಎಂಬ ಗಾದೆಯ ಸರದಾರ
ಬಳಿಗೆ ಬಂದಾಗ ಮಾತ್ರ ಬಹು  ಹೊಗಳಿಕೆಯ ಸೂತ್ರಧಾರ!

ತನ್ನದೆನುವುದನು ಬದುಕಿನಲಿ ತೀರಾ ಅಲಕ್ಷಿಸಲುoಟೆ ಹೀಗೆ?
ಕಣ್ಣ ಮುಂದೆ ಇರಬೇಕೆಂಬ ಆಸೆಯಿಲ್ಲವೇ ಎದೆ ಗುಡಿಯಾಗೆ?
ಯಾವ ತಪ್ಪಿನ ಫಲವೋ ಬದುಕಲ್ಲಿ ನೋವಿನ ನೆರಳುಗಳೆ
ಕಾವ ದೇವಗೆ ಗೊತ್ತು ಪ್ರೀತಿ ಫಲ ಸದಾ ಕೊಡುವ ಬಗೆ!

ಸಾಲುಗಳ ಬರೆದು ಗೀಚಿ ಏನದು ಮಹಾ ಪ್ರಯೋಜನ?
ನಿಜ ಪ್ರೀತಿ ಹೃದಯದಿಂದ ಬಗೆದು ಬರಲು ಹರ್ಷವೀ ಮನ
ಕಾಟಾಚಾರದ ಒತ್ತಡದ ಪ್ರೀತಿಗಿಲ್ಲ ಬಾಳ್ವಿಕೆಯ ಯೋಗ
ಮನದಿ ಸ್ಪುರಣವಾಗಿ ಆವೀರ್ಭವಿಸಿದಾಗ ಮಾತ್ರ ತ್ಯಾಗ..
@ಹನಿಬಿಂದು@
18.02.2023




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ