ಶುಕ್ರವಾರ, ಡಿಸೆಂಬರ್ 15, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -214

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -214
     ಯಾವುದೇ ಕೆಲಸ ಆಗಿರಲಿ. ಅದನ್ನು ನಾನು ಮಾಡಿಯೇ ತೀರುತ್ತೇನೆ ಎಂಬ ಆತ್ಮ ವಿಶ್ವಾಸದ ಬೀಜ ಮಾನವತೆ ಎಂಬ ಮರಕ್ಕೆ ಮೂಲ ಅಲ್ಲವೇ?  ನಾ ಮಾಡುವೆ ಎಂಬ ಆತ್ಮಸ್ಥೈರ್ಯ ಎಲ್ಲರಿಗೂ ಎಲ್ಲಾ ಕಡೆ ಬರಲು ಸಾಧ್ಯ ಇಲ್ಲ. ನಾನಿದ್ದೇನೆ ಎಂದು ನಮ್ಮ ಸುಪ್ತ ಮನಸ್ಸು ನಮಗೆ ಧೈರ್ಯ ಕೊಡಬೇಕು. ಬಿದ್ದಾಗ ಹಿಡಿದೆತ್ತಬೇಕು . ಗೆಳೆಯನಂತೆ ಬೆನ್ನಿಗೆ ನಿಲ್ಲಬೇಕು, ಮಡದಿಯಂತೆ ಜತೆಗಾರನಾಗಿ ತಿದ್ದಿ ನಡೆಸಬೇಕು, ಅಣ್ಣನಂತೆ ಕೈ ಹಿಡಿದು ಮುನ್ನಡೆಸಬೇಕು, ತಂದೆಯಂತೆ ಜವಾಬ್ದಾರಿ ಹೊರಬೇಕು. ಆ ಮೂಲಕ ನಮ್ಮ ನಿರ್ಮಾತೃ ನಾವೇ ಆಗಿರಬೇಕು. ಅಲ್ಲವೇ?

     ಹೌದು, ಈ ಒಂದು  ಕಾರ್ಯವನ್ನು ನಾನು ಮಾಡಲು ಖಂಡಿತವಾಗಿಯೂ ಶಕ್ತನಾಗಿದ್ದೇನೆ ಇದನ್ನು ನಾನು ಮಾಡಿಯೇ ತೀರುತ್ತೇನೆ ಎಂಬ ಆತ್ಮ ವಿಶ್ವಾಸ ಇರುವುದು ಅದು ಎಂದಿಗೂ ಕೂಡ ಅಹಂಕಾರ ಎಂದು ಪರಿಗಣಿಸಲ್ಪಡುವುದಿಲ್ಲ. ಅದು ಆತ್ಮವಿಶ್ವಾಸದ ಪರಮಾವತಿ ಆದ್ರೆ ಅಹಂಕಾರ ಎನ್ನುವುದು ಹಾಗಲ್ಲ ತನಗೆ ಮಾಡಲು ಗೊತ್ತಿಲ್ಲ ಎಂದು ತಿಳಿದರು ಕೂಡ ನಾನೇ ಮಾಡುವೆ ನಾನು ಮಾಡುತ್ತೇನೆ ಎಂದು ಹೋಗುವುದಿದೆಯಲ್ಲ ಅದು ಅಹಂಕಾರ. ನಾನು ಮಾಡಿದ್ದು ಸರಿಯಾಗದಿದ್ದರೂ ಪರವಾಗಿಲ್ಲ ಇತರರು ಆ ಕೆಲಸವನ್ನು ಮಾಡಬಾರದು ನಾನೇ ಅದರ ಯಜಮಾನನಾಗಬೇಕು ಎಂದು ಬಯಸುವುದು ಅಹಂಕಾರ. 
         ಆತ್ಮವಿಶ್ವಾಸ ಒಳ್ಳೆಯದು.  ಅದು ಜ್ಞಾನವಿದ್ದಾಗ ಮಾತ್ರ ನಮಗೆ ಬರುವಂತದ್ದು. ಆತ್ಮವಿಶ್ವಾಸವಿರುವ ವ್ಯಕ್ತಿ ಯಾವ ಕೆಲಸವನ್ನೇ ಆದರೂ ಅವನಿಗೆ ಕೊಟ್ಟಾಗ ಅವನು ಸರಿಯಾಗಿಯೆ ಮಾಡುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಜ್ಞಾನದ ಒಂದು ಹಂತ ಬುದ್ಧಿಮತ್ತೆ, ಮತ್ತೊಂದು ಹಂತ ಆತ್ಮ ವಿಶ್ವಾಸ . ಆತ್ಮವಿಶ್ವಾಸವನ್ನು ಅಹಂಕಾರದೊಡನೆ ಎಂದಿಗೂ ಹೋಲಿಸಿಕೊಳ್ಳಬಾರದು. ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬ ಗಾದೆ ಮಾತೊಂದಿದೆ ಆದಕಾರಣ ಅಹಂಕಾರ ಮನುಷ್ಯನನ್ನು ಕೊಲ್ಲುತ್ತದೆ ಮತ್ತು ಯಾವುದೇ ಕೆಲಸಗಳನ್ನು ಮಾಡುವುದನ್ನು ತಡೆದುಬಿಡುತ್ತದೆ. ಆತ್ಮವಿಶ್ವಾಸ ಹಾಗಲ್ಲ ನಾನು ಈ ದೇಶವನ್ನು ಆಳಿಯೇ ಅಳುತ್ತೇನೆ ಎಂದು ಆತ್ಮವಿಶ್ವಾಸ ಇದ್ದವ ಮಾತ್ರ ಆಳುವ ಕೆಲಸಕ್ಕೆ ಸಜ್ಜಾಗುತ್ತಾನೆ ಅಹಂಕಾರಿ ಒಂದು ಅಥವಾ ಎರಡೇ ದಿನದಲ್ಲಿ ಅಥವಾ ಒಂದೇ ಒಂದು ಕ್ಷಣದಲ್ಲಿ ಬಿದ್ದು ಹೋಗುತ್ತಾನೆ ಇವನನ್ನು ಯಾರೂ ಕೂಡ ಗೌರವಿಸುವುದೆ ಇಲ್ಲ. 
                 ಆತ್ಮವಿಶ್ವಾಸ ಹೀರೋನ ಗುಣವಾದರೆ ಅಹಂಕಾರ ವಿಲನ್  ನ ಗುಣ. ಜನ ಎಂದಿಗೂ ಹೀರೋವನ್ನು ಇಷ್ಟಪಡುತ್ತಾರೆಯೆ  ಹೊರತು ವಿಲನ್ ನ ಗುಣಗಳನ್ನು ಇಷ್ಟ ಪಡುವುದಿಲ್ಲ. ಹಾಗೆಯೇ ಆತ್ಮವಿಶ್ವಾಸ ಮತ್ತು ಅಹಂಕಾರ ಕೂಡ.  ಜನರು ಇತರರ ಆತ್ಮವಿಶ್ವಾಸವನ್ನು ಬಯಸುತ್ತಾರೆಯೆ  ಹೊರತು ಯಾವುದೇ ಕಾರಣಕ್ಕೂ ಯಾವಾಗಲೂ ಯಾರದ್ದೇ ಅಹಂಕಾರವನ್ನು ಯಾವುದೇ ಜನರು ಯಾವುದೇ ದೇಶದಲ್ಲೂ ಇಷ್ಟಪಡುವುದಿಲ್ಲ. 
     ನಮ್ಮಲ್ಲೂ, ನಮ್ಮ ಒಳಗೂ ಕೂಡ ಎಂದಿಗೂ  ಆತ್ಮ ವಿಶ್ವಾಸ ಬೆಳೆಯುತ್ತಾ ಹೋಗಲಿ. ಅಹಂಕಾರ ಎಂದಿಗೂ ನಮ್ಮ ಜೀವನದಲ್ಲಿ ಇನ್ನು ಮುಂದೆ  ಸುಳಿಯದೆ  ಇರಲಿ,  ಅಹಂಕಾರ ಕೆಟ್ಟದ್ದು,  ಆತ್ಮವಿಶ್ವಾಸ ಒಳ್ಳೆಯ ಗುಣ.  ಸದಾ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳೋಣ ಮತ್ತು ಅಹಂಕಾರವನ್ನು ನಮ್ಮಿಂದ ದೂರ ಓಡಿಸೋಣ , ನೀವೇನಂತೀರಿ?
@ಹನಿಬಿಂದು@
08.12.2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ