ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -216
ಒಂದು ಕಾಲವಿತ್ತು, ಹೊರಗೆ ಹೋಗುವುದು ಎಂದರೆ ಹೊರಡುವುದು. ಏನಿಲ್ಲ ಎಂದರೂ ಕೈ ಕಾಲು ಮುಖ ಸಾಬೂನು ಹಾಕಿ ತಿಕ್ಕಿ ತೊಳೆದು, ಒರೆಸಿ, ತಲೆ ಬಾಚಿ ಒಳ್ಳೆ ಬಟ್ಟೆ, ಪೌಡರ್, ಕುಂಕುಮ ಹಾಕಿ ಚಪ್ಪಲಿ ತೊಟ್ಟು ಹೊರ ನಡೆಯುವುದು. ಅಷ್ಟೇ ಮೇಕಪ್. ಆದರೆ ಕಾಲ, ಜನ, ಸಿಗುವ ವಿವಿಧ ಸೌಂದರ್ಯ ವರ್ಧಕಗಳು ಎಲ್ಲವೂ ಬದಲಾಗಿವೆ. ಈಗ ಜನ ಪಾರ್ಲರ್ ಗಳಿಗೆ ಹೋಗುತ್ತಾರೆ, ತಮ್ಮ ಬಣ್ಣ, ವೇಷ ಎಲ್ಲವನ್ನೂ ಬದಲಾಯಿಸಿಕೊಳ್ಳುತ್ತಾರೆ. ಅಷ್ಟೇ ಏಕೆ, ಮಡದಿಯ ಹಾಗೆ ಡ್ರೆಸ್ ಮಾಡಿಕೊಂಡು ಹೋಗುವ ಪುರುಷರು ಕೂಡಾ ಇರಬಹುದು!
ಅದಿರಲಿ, ಈಗಿನ ಮೇಕ್ ಆಫ್ ಹಾಗಲ್ಲ. ಅದನ್ನು ದೇಹದಲ್ಲಿ ಮುಖದ ಅಂದಕ್ಕೆ ಹಚ್ಚುವ ಕ್ರೀಂ, ಪೌಡರ್ ಗಳು ಮಾತ್ರ ಅಲ್ಲ ಇಂದು. ಹುಬ್ಬಿಗೆ, ಕಣ್ಣಿನ ರೆಪ್ಪೆಯ, ಗಲ್ಲಕ್ಕೆ, ಗಡ್ಡಕ್ಕೆ, ಕೆನ್ನೆಗೆ, ತುಟಿಗೆ, ಹಣೆಗೆ, ಕುತ್ತಿಗೆಗೆ, ಕಿವಿಗೆ, ಮೂಗಿಗೆ ಹೀಗೆ ಮುಖದ ಬೇರೆ ಬೇರೆ ಅವಯವಗಳಿಗೆ ಒಂದೊಂದಲ್ಲ, ಬೇಸಿಕ್, ಫೌಂಡೇಶನ್, ಕಲರಿಂಗ್, ಡಾರ್ಕ್ ಲುಕ್, ನೈಟ್ ಕಲರ್, ಸನ್ ಸ್ಕ್ರೀನ್, ಲೋಷನ್, ಕ್ರೀಂ, ಪೌಡರ್, ಜೆಲ್, ಆಯಿಂಟ್ಮೆಂಟ್, ಸ್ಟಿಕ್, ರೆಡಿ ಮೇಡ್ ಅಂತ ಏನೇನೋ ಬಂದಿದೆ. ಇವುಗಳಲ್ಲಿ ಹುಬ್ಬಿನ ಅಂದ, ಆಕಾರ, ಗಾತ್ರ, ಸ್ಥಾನ , ಬಣ್ಣ ಎಲ್ಲವನ್ನೂ ಬದಲಾಯಿಸಬಹುದು. ಹಿಂದಿನ ಕಾಲದ ಜನರಿಗೆ ಕೂದಲು ಬಿಳಿ ಆದಾಗ ಕಪ್ಪಾಗಿಸುವ ಆಸೆ ಇದ್ದು ಹೇರ್ ಡೈಗಳನ್ನು ಬಳಸುತ್ತಿದ್ದರು. ಇಂದು ಅವು ಒಂದೇ ಬಣ್ಣದಲ್ಲಿ ಇಲ್ಲ. ಮಜೆಂದ, ಗ್ರೇ, ಬ್ಲಾಕ್, ಬ್ರೌನ್, ಬ್ರಿಂಜಲ್, ಬರ್ಗಂಡಿ ಹೀಗೆ ಹಲವಾರು ಬಣ್ಣಗಳಲ್ಲಿ ಲಭ್ಯ. ನಿಮ್ಮ ಕೂದಲಿನ ಬಣ್ಣ ನಿರ್ಧರಿಸುವವರು ನೀವೇ. ಕೂದಲು ಇದ್ದರೆ ಆಯಿತು.
ಕೂದಲು ಇಲ್ಲದೆ ಹೋದರೆ, ಅಥವಾ ಕಡಿಮೆ ಇದ್ದರೆ ಅದಕ್ಕೂ ಆರ್ಟಿಫಿಷಿಯಲ್ ಕೂದಲು ಸಿಗುತ್ತದೆ. ಕೂದಲು ನಾಟಿ ಮಾಡುವ , ನೆಡುವ ಚಿಕಿತ್ಸೆಯೂ ಇದೆ ಅಲ್ಲವೇ? ದುಡ್ಡು ಇದ್ದರೆ ಆಯಿತು ಅಷ್ಟೇ. ದುಡ್ಡಿದ್ದವ ದೊಡ್ಡಪ್ಪ ಅಂತ ಹಿರಿಯರು ಸುಮ್ನೆ ಕಟ್ಲಿಲ್ಲ ಗಾದೆ. ಸಿಲಿಕಾನ್ ಇಂಜೆಕ್ಷನ್ ನಿಂದ ವಯಸ್ಸಾದ ಚರ್ಮದ ಮೇಲಿನ ಸುಕ್ಕುಗಳನ್ನು ಹೋಗಿಸಿ ಚಿಕ್ಕವರಂತೆ ಕಾಣಬಹುದಂತೆ! ಹಾಗಂತ ವಯಸ್ಸು ನಿಲ್ಲುವುದೇ? ಸಾವಿಗೆ ಮದ್ದಿಲ್ಲ. ಆದರೆ ಸಾಯುವವರೆಗೆ ಅಂದ ಬೇಡವೇ?
ಮುಖದ ಮತ್ತು ಕೂದಲಿನ ಅಂದ ಮಾತ್ರ ಅಲ್ಲ, ಕ್ಕೈಯ ಅಂದ ಹೆಚ್ಚಿಸಲು ಉಗುರುಗಳ ಅಂದ ಹೆಚ್ಚಿಸಲು, ರೋಮಗಳನ್ನೆಲ್ಲ ತೆಗೆದು, ಕ್ರೀಮುಗಳ ಹಚ್ಚಿ, ಗಂಡಸರ ಒರಟು ಕೈಗಳನ್ನು ಸ್ತ್ರೀ ವೇಶಕ್ಕೆ ಸಜ್ಜುಗೊಳಿಸಲು ಬಹುದು. ಹಾಗೆಯೇ ಉಗುರುಗಳು ಗಿಡ್ದವಾಗಿ ಇದ್ದರೆ , ಉದ್ದ ಉಗುರುಗಳು ಡಿಸೈನ್ ಡಿಸೈನ್ ಗಳಲ್ಲಿ ಸಿಗುತ್ತವೆ. ನಮಗೆ ಬೇಕಾದ ಆಕಾರದ ಉಗುರುಗಳನ್ನು ತಂದು ಬೆರಳಿಗೆ ಸಿಕ್ಕಿಸಿ ಬೇಕು ಬೇಕಾದ ಉಗುರು ಬಣ್ಣ, ಶೈನಿಂಗ್ ಗಳನ್ನೂ ತಂದು ಹಚ್ಚಿ ಕಾರ್ಯಕ್ರಮಗಳಿಗೆ ನಮ್ಮನ್ನು ನಾವು ಅಂದವಾಗಿ ಸಜ್ಜುಗೊಳಿಸಬಹುದು. ಇನ್ನು ಎದೆಯ ಭಾಗ, ಹಿಂದೆ ಹಿಪ್ ಎದ್ದು ಕಾಣಲು ಅದಕ್ಕೂ ದಪ್ಪ ಪ್ಯಾಡ್ ಗಳನ್ನು ಬಳಸುತ್ತಾರೆ. ಬೇಕಾದ ಗಾತ್ರದವುಗಳನ್ನು ಬಳಸಿ ನಮ್ಮ ದೇಹದ ಆಕಾರಗಳನ್ನು ಎಲ್ಲರೂ ನಮ್ಮನ್ನೇ ನೋಡುವ ಹಾಗೆ ಬಳಸಿ ಅಂದಗೊಳಿಸ ಬಹುದು.
ಹೊಟ್ಟೆ ಮುಂದೆ ಬಂದಿದ್ದರೆ ಅದನ್ನು ಹಿಂದೆ ಕಳಿಸಿ ಹೊಟ್ಟೆಯನ್ನು ಚಿಕ್ಕದು ಮಾಡಿ ತೋರಿಸುವ ಬೆಲ್ಟ್ ಗಳು, ಚಡ್ಡಿಗಳು ಬಂದಿವೆ. ದುಡ್ಡು ಕೊಟ್ಟರೆ ಆಯಿತು! ತೊಡೆ ಚಿಕ್ಕದಾಗಿರಲಿ ಅಂತ ಅದಕ್ಕೂ ಬೆಲ್ಟ್. ಕೈಗೆ ಬಳೆ. ಕಿವಿ, ಮೂಗಿಗೆ ರಿಂಗುಗಳು,(ರಿಂಗು, ಓಲೆಗಳ ಗಾತ್ರ, ಆಕಾರ, ಡಿಸೈನ್ ಗಳನ್ನು ಜಾತ್ರೆ, ಚಿನ್ನದ ಅಂಗಡಿ, ಗೂಗಲ್ ನಲ್ಲಿ ನೋಡಬಹುದು!), ಜುಮ್ಕಿ, ಮಾಟಿ, ಓಲೆ, ರಿಂಗ್, ಹ್ಯಾಂಗಿಂಗ್, ಜುಮ್ಕ, ಹೀಗೆ ಇನ್ನೂ ಏನೇನೋ ಹೊಸ ಹೊಸ ಆವಿಷ್ಕಾರ ನಡೆಯುತ್ತಲೇ ಇವೆ. ಬೆಳ್ಳಿ, ಜರ್ಮನ್ ಬೆಳ್ಳಿ, ಬಂಗಾರ, ಕಂಚು, ತಾಮ್ರ, ಹಿತ್ತಾಳೆ, ಪೇಪರ್, ಫೈಬರ್, ಚಿನ್ನ, ಮುತ್ತು, ಹವಳ , ಸೇರಿ ನವರತ್ನಗಳು, ವಜ್ರ ಹಾಗೂ ಇತರ ಬಣ್ಣ ಬಣ್ಣದ ಕಲ್ಲುಗಳು, ಪ್ಲಾಸ್ಟಿಕ್, ಫ್ಲೋರೈಡ್ ಕೋಟೆಡ್, ವನ್ ಗ್ರಾಂ ಗೋಲ್ಡ್, ಆರ್ಟಿಫಿಷಿಯಲ್ ಗೋಲ್ಡ್, ಬ್ಲಾಕ್ ಮೆಟಲ್, ವೈಟ್ ಮೆಟಲ್, ವೈಟ್ ಗೋಲ್ಡ್, ಪ್ಲಾಟಿನಂ, ರೋಡಿಯo ಹೀಗೆ ಹೊಸ ಹೊಸ ಮೆಟಲ್ ಗಳ ಲಕ್ಷಗಟ್ಟಲೆ ಡಿಸೈನ್ ಗಳ ಬಳೆ, ಉಂಗುರ, ಚೈನ್, ನೆಕ್ಲೇಸ್, ಸರ, ಕಾಲು ಗೆಜ್ಜೆ, ಬೈತಲೆ ಬೊಟ್ಟು, ಸೊಂಟ ಪಟ್ಟಿ, ಮೂಗಿನ ನತ್ತು ಹೀಗೆ ಒಡವೆಗಳ ಭಂಡಾರವೇ ಇವೆ. ಕೊಳ್ಳುವುದು, ಹಾಕಿಕೊಳ್ಳುವುದು. ಬೇಕೆಂದರೆ ಇಡುವುದು, ಬೇಡ ಎಂದರೆ ಎಸೆದು ಬಿಡುವುದು! ಇನ್ನೇನು ಹೇಳಿ? ಈಗಂತೂ ಶಾಪಿಂಗ್ ಹುಚ್ಚು ಬಿಡಿಸಲಾರದ ಹುಚ್ಚು ಅಲ್ಲವೇ?
ದಿನ ದಿನ ಮಾಮೂಲಿ ಅಂಗಡಿಗಳು ಕ್ರಮೇಣ ಸಾಯುತ್ತಾ ಬಂದು ಮಾಲ್ ಗಳು ಹೆಚ್ಚಾಗುತ್ತಾ ಹೋಗುತ್ತಿವೆ. ಆನ್ ಲೈನ್ ವ್ಯಾಪಾರ ಹೆಚ್ಚಿ, ನಮ್ಮ ಹಳ್ಳಿಯ, ಊರಿನ ಅಂಗಡಿಗಳ ವ್ಯಾಪಾರಸ್ಥರು ಕೊಳ್ಳುವವರೆ ಇಲ್ಲದೆ ಬಡವರಾಗಿತ್ತಿರುವುದೆ ಅಲ್ಲದೆ ಹಲವಾರು ವರ್ಷಗಳಿಂದ ನಡೆಸುತ್ತಾ ಬಂದ ತಮ್ಮ ವ್ಯಾಪಾರಿ ವೃತ್ತಿಯನ್ನು ನಿಲ್ಲಿಸುವ ಹಂತಕ್ಕೆ ನಾವು ಅವರನ್ನು ತಂದು ನಿಲ್ಲಿಸಿದ್ದೇವೆ. ಕಾರಣ ನಮ್ಮ ಫ್ಯಾನ್ಸಿ ಶೋಕಿ, ಮಾಲ್ ಆನ್ಲೈನ್ ವ್ಯಾಪಾರಗಳು. ಹಳೆಯದನ್ನು ಮರೆತು ಹೊಸದನ್ನು ಬಳಸುವ ಹುಚ್ಚು.
ಇನ್ನು ಕಾಲಿಗೆ ಧರಿಸುವ ಶೂಗಳು, ಚಪ್ಪಲಿಗಳು. ತಗ್ಗಿನ ಫ್ಲಾಟ್ ಚಪ್ಪಲಿಗಳಿಂದ ಹಿಡಿದು ಹೈ ಹೀಲ್ಸ್, ನೀಡಲ್ ಹೀಲ್ಸ್, ವೆರೈಟಿ ಶೂಗಳು ಅವುಗಳಲ್ಲೂ ಗ್ರ್ಯಾಂಡ್ ಬೇರೆ, ವಾಕಿಂಗ್ ಗೆ ಬೇರೆ, ಶಾಲೆಗೆ, ಆಫೀಸಿಗೆ, ಜಾಗಿಂಗ್ ಗೆ, ರನ್ನಿಂಗ್ ಗೆ, ಟ್ರಾವೆಲಿಂಗ್ , ಟ್ರಕಿಂಗ್ ಗೆ , ಮಳೆಗಾಲಕ್ಕೆ, ಚಳಿಗಾಲಕ್ಕೆ, ಸೆಕೆಗೆ ಹೀಗೆ ಬೇರೆ ಬೇರೆ ತರಹ, ಬಣ್ಣ, ಗಾತ್ರ, ಆಕಾರ, ಉದ್ದ, ಎತ್ತರ, ಪಾ, ಮಣಿಕಟ್ಟಿನ ವರೆಗೆ, ಗಂಟಿನವರೆಗೆ, ತೊಡೆಗಳ ವರೆಗೆ, ಹೀಗೆ ಎಲ್ಲಾ ರೀತಿಯ ಬೂಟು, ಚಪ್ಪಲಿಗಳ ಸರಮಾಲೆ. ಬೇಕಾದ್ದು ಕೊಳ್ಳಬಹುದು. ಬೇಡವೆಂದರೆ ಹಾಕಿ ಎಸೆಯಬಹುದು!
ಇನ್ನು ಕೂದಲಿಗೆ ಬೇಕಾದ ಹೇರ್ ಬ್ಯಾಂಡುಗಳು, ಕ್ಲಿಪ್ ಗಳು, ರಬ್ಬರ್, ಹೇರ್ ಪಿನ್ನುಗಳು, ಸೂಜಿಗಳು, ಮೆಟಲ್ ಶೈನಿಂಗ್ ಕ್ಲಿಪ್ಸ್, ರಿಬ್ಸ್, ಬನ್ಸ್, ಅಬ್ಬಬ್ಬಾ ಒಂದೇ ಎರಡೇ? ಇಷ್ಟಾಗಿ ಮುಗಿಯಿತೇ? ಇಲ್ಲಪ್ಪ, ಬಟ್ಟೆ ಬರೆಯ ಪ್ರಪಂಚವೇ ಬೇರೆ. ರೇಷ್ಮೆ, ಟೆರಿಲಿನ್, ಸಾಫ್ಟ್ ಸಿಲ್ಕ್, ಕೈ ಮಗ್ಗ, ಕಾಟನ್, ನೈಲಾನ್, ಶಿಫಾನ್, ಮಸ್ಲಿನ್, ಜಾರ್ಜೆಟ್, ಜ್ಯೂಟ್, ನೆಟ್, ಸ್ಯಾಟಿನ್, ಟಿಶ್ಯೂ, ಲೆದರ್ ಬಟ್ಟೆ, ಕೋಟ್, ಸೀರೆ, ಪ್ಯಾಂಟ್ಸ್, ಬ್ಲೌಸ್, ರವಿಕೆ, ಜಾಕೆಟ್, ಫ್ರಾಕ್ ಹೀಗೆ ಬಗೆ ಬಗೆ ಬಣ್ಣ, ಆಕಾರ, ರೇಟಿನ ಬಟ್ಟೆಗಳ ಲೋಕವೇ ಮಾಯಾಲೋಕ. ಈಗೀಗ ಬೆಳ್ಳಿ ಚಿನ್ನದ ಬಟ್ಟೆಗಳೂ ಮಾರುಕಟ್ಟೆಗೆ ಬಂದಿದೆಯಂತೆ. ಮುಂದೆ ಅದು ಯಾವ ಹೊಸ ಶೈಲಿ ಬರುವುದೋ? ಮೈ ಮುಚ್ಚುವ ಬಟ್ಟೆ ಧರಿಸಿದರೆ ಸಾಕಪ್ಪಾ.. ಈಗ ಹಾಕಿಕೊಂಡು ಹೋಗುವ ಹರಕು ಚಡ್ಡಿ, ಅರ್ಧ ದೇಹ ಕಾಣುವ ಬ್ಲೌಸ್, ಫ್ರಾಕ್, ಜಾಕೆಟ್ ಗಳು, ಆ ಟಿವಿ ಸೀರಿಯಲ್, ಕಾರ್ಯಕ್ರಮಗಳ ಜಡ್ಜ್ ಗಳು, ನೋಡಲು ಬರುವ ವೀಕ್ಷಕರ, ಜಾತ್ರೆ, ದೇವಾಲಯ, ಕಾರ್ಯಕ್ರಮಗಳಿಗೆ ಬರುವ ಜನರು ಹಾಕುವ ಬಟ್ಟೆಗಳನ್ನು ನೋಡಿದರೆ ಕೆಲವೊಮ್ಮೆ ಭಿಕ್ಷುಕರೇ ಲೇಸು ಅನ್ನಿಸುತ್ತದೆ.
ಫ್ಯಾಷನ್ ಲೋಕ ಹಳೆಯದೇ ಆದರೂ, ಪಟಾಕಿ, ತರಕಾರಿ, ಹಣ್ಣು, ಬಾಟಲಿಗಳು ಅಷ್ಟೇ ಏಕೆ ಹಳೆ ಶಿಲಾಯುಗದ ಜನರ ಹಾಗೆ ಸೊಪ್ಪು ಕಟ್ಟಿಕೊಂಡು ಮೆರೆದು ಹಿಸ್ಟರಿ ರಿಪೀಟ್ಸ್ ಎನ್ನುವ ಮಾತನ್ನು ನಾವು ಹೌದು ಮಾಡಿ ತೋರಿಸಿದವರು. ಕೊನೆಯ ಆಶಯ ಒಂದೇ. ಈ ಎಲ್ಲಾ ಮೇಕ್ ಅಫ್, ಆಭರಣಗಳು, ಚಪ್ಪಲಿ, ಶೂಗಳ, ಬಟ್ಟೆ ಬರೆಗಳ ಒಳಗೆ ಇರುವ ದೇಹ ಆರೋಗ್ಯಯುತವಾಗಿ ಇರಲಿ, ಮನಸ್ಸು ಹಾಗೂ ಆಶಯಗಳು ಉದಾತ್ತವಾಗಿ ಚೆನ್ನಾಗಿ, ಉತ್ತಮ ಆಲೋಚನೆಗಳಿಂದ ತುಂಬಿರಲಿ. ಪರರಿಗೆ ನೋವು ತರದಿರಲಿ. ಅಷ್ಟೇ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
23.12.2023
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ