ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -226
ಅದ್ಯಾಕೋ ಗೊತ್ತಿಲ್ಲ ದಿನ ಕಳೆಯುತ್ತಿರುವ ಹಾಗೆ ಒಂದಾಗಿ ಬಾಳಬೇಕಾಗಿರುವ ವಿದ್ಯಾರ್ಥಿ ಸಮುದಾಯವು ಒಬ್ಬರ ಮೇಲೊಬ್ಬರು ದ್ವೇಷ ಕಾರುವ ಹಂತಕ್ಕೆ ಬಂದು ನಿಂತಿದ್ದಾರೆ. ಇದು ಒಂದು ಕೇವಲ ಒಂದು ಶಾಲೆಯ ಅಥವಾ ಒಂದು ಕಾಲೇಜಿನ ಸಮಸ್ಯೆಯಲ್ಲ. ಎಲ್ಲಾ ಕಡೆ ಹುಡುಗರು ಮತ್ತು ಹುಡುಗಿಯರು ನಾಯಿ ತರಹ ಕಚ್ಚಾಡುತ್ತಾ ಇರುತ್ತಾರೆ. ಈಗಂತೂ ಕರಾಟೆ ಮೊದಲಾದವುಗಳನ್ನು ಕಲಿತು ಹುಡುಗಿಯರು ಕೂಡ ನಾವೇನು ಕಡಿಮೆ ಇಲ್ಲ ಎನ್ನುವ ಹಾಗೆ ಇರುತ್ತಾರೆ. ಮನೆಯಲ್ಲಿ ಒಬ್ಬರು ಇಬ್ಬರು ಮಕ್ಕಳಿರುವ ಕಾರಣ ಹಿರಿಯರಂತೆ ಮಕ್ಕಳಿಗೂ ಎಲ್ಲವೂ ನಿಭಾಯಿಸುವ ರೀತಿ ತಿಳಿದಿರುತ್ತದೆ. ಅವರವರ ಪೋಷಕರಿಗೆ ಮಕ್ಕಳೇ ಹಿತವಚನ ನೀಡುವಂಥವರಾಗಿರುತ್ತಾರೆ. ಕೆಲವೊಂದು ಮನೆಗಳಲ್ಲಿ ಮಾಡ್ರನ್ ಟೆಕ್ನಾಲಜಿಗಳು ಪೋಷಕರಿಗೆ ಗೊತ್ತಿರುವುದಿಲ್ಲ. ತಮ್ಮ ಮಕ್ಕಳಿಂದಲೇ ಅದನ್ನು ಕೇಳಿ ಕಲಿಯುವ ಪರಿಸ್ಥಿತಿ ಅವರಿಗೆ ಬಂದಿದೆ. ಹಾಗಾಗಿ ಪೋಷಕರಿಗೆ ಇಂದು ತಮ್ಮ ಮಕ್ಕಳ ಮೇಲೆ ಹಿಡಿತ ಇಲ್ಲ. ಬದಲಾಗಿ ಮಕ್ಕಳು ತಮ್ಮ ಪೋಷಕರನ್ನು ಇಂದು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಅದು ಹೇಗೆಂದರೆ "ನಾನು ಕೇಳಿದ್ದು ಕೊಡಿಸಲೇಬೇಕು ಇಲ್ಲವಾದರೆ ನಾನು ನನ್ನ ಜೀವವನ್ನು ಕಳೆದುಕೊಳ್ಳುತ್ತೇನೆ. ನನಗೆ ಈ ಬದುಕು ಬೇಡ. ನಾನು ನಿಮ್ಮೆಲ್ಲರಿಂದ ದೂರವಾಗುತ್ತೇನೆ. " ಇದಿಷ್ಟು ಮಾತುಗಳನ್ನು ಕೇಳಿದ ಕೂಡಲೇ ತುಂಬಾ ಮುಗ್ಧರಾದ ಪೋಷಕರು ತಮ್ಮ ಮಕ್ಕಳು ಹಾಗೆಲ್ಲ ಮಾಡಿಕೊಳ್ಳುವುದು ಬೇಡಪ್ಪ ಹೇಗಾದರೂ ಇರಲಿ ಎಂದು ಅವರು ಹೇಳಿದ ಹಾಗೆ ಕೇಳಿಕೊಂಡು ಸುಮ್ಮನಾಗಿಬಿಡುತ್ತಾರೆ. ಇದನ್ನೇ ಅವರ ಮಕ್ಕಳು ಅವರ ವೀಕ್ನೆಸ್ ಆಗಿ ತೆಗೆದುಕೊಂಡು ಪೋಷಕರನ್ನು ಆಟವಾಡಿಸುತ್ತಿರುತ್ತಾರೆ.
ಮಕ್ಕಳು ದೊಡ್ಡವರಾಗಿದ್ದಾರೆ ಮತ್ತು ಹಿರಿಯರು ಅವರ ಅಜ್ಞಾಪಾಲಕರಾಗಿದ್ದಾರೆ. ಹೀಗಿರುವಾಗ ಮನೆಯಲ್ಲಿ ಮಕ್ಕಳು ಮಾಡಿದ್ದೆ ರೂಲ್ಸ್. ಅವರು ಬೇಕು ಎಂದ ತಿಂಡಿ ರೆಡಿ ಆಗುತ್ತದೆ. ಅವರು ಇಷ್ಟ ಪಟ್ಟ ತಿಂಡಿಯೆ ಮನೆಯಲ್ಲಿ ತಯಾರಾಗುತ್ತದೆ. ಅವರು ಬೇಡ ಎಂದದ್ದು.... ಊ ಹೂ..ಇಲ್ಲವೇ ಇಲ್ಲ.. ಎಲ್ಲಾ ಪೋಷಕರ ಗುರಿ ಮಕ್ಕಳನ್ನು ಚೆನ್ನಾಗಿ ಸಾಕುವುದು. ಕೆಲವು ಪೋಷಕರು ಎಡವುವುದು ಅಲ್ಲಿಯೇ. ಮಕ್ಕಳನ್ನು ನಾವು ಚೆನ್ನಾಗಿ ಸಾಕಬೇಕು ಎಂಬ ಗುರಿ ಇಟ್ಟುಕೊಂಡು ಮಕ್ಕಳು ಬೇಕು ಅಂದಿದ್ದನ್ನೆಲ್ಲ ಶಕ್ತಿ ಮೀರಿ ಕೊಟ್ಟು, ಕೊನೆಗೆ ಅವರ ಆಸೆ ದುರಾಸೆಯನ್ನು ತಲುಪಿದಾಗ ಅದನ್ನು ಕೊಡಲು ಸಾಧ್ಯ ಆಗದೆ ಇದ್ದಾಗ ತಮ್ಮ ತಪ್ಪು ಅರಿವಾಗುತ್ತದೆ. ಮಕ್ಕಳಲ್ಲಿ ತಮ್ಮ ಕಷ್ಟ ಸುಖ ಹಂಚಿ ಕೊಳ್ಳದೆ, ತಾವು ಉತ್ತಮವಾಗಿ ಬದುಕುತ್ತಿದ್ದೇವೆ, ನಮಗೆ ಏನೂ ತೊಂದರೆ ಇಲ್ಲ ಎಂಬ ವ್ಯರ್ಥ ತೋರಿಕೆಯ ಬದುಕಿನಲ್ಲಿ ಬದುಕುತ್ತಾ, ಮಕ್ಕಳಿಗೂ ಹಾಗೆಯೇ ಬದುಕಬೇಕೆಂಬ ಕೆಟ್ಟ ಪಾಠವನ್ನು ಕೆಲವರು ಕಲಿಸಿದರೆ, ಇನ್ನೂ ಕೆಲವರು ಎಷ್ಟೇ ಇದ್ದರೂ ಕೂಡ ಸಾಮಾನ್ಯಂತೆ ಸಿಂಪಲ್ ಲಿವಿಂಗ್ ಅನ್ನು ಕಲಿಸಿಕೊಟ್ಟಿರುತ್ತಾರೆ. ಇತರ ಬಡವರ ಹಾಗೆ ಬೆಳೆಯಲು ಕಲಿತ ಮಕ್ಕಳು ಎಲ್ಲಿ ಹೋದರೂ ಕೂಡ ತಮ್ಮ ಬದುಕಿನಲ್ಲಿ ಯಾವ ಪರಿಸ್ಥಿತಿ ಬಂದರೂ ಕೂಡ ತಮ್ಮ ಜೀವನವನ್ನು ನಿಭಾಯಿಸಬಲ್ಲರು. ನನ್ನ ಮಗನಿಗೆ ಕೋಳಿಮಾಂಸವೇ ಆಗಬೇಕು ಅಥವಾ ಮೀನು ಫ್ರೈಯಾದರು ಇರಬೇಕು ಇಲ್ಲದಿದ್ದರೆ ಅವನು ಊಟವನ್ನೇ ಮಾಡುವುದಿಲ್ಲ, ಎoಬಿತ್ಯಾದಿ ರಾಗ ಎಳೆದು, ಮಗ ಬೇಕು ಬೇಕು ಎಂದು ಹೇಳಿದ್ದನ್ನೆಲ್ಲಾ ಕೊಡಿಸಿದ ಅಮ್ಮ ಮುಂದೊಂದು ದಿನ ಅವನು ಅವನಿಗೆ ಇಷ್ಟವಾದ ಹುಡುಗಿಯನ್ನು ಮನೆಗೆ ತಂದು, ಅವಳು ಹೇಳಿದಂತೆ ಕೇಳಿ ತನ್ನ ತಂದೆ ತಾಯಿಯನ್ನೇ ಮನೆಯಿಂದ ಹೊರಗೆ ಅಟ್ಟಿಬಿಡುತ್ತಾನೆ. ತನಗೆ ಇದ್ದದೆಲ್ಲವನ್ನು ಇದ್ದ ಮಗನಿಗೆ ಕೊಟ್ಟಾದ ಬಳಿಕ ವೃದ್ಧ ತಂದೆ ತಾಯಿಗಳು ತಾವು ತಮ್ಮ ಬದುಕಿಗಾಗಿ ಒದ್ದಾಡುತ್ತಿರುತ್ತಾರೆ. ಈ ಕಷ್ಟ ನಮಗೆ ಬರಬಾರದು ಎಂದಿದ್ದಲ್ಲಿ ಮಕ್ಕಳನ್ನು ಈಗಲೇ ಶಿಸ್ತಿನಿಂದ ಬೆಳೆಸಬೇಕು. ವಿಲ್ ವಿದ್ಯೆ ಇಲ್ಲದವ ಪಶುವಿಗೆ ಸಮಾನ ಎಂಬ ಮಾತಿನಂತೆ ಶಿಸ್ತು ಇಲ್ಲದ ಮನುಷ್ಯನು ಕೂಡ ಪಶುವಿಗಿಂತ ಕಡೆ. ಮಕ್ಕಳಲ್ಲಿ ಶಿಸ್ತನ್ನು ಬೆಳೆಸಿದಾಗ ಮಾತ್ರ ಮುಂದೆ ಅವನು ಉತ್ತಮ ನಾಗರಿಕನಾಗಿ ಉತ್ತಮ ಪ್ರಜೆಯಾಗಿ ಬೆಳೆದು ಸಮಾಜವನ್ನು ಉತ್ತಮ ಮಟ್ಟದಲ್ಲಿ ಕೊಂಡಡೊಯುವುದರಲ್ಲಿ ಎರಡು ಮಾತಿಲ್ಲ. ಅದೇ ಯಾವ ಶಿಸ್ತು ಇಲ್ಲದೆ ಒಟ್ಟಾರೆಯಾಗಿ ಬೆಳೆದಂತಹ ಒಬ್ಬ ಅವನ ಬದುಕಿನ ಮಾರ್ಗಗಳು ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಗೆ ಅನ್ವಯಿಸುತ್ತದೆ ಹೊರತು ಒಳ್ಳೆಯ ಶಿಸ್ತನ್ನು ಅವನಿಂದ ಕಾಣಲು ಸಾಧ್ಯವಿಲ್ಲ. ಅವನ ಅಥವಾ ಅವಳಿಗೆ ಬಾಳಲ್ಲಿ ಬಂದ ಬಾಳ ಸಂಗಾತಿಯು ಕೂಡ ನೋವನ್ನೇ ಅನುಭವಿಸುತ್ತಾರೆ. ಅದಕ್ಕೆ ವಿದ್ಯಾರ್ಥಿಗಳನ್ನು ಗಿಡವಾಗಿಯೇ ಬಗ್ಗಿಸುವುದನ್ನು ಕಲಿಯಬೇಕು. ಆದರೆ ಶಾಲೆಗಳಲ್ಲಿ ಇಂದು ಶಿಕ್ಷಕರು ವಿದ್ಯಾರ್ಥಿಗಳನ್ನು ಯಾವುದೇ ರೀತಿಯಲ್ಲಿ ಶಿಕ್ಷಿಸುವಂತಿಲ್ಲ. ಅವರ ತಪ್ಪುಗಳನ್ನು ಶಿಕ್ಷಿಸುವ ಅಧಿಕಾರ ಶಿಕ್ಷಕರಿಗಿಲ್ಲ. ವಿದ್ಯಾರ್ಥಿಗಳು ಏನು ಮಾಡಿದರು ಅದು ಸರಿಯೇ. ಮಗು ಕೇಂದ್ರೀತ ಶಿಕ್ಷಣ ಆದಕಾರಣ ಮಗು ಹೇಳಿದ ಹಾಗೆ ಶಿಕ್ಷಕರು ಕೇಳಬೇಕು. ಒಂದು ವೇಳೆ ಏನೂ ಕಲಿಸಬೇಡಿ ಎಂದರೆ ಕಲಿಸಬಾರದು. ಮಕ್ಕಳಿಗೆ ಅವರಿಗೆ ಬೇಕಾದಷ್ಟು ಸ್ವಾತಂತ್ರ್ಯವನ್ನು ನೀಡಬೇಕು. ಅದರ ಜೊತೆಗೆ ಅವರು ಹೇಳಿದಂತೆ ಕೇಳಿಕೊಳ್ಳುತ್ತಾ ತರಗತಿಯ ಮತ್ತು ಶಾಲೆಯ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಇದು ಈಗ ಶಿಕ್ಷಕರ ಮುಂದಿರುವ ದೊಡ್ಡ ಸವಾಲು.
ತರಗತಿಯಲ್ಲಿ ಅಷ್ಟಷ್ಟು ದೊಡ್ಡ ದೊಡ್ಡಕ್ಕೆ ಜಗಳವಾಡುತ್ತಿರುವ ಹುಡುಗ ಹುಡುಗಿಯರಿಬ್ಬರೂ ಕೂಡ ಪರೀಕ್ಷೆಯ ಹಾಲಿಗೆ ಬಂದಾಗ ತಾವು ಒಂದೇ ಎನ್ನುವಷ್ಟು ಒಗ್ಗಟ್ಟನ್ನು ತೋರಿಸಿಕೊಳ್ಳುತ್ತಾರೆ. ಅವರು ಬರೆದ ಉತ್ತರ ಪತ್ರಿಕೆಗಳನ್ನು ಇತರರಿಗೆ ತೋರಿಸಿ ಸಹಾಯ ಮಾಡುವುದು,
ಇತರರಿಂದ ಕೇಳಿಕೊಂಡು ಇನ್ನೊಬ್ಬರಿಗೆ ಹೇಳುವುದು, ತಂದೆಯಂದಿರ ಹೆಸರಿನಲ್ಲಿ ಮಕ್ಕಳನ್ನು ಕರೆಯುವುದು, ಶಿಕ್ಷಕರಿಗೆ ಎದುರು ಉತ್ತರ ಕೊಡುವುದು ಶಿಕ್ಷಕರು ಹೇಳಿದ ಯಾವುದೇ ಮಾತುಗಳನ್ನು ಕೊಡ ಕೇಳದಿರುವುದು, ಶಿಕ್ಷಕರು ಏನಾದರೂ ಹೇಳಿದರೆ ಸಾಕು ಅದನ್ನು ಪೋಷಕರಲ್ಲಿ ಮತ್ತು ಊರಿನವರಲ್ಲಿ ಹೇಳಿ ಶಿಕ್ಷಕರ ವಿರುದ್ಧ ಅವರನ್ನು ದಂಗೆ ಹೇಳುವಂತೆ ಮಾಡುವುದು - ಇವೆಲ್ಲ ನಾವು ಇತ್ತೀಚೆಗೆ ಬೇರೆ ಬೇರೆ ಕಡೆ ನಡೆದ ಘಟನೆಗಳನ್ನು ದೃಶ್ಯ ಮಾಧ್ಯಮಗಳಲ್ಲಿ ಮತ್ತು ವಾತಾಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡದ್ದು. ಇಷ್ಟೇ ಅಲ್ಲ ಶಿಕ್ಷಕರಿಗೂ ತಿರುಗಿ ಹೊಡೆಯುವವರು, ಚಾಕು ಹಾಕಿ ಓಡಿದವರು, ಶಿಕ್ಷಕರನ್ನೇ ನಿಂಬದಿಸಿದವರು, ಶಿಕ್ಷಕರು ಮನೆಗೆ ತೆರಳುತ್ತಿದ್ದಾಗ ಮರದ ಮೇಲೆ ನಿಂದ ಬಡಿಗೆಯಲ್ಲಿ ಹೊಡೆದು ಸಾಯಿಸಿದವರು ಇಂಥವರ ಸಂಖ್ಯೆ ಬೆಳೆಯಲು ಕಾರಣ ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಶಿಸ್ತಿನಲ್ಲಿ ಹಿಡಿದಿಡಲು ಇರದ ಸ್ವಾತಂತ್ರ್ಯ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಪದ್ಧತಿ ಏನು ಉತ್ತಮವೆ. ಆದರೂ ಶಿಕ್ಷಕ ವಿದ್ಯಾರ್ಥಿಯ ಮಧ್ಯೆ ಉನ್ನತವಾದ ಗುರು ಶಿಷ್ಯರ ಬಾಂಧವ್ಯ ಇರಬೇಕಲ್ಲವೇ? ಇದು ಹಿರಿಯರಿಗೆ ಕೊಡುವ ಗೌರವವೂ ಆಗಿದೆ. ಈಗ ಹಿರಿಯರು ಕಿರಿಯರು ಎಂದೇನು ಇಲ್ಲ. ಆಂಗ್ಲರ ಹಾಗೆ ಯು ಎನ್ನುವ ಒಂದೇ ಭಾಷೆ, ಎಲ್ಲರಿಗೂ ಒಂದೇ ನೀತಿ, ಎಲ್ಲರೂ ಅವರವರು ಹೇಳಿದ್ದು ಸರಿಯೇ ಮನೆಯಲ್ಲೂ ಶಾಲೆಯಲ್ಲೂ... ಹೀಗಿರುವಾಗ ಶಿಸ್ತಿನ ಶಿಕ್ಷಣ ಶಿಸ್ತಿನ ಬದುಕು ಉತ್ತಮ ಗುಣಗಳು ಹಿರಿಯರಿಂದ ಧಾರೆಯಾಗಿ ಎರೆಯಲ್ಪಟ್ಟ ಕಿರಿಯರ ಗುಣಗಳು ಸದ್ಭಾವನೆ ತಾಳ್ಮೆ ಹಂಚಿ ತಿನ್ನುವ ಗುಣ ಪರರನ್ನು ಉತ್ತಮವಾಗಿ ಕಾಣುವ ವಿಶಾಲ ಹೃದಯ ಎಲ್ಲರೂ ಒಂದೇ ಎಂಬ ಭಾವ ಒಗ್ಗಟ್ಟು ಇವನ್ನೆಲ್ಲ ಎಲ್ಲಿ ಕಾಣಲು ಸಾಧ್ಯ? ಆಂಗ್ಲ ಭಾಷೆಯಲ್ಲಿ ಶಿಕ್ಷಣವನ್ನು ತೆಗೆದುಕೊಳ್ಳುವ ಮುಂದಿನ ಜನಾಂಗವು ಇಲ್ಲಿನ ಮೂಲ ಬದುಕನ್ನು ಕಟ್ಟಿಕೊಳ್ಳುವ ಭಾಷೆಯನ್ನೇ ಕಲಿಯುವುದಿಲ್ಲವಾದ್ದರಿಂದ ಸಂಸ್ಕೃತಿಯನ್ನು ಹೇಗೆ ತಾನೆ ನಾವು ಅವರಿಂದ ನಿರೀಕ್ಷಿಸಲು ಸಾಧ್ಯ? ಹರುಕು ಮುರುಕು ತುಂಡು ಬಟ್ಟೆ ಹಾಕುವ ವಿದೇಶಿ ಭಾಷೆಯನ್ನು ಕಲಿಯುವ ಇಂದಿನ ವಿದ್ಯಾರ್ಥಿಗಳು ಮುಂದಿನ ಯುವಕರಾದಾಗ ಆಂಗ್ಲರ ಸಂಸ್ಕೃತಿಯನ್ನೇ ಕಲಿಯುವುದಲ್ಲದೆ ಅವರ ಹಾಗೆಯೇ ಬೆಳೆಯುವುದಂತೂ ಖಂಡಿತ. ಇನ್ನು ಅವರಲ್ಲಿ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಕಾಣಲು ಸಾಧ್ಯವೇ? ಇದಕ್ಕೆ ಅವರನ್ನು ದೂರಲು ಸಾಧ್ಯವಿಲ್ಲ . ಹಿರಿಯರಾದ ನಾವು ಅವರಿಗೆ ಕಳಿಸಿದ್ದು ಅದನ್ನೇ ಅಲ್ಲವೇ? ನಾವು, ನಮ್ಮ ಮುಂದಿನ ಜನಾಂಗ, ನಮ್ಮ ಮುಂದಿನ ದೇಶದ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುವ ಜನಾಂಗಕ್ಕೆ ಅದೇನನ್ನು ಒಳ್ಳೆಯದನ್ನು ಇಟ್ಟಿದ್ದೇವೆಯೋ ತಿಳಿಯದು. ಮಲಿನವಾದ ಪರಿಸರ ಅಶುದ್ಧ ಗಾಳಿ ಹೊಳಪು ನೀರು ವಿಷ ಸೇರಿಸಿದ ಮಣ್ಣು, ವಿಷಗಳಲ್ಲಿ ಬೆಳೆಯುವ ಹಣ್ಣು ತರಕಾರಿಗಳು, ಅವುಗಳನ್ನು ತಿಂದು ಆರೋಗ್ಯವನ್ನು ಪೂರ್ತಿಯಾಗಿ ಕಳೆದುಕೊಂಡ ಮಾನವ ಸಮಾಜ. ಇವರಿಂದ ನಾವು ಯಾವ ರೀತಿಯ ದೇಶವನ್ನು ಸಮಾಜವನ್ನು ನಿರೀಕ್ಷಿಸಲು ಸಾಧ್ಯ? ಬದುಕ ಲೆಕ್ಕಾಗೆ ಹೋರಾಟ ಜಗಳ ಕದನ ಸಾಧ್ಯವಾದಾಗ ಒಂದಿಷ್ಟು ಸಹಾಯವನ್ನು ಕೊಡುವುದು ಮತ್ತು ಪಡೆದುಕೊಳ್ಳುವುದು ಇವಿಷ್ಟೇ. ಈಗಿನ ಯುವ ಜನಾಂಗ ಮತ್ತು ಮಕ್ಕಳು ಮಾಡುತ್ತಿರುವುದು ಅದನ್ನೇ. ಅವರಿಗೆ ನಾವು ತಿನ್ನಲು ಕೊಟ್ಟದ್ದು ಟೇಸ್ಟ್ ಪೌಡರ್ ಬಳಸಿದ ನೂಡಲ್ಸ್ ಗೋಬಿಮಂಚೂರಿ ಪಿಜ್ಜಾ ಬರ್ಗರ್. ಕುಡಿಯಲು ಹೊಟ್ಟಿದ್ದು ಸ್ಪ್ರೈಟ್ ಮಿರಿಂದ ಕೊಕೊ ಕೋಲಾ ಬಣ್ಣದ ತಂಪು ಪಾನೀಯಗಳು! ಯುವಗಳನ್ನೇ ತಿಂದು ಉಂಡು ಬೆಳೆದ ಅವರ ಮೈಯಲ್ಲಿ ಕೈಗಳಲ್ಲಿ ರಟ್ಟೆಗಳಲ್ಲಿ ಅದೆಷ್ಟು ಶಕ್ತಿ ಇರಬಹುದು? ಅವರ ರುಚಿಕರ ಆಹಾರಕ್ಕಾಗಿ ಹುಡುಕಾಡುತ್ತಾರೆಯೇ ಹೊರತು ಹೊಟ್ಟೆ ತುಂಬ ತಿನ್ನಲಿಕ್ಕಾಗಿ ಅಲ್ಲ. ಇನ್ನು ಲಿಪಿಡ್ ವಿಟಮಿನ್ ಪೋಷಕಾಂಶಗಳ ಬಗ್ಗೆ ಅವರಿಗೆ ಬೇಕಾಗಿಯೇ ಇಲ್ಲ. ದೇಹದ ಆರೋಗ್ಯದಲ್ಲಿ ಏನೇ ಏರುಪೇರಾದರೂ ಡಾಕ್ಟರ್ ಇದ್ದಾರೆ ಎನ್ನುವ ಭರವಸೆ ಅವರಿಗೆ. ಇಂತಹ ಜನಾಂಗದ ಕೈಯಲ್ಲಿ ನಮ್ಮ ದೇಶವನ್ನು ಇಟ್ಟು ದೇಶದ ಬಗ್ಗೆ ಉನ್ನತ ಕನಸು ಕಾಣುತ್ತಿರುವ ನಾವು ಅದೆಷ್ಟರವರು ಎಂದು ನಾವೇ ಸಿಂಹಾವಲೋಕನ ಮಾಡಿಕೊಳ್ಳಬೇಕಾಗಿದೆ. ಕೇವಲ ಮತದಾನದ ವಿಷಯವಾಗಿ ಜಾತಿ ಧರ್ಮಗಳ ನಡುವೆ ಭೇದ ತಂದಿಟ್ಟು, ರಸ್ತೆಯಲ್ಲಿರುವ ಬೀದಿನಾಯಿಗಳ ಹಾಗೆ ಕಚ್ಚಾಡುತ್ತಿರುವ ಹಿರಿಯರನ್ನು ನೋಡಿದ ಯುವ ಜನಾಂಗ ಅದೇನು ತಾನೆ ಕಲಿತುಕೊಳ್ಳಬಲ್ಲದು? ಆಸ್ತಿ ಗಾಗಿ ಜಗಳ ನೀರಿಗಾಗಿ ಜಗಳ ದೇಶ ದೇಶದ ಗಡಿಗಾಗಿ ಜಗಳ ವ್ಯಾಪಾರಕ್ಕಾಗಿ ಜಗಳ ಹಣಕ್ಕಾಗಿ ಜಗಳ ಬದುಕಿನ ಹಕ್ಕುಗಳಿಗಾಗಿ ಜಗಳ ಎಲ್ಲವೂ ಜಗಳ ಕದನ! ಗಂಡ ಹೆಂಡತಿಯರ ನಡುವೆ ಜಗಳ ಕುಟುಂಬದ ವಿವಿಧ ಜನರ ನಡುವೆ ಜಗಳ ನಾಯಿ ಬೆಕ್ಕಿಗಾಗಿಯೂ ಜಗಳ ಇಂತಹ ಪರಿಸ್ಥಿತಿಯಲ್ಲಿ ಬೆಳೆಯುತ್ತಿರುವ ಮುಂದಿನ ಯುವ ಜನಾಂಗದ ಮನಸ್ಥಿತಿ ಅದು ಹೇಗೆ ಬ್ರಾಡ್ಮೈಂಡ್ ಆಗಿ ಬರಲು ಸಾಧ್ಯ? ಇದಕ್ಕೆಲ್ಲ ಉತ್ತರ ಕೊಡುವವರು ನಾವೇ ಆಗಿದ್ದೇವೆ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
15.03.2024
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ