ಗುರುವಾರ, ಏಪ್ರಿಲ್ 4, 2024

ಬಾಳು ಬೆಳಗಲಿ

ಬಾಳು ಬಂಗಾರವಾಗಿರಲಿ

ಬಂಗಾರದಂತಹ ಬದುಕ  ಧಾರೆ ಎರೆದಿರುವೆ
ಬಂಧನವಾಗದ ಹಾಗೆ ಪೊರೆಯುವಂತಾಗಲಿ 
ಭೃಂಗದ ಹಾಗಿದ್ದೆ ಅತ್ತಿತ್ತ ಓಡಾಡುತ್ತಾ ಆರಾಮದಲಿ
ಭಯವಿಲ್ಲದ ಬಾಳ ಕಟ್ಟಿ ಕೊಡುವಂತಾಗಲಿ 

ಭೋಗ ಭಾಗ್ಯದ ಅತಿಯಾಸೆ ಎನಗಿಲ್ಲ
ಭವ್ಯ ಭವಿತವ್ಯವ ರೂಪಿಸುವ ಕನಸು ನನಸಾಗಲಿ
ಬೆಳ್ಳಿ ಬಂಗಾರದ ಧನದ ದುರಾಸೆ ಇಲ್ಲಿಲ್ಲ
ಬೆವರ ಹರಿಸಿ ದುಡಿದ ಬಾಳು ಬೆಳಗಲಿ

ಬಿಚ್ಚು ಮನಸಿನಲಿ ಮುನಿಸು ಬಾರದಿರಲಿ
ದೇವನೊಲುಮೆಯು ಸದಾ ಜೊತೆಗಿರಲಿ
ಅದೃಷ್ಟ ಅದೃಶ್ಯ ಶಕ್ತಿಯಾಗಿ ಬರುತಿರಲಿ
ಅರಗಿನ ಮನೆಯಾದರೂ ಖುಷಿಯು ಅರಳಲಿ

ದೇವರ ವರ ಪ್ರಸಾದ ನಿತ್ಯ ಜೊತೆಗಿರಲಿ
ಮನ ಮಂದಿರದಲಿ ಜ್ಯೋತಿ ಬೆಳಗುತಿರಲಿ 
ಸ್ನೇಹ ಪ್ರೇಮದ ಕಡಲುಕ್ಕಿ ಹರಿಯಲಿ
ಬಿಳಿಯ ತೆರೆಗಳು ಕಷ್ಟಗಳ ದೂರಾಗಿಸಲಿ

ಮಮತೆ ಸಾಂತ್ವನ ಝರಿಯಾಗಿ ಉಕ್ಕಲಿ
ಮಾನವತೆಯ ಹಾದಿಯಲಿ ಸಾಗುವಂತಾಗಲಿ
ಬೇರೆಂಬ ಭೇದವಿಲ್ಲದೆ ಒಂದಾಗಿ ಸಾಗುತಲಿ
ಬದುಕ ಬೇರಿನ ರಸ ಸವಿಯುವಂತಾಗಲಿ

ಬೇನೆ ಬೇಸರ ಕಳೆದು ಹೋಗಲಿ
ಬುವಿಯ ಸುಖವು ಬಳಿಗೆ ಬರಲಿ
ಬೇವು ಬೆಲ್ಲದ ಬದುಕಿನೊಳಗೆ
ಬೆರೆತು ಬಾಳುವ ಭಾಷೆ ಉಳಿಯಲಿ
@ಹನಿಬಿಂದು@
04.04.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ