ಶುಕ್ರವಾರ, ಮೇ 17, 2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -229

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -229

   ಕಲಿತು ಕಲಿಸಬೇಕಿದೆ ನಾವು

       ಬದುಕೆಂದರೆ ಒಂದು ದಿನದ ಆಟ ಅಲ್ಲ. ಅದು ಆಟಗಳ ಜೊತೆಗೆ ಗುದ್ದಾಟವೂ ಇರುವ ಏಳು ಬೀಳುಗಳ ಸರಮಾಲೆ. ಆದರೆ ಇಲ್ಲಿ ನೆಮ್ಮದಿ ಎಂಬುದು ಬಡವ ಶ್ರೀಮಂತ ಯಾರಿಗೂ ಇಲ್ಲ. ಬಡವ ಹಣದಲ್ಲಿ ಬಡವನಾದರೆ, ಹಣದಲ್ಲಿ  ಶ್ರೀಮಂತ ಎನಿಸಿ ಕೊಂಡವ ಗುಣದಲ್ಲಿ ಬಡವ. ಅಷ್ಟೇ ಅಲ್ಲ, ನೆಮ್ಮದಿಯಲ್ಲಿ ಎಲ್ಲರೂ ಬಡವರೇ. ಶ್ರೀರಾಮ, ಶ್ರೀಕೃಷ್ಣ, ಏಸುಕ್ರಿಸ್ತ, ಶಿವ ಪಾರ್ವತಿ, ಭರತ ಚಕ್ರವರ್ತಿ,  ಗಣಪತಿ ಎಲ್ಲರ ಅವತಾರ, ಬದುಕನ್ನು ಒಮ್ಮೆ ಅವಲೋಕಿಸಿದರೆ ತಿಳಿಯುತ್ತದೆ, ಹೆಣ್ಣು ಮಕ್ಕಳಿಗೂ ಇದು ತಪ್ಪಿದ್ದಲ್ಲ. ಸೀತೆ, ದ್ರುಪದ ರಾಜನ ರಾಜಕುಮಾರಿ ದ್ರೌಪದಿ, ಕುಂತಿ, ಊರ್ಮಿಳಾ,  ಮಂಡೋದರಿ, ಕೈಕೇಯಿ ಎಲ್ಲರೂ ರಾಣಿಯರೇ ಆಗಿದ್ದರೂ ಕೂಡಾ ಬದುಕ ರುಚಿ ಸಂತಸದಿ ಸವಿಯಲು ಅವರಿಗೆ ಸಿಕ್ಕೀತೇ? ಬದುಕು ಯಾರೋ ಕಟ್ಟಿಕೊಟ್ಟ ಹಣದ ಗಂಟಲ್ಲ, ಬದಲಾಗಿ ಯಾರೋ ಮಾಡಿಟ್ಟ ಹೊಲ. ಅಲ್ಲಿ  ಸಮತಟ್ಟು  ಮಾಡಲು ಕಷ್ಟವಿದೆ.  ಅಗೆದು,  ಉಳುಮೆ ಮಾಡಿ, ಮಣ್ಣು ಹದ ಮಾಡಿ ಉತ್ತು, ಬಿತ್ತಿ, ಕಳೆ ತೆಗೆದು,  ನಾಟಿ ಮಾಡಿ, ಹಗಲು ರಾತ್ರಿ ದುಡಿದು ಬೆವರು ಸುರಿಸಿದರೆ ಮಾತ್ರ ನೆಮ್ಮದಿಯ ಬೆಳೆ ಸಿಕ್ಕೀತು. ಅದಕ್ಕೆ ಬೆಲೆಯೂ ಬಂದೀತು. ಯಾರೋ ಮಾಡಿಟ್ಟ ಹೊಲಕ್ಕೆ ಲಗ್ಗೆ ಇಡಲು ಸಾಧ್ಯ ಇಲ್ಲ. ಇಟ್ಟರೂ, ಮುಂದೆಯೂ ಅದೇ ರೀತಿ ಕಾಳಜಿ, ಕೆಲಸ ಜಾಗೃತಿ ಬೇಕು. ಭೂಮಿಗೆ ಬಂದ   ಪ್ರತಿಯೊಬ್ಬನೂ ಬದುಕಿನಲ್ಲಿ ನೆಮ್ಮದಿಯನ್ನೇ ಹುಡುಕುತ್ತಾನೆ. ಅದಕ್ಕಾಗಿಯೇ ಹಲವಾರು ಕೆಲಸ ಕಾರ್ಯಗಳು ಕೂಡ. ನೆಮ್ಮದಿ ಸಿಕ್ಕಿತು ಎನ್ನುವಷ್ಟರಲ್ಲಿ ಮತ್ತೊಂದು ಖಾಯಿಲೆ, ಮಗದೊಂದು ಸಾವಿನ ನೋವು, ಸಂಕಟ. ಹೀಗೆ ಕಷ್ಟ ಸುಖಗಳು ಒಂದರ ಹಿಂದೆ ಬೇವು ಬೆಲ್ಲದ ತೆರದಿ ನುಗ್ಗುತ್ತಾ ಬರುತ್ತವೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಮುಂದೆ ಹೋಗುವವ ಜಾಣ. 
    ಎಲ್ಲರೂ ಕಲಿಕೆಯಲ್ಲಿ ಎಷ್ಟೇ ಜಾಣರಾದರೂ ಬದುಕಿನ ಶಾಲೆಯಲ್ಲಿ ದಡ್ಡರೇ. ಅಲ್ಲಿ ಜಾಣ ಅನ್ನಿಸಿಕೊಳ್ಳುವವ  ಕೋಟಿಗೊಬ್ಬ.  ಅವನನ್ನು ಎಲ್ಲರೂ ಇಷ್ಟ ಪಟ್ಟು ಮೇಲಿಡುತ್ತಾರೆ. ದೇವರ ಹಾಗೆ ಪೂಜಿಸುತ್ತಾರೆ. ಆದರೆ ಒಂದು ದಿನ ಅವನನ್ನೂ ಕೂಡಾ ಜನ ಕೆಳಗೆ ದೂಕಿ ಅವನ ಮೇಲೆ ನಡೆಯುತ್ತಾರೆ ಎಂಬುದು ಕಟು ಸತ್ಯ. ಮತ್ತೆ ಅವನದ್ದೂ ಕೂಡ ಬದುಕಿಗೆ ಹೋರಾಟವೇ. 
         ಉತ್ತಮವಾಗಿ ಬದುಕಿ , ದುಡಿದು, ಮಕ್ಕಳಿಗೆ ಬೇಕಾದಷ್ಟು ಆಸ್ತಿ ಮಾಡಿ ಇಟ್ಟ ಸಿರಿವಂತ ಮಕ್ಕಳು ಹಿರಿ ವಯಸ್ಸಿನಲ್ಲಿ ರೋಗಿ ಆದ ಪೋಷಕರನ್ನು ವಿಷ ಹಾಕಿ ಸಾಯಿಸಲು ಕೂಡಾ ಹೆದರುವುದಿಲ್ಲ. ಅಂತಹ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಮತ್ತು ಅಂತಹ ಪೈಶಾಚಿಕ ಬುದ್ಧಿಯುಳ್ಳವರು ನಾವು ಕೂಡಾ ಆಗಿದ್ದೇವೆ, ನಮ್ಮ ಮುಂದಿನ ಜನಾಂಗವನ್ನು  ಶಿಸ್ತು, ಸಂಯಮಗಳ ಬದುಕಿನ ಪಾಠ ಕಲಿಸದೇ ಕೇವಲ ಓದು , ಬರಹ, ಹಣದ ದಾಹ ಕಲಿಸಿ, ವೈದ್ಯ, ಇಂಜಿನಿಯರ್ ಮಾಡಿ ಹಣದ ರಾಕ್ಷಸರನ್ನಾಗಿ ಬೆಳೆಸಿ ಬಿಟ್ಟಿದ್ದೇವೆ. ನಾವು ಹೇಗೆ ನಮ್ಮ ಮಕ್ಕಳು ನಮ್ಮ ಹಾಗೆ  ಬಡವರಾಗಿ ಬದುಕಬಾರದು, ಅವರಿಗಾಗಿ ನಾವು ಏನಾದರೂ ಮಾಡಿ ಇಟ್ಟಿರಬೇಕು ಎಂದು ಆಸೆ ಪಟ್ಟು, ವ್ಯಾಪಾರದ ಮೊರೆ ಹೋಗಿದ್ದೆವೋ ಹಾಗೆ ನಮ್ಮ ಮಕ್ಕಳು ಬದುಕನ್ನೇ ವ್ಯಾಪಾರ ಮಾಡಿಕೊಂಡಿದ್ದಾರೆ. 
       ಆದರೆ ಅವರ ಬದುಕಿನಲ್ಲಿ ಒಂದು ಟ್ವಿಸ್ಟ್ ಇದೆ. ಅದು ಏನೆಂದರೆ ಅವರಿಗೆ ನಾವು ಒಂದು ವಿಧದಲ್ಲಿ ಕೆಲಸ ಮಾಡುವುದು, ದುಡಿಯುವುದು, ಹಣ ಗಳಿಸುವುದು ಹೇಗೆ ಎಂದು ಲಕ್ಷಗಟ್ಟಲೆ ಹಣ ಸುರಿದು ಕಾಲೇಜುಗಳಲ್ಲಿ ಹೇಳಿ ಕೊಟ್ಟಿದ್ದೇವೆ. ಅದಷ್ಟೇ ಅವರಿಗೆ ಗೊತ್ತು. ಬದುಕಿನ ಪಾಠ ಮಾಡಲು ನಮಗೆ ಪುರುಸೊತ್ತು ಇದ್ದರೆ ತಾನೇ? ಹಾಗಾಗಿ ಅವರು ಕಲಿಯಲಿಲ್ಲ. ನಾವು ಕೂಡ ನಮ್ಮ ವಯಸ್ಸಿನಲ್ಲಿ ಅವರಿಗೆ ಸಮಯ  ಕೊಡದೆ ದುಡಿದದ್ದೆ ತಾನೇ. ಅವರು ನಮಗೆ ಸಮಯ ಕೊಡದೆ ಅವರ ದುಡಿಯುವ ವಯಸ್ಸಿನಲ್ಲಿ ದುಬೈ, ಜಪಾನ್, ಅಮೆರಿಕ, ಯುರೋಪ್ ಅಂತ  ಅಲ್ಲಲ್ಲಿ ಹೋಗಿ ಗಂಟೆಯ ಲೆಕ್ಕದಲ್ಲಿ  ದುಡಿಯುತ್ತಿದ್ದಾರೆ. 
         ಬದುಕು ಎಂದರೆ ಎಲ್ಲವನ್ನೂ ಬದಿಗೊತ್ತಿ, ಕೆಲಸ ಮಾಡಿ ಹಣ ಮಾಡುವುದು, ಮಕ್ಕಳನ್ನು ಓದಿಸುವುದು, ಶಾಪಿಂಗ್,  ಬೇಕಾದ್ದು ಕೊಳ್ಳುವುದು ಎಂಬ ಪಾಠ ನಮ್ಮನ್ನು, ಹಿರಿಯರನ್ನು ನೋಡಿ ಆಯಾ ಮಗು ಕಲಿತ ಪಾಠ. ಅದಕ್ಕೆ ಮಕ್ಕಳನ್ನು ಬೆಳೆಸುವಾಗ ಪ್ರತಿ ಪೋಷಕರು ನೀತಿ ಕಥೆಗಳು , ಪುರಾಣ ಪುಣ್ಯ ಕಥೆಗಳು, ಅಜ್ಜಿ ಕತೆಗಳು ಇವುಗಳ ಮೂಲಕ ನೀತಿ ಕಲಿಸಬೇಕು. ಇಂದಿನ ಕಾಲದಲ್ಲಿ ನೀತಿ ಪಾಠ ಹೇಳಬೇಕಾದ ಅಜ್ಜಿಯರು ಒಂದು ಕಡೆ ಹೊರಗೆ ದುಡಿತ, ಸುಸ್ತು, ಇಲ್ಲದೆ ಹೋದರೆ ಟಿವಿ, ಮೊಬೈಲ್ ಗಳಲ್ಲಿ ತಾವೇ ಮುಳುಗಿ ಹೋಗಿರುವುದು ವಿಪರ್ಯಾಸ. ಅಜ್ಜಿ ಅಜ್ಜಂದಿರು ಫ್ರೀ ಇದ್ದರೆ ನಮ್ಮ ಮಕ್ಕಳೇ ಮೊಬೈಲ್, ಲ್ಯಾಪ್ ಟಾಪ್, ನೋಟ್ ಪ್ಯಾಡ್ ಗಳಲ್ಲಿ, ಗೇಮ್ಸ್ ನಲ್ಲಿ ಮುಳುಗಿ ಹೋಗಿರುತ್ತಾರೆ. ಎಷ್ಟು ಎಂದರೆ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯ  ಭಾಷಾ ಉತ್ತರ ಪತ್ರಿಕೆಯ ಹದಿನೈದು ಪುಟಗಳಲ್ಲಿ ಒಬ್ಬ ವಿದ್ಯಾರ್ಥಿ ಎಲ್ಲಾ ಪುಟಗಳಲ್ಲೂ ಎಲ್ಲಾ ಪ್ರಶ್ನೆಗಳಿಗೂ ಮೋಯೆ ಮೋಯೆ ಎಂಬ ಪದವನ್ನು  ಕನಿಷ್ಠ 500 ಬಾರಿ ಬರೆದು ಇಟ್ಟಿದ್ದಾನೆ ಎಂದರೆ ಅವನ ಭಂಡ ಧೈರ್ಯ, ಅವನಿಗೆ ತರಗತಿಯಲ್ಲಿ ಸಿಕ್ಕ ಪಾಠವನ್ನು ಅವನು ಕೇರ್ ಲೆಸ್ ಮಾಡಿದ್ದು, ಪೋಷಕರ ಮಾತನ್ನು ಕೇಳದೆ ಇದ್ದುದು, ತನ್ನ ಮುಂದಿನ ಬದುಕಿನ ಬಗ್ಗೆ ಕನಸುಗಳು, ಶ್ರಮ, ಗುರಿ ಇಲ್ಲದ್ದು, ಸತ್ಯ, ನ್ಯಾಯ, ನಿಷ್ಠೆ ಇಲ್ಲದ್ದು ಎದ್ದು ಕಾಣುತ್ತಿಲ್ಲವೇ? ಬರೆಯಲು ಬಾರದೆ ಇದ್ದವನು ಅದು ಹೇಗೋ ಒಂದಷ್ಟು ಪ್ರಶ್ನೆಗಳಿಗೆ ಆದರೂ ಕಷ್ಟಪಟ್ಟು  ಅಲ್ಪ ಸ್ವಲ್ಪ ಸರಿ ಉತ್ತರ ಬರೆದಾನು. ಇದು ಏನು ಮಾಡಿದರೂ ಕೇಳದ ಮರ್ಕಟ ಬುದ್ಧಿ ಅಲ್ಲವೇ? ಇದನ್ನು ಸರಿಪಡಿಸಲು ಸಾಧ್ಯ ಇಲ್ಲವೇ? ಹೇಗೆ? 
         ಒಂದೇ ಉತ್ತರ. ನಮಗೂ, ನಮ್ಮ ಮಕ್ಕಳಿಗೂ ಇಂದು ತಾಳ್ಮೆ ಇಲ್ಲವಾಗಿದೆ. ಬಸ್ ಸ್ಟಾಪ್ ನಲ್ಲಿ ನಿಂತು ಬಸ್ ಕಾಯುವ ವ್ಯವಧಾನ, ಬಸ್ ಸ್ಟಾಂಡಿನ ವರೆಗೆ ನಡೆದುಕೊಂಡು ಹೋಗುವ ತಾಳ್ಮೆ, ಧೈರ್ಯ, ಶಕ್ತಿ, ಬಸ್ಸಿನ ಒಳಗೆ ಒಬ್ಬರಿಗೆ ಮತ್ತೊಬ್ಬರ ಜೊತೆ ಹೊಂದಾಣಿಕೆ ಇವೆಲ್ಲ ಕಲಿಕೆಗೆ ಅವಕಾಶ ಇವೆ. ಇವನ್ನೆಲ್ಲ ನಾವು ಕಷ್ಟ ಅಂತ ಕೊಡದೆ ನಾವೇ ಕಾಲೇಜಿನವರೆಗೆ,ಶಾಲೆ ಕಲಿಯುವಾಗ ಶಾಲೆಯವರೆಗೆ ಪಿಕ್ ಅಪ್ ಡ್ರಾಪ್ ನೀಡಿದ ಕಾರಣ ಇದು.  ಯಾವುದರ ಪರಿವೆಯೂ ಆ ಮಗುವಿಗೆ ಇಲ್ಲ. ಒಂದು ಬಸ್ ಹೋದರೆ ತಾಳ್ಮೆಯಿಂದ ಇನ್ನೊಂದು ಬಸ್ ಬರುವವರೆಗೆ ಕಾಯಬೇಕು, ಅಥವಾ ಬೇರೆ ರೂಟ್ ನಲ್ಲಿ ಹೋಗುವ ಬಸ್ ಹಿಡಿದು ಅರ್ಧದಲ್ಲಿ ಮೊದಲು ಹೋದ ಬಸ್ ಅನ್ನು ಕ್ಯಾಚ್ ಮಾಡ ಬಹುದು ಮೊದಲಾದ ಲಾಜಿಕ್ ಆಲೋಚನೆಗಳನ್ನು  ಅವರ ಮನಸ್ಸಿನ ಒಳಗೆ ಬರಲು ನಾವು ಅವಕಾಶ ಕೊಟ್ಟಿದ್ದರೆ ತಾನೇ? 
   ನಮ್ಮ ಮಕ್ಕಳನ್ನು ನಮ್ಮೊಂದಿಗೆ ಇಟ್ಟು, ನಮ್ಮ ಆಚಾರ ಕಲಿಸಿ ಬೆಳೆಸುವ ಕ್ರಮವೂ ಈಗಿಲ್ಲ, ಅದೆಲ್ಲೋ ದೂರದ ರೆಸಿಡೆನ್ಶಿಯಲ್ ಸ್ಕೂಲ್. ಕಾರಣ ವಿದ್ಯೆ ಚೆನ್ನಾಗಿ ಕೊಡಬೇಕು. ಹೇಗೆ ? ಮುಂದೆ ಒಳ್ಳೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ಸಿಗುವ ಹಾಗೆ ಹೈ ಫೈ ಆಂಗ್ಲ ಮಾಧ್ಯಮದ, ಸಿಬಿಎಸ್ಈ, ಐಸಿಐಸಿಈ, ಅದಕ್ಕಿಂತಲೂ ಮೇಲಿನ ಇಂಟರ್ ನ್ಯಾಶನಲ್ ಸ್ಕೂಲ್ ಸೆಲೆಕ್ಟ್ ಮಾಡಿ, ಓದಿಸಬೇಕು. ಕೆಲಸ ಸಿಕ್ಕಿದರೆ ಆಯ್ತು. ಪೋಷಕರು ಖುಷಿ, ಕೈ ತುಂಬಾ ಸಂಬಳ. ಜೀವನ ನಿರ್ವಹಣೆ ಗೊತ್ತಿಲ್ಲ, ಉತ್ತಮ ಗುಣಗಳ ಕಲಿತೇ ಇಲ್ಲ. ಬರೀ ಸಿಈಟಿಗೆ ರೆಡಿ ಮಾಡಿದ್ದು ಬಿಟ್ಟರೆ ಗುಣಗಳ ಬಗ್ಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ . ಹಾಗಾಗಿಯೇ ಇಂದಿನ ಮೆಡಿಕಲ್, ಇಂಜಿನಿಯರಿಂಗ್, ಎಂಬಿಎ, ಹೀಗಿನ ಪದವಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಡ್ರಗ್ ಅಡಿಕ್ಟ್ಸ್!!! ಕಾರಣ? ಸಿಗದ ಪ್ರೀತಿ!! ಸಿಗದ ನೆಮ್ಮದಿ ಒಂದೇ! 
  ನಾವು ಎಚ್ಚೆತ್ತು ನಡೆದಾಗ ಮಾತ್ರ ಪ್ರತಿಯೊಬ್ಬರ ಬದುಕು ಸರಿ  
   ಆದೀತು. ನಮ್ಮ ಮುಂದಿನ ಜನಾಂಗವನ್ನು ಕೂಡಾ ನಾವೇ ಸರಿಪಡಿಸಿ ಶುದ್ಧಗೊಳಿಸಿ ಇಡಬೇಕಿದೆ. ಇಲ್ಲದೆ ಹೋದರೆ ಗಾಳಿ, ನೀರು, ಶಬ್ಧ, ಮಣ್ಣು ಮಲಿನ ಆದ ಹಾಗೆ ಮನಸ್ಸುಗಳು ಕೂಡಾ ಮಲಿನ ಆಗುವುದರಲ್ಲಿ ಎರಡು ಮಾತಿಲ್ಲ. ನೀವೇನಂತೀರಿ?
@ಹನಿಬಿಂದು@
17.04.2024

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ