ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -231
ಬೇಸಿಗೆಯ ಉರಿ ಮುಗಿಲು ಮುಟ್ಟಿದೆ. ಕಾರಣ? ಒಂದೇ.. ಕಡಿಮೆಯಾದ ಹಸಿರು, ಹೆಚ್ಚಿದ ಜನ ಸಂಖ್ಯೆ ಮತ್ತು ಕಾಂಕ್ರೀಟ್ ಕಾಡು. ಪ್ರತಿನಿತ್ಯ ಇಡೀ ದೇಶದಲ್ಲಿ ರಸ್ತೆಗಳ ಅಗಲೀಕರಣಕ್ಕಾಗಿ ಹಿಂದೆ ನೆಟ್ಟಿದ್ದ ಸಾಲು ಮರಗಳನ್ನು ಧರೆಗೆ ಉರುಳಿಸಲಾಗುತ್ತಿದೆ. ಅಷ್ಟೇ ಅಲ್ಲ, ಮನೆಯ ಅಂಗಳದಲ್ಲಿ ಇರುವ ಮರ ಉತ್ತಮ ಆಮ್ಲಜನಕ ಕೊಡುತ್ತದೆ, ನೆರಳು ಕೊಡುತ್ತದೆ ಹಾಗೂ ನಾವು ಹೊರ ಬಿಟ್ಟ ಇಂಗಾಲದ ಡೈಆಕ್ಸೈಡ್ ನ್ನು ಹಗಲಲ್ಲಿ ತಾನೇ ಉಸಿರಾಡಿ ಆಹಾರ ತಯಾರಿಸಿ ಇಡೀ ವಾತಾವರಣವನ್ನು ತಂಪು ಮಾಡುತ್ತದೆ. ಅಷ್ಟೇ ಅಲ್ಲ , ಮೋಡ ತಡೆದು ತಂಪಾಗಿಸಿ ಮಳೆ ಸುರಿಸುತ್ತದೆ. ಹೂ ಹಣ್ಣು ಕಾಯಿ ಕೊಡುತ್ತದೆ. ಹಲವಾರು ಜೀವ ಜಂತುಗಳಿಗೆ ಬದುಕಲು ಆಶ್ರಯ ಒದಗಿಸಿ ಕೊಡುತ್ತದೆ. ಒಣಗಿದ ಎಲೆಗಳು ಕೆಳಗೆ ಬಿದ್ದು ತರಗೆಲೆಯಾಗಿ ಸಾವಯವ ಗೊಬ್ಬರ ಆಗುತ್ತದೆ. ಆದ್ರ ಮೇಲೆ ಹಲವಾರು ಪಕ್ಷಿಗಳು ಕುಳಿತು ಹಾಡುತ್ತವೆ. ದನಗಳು ಮತ್ತು ಜನಗಳು , ನಾಯಿಗಳೂ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಾರೆ. ವಾತಾವರಣದ ಜಲಚಕ್ರ, ಅನಿಲ ಚಕ್ರಕ್ಕೆ ಸಹಕಾರ ನೀಡುತ್ತದೆ.
ಆದರೆ ನಮಗೆ ಅದು ಕಾಣುವುದು ಹೀಗೆ. ಅದು ಬಹಳ ದೊಡ್ಡ ಮರ, ಮುದಿ ಆಗಿದೆ, ಮಳೆ, ಗಾಳಿ ಬಂದರೆ ಬೀಳಬಹುದು. ಅದರ ಒಣಗಿದ ಎಲೆಗಳೋ ಕಸ. ಗುಡಿಸಿ ಗುಡಿಸಿ ಸಾಕಾಗುತ್ತದೆ. ನಮ್ಮ ಅಂಗಳದ ಸ್ವಚ್ಛತೆ ಆ ಮರದಿಂದ ಹದಗೆಡುತ್ತದೆ. ಮನೆಯ ಮುಂದೆ ಇರುವ ಮರ ಮನೆಯ ಅಂದ ಕೆಡಿಸುತ್ತದೆ. ಮರದ ನೀರು ಬಿದ್ದು ಹಾಕಿದ ಸಿಮೆಂಟ್ ಕರಗಿ ಹೋಗುತ್ತದೆ. ಮರದ ಮೇಲೆ ಪಕ್ಷಿಗಳು ಕುಳಿತು ಹಿಕ್ಕೆ ಹಾಕಿ ಮನೆ ಮುಂದೆ ಗಲೀಜು. ಅಲ್ಲಿ ದನಗಳು ಬಂದು ಸೆಗಣಿ ಹಾಕಿ, ಮೂತ್ರ ಮಾಡಿ ಜಾಗ ಹಾಳು ಮಾಡುತ್ತವೆ. ವಾಸನೆ ಬರುತ್ತದೆ. ಆಯಾ ವಾಸನೆಗೆ ಸೊಳ್ಳೆ ಉತ್ಪತ್ತಿ ಆಗುತ್ತದೆ. ಅದರಿಂದ ಖಾಯಿಲೆ ಬರುತ್ತದೆ. ಮರದ ಟೊಂಗೆ ಗಾಳಿ ಮಳೆಗೆ ಏನಾದರೂ ಮುರಿದು ಬಿದ್ದರೆ ನಮಗೆ ಹಾನಿ.
ಮತ್ತೆ ಬಿಸಿಲು ಕಳೆದು ಮಳೆ ಬರಲು ಪ್ರಾರಂಭವಾಯಿತು. ಅದು ಎಂತಹ ಮಳೆ ಅಂತೀರಿ ಬಹಳ ದೊಡ್ಡ ಜಡಿ ಮಳೆ. ಇದ್ದ ಮಣ್ಣು ಎಲ್ಲ ಕೊಚ್ಚಿಕೊಂಡು ಹೋಗುವ ಹಾಗೆ ಧೋ ಎಂದು ಸುರಿಯುತ್ತಿದೆ. ಮಳೆ ಮಾತ್ರವಲ್ಲ ಗುಡುಗು ಸಹಿತ ಮಳೆ. ಈ ಗುಡುಗಿನ ದೆಸೆಯಿಂದ ಕರೆಂಟ್ ಇಲ್ಲ ಕರೆಂಟ್ ಇಲ್ಲದ ಕಾರಣ ನೀರು ಇಲ್ಲ ಮತ್ತು ಸೆಕೆ ಕೂಡ ತಡೆಯಲಾಗುತ್ತಿಲ್ಲ. ಮೊಬೈಲ್ ನಲ್ಲಿ ಚಾರ್ಜ್ ಇಲ್ಲ ಇಯರ್ ಎಂಡ್ ಆದ ಕಾರಣ ಸಂಬಳವೂ ಲೇಟು. ಎಲ್ಲಾ ಇಲ್ಲಗಳ ನಡುವೆ ಜೀವನ ಸಾಗುತ್ತಿದೆ. ಒಂದೆಡೆ ಹೀಗಾದರೆ ಇನ್ನೊಂದೆಡೆ ಅಬ್ಬರದ ರಂಪಾಟ. ಕೇವಲ ಒಂದು ಮದುವೆಯಾಗಿ ಕೋಟಿಗಟ್ಟಲೆ ಹಣ ಸುರಿಯುವವರು, ಮನೆಯ ಗ್ರಹ ಪ್ರವೇಶಕ್ಕಾಗಿ ಕೋಟೆಗಟ್ಟಲೆ ಖರ್ಚು ಮಾಡುವವರು, ಮಗನ ಮದುವೆ ನಡೆದ ಮೇಲೆ ಪಾರ್ಟಿ ಗಾಗಿ ಕೋಟಿಗಟ್ಟಲೆ ಖರ್ಚು ಮಾಡುವವರು, ಇವರ ನಡುವೆ ಬಡವರು ಬದುಕುವುದು ಹೇಗೋ? ಸಿರಿವಂತರ ಅಟ್ಟಹಾಸಕ್ಕೆ ಪ್ರಕೃತಿ ಮೊಮ್ಮನ ಮರುಗಿದರೆ ಬಡವರಿಗೂ ಬದುಕು ಕಷ್ಟವೇ. ಇದರ ಕಷ್ಟ ನಷ್ಟಗಳನ್ನು ಅನುಭವಿಸುವವರು ಮಾತ್ರ ಎಲ್ಲರೂ. ಅದಕ್ಕಿಂತ ಮೊದಲು ನಾವು ಎಚ್ಚೆತ್ತುಕೊಂಡರೆ ಉತ್ತಮ. ಪ್ರತಿ ಮನೆಯ ಸುತ್ತಲೂ ಕನಿಷ್ಠ ಹತ್ತಾದರೂ ಗಿಡಗಳನ್ನು ನೆಡಬೇಕು ಎಂಬ ಸರಕಾರದಿಂದ ಕಾನೂನು ಬರಬೇಕು. ಹಾಗಿದ್ದರೆ ಮಾತ್ರ ಮುಂದಿನ ಪೀಳಿಗೆ ಉಳಿಯಬಹುದು ಮತ್ತು ಬೆಳೆಯಬಹುದು. ನೀವೇನಂತೀರಿ?
@ಹನಿಬಿಂದು@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ