ಗುರುವಾರ, ಜೂನ್ 27, 2024

ಸತ್ಯಕ್ಕೆ ಸತ್ವವಿಲ್ಲ

ಸತ್ಯಕ್ಕೆ ಸತ್ವವಿಲ್ಲ 

ಮನದ ಭಾವವೆಲ್ಲ ಇಂದು
ಬತ್ತಿ ಹೋದ ಹಾಗಿದೆ
ಹಕ್ಕಿ ಹಾರಿ ಹೋಗಿ ತಾನು
ಮರದ ಮೇಲೆ ಕುಳಿತಿದೆ

ಹಿಗ್ಗಿನಿಂದ ಬೇರೆ ಮರಿಗೆ
ಗುಟುಕು ನೀಡಿ ಸಲಹಿದೆ
ಬೇಡ ಬೇಡವೆಂದು ತನ್ನ
ಬಳಿಯೆ ಕರೆದುಕೊಂಡಿದೆ

ಕಣ್ಣೀರೆಲ್ಲ ಹೆಪ್ಪುಗಟ್ಟಿ
ಮಂಜುಗಡ್ಡೆಯಾಗಿದೆ
ನೋವ ಕಡಲು ಉಕ್ಕಿ ಹರಿದು
ಸಾವು ಸನಿಹ ಕರೆದಿದೆ

ಬೇನೆ ಬೇಸರೆಲ್ಲ ಸೇರಿ
ಯಾಕೋ ನಗೆಯು ಮಾಸಿದೆ
ಆದರೇನು ತನಗೆ ತಾನೇ
ಸರಿಯ ಪಡಿಸದಾಗಿದೆ

ಬೇರೆ ಬೇರೆ ಮನವು ನಿತ್ಯ
ಆಲೋಚನೆ ಬೇರೆ ಸತ್ಯ
ನಂಬಿಕೆಯೂ ಆಯ್ತು ಮಿಥ್ಯ
ಭರವಸೆಗೆ ಇಲ್ಲ ಸತ್ವ

@ಹನಿಬಿಂದು@
28.06.2024


ಗುರುವಾರ, ಜೂನ್ 20, 2024

ಅವನು

ಅವನು

ಮನೆಗೆ ಬಂದೆ, ಬಟ್ಟೆ ಬದಲಾಯಿಸಿದೆ
ಕೈ ಕಾಲು ತೊಳೆದು ಮೊಬೈಲ್ ಒತ್ತುತ್ತಾ ಕುಳಿತೆ,
ಕಾಫಿ ಬಂತು ಕುಡಿದೆ, ಲೋಟವಿಟ್ಟೆ 
ತಿಂಡಿ ಬಂತು ತಿಂದೆ, ತಟ್ಟೆ ಇಟ್ಟೆ 

ಕೈ ತೊಳೆದೆ ಮೊಬೈಲ್ ಹಿಡಿದೆ
ವಾಟ್ಸ್ ಆ್ಯಪ್, ಮುಖ ಪುಟ, ಇನ್ಸ್ಟಾ 
ಮತ್ತೆ ವಾರ್ತೆ, ಒಂದಿಷ್ಟು ರೀಲ್ಸ್ ನಗು
ಮತ್ತೆ ಎದ್ದೆ ಸ್ನಾನ ಮಾಡಿ ಬಂದೆ

ರಾತ್ರಿ ಆಯ್ತು ಊಟ ಮಾಡಿ 
ಮೊಬೈಲ್ ಒತ್ತುತ್ತಾ ಹಾಗೆಯೇ ಮಲಗಿದೆ

ಬೆಳಗ್ಗೆ ಎದ್ದೆ,  ಹಲ್ಲುಜ್ಜಿ, ಸ್ನಾನ ಮಾಡಿದೆ
ಕಾಫಿ ತಿಂಡಿ ಆಯ್ತು, ಮೊಬೈಲ್ ನೋಡಿದೆ
ಕಾರು ಸ್ಟಾರ್ಟ್ ಮಾಡಿ ಕೆಲಸಕ್ಕೆ ಹೊರಟೆ 

ಮಾರುಕಟ್ಟೆಗೆ ಹೋಗಿ ತರಕಾರಿ ತಂದೆ...
ಸಂಜೆ ಮನೆಗೆ ಬಂದೆ, ........
.....ಹೀಗೆಯೇ ಬದುಕು!
ಕಾರಣ ನನಗಿಲ್ಲಿ ಮನೆಯಲ್ಲಿ ಬೇರೆ ಕೆಲಸವಿಲ್ಲ!
@ಹನಿಬಿಂದು@
20.06.2024

ಸೋಮವಾರ, ಜೂನ್ 17, 2024

ಬೇಕು

ಬೇಕು

 ಸಾಂತ್ವನ ಹೇಳಲು ನನ್ನಲಿ ಎಲ್ಲಿದೆ ಪದ ಸಂಪತ್ತು
ಓ ಭಾನುವೇ?
ಸ್ವಂತದ್ದು ಎಂದಿರುವುದು ನೀನಲ್ಲದೆ ಇನ್ಯಾರ ಕಿರಣ
ಬಲ ಓ ರವಿಯೇ!
ಮಂಥನ ಮಾಡಿ ನೋಡಲು ನಾ ಬೇರೆ ನೀ ಬೇರೆಯೇ
ಬಾಳ ಭಾಸ್ಕರನೇ!
ಬುದ್ಧಿ ಹೇಳಿ ಕೈ ಹಿಡಿದು ಮುನ್ನಡೆಸ ಬೇಕಾದವ ನೀನಲ್ಲವೇ
ಧರೆ ಬೆಳಗೊ ಆದಿತ್ಯನೇ !

ಪ್ರಶಾಂತತೆ , ತಾಳ್ಮೆ , ಕಾಯುವಿಕೆ ಬೇಕಲ್ಲವೇ ಜಗದಿ?
ನಿನಗಾಗಿ ನನ್ನ ಇರುಳೆಲ್ಲ ಪರಿತಪಿಸುವೆನಲ್ಲ ನಿತ್ಯದಿ?
ನೀ ನಾಳೆ ನನ್ನೆಡೆ ಬಂದು ಬೆಳಕೀವೆ ಎಂಬ ನಂಬಿಕೆ
ಭರವಸೆಯೊಂದೇ ಬಾಳಿಗೆ, ಈ ಇಳೆಗೆ ಹೊಂದಿಕೆ

ಮತ್ತೇಕೆ ಕೋಪ, ಈ ಪರಿತಾಪ ನೋವು, ಕಷ್ಟ, ಸಂಕಟ
ಭೂಮಿಗಾಗಿ ಭಾನು, ನಿನ್ನ ಕಿರಣದ ಬೆಳಕಿಂದ ಪ್ರೇಮ 
ಅಕಟಕಟಾ ನೋವ ಜಾಡಲಿ ಅದೇಕೆ ಆತಂಕ, ಅಪಹಾಸ್ಯ
ಕೆಲಸಗಳಿನ್ನೂ ಬಾಕಿಯಿವೆ, ಹಸಿರ ಹೆಚ್ಚಿಸಬೇಕಿದೆ ಜಗದಿ!

ಬಾಳಿನುದ್ದಕ್ಕೂ ಗುರುತರ ಗುರಿಗಳಿವೆ ಸಾವಿರಾರು,
ತಲುಪುವ ತನಕ ಕಾಯಬೇಕಿದೆ ಕ್ಷಣ ನೂರಾರು!
ಒಂದಿಷ್ಟು ನೋವು ನಲಿವು, ಕಷ್ಟ ಸುಖಗಳ ತಿರುವು,
ಬರಲಿಹುದು ಮುಂದೆ ಹಸಿರು ಕಾನನದ ನಗುಬೆಂಬ ಅರಿವು!

ಪ್ರಾಣಿ ಪಕ್ಷಿ ಕೀಟ ನಲಿದು ನಾಟ್ಯವಾಡಲಿ ಧರೆಯಲಿ
ಬೆಳಕು, ಪ್ರಕಾಶ, ನೆರಳು, ತಣ್ಣನೆ ಗಾಳಿ ಕೊಡುತಲಿ
ಧರಣಿ ಕಾದಿಹಳು ಹಚ್ಚ ಹಸಿರಿನ ಸಿರಿ ಸೌಖ್ಯಕಾಗಿ
ಮತ್ತೇಕೆ ಗಾಬರಿ, ಕಾತರ ನೀ ಬರುವ ಕ್ಷಣಕಾಗಿ

ಭೂಮಿ ಭಾನು ಬೆರೆತು ಒಂದಾದಾಗಲೇ ಸ್ವರ್ಗ ಸುಖ
ಮಾನವ ಪ್ರಾಣಿ ಪಕ್ಷಿ ಕೀಟ ಸಂಕುಲಕೆ ನಗುಮುಖ
ನಾ ನಿನ್ನನೇನೆನಲಿ ನೀ ನನ್ನನೇನೆನುವೆ ಜಗದಲಿ
ಧರೆ ನಗಲು ರವಿ ಕಿರಣದ ಪ್ರಸಾದ ಬೇಕಲ್ಲವೇ ಧರೆಯಲಿ 
@ಹನಿಬಿಂದು@
17.06.2024

ಭಾನುವಾರ, ಜೂನ್ 16, 2024

ಬದುಕು

ಬೃಹತ್ ಕಾಲೇಜು
ಬಹಳ  ಮೊತ್ತದ ಫೀಜು
ಬಹುದೊಡ್ಡ ಪದವಿ
ಪರದೇಶದಲ್ಲಿ ಕೆಲಸ
ಕಾರಿನಲ್ಲೇ ಗಮ್ಮತ್ತು
ಇರಲು ವಿಶಾಲ ವಿಲ್ಲಾ
ಆದರೆ ನೆಮ್ಮದಿ ಇಲ್ಲ..
@ಹನಿಬಿಂದು@
01.06.2024

ಪಯಣ ಸಾಹುತಿಹುದು

ಪಯಣ ಸಾಗುತಿಹುದು

ಗೊತ್ತು ಗುರಿಯಿಲ್ಲದೆ
ನಿಂತಲ್ಲಿ ನಿಲ್ಲದೆ
ಪಯಣ ಸಾಗಿದೆ ದಿನವೂ ಹೀಗೆಯೇ
ಭಾವ ಬಳ್ಳಿಯು ಬೆರೆತ  ಹಾಗೆಯೇ

ಸಹಸ್ರ ಗೆಳೆಯರೂ
ಸಾಸಿರ ಬಂಧುಗಳೂ
ಜತೆ ಸೇರಿ ಸಾಗುತಿಹೆವು ಮುಂದಾಗಿ
ಆದರೂ ಜೀವಿಸುತಿಹೆವು ಒಂಟಿಯಾಗಿ

ಬಾಳಿಗೊಂದು ಜೊತೆ ಬೇಕು
ಬಾನಿಗೊಂದು ರವಿ ಬೇಕು
ಜಂಟಿ ಹುಡುಕಿ ಗಂಟು ಹಾಕಿಕೊಂಡು
ಮಕ್ಕಳು ಮರಿ ಹಿರಿ ಕಿರಿಯರ ಕಟ್ಟಿಕೊಂಡು

ಸಾಗುತ್ತಾ ಮುಂದೆ
ದುಡಿಯುತ್ತಾ ನಿತ್ಯ
ನಾಳೆಗಾಗಿ ಹೊಸ ಹೊಸ ಕನಸುಗಳು
ನಿನ್ನೆ ಮೊನ್ನೆಯ ಮಧುರ ನೆನಪುಗಳು
@ಹನಿಬಿಂದು@
04.06.2024

ಹೀಗೆಯೇ

ಹೀಗೆಯೇ..

ಬದುಕಿನ ತರುಲತೆ ಮೊಗ್ಗಿನ ಕನಸದು
ಕೆದಕಿದ ಹೊರತದು ಹೊರಗಡೆ ಬಾರದು

ಬೂದಿಯು ಮುಚ್ಚಿದ ಕೆಂಡದ ತೆರದಲಿ
ನಾದಿದ ಹಿಟ್ಟಿನ ವಿನಯದ ಬಳಿಯಲಿ
ಜೋಪಾನ ಮಾಡಿ ತೆಗೆದಿರಿಸಿದ ತರ
ಕೋಪವ ಬಿಡುತಲಿ ಎಸೆಯೋಣ ದೂರ

ನೋವಿನ ಅಂಗಕೆ ಇಹುದೋ ಮದ್ದದು
ನೊಂದಿಹ ಮನಸಿಗೆ ಎಲ್ಲಿದೆ ಮುದ್ದದು
ಸಾಂತ್ವನ ಬೇಕಿದೆ ಅಳುತಿಹ ಹೃದಯಕೆ
ಸಾತ್ವಿಕ  ಬದುಕಿಗೆ  ನೀಡುತ ಅಭಯವ

ಮೋಹದ ಮಾತಿಗೆ ಸೊಪ್ಪನು ಹಾಕದೆ
ಸೋಜಿಗ ಎನಿಸಿಹ ಬಾಳನು ನೂಕದೆ 
ಮೋಸದ ಜಾಡಿಗೆ ಉಸಿರನು ಎಸೆಯದೆ
ಕೋಶವ ಓದುತ,  ಇತರರ ಮರೆಯದೆ

ಜನಗಳ ನಗುವದು ಖುಷಿಗೇ ಆಸರೆ 
ದನಗಳ ಹಾಗೆ ಹುಡುಕದೆ ಮುಸುರೆ
ಮನೆಗಳ ಅಗಲವು ಹೆಚ್ಚುತ ಇಹುದದು
ಮನಗಳ ನೋವನು ಕಡಿಮೆಯ ಮಾಡದೆ
@ಹನಿಬಿಂದು@
05.06.2024


ಬೇಕು

ಬೇಕು

ಏಕೆ ಯೋಚನೆ ನಿತ್ಯ ಬವಣೆ
ಬೇಕು ಒಳ್ಳೆಯ ಚಿಂತನೆ
ಶೋಕಿ ಬಾಳಿಗೆ ಅಂಟಿ ನಿಂದನೆ
ಸಾಕು ಸಣ್ಣ ಆಲೋಚನೆ...

ನೋವು ನಲಿವು ಕಷ್ಟ ಸುಖವು
ಒಂದೇ ನಾಣ್ಯದ ಮುಖವದು
ಕಾವು ಕೊಡುವ ಹಕ್ಕಿಯಂದದಿ 
ನಂದೇ ಎಂಬ ನಯವದು

ಕೊನೆಗೆ ಮೊದಲಿಗೆ ತಾಳವಿರದೇ
ನಿತ್ಯ ನೂತನ ಬಾಳಿಗೆ
ಎಣೆಗೆ ಸಿಗದ ಬಿರುಕು ಇರದೇ 
ಸತ್ಯ ಬದುಕಿನ ಕಿಂಡಿಗೆ 
@ಹನಿಬಿಂದು@
06.06.2024

ವಿಶ್ರಾಂತಿ

ವಿಶ್ರಾಂತಿ

ಅದೇಕೋ ಏನೋ ದೇಹವೀಗ ವಿಶ್ರಾಂತಿ ಕೇಳದು
ಇನ್ನಷ್ಟು ದಿನ ದುಡಿದು ಬಿಡು, ಬದುಕು ಬೇಕೆಂದು
ಖಾಯಿಲೆ ಇರದವ ಧರೆಯಲಿ  ಶೂನ್ಯ
ರೋಗವು ಬರುವುದು ಸರ್ವೇ ಸಾಮಾನ್ಯ 
ನೋವು ನಲಿವು ಬದುಕಲಿ ಮಾನ್ಯ

ಕಷ್ಟ ಸುಖದಲಿ ಬಾಳು ನಡೆಯಬೇಕು
ಸಿಹಿ ಕಹಿಯಲಿ ದಿನಗಳ ನಡೆಸಬೇಕು
ನಾಳೆ ಎಂಬ ಕನಸುಗಳ ಕಟ್ಟಬೇಕು
ಇಂದು ಖುಷಿಯ ಹಂಚುತಲಿ ಸಾಗಬೇಕು

ಅಸತ್ಯ ಸತ್ಯ ಸುಳ್ಳು ಮೋಸಗಳ ನಡುವೆ
ಭತ್ಯೆ ಪಡೆಯದೆ ಕೆಲಸ ಸಾಗಲುಂಟೆ ಇಲ್ಲಿ!
ನಾನು ನೀನು ಅವನು ಇವನೆಂಬ ತಂತ್ರ
ಸರ್ವರಿಗೆ ತಿಳಿದರೂ ತಿಳಿಯದ ಕುತಂತ್ರ

ಇಲ್ಲಿ ದುಡಿತ ಇಲ್ಲದೆ ಇಲ್ಲ ಬದುಕ ಸಾರ
ವಿಶ್ರಾಂತಿ ಬಂದೇ  ಬರಲಿದೆ ದೂರ
ಮಾಡುತಿಹೆವು ಅಲ್ಲಿ ಇಲ್ಲಿ ನಿತ್ಯ ಕಾರ್ಯ
ಬಿಡಲಿಲ್ಲೆವು ಪಕ್ಕದ ಮನೆಯ ವಿಚಾರ

ನಮ್ಮದೇನಿದೆ ಇಲ್ಲಿ ಬಿಟ್ಟು ಹೋಗಬೇಕು ಎಲ್ಲಾ
ಸಂಬಂಧ, ಆಸ್ತಿ, ಹಣ ಒಡವೆ ಐಶ್ವರ್ಯ
ಎಲ್ಲವೂ ಏಕೆ ಕೊನೆಗೆ ಹೊತ್ತ ದೇಹವೂ ಇಲ್ಲಿಯೇ
ನಮ್ಮದೆನುವುದು ಕೇವಲ ಉಸಿರ ಬೆಳಕೊಂದು ಮಾತ್ರ
@ಹನಿಬಿಂದು@
15.06.2024

ಧರೆಯಲಿ

ಧರೆಯಲಿ

ಮೊಳಕೆಯೊಡೆದಿದ್ದೆ ಅಂದು
ಚಿಗುರಿಸಿಕೊಂಡು  ಕನಸುಗಳ
ಗರಿಬಿಚ್ಚಿ ಬಾನಲ್ಲಿ ಹಾರುವ
ಹತ್ತು ಹಲವು ಹುಚ್ಚು ಆಸೆಗಳ ಹೊತ್ತು..

ತಾರೆಗಳ ನೋಡುತ್ತಾ
ತಾನೂ  ಬರುವೆನೆಂದು
ಹೇಳಿ, ಕೂಗಿ , ಕರೆದು ಹೇಳುತ್ತಾ
ಬಂಗಾರದ ಬಯಕೆ ಹೊತ್ತು..

ಎಲೆಯು ಮೊಳೆತಿತ್ತು 
ಕಳೆಯ ಅದುಮುತ್ತಾ
ಕೊಳೆಯ ತೆಗೆಯುವೆ 
ಬೆಳೆಯ ಬೆಳೆಯುವೆನೆಂಬ ಆಸೆಯಲಿ

ಧರೆಯಲಿ ಉಗಮ
ಕರೆಗಳ ನಡುವಿನಲಿ 
ಮೊರೆಯ ಇಡುತಲಿ 
ಕೆರೆಯ ಹಾಗಿನ ಬಾಳ್ವೆಗೆ..

ಆಸೆ ಮೊಳೆಯಿತೋ 
ಬಯಕೆ ಚಿಗುರಿತೋ
ಹತಾಶೆ ಹೆಚ್ಚಿತೋ
ಗುರಿಯ ತಲುಪಿತೋ ತಿಳಿಯದು
@ಹನಿಬಿಂದು@
16.06.2024

ಬಾಳು

ಬಾಳು

ಬೇಡ ಎನುವರು ಜನ ಶಾಶ್ವತ ವಿಶ್ರಾಂತಿ
ಬೇಕು ಜಗದಲಿ ತಮಗೆ ರಜೆಯ ಶಾಂತಿ
ಬೇಡ ಎಂದಿಗೂ ಜಗದಿ ಓಂ ಶಾಂತಿ
ಬರಬೇಕು ಮತ್ತೆ ಮತ್ತೆ ಸುಖದ ಕೀರ್ತಿ

ಬೇಕು ನಿತ್ಯ ಸದಾಚಾರದ ಜ್ಯೋತಿ
ಬೇಡ ಎಂದಿಗೂ ನೆಮ್ಮದಿಯ ಸದ್ಗತಿ
ಐಕ್ಯತೆಯ ಮಂತ್ರ ಬೇಡ ನ್ಯಾಯ ನೀತಿ


ಮೂಕ ಪ್ರೇಕ್ಷಕ ಆದರೂ ಬೇಕು ಸ್ಪೂರ್ತಿ

ಕವಿಯಾಗಲಿ ಕಲಿಯಾಗಲಿ ಇರಲಿ ಶಕ್ತಿ
ಆದರೂ ಆಗದ ಕಾರ್ಯಕ್ಕೆ ಬೇಕು ಯುಕ್ತಿ
ಇರಲಿ ಹೃದಯದಲಿ ದೇವರಲಿ ಭಯ ಭಕ್ತಿ
ಕೊನೆಗೊಂದು ದಿನ ಸಿಗಲಿಹುದು ಮುಕ್ತಿ
@ಹನಿಬಿಂದು@
16.06.2024



ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -236

   ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -236
          ಇದೊಂದು ಅನುಭವ ಹಾಗೂ ಜಿಜ್ಞಾಸೆ . ನಮಗೆ ಆರೋಗ್ಯ ಸರಿಯಿಲ್ಲದಾಗ ನಾವು ವೈದ್ಯರಲ್ಲಿ ಹೋಗುತ್ತೇವೆ. ಹಾಗೆ ವೈದ್ಯರಲ್ಲಿ ಹೋದಾಗ ವೈದ್ಯರು ನಮಗೆ ಔಷಧಿಯನ್ನು ಮಾತ್ರೆಗಳನ್ನು ಕೊಡುತ್ತಾರೆ.  ಹಾಗೆ ಕೊಟ್ಟಾಗ ತಪ್ಪದೇ ಒಂದಿಷ್ಟು ಸಮಯ ನಿರಂತರವಾಗಿ ಸೇವಿಸಬೇಕೆಂದು ಕೂಡಾ ಹೇಳುತ್ತಾರೆ, ಜೊತೆಗೆ ಸಾಕಷ್ಟು ನೀರು ಕುಡಿಯಿರಿ, ರೆಸ್ಟ್ ಮಾಡಿ, ಲೈಟ್ ಆಹಾರ ತಿನ್ನಿ, ಊಟದ ಬಳಿಕ ಒಂದು 15 -20 ನಿಮಿಷ ಆದ ಮೇಲೆ, ಅಥವಾ ಊಟದ ಅರ್ಧ ಗಂಟೆ ಮೊದಲು ಮಾತ್ರೆ, ಮದ್ದು ತಿನ್ನಲು ಹೇಳುತ್ತಾರೆ. ಹಾಗೆ ಅವರು ಹೇಳಿದಂತೆ ಕೇಳುತ್ತಾ, ನಾವು ಸಮಯಕ್ಕೆ ಸರಿಯಾಗಿ ಅವರು ಹೇಳಿದಷ್ಟು ದಿನ ಆ ಔಷಧವನ್ನು ಸೇವಿಸಿದ ಬಳಿಕ ನಮ್ಮ ಆರೋಗ್ಯ ಸುಧಾರಿಸುತ್ತದೆ ಅಲ್ಲವೇ? ಅದನ್ನು ತಪ್ಪಿದರೆ? ಮತ್ತೆ ಎರಡೇ ದಿನಕ್ಕೆ ರೋಗ ಉಲ್ಬಣಿಸುವ ಕ್ರಿಯೆ ನಡೆಯುತ್ತದೆ. ಹಾಗಾಗಿ ಸರಿಯಾದ ವಸ್ತುವನ್ನು, ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯಕ್ಕೆ ಪಡೆದುಕೊಂಡರೆ ಮಾತ್ರ ಆರೋಗ್ಯ ಸುಧಾರಿಸಲು ಸಾಧ್ಯ. 
     ನಮ್ಮ ಆಹಾರವೂ ಕೂಡಾ ನಮ್ಮ ದೇಹಕ್ಕೆ ಔಷಧೀಯ ಹಾಗೆ ಕೆಲಸ ಮಾಡುತ್ತದೆ ಅಲ್ಲವೇ? ನಿರಂತರ ಬೀಡಿ ಕಟ್ಟುವ ಮಹಿಳೆಯರಿಗೆ ತಂಬಾಕಿನಿಂದ ಬರುವ ಶ್ವಾಸಕೋಶದ ತೊಂದರೆಗಳು, ನಿತ್ಯ ನಿಲ್ಲುವ ಕಾರ್ಯ ಮಾಡುವವರಿಗೆ ಕಾಲು ನೋವು, ಕಾಲು ಗಂಟಿನ ಮೂಳೆ ಸವೆತ, ನಿತ್ಯ ಬಸ್ಸು, ಬೈಕಿನಲ್ಲಿ ತಿರುಗುವವರೆಗೆ ಬೆನ್ನು ನೋವು, ನಿತ್ಯ ಕುಳಿತುಕೊಳ್ಳುವವರಿಗೆ ಹೊಟ್ಟೆ ದಪ್ಪ ಇತ್ಯಾದಿ ಖಾಯಿಲೆ ಕಾಡಿಸುತ್ತದೆ ಎಂದು ನಮಗೆ ತಿಳಿದಿದೆ. ಹಾಗಿರುವಾಗ ನಾವು ನಿತ್ಯ ಸೇವಿಸುವ ಆಹಾರವೂ ಕೂಡ ಔಷಧೀಯ ಹಾಗೆಯೇ ತಿಂದರೆ ಒಳ್ಳೆಯದಲ್ಲವೇ? ಹಾಗಿದ್ದರೆ ಮಾತ್ರ ನಮ್ಮ ದೇಹವು ಉತ್ತಮ ಸ್ಥಿತಿಯಲ್ಲಿದ್ದು ಮುಂದೆ ನಮಗೆ ಯಾವುದೇ ತೊಂದರೆಗಳು ಬರದೇ ಇರಬಹುದು. 
    ಪಾರ್ಟಿ ಎನ್ನುವ ನೆಪದಲ್ಲಿ ಸಿಕ್ಕಿದ್ದೆಲ್ಲವನ್ನು ತಿಂದರೆ, ವಿಪರೀತ ಕುಡಿತ, ಹೊಟ್ಟೆಗೆ ಭಾರ ವಾಗುವಷ್ಟು ಆಹಾರ ಸೇವನೆ, ಕಡಿಮೆ ನೀರು ಕುಡಿಯುವುದು, ಪ್ರತಿನಿತ್ಯ ಹೊರಗಿನ ಆಹಾರ, ಅತಿ ಹೆಚ್ಚು ಕರಿದ ತಿಂಡಿಗಳ ಸೇವನೆ, ಪ್ರತಿನಿತ್ಯ ಜಂಕ್ ಫುಡ್ಗಳ ಬಳಕೆ - ಇವೆಲ್ಲವೂ ಕೂಡ ನಮ್ಮ ಆರೋಗ್ಯ ಹದಗೆಡಲು ದಿನೇ ದಿನೇ ಕಾರಣವಾಗುತ್ತವೆ. ಹೋಟೆಲ್ ಗಳಲ್ಲಿ ಮತ್ತು ಸಣ್ಣ ಸಣ್ಣ ಕ್ಯಾಂಟೀನ್ ಗಳಲ್ಲಿ ಬಳಸುವ ಎಣ್ಣೆ ಹೇಗಿದೆ ಎಂದು ನಮಗೆ ತಿಳಿದಿರುವುದಿಲ್ಲ. ಒಮ್ಮೆ ಕರೆದ ಎಣ್ಣೆಯಲ್ಲೇ ಪದೇ ಪದೇ ತಿಂಡಿಗಳನ್ನು ಕರೆದು ಕೊಡುವುದರಿಂದ ಅಂತಹ ತಿಂಡಿ ನಮಗೆ ರೋಗ ಕಾಡುವುದಂತೂ ಸತ್ಯವೇ ಸರಿ. ನಮ್ಮ ದೇಹದ ಅಂಗಾಂಗಗಳು ಮಶೀನುಗಳಂತೆ ಕೆಲಸ ಮಾಡುತ್ತವೆ ಆದರೂ ಅವುಗಳಿಗೆ ಅವುಗಳದ್ದೇ ಆದಂತಹ ಒಂದು ಕಟ್ಟಳೆಗಳಿವೆ. ಅವು ಯಾವ ಯಾವ ಆಹಾರಗಳನ್ನು ಜೀರ್ಣಿಸಿಕೊಳ್ಳಬಹುದು ಮತ್ತು ಯಾವ ಯಾವ ಆಹಾರಗಳನ್ನು ಜೀರ್ಣಿಸಿಕೊಳ್ಳಲಾಗದು ಎಂಬುದನ್ನು ಅರಿತಿರುತ್ತವೆ. ಮರಗಳಲ್ಲಿ ರಕ್ತ ಸಂಚಾರ ವಾಗುವಾಗ ಕೂಡ ಕರಗದ ಆಹಾರದ ಎಣ್ಣೆಯ ಅಂಶವು ನರಗಳಲ್ಲಿ ಬ್ಲಾಕೆಜ್ ಉಂಟು ಮಾಡುವ ಸಂಭವವಿರುತ್ತದೆ. ಇದರಿಂದಾಗಿ ಇಂದು ಅನೇಕ ಜನರು ಕಂಡ ಕಂಡಲ್ಲಿ ಹೃದಯ ಸ್ತಂಭನವಾಗಿ ಪ್ರಾಣ ಬಿಡುತ್ತಾರೆ. ನಮ್ಮ ಆಹಾರವೆಲ್ಲವೂ ಕೊನೆಯ ಕ್ಷಣದಲ್ಲಿ ರಕ್ತದ ರೂಪದಲ್ಲಿ ಬದಲಾವಣೆಯಾಗುತ್ತದೆ. ಅದರಿಂದ ನಮ್ಮ ದೇಹಕ್ಕೆ ಬೇಕಾದ ಶಕ್ತಿಯು ಸಿಗುತ್ತದೆ. ನಾವು ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ಜಂಕ್ ಫುಡ್ ಗಳನ್ನು ತಿನ್ನುವುದರಿಂದ ಅದರಿಂದ ಯಾವುದೇ ವಿಟಮಿನ್ ಗಳು ಮತ್ತು ಪೋಷಕಾಂಶಗಳು ನಮಗೆ ಸಿಗದೇ ದೇಹವು ತನ್ನ ಶಕ್ತಿಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಆಗ ಅಂಗಾಂಗಗಳು ತಮ್ಮಷ್ಟಕ್ಕೆ ತಾವೇ ತಮ್ಮ ಕೆಲಸದ ಶಕ್ತಿಯನ್ನು ಕಳೆದುಕೊಳ್ಳುತ್ತವೆ. 
             ಆದಕಾರಣ ನಮಗೆ ನಾವೇ ತಿಳಿದುಕೊಳ್ಳಬಹುದು ಏನೆಂದರೆ ನಮ್ಮೆಲ್ಲಾ ಹಲವಾರು ದೈಹಿಕ ತೊಂದರೆಗಳಿಗೆ ಕಾರಣ ನಮ್ಮ ಆಹಾರ ಪದ್ಧತಿ. ನಮ್ಮ ಆಹಾರ ಪದ್ಧತಿಯನ್ನು ನಾವು ಸರಿಪಡಿಸಿಕೊಂಡರೆ ಅದೆಷ್ಟೋ  ಕಾಯಿಲೆಗಳಿಂದ ಮುಕ್ತರಾಗಬಹುದು. ಇಂದಿನ ದಿನಗಳಲ್ಲಿ ಹಲವಾರು ಜನರು ಮನೆಯ ಆಹಾರವನ್ನೇ ಸೇವಿಸುತ್ತಾರೆ ಮತ್ತು ಉತ್ತಮವಾದ ಆಹಾರ ಪದ್ಧತಿಯನ್ನು ಬಳಸಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಅಂತೂ ಇದು ಹೆಚ್ಚು ಇತ್ತು. ಆದ್ದರಿಂದಲೇ ಆಗಿನ ಜನರ ಆರೋಗ್ಯ ಸರಿಯಾಗಿದ್ದು ದೈಹಿಕವಾಗಿ ಕೂಡ ಗಟ್ಟಿಮುಟ್ಟಾಗಿದ್ದರು. ಆದರೆ ನಿಮ್ಮದು ಯಾರೆಲ್ಲ ತಮ್ಮ ನಾಲಿಗೆಯ ಚಪ್ಪಲಕ್ಕೆ ಬಿದ್ದು ಹೊರಗಿನ ರುಚಿರುಚಿಯಾದ ಆಹಾರಗಳನ್ನು ಇಷ್ಟಪಟ್ಟು ಅವುಗಳನ್ನೇ ಹೆಚ್ಚಾಗಿ ತಿನ್ನುತ್ತಾರೋ ಅಂತಹ ಜನರ ಆರೋಗ್ಯವಂತು ಪೂರ್ತಿಯಾಗಿ ಹದಗೆಡುವುದೇ ಅಲ್ಲದೆ, ಹಲವಾರು ಜನರಿಗೆ ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಾದ ಅಂತಹ ಸಮಸ್ಯೆಗಳು ಉಂಟಾಗಿವೆ. ಕೆಲವೊಂದು ಕಾಯಿಲೆಗಳನ್ನು ಹೊರತುಪಡಿಸಿದರೆ ಹೆಚ್ಚಿನ ಖಾಯಿಲೆಗಳು ಜನರಿಗೆ ಅದರಲ್ಲೂ ಉದರದ ಕಾಯಿಲೆಗಳು ಅವರ ಆಹಾರ ಕ್ರಮದಿಂದಲೇ ಬರುತ್ತವೆ ಎಂದು ನನಗನಿಸುತ್ತದೆ. ವೈದ್ಯರು ಕೂಡ ಪ್ರತಿನಿತ್ಯ ದೇಹದ ಆಹಾರದ ಬಗ್ಗೆ, ಕುಡಿಯುವ ನೀರಿನ ಬಗ್ಗೆ ಮತ್ತು ನಾವು ಉಸಿರಾಡುವ ಗಾಳಿಯ ಬಗ್ಗೆ ಅವುಗಳೆಲ್ಲವೂ ಶುದ್ಧವಾಗಿರಬೇಕು ಎಂದು ಪ್ರತಿನಿತ್ಯ ಹೇಳುತ್ತಿರುತ್ತಾರೆ. ಹಾಗೆ ನಾವು ಆಹಾರವನ್ನು ಸೇವಿಸುವ ಸಮಯ ಕೂಡ ಸರಿಯಾಗಿರಬೇಕು. ನಾಲ್ಕು ಗಂಟೆಗಳಷ್ಟು ಸಮಯ ಒಮ್ಮೆ ಆಹಾರವನ್ನು ಸೇವಿಸಿದ ಮೇಲೆ ಬಿಡಬೇಕು. ಅದರ ಮಧ್ಯ ಮಧ್ಯದಲ್ಲಿ ಮತ್ತೆ ಚಾಕಲೇಟು,  ಕಾಫಿ , ಚಹಾ, ಜ್ಯೂಸು ಇವೆಲ್ಲವೂ ಕೂಡ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲವೆಂದು ನನಗೆ ಅನ್ನಿಸುತ್ತದೆ. 
  ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ, ಊಟ ಬಲ್ಲವನಿಗೆ ರೋಗವಿಲ್ಲ, ದಿನಕ್ಕೆ ಎರಡು ಹೊತ್ತು ಉಂಡವ ಯೋಗಿ, ಮೂರು ಹೊತ್ತು ಉಂಡವ ರೋಗಿ - ಮೊದಲಾದ ಗಾದೆಗಳನ್ನು ಹಿರಿಯರು ಆಹಾರದ ಬಗ್ಗೆ ಹೇಳುತ್ತಾ ಆಹಾರ ಸೇವನೆ ಎಷ್ಟು ಮುಖ್ಯ ಎಂಬುದನ್ನು ದೃಢಪಡಿಸಿಕೊಟ್ಟಿದ್ದಾರೆ. ನಾವು ತಿನ್ನುವ ಆಹಾರ ಹಿತಮಿತವಾಗಿರಬೇಕು ಮತ್ತು ಹೊಟ್ಟೆಯಲ್ಲಿ ಒಂದಿಷ್ಟು ಜಾಗವನ್ನು ಉಳಿಸಿಕೊಂಡು ತಿನ್ನಬೇಕು. ಅದಕ್ಕಾಗಿ ಹಿರಿಯರು ಹಂಚಿ ತಿಂದರೆ ಹಸಿವಿಲ್ಲ ಎಂದಿದ್ದಾರೆ. ಹಿತ ಮಿತವಾಗಿ ಸರಿಯಾದ ಸಮಯಕ್ಕೆ ಸರಿಯಾಗಿ ಊಟ ಮಾಡುವ ಅಭ್ಯಾಸಗಳನ್ನು ಬೆಳೆಸಿಕೊಳ್ಳೋಣ. ಆ ಮೂಲಕ ನಮ್ಮ ಆರೋಗ್ಯವನ್ನು ನಾವೇ ಸರಿಪಡಿಸಿಕೊಳ್ಳಲು ಪ್ರಯತ್ನಿಸೋಣ. ನಮ್ಮ ಅನಾರೋಗ್ಯದಿಂದ ನಮ್ಮನ್ನು ಅವಲಂಬಿಸುವವರಿಗು ತೊಂದರೆಯಾಗುತ್ತದೆ ಎಂಬುದನ್ನು ಮನಗಂಡು ನಮ್ಮ ಆರೋಗ್ಯದ ಸಮಸ್ಯೆಯಿಂದಾಗಿ ನಮ್ಮನ್ನು ಅವಲಂಬಿಸಿದವರಿಗೆ ತೊಂದರೆ ಕೊಡದೆ ಇರೋಣ. ಆರೋಗ್ಯವೇ ಭಾಗ್ಯವಲ್ಲವೇ? ಅದು ಉತ್ತಮವಾಗಿರಲಿ, ಹಾಗೆಯೇ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ. ಉತ್ತಮ ದೇಹದಿಂದ ಉತ್ತಮ ಮನಸ್ಸನ್ನು ಕೂಡ ಕಾಯ್ದುಕೊಳ್ಳೋಣ. ನೀವೇನಂತೀರಿ? 
@ಹನಿಬಿಂದು@
15.06.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -235

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -235
      ಸೋತ ಪಕ್ಷ ಮತ್ತು ಗೆದ್ದ ಪಕ್ಷಗಳ ನಾಯಕರ  ನಡುವೆ ವೈರತ್ವ ಇರುತ್ತದೆ ಎಂದು ನೀವು ನಾವು ಅಂದುಕೊಳ್ಳುವುದು ತಪ್ಪು. ಸೋಲಲಿ, ಗೆಲ್ಲಲಿ ಅದು ನಾಲ್ಕಾರು ದಿನಕ್ಕೆ ಮಾತ್ರ. ಇತರರು ದ್ವೇಷ ಸಾಧಿಸುತ್ತಾ ಇರಬಹುದು. ಆದರೆ ಪ್ರತಿ ಪಕ್ಷಗಳ ನಾಯಕರು ಅವರು ಒಂದೇ. ನಿತ್ಯ ಗೆಳೆಯರೇ. ಆಟದಲ್ಲಿ ನೋಡಿ. ಒಂದು ತಂಡ ಮತ್ತೊಂದು ತಂಡದ ಜೊತೆ ಆಟ ಆಡುತ್ತಾರೆ. ಅವರೆಲ್ಲ ಗೆಳೆಯರೇ. ಆದರೆ ಆಡುವಾಗ ವೈರಿಗಳ ಹಾಗೆ ತಮ್ಮ ತಂಡ ಗೆಲ್ಲಲು ಹೋರಾಡುತ್ತಾರೆ. ಮತ್ತೆ ಗೆದ್ದ ತಂಡ ಬೀಗುತ್ತದೆ, ಸೋತ ತಂಡ ಬಾಗುತ್ತದೆ. ಮರುದಿನ ಅವರು ಮತ್ತೆ ಒಂದೇ. ಮತ್ತೆ ಒಟ್ಟಾಗಿ ಆಟ ಪ್ರಾರಂಭ ಆಗುತ್ತದೆ. ಇದೇ ಆಟದ ಗಮ್ಮತ್ತು. ನಮ್ಮ ನಾಯಕರಿಗೆ ಮಾತಾದಾನವೂ ಒಂದು ಆಟವೇ. ಅಲ್ಲೂ ಸೋಲು ಗೆಲುವು ನಿಶ್ಚಿತ. ಇಂದು ಗೆದ್ದವ ನಾಳೆ ಸೋಲುವ. ಅದಕ್ಕಾಗಿ ಏನೇನೋ ತಂತ್ರಗಳು, ಕಸರತ್ತುಗಳು ನಡೆಯುತ್ತಲೆ ಇರುತ್ತವೆ. ಇಲ್ಲಿ ಗೆದ್ದವರಿಗೆ ಸೀಟಿನ ಆಸೆ, ರುಚಿ ಇದೆಯಲ್ಲ, ನಾಯಕನ ಪಟ್ಟ, ಆಳುವ ಹೊಣೆಗಾರಿಕೆ, ಜೊತೆಗೆ ತನ್ನದೇ ದರ್ಬಾರು.. ಒಟ್ಟಿನಲ್ಲಿ ಬದುಕಿನ ಆಟದಲ್ಲಿ ಇದೊಂದು ದೊಡ್ಡಾಟ. ಆದರೆ ಸಾಮಾನ್ಯ ಜನರು ಗೆದ್ದ ಎತ್ತಿನ ಬಾಲ ಹಿಡಿದಂತೆ ಸಾಗುತ್ತಿರುತ್ತಾರೆ. ಕೆಲವರು ಅಮಾಯಕರಾದರೆ ಇನ್ನು ಕೆಲವರು ಗಾಳಿ ಬಂದ ಕಡೆ ಛತ್ರಿ ಹಿಡಿಯುವವರು. ನಾಯಕರ ಯಶಸ್ಸಿಗೆ ಸಹಕಾರ ನೀಡಲು ಹೋಗಿ ತಮ್ಮ ಬದುಕಿನ ಬಗ್ಗೆ ಯೋಚನೆ ಮಾಡದೆ ಇರುವವರು. ಊರಿಗೆ ಉಪಕಾರಿ, ಮನೆಗೆ ಮಾರಿ ಅಂತಾರಲ್ಲ ಹಾಗೆ. 
ಇನ್ನು ಕೆಲವರು ಬುದ್ಧಿವಂತರು, ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ ಅಂತ ದುಡ್ಡು ಮಾಡಿ ಬದುಕನ್ನು ಎಂಜಾಯ್ ಮಾಡುವವರು, ಕೆಲವರಿಗೆ ರಾಜಕೀಯ ಪಕ್ಷಗಳ ನಾಯಕರ ಹಿಂದೆ ಹಿಂದೆ ಹೋಗುವುದೇ ಗೀಳು, ಹೆಸರಿಗಾಗಿ. ಇನ್ನು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು, ಮತ್ತೆ ಕೆಲವರು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಇಂದು ಇವನು, ನಾಳೆ ನಾನು, ಇವನ ಬಳಿ ರಾಜಕೀಯದ ತಂತ್ರಗಳನ್ನು ನೋಡಿ, ಕೇಳಿ,ಅರಿತು ಕಲಿತು ಪಕ್ವಗೊಳ್ಳುತ್ತೇನೆ ಎಂಬ ರಣತಂತ್ರ ಅವರದ್ದು. ಮತ್ತೆ ಕೆಲವರು ತಮ್ಮ ಕುಟುಂಬ ಸಾಕಲು ರಾಜಕೀಯ ನಾಯಕರನ್ನೇ ಅವಲಂಬಿಸಿ ಅವರಿಂದ ಸಿಗುವ ಹಣಕ್ಕೆ ಕಾಯುತ್ತಾ, ಬೇರೆ ಕೆಲಸ ಇಲ್ಲದೆ ಅದರಲ್ಲೇ ಬದುಕುವವರು, ಸಂಸಾರ ನಿಭಾಯಿಸುವವರು. 
   ಮತ್ತೆ ಕೆಲವರು ಕಾರ್ಯಕರ್ತರು. ನಾಯಕ ಯಾರೇ ಬಂದರೂ ಯಮ ಪಕ್ಷ ಬಿಡದವರು. ಪಕ್ಷಕ್ಕಾಗಿಯೇ ಬದುಕಿ ಬಾಳುವವರು. ಇವರನ್ನು ದೂರ ತಳ್ಳಲು ಆಗದು. ಪಕ್ಷಕ್ಕೆ ತಮ್ಮ ಬದುಕನ್ನು ಮುಡಿಪಾಗಿ ಇಟ್ಟ ಇವರು ನಾಯಕರಿಗಿಂತಲೂ ಹಿರಿಯರು, ಅನುಭವಸ್ಥರು. ಇವರನ್ನು ಪಕ್ಷದಿಂದ ಹೊರ ತರಲು ಸಾಧ್ಯವೇ ಇಲ್ಲ. ಇಂತಹ ಹಲವಾರು ಜನರ ಗುಂಪೇ ಇದೆ. ಒಂದು ಪಕ್ಷಕ್ಕೆ ಮಾತ್ರ ಅಲ್ಲ, ಎಲ್ಲಾ ಪಕ್ಷಗಳಿಗೂ. ಇವರು ಇಲ್ಲದೆ ಹೋದರೆ ಪಕ್ಷ ಕಟ್ಟಲು ಸಾಧ್ಯವೇ ಇಲ್ಲ. ಪಕ್ಷ ಕಟ್ಟುವಲ್ಲಿ, ಒಂದು ಗೂಡಿಸುವಲ್ಲಿ, ಯಾವುದೇ ಪಕ್ಷವನ್ನು ಬಲಗೊಳಿಸುವಲ್ಲಿ, ನಾಯಕನಿಗೆ ಮೋಸ ಮಾಡದೆ ಅವನೊಡನೆ, ಅವನ ಬೆಂಗಾವಲಾಗಿ ಇದ್ದುಕೊಂಡು ಅವನಿಗೆ ಸಹಕರಿಸುವಲ್ಲಿ, ಅವನ ಗೆಲುವಲ್ಲಿ ಖುಷಿ ಕಾಣುವಲ್ಲಿ ಇವರು ಮೊದಲಿಗರು. ಯಾವುದೇ ನಾಯಕ ಗೆದ್ದರೆ ಆ ಗೆಲುವನ್ನು ಆಚರಿಸುವವರು, ಸಂಭ್ರಮಿಸುವವರು ಇವರ ಗುಂಪೇ. ಹಾಡಿ, ಕುಣಿದು, ನಲಿದು ತಮ್ಮ ಪ್ರಯತ್ನ ಸಫಲತೆ ಪಡೆಯಿತು ಎಂಬ ಸಂತಸದಲ್ಲಿ ತಾವು ಬೀಗುವ ಕಾರ್ಯಕರ್ತರು ಪ್ರತಿ ನಾಯಕನ ಬೆನ್ನೆಲುಬು ಮತ್ತು ಬೆಂಗಾವಲು. ಗೆಲುವಿಗೆ ಹಲವಾರು  ಕಾರ್ಯ ತಂತ್ರಗಳನ್ನು ರೂಪಿಸಿ ಅದನ್ನು ಜಾರಿಗೆ ತರುವ ಜನರೂ ಕಾರ್ಯಕರ್ತರೇ. ಈ ಕಾರ್ಯಕರ್ತರು ಪ್ರತಿ ಪಕ್ಷಕ್ಕೆ ದೇವರಿಗೆ ಭಕ್ತರು ಇದ್ದ ಹಾಗೆ. ಇವರು ಎಂದಿಗೂ ಯಾರಿಗೂ ಮೋಸ ಮಾಡುವವರಲ್ಲ. ಇವರು ಒಟ್ಟಾಗಿ ಸೇರಿ ಮೋಸ ಮಾಡಿದರೆ ಆಗ ನಾಯಕನಿಗೆ ಉಳಿಗಾಲವೂ ಇಲ್ಲ ಅಲ್ಲವೇ?
   ನಾಯಕನಾಗುವುದು ಹೇಗೆ ಎಂಬ ಹಲವಾರು ಪುಸ್ತಕಗಳು ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ಇವೆ. ಅಲ್ಲಿ ನಾಯಕನಿಗೆ ಬೇಕಾದ ಗುಣಗಳ ಬಗ್ಗೆ ತಿಳಿಸಲಾಗಿದೆ. ನಮ್ಮ ನಾಯಕರಿಗೆ ಇಂತಹ ಗುಣಗಳು ಇವೆಯೇ ಎಂದು ನಾವು ಅವಲೋಕಿಸಿ ಬೇಕಾಗಿದೆ. ಸಾಮಾಜಿಕ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ, ನಿಜವಾಗಿಯೂ ಸಮಾಜದ ಬಗ್ಗೆ ಕಾಳಜಿ ಇರುವವ, ಸಮಾಜದ ಉದ್ಧಾರಕ್ಕಾಗಿ ದುಡಿಯುವ, ಸಮಾಜದ ಕಟ್ಟ ಕಡೆಯ ಮನುಜರನ್ನು ಕೂಡ ಬಲ್ಲವ, ಎಲ್ಲರ ಕಷ್ಟ ತಿಳಿದವ, ಬಡವರ ಉದ್ಧಾರ ಮಾಡುವ ಮನಸ್ಸಿದ್ದವ, ತಾನು ಅಧಿಕಾರದಲ್ಲಿ ಇಲ್ಲದ ಸಮಯದಲ್ಲೂ ಬಡವರಿಗೆ ಏನಾದರೂ ಸಿಗಬೇಕು, ಅವರು ತಮ್ಮ ಕಾಲ ಮೇಲೆ ತಾವು ನಿಲ್ಲುವವರು ಆಗಬೇಕು, ದುರ್ಬಲ ಜನರಿಗೆ, ವಯಸ್ಸಿನಲ್ಲಿ ಹಿರಿಯರಾದ ಕೆಳ ಸ್ಥಿತಿಯಲ್ಲಿ ಇರುವ ಜನರಿಗೆ ಇತರ ಸಮಯದಲ್ಲೂ ಸಹಾಯ ಸಿಕ್ಕಿ ಅವರ ಮುಂದಿನ ಬದುಕು ಉತ್ತಮವಾಗಿ ನಡೆಯಲು ಭದ್ರ ಬುನಾದಿ ಹಾಕು ಉತ್ತಮ ನಾಯಕನಾಗಬಲ್ಲ. 
   ರಾಜ್ಯ, ರಾಷ್ಟ್ರದ ನಾಯಕ ಎಂದಾದರೆ ಎಲ್ಲರನ್ನೂ ಒಗ್ಗೂಡಿಸಿ, ಎಲ್ಲರ ಮನ ಅರಿತು, ಯಾರಿಗೂ ಅವಹೇಳನ ಮಾಡದೆ, ಯುವಕ, ಯುವತಿಯರಿಗೆ ಅವರ ಓದಿಗೆ ತಕ್ಕನಾದ ಉದ್ಯೋಗ ಕೊಟ್ಟು, ಅಥವಾ ಅವರು ಇರುವ ಜಾಗಗಳಲ್ಲಿಯೇ ತನ್ನ ಸ್ವಂತ ವ್ಯವಹಾರವನ್ನಾದರೂ ಪ್ರಾರಂಭಿಸಿ, ಅದರಲ್ಲಿ ಅವರಿಗೆ ದುಡಿಯಲು ಅವಕಾಶ ಕೊಟ್ಟು,  ಅವರ ಬದುಕಿಗೆ ಉರುಗೋಲಾಗಿ ನಿಲ್ಲಬೇಕು. ಜೀವನ ಪರ್ಯಂತ ಅವರ ದುಡಿಮೆ ಅಲ್ಲಿ ಆಗಬೇಕು. ಹೀಗೆ ಕೆಲಸ ಕೊಟ್ಟ ಬಾಸ್ ಅನ್ನು ಯಾರೂ ಮರೆಯಲಾರರು. ಕೈಲಾಗದ, ಗಂಡ ಸತ್ತು, ಬಿಟ್ಟು ಹೋದ ವಿಧವೆಯರಿಗೆ, ಒಬ್ಬನೇ ಬದುಕುತ್ತಿರುವ ಹಿರಿಯ ಜೀವಿಗಳಿಗೆ, ತಂದೆ ತಾಯಿ ಇಲ್ಲದ ಓದುತ್ತಿರುವ ಅನಾಥ ಮಕ್ಕಳಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ಪ್ರತಿ ತಿಂಗಳು ಹಣ ಸಿಗುವ ಹಾಗೆ ಆಗಬೇಕು. ದಿಕ್ಕಿಲ್ಲದ ಜನರಿಗೆ ದೇಶ,ರಾಜ್ಯಗಳ ಸರಕಾರಗಳೇ ದಿಕ್ಕಾಗಬೇಕು. ಇದಕ್ಕೆ ನಾಯಕರ ಸಹಕಾರ ಬೇಕು. ಇಂತಹ ಕಾರ್ಯ ಮಾಡಿದರೆ ಜನರೇ ಅವರಿಗೆ ನಾಯಕ ಪಟ್ಟ ಕಟ್ಟಿ ಬಿಡುತ್ತಾರೆ. 
   ನಾಯಕ ಎಲ್ಲಾ ಸಮಯದಲ್ಲೂ ಎಲ್ಲರನ್ನೂ ಓಲೈಸಿ ತನ್ನತ್ತ ಸೆಳೆಯಲು ಸಾಧ್ಯ ಇಲ್ಲ, ಕಾರಣ ಮನಸ್ಸುಗಳು, ಆಲೋಚನೆಗಳು, ಆಸೆಗಳು, ಗುರಿಗಳು ಬೇರೆ ಬೇರೆ. ಎಲ್ಲಾರೂ ನಮ್ಮ ಗೆಳೆಯರೂ ಆಗಲು ಸಾಧ್ಯ ಇಲ್ಲ ಅಲ್ಲವೇ? ಒಂದೇ ಮನಸ್ಥಿತಿಯ , ಒಂದೇ ರೀತಿಯಲ್ಲಿ ಆಲೋಚನೆ ಮಾಡುವವರು ಗೆಳೆತನ ಮುಂದುವರೆಸುತ್ತಾರೆ. ಹಾಗೆಯೇ ನಾಯಕನ ಸಂಗಡಿಗರೂ ಕೂಡ. ಅಷ್ಟೊಂದು ದೇಶ ಭಕ್ತಿ ಉಕ್ಕಿ ಹರಿದು ಭಾರತ ಸ್ವಾತಂತ್ರ್ಯ ಹೋರಾಟ ಆಗುವ ಸಮಯದಲ್ಲೂ ಕೂಡಾ ಮಂದಗಾಮಿಗಳು ಮತ್ತು ಉಗ್ರಗಾಮಿಗಳು ಎಂಬ ಎರಡು ಗುಂಪಿನಲ್ಲಿ ಭಾರತೀಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಅಲ್ಲವೇ? ಅವೆರಡೂ ಗುಂಪಿನ ನಾಯಕರು ಬೇರೆಯೇ. ಆದರೆ ಗುರಿ ಒಂದೇ. ಹೀಗೆ ಮನಸ್ಸುಗಳ ಆಲೋಚನೆ ಬದಲಾಗುತ್ತದೆ. ಆಗ ಕಾರ್ಯ ಪ್ರವೃತ್ತಿ ಕೂಡಾ ಭಿನ್ನವಾಗಿ ಗೋಚರಿಸುತ್ತದೆ. ಆದರೆ ಟಾರ್ಗೆಟ್ ಒಂದೇ. ಇದು ಕೂಡ ನಾಯಕನ ದರ್ಬಾರ್. 
   ಇಂದಿನ ಹೆಚ್ಚಿನ ನಾಯಕರಿಗೆ ನಾಯಕತ್ವದ ಗುಣಗಳ ಅವಶ್ಯಕತೆ ಇದೆ. ಹಣವಿದ್ದ ಮಾತ್ರಕ್ಕೆ ನಾಯಕತ್ವ ಬರಲಾರದು. ನಾಯಕತ್ವದ ಗುಣ ಇದ್ದರೆ ಪೆನ್ ಡ್ರೈವ್ ಕೇಸುಗಳಂತಹ ಘಟನೆ ನಡೆಯಲಾರದು. ಅತ್ಯಾಚಾರ, ಕೊಲೆ, ದಂಗೆ ಇವುಗಳನ್ನು ಒಂದೇ ಬಾರಿಗೆ ಮುಂದೆ ಎಲ್ಲರೂ ಆ ಕೆಲಸ ಮಾಡಲು ಹೆದರುವ ಹಾಗೆ ನಿಯಂತ್ರಣ ಮಾಡಬಹುದು. ಕಾನೂನು ಕಠಿಣವಾಗಿ ಅನುಪಾಲನೆ ಆಗಿ ಶಿಸ್ತುಬದ್ಧವಾಗಿ ನಡೆದರೆ ಜನ ಯಾಕೆ ಹೆದರುವುದಿಲ್ಲ? ಅದನ್ನು ಸರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ನಮ್ಮ ನಾಯಕರು , ಸರಕಾರ ಹಿಂದೆ ಬಿದ್ದ ಕಾರಣ ಆದ ತಪ್ಪುಗಳೇ ಸಮಾಜದಲ್ಲಿ ಮತ್ತೆ ಮತ್ತೆ ಆಗುತ್ತಿವೆ ಅಲ್ಲವೇ? 
  ಎಲ್ಲಾ ಜಾತಿ , ಜನಾಂಗ, ಮತ, ಧರ್ಮ ಅವರವರೇ ಮಾಡಿಕೊಂಡದ್ದು, ಅದು ಅವರವರ ಆಚರಣೆ, ನಂಬಿಕೆಗೆ ಬಿಟ್ಟಿರುವುದು. ಅದನ್ನು ಪಾಲನೆ ಮಾಡುವವರು ಮಾಡಿಕೊಳ್ಳಲಿ, ಇತರರನ್ನು ಅವರಿಗೆ ಇಷ್ಟ ಬಂದ ಹಾಗೆ ಬದುಕಲು ಎಲ್ಲರೂ ಅವಕಾಶ ಕೊಡಬೇಕು. ಅವರವರ ಜಾತಿ, ಧರ್ಮ, ಮತಗಳ, ನಂಬಿಕೆಗಳ ಪೂಜೆ, ರೀತಿ, ನೀತಿ ರಿವಾಜು ಅವರವರು ಆಚರಿಸಿಕೊಳ್ಳಲು ಅವಕಾಶ ಇದೆ ಅಲ್ಲವೇ? ಮತ್ತೆ ಉಳಿದವರು ಅಲ್ಲಿ ತಲೆ ತೂರಿಸದೆ ತಮ್ಮ ಬಗ್ಗೆ ತಾವು ಆಲೋಚನೆ ಮಾಡಬೇಕು. ನಾವು ಪರರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಹೆಚ್ಚಾಗಿದೆ. ಅದರ ಬದಲು ನನ್ನ ಬಗ್ಗೆ ಯೋಚನೆ ಮಾಡಬೇಕು. ಮತ ಕೇಳುವಾಗ ಬೇರೆ ಪಕ್ಷದವರು ಹಾಗೆ ಮಾಡಿದರು, ಹೀಗೆ ಮಾಡಿದರು ಎಂದು ಅವರನ್ನು ದೂರುವ ಬದಲು, ನಮ್ಮ ಪಕ್ಷದಲ್ಲಿ ನಾವು ಏನೇನು ಜನತೆಗೆ ಒಳ್ಳೆಯದನ್ನು, ಸಹಾಯವನ್ನು ಮಾಡಿದ್ದೇವೆ, ನಮ್ಮ ಯಾವ ಘನ ಕಾರ್ಯಕ್ಕಾಗಿ ನಾವು ನಿಮ್ಮಲ್ಲಿ ಮತ ಕೇಳಲು ಬಂದಿದ್ದೇವೆ ಎಂಬುದನ್ನು ಒತ್ತಿ, ಎದೆ ತಟ್ಟಿ ಹೇಳಿಕೊಳ್ಳುವ ಧೈರ್ಯ ಇರಬೇಕು. ನಾನು ನಾಯಕನಾಗಿ  ಸಮಾಜಕ್ಕೆ ನನ್ನ ಆಡಳಿತದ ಸಮಯದಲ್ಲಿ ಇಷ್ಟು ಒಳ್ಳೆಯ ಕೆಲಸ ಮಾಡಿರುವೆ, ಇನ್ನು ಮುಂದೆಯೂ ಮಾಡುವೆ ಅದಕ್ಕಾಗಿ ನನ್ನನ್ನು ಬೆಂಬಲಿಸಿ ಎಂದು ಕೇಳುವ ಹಾಗೆ ಕೆಲಸ ಮಾಡಿದ್ದರೆ ಯಾವ ಜನರೂ ಕೂಡಾ ಮತ ಹಾಕಲು ಹಿಂದೆ ಮುಂದೆ ನೋಡುವುದಿಲ್ಲ, ಅವರಿಗೆ ಆಗ ಯಾವ ಆಸೆ ಆಮಿಷಗಳೂ ಬೇಡ. ಪ್ರಾಕ್ಟಿಕಲ್ ಕೆಲಸ ಕಣ್ಣ ಮುಂದೆ ಇದ್ದರೆ ಆಯಿತು. 
ತನ್ನ ಕಾರ್ಯವನ್ನು ಸಮರ್ಥಿಸಿಕೊಂಡು, ಕೊಟ್ಟ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಮುಂದಿನ ಮತವನ್ನು  ಕೇಳುವ ನಾಯಕರು ನಮ್ಮ ದೇಶ, ರಾಜ್ಯಕ್ಕೆ ಇನ್ನು ಮುಂದೆಯಾದರೂ ಒದಗಿ ಬರಲಿ, ಬೇರೆ ಪಕ್ಷದವರನ್ನು ದೂರದೆ, ತನ್ನ ಸಾಧನೆಯಲ್ಲೇ ಜನಮನ ಗೆಲ್ಲುವಂತೆ ಆಗಲಿ, ಆಮಿಷಗಳು, ಉಚಿತ ಭರವಸೆಗಳು ಕಡಿಮೆಯಾಗಿ ಅರ್ಹರಿಗೆ ಮಾತ್ರ ಉಚಿತಗಳು ಸಿಗುವಂತೆ ಆಗಲಿ, ದುಡಿಯಲು ಶಕ್ತಿ ಇರುವ ಮನಗಳಿಗೆ ಕೆಲಸ ಸಿಕ್ಕಿ ಜೀವನ ಪೂರ್ತಿ ದುಡಿದು ಗಳಿಸುವ ಅವಕಾಶ ಸಿಗಲಿ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
25.05.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -234

    ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -234

       ನಮ್ಮ  ಬದುಕಲ್ಲಿ ಧನಾತ್ಮಕ ಆಲೋಚನೆಗಳಿರಲಿ ಅಲ್ಲವೇ? ಅವು ಇತರರಿಗೆ ಖುಷಿ, ಸಂತಸ, ನೆಮ್ಮದಿ ತರದೇ ಇದ್ದರೂ ಪರವಾಗಿಲ್ಲ, ಇತರರಿಗೆ ದುಃಖ, ನೋವು, ಕಷ್ಟ, ನಷ್ಟ ತಾರದೆ ಇರಲಿ. ಮೂರು ದಿನದ ಬಾಳು ಖುಷಿಯಿಂದ ಸಾಗಲಿ.  ಆಲೋಚನೆ ಇಲ್ಲದ ಮನುಜ ಇಲ್ಲ. ಇದ್ದರೆ ಅವನನ್ನು ಸರಿಯಾದ ಮಾನವ ಎಂದು ಜನ ಒಪ್ಪಿಕೊಳ್ಳುವುದು ಇಲ್ಲ. ಆಲೋಚನೆಗಳು ಬೇಕು. ಆದರೆ ಮನದಲ್ಲಿ ದುರಾಲೋಚನೆ ಇರಬಾರದು ಅಲ್ಲವೇ? ದೂರಾಲೋಚನೆ ಬದುಕಿಗೆ ಬೇಕು, ಅದೂ ಕೂಡ ಉತ್ತಮ, ಒಳ್ಳೆಯದನ್ನು ಮಾಡುವ ಹಾಗಿರಬೇಕು. ಕೆಟ್ಟದನ್ನು ಆಲೋಚಿಸುವವನಿಗೆ ಒಳ್ಳೆಯದಾಗಲಿ ಎಂದು ಯಾರು ಹರಸುತ್ತಾರೆ? ಕರ್ಮ ಎಂದಿಗೂ ನಮ್ಮನ್ನು ಸದಾ ಹಿಂಬಾಲಿಸುತ್ತದೆ. ದೂರಾಲೋಚನೆ ಸದಾ ದುಷ್ಕರ್ಮವೇ ಆಗಿರುತ್ತದೆ ಅಲ್ಲದೆ ಸತ್ಕರ್ಮ ಆಗಲು ಸಾಧ್ಯವೇ? ನಾವು ಸದಾ ಧನಾತ್ಮಕವಾಗಿ ಯೋಚಿಸಬೇಕೆ ಹೊರತು ಋಣಾತ್ಮಕವಾಗಿ ಅಲ್ಲ. 
        ನಾವು ಎಂದಿಗೂ ಕೆಟ್ಟದ್ದನ್ನು ಆಲೋಚನೆ ಮಾಡುವುದಿಲ್ಲ ಎಂಬ ನಂಬಿಕೆ ನಮಗೆ, ನಮ್ಮೊಳಗೆ ನಿರಂತರ ಇರಬೇಕು. ಕೆಟ್ಟದನ್ನು ಎಂದಿಗೂ ಯಾರೂ ಆಲೋಚನೆ ಮಾಡಬಾರದು,  ಇದು ಯಾಕೆಂದು ತಿಳಿದಿಲ್ಲ ಎಂದು ನಾವು ಹೇಳುವ ಹಾಗಿಲ್ಲ .  ನಮ್ಮ ಜವಾಬ್ದಾರಿಯನ್ನು ನಾವು ನಿಭಾಯಿಸಲೆ ಬೇಕು ಎಂಬ ನಿರ್ಧಾರ ನಮ್ಮದಾಗಿರಬೇಕು.ದುರಾಲೋಚನೆ ಹಾಗೂ ಋಣಾತ್ಮಕ ಆಲೋಚನೆ ಯಾರಿಗೂ ಎಂದಿಗೂ ಖುಷಿ, ನಂಬಿಕೆ, ಪ್ರೀತಿ, ಸಂತಸ ತರದು, ಬದಲಾಗಿ ಸಂಬಂಧ ಒಡೆಯುವುದು, ನೋವು ತರುವುದು, ದುಃಖ ಕೊಡುವುದು ಅಲ್ಲವೇ?   
        ನಮ್ಮ ಜೀವನದಲ್ಲಿ ಬಂದ ಜನರನ್ನು ದೇವರೇ ನಮಗಾಗಿ ಕಳುಹಿಸಿದ್ದಾರೆ ಎಂದು ತಿಳಿದವರು ನಾವಾಗಬೇಕು. ಅವರಿಗೆ  ಬೇಕಾದ ಸುಖ ಸಂತೋಷವನ್ನು ಕೊಡುವುಲ್ಲಿ ನಮ್ಮ ಪಾತ್ರ ಮತ್ತು ಅದನ್ನು ಯಾವ ಸಮಯದಲ್ಲಿ ಹೇಗೆ ಕೊಡಬೇಕು ಎಂದು ಸದಾ ಯೋಚನೆ ಮಾಡುವ ನಾವು "ಸಮಯ ಸಾಧಕರು" ಎಂಬ ಪದದ ಬಗ್ಗೆ ಯಾವತ್ತೂ ಯೋಚನೆಯನ್ನೇ ಮಾಡಬಾರದು! ನಮ್ಮ ಬುದ್ಧಿ ಒಳ್ಳೆಯದು ಎಂದು ನಮಗೆ ಅನ್ನಿಸಬೇಕು. ನಮ್ಮಿಂದ ದೂರ ಹೋದವರ ಬಗ್ಗೆ ಯೋಚನೆ ಮಾಡುತ್ತಾ ಕೊರಗುವುದು ತರವಲ್ಲ. ದೇವರು ನಮ್ಮ ಜೀವನದಲ್ಲಿ ಅವರಿಗಿಂತ ಒಳ್ಳೆಯ ಹೊಸ ಜನರನ್ನು ಪರಿಚಯಿಸ ಬಹುದು, ಯಾರಿಗೆ ಗೊತ್ತು ಅಲ್ಲವೇ? ಒಣಗಿದ ಎಲೆಗಳು ಉದುರುತ್ತಿವೆ ಎಂದು ಮರ ಬೇಸರಿಸಿದರೆ, ತನಗೆ ಆಯಾ ಎಲೆಗಳೇ ಬೇಕು ಎಂದು ಹಠ ಹಿಡಿದರೆ ಹೊಸ ಹಸಿರೆಲೆ ಬರಲು ಜಾಗ ಎಲ್ಲಿದೆ? ಬದುಕೆಂದರೆ ಹಾಗೆಯೇ. ಪ್ರತಿನಿತ್ಯ ಹಸಿರೆಳೆಗಳ ಆಗಮನ. ಒಳ್ಳೆಯ ಬದುಕಿಗೆಅಷ್ಟು ಆಲೋಚನೆ ಸಾಕಲ್ಲವೇ?
         ತಮ್ಮ ಮನೆಯ ಜನ ಒಂದು ವಾರ ಮುಂಚೆ ಎಲ್ಲಾದರೂ ಹೋದರೂ ಅದು ಜವಾಬ್ದಾರಿ, ಅದನ್ನು ನಾವು ಸರಿಯಾಗಿ ನಿಭಾಯಿಸಲೇ ಬೇಕು. ಗಟ್ಟಿ ಮುಟ್ಟಾದ ಬಾಗಿಲು, ಬೀಗ, ಗೇಟು, ನೀರು, ಹಾಲು, ವಿದ್ಯುತ್ ,ಫ್ರಿಜ್, ಮಕ್ಕಳ ಹಿರಿಯರ ಆರೋಗ್ಯ, ಊಟ ಹೇಗೆ ಎಲ್ಲದರ ಬಗ್ಗೆಯೂ ಯೋಚಿಸಬೇಕು. ಹಾಗೆಯೇ ಮನೆಯಲ್ಲಿ ಇರುವವರ ಮತ್ತು ಅವರ ಅಗತ್ಯತೆಗಳ ಬಗ್ಗೆ ಕೂಡಾ . ಪರರ ಮಕ್ಕಳ ತಾಯಂದಿರು ಅವರ ಮಕ್ಕಳಿಗೆ ಸಮಯ ಕೊಡುವುದು ತಪ್ಪು ಎಂದು ನಾವು ಎಂದಿಗೂ ಯೋಚಿಸ ಬಾರದು.  ಆ ತಾಯಂದಿರಿಗೂ,  ಮಕ್ಕಳಿಗೂ ಪೊಸೆಸಿವ್ ನೆಸ್ ಅಂತ ಇರುವುದಿಲ್ವ! ನಮ್ಮ ಮನ್, ನಮ್ಮ ಕುಟುಂಬ, ನಮ್ಮ ಸಂಪತ್ತು ಹಾಗೆಯೇ ಇತರರು ಕೂಡ. ಹೆತ್ತವರಿಗೆ ಹೆಗ್ಗಣ ಮುದ್ದು. ಅವರವರ ಮಕ್ಕಳು ಹಾಗೆಯೇ ಇರಲಿ, ಪೋಷಕರಿಗೆ ಅವರು ಮುದ್ದಿನ ಮಕ್ಕಳೇ. ಎಲ್ಲರೂ ಅವರ ಮಕ್ಕಳನ್ನು ಪ್ರೀತಿಯಿಂದಲೇ ಬೆಳೆಸುತ್ತಾರೆ. ಎಲ್ಲಾ ಮಕ್ಕಳಿಗೂ ಪ್ರೀತಿ ಅವಶ್ಯಕ ಕೂಡ. ಪ್ರೀತಿ ದೊರೆಯದ ಮಕ್ಕಳು ಮುಂದೆ ಕ್ರಿಮಿನಲ್ ಗಳಾಗಿ ಮಾರ್ಪಡುತ್ತಾರೆ. ಹಾಗಾಗಿ ನಮ್ಮ ಮಕ್ಕಳನ್ನು ಕೂಡ  ಪ್ರೀತಿ ಹಾಗೂ ಶಿಸ್ತಿನಿಂದ ಬೆಳೆಸುವ  ಜವಾಬ್ದಾರಿ ನಮಗಿದೆ. ಅದನ್ನು ನಾವು ಸರಿಯಾಗಿ ಮಾಡಬೇಕು. ಮಕ್ಕಳಿಗೆ ತಿನ್ನಲು ಕೊಟ್ಟರೆ ಸಾಲದು, ಶಿಸ್ತನ್ನು ಸಹ ಕಲಿಸಿ ಕೊಡಬೇಕು. ತಾನು ತಿಂದ ಚಾಕಲೇಟ್ ರ್ಯಾಪರ್, ನೀರು ಕುಡಿದ ಬೇಡದ ಬಾಟಲಿ ಎಲ್ಲಿ ಹಾಕಬೇಕು,  ತನ್ನ ಬಟ್ಟೆ ಹೇಗೆ ಇಟ್ಟುಕೊಳ್ಳ ಬೇಕು, ತನ್ನ ಶಾಲಾ ಸಾಮಾಗ್ರಿಗಳ ಜೋಡಣೆ ಎಲ್ಲಿ ಹೇಗೆ ಅಚ್ಚುಕಟ್ಟಾಗಿ ಇಡಬೇಕು,  ತನ್ನ ವಸ್ತುಗಳನ್ನು ಹೇಗೆ ಜೋಪಾನ ಮಾಡಬೇಕು, ತನ್ನ ತಂಗಿ, ತಮ್ಮ, ಅಕ್ಕ, ತಮ್ಮ ಇವರ ಮೇಲೆ ಪ್ರೀತಿ, ಹಿರಿಯರ ಮೇಲೆ ಗೌರವದಿಂದ ಹೇಗೆ ನಡೆದುಕೊಳ್ಳ  ಬೇಕು ಇವೆಲ್ಲ ಮನೆಯಲ್ಲಿ ಮೊದಲ ಗುರುವಿನಿಂದ ಮತ್ತು ಹಿರಿಯರಿಂದ, ಮನೆಯ ಇತರ ಸದಸ್ಯರಿಂದ ಪಡೆವ ಪಾಠಗಳು. ಇವುಗಳನ್ನು ನೋಡಿ ಕಲಿಯುವುದೇ ಹೆಚ್ಚು. ಅಪ್ಪ, ಅಮ್ಮ, ಹಿರಿಯರು ಕೆಟ್ಟ ಪದಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದರೆ ಶಾಲೆಯಲ್ಲಿ ಇತರ ವಿದ್ಯಾರ್ಥಿ ಸ್ನೇಹಿತರಿಗೆ ಮತ್ತು ಶಿಕ್ಷಕರಿಗೆ ಮಗುವಿನ ಬಾಯಲ್ಲಿ ಆ ಪದಗಳು ಪುನರುಚ್ಚರಿಸಲ್ಪಡುತ್ತವೆ. ಇದು ಮನೆಯಿಂದ ಬಂದ ಪಾಠ ಎಂದು ಶಿಕ್ಷಕರಿಗೆ ತಿಳಿದಾಗ ಆ ಮಗುವಿನ ಮನೆಯ ವಾತಾವರಣ ಹೇಗಿರಬಹುದು ಎಂಬ ಕಲ್ಪನೆ ಬರುತ್ತದೆ. ಆಗ ಕುಟುಂಬದ ಜಡ್ಕ್ಮೆಂಟ್ ಅಥವಾ ಪರಿಸ್ಥಿತಿ ಅರ್ಥ ಆಗುತ್ತದೆ. ಇಂತಹ ಮಗುವಿಗೆ ಶಿಕ್ಷೆ ಇಲ್ಲದ ಶಿಕ್ಷಣ ಅರ್ಥ ಆಗದು ಎಂದು ತಿಳಿಯುತ್ತದೆ. ಆದರೂ ಇಂದಿನ ದಿನಗಳಲ್ಲಿ ಉತ್ತಮ ಭಾಷೆ ಕಲಿಸಲು  ಹೆಣಗಾಡಬೇಕಾಗುತ್ತದೆ. ಇದಕ್ಕೆ ಹೇಳುವುದು ಮನೆಯ ವಾತಾವರಣ ಎಷ್ಟು ಮುಖ್ಯ ಬದುಕಲ್ಲಿ ಎಂದು. 
     ಎಲ್ಲವನ್ನೂ ಋಣಾತ್ಮಕವಾಗಿ ಯೋಚಿಸಿದರೆ ಪರರು ಮಾಡುವುದೆಲ್ಲಾ ತಪ್ಪೇ ಅನ್ನಿಸಿಬಿಡುತ್ತದೆ.  ನಮ್ಮನ್ನು ಪ್ರೀತಿಯಿಂದ ಕರೆದರೂ ಅವರಿಗಾಗಿ , ಅವರ ಕೆಲಸಕ್ಕಾಗಿ ಕರೆದರು ಎನ್ನುವುದು ತಪ್ಪೇ. ಯಾರು ಕೂಡ ಅವರವರ ಕೆಲಸಕ್ಕೆ ಇತರರನ್ನು ತಳ್ಳುವುದಿಲ್ಲ. ಸಿಕ್ಕಿದ ತುಸು ಸಮಯವನ್ನು ತಮ್ಮ ಪ್ರೀತಿ ಪಾತ್ರರಿಗೆ ನೀಡುವುದು ಹೇಗೆ ಎಂದು ಹಗಲಿರುಳು ಯೋಚಿಸುತ್ತಾ ಅದರ ಬಗ್ಗೆಯೇ ಕಾರ್ಯ ಪ್ರವೃತ್ತರಾಗುತ್ತಾರೆ. ಅವರ ಜೊತೆ ಕಾಲ ಕಳೆಯಲು ಇಚ್ಛಿಸುತ್ತಾರೆ. ರಾಕ್ಷಸ ಪ್ರವೃತ್ತಿ ಎಲ್ಲಾ ಜನರಲ್ಲೂ ಇರುವುದಿಲ್ಲ, ಪ್ರಪಂಚದ ಹೆಚ್ಚು ಜನರಲ್ಲಿ ಮಾನವೀಯತೆ ಇದೆ, ಉಳಿದಿದೆ, ಇನ್ನೂ ಇರುತ್ತದೆ ಕೂಡಾ.
 ಹಾಗಾಗಿ ಮತ್ತು ಎಲ್ಲಾ ಕಡೆ  ಪ್ರಪಂಚದಲ್ಲಿ ಎಲ್ಲರೂ ಕೆಟ್ಟವರಲ್ಲ. ಹಾಗಂತ ಕೆಟ್ಟವರು ಇಲ್ಲ ಎಂದಲ್ಲ. ನಮ್ಮ ಯೋಚನೆಗಳು ಚೆನ್ನಾಗಿದ್ದರೆ ಪರರು ನಮಗೆ ಕೆಟ್ಟದನ್ನು ಯೋಚಿಸಿದರೂ ಆ  ನಮಗೆ ಒಳ್ಳೆಯದೆ ಆಗುತ್ತದೆ.  ಕೆಟ್ಟತನಕ್ಕೆ ಒಳ್ಳೆಯತನ ಸರಿ ಆಗದು ಮತ್ತು ಬಾರದು. ಬೇರೆಯವರು ನಮಗೆ ನಮ್ಮ ಬದುಕಲ್ಲಿ ಬೇಕು ಎಂದಿದ್ದರೆ ಮಾತ್ರ ಅವರನ್ನೇ ಕರೆಯುತ್ತಾರೆ, ಅವರ ಜೊತೆಗೆ ಹೊರ ಹೋಗುತ್ತಾರೆ,ಅವರ ಬಳಿಯೇ ಇರಲು ಬಯಸುತ್ತಾರೆಯೇ ಹೊರತು ಬೇಡ ಅನ್ನಿಸಿದರೆ ಅದೇ ಜನ  ನಮ್ಮನ್ನು ತಿರುಗಿ ಕೂಡಾ ನೋಡುವುದಿಲ್ಲ , ನೆನಪಿರಲಿ. ಅದೇ ನಮಗಾಗಿ ಜನ  ಸಮಯವನ್ನು ಕೊಡುತ್ತಿದ್ದರೆ, ಅವರಿಗೆ ನಾವು ವಿಧೇಯರಾಗಿ ಇರೋಣ. ಕಾರಣ ಅವರಿಗೆ ನಮ್ಮ ಮೇಲೆ ಪ್ರೀತಿ ಇದೆ ಎಂದು ಅರ್ಥ. 
     ಆದರೆ ನಾನಿಲ್ಲಿ ಕಾಮವನ್ನು ಬಯಸುವ ಈಗಿನ ಜನರ ಒಂದೇ ದೃಷ್ಟಿಕೋನದ  ಪ್ರೀತಿಯ ಬಗ್ಗೆ ಮಾತನಾಡುತ್ತಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಇಂದು ಮಹಿಳೆಯರು ತಮ್ಮ ಭಾವಚಿತ್ರ ಹಾಕಿದರೆ ಸಾಕು, ಕೆಲ ಕಾಮುಕರ ದೃಷ್ಟಿ ಅವರ ಮೇಲೆ ಬೀಳುತ್ತದೆ. (ಕೆಲವು ಮಹಿಳೆಯರು ಕೂಡಾ ತಮ್ಮ ಅಶ್ಲೀಲ ಚಿತ್ರ ಮಾತ್ರವಲ್ಲ ಹಲವರನ್ನು ಉತ್ತೇಜಿಸುವ ಹಾಗೆ ಅರ್ಧಂಬರ್ಧ ಮೈ ಮಾಟ ಪ್ರದರ್ಶಿಸುತ್ತಾ, ಹಲ್ಲು ಕಿರಿಯುತ್ತಾ, ಬೇಕಂತಲೇ ಇತರರ ಅಟ್ರಾಕ್ಷನ್ ತಮ್ಮತ್ತ ಸೆಳೆಯಲು, ಇತ್ತೀಚೆಗೆ ತನಗೆ ಹೆಚ್ಚು ಲೈಕ್, ಕಮೆಂಟ್ ಬರಲಿ ಎನ್ನುವ ಕೆಟ್ಟ ಚಾಳಿ ಪ್ರಾರಂಭ ಆಗಿದೆ. ತಪ್ಪು ತಪ್ಪು ಉಚ್ಚಾರದಲ್ಲಿ ಮಾತನಾಡುತ್ತಾ, ಚಿಕ್ಕ ಮಕ್ಕಳ ಹಾಗೆ ಕುಣಿಯುತ್ತಾ, ದೇಹದ ಅಂಗಾಂಗ ಪ್ರದರ್ಶನಕ್ಕೆ ಇಟ್ಟ ಹಾಗೆ ಬಟ್ಟೆ ತೊಟ್ಟು ಕುಣಿಯುತ್ತಾ ಎಲ್ಲರೂ ತನ್ನನ್ನೇ ನೋಡಲಿ ಎಂಬ ಆಸೆ. ಅವರ ಪೋಷಕರು ಅದೇನು ಮಾಡುತ್ತಿರುತ್ತಾರೋ ಗೊತ್ತಿಲ್ಲ, ಅವರ ಸಲುಗೆಯೇ ಹಾಗೆ ಇರುತ್ತದೆ, ಇನ್ನು ಕೆಲವರಿಗೆ ಮಕ್ಕಳು ಹಾಗಿದ್ದರೆ ಮಾತ್ರ ನಮ್ಮನ್ನು ಉಳಿದವರು ಸಿರಿವಂತರು ಎಂದು ಗೌರವಿಸುತ್ತಾರೆ ಅಂದುಕೊಳ್ಳುತ್ತಾರೆ. ಒಂದು ಕಾಲದಲ್ಲಿ ಸಿರಿವಂತರು ಮಾತ್ರ ಸಮಾಜದಲ್ಲಿ ಅಂತಹ ಬಟ್ಟೆ ಹಾಕುವ ಧೈರ್ಯ ತೋರಿತ್ತಿದ್ದರು. ಸಿನಿಮಾ ತಾರೆಯರು ಸಿನಿಮಾಕ್ಕಾಗಿ ಮಾತ್ರ ಬಳಸುತ್ತಿದ್ದ ಬಟ್ಟೆಗಳು ಇಂದು ಪ್ರತಿ ಕಾರ್ಯಕ್ರಮದಲ್ಲೂ, ಎಲ್ಲರಲ್ಲೂ ರಾರಾಜಿಸುತ್ತಿವೆ. ಅದಕ್ಕೆ ನಾವು ಮಾಡರ್ನ್ ಫ್ಯಾಶನ್ ಎಂಬ ಹೆಸರು ಕೊಟ್ಟು ಬಿಟ್ಟಿದ್ದೇವೆ. ಅಂಗಾಂಗ ಪ್ರದರ್ಶನ ತಪ್ಪಲ್ಲ, ನೋಡುವವರ ದೃಷ್ಟಿ ಸರಿ ಇರಬೇಕು ಎನ್ನುವ ಹೆಣ್ಣು ಮಕ್ಕಳ ವಾದವೂ ಸೇರಿ ಕೊಂಡಿದೆ. ಒಟ್ಟಿನಲ್ಲಿ ಸಮಾಜ ಬದಲಾಗದಷ್ಟು, ತಾನು ಮಾಡಿದ್ದೇ ಸರಿ ಎನ್ನುವಷ್ಟು ಮುಂದುವರೆದಿದೆ. ಕಾರಣ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ!
         ನಮ್ಮನ್ನು ಯಾರಾದರೂ ಅವರ ಮನೆಗೆ, ಜೊತೆಗೆ ಕರೆಯುತ್ತಾರೆ ಎಂದಾದರೆ ನಮ್ಮ ಅವಶ್ಯಕತೆ , ನಮ್ಮ ಮೇಲೆ  ಅತೀವ ಪ್ರೀತಿ, ನಮ್ಮ ಬಗ್ಗೆ ಕಾಳಜಿ, ನಮ್ಮ ಗಮನ, ನಮ್ಮ ಸಮಯದ ಅವಶ್ಯಕತೆ ಎಲ್ಲವೂ ಅವರಿಗೆ ಇದೆ ಎಂದು ಅರ್ಥ. ಹಾಗೆ ಉತ್ತಮ ಯೋಚನೆಯಲ್ಲಿ ಕರೆದರೆ ನಮ್ಮ ಹಣ ವ್ಯಯಿಸಲು, ನಮ್ಮ ಸಮಯ ಕೊಲ್ಲಲು ಅವರು ನಮ್ಮನ್ನು ಕರೆಯುವುದಲ್ಲ, ಬದಲಾಗಿ ನಮ್ಮ ಮೇಲಿರುವ ಸ್ನೇಹ, ಪ್ರೀತಿಯನ್ನು ಹಂಚಲು, ನಮ್ಮ ಜೊತೆ ಕಳೆಯಲು ಆಸೆ ಪಟ್ಟು ಕರೆದಿರುತ್ತಾರೆ ಅಷ್ಟೇ. ಇದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇದು ಎಲ್ಲರಿಗೂ ಬದುಕಲ್ಲಿ ಅಗತ್ಯ ಮತ್ತು ಅನಿವಾರ್ಯ ಕೂಡಾ. ನಮ್ಮವರು ಎಂದು ಹೇಳಿಕೊಳ್ಳುವ ಜನ ಬದುಕಲ್ಲಿ ನಮಗೆ ಬೇಕು ಅಲ್ಲವೇ? ಕಷ್ಟ ಸುಖ, ನೋವು ನಲಿವು ನಾವು ಅವರಲ್ಲೇ ತಾನೇ ಹಂಚಿಕೊಂಡು ಹಗುರಾಗುವುದು? ಇನ್ನು ಇನ್ಸ್ತಾ, ಫೇಸ್ಬುಕ್ ಗಳಲ್ಲಿ ಲೈಕ್ ಕೊಟ್ಟ ದೂರದಲ್ಲಿ ಎಲ್ಲೋ ಇರುವ ಎಂದೂ ಮುಖ ನೋಡದ  ಗೆಳೆಯರು ಬಂದು ನಮ್ಮನ್ನು ನೋಡಿಕೊಳ್ಳುವರೆ? 
      ಬದುಕು ತುಂಬಾ ಚಿಕ್ಕದು. ಅದನ್ನು ಋಣಾತ್ಮಕವಾಗಿ ಆಲೋಚಿಸಿ  ಕಳೆದುಕೊಳ್ಳಬಾರದು. ಬದುಕಲ್ಲಿ "ಈಗ " ಎನ್ನುವ ಅಮೂಲ್ಯ ರತ್ನವನ್ನು ಖುಷಿಯಿಂದ ಕಳೆಯಬೇಕು. ಇನ್ನು ನಾಳೆ ಹೇಗೋ ಏನೋ ಯಾರಿಗೂ ತಿಳಿಯದು. ನಮ್ಮ ಮೇಲೆ, ನಮ್ಮ ಆಲೋಚನೆಗಳ ಮೇಲೆ, ನಮ್ಮ ಕಾರ್ಯದ ಮೇಲೆ ನಮಗೆ ನಂಬಿಕೆ ಇರಬೇಕು. ನಂಬಿಕೆ ಇರಲಿ ಬಾಳಿನಲ್ಲಿ ಎಲ್ಲರಿಗೂ. ನಂಬಿಕೆ ಇಲ್ಲದ  ಬದುಕಲ್ಲಿ ಹೂವು ಅರಳದು. ನಂಬಿಕೆ, ಸ್ನೇಹ, ದೂರಾಲೋಚನೆ, ಆಸೆ, ಪ್ರೀತಿ ಇಲ್ಲದೆ ಹೋದರೆ ನಮಗೂ ನೋವು, ನಮ್ಮನ್ನು ಅವಲಂಬಿಸಿದವರಿಗೂ ಕೂಡಾ. ನಮ್ಮ ಆಲೋಚನೆ, ಯೋಚನೆ, ಭಾವನೆಗಳು, ಕೆಲಸ , ನಮ್ಮ ಆಲೋಚನೆಗಳು ಪರರಿಗೆ ನೋವು ತರುವಂತೆ ಇರಬಾರದು. ನಾವು ಯಾರ ಜೊತೆಗೆ  ಇದ್ದೇವೋ ಅವರಿಗೆ ನಮ್ಮಿಂದ ತೊಂದರೆ, ನೋವು, ದುಃಖ, ಬೇಸರ ಆಗದ ಹಾಗೆ ನಡೆದುಕೊಳ್ಳುವುದು ನಮ್ಮ ಧರ್ಮ. ಅದನ್ನು ನಾವು ಪಾಲಿಸಲೇ ಬೇಕು ಅಲ್ಲವೇ? ನೀವೇನಂತೀರಿ? 
@ಹನಿಬಿಂದು@
14.05.2024

ಶನಿವಾರ, ಜೂನ್ 8, 2024

ಸಂಗತಿ

ಸಂಗತಿ

ಅದು ಯಾವ ದೊಡ್ಡ ಸಂಗತಿ
ನೀ ಆದದ್ದು ನನ್ನ ಸಂಗಾತಿ
ನಾ ಅಂದೇ ಸಿಕ್ಕಿ ಬಿದ್ದೆ ಗೆಳತಿ
ನಿನ್ನ ಬಲೆಗೆ ಬಿದ್ದ ಮೊದಲ ಸಾರಥಿ

ಮಾತಲ್ಲಿ ನಿತ್ಯ ನನ್ನ ಕೊಲ್ಲುತಿ 
ಮೌನದಲ್ಲೂ ಮೂತಿ ತಿರುವುತಿ 
ಮಲ್ಲಿಗೆ ತಂದಾಗ ನಗು ಅರಳಿಸುತಿ
ಮೆಲ್ಲನೆ ತಬ್ಬಲು ಓಡಿ ಹೋಗುತಿ 

ನೀನಿಲ್ಲದೆ ನಾನಿಲ್ಲ ನನ್ನ ರತಿ
ನಿನ್ನ ಅಣತಿ ಇಲ್ಲದೆ ಇಲ್ಲ ಸದ್ಗತಿ
ಸುಮ್ಮನಿರಲು ಎಲ್ಲಿ ನೀ ಬಿಡುತ್ತಿ
ಕನಸಲ್ಲೂ ಬಂದು ಕಾಟ ಕೊಡುತ್ತಿ

ಹೇಳಿ ಕೊಟ್ಟಷ್ಟು ಮುಗಿಯದು ನೀತಿ
ದಿನ ಕಳೆದಷ್ಟು ಹೆಚ್ಚುವುದು ಪ್ರೀತಿ
ನಿನ್ನಿಂದ ನನ್ನ ಬಾಳಲ್ಲಿ ನಿತ್ಯ ಶಾಂತಿ
ಮೊಗ್ಗರಲಿ ಹೂವಾಗಿದೆ ಬಿರಿದು ಕಾಂತಿ
@ಹನಿಬಿಂದು@
08.06.2024

ಸೋಮವಾರ, ಜೂನ್ 3, 2024

ಗುರಿ ಇರಲಿ

ಗುರಿ ಇರಲಿ

ಬಾನಿಗೂ ಭೂಮಿಗೂ ಅಂತರ ಎಲ್ಲಿದೆ
ದಿಗಂತದ ಸಾಲಿನ ಮಡಿಲಲ್ಲಿ?
ಬೋಜನ ಪ್ರಿಯನಿಗೆ ನೆಮ್ಮದಿ ಎಲ್ಲಿದೆ
ಮೂರು ಗೇಣಿನ ಉದರದಲಿ?

ತಿಂದಷ್ಟು ಬೇಕು ಇನ್ನೂ ಬೇಕು
ಹೊಸರುಚಿ ನಿತ್ಯವು ಹುಡುಕುತಲಿ!
ಸರ್ವರ ಮರೆತು ಸ್ವಾರ್ಥದಿ ತಾನು
ಮೆಲ್ಲುತ ನಗುವಲಿ ನಲಿಯುತಲಿ!

ಮೇಲೆ ಕೆಳಗೆ ಇದ್ದರೂ ಮನವು
ತಾನೇ ಶ್ರೇಷ್ಠ ಎನ್ನುತಲಿ , 
ಧರೆಯೇ ಬೇರೆ ಗಗನವೇ ಬೇರೆ
ಹಿಡಿಯಲು ಸಿಗದು ನಭವಿಲ್ಲಿ!

ಅರಿಯಲು ಬೇಕು ತನ್ನಯ ಕಾಯಕ
ತಿನ್ನುವುದೊಂದೇ ಬದುಕಲ್ಲ!
ಏಳು ಬೀಳುಗಳ ಜೀವನ ಪಥದಲ್ಲಿ
ಗುರಿಯನು ಮರೆತು ಬಾಳಿಲ್ಲ !!
@ಹನಿಬಿಂದು@
03.06.2024