ಬದುಕು
ಯಾಕೋ ಅರಿಯದು ಮನದ ತುಮುಲ
ಒಮ್ಮೆ ಗರಿಗೆದರಿ ಹಾರುವ ಹಂಬಲ
ಮತ್ತೊಮ್ಮೆ ರೆಕ್ಕೆ ಮುರಿದು ಬಿದ್ದ ಸಪ್ಪಳ
ಮಗದೊಮ್ಮೆ ಅತ್ತಿತ್ತಲಿಂದ ಸಹಾಯ, ಜನಬಲ
ಮೌನದಲ್ಲೇ ಜಗವ ಅರಿವ ಕಾತರ
ಮಾತಿನ ಚುಚ್ಚುವಿಕೆ ಹರಿತ ಆತುರ
ಇಂದಿಲ್ಲಿ ನಾಳೆ ಎಲ್ಲೋ ಅರಿತಿರುವಿರ
ಬದುಕಲಿಲ್ಲಿ ಹೋರಾಟ ನಿತ್ಯ ನಿರಂತರ
ಬಾನ ಬಯಲ ಸೀಮೆ ಮುಟ್ಟುವ ಬಯಕೆ
ದಾರಿ ಸವೆಸಲು ಕೂಡಾ ಸಾಗದ ದಿನಕೆ
ಬೇಕು ಹಲವಾರು ಸಾವಿರ ದಿನನಿತ್ಯ ಜನಕೆ
ಸಹಿಸಲು , ಹೊಂದಾಣಿಕೆ ಕಷ್ಟ ಪರರ ಆಶಯಕೆ
ನೀನೇನು ಸಣ್ಣ? ನಾನೆಲ್ಲಿ ಹಿರಿಯ?
ದುಡ್ಡಿದ್ದವ ದೊಡ್ಡಪ್ಪ ಜೀವಿಸುವ ನಿರ್ಭಯ!
ಬಡತನದ ಕೂಪದಿ ಬೆಂದ ಬದುಕು ಸಾಕು
ಮತ್ತಷ್ಟು ಮಗದೊಂದಿಷ್ಟು ಜನಕೆ ನಮ್ಮಿಂದಲೇ ಬೇಕು!!
ಕಿತ್ತುಕೊಂಡವನ ಬಗ್ಗೆ ದೇವರಿಗಿಲ್ಲ ಕೋಪ
ಕಳೆದುಕೊಂಡವನಿಗೂ ಇಲ್ಲ ನಿಜ ಕರುಣೆ ಅನುಕಂಪ
ಜೋರಾದರೆ ಬದುಕಿಯಾನು ಬುವಿಯಲ್ಲಿ , ಪಾಪದವನಲ್ಲ
ಹೊಡಿ ಬಡಿ ಕೊಲ್ಲು ಸಾಯಿಸು ಎಂದವಗೆ ಕಾಲವಿಲ್ಲಿ!
ಪುಣ್ಯ ಪಾಪಕ್ಕೆ ಹೆದರಿ ಓಡಿ ಹೋಗಿದೆ ಎಲ್ಲೋ
ನ್ಯಾಯ ಅನ್ಯಾಯದಿಂದ ತಲೆಮರೆಸಿ ಕೂತಿದೆ ಮೂಲೆಯಲಿ ಮತ್ತೆಲ್ಲೋ
ಹಣವಿದ್ಧವನ ಬೆನ್ನಲ್ಲಿ ಜೋತು ಬಿದ್ದಿದೆ ಉದ್ಧಾರ
ಬಡವನೆಂದೂ ಪರದಾಡುವ ನೇರ ದಾರಿ ಇಂದು ಮಿಥ್ಯ
ಸಂಕಟ ನೋವು ಬೇಸರ ಬೇನೆಗಳ ಬಾಳು ವ್ಯರ್ಥ
ಸತ್ಯ ಹೇಳಿದರೆ ಸತ್ತು ಹೋಗುವ
ಅನ್ಯಾಯ ಮಾಡಿದವ ಅನ್ನ ತಿನ್ನುವ ಕಾಲವಿದು
ಕಾಲದ ಜೊತೆ ಓಡಲು ಕಲಿತರೆ ಬದುಕುವೆ
ಮೀನು ಹಾರಿತೆಂದು ಏಡಿ ಹಾರಲು ಹೋದರೆ
ಮುರಿದೀತು ಕೈ ಕಾಲ ಬೆರಳು ತಕ್ಷಣವೇ
ಮತ್ತೆಲ್ಲಿಯ ನಾಳೆ ಮತ್ತೆಲ್ಲಿಯ ಕನಸು
ಮತ್ತೆಲ್ಲಿಯ ಅವನು ಮತ್ತೆಲ್ಲಿಯ ಸಹಾಯ
ಮತ್ಯಾರ ಅಭಯ. ಜಯ, ಕಾತರ, ನಂಬಿಕೆ?
ಮತ್ತಾರು ನಮ್ಮವರು, ಸಹಾಯಕರು, ಬೆಂಬಲಿಗರು
ನಾವೆಲ್ಲಾ ನಿತ್ಯ ಒಂಟಿಗಳಿಲ್ಲಿ ಧರೆಯಲಿ
ಪರಮಾತ್ಮ ಆಡಿಸುವ ಆಟಗಾರ ಅಲ್ಲಿ
ಸಾವಿಗಾಗಿ ದಿನವೊಂದು ಬರಲಿದೆ ಇಲ್ಲಿ
ಅಲ್ಲಿವರೆಗೂ ಹಿಂದೆ ನೋಡದೆ ಓಡುತ್ತಾ ಗೆಲ್ಲಿ
@ಹನಿಬಿಂದು@
09.12.2024