ಯಶೋಗಾಥೆ - 6 ಶ್ರೀಯುತ ಚಂದ್ರಶೇಖರ್ ಪೇರಾಲ್
ನಾನು ಇಂದು ಹೇಳ ಹೊರಟಿರುವುದು ಇಂದು ತನ್ನ ಜೀವನದ ಅರವತ್ತು ವಸಂತಗಳನ್ನು ಪೂರೈಸಿ, ಅರವತ್ತೊಂದಕ್ಕೆ ಕಾಲಿಡುತ್ತಿರುವ ನಿನ್ನೆಯಷ್ಟೇ ಒಂದು ಹಂತದ ಸರಕಾರಿ ಸೇವೆಯ ಶಿಕ್ಷಕ ವೃತ್ತಿಯ ಜೀವನಕ್ಕೆ ವಿದಾಯ ಹೇಳಿದ ಇವರು ನಮ್ಮೆಲ್ಲರ ಪ್ರೀತಿಯ ಪೇರಾಲ್ ಮಾಸ್ಟ್ರು. ಒಬ್ಬ ಶಿಕ್ಷಕ ತನ್ನ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಬಹುದು, ತನ್ನ ಭಾಷೆಯನ್ನು ಬಳಸಿ ಹೇಗೆಲ್ಲಾ ಜನರನ್ನು ಎಚ್ಚರಿಸಬಹುದು, ಹೇಗೆಲ್ಲಾ ತನ್ನನ್ನು ತಾನು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳ ಬಹುದು ಎಂಬುದಕ್ಕೆ ಉದಾಹರಣೆ ಇವರು. ಸರ್ ಮೊದಲನೆಯದಾಗಿ ನಿಮಗಿದೋ ಜನುಮ ದಿನದ ಶುಭಾಶಯಗಳು. ನಿಮ್ಮ ಸುಂದರ ಜೀವನದ ಯಶೋಗಾಥೆಯನ್ನು ಬಿಂಬಿಸಲು ಸಿಕ್ಕಿದ ಅವಕಾಶಕ್ಕೆ ನಾ ಸದಾ ಚಿರಋಣಿ.
ಇದು ಶಿಕ್ಷಕ ವೃತ್ತಿಗೆ ಸೇರಿ ನಿನ್ನೆ ಅಂದರೆ 30.11.2021ರಂದು ಸೇವಾ ನಿವೃತ್ತಿ ಪಡೆದ ಶಿಕ್ಷಕರಾದ ಚಂದ್ರಶೇಖರ್ ಪೇರಾಲ್ ಇವರ ಯಶೋಗಾಥೆಯ ಪರಿಚಯ. ನಿವೃತ್ತಿಯ ಸಮಯದಲ್ಲಿ ಶ್ರೀಯುತ ಚಂದ್ರಶೇಖರ ಪೇರಾಲ್ ಅವರು ಸರಕಾರಿ ಪ್ರೌಢಶಾಲೆ ಎಲಿಮಲೆ ಸುಳ್ಯ ತಾಲೂಕು ದ.ಕ. ಇಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಬದುಕಿನತ್ತ ಒಂದು ಸಿಂಹಾವಲೋಕನ ಇಲ್ಲಿದೆ.
ಶ್ರೀಯುತ ಪೇರಾಲು ರಾಮಣ್ಣ ಗೌಡ ಮತ್ತು ಚಿನ್ನಮ್ಮ ಇವರಿಗೆ ದಿನಾಂಕ ಡಿಸೆಂಬರ್ ಒಂದನೆಯ ತಾರೀಖು ೧೯೬೧ನೆಯ ಇಸವಿಯ ದಿನ ಗಂಡು ಮಗುವೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ,ಪೇರಾಲು ಇಲ್ಲಿ ಜನಿಸಿತು. ಸ್ವಾತಂತ್ರ್ಯ ಬಂದು ಹದಿನಾಲ್ಕು ವರ್ಷಗಳಾಗಿದ್ದವು ಅಷ್ಟೆ. ಆಗಿನ ಕಾಲ ಈಗಿನಂತೆ ಇರಲಿಲ್ಲ. "ಮಕ್ಕಳಿರಲವ್ವ ಮನೆತುಂಬಾ" ಎನ್ನುವ ಕಾಲ. ಇವರ ಮನೆಯಲ್ಲೂ ಆರು ಮಕ್ಕಳು! ನಾಲ್ಕು ಜನ ಅಕ್ಕಂದಿರ ಮತ್ತು ಒಬ್ಬ ಅಣ್ಣನವರ ಮುದ್ದಿನ ತಮ್ಮನಾಗಿ ಜನಿಸಿದ ಚಂದ್ರಶೇಖರ್ ಪೇರಾಲ್ ಅವರಿಗೆ ಪ್ರೀತಿಯ ಕೊರತೆ ಎಂದೂ ಕಾಣಲಿಲ್ಲ! ಮೊದಲಿನ ನಾಲ್ವರು ಮಕ್ಕಳೂ ಕೂಡಾ ಹೆಣ್ಣು ಮಕ್ಕಳಾದಾಗ ತಂದೆ ತಾಯಿಯರು ಗಂಡು ಸಂತಾನ ಬೇಕೆಂದು ಹರಕೆ ಹೇಳಿಕೊಂಡ ಬಳಿಕ ಕೊನೆಯಲ್ಲಿ ಹುಟ್ಟಿದ ಇಬ್ಬರು ಗಂಡು ಮಕ್ಕಳಲ್ಲಿ ಇವರು ಎರಡನೆಯವರು. ಇಡೀ ಕುಟುಂಬಕ್ಕೆ ಸಣ್ಣ ಮಗು. ಚಿಕ್ಕವರೆಂದರೆ ಎಲ್ಲರಿಗೂ ಮುದ್ದು ಅಲ್ಲವೇ? ಹಾಗೆಯೇ ಎಲ್ಲರೂ ಮುದ್ದಿನಿಂದ ಸಾಕಿ ಬೆಳೆಸಿದ ಕಂದನೇ ಚಂದ್ರಶೇಖರ ಪೇರಾಲ್ ಅವರು!
ಈಗಿನಂತೆ ಆಗ ಹಳ್ಳಿ ಹಳ್ಳಿಗಳಲ್ಲಿ ಆಂಗ್ಲ ಮಾದ್ಯಮ ಶಾಲೆಗಳು ಇರಲಿಲ್ಲ, ವಿದ್ಯಾಭ್ಯಾಸಕ್ಕೆ ಮಹತ್ವ ಕೊಡದೆ ಕೃಷಿ ಕಾರ್ಯಕ್ಕೆ ಒತ್ತು ಕೊಡುತ್ತಿದ್ದ ಕಾಲವದು. ಇವರ ಬಾಲ್ಯದ ಪ್ರಾಥಮಿಕ ಶಿಕ್ಷಣ ತಮ್ಮ ಸ್ವಂತ ಊರಾದ ಪೇರಾಲ್ ನಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಆಗಿನ ಶಿಕ್ಷಕರು ಎಲ್ಲರೂ ಶಿಸ್ತಿನ ಸಿಪಾಯಿಗಳಾಗಿದ್ದರು.ಶ್ರೀಯುತ ಎಲ್ಯಣ್ಣ ಗೌಡ ಎಂಬವರು ಮುಖ್ಯ ಶಿಕ್ಷಕರಾಗಿದ್ದರು. ಚಂದ್ರಶೇಖರರ ಮೇಲೆ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ ಎಂದರೆ ಅವರೇ. ಅದೇ ಪ್ರಭಾವ ಬಹುಶಃ ಮುಂದೆ ಅವರು ಶಿಕ್ಷಕ ವೃತ್ತಿಯನ್ನು ಆರಿಸುವಲ್ಲಿ ಅವರಿಗೆ ಪ್ರೇರಣೆಯಾಗಿರಲೂ ಬಹುದೇನೋ. ಈಗಿನಂತೆ ಆಗ ತಾಂತ್ರಿಕತೆ ಮುಂದುವರಿದಿರಲಿಲ್ಲ. ಟಿವಿ, ಮೊಬೈಲ್ ಕನಸಿನ ಮಾತು. ಹಾಗಾಗಿ ಕಲಿಕೆಗೆ ಬೇರೆ ಮಾಧ್ಯಮಗಳು ಇರಲಿಲ್ಲ, ಪ್ರತಿ ಮಗುವಿನ ಜೀವನದ ಹೀರೋಗಳು ಎಲ್ಲರೂ ಹೆಚ್ಚಾಗಿ ಶಿಕ್ಷಕರು ಅಥವಾ ಆ ಊರಿನಲ್ಲಿ ಮೊದಲೇ ಹೆಚ್ಚು ಕಲಿತು ದೂರದ ಊರಿನಲ್ಲಿ ಉನ್ನತ ಹುದ್ದೆಗೆ ಸೇರಿದ ಒಂದೋ ಎರಡೋ ಜನ -ಇವರಷ್ಟೇ ಆಗಿದ್ದರು. ಜ್ಞಾನದ ಮೂಲ ಪುಸ್ತಕಗಳೇ ಆಗಿದ್ದವು.
ಶಾಲೆಯಲ್ಲಿ ವಾರದಲ್ಲಿ ಒಂದು ದಿನ ನಡೆಯುತ್ತಿದ್ದ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮಾನಸಿಕ ಧೈರ್ಯ ಹಾಗೂ ನಾಯಕತ್ವದ ಗುಣವನ್ನು ಬೆಳೆಸಿದರೆ, ಪ್ರತಿ ಶನಿವಾರ ನಡೆಯುತ್ತಿದ್ದ ಭಜನೆ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ದೇವರ ಮೇಲಿನ ನಂಬಿಕೆ, ವಿಶ್ವಾಸ, ಭಕ್ತಿಯನ್ನು ಬಿತ್ತುತ್ತಿತ್ತು. ಪ್ರತಿ ತಿಂಗಳಲ್ಲಿ ಒಮ್ಮೆ ನಡೆಯುತ್ತಿದ್ದ ಸಂಸತ್ತು ರಾಜಕೀಯ ವಿದ್ಯಾಮಾನದತ್ತ ಒಲವು ಹಾಗೂ ಅದರ ಪರಿಚಯವನ್ನು ಮಾಡಿಕೊಡುತ್ತಿತ್ತು. ವರ್ಷಕ್ಕೊಮ್ಮೆ ಬರುವ ಮಕ್ಕಳ ವಾರ್ಷಿಕ ಹಸ್ತಪ್ರತಿ ಪುಸ್ತಕ ಆಗಿನ ವಿದ್ಯಾರ್ಥಿಗಳಿಗೆ ಬರವಣಿಗೆ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರೇರಣೆ ನೀಡಿತ್ತು. ಹೀಗೆ ಪ್ರಾಥಮಿಕ ಶಾಲೆಯಲ್ಲಿ ಸದಾ ಒಂದಲ್ಲ ಒಂದು ಕಾರ್ಯಕ್ರಮದ ಪ್ರೇರಣೆ ದೊರೆತು ಮುಂದಿನ ಜೀವನಕ್ಕೆ ಅದುವೇ ಅಡಿಗಲ್ಲಾಯಿತು. ಆಗ ಏಳನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಇತ್ತು. ಅದನ್ನು ಬರೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರು.
ತಂದೆ ರಾಮಣ್ಣ ಗೌಡರಿಗೆ ತನ್ನ ಮಕ್ಕಳನ್ನು ಪ್ರೌಢ ಶಾಲೆಗೆ ಸೇರಿಸಲು ಇಷ್ಟವಿರಲಿಲ್ಲ, ಹೆಣ್ಣು ಮಕ್ಕಳು ಮನೆಯಲ್ಲೇ ಉಳಿದು ಮನೆ ಕೆಲಸಕ್ಕೇ ತೃಪ್ತರಾದರು. ಗಂಡು ಮಕ್ಕಳು ಹೆಚ್ಚು ಓದಿದರೆ ಮನೆಯಲ್ಲಿ ಕೃಷಿ ಕಾರ್ಯಕ್ಕೆ ಸಹಕರಿಸದೆ ದೂರದ ಪಟ್ಟಣಗಳಿಗೆ ಹೋಗಿ ನೆಲೆಸಿದರೆ ತಾನು ಪಟ್ಟ ಕಷ್ಟ ವ್ಯರ್ಥವಾಗುತ್ತದೆ ಎಂಬ ನಂಬಿಕೆಯಿಂದಲೋ ಏನೋ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಬಳಿಕ ತನ್ನ ಮಕ್ಕಳ ಹೆಚ್ಚಿನ ಓದಿಗೆ ಅವರು ತಲೆಕೆಡಿಸಿಕೊಂಡವರೇ ಅಲ್ಲ. ಆದರೆ ಅಜ್ಜಿಯ ಅಪಾರ ಅನುಭವದ ಮಾತು, ಒತ್ತಡ ಮಗನ ಮೇಲೆ ಬಿದ್ದು, "ಹೆಣ್ಣು ಮಕ್ಕಳು ಹೇಗೂ ಮುಂದೆ ಓದಲಿಲ್ಲ, ಚಿಕ್ಕವರಾದ ಗಂಡು ಮಕ್ಕಳಾದರೂ ಕಲಿಯಲಿ, ಅವರನ್ನು ಓದಿಸು" ಎಂಬ ಮಾತಿಗೆ ಇಲ್ಲವೆನ್ನಲಾಗದೆ ದೂರದ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ತಂದೆ ಪ್ರೌಢ ಶಿಕ್ಷಣಕ್ಕೆ ಸೇರಿಸಿದರು.
ಬೆಳಗ್ಗೆ ಹತ್ತು ಕಿಲೋ ಮೀಟರ್ ಹಾಗೂ ಸಂಜೆ ಹತ್ತು ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ನಡೆದು ಸಾಗಬೇಕಿತ್ತು. ಸುಳ್ಯ ತಲುಪಲು ಪಯಶ್ವಿನಿ ನದಿಯನ್ನು ದಾಟಬೇಕಿತ್ತು. ಮಳೆಗಾಲದಲ್ಲಿ ದೋಣಿಯಲ್ಲಿ ಸಾಗಿ ಶಾಲೆ ಸೇರಬೇಕಿತ್ತು. ಹಾಗಾಗಿ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಆಗುತ್ತಿರಲಿಲ್ಲ. ಬೆಳಗ್ಗೆ ಆರು ಗಂಟೆಗೆ ಮನೆ ಬಿಟ್ಟರೆ ಸಂಜೆ ಮನೆ ತಲುಪುವಾಗ ಏಳುಗಂಟೆ ಆಗಿರುತ್ತಿತ್ತು. ಮಳೆ ಹೆಚ್ಚಾಗಿ ಸುರಿದ ದಿನ ನದಿಯಲ್ಲಿ ನೀರು ಏರಿ ಅಲೆಗಳು, ಸುಳಿಗಳು ಬರುವ ಕಾರಣ ದೋಣಿ ನಡೆಸುತ್ತಿರಲಿಲ್ಲ. ಹತ್ತು ಕಿಲೋಮೀಟರ್ ನಡೆದು ದೋಣಿ ಕಡವಿನವರೆಗೆ ತಲುಪಿ ಮತ್ತೆ ಹಿಂದಿರುಗಿದ ಕಷ್ಚದ ಪರಿ ಅದು ಅನುಭವಿಸಿಯೇ ತೀರಬೇಕು. ಈಗಿನಂತೆ ಆಗ ಹೆಚ್ಚು ಮಳೆ ಬಂತೆಂದು ರಜೆ ಕೊಡುವ ಕ್ರಮವಿರಲಿಲ್ಲ! ನಡೆದು ಸುಸ್ತಾಗಿ ಮತ್ತೆ ಓದುವ ಕಾರ್ಯ ಮನೆಯಲ್ಲಿ ಮುಂದುವರೆಸಲು ಸಾಧ್ಯವೇ ಯೋಚಿಸಿ! ಆಗಿನ ಮಳೆಗಾಲ ಈಗಿನಂತಲ್ಲ, ಪರಿಸರ ಹಸಿರಾಗಿ, ಮಾಲಿನ್ಯ ಕಡಿಮೆಯಿದ್ದ ಕಾರಣ ವಿಪರೀತ ಮಳೆ, ಆ ಮಳೆಗಾಲದಲ್ಲಿ ಇಪ್ಪತ್ತು ಕಿಲೋಮೀಟರ್ ಗಳ ನಡಿಗೆ, ಪುಸ್ತಕ, ಬಟ್ಟೆ, ಚೀಲ ಇವುಗಳ ಬಗ್ಗೆ ಆಲೋಚಿಸಿದಾಗ ಬಸ್ಸಿಲ್ಲದ ಪ್ರತಿ ಶನಿವಾರ ವಿಪರೀತ ಗಾಳಿ ಮಳೆಗೆ ಬೆಳಗ್ಗೆ ಆರು ಗಂಟೆಗೆ ಹೊರಟು ಆ ಮಳೆ, ಚಳಿಯಲ್ಲಿ ಐದು ಕಿಲೋ ಮೀಟರ್ ನಡೆದುಕೊಂಡು ಹೋಗಿ ಪೂರ್ಣ ಒದ್ದೆಯಾಗಿ ಎಂಟು ಗಂಟೆಯ ಮೊದಲ ಗಣಿತದ ಅವಧಿಯ ತರಗತಿಗೆ ಕೈ ಕಾಲು ಮರಗಟ್ಟಿ ಬರೆಯಲು ಸಾಧ್ಯವೇ ಆಗದ ಕುದುರೆಮುಖದಲ್ಲಿನ ಹೈಸ್ಕೂಲಿನ ನನ್ನ ನೆನಪು ಆಗಾಗ ಕಾಡುತ್ತಿರುತ್ತದೆ. ಬಟ್ಟೆಯೊಂದಿಗೆ ಚೀಲ, ಪುಸ್ತಕ ಎಲ್ಲವೂ ಒದ್ದೆ. ಮರುದಿನ ಹಾಕಲು ಮತ್ತೊಂದು ಬಟ್ಟೆಗೆ ಬಡತನದ ಅಡ್ಡಿ! ಮತ್ತೆ ಅದೇ ಬಟ್ಟೆಯನ್ನು ಒಗೆದು ರಾತ್ರಿಯಿಡೀ ಒಲೆಯ ಬಳಿ ಒಣಗಿಸಿ, ಬೆಳಗ್ಗೆ ಹಾಕಿಕೊಂಡು ಶಾಲೆ ಸೇರಿದರೆ ಶಿಕ್ಷಕರ ಆಕ್ರೋಶಕ್ಕೆ ಗುರಿ!ಈಗಿನಂತೆ ಡ್ರಯರ್, ಇಸ್ತ್ರಿ ಪೆಟ್ಟಿಗೆಗಳು ಆಗ ಮನೆಯಲ್ಲಿರಲಿಲ್ಲ ಅಲ್ಲವೇ? ಅದರೊಡನೆ ಮೈಯೆಲ್ಲಾ ತುರಿಕೆ, ಪೆಟ್ಚಿನ ಮಳೆ!
ಇದಿಷ್ಟೇ ಕಷ್ಟವೇ? ಶಾಲೆಗೆ ಓದುವ ಧಾವಂತದಲ್ಲಿ ಇಷ್ಟು ಕಷ್ಟಪಟ್ಟು ಹೋದರೂ, ಸರಕಾರಿ ಶಾಲೆ ಆದ ಕಾರಣ ಸರಿಯಾಗಿ ಶಿಕ್ಷಕರು ಇರಲಿಲ್ಲ. ಪಾಠಗಳು ಅರ್ಥವಾಗದೇ, ಹೇಳಿ ಕೊಡಲು ಜನರಿಲ್ಲದೆ ಪುಸ್ತಕದೊಳಗೇ ಭದ್ರವಾಗಿ ಕುಳಿತಿದ್ದವು! ಓದಲು, ಬರೆಯಲು ಯಾವುದಕ್ಕೂ ಮನೆಯಲ್ಲಿ ಸಮಯ ಸಿಗುತ್ತಿರಲಿಲ್ಲ, ಶಾಲೆಗೆ ಹೋಗುವುದು, ಬರುವುದರಲ್ಲೇ ಸಮಯ ಕಳೆದು ಹೋಗಿ ಬಿಡುತ್ತಿತ್ತು. ಕೊಂಡು ಹೋದ ಬುತ್ತಿ ಗಂಟಿನ ಊಟ ಕರಗಿ ಹೊಟ್ಟೆ ಬೆನ್ನಿಗೆ ಅಂಟಿದಂತಿತ್ತು. ಅಂತೂ ಇಂತೂ ಈ ಕಷ್ಟದಲ್ಲೇ ಎಂಟು ಮತ್ತು ಒಂಭತ್ತನೇ ತರಗತಿಯ ಕಲಿಕೆ ಹೇಗೋ ಮುಗಿಯಿತು.
ನಾ ಮೊದಲೇ ಹೇಳಿದಂತೆ ಈಗಿನಂತೆ ಆಗಿನ ಪರಿಸ್ಥಿತಿ ಇರಲಿಲ್ಲ. ಕೃಷಿ ಕೆಲಸವನ್ನೇ ಆಧರಿಸಿಕೊಂಡಿದ್ದ ಪೋಷಕರು ಅನಕ್ಷರಸ್ಥರಾಗಿದ್ದರು ಮತ್ತು ಕೃಷಿ ಕಾರ್ಯ ಈಗಿನಷ್ಟು ಆ ದಿನಗಳಲ್ಲಿ ಲಾಭದಾಯಕವೂ ಆಗಿರಲಿಲ್ಲ, ಈಗಲೇ ಸಾಲಬಾಧೆ ತಾಳಲಾರದೆ, ಮಳೆ ಬಾರದೆ ಅಥವಾ ಹೆಚ್ಚಾಗಿ ಬೆಳೆ ಹಾನಿಯಾಗಿ ರೈತರು ಆತ್ಮಹತ್ಯೆಗೆ ಶರಣಾಗುವವರು ಇದ್ದಾರೆ. ಆಗ ವೈಜ್ಞಾನಿಕ ಸಾಧನಗಳು, ಮುಂದುವರಿದ ಕೃಷಿ ಪದ್ದತಿಗಳಿಲ್ಲದ ಸಾವಯವ ಕೃಷಿಯ ಕಾಲವಲ್ಲವೇ? ಜನರಲ್ಲಿ ಆರೋಗ್ಯ ಹಾಗೂ ನೆಮ್ಮದಿಯ ಜೊತೆ ಬಡತನವೂ ತಾಂಡವವಾಡುತ್ತಿತ್ತು. ಹಾಗಾಗಿ ಯಾವ ಹೆಣ್ಣು ಮಕ್ಕಳನ್ನೂ ದೂರದ ಊರಿಗೆ ಪ್ರೌಢ ಶಾಲಾ ವಿದ್ಯಾಭ್ಯಾಸಕ್ಕೆ ಕಳುಹಿಸಲು ಪೋಷಕರಿಗೆ ಸಾಧ್ಯವಾಗಲಿಲ್ಲ, ಹೆಣ್ಣುಮಕ್ಕಳ ಶಿಕ್ಷಣ ಆಗಿನ್ನೂ ತುಂಬಾ ಹಿಂದೆಯೇ ಉಳಿದಿತ್ತು. ಚಂದ್ರಶೇಖರ್ ಅವರು ಅಣ್ಣನೊಡನೆಯೇ ಶಾಲೆಗೆ ಸೇರಿದ ಕಾರಣವೂ, ಇಬ್ಬರಿಗೆ ವಯಸ್ಸಿನಲ್ಲಿ ಬಹಳ ಅಂತರವೂ ಇಲ್ಲದ ಕಾರಣವೂ ಅಣ್ಣನ ತರಗತಿಯಲ್ಲಿಯೇ ಓದುತ್ತಿದ್ದರು. ಅಣ್ಣ ಒಂಭತ್ತನೇ ತರಗತಿಯಲ್ಲಿ ಅನುತ್ತೀರ್ಣರಾಗಿ ಆಗಲೇ ಶಾಲೆಗೆ ಗುಡ್ ಬೈ ಹೇಳಿಬಿಟ್ಟರು. ಮುಂದೆ ಮುಂಬೈ ಪಟ್ಟಣ ಸೇರಿ ತನ್ನ ಬದುಕಿನ ದಾರಿ ಕಂಡುಕೊಂಡರು. ಹೀಗಾಗಿ ಅಣ್ಣನೊಂದಿಗೇ ಬೆಳೆದ ಚಂದ್ರಶೇಖರ್ ಅವರಿಗೆ ಶಾಲೆಯಲ್ಲಿ ಏಕಾಂಗಿತನ ಕಾಡಿತು. ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯದು. ಅಲ್ಲೇ ವಿದ್ಯಾಭ್ಯಾಸ ಮುಂದುವರೆಸಿದರೆ ಅಣ್ಣನಿಲ್ಲದೆ ಮತ್ತು ಸರಿಯಾದ ಶಿಕ್ಷಕರಿಲ್ಲದೆ ತಾನು ಕೂಡಾ ಉತ್ತೀರ್ಣನಾಗಲಾರೆ ಎಂದು ಅವರಿಗೆ ಅನ್ನಿಸತೊಡಗಿತು. ಆಗ ಸುಳ್ಯ ತಾಲೂಕಿನಲ್ಲಿ ಇದ್ದುದು ಕೇವಲ ಬೆರಳೆಣಿಕೆಯ ಪ್ರೌಢ ಶಾಲೆಗಳು ಮಾತ್ರ. ಅವರು ಆಗ ಹೆಸರುವಾಸಿಯಾಗಿದ್ದ ಖಾಸಗಿ ಶಾಲೆ ಪೆರ್ನಾಜೆಯಲ್ಲಿದ್ದ ಸೀತಾರಾಘವ ಪ್ರೌಢಶಾಲೆಗೆ ಸೇರಿ ಓದನ್ನು ಮುಂದುವರೆಸುವ ಆಲೋಚನೆ ಮಾಡಿದರು. ಉತ್ತಮ ವಿದ್ಯಾರ್ಥಿಗಳು ಎನಿಸಿಕೊಂಡಿದ್ದ , ಸಿರಿವಂತ ಕುಟುಂಬದ, ಇವರ ಊರಿನ ಹಲವಾರು ವಿದ್ಯಾರ್ಥಿಗಳು ಆ ಶಾಲೆಗೆ ದಾಖಲಾಗಿ ಅಲ್ಲಿ ಓದುತ್ತಿದ್ದರು. ತುಂಬಾ ಓದಿನ ಗೀಳಿದ್ದ ಇವರನ್ನೂ ಅಲ್ಲಿ ಸೇರುವಂತೆ ಅದು ಪ್ರೇರೇಪಿಸಿತು. ಅದಕ್ಕಾಗಿ ಸುಳ್ಯದ ಜೂನಿಯರ್ ಕಾಲೇಜಿನಿಂದ ತಮ್ಮ ಅಂಕಪಟ್ಟಿ ಹಾಗೂ ವರ್ಗಾವಣೆ ಪ್ರಮಾಣ ಪತ್ರವನ್ನು ತಂದಿದ್ದರು. ಆ ವಿಷಯವನ್ನು ತಮ್ಮ ತಂದೆ ಒಪ್ಪಲಾರರು ಎಂದು ತಿಳಿದಿದ್ದ ಅವರು ತಂದೆಯವರಿಗೆ ಹೇಳದೆಯೇ ತಾವೇ ಈ ಕಾರ್ಯವನ್ನು ಮಾಡಿದ್ದರು!
ಮರುದಿನ ತಂದೆ ರಾಮಣ್ಣ ಗೌಡರಿಗೆ ಈ ವಿಷಯ ತಿಳಿಸಿದರು. ವಿಷಯ ತಿಳಿದ ಕೂಡಲೇ ಕೆಂಡ ಮಂಡಲವಾದರು ತಂದೆಯವರು! ಸಣ್ಣ ಮಗ, ದೂರದ ಶಾಲೆಗೆ ಸೇರುವುದು ಬೇಡ ಎಂಬ ಪ್ರೀತಿಯ ಅಕ್ಕರೆಯೋ, ಖಾಸಗಿ ಶಾಲೆಗೆ ಶಾಲಾ ಶುಲ್ಕ ಭರಿಸಲು ಕಷ್ಟವಾದ ತಮ್ಮ ಕುಟುಂಬದ ಪರಿಸ್ಥಿತಿಗೋ ಏನೋ, ವರ್ಗಾವಣೆ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಯನ್ನು ತನ್ನ ಪೆಟ್ಟಿಗೆಯೊಳಗಿಟ್ಟು ಬೀಗ ಹಾಕಿಬಿಟ್ಟರು. "ನೀನಿನ್ನು ಶಾಲೆ ಕಲಿತದ್ದು ಸಾಕು.ಅಣ್ಣ ಪಟ್ಟಣ ಸೇರಿದ, ನೀನು ನನ್ನೊಂದಿಗೆ ಕೃಷಿ ಕಾರ್ಯದಲ್ಲಿ ಸಹಕರಿಸು" ಎಂದುಬಿಟ್ಟರು! ಮೂರು ದಿನಗಳ ಕಾಲ ಉಪವಾಸ ಮಾಡಿ, ಅತ್ತು ಕರೆದು ರಂಪಾಟ ಮಾಡಿದರೂ ತಂದೆಯವರು ಜಗ್ಗಲಿಲ್ಲ, ಪೆಟ್ಟಿಗೆಯೊಳಗೆ ಬೀಗ ಹಾಕಿ ಅವಿತಿಟ್ಟ ಸರ್ಟಿಫಿಕೇಟುಗಳು ಹೊರಗೆ ಬರಲೇ ಇಲ್ಲ.

ಮಕ್ಕಳೆಂದರೆ ಅಜ್ಜಿಗೆ ಮುದ್ದು. ಅದರಲ್ಲೂ ಹೇಳಿ ಕೇಳಿ ಇವರು ಕೊನೆಯ ಮಗ. ಇವರ ಹಠವನ್ನು ನೋಡಿದ ಅಜ್ಜಿ ತನ್ನ ಮಗನಿಗೆ ಬೈದು ಬುದ್ಧಿ ಹೇಳಿದ ಬಳಿಕ ಅವರ ಒತ್ತಾಯಕ್ಕೆ ಎಲ್ಲಾ ಕಾಗದ ಪತ್ರಗಳನ್ನು ಹೊರ ತೆಗೆದು ಕೊಟ್ಟರು ರಾಮಣ್ಣ ಗೌಡರು. ಆದರೆ ಒಂದು ಚಿಕ್ಕಾಸೂ ಕೊಡಲಿಲ್ಲ. ಅಜ್ಜಿ ತನ್ನ ಸೀರೆಯ ಗಂಟಿನಲ್ಲಿ ಕಟ್ಟಿ ಇಟ್ಟಿದ್ದ ಒಂದಷ್ಟು ಪುಡಿಗಾಸನ್ನು ನೀಡಿದರು . ಅದು ಸಾಲದೆ ಪಕ್ಕದ ಮನೆಯ ಶೆಟ್ರ ಸಹಾಯದಿಂದ ಪೆರ್ನಾಜೆಯ ಸೀತಾ ರಾಘವ ಶಾಲೆಗೆ ತಾವೇ ದಾಖಲಾದರು. ಕಲಿಕೆಯ ಆಸೆ ಮನದೊಳಗೇನೋ ಇತ್ತು. ಆದರೆ ಶಾಲೆಯ ಹಾದಿ ಮಾತ್ರ ಅತ್ಯಂತ ದುರ್ಗಮವಾಗಿತ್ತು. ಮನೆಯಿಂದ ಒಂದು ಕಿಲೋ ಮೀಟರ್ ನಡೆದು ಹೋದ ಬಳಿಕ ಪಯಶ್ವಿನಿ ನದಿ ಸಿಗುತ್ತಿತ್ತು. ಅದನ್ನು ದಾಟಿ ಜಾಲ್ಸೂರಿನವರೆಗೆ ಮತ್ತೆ ಎರಡು ಕಿಲೋ ಮೀಟರ್ ನಡೆದು ಹೋಗಿ, ಅಲ್ಲಿಂದ ಬಸ್ಸು ಹತ್ತಿ ಹೋಗಿ ಶಾಲೆ ಸೇರಬೇಕಿತ್ತು. ಮಳೆಗಾಲದ ಈ ಪ್ರಯಾಣವಂತೂ ತುಂಬಾ ಭಯಾನಕವಾಗಿ ಇರುತ್ತಿತ್ತು. ಕಾರಣ ತುಂಬಿ ಹರಿಯುತ್ತಿದ್ದ ಪಯಶ್ವಿನಿ ನದಿಯನ್ನು ದಾಟಲು ಸಾಧ್ಯವಾಗುತ್ತಿರಲಿಲ್ಲ. ಕೆಲವು ದಿನ ಬಸ್ಸುಗಳೇ ಇರುತ್ತಿರಲಿಲ್ಲ. ಆಗ ಶಾಲಾ ಸಮಯಕ್ಕಷ್ಟೇ ಒಂದೋ ಎರಡೋ ಬಸ್ಸುಗಳು! ಮುಂದೆ ದಾರಿ ಕಾಣದೆ ಹೊಳೆ ಬದಿಯ ಪಂಜಿಕಲ್ಲು ಶಾಲೆಯಲ್ಲಿ ತಂಗಿ, ಅಲ್ಲೇ ಮಲಗಿ ನಿದ್ರಿಸಿದ ರಾತ್ರಿಗಳು ಅದೆಷ್ಟೋ!
ಪ್ರತಿಯೊಂದು ಕಲ್ಲು ಕೂಡಾ ಹಲವಾರು ಉಳಿಪೆಟ್ಟು ತಿನ್ನದೆ ಅಂದದ ಶಿಲ್ಪವಾಗದು. ಅಂತೆಯೇ ಮಾನವ ಜೀವನವೂ ಕೂಡಾ. ಅಂದದ ಶಿಲ್ಪ ಒಂದಷ್ಟು ಜಾಸ್ತಿಯೇ ಪೆಟ್ಟು ತಿಂದಿರುತ್ತದೆ. ಹಾಗೆಯೇ ಸಾಧಕರ ಬದುಕೂ ಕೂಡಾ. ಅವರ ಕಷ್ಟದ ದಿನಗಳು ಅವರನ್ನು ಇನ್ನಷ್ಟು, ಮತ್ತಷ್ಟು ಗಟ್ಟಿಗೊಳಿಸಿ ಹದಮಾಡಿ ಜೀವನ ಕಟ್ಟುವ ಕಾರ್ಯಕ್ಕೆ ಗಟ್ಟಿಯಾದ ತಳಹದಿಯನ್ನು ಹಾಕಿಬಿಡುತ್ತವೆ ಅಲ್ಲವೇ? ಅದು ಚಂದ್ರಶೇಖರ್ ಪೇರಾಲ್ ಅವರ ಜೀವನಕ್ಕೂ ಅನ್ವಯಿಸುತ್ತದೆ.
ಅಂತೂ ಇಂತೂ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ ಮುಗಿಸಿ ಉತ್ತಮ ಅಂಕಗಳ ಅಂಕಪಟ್ಟಿ ಕೈಗೆ ಬಂತು. ಮತ್ತೆ ಓದು ಮುಂದುವರೆಸುವ ಹಂಬಲ ಕಡಿಮೆಯಾಗಲಿಲ್ಲ. ಸುಳ್ಯದ ಜೂನಿಯರ್ ಕಾಲೇಜಿಗೆ ಮತ್ತೆ ಬಂದು ಪಿಯುಸಿ ಕಲಾ ವಿಭಾಗಕ್ಕೆ ದಾಖಲಾದರು.ಆಗ ಅವರ ಅನುಕೂಲಕ್ಕೆ ಮಂಡೆಕೋಲಿನಿಂದ ಹೊರಟ ಸರಕಾರಿ ಬಸ್ಸೊಂದು ಆಲೆಟ್ಟಿ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿತ್ತು. ನಡೆದು ಬರುವ ಬದಲು ಆ ಬಸ್ಸಿನಲ್ಲಿ ಸುಳ್ಯಕ್ಕೆ ಓಡಾಡುವ ಅವಕಾಶ ಸಿಕ್ಕಿತು. ಬಸ್ಸಿಗೆ ಓಡಾಡಲು ಆಗಿನ ರಸ್ತೆಗಳು ಸರಿ ಇರಲಿಲ್ಲ. ಅಲ್ಲಲ್ಲಿ ಗುಂಡಿ ಹಾಗೂ ಮಣ್ಣಿನ ರಸ್ತೆಗಳು. ಮಳೆಗಾಲಗಲ್ಲಿ ಅಲ್ಲಲ್ಲಿ ಕೆಸರು ತುಂಬಿ ಬಸ್ಸಿನ ಚಕ್ರಗಳು ಹೂತು ಹೋದಾಗ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳೇ ಅದನ್ನೆತ್ತಲು ಸಹಕರಿಸಬೇಕಿತ್ತು. ಬಸ್ಸೇನಾದರೂ ಹೂತು ನಿಂತು ಹೋಗಿಬಿಟ್ಟರೆ ಅರ್ಧದಿಂದ ಮತ್ತೆ ನಟರಾಜ ಸರ್ವಿಸ್! ನಡೆದೇ ಹೋಗಿ ಕಾಲೇಜು ಸೇರಬೇಕಿತ್ತು!
ಕಾಲೇಜಿಗೆ ಹೋಗುವಾಗ ಈಗಿನಂತೆ ಸಮವಸ್ತ್ರದ ಪದ್ಧತಿ ಆಗ ಇರಲಿಲ್ಲ, ಮನೆಯಲ್ಲಿಯೂ ಬಡತನ. ಯಾರೋ ಸಿರಿವಂತರ ಮಕ್ಕಳಿಗೆ ಮಾತ್ರ ಉತ್ತಮ ಬಟ್ಟೆ. ಈ ಬಟ್ಟೆಯ ವಿಷಯ ಬಂದಾಗ ಅಮ್ಮನ ನೆನಪಾಗುತ್ತದೆ. ಮೂರು ನಾಲ್ಕು ಹುಡುಗಿಯರಿದ್ದ ಕುಟುಂಬದಲ್ಲಿ ಹೊತ್ತಿಗೆ ಸರಿಯಾಗಿ ತಿನ್ನಲು ಊಟ ಹಾಗೂ ತೊಡಲು ಬಟ್ಟೆ ಇರದ ಕಾರಣ ನನ್ನಮ್ಮ ಶಾಲೆಗೆ ಹೋಗಲೇ ಇಲ್ಲ , ನನ್ನಮ್ಮ ಇದನ್ನು ಆಗಾಗ ನಮ್ಮೊಡನೆ ಹೇಳಿ ಬೇಸರ ಮಾಡಿಕೊಳ್ಳುತ್ತಿದ್ದರು. "ಅಕ್ಷರ ಜ್ಞಾನ ಒಂದು ಇದ್ದಿದ್ದರೆ ನಾನು ಏನೋ ಸಾಧನೆ ಮಾಡುತ್ತಿದ್ದೆ .." ಎಂದು. ನನ್ನ ತಂಗಿ (ಈಗ ಕಾರ್ಕಳ ನಗರ ಠಾಣೆಯಲ್ಲಿ ಅರಕ್ಷಕರ ಹುದ್ದೆಯಲ್ಲಿ ಇರುವ ಜಿಲ್ಲೆಗೆ ಮೊದಲ ರ್ಯಾಂಕ್ ಪಡೆದು ಕೆಲಸ ಪಡೆದ ಅವಳ ಬಗ್ಗೆ ನನಗೆ ಹೆಮ್ಮೆಯಿದೆ) ಅವರಿಗೆ ಸರಿಯಾಗಿ ತಮ್ಮ ಹೆಸರು ಬರೆಯಲು ಕಲಿಸಿದಳು. ಕಾರಣ ನಮ್ಮ ಶಾಲಾ ಅಂಕಪಟ್ಟಿಯಲ್ಲಿ ಅವರ ಸಹಿ ನೋಡಲು ನಾವು ಇಚ್ಚಿಸುತ್ತಿದ್ದೆವು, ಹೆಬ್ಬೆಟ್ಟನ್ನಲ್ಲ. ಕನ್ನಡ ಅಕ್ಷರಗಳನ್ನೂ ಹೇಳಿಕೊಟ್ಟಳು. ಆದರೆ ನಾವು ಮೂರು ಜನ ಮಕ್ಕಳನ್ನು ಓದಿಸುವ ಗುರುತರ ಜವಾಬ್ದಾರಿ ಅವರ ಮೇಲಿದ್ದ ಕಾರಣ ನನ್ನನ್ನು ಅಜ್ಜಿ ಮನೆಯಲ್ಲಿ ಬಿಟ್ಟು, ತನ್ನ ಹೆಗಲಿನಲ್ಲಿ ಜವಾಬ್ದಾರಿ ಹೊತ್ತು, ಕೂಲಿ ಕೆಲಸ, ರಾತ್ರಿ ಮನೆಗೆ ಬಂದು ಮನೆ ಕೆಲಸದ ಬಳಿಕ ಬೀಡಿ ಕಟ್ಟುವ ಕಾರ್ಯದಲ್ಲಿ ತಲ್ಲೀನರಾಗಿ ಮಗಳು ಕಲಿಸಿದ ಕನ್ನಡ ಅಕ್ಷರಗಳನ್ನು ಮತ್ತೆ ತಿದ್ದಿ , ಓದಿ ಬರೆದು ಕಲಿಯಲು ಅದೆಲ್ಲಿ ಸಮಯ, ದಣಿದ ಜೀವಕ್ಕೆ ತಾಳ್ಮೆ ಹೇಗೆ ಬಂದೀತು, ನಿದ್ದೆ ಬಾರದೇ?
ನನ್ನ ಅಜ್ಜಿಯೂ ಇದ್ದ ಒಂದೇ ಸೀರೆಯನ್ನು ಹರಿದು ಎರಡು ಮಾಡಿ ದೇಹ ಮುಚ್ಚುವಷ್ಟೇ ಸುತ್ತಿಕೊಂಡು,ಒಂದನ್ನು ಒಗೆದಾಗ ಮತ್ತೊಂದು ತುಂಡನ್ನು ಧರಿಸುತ್ತಿದ್ದರಂತೆ! ಕ್ಷಮಿಸಿ,ಬಟ್ಟೆಯ ವಿಷಯ ಬಂದಾಗ ಹಿರಿಯರ ಮಾತು ನೆನಪಾಗಿ, ಆಗಿನ ಕಷ್ಟದ ಪರಿಸ್ಥಿತಿ ಕೇಳಿ ಅರಿತು ಗದ್ಗದಿತವಾಗಿ ವಿಷಯಾಂತರವಾಯಿತು. ಈ ಬಡತನ ಚಂದ್ರ ಶೇಖರ ಪೇರಾಲ್ ಅವರನ್ನೂ ಕಾಡಿತ್ತು. ಸಿರಿವಂತ ಮಕ್ಕಳು ಪ್ಯಾಂಟ್ ಧರಿಸಿ ಕಾಲೇಜಿಗೆ ಬಂದು ವಿದ್ಯೆ ಕಲಿತರೆ , ಅವರು ಪಂಚೆಯಲ್ಲೇ ಎರಡು ವರ್ಷಗಳ ಕಾಲೇಜು ಶಿಕ್ಷಣವನ್ನು ಪೂರೈಸಿದರು.
ಕಲಿಕೆಗೆ ನಿಷ್ಠನಾದವನನ್ನು ಕಲಿಕೆ ಎಂದಿಗೂ ಬಿಡದು. ಹಾಗೆಯೇ ಕಲಿಕೆ ಚಂದ್ರಶೇಖರ್ ಪೇರಾಲ್ ಅವರಿಗೆ ಕೈ ಕೊಡಲಿಲ್ಲ. ಮುಂದೆ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪದವಿ ಹಾಗೂ ಆಂಗ್ಲ ಭಾಷೆಯಲ್ಲಿ ಎಂ.ಎ. ಶಿಕ್ಷಣವನ್ನು ಪೂರೈಸಿದರು. ಅಣ್ಣಾಮಲೈ ವಿಶ್ವವಿದ್ಯಾಲಯದಿಂದ
ಬಿ.ಎಡ್ ಪದವಿ ಪಡೆದರು.
ಬಳಿಕ ತಮ್ಮ ಜೀವನದ ವೃತ್ತಿ ಜೀವನವನ್ನು ಪ್ರಾರಂಭಿಸಿದ ಪೇರಾಲ್ ಅವರು ಸೈಂಟ್ ಜಾರ್ಜ್ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಸೇರಿಕೊಂಡರು. ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಆಗ ನೆಲ್ಯಾಡಿ ಜೆಸೀ ಅಧ್ಯಕ್ಷರಾಗಿ, ಜೆಸೀಯಲ್ಲಿ ರಾಜ್ಯ ಮಟ್ಟದ ತರಬೇತುದಾರರಾಗಿ ಸುಮಾರು ನಾಲ್ಕು ನೂರಕ್ಕೂ ಹೆಚ್ಚಿನ ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ನೀಡಿರುವ ಹೆಗ್ಗಳಿಕೆ ಇವರದ್ದಾಗಿದೆ. 1993ರಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಚಾಲಕರಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 93 ಶಾಲೆಗಳಲ್ಲಿ "ಚಿಣ್ಣರ ಮೇಳ"ವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
1999ರಲ್ಲಿ ಕೆ.ಇ.ಎಸ್. ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿ ಸರಕಾರಿ ಶಿಕ್ಷಕ ವೃತ್ತಿಯ ಸೇವೆಗೆ ನೇಮಕಗೊಂಡರು. ಉತ್ತಮ ಕರ್ತವ್ಯ ನಿರ್ವಹಣೆಯೊಂದಿಗೆ ಶಾಲಾ ಭೌತಿಕ ಸೌಲಭ್ಯಗಳನ್ನು ಹೆಚ್ಚಿಸಲು ಶ್ರಮವಹಿಸಿ ದುಡಿದರು.
ತದನಂತರ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರ ಸುಳ್ಯ ಇಲ್ಲಿ ತಮ್ಮ ಕಾರ್ಯ ದಕ್ಷತೆಯನ್ನು ಮೆರೆಯಲು ಅವಕಾಶ ಸಿಕ್ಕಿತು. ಸರಕಾರದ ಎಲ್ಲಾ ಶೈಕ್ಷಣಿಕ ಯೋಜನೆಗಳಾದ ಶಿಕ್ಷಕರ ತರಬೇತಿ, ವಿಚಾರ ಸಂಕಿರಣ, ಬೀದಿ ನಾಟಕ, ಚಿಣ್ಣರ ಜಿಲ್ಲಾ ದರ್ಶನ ಪ್ರವಾಸ, ಶಾಲೆಗಳಿಗೆ ಭೌತಿಕ ಸೌಲಭ್ಯಗಳ ಒದಗಿಸುವಿಕೆ ಇವೆಲ್ಲ ಕಾರ್ಯಗಳಿಂದ ವಿಭಾಗೀಯ ಮಟ್ಟದ "ಉತ್ತಮ ಸಮನ್ವಯಾಧಿಕಾರಿ" ಎಂದು ಗುರುತಿಸಲ್ಪಟ್ಟ ಇವರು ಆ ಪ್ರಶಸ್ತಿಗೆ ಭಾಜನರಾದರು. ಶಿಕ್ಷಕ ಸ್ನೇಹಿ ಅಧಿಕಾರಿ ಎಂದು
ಗುರುತಿಸಲ್ಪಟ್ಟ ಇವರು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ, ಸಮಾಜ ಕಲ್ಯಾಣ ಅಧಿಕಾರಿಗಳಾಗಿ, ಅಕ್ಷರ ದಾಸೋಹದ ಸಹಾಯಕ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿ ಪಾಠಗಳಲ್ಲಿಯೂ, ಆಡಳಿತ ಮಟ್ಟದಲ್ಲಿಯೂ ತಾನೇನು ಕಮ್ಮಿ ಇಲ್ಲದೆ ದುಡಿದು ಸೈ ಎನಿಸಿಕೊಂಡವರು. ಇವರು ಕಾರ್ಯ ನಿರ್ವಹಿಸಿದ ಕಛೇರಿಗಳಲ್ಲಿ ವರ್ಲಿ ಅಲಂಕಾರ, ಪೈಂಟಿಂಗ್, ಉದ್ಯಾನ, ಭಾವಚಿತ್ರ ಸಹಿತ ಸೌಂದರೀಕರಣಗೊಳಿಸಿ ಅಂದಕ್ಕೂ ಆದ್ಯತೆ ನೀಡಿರುವ ಅಧಿಕಾರಿ ಇವರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಹಾಗೂ ಗೌರವ ಕಾರ್ಯದರ್ಶಿಗಳಾಗಿ ತಾಲೂಕು ಮಟ್ಟದ ಆರು ಕನ್ನಡ ಸಾಹಿತ್ಯ ಸಮ್ಮೇಳನಗಳೇ ಅಲ್ಲದೆ ತುಳು ಸಾಹಿತ್ಯ ಸಮ್ಮೇಳನ, ಅರೆಭಾಷೆ ಸಾಹಿತ್ಯ ಸಮ್ಮೇಳನ, ಕೆವಿಜಿ ಸುಳ್ಯ ಹಬ್ಬ ಕಾರ್ಯಕ್ರಮಗಳನ್ನೂ ಸುಳ್ಯದಲ್ಲಿ ಸಂಘಟಿಸಿ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಜವಾಬ್ದಾರಿ ಹೊತ್ತ ಇವರ ಸಾಧನೆ ಅದ್ಭುತವಾದುದು. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಗುತ್ತಿಗಾರು, ದುಗ್ಗಲಡ್ಕ, ಮಂಡೆಕೋಲು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನ ಸುಬ್ರಹ್ಮಣ್ಯದಲ್ಲಿ ನಡೆದಾಗ ಅಲ್ಲಿನ ವಿಚಾರಗೋಷ್ಠಿಗಳಲ್ಲಿ ಪ್ರಬಂಧಗಳನ್ನು ಕೂಡಾ ಮಂಡಿಸಿ ಜೈ ಎನಿಸಿಕೊಂಡವರು ಇವರು.
ಶ್ರೀಯುತ ಚಂದ್ರಶೇಖರ ಪೇರಾಲ್ ಅವರು ಬರೆದಿರುವ "ಅರಿವು" ಮತ್ತು " ಮುದ್ದು ಮಗು ನಿನ್ನ ನಗು" ಎಂಬ ಎರಡು ಪುಸ್ತಕಗಳೂ ಪ್ರಕಟಗೊಂಡು ಸಾರಸ್ವತ ಲೋಕಕ್ಕೆ ಅರ್ಪಣೆಯಾಗಿವೆ. ಮೂರು ಪುಸ್ತಕಗಳನ್ನು ಪ್ರಕಾಶಕರಾಗಿ ಹೊರ ತಂದಿರುವುದಲ್ಲದೆ, ನಾಲ್ಕು ಸ್ಮರಣ ಸಂಚಿಕೆಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸಾಹಿತ್ಯಾಸಕ್ತ ಶಿಕ್ಷಕರ ಬಳಗವನ್ನು "ಸುವಿಚಾರ ಸಾಹಿತ್ಯ ವೇದಿಕೆ" ಎಂಬ ಹೆಸರಿನಲ್ಲಿ ಒಂದಾಗಿಸಿ, ಅದರ ಅಧ್ಯಕ್ಷರಾಗಿ ಕಳೆದ ಆರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹತ್ತಾರು ಬೇಸಿಗೆ ಶಿಬಿರಗಳು, ಪ್ರತಿ ವರ್ಷ ಏಳು ದಿನಗಳ ಸಾಪ್ತಾಹಿಕ ಸಾಹಿತ್ಯಿಕ ಹಬ್ಬ, ಕನ್ನಡ ರಾಜ್ಯೋತ್ಸವವನ್ನು ಸಾಹಿತ್ಯ ಸಂಭ್ರಮದ ಮೂಲಕ ಆಚರಣೆ, ಪುಸ್ತಕ ಬಿಡುಗಡೆ, ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ನಡೆಸುತ್ತಾ ಇದುವರೆಗೆ ಐದಾರು ಸಾವಿರ ವಿದ್ಯಾರ್ಥಿಗಳಿಗೆ ಹಾಗೂ ಉದಯೋನ್ಮುಖ ಶಿಕ್ಷಕರಿಗೂ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಒದಗಿಸಿ ಕೊಟ್ಟಿದ್ದಾರೆ.
ಅವಿಭಜಿತ ಸುಳ್ಯ ತಾಲೂಕಿನಲ್ಲಿ ಮೊತ್ತ ಮೊದಲ ಬಾರಿಗೆ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿದ ಕೀರ್ತಿ ಇವರದ್ದು. ವಿವಿಧ ಸಾಹಿತ್ಯ ಪ್ರಕಾರಗಳನ್ನು ಮಕ್ಕಳಿಗೆ ಕಲಿಸಲು ಪುರಾಣ, ಗಮಕ, ಜನಪದ, ಯಕ್ಷಗಾನ, ಮಹಿಳಾ, ಅರೆಭಾಷೆ, ತುಳು ಹಾಗೂ ಚಿತ್ರಕಲಾ ಸಂಭ್ರಮ ಕಾರ್ಯಕ್ರಮಗಳನ್ನು ನಡೆಸಿ, ಹಲವು ಪ್ರತಿಭೆಗಳನ್ನು ಬೆಳಕಿಗೆ ತಂದವರು ಇವರು.
ದಾನಿಗಳ ದಾನಿಗಳ ಸಹಕಾರದಿಂದ ಸತತವಾಗಿ ಆರು ವರ್ಷಗಳ ಕಾಲ ಸುಳ್ಯ ತಾಲೂಕಿನಾದ್ಯಂತ "ಶಾಲಾ ಹಸ್ತಪ್ರತಿ" ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳ ಸಾಹಿತ್ಯ ಕೃಷಿ ಹಾಗೂ ಕಲೆಗೆ ಪ್ರೋತ್ಸಾಹ ನೀಡಿರುವುದೇ ಅಲ್ಲದೇ, ರಾಜ್ಯದಲ್ಲಿಯೇ ವಿನೂತನ ರೀತಿಯ "ಅಕ್ಷರ ಕೈತೋಟ" ಸ್ಪರ್ಧೆಗಳನ್ನು ನಡೆಸಿ, ಸಮಾಜದ ಮೆಚ್ಚುಗೆ ಗಳಿಸಿದವರು ಇವರು. ರೋಟರಿ ಕ್ಲಬ್ ಸದಸ್ಯರಾಗಿ ಅದರೊಂದಿಗೆ ಸಮಾಜದ ಬೇಡಿಕೆ ಅರಿತು, ಸುಮಾರು ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕರಿಹಲಗೆ, ಪೀಠೋಪಕರಣಗಳನ್ನು ಒದಗಿಸಿ ಕೊಟ್ಟಿರುತ್ತಾರೆ.
ಇದರ ಜೊತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಕ್ಷೇತ್ರದ ಸ್ವಚ್ಛತೆ, ಭಕ್ತಾದಿಗಳಿಗೆ ತ್ವರಿತ ಹಾಗೂ ಪಾರದರ್ಶಕ ಸೇವೆ ನೀಡುವಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಾನು ಮುಖ್ಯ ಶಿಕ್ಷಕರಾಗಿದ್ದ ಸರಕಾರಿ ಪ್ರೌಢಶಾಲೆ ಎಲಿಮಲೆ ಇಲ್ಲಿ ಕೇವಲ ಐದು ತಿಂಗಳಿನಲ್ಲಿ ಇಡೀ ಶಾಲೆಗೆ ಸುಣ್ಣ ಬಣ್ಣದೊಂದಿಗೆ, ವರ್ಲಿ ಅಲಂಕಾರ, ವಿವಿಧ ರಾಜ್ಯಗಳ ಸಾಂಪ್ರದಾಯಿಕ ಚಿತ್ರಗಳ ರಚನೆ, ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ, ಸಾಧನಾ ಶೃಂಗ ಕಾರ್ಯಕ್ರಮ, ಶಾಲಾ ವಾರ್ಷಿಕೋತ್ಸವ, ಶೈಕ್ಷಣಿಕ ಪ್ರವಾಸ, ಚಾರಣ, ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಶಾಲಾ ಕೈತೋಟ ರಚನೆ, ಅಟಲ್ ಟಿಂಕರಿಂಗ್ ಲ್ಯಾಬ್, ಸ್ಟೂಡೆಂಟ್ ಪೊಲೀಸ್ ಕ್ಯಾಡೆಟ್, ಆಟಿ ಉತ್ಸವ, ಹಣ್ಣಿನ ಗಿಡ ನೆಡುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಶಾಲಾ ಶಿಕ್ಷಕರು, ಎಸ್. ಡಿ.ಎಂ.ಸಿ. ಪೋಷಕರು ಹಾಗೂ ವಿದ್ಯಾರ್ಥಿಗಳ ಸಹಕಾರಗಳೊಂದಿಗೆ ಆಯೋಜಿಸಿ, ಇದೀಗ ಈ ಶಾಲೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ.
ಶಿಕ್ಷಕಿಯಾಗಿರುವ ಶ್ರೀಮತಿ ಉಷಾ ಪೇರಾಲ್ ಇವರ ಧರ್ಮಪತ್ನಿ. ಒಂದು ಗಂಡು ಹಾಗೂ ಒಬ್ಬ ಹೆಣ್ಣು ,ಮಾನಸ, ಗೌತಮ್ ಇಬ್ಬರು ಮಕ್ಕಳ ಜೊತೆಗಿನ ಸುಂದರ ಸಂಸಾರ ಇವರದು. ಮಗಳು ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿರುವರು ಮತ್ತು ಮಗ ಪಿಯುಸಿ ಕಲಿಯುತ್ತ ಮುಂದೆ ಅವರ ಜೀವನವೂ ಉತ್ತಮವಾಗಿ ಸಾಗಲಿ ಎಂಬ ಶುಭ ಹಾರೈಕೆಗಳು.
ಶ್ರೀಯುತ ಚಂದ್ರಶೇಖರ ಪೇರಾಲ್ ಸರ್ ಅವರ ಈ ಸಾಮಾಜಿಕ ಉದ್ಧಾರದ ಕಾರ್ಯಗಳು ಹೀಗೇ ಮುಂದುವರಿಯಲಿ, ದೇವರು ಅವರ ನಿವೃತ್ತ ಜೀವನವನ್ನು ಚೆನ್ನಾಗಿ ಇಟ್ಟಿರಲಿ, ಹೊಸ ಬದುಕು ಹೊಸ ಸಂತಸವನ್ನು ಕೊಡಲಿ, ಇವರ ಕಲಿಕೆ ಹಾಗೂ ಅನುಭವಗಳು ಸಮಾಜಕ್ಕೆ ಇನ್ನಷ್ಟು ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನೀಡುವಂತಾಗಲಿ ಎನ್ನುವ ಶುಭ ಹಾರೈಕೆಗಳೊಂದಿಗೆ,
ಸರ್, ನೀವು ನಮಗೆಲ್ಲ ಹಿರಿಯರು, ಗುರುಗಳೂ ಆಗಿರುವಿರಿ. ನೀವು ಸರಕಾರಿ ನೌಕರಿಯಿಂದ ಮಾತ್ರ ನಿವೃತ್ತಿ ಹೊಂದುತ್ತಿರುವಿರಿ, ಶಿಕ್ಷಕರೆಂದಿಗೂ ಶಿಕ್ಷಕರೇ. ನಿಮ್ಮ ವೃತ್ತಿ ಜೀವನದ ಅನುಭವಗಳು, ಜ್ಞಾನ ಸದಾ ಎಲ್ಲರಿಗೂ ದಾರಿ ದೀಪವಾಗಿ ಬೆಳಗಲಿ ಎಂದು ಎಲ್ಲಾ ಶಿಕ್ಷಕ ವೃಂದದ ಪರವಾಗಿ ಆಶಿಸುತ್ತಾ, ಶುಭ ಕೋರುತ್ತಾ,
@ಪ್ರೇಮ್@
01.12.2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ