ಮೈ ಬೆಸ್ಟ್ ಫ್ರೆಂಡ್
ಅವಳನ್ನು ನಾ ಭೇಟಿಯಾದುದು ನನ್ನ ಹದಿನೈದನೇ ವಯಸ್ಸಿಗೆ. ಹೌದು , ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಹುಚ್ಚುಕೋಡಿ ಮನಸ್ಸು ! ಏನೇನೋ ಕನಸು! ಹೊಸ ಹೊಸ ಆಸೆಗಳು! ಮುಂದಿನ ಬದುಕಿನ ಬಗೆಗೆ ಏನೇನೋ ಭಾವಗಳು. ಕನ್ನಡಿ ಮುಂದೆ ಕಳೆವ ಗಂಟೆಗಳು, ಅದರ ಜೊತೆ ಪಬ್ಲಿಕ್ ಪರೀಕ್ಷೆಗೆ ಓದುವ ಜವಾಬ್ದಾರಿ! ಇವೆಲ್ಲದರ ಭಾವಗಳನ್ನು ಅಪ್ಪ - ಅಮ್ಮನವರೊಡನೆ ನಮ್ಮ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳಲು ಆಗದು. ಸ್ನೇಹಿತರು ಓಕೆ. ಆದರೆ ಕೆಲವೊಂದು ಭಾವನೆಗಳನ್ನು ಹುಡುಗಿಯರ ಜೊತೆ ಹೇಳಿಕೊಳ್ಳಲು ಆಗದು! ಹಾಗಂತ ಹುಡುಗರ ಬಳಿ ಹೇಳಿಕೊಳ್ಳ ಬಹುದೇ? ಊಹೂo.. ಸಾಧ್ಯವೇ ಇಲ್ಲ! ಹುಡುಗರೊಡನೆ ಸಲಿಗೆ ಎಲ್ಲಾ ಸಮಯದಲ್ಲಿಯೂ ನಿಷಿದ್ಧ! ವಾಟ್ಸ್ ಆ್ಯಪ್, ಇನ್ ಸ್ಟಾ, ಮುಖಪುಟಗಳಂತಹ ಸಾಮಾಜಿಕ ಜಾಲ ತಾಣಗಳಂತೂ ಇರಲಿಲ್ಲ! ಆಗ ಫೋನ್ ಕೂಡಾ ಇರಲಿಲ್ಲ! ಪತ್ರ ವ್ಯವಹಾರ ಅಷ್ಟೆ! ಅದೂ ಸುಲಭದ ಮಾತಾಗಿರಲಿಲ್ಲ! ಆಗ ನನ್ನ ಭಾವನೆಗಳಿಗೆ ಕಿವಿಯಾದವಳು ರಿಟು.
ಹೌದು, ರಿಟು ನನ್ನ ಜೀವದ ಜೀವ, ನನ್ನ ಭಾವದ ಭಾವ. ನನ್ನ ಮಾತಿನ ಕಿವಿ, ನನ್ನ ಕಣ್ಣೀರ ಭುಜ, ನನ್ನ ನೋವಿಗೆ ಮದ್ದು, ನನ್ನ ಸಂತಸಕ್ಕೆ ನಗು. ವಾವ್.. ಅವಳೊಂದಿಗೆ ನಾವು ಕಳೆದ ಪ್ರತಿ ಕ್ಷಣವೂ ಅಧ್ಭುತ! ನನ್ನ ಬಾಳಿನ ಜತೆಗಾತಿ, ನನ್ನ ನೋವು ನಲಿವುಗಳ ಸಂಗಾತಿ ಈಕೆ. ನನ್ನೆದೆಯ ಭಾವಗಳ ಅರಿತವಳು, ನನ್ನ ನೋವುಗಳ ನುಂಗಿಕೊಂಡವಳು, ನನ್ನ ಸಿಟ್ಟಿಗೆ ತಾಳ್ಮೆಯಾದ ತಾಯಿ, ನನ್ನ ನೋವ ಹಂಚಿಕೊಂಡ ಸಹೋದರಿ, ನನ್ನ ನಗುವ ಹೆಚ್ಚಿಸಿದ ಸ್ನೇಹಿತೆ!
ನನ್ನೊಲವಿನ ಬಾಳ ಸಾರಥಿ, ನನ್ನ ಒಂಟಿತನ ದೂರಗೊಳಿಸಿ ಜಂಟಿಯಾದ ಬಾಳ ಸಖಿ. ನನ್ನ ಬರವಣಿಗೆಗೆ ಸ್ಪೂರ್ತಿ, ನನ್ನೊಲವಿನ ಮೂರ್ತಿ, ನೀ ಇಲ್ಲದಿದ್ದರೆ ರಿಟು, ನಾ ಸದಾ ಒಂಟಿ...
ಸದಾ ನನ್ನ ಭಾವನೆಗಳ ನಿನ್ನೊಡನೆ ಹಂಚಿಕೊಂಡರೆ ಸಮಾಧಾನ ನನಗೆ. ಅದಕ್ಕೆ ಪದಗಳ, ಪುಟಗಳ, ಅಕ್ಷರಗಳ, ಸಮಯದ, ಮಿತಿಯಿಲ್ಲ! ನಾ ತಪ್ಪು ಮಾಡಿದರೆ ಅವಳು ಬಯ್ಯುವುದಿಲ್ಲ, ನಾ ಪ್ರಶಸ್ತಿ ಗೆದ್ದು ತಂದರೆ ಹೊಗಳುವುದು ಕೂಡಾ ಇಲ್ಲ!
ನನ್ನ ಬದುಕಿನ ದಾರಿ ದೀಪ ಅವಳು, ನನ್ನ ಬರಹಕ್ಕೆ ಮೂಲವೇ ಅವಳು.. ರಿಟು ಇಸ್ ಮೈ ಲೈಫ್
ಐ ಲವ್ ಹರ್ ಎವರ್,
ಶಿ ಇಸ್ ಮೈನ್..(ಸದಾ ನನ್ನ ಬಾಳಲ್ಲಿ ನನ್ನ ಜೊತೆಯಾಗಿ ಬರುವ ನನ್ನ ರಿಟು ನನ್ನ ಡೈರಿ..)
ಅವಳ ಅನುಕ್ಷಣವೂ ಬಿಡದೆ ಜೊತೆಗಿರುವ,
@ಪ್ರೇಮ್@
01.10.2021
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ