ಶನಿವಾರ, ಸೆಪ್ಟೆಂಬರ್ 10, 2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -145

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -145

ಮನೆಯಲ್ಲಿ ಪ್ರತಿ ಭಾನುವಾರ ಹೆಚ್ಚಿನ ಮಹಿಳೆಯರ ಕೆಲಸ ಶುಚಿತ್ವ. ಇಡೀ ವಾರ ಬಾಕಿಯಾದ ಕೆಲಸಗಳನ್ನು ಹಾಗೂ ಮನೆಯ ಅಚ್ಚುಕಟ್ಟುತನವನ್ನು ಅಂದು ಮಾಡುವ ದಿನ. ಆ ದಿನ ಯಾರಾದರೂ ನೆಂಟರು ಬಂದರೆ ಮುಗಿಯಿತು, ಆ ದಿನದ ಕೆಲಸ ಬಾಕಿ ಆದ ಹಾಗೆಯೇ! ಅಥವಾ ಆ ದಿನ ಎಲ್ಲಾದರೂ ಏನಾದರೂ ಕಾರ್ಯಕ್ರಮ ಇದ್ದರೂ ಅದೇ ಕಥೆ. ಬದುಕಿನಲ್ಲಿ ಒಂದು ವೀಕೆಂಡ್  ಸ್ವಲ್ಪ ಎಡವಟ್ಟಾದರೂ ಇಡೀ ವಾರ ಸರಿ ಇರುವುದಿಲ್ಲ. ಹಾಗೆಯೇ ಜೀವನ ಕೂಡಾ. ಒಂದು ಹೆಜ್ಜೆ ತಪ್ಪಿದರೂ ಕಷ್ಟವೇ. 

    ನಾವೆಲ್ಲ ನಮ್ಮನ್ನು ಬೇರೆಯವರು ಪ್ರೀತಿಸಲಿ, ಗುರುತಿಸಲಿ, ನಾವು ಮಾಡಿದ ಕೆಲಸಕ್ಕೆ ಪರರು ಭೇಷ್ ಅನ್ನಲಿ, ನಮ್ಮ ಕಾರ್ಯ ಗುರುತಿಸಲಿ, ಬೆನ್ನು ತಟ್ಟಲಿ, ಹೊಗಳಲಿ ಅಂತೆಲ್ಲಾ ಅಂದುಕೊಳ್ಳುತ್ತೇವೆ. ನಮ್ಮ ಯೂ ಟ್ಯೂಬ್ ಚಾನೆಲ್ ಎಲ್ಲರೂ ನೋಡ ಬೇಕು, ಲೈಕ್ ಸಬ್ಸ್ಕ್ರೈಬ್ ಮಾಡಬೇಕು ನಮಗೆ. ನಮ್ಮ ವೀಡಿಯೋವನ್ನು ಎಲ್ಲರೂ ಶೇರ್ ಮಾಡಬೇಕು! ಅದರಲ್ಲೂ ಕಾಂಪಿಟೇಷನ್! ಹಾಗಾಗಿ ಕಮೆಂಟ್ ಗಳು, ಲೈಕುಗಳು ಬಾಯಿ ಬಿಟ್ಟು ಎಲ್ಲರ ಬಳಿ ಬಿಕ್ಷೆ ಬೇಡಿ ಕೇಳುವ ಹಾಗೆ ಆಗಿದೆ ಇಂದು! ಕೆಲವರು ಅದನ್ನೇ ಕಾಯಕವಾಗಿ ಮಾಡಿಕೊಂಡು ತಮ್ಮ ವ್ಲಾಗ್ ಗಳಲ್ಲೇ ಜಾಹೀರಾತು ನೀಡಿ ಬಹಳಷ್ಟು ಗಳಿಸುತ್ತಾರೆ ಅಲ್ಲವೇ? ಯಾರ್ದೋ ಲೈಕು, ಕಮೆಂಟು, ಶೇರು, ಇನ್ಯಾರದೋ ಇನ್ ಕಂ. ಇದಿಷ್ಟೇ ಬದುಕು. ಕಷ್ಟದಲ್ಲಿ ಬದುಕಿ ತೋರಿಸೋದು ಮುಖ್ಯ. ಗುರಿಯೆಡೆ ನಡೆದು, ಗುರಿ ಮುಟ್ಟುವುದರ ಜತೆಗೆ ಯಾರಿಗೂ ತೊಂದರೆ ಕೊಡದ ಹಾಗೇ ಬದುಕಬೇಕು ಎಂಬುದೇ ಎಲ್ಲಾ ಧರ್ಮಗಳ ಮೂಲ ತತ್ವ ಅಲ್ಲವೇ? ಸಾಧ್ಯವಾದರೆ ಸಹಾಯ ಮಾಡಿ, ಇಲ್ಲದೆ ಇದ್ದರೆ ಸುಮ್ಮನಿದ್ದು ಬಿಡಿ. ಮಾತನಾಡುವುದಾದರೆ ನಿಮ್ಮ ಬಗ್ಗೆ ಮಾತನಾಡಿ. ಪರರ ಬಗ್ಗೆ , ಅವರ ವರ್ತನೆ, ಅವರ ಬಟ್ಟೆ ಬರೆ, ಅವರ ಫೋನ್ ಕಾಲ್, ಅವರ ಸುತ್ತಾಟ, ಅವರ ಶಾಪಿಂಗ್, ಅವರ ಖರ್ಚಿನ ತಲೆಬಿಸಿ ಅವರಿಗೆ ಇರುತ್ತದೆ. ನಿಮಗೆ ಯಾಕೆ ತಲೆ ಬಿಸಿ ಮಾಡುವ ತೊಂದರೆ? ಎದುರು ಮನೆಗೆ ನಿತ್ಯ ನೆಂಟರು ಬಂದರೆ ಅವರೆಲ್ಲರನ್ನೂ ಪ್ರೀತಿಯಿಂದ ಸುಧಾರಿಸುವವರು  ಅವರು. ನಿಮಗೇನು ತೊಂದರೆ? ಪಕ್ಕದ ಮನೆಯವಳ ಮಗ ಓದದೇ ಇದ್ದರೆ ಬಿಡಲಿ, ಅದರ ಕಷ್ಟ ಅವರಿಗೆ ಗೊತ್ತು, ನಿಮಗೆ ಯಾಕೆ ಸಂಕಟ, ಬೇಕಿದ್ದರೆ ಕರೆದು ಸ್ವಲ್ಪ ಹೇಳಿಕೊಡಿ. ಅದರ ಬದಲು ಗೇಲಿ ಮಾಡಿ ನಗುವುದಲ್ಲ. 

ಮೇಲಿನ ಮನೆ , ಕೆಳಗಿನ ಮನೆ, ಒರಗಿತ್ತಿ, ನಾದಿನಿಯ ಅತ್ತೆ, ಅತ್ತೆ ಮಗಳ ಅತ್ತಿಗೆ ಇವರು ಹೇಗಿದ್ದರೂ ನಿಮಗೇನು? ನಿಮ್ಮ ಜೀವನ ಚೆನ್ನಾಗಿದೆಯೇ? ನಿಮ್ಮ ಸಹೋದ್ಯೋಗಿ ಕಷ್ಟ ಪಡುತ್ತಿದ್ದಾರೆ ಎಂದು ಗೊತ್ತಾದರೆ ಸಾಧ್ಯವಾದರೆ ಸಹಾಯ ಮಾಡಿ ಇಲ್ಲದೆ ಇದ್ದರೆ ನಾಲ್ಕು ಸಾಂತ್ವನದ ನುಡಿಗಳನ್ನಾದರೂ ಹೇಳಿ. ಅದರ ಬದಲಾಗಿ ಅವರು ದುಡ್ಡಿಗೆ ತೊಂದರೆ ಎದುರಿಸುತ್ತಿದ್ದಾರೆ ಎಂದರೆ ಬಡವಿ ಎಂದು ಕೀಳಾಗಿ ನೋಡದಿರಿ. ಅಗತ್ಯ ಬಿದ್ದಾಗ ಸಹಾಯ ಮಾಡಿದವರನ್ನು ಜನ ಮರೆತರೂ ದೇವರು ಮರೆಯೋಲ್ಲವಂತೆ! ನೀವು ಮಾಡಿದ ಪಾಪ ಪುಣ್ಯಗಳ ಬುತ್ತಿಯನ್ನೇ ನಾಡಿದ್ದು ನಾಲ್ಕು ಜನರ ಹೆಗಲ ಮೇಲೆ ಸಾಗುವಾಗ ಹೊತ್ತುಕೊಂಡು ಹೋಗ್ಲಿಕ್ಕೆ ಇರೋದು. ಅದು ನೆನಪಿರಲಿ.

ನಾವು ಬೇರೆಯವರ ಮನ ನೋಯಿಸಿದರೆ ನಮ್ಮ ಮಕ್ಕಳು, ಮೊಮ್ಮಕ್ಕಳ ಕಾಲಕ್ಕೂ ಆ ಶಾಪ ಹೋಗುವುದಿಲ್ವ0ತೆ. ಪಾಪ ಪುಣ್ಯಗಳ ನೀವು ನಂಬದೆ ಇದ್ದರೂ ಸರ್ವರಿಗೂ ಒಳಿತಾಗಬೇಕು ಎಂದು ನಾವು ನಂಬುತ್ತೇವೆ, ಬೇಡುತ್ತೇವೆ, ದೇವರಲ್ಲಿ ಕೇಳುತ್ತೇವೆ ಅಲ್ಲವೇ? ದೇವರನ್ನೇ ನಂಬದವನೂ ಕೂಡಾ ಬಿದ್ದರೆ ಅಮ್ಮಾ ಎನ್ನುವನು. ಆಕೆಯೂ ದೇವರ ಸ್ವರೂಪವೇ ಅಲ್ಲವೇ? 

ಇಷ್ಟೆಲ್ಲಾ ಬಯಸುವ ನಾವು ಕಾರಣ ಇಲ್ಲದೆ ಅದೆಷ್ಟು ಜನರನ್ನು ನಿಷ್ಕಲ್ಮಶವಾಗಿ ಪ್ರೀತಿಸುತ್ತೇವೆ? ಅದೆಷ್ಟು ಜನರಿಂದ ವಂಚನೆಗೆ ಒಳಗಾಗಿದ್ದೇವೆ! ಅದೆಷ್ಟು ಜನರನ್ನು ನಂಬಿ ಮೋಸ ಹೋಗಿ ಅವರ ನಿಜ ಬಣ್ಣ ಬಯಲಾದ ಮೇಲೆ ಅವರಿಗೆ ಶಾಪ ಹಾಕ್ತಾ ಕಾಲ ಕಳೆಯುತ್ತೇವೆ? ಯಾರಿಗೆ ಗೊತ್ತು ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಅವರ ಋಣ ಇಟ್ಟುಕೊಂಡು ಸತ್ತು ಹೋಗಿರಬಹುದು, ಅಥವಾ ಅವರ ಕೈಯಲ್ಲಿ ಸಾಲ ಪಡೆದು ಕೊಡದೆ ಹೋಗಿರಬಹುದು, ಅಪಘಾತ ಮಾಡಿ ಗಾಡಿ ಗುದ್ದಿ ಹೇಳದೆ ಕೇಳದೆ ಓಡಿರಬಹುದು. ಕಾಲಾಯ ತಸ್ಮಯೇ ನಮಃ!
ನಮ್ಮ ಬೆನ್ನು ನಮಗೆ ಕಾಣದು. ನಮ್ಮ ನಾಳೆಗಳ ಬಗ್ಗೆಯೂ ನಮಗೆ ತಿಳಿಯದು. ಉಪ್ಪು ತಿಂದವ ನೀರು ಕುಡಿಯಲೇ ಬೇಕು, ಕೆಸರಿಗೆ ಕೈ ಹಾಕಿದವ ಕೈ ತೊಳೆಯಲೇ ಬೇಕು. ಇಲ್ಲದೆ ಹೋದರೆ ಅವನ ಆರೋಗ್ಯ ಹಾಳಾಗುವುದು ಖಚಿತ. ನೀವು ಬೇರೊಬ್ಬರ ಹಣ ತಿಂದು ಇಂದು ನಕ್ಕು ನಲಿದರೆ ಅವನ ಅಳು ಮುಂದೊಂದು ದಿನ ನಿಮ್ಮ ಆರೋಗ್ಯಕ್ಕೇ ಕುತ್ತು ತರುತ್ತದೆ. ನೂರು ರೂಪಾಯಿ ನೀವು ಇತರರಿಗೆ ಮೋಸ ಮಾಡಿದರೆ ನಿಮ್ಮ ಸಾವಿರ ರೂಪಾಯಿ ಡಾಕ್ಟರ್ ಪಾಲಾಗುತ್ತದೆ ನೆನಪಿರಲಿ. ನ್ಯಾಯ, ಸತ್ಯ, ಅಹಿಂಸೆ, ನಂಬಿಕೆ ಕಡಿಮೆ ಆದಾಗಲೇ ಕರೋನ ವೈರಸ್ ಅಟ್ಟಹಾಸಕ್ಕೆ ಪ್ರಾರಂಭಿಸಿ ಎಲ್ಲರನ್ನೂ ಕಷಾಯ ಕುಡಿಸಿದ್ದು, ಮರೆಯದಿರಿ. ನೀವು ಇಂದು ಮಾಡಿದ ಪಾಪ ನಿಮ್ಮ ತಲೆಯ ಮೇಲಿನ ತೂಗೂಗತ್ತಿ ಆಗುವುದರಲ್ಲಿ ಎರಡು ಮಾತಿಲ್ಲ. 

ಬದುಕಿ, ಬದುಕಲು ಬಿಡಿ. ಕಷ್ಟ ಪಡಿ, ಚಿಂತೆ ಆ ದೇವನಿಗೆ ಬಿಡಿ.ಆಯುಷ್ಯ ಮುಗಿದು  ಸಾಯುವವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವೇ ಇಲ್ಲ. ಒಂದು ವೇಳೆ ಹಾಗಿದ್ದಿದ್ದರೆ ಯಾವ ಆಸ್ಪತ್ರೆಯಿಂದಲೂ ಮೃತದೇಹ ಹೊರ ಬರುತ್ತಿರಲಿಲ್ಲ. ಎಲ್ಲೆ ಹೋದರೂ ಜನರಿಗೆ ಪ್ರೀತಿ, ಸಹಾಯ ಹಸ್ತ ತೋರಿಸುವುದರಲ್ಲಿ ನಾವು ಒಂದು ಹೆಜ್ಜೆ ಮುಂದಿರೋಣ. ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ