ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -147
ನಾಳೆ ಶಿಕ್ಷಕರ ದಿನಾಚರಣೆ. ನಮ್ಮ ದೇಶದಲ್ಲಿ ಮಾಜಿ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಾ ಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವೆಂದು ಆಚರಿಸುವ ಬಗ್ಗೆ ನಿಮಗೆ ತಿಳಿದಿದೆ. ಈ ವರ್ಷ ಅವರ 135ನೇ ಜಯಂತಿಯ ಆಚರಣೆ. ಈ ಶುಭ ಸಂಧರ್ಭದಲ್ಲಿ ನನಗೆ ಕಲಿಸಿ, ನನ್ನನ್ನು ಈ ಹಂತಕ್ಕೆ ತಂದ ನನ್ನೆಲ್ಲಾ ಅಂಗನವಾಡಿ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಕಾಲೇಜು, ಸ್ನಾತಕೋತ್ತರ ಪದವಿವರೆಗಿನ ಎಲ್ಲಾ ಶಿಕ್ಷಕಿಯರು, ಶಿಕ್ಷಕರು, ಬೋಧಕರು, ಉಪನ್ಯಾಸಕರು ಪ್ರಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಭಾಷಾ ಶಿಕ್ಷಕರು, ಕೋರ್ ಶಿಕ್ಷಕರು, ಸಂಗೀತ ಶಿಕ್ಷಕರು, ಕಲಾ ಕ್ರಾಫ್ಟ್ ಶಿಕ್ಷಕರು, ಟೈಲರಿಂಗ್ ಶಿಕ್ಷಕರು, ಪ್ರಾಚಾರ್ಯರು, ಸಿ ಆರ್ ಪಿ ಗಳು, ಬಿ ಆರ್ ಪಿ ಗಳು, ಪ್ರಾಂಶುಪಾಲರು, ಬಿ ಇ ಓ, ಡಿ ಡಿ ಪಿ ಐ ಯವರು , ಹಾಗೂ ಶಿಕ್ಷಣ ಇಲಾಖೆಗೆ ತಮ್ಮ ಜೀವನವನ್ನು ಮುಡಿಪಾಗಿತ್ತು, ಸದಾ ದುಡಿಯುತ್ತಿರುವ ಹಿರಿಯ ಕಿರಿಯ ಹಂತದ ಎಲ್ಲಾ ಬೋಧಕ ವೃಂದಕ್ಕೆ ನನ್ನ ಹೃದಯಾಂತರಾಳದ ನಮನಗಳು.
"ವರ್ಣ ಮಾತ್ರಮ್ ಕಳಿಸಿದಾತಮ್ ಗುರು " ಎಂಬ ಮಾತಿದೆ. ಆತ ಒಂದಕ್ಷರ ಕಳಿಸಿದರೂ ಗುರುವೇ. ಅವನ ಕಾಲ ಮಟ್ಟಕ್ಕೆ ಇಳಿದರಷ್ಟೇ ನಾವು ಕಲಿಯಬಲ್ಲೆವು, ಬೆಳೆಯಬಲ್ಲೆವು. ಅದಕ್ಕೇ ದಾಸರು ಹೇಳಿದ್ದು, "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.." ಎಂದು. ಈಗೀಗ "ಶಾಲೆಯಲ್ಲಿ ಏನೇ ತಪ್ಪು ಮಾಡಿದರೂ ಶಿಕ್ಷೆ ಕೊಡುವ ಅಧಿಕಾರ ಶಿಕ್ಷಕರಿಗೆ ಇಲ್ಲ "ದ ಕಾರಣ ಶಿಕ್ಷಕ ಸಫರರ್. ಈ ಕೆಲಸವನ್ನು ಪೊಲೀಸ್ ಡೆಪಾರ್ಟ್ಮೆಂಟ್ ಮಾಡುತ್ತಿದೆ. ಇದು ಕೆಟ್ಟದು, ಹೀಗೆ ಮಾಡಿದರೆ ಇದು ಒಳ್ಳೆಯದು, ಇದು ಜೀವನದ ಸರಿಯಾದ ಮಾರ್ಗ ಎಂದು ಕೇಳದ ಆ ವಯಸ್ಸಿನ ಮಕ್ಕಳಿಗೆ ಒಂದೆರಡು ಕೊಟ್ಟು ಬುದ್ಧಿ ಕಲಿಸುವ ಕಾಲ ಹೋಗಿದೆ. ಈಗ ಏನಿದ್ದರೂ ವಿದ್ಯಾರ್ಥಿ ಸ್ನೇಹಿ ಶಿಕ್ಷಣ. ಮಗು ಏನೇ ಮಾಡಿದರೂ ಅದು ಸರಿ. ಶಿಕ್ಷಕರು ಅವನ ಮಟ್ಟಕ್ಕೆ ಇಳಿಯಬೇಕು. ಶಿಕ್ಷಕರಿಗೆ ಗೊತ್ತಿರುವುದನ್ನು ಹೇಳಿ ಕೊಡುವುದಲ್ಲ, ಅವನಿಗೆ ಬೇಕಾದ್ದನ್ನು ಕಲಿಸಿ ಕೊಡುವುದೂ ಅಲ್ಲ, ಅವನೇ ಕಲಿಯಬೇಕು, ಶಿಕ್ಷಕರು ಗೈಡ್ ಆಗಿ ಸಹಕರಿಸಬೇಕು. ಕಲಿಯುವ ಕೆಲಸ ಮಗುವೇ ಮಾಡಬೇಕು. ಅವನ ಕಲಿಕೆಗೆ ಬೇಕಾದ ಸಾಧನ ಸಲಕರಣೆ ಹಿಡಿದುಕೊಂಡು, ಬರವಣಿಗೆ ಮೂಲಕ ಮಾತ್ರ ಅಲ್ಲ, ಕಂಪ್ಯೂಟರ್, ಇಂಟರ್ನೆಟ್, ಗೂಗಲ್ ಬಳಸಿ ಅವನಿಗೆ ತಾಂತ್ರಿಕ ಪಾಠ ನೀಡ ಬೇಕು. ಅದರಲ್ಲಿನ ವಿಡಿಯೋ ಎಡಿಟರ್, ಫ್ಲೆಕ್ಸ್, 3ಡಿ ಮೋಷನ್ ಚಿತ್ರಗಳ ತಯಾರಿಕೆ ಇವುಗಳನ್ನೆಲ್ಲ ಕಲಿತು ಇವುಗಳನ್ನು ಬಳಸಿ ಶಿಕ್ಷಕರು ಕಲಿಸ ಬೇಕು. ಇದು ಇಂದಿನ ಶಿಕ್ಷಣ ಪದ್ದತಿ. ಇದರ ಜೊತೆ ಕಳಿಸಿದ್ದನ್ನು ನೀವು ಏನೆಲ್ಲಾ ಕಳಿಸಿದ್ದೀರಿ, ಶಾಲೆಯಲ್ಲಿ ಏನೆಲ್ಲಾ ಮಾಡಿದ್ದೀರಿ, ಮಕ್ಕಳಿಗೆ ಕಲಿಕಾ ವಾತಾವರಣ ಸೃಷ್ಟಿಸಲು ಕೈಗೊಂಡ ಕಾರ್ಯಕ್ರಮಗಳು ಇವುಗಳ ಎಲ್ಲದರ ಬಗ್ಗೆ ಸಚಿತ್ರ ವರದಿ ತಯಾರಿಸಬೇಕು. ಅದುವೇ ಸಾಕ್ಷಿ. ಇಷ್ಟೇ ಮುಗಿಯಲಿಲ್ಲ, ಅದು ಯಾವುದೇ ವಿದ್ಯಾರ್ಥಿ ಇರಲಿ ಅವನಿಗೆ ಆರರಿಂದ ಹದಿನಾಲ್ಕು ವರ್ಷದ ವರೆಗೆ, ಕಡ್ಡಾಯ ಪ್ರಾಥಮಿಕ ಶಿಕ್ಷಣ ಸಿಗಬೇಕು, ಅವನು ಶಾಲೆಯಿಂದ ಹೊರಗುಳಿಯ ಬಾರದು. ಮೂರರಿಂದ ಆರು ವರ್ಷದ ವರೆಗೆ ಪೂರ್ವ ಪ್ರಾಥಮಿಕ ಶಿಕ್ಷಣ ಮಗುವಿಗೆ ಸಿಗಬೇಕು. ಆದ ಕಾರಣ ಅವನು ಅಕ್ಷರ ಕಲಿಯದೇ ಇದ್ದರೆ, ಅವನಿಗೆ ಓದಲು ಬರೆಯಲು ಬಾರದೆ ಇದ್ದರೆ ಅದಕ್ಕೆ ಶಿಕ್ಷಕರೇ ಜವಾಬ್ದಾರಿ. ಅದು ಯಾವ ಮೆತಡ್ ಉಪಯೋಗಿಸಿ ಆದರೂ ಸರಿ, ಮಗು ಶಾಲೆಗೆ ಬರದೇ ಇದ್ದರೆ ಅವನ ಮನೆಗೆ ಹೋಗಿ ಆದರೂ ಸರಿ, ಅವನಿಗೆ ವಿದ್ಯೆ ಅವನಿಗೆ ಕಲಿಸಬೇಕು ಮತ್ತು ಅವನು ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ಅರವತ್ತಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣನಾಗಬೇಕು. ಇದು ಇಂದಿನ ಶಿಕ್ಷಣದ ವಿಚಾರ.
ಇನ್ನೊಂದು ವಿಚಾರ ಏನೆಂದರೆ ಹಿಂದಿನ ಹಾಗೆ ಇಂದು ಫಸ್ಟ್ ಕ್ಲಾಸ್ ಅಂಕ ಪಡೆದು ಪಾಸಾದರೆ ಯಾವುದೇ ಪ್ರಯೋಜನ ಇಲ್ಲ ಮತ್ತು ಅದು ಏನೂ ಸಾಲದು. ಈಗ ಔಟ್ ಆಫ್ ಔಟ್ ಕಾಲ, ಮತ್ತು ತೊಂಭತ್ತು ಶೇಕಡಾಕ್ಕಿ0ತ ಹೆಚ್ಛು ಅಂಕ. ಎ ಪ್ಲಸ್ ಗ್ರೇಡ್. ಇದಕ್ಕೆ ಶಾಲಾ ಸಮಯದಲ್ಲಿ ಮಾತ್ರವಲ್ಲ, ಪ್ರತಿ ದಿನ ಬೆಳಗ್ಗೆ ಸಂಜೆ ಸ್ಪೆಷಲ್ ಕ್ಲಾಸ್ ಕೊಟ್ಟು ಓದಿಸಬೇಕು. ಇಷ್ಟು ಅಂಕ ಎಲ್ಲಾ ವಿದ್ಯಾರ್ಥಿಗಳು ಪಡೆದರೆ ಮಾತ್ರ ಶಾಲಾ ಕ್ಯೂಪಿಐ, ತಾಲೂಕಿನ ಕ್ಯೂಪಿಐ, ಜಿಲ್ಲಾ ಕ್ಯೂಪಿಐ ಹೆಚ್ಚು ಬಂದು ರಾಜ್ಯ ಪಟ್ಟಿಯಲ್ಲಿ ಜಿಲ್ಲೆಯ ಹೆಸರು ಮೇಲೇರುತ್ತದೆ. ಇಲ್ಲದೆ ಹೋದರೆ, ಅಂದರೆ ಅಕಸ್ಮಾತ್ ಜಿಲ್ಲೆಯ, ತಾಲೂಕಿನ, ಕ್ಲಸ್ಟರ್ ನ, ಶಾಲೆಯ ಫಲಿತಾಂಶ ಏನಾದರೂ ಕಡಿಮೆ ಬಂದು ಕ್ಯೂ ಪಿ ಐ ಪಟ್ಟಿಯಲ್ಲಿ ಸ್ಥಾನ ಕೆಳಗೆ ಬಂದರೆ ಮುಗೀತು ಕತೆ. ಮುಂದಿನ ವರ್ಷವೆಲ್ಲಾ ಎಲ್ಲರ ಕಣ್ಣು ಅವರ ಮೇಲೆಯೇ. ಹಿಂದಿನ ವರ್ಷದಲ್ಲಿ ಕಲಿತ ಮಕ್ಕಳೇ ಬೇರೆ, ಇಂದು ಆ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳೇ ಬೇರೆ, ಅವರ ಭಾಷೆ, ಮನೆಯ ಪರಿಸರ,ಪರಿಸ್ಥಿತಿಗಳು, ಆಹಾರ ಪದ್ಧತಿ, ಸಮಸ್ಯೆಗಳು ಬೇರೆಯೇ. ಅದು ಹೇಗೆ ಈ ವರ್ಷಕ್ಕೆ ಅದನ್ನು ತಾಳೆ ಮಾಡುವುದೋ ತಿಳಿಯದು. ಶಿಕ್ಷಕರು ತಮ್ಮ ಕಲಿಕೆಯ, ಕಲಿಸುವ ಸಾಮರ್ಥ್ಯವನ್ನು ಬದಲಾಯಿಸಿಕೊಂಡು ಮತ್ತೆ ಹೆಚ್ಚಿನ ಕಲಿಕೆಗೆ ಪ್ರೋತ್ಸಾಹ ನೀಡಬಹುದು, ಕಲಿಕಾ ವಿಚಾರ, ಕೌಶಾಲಗಳನ್ನು ತಿಳಿಸಿ ಕೊಡಬಹುದು. ಆದರೆ ಕಲಿಕಾ ಕಾರ್ಯ ವಿದ್ಯಾರ್ಥಿಯೇ ಸ್ವತಃ ಮಾಡಬೇಕು ಅಲ್ಲವೇ? ಅಮ್ಮ ಮನೆಯಲ್ಲಿ ಅಡುಗೆ ಮಾಡ ಬಹುದು, ತಿನ್ನಲು ಸಾಧ್ಯ ಆಗದೆ ಇದ್ದರೆ ಬಾಯಿಯೊಳಗೂ ಆಹಾರ ಇಡಬಹುದು ಆದರೆ ಜಗಿದು ನುಂಗುವ ಕಾರ್ಯ ಮಗುವೇ ಮಾಡಬೇಕು ಅಲ್ಲವೇ? ಆ ಕಾರ್ಯವನ್ನು ಮಾಡದ ಮಗುವಿಗೆ ಅದನ್ನೂ ಶಿಕ್ಷಕರೇ ಪ್ರೀತಿ ಹಾಗೂ ತಾಳ್ಮೆಯಿಂದ ಮಾಡಿಸುವ ಗುರುತರ ಜವಾಬ್ದಾರಿ ಇಂದಿನ ಶಿಕ್ಷಕರ ಮೇಲಿದೆ.
ಒಂದು ಕಾಲದಲ್ಲಿ ಶಿಕ್ಷಕ ವೃತ್ತಿ ಅತಿ ಶ್ರೇಷ್ಠ ಎಂಬ ಭಾವ ಇತ್ತು. ಈ ವೃತ್ತಿ ಸರ್ವ ಕಾಲಕ್ಕೂ ಶ್ರೇಷ್ಠವೇ ಬಿಡಿ. ಆದರೆ ಇಂದಿನ ಒತ್ತಡದ ಪರಿಸ್ಥಿತಿಯ ಕಾರಣದಿಂದಾಗಿ ಇಂಜಿನಿಯರ್ಸ್ ಮಕ್ಕಳು ಇಂಜಿನಿಯರ್ಸ್ ಆಗ ಬಯಸುತ್ತಾರೆ, ಡಾಕ್ಟರ್ಸ್ ಮಕ್ಕಳು ತಾವೂ ಡಾಕ್ಟರ್ಸ್ ಆಗ ಬಯಸುತ್ತಾರೆ, ಆದರೆ ಯಾವುದೇ ಶಿಕ್ಷಕರ ಮಕ್ಕಳು ಮುಂದೆ ತಾವು ಶಿಕ್ಷಕ ವೃತ್ತಿಯಲ್ಲಿ ಮುಂದುವರೆಯಲು ಇಚ್ಛಿಸುವುದಿಲ್ಲ. ಕಾರಣ ಕಷ್ಟದ ಬದುಕು. ಕಲಿಯುವ, ಸದಾ ಕಲಿಯುವ , ಕಲಿಸುವ ಕಾರ್ಯ ಸುಲಭದ ಮಾತಲ್ಲ. ಒಂದು ಮನವನ್ನು ತಿದ್ದುವ ಕಾರ್ಯ, ಅದನ್ನು ಸರಿಗೊಳಿಸುವ ಕಾರ್ಯವಿದು.
ಶಿಕ್ಷಕ ಒಂದು ಕಾಲದಲ್ಲಿ ಶಿಕ್ಷೆ ಕೊಟ್ಟು ಕಳಿಸುವವ ಆಗಿದ್ದ. ಕಾಲ ಬದಲಾದ ಹಾಗೆ ಜನರೂ ಬದಲಾದರು, ಶಿಕ್ಷಣ ಪದ್ದತಿ, ಶಿಕ್ಷಣ ವ್ಯವಸ್ಥೆ ಎಲ್ಲವೂ ಬದಲಾಯಿತು, ಗುರುಕುಲಗಳು ಕಾಣೆಯಾಗಿ ಶಾಲೆಗಳು ಬಂದವು. ರಾಜ್ಯ ಪಠ್ಯಕ್ರಮ ಶಿಕ್ಷಣ, ಕೇಂದ್ರ ಪಠ್ಯಕ್ರಮ ಶಿಕ್ಷಣ ಪದ್ದತಿ, ಅಂತರ ರಾಷ್ಟ್ರೀಯ ಪಠ್ಯಕ್ರಮ ಶಿಕ್ಷಣ ಪದ್ದತಿ ಇದರ ಜೊತೆ ಮಾತೃಭಾಷಾ ಶಿಕ್ಷಣಕ್ಕೆ ಹೋರಾಟ ಬಂದು ಎಲ್ಲಾ ಶಿಕ್ಷಣ ಕ್ರಮಗಳೂ ಈಗ ನಮ್ಮೊಡನೆ ಇವೆ. ಯಾವ ಪಠ್ಯ ಶಿಕ್ಷಣ ಕ್ರಮದಲ್ಲಿ ನಮ್ಮ ಮಕ್ಕಳನ್ನು ಓದಿಸಬೇಕು ಎಂಬುದನ್ನು ಆಯಾ ಪೋಷಕರೇ ನಿರ್ಧಾರಿಸುತ್ತಾರೆ ಆದರೆ ಪ್ರತಿ ಶಾಲೆಗೂ ಮಕ್ಕಳನ್ನು ಕರೆ ತರಬೇಕು, ತಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಬೇಕು ಎಂಬ ಒತ್ತಡ ಶಿಕ್ಷಕರ ಮೇಲಿದೆ.
ಶಿಕ್ಷಣ ಇಂದು ಎರಡು ರೀತಿಯಲ್ಲಿದೆ. ಸರಕಾರದಿಂದ ಸಿಗುವ ಉಚಿತ ಶಿಕ್ಷಣ ಹಾಗೂ ಖಾಸಗಿಯಿ0ದ ಪಡೆಯುವ ಶಿಕ್ಷಣ. ಇದು ಪೋಷಕರ ಜವಾಬ್ದಾರಿ. ಮನವೊಲಿಸುವುದು ನಮ್ಮ ಧರ್ಮ. ಕಲಿಕೆಗೆ ಪ್ರೋತ್ಸಾಹ ಎಲ್ಲಾ ಕಡೆ ಇದೆ. ಎಲ್ಲಾ ಶಿಕ್ಷಕರೂ , ಪೋಷಕರೂ ಶ್ರಮ ಪಡುವುದು ಮಕ್ಕಳ ಶಿಕ್ಷಣದ ಒಳಿತಿಗಾಗಿ, ಉದ್ಧಾರಕ್ಕಾಗಿ. ಇಂದಿನ ಮಕ್ಕಳು ಮುಂದಿನ ನಾಯಕರು. ದೇಶ ಆಳಲು ಅವರಿಗೆ ಬೇಕಾದ ಶಕ್ತಿ, ಸಾಮರ್ಥ್ಯ ಬುದ್ಧಿಯ ಜೊತೆಗೆ ಧೈರ್ಯ ಸ್ಥೈರ್ಯಗಳನ್ನೂ ನೀಡಿ ಅವರನ್ನು ತಯಾರುಗೊಳಿಸುವ ಶಕ್ತಿಗಳು ಮತ್ತು ಆ ಜವಾಬ್ದಾರಿ ಹೊತ್ತವರು ಪೋಷಕರು, ಶಿಕ್ಷಣ ವ್ಯವಸ್ಥೆ ಮತ್ತು ಸಮಾಜ. ಇಲ್ಲಿ ದೈಹಿಕವಾಗಿ ಅನನುಕೂಲ ಇರುವ, ಪೋಷಕರನ್ನು ಕಳೆದುಕೊಂಡ, ಮಾನಸಿಕವಾಗಿ ಸಮಸ್ಯೆಗಳಿರುವ ಮಕ್ಕಳನ್ನೂ ಗಮನಿಸಿಕೊಳ್ಳಬೇಕು. ಯಾವ ಮಗುವಿಗೂ ಅನ್ಯಾಯ ಆಗ ಬಾರದು. ಎಲ್ಲಾ ವಿದ್ಯಾರ್ಥಿಗಳನ್ನು ಕೂಡಾ ಮುಂದಿನ ಜೀವನಕ್ಕೆ ಸದೃಢಗೊಳಿಸುವ ಮಹತ್ಕಾರ್ಯವಿದು. ಆದ್ದರಿಂದ ಈ ಕೆಲಸದಲ್ಲಿ ನಿರತರಾದ ಪ್ರತಿ ಮನಕ್ಕೂ ನನ್ನದೊಂದು ಸಲಾಂ.
ಎಲ್ಲಾ ವಿದ್ಯಾರ್ಥಿಗಳನ್ನೂ ತಮ್ಮ ಮಕ್ಕಳು ಎಂದು ನೋಡಿಕೊಳ್ಳುತ್ತಾ, ತಪ್ಪು ತಿದ್ದಿ ಸರಿ ದಾರಿಗೆ ಅವರನ್ನು ತರುವ ಪಾತ್ರದ ಜೊತೆಗೆ ಅವರ ಮುಂದಿನ ಬದುಕನ್ನೂ ಕಟ್ಟಿ ಕೊಡುವ ಕಾರ್ಯ ಮಾಡುತ್ತಾ, ಸಮಾಜದಲ್ಲಿ ಯಾವುದೇ ಪ್ರಶಸ್ತಿ, ಪುರಸ್ಕಾರಗಳ ಹಿಂದೆ ಹೋಗದೆ ತಮ್ಮ ಕಾರ್ಯವನ್ನು ತಾವು ಶ್ರದ್ಧೆಯಿಂದ ಮಾಡುತ್ತಿರುವ ಅದೆಷ್ಟೋ ಶಿಕ್ಷಕರನ್ನು ಕಂಡಿದ್ದೇನೆ. ಬಡ ವಿದ್ಯಾರ್ಥಿಗಳಿಗೆ ತಮ್ಮ ಹಣದಿಂದ ಬಟ್ಟೆ ತೆಗೆದು ಕೊಡುವ, ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದರೆ ತಮ್ಮ ಹಣದಿಂದ ಅವರಿಗೆ ಧನ ಸಹಾಯ, ಬಹುಮಾನ, ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ, ತಮ್ಮಲ್ಲಿ ಸಿಕ್ಕಿದ, ಇರುವ, ತೆಗೆದುಕೊಂಡು ಬಂದು ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡುವ ಶಿಕ್ಷಕರು ನಮ್ಮ ಹೆಮ್ಮೆ. ಶಿಕ್ಷಕರೊಬ್ಬರು ನಮ್ಮ ಜೊತೆ ಮಥುರಾಕ್ಕೆ ಬಂದಿದ್ದಾಗ ಅಲ್ಲಿ ದೇವಾಲಯದ ಹೊರಗೆ ಭಜನೆ ಹೇಳುವಾಗ ಬಾರಿಸುವ ತಾಳ ಮಾರುತ್ತಿದ್ದರು. ತಕ್ಷಣ ಆ ಶಿಕ್ಷಕರು ಹೇಳಿದ ಮಾತು ಇಂದಿಗೂ ನನ್ನ ಕಿವಿಯಲ್ಲಿ ನಾಟಿ ನಿಂತಿದೆ. "ನಮ್ಮ ಶಾಲಾ ಮಕ್ಕಳಿಗೆ ಕಂಸಾಳೆ ನೃತ್ಯ ಮಾಡಲು ಉಪಯೋಗ ಆಗುತ್ತದೆ. ನಾನು ಅದನ್ನು ಹದಿನಾರು ಸೆಟ್ ನಮ್ಮ ಶಾಲೆಗೆ ತೆಗೆದುಕೊಳ್ಳುತ್ತೇನೆ" ಎಂದಾಗ ನನಗೆ ಅವರ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಯಿತು. ಹಾಗೆಯೇ ಹಳೆಯ ಅಂದವಾದ ಬಟ್ಟೆಗಳನ್ನು ಸಿರಿವಂತರ ಬಳಿ ಸಂಗ್ರಹಿಸಿ ಅದನ್ನು ತಮ್ಮ ಶಾಲಾ ಬಡ ವಿದ್ಯಾರ್ಥಿಗಳಿಗೆ ಹಂಚುವ, ಸಂಜೆ ಆರು ಗಂಟೆಯವರೆಗೂ ಶಾಲಾ ಕಾರ್ಯ ಮಾಡುವ, ಬೆಳಗ್ಗೆ ಎಂಟು ಗಂಟೆಗೇ ಶಾಲೆಯಲ್ಲಿ ಹಾಜರಿರುವ, ರಾತ್ರಿ ಹನ್ನೆರಡು, ಒಂದು ಗಂಟೆಯವರೆಗೂ ಕುಳಿತು ಶಾಲಾ ದಾಖಲೆಗಳನ್ನು ಆನ್ಲೈನ್ ಫೀಡ್ ಮಾಡುವ, ನಿಷ್ಠೆಯಿಂದ ರಾತ್ರಿ ಎರಡು ಗಂಟೆಯವರೆಗೆ ಕುಳಿತು ನಿಷ್ಟಾ ತರಬೇತಿ ಪೂರ್ಣಗೊಳಿಸಿ ನಿಟ್ಟಿಸಿರಿಡುವ ಶಿಕ್ಷಕರು ನಮ್ಮ ನಿಮ್ಮೆಲ್ಲರ ನಡುವೆ ಇದ್ದಾರೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಅವರ ಪೋಷಕರನ್ನೂ ತಮ್ಮ ಖರ್ಚಿನಲ್ಲೇ ಕರೆದುಕೊಂಡು ಹೋಗಿ ಆ ವಿದ್ಯಾರ್ಥಿಗಳಿಗೆ ಬ್ಯಾಂಕ್ ಅಕೌಂಟ್, ಜಾತಿ- ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮಾಡಿಸಲು ನೆರವಾಗುವ ಶಿಕ್ಷಕರು ಪ್ರಶಸ್ತಿಗಾಗಿ ಆಸೆ ಪಡುವವರಲ್ಲ, ಅರ್ಜಿ ಹಾಕಿದವರೂ ಅಲ್ಲ. ತಮ್ಮ ಮನೆಯಲ್ಲಿ ಬೆಳೆದ ತರಕಾರಿ ತಂದು ಬಿಸಿ ಊಟಕ್ಕೆ ಸಹಕರಿಸುವ ಶಿಕ್ಷಕರಿದ್ದಾರೆ. ಅವರೆಲ್ಲರ ಪರಿಶ್ರಮದ ಫಲ ಉತ್ತಮ ಗುಣದ ಆದರ್ಶ ವಿದ್ಯಾರ್ಥಿಗಳು.
ಭಾರತ ಹಲವಾರು ವೈವಿಧ್ಯತೆ ಹೊಂದಿದ್ದರೂ ಏಕತೆ ಬೆಳೆಸುವುದು ಶಿಕ್ಷಣ ಕೇಂದ್ರಗಳೇ ಅಲ್ಲವೇ?
ದೇಶ ಕಟ್ಟುವ ಇಂಜಿನಿಯರ್ ಗಳನ್ನು, ಆರೋಗ್ಯ ಭಾಗ್ಯ ಕೊಟ್ಟು ಜೀವನ ದಾನ ಕೊಡುವ, ಹೃದಯ-ಕಣ್ಣು ಕಸಿ ಮಾಡುವುದನ್ನೂ ಸೇರಿ ಎಲ್ಲಾ ರೀತಿಯ ವೈದ್ಯ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ, ವಾಹನದ ಪ್ರತಿ ಬಿಡಿ ಭಾಗಗಳನ್ನೂ ಪರಿಚಯಿಸಿ ಮೆಕ್ಯಾನಿಕ್ ಕೆಲಸಕ್ಕೆ ಸನ್ನದ್ದುಗೊಳಿಸುವ, ರಾಷ್ಟ್ರ ರಕ್ಷಣೆಯ ಮಾಡಲು ಸೈನಿಕರನ್ನು ತಯಾರುಗೊಳಿಸುತ್ತಿರುವ, ದೇಶದ ಭದ್ರ ಬುನಾದಿಗೆ ಅಡಿಪಾಯ ಹಾಕಲು ನಾಯಕರನ್ನು, ಕೆಲಸದ ಆಳುಗಳನ್ನು, ಕಂಟ್ರಾಕ್ಟರ್ ಗಳನ್ನು, ಶಿಕ್ಷಕರನ್ನು, ಮುಂದಿನ ಪೀಳಿಗೆಯ ಎಲ್ಲಾ ರಂಗಗಳಲ್ಲಿ ಮುಂದೆ ಬರುವ ವಿದ್ಯಾರ್ಥಿಗಳನ್ನು ತಯಾರು ಗೊಳಿಸುತ್ತಿರುವ, ಕಲೆ, ನಾಟಕ, ಭಜನೆ, ಗಾಯನ, ಹಾಡು, ನಟನೆ, ಸಮಾಜ ಸೇವೆ, ಕಾನೂನು ಸೇವೆ, ಪೊಲಿಸ್ ಇಂತಹ ಎಲ್ಲ ಸೇವೆಗಳಿಗೂ ಪ್ರತ್ಯೇಕವಾಗಿ ಆಯಾ ಆಸಕ್ತರನ್ನು ಅಣಿಗೊಳಿಸುತ್ತಾ ಆ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ , ದೇಶದ ಬಗ್ಗೆ ಗೌರವ, ಹಿರಿಯರಿಗೆ ಗೌರವ, ಕಿರಿಯರಿಗೆ ಸಹಕಾರ ನೀಡಲು ಕಲಿಸಿ, ದೇಶದ ಭವಿಷ್ಯಕ್ಕೆ ಭಾಷ್ಯ ಬರೆಯುತ್ತಿರುವ ಸರ್ವ ಗುರು ವೃಂದಕ್ಕೆ ತಲೆ ಬಾಗುತ್ತಾ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ ಆ ದೇವರು ನಿಮಗೆ ಆನಂದ, ಆರೋಗ್ಯ, ಆಯುಷ್ಯ ಹಾಗೂ ಎಲ್ಲಾ ಭಾಗ್ಯಗಳನ್ನೂ ದಯಪಾಲಿಸಿ ಆಶೀರ್ವದಿಸಲಿ ಎನ್ನೋಣ. ನೀವೇನಂತೀರಿ?
@ಪ್ರೇಮ್@
04.09.2022
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ