ಗುರುವಾರ, ಸೆಪ್ಟೆಂಬರ್ 8, 2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -146

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -146

ಹಲವಾರು ಕುಟುಂಬಗಳಲ್ಲಿ ನೋಡಿರುವೆ. ಕಷ್ಟ ಬಂದಾಗ ಒಬ್ಬರನ್ನು ಒಬ್ಬರು ಗಮನಿಸಿ ಸಹಾಯ ಮಾಡುತ್ತಾರೆ. ಎಲ್ಲರೂ ಆರ್ಥಿಕ ಸಹಾಯ ನೀಡದಿದ್ದರೂ, ಮಾನಸಿಕವಾಗಿ ನಿಮ್ಮೊಡನೆ ನಾವಿದ್ದೇವೆ ಎಂಬ ಹಿತನುಡಿ, ಜೊತೆಗೆ ಬಂದು ಕೆಳ ಹೊತ್ತು ಇದ್ದು, ಏನಾದರೂ ಸ್ವಲ್ಪ ತಂದು ಕೊಟ್ಟು, ಬೇಗ ಗುಣಮುಖರಾಗಿ ಎಂದು ಹೇಳಿ ಹೋಗುವ ಬಂಧುಗಳನ್ನು ನೋಡಿದಾಗ ನಮಗೆ "ಅಬ್ಭಾ ! ಎಷ್ಟು ಜನ ನಮ್ಮೊಡನೆ ಇದ್ದಾರೆ, ಧನ ಸಹಾಯ ಎಲ್ಲರಿಗೂ ಅಸಾಧ್ಯ. ಆದರೂ ತಮ್ಮ ಕೆಲಸವನ್ನೆಲ್ಲ ಬದಿಗೊತ್ತಿ ಬಂದು ನಮ್ಮನ್ನು ನೋಡಿ ಮಾತನಾಡಿಸಿ ಹೋದರಲ್ಲ, ಇವರೆಲ್ಲ ನಮ್ಮವರೇ..ಅನ್ನಿಸಿ ಮಾನಸಿಕ ಸಂತಸ ಸಿಗುತ್ತದೆ. ಕೆಲವೊಮ್ಮೆ ಬಂಧುಗಳೇ ಅಲ್ಲದ ದೂರದ ಗೆಳೆಯರು, ಮನೆಯ ನೆರೆ ಹೊರೆಯವರು, ಬಂಧುಗಳ ನೆರೆಹೊರೆಯವರು, ಹಿಂದಿನ ಕ್ಲಾಸ್ಮೇಟ್ಸ್ ಎಲ್ಲರನ್ನೂ ನೋಡಿ ಮಾತನಾಡಿ ಹಳೆಯದನ್ನು ಮೆಲುಕು ಹಾಕುವಾಗ ಬದುಕು ಕಷ್ಟಗಳನ್ನೆಲ್ಲಾ ಮರೆತು ಸಂಸದಿ ಹಾಡುತ್ತದೆ. ಈ ಸುಖಕ್ಕೆ ಸ್ನೇಹಿತರು ಮತ್ತು ಬಂಧುಗಳು ಇರಬೇಕು ಅಲ್ಲವೇ? 
   ಕೆಲವೊಮ್ಮೆ ಇವರು ಸಮಸ್ಯೆಗಳನ್ನೂ ಬದುಕಲ್ಲಿ ತಂದು ಹಾಕಬಹುದು, ನಮ್ಮ ನೆರೆಹೊರೆಯವರು ನಮ್ಮ ಸಂಸಾರದಲ್ಲಿ ನುಗ್ಗಿ ನೆರೆ - ನಿಜ ಹೊರೆಯಾಗಬಹುದು. ಗಂಡ ಹೆಂಡತಿಯನ್ನು ಬೇರೆ ಮಾಡಬಹುದು, ತಾಯಿ ತಂದೆ -ಮಕ್ಕಳನ್ನು ಆಸ್ತಿಗಾಗಿ ಕಚ್ಚಾಡುವ ಹಾಗೆ ಮಾಡಬಹುದು. ಏನೇನೋ ಹೇಳಿಕೊಟ್ಟು ಜಗಳ ಹಬ್ಬಿಸಿ ನೋಡಿ ಖುಷಿ ಪಡಬಹುದು. ಇಂಥವರೂ ಇದ್ದಾರೆ. ಅವರೇ ಊಟಕ್ಕೆ ಏನಾದರೂ ಬೆರೆಸಿ ಕೊಟ್ಟು, ನಂತರ ನಮ್ಮನ್ನು ನೋಡಲು ಬರಲೂ ಬಹುದು. ಹಾಗಾಗಿ ಈಗೀಗ ಪಕ್ಕದ ಮನೆಯವರನ್ನೂ ಕೂಡಾ ನಂಬುವುದು ಕಷ್ಟ. ಕಾರಣ ವಿದ್ಯಾಭ್ಯಾಸ ಹೆಚ್ಚಾಗಿ, ಹಣದ ಮೌಲ್ಯ ಕಡಿಮೆಯಾದ ಈ ಕಾಲದಲ್ಲಿ "ಫಿಶ್ ಗಳಿಗೆ ನೀರು, ಸೆಲ್ಫಿಶ್ ಗಳಿಗೆ ಭೂಮಿ" ಎಂಬಂತಾಗಿ ಭೂಮಿ ಮೇಲೆ ಹೆಚ್ಚಿನ ಎಲ್ಲಾ  ಸೆಲ್ಫಿಶ್ ಗಳೇ ತುಂಬಿ ಹೋಗಿರುವ ಕಾರಣ ಒಳ್ಳೆಯವರನ್ನೂ ಜನ ನಂಬಲಾರದ ಪರಿಸ್ಥಿತಿ ಬಂದಿದೆ. ಒಂದೊಮ್ಮೆ ಸರಿಯಾಗಿರುವ ಹಲವಾರು ಜನ ರೋಗಿಗಳ ಹಾಗೆ ನಾಟಕ ಮಾಡಿ ಮನೆ ಮನೆಗೆ, ಬಸ್ಸಿನ ಒಳಗೆ, ರಸ್ತೆಯಲ್ಲಿ, ಸಿಗ್ನಲ್ ಗಳಲ್ಲಿ ಅಡ್ಡ ಹಾಕಿ ಭಿಕ್ಷೆ ಬೇಡಿ ಹಣ ಮಾಡಿಕೊಂಡು ಐಷಾರಾಮಿ ಬದುಕು ನಡೆಸುವ ಅದೆಷ್ಟೋ ಜನರೂ ಇದ್ದಾರೆ. ಭಾರತದ ಸಂಸ್ಕೃತಿ ಮಾತ್ರವಲ್ಲ ಪಾಶ್ಚಾತ್ಯ ಜನರಲ್ಲೂ ಒಳ್ಳೆಯದು, ಕೆಟ್ಟದು ಎನ್ನುವಂಥದ್ದು ಇದೆ. ಪರಸ್ಪರ  ಸಹಾಯ ಸಹಕಾರ, ನೋವು ನಲಿವುಗಳಲ್ಲಿ  ಒಟ್ಟಾಗುವುದು ಇತ್ಯಾದಿ ಎಲ್ಲಾ ಜನರಲ್ಲೂ ಇದೆ. ನಾನು ಎಂಬ ಅಹಂಕಾರ ಇರಬಾರದು ಎಂದು ಎಲ್ಲರೂ ಹೇಳುತ್ತಾರೆ. ಹಾಗೆಯೇ ನಿನ್ನ ಅನ್ನದ ಅಕ್ಕಿಯನ್ನು ನೀನೆ ಬೆವರು ಹರಿಸಿದ ದುಡ್ಡಿನಿಂದ ಬೇಯಿಸಬೇಕೇ ಹೊರತು ಅದು ಬೇರೆಯವರ ಬೆವರಿನ ಪಾಲಾಗಿರಬಾರದು ಎಂದು ಹೇಳಿದ ಶಾಸ್ತ್ರಗಳೇ ನಿನ್ನಲ್ಲಿ ಹೆಚ್ಚಾಗಿರುವುದನ್ನು ಪರರಿಗೆ, ಅನಾಥ, ನಿರ್ಗತಿಕರಿಗೆ, ಕಷ್ಟದಲ್ಲಿ ಇರುವವರಿಗೆ  ದಾನ ಮಾಡು ಎಂದೂ ಹೇಳಿವೆ. ಪರಸ್ಪರ ಸಹಕಾರ, ಸಹಬಾಳ್ವೆ ಮಾತು ಬರುವ ಮನುಜನಲ್ಲಿ ಮಾತ್ರ ಅಲ್ಲ, ಪ್ರಾಣಿಗಳಲ್ಲೂ ಇದೆ. ಸಿಂಹ, ಹುಲಿ, ಆನೆಗಳು, ಜಿಂಕೆಗಳು ಗುಂಪಿನಲ್ಲೇ ವಾಸಿಸುತ್ತವೆ. 

ಬುದ್ಧಿ ಹೆಚ್ಚಾದ ಹಾಗೆ ಮಾನವ ಬೇರೆ ಬೇರೆ ರಂಗಗಳಲ್ಲಿ ಎಷ್ಟು ಬೆಳೆಯುತ್ತಾನೋ ಅಷ್ಟೇ ಕೆಟ್ಟತನವನ್ನೂ ಹೆಚ್ಚಿಸಿಕೊಂಡು ಹೋಗುತ್ತಾನೆ. ವಿಶ್ವದ ದೊಡ್ಡಣ್ಣ ಎನಿಸಿದ  ಅಮೇರಿಕಾದಲ್ಲಿ ಎಲ್ಲಾ ದೇಶಗಳ ಜನರನ್ನು ಯುದ್ಧ ಮಾಡುವಂತೆ ಮಾಡುವ ಬಾಂಬುಗಳು ತಯಾರಾಗುತ್ತವೆ! ಅದರ ಬಳಕೆ ಆಗಲೆಂದು ಅವರು ಕಾಯುತ್ತಾ ಇರುತ್ತಾರೆ ಕಾರಣ? ವ್ಯಾಪಾರೀ ದೃಷ್ಟಿ! ಅದರ ಮುಂದೆ ಮಾನವತೆ, ಸರಳತೆ, ಒಗ್ಗಟ್ಟು, ಶಾಂತಿ ಮಂತ್ರ, ಸರ್ವರ ಏಳಿಗೆ ಇತ್ಯಾದಿ ಎಲ್ಲಾ ಒಳ್ಳೆಯ ಗುಣಗಳೂ ನಶಿಸಿ, ನಾನು, ನನ್ನದು, ನನ್ನ ದೇಶ, ನನ್ನ ಧರ್ಮ, ನನ್ನ ಕುಟುಂಬ, ನನ್ನ ಭಾಷೆ,  ನನ್ನ ಊರು ಇತ್ಯಾದಿ  "ನನ್ನ" ಗಳು ಹೆಚ್ಚಾದ ಹಾಗೆ ಸ್ವಂತಿಕೆ ಮೆರೆದು ಜಗಳ, ಕದನ, ಗುಂಪುಗಾರಿಕೆ ಹೆಚ್ಚಿ ಶಾಂತಿ ವ್ಯವಸ್ಥೆ ಹದಗೆಡುತ್ತದೆ. 

ಇವೆಲ್ಲಕ್ಕೂ ಕಾರಣ ನಮ್ಮ ಆಸೆಗಳು, ಆಕಾಂಕ್ಷೆಗಳು, ದುರಾಸೆಗಳು, ರಕ್ತ ಹೀರುವ ಗುಣ, ವ್ಯಾಪಾರೀ ಮನೋಭಾವ,  ಅಸೂಯೆ, ಅಹಂಕಾರ, ಮದ, ಮಾತ್ಸರ್ಯ ಇವುಗಳೇ ಆಗಿವೆ.  ನಮ್ಮಲ್ಲಿ ಹಲವರ ಮೆಂಟಾಲಿಟಿ ಹೇಗಿದೆ ಎಂದರೆ "ನನಗೆ ಸಿಗದ್ದು ಬೇರೆಯವರಿಗೂ ಸಿಗಬಾರದು". ಅದಕ್ಕೆ ಅದೆಷ್ಟೋ ಜನ ಹುಡುಗರು ಪ್ರೀತಿಸಿದ ಹುಡುಗಿ ಒಪ್ಪಿಕೊಳ್ಳದೇ ಹೋದರೆ, ಸಿಗದೇ ಹೋದರೆ ಅವಳನ್ನು ಸಾಯಿಸಿ ಬಿಟ್ಟವರು ಇಲ್ಲವೇ? ಇದು ಮಾನವನ ವಿಕೃತ ಮುಖ. ಕೆಟ್ಟ ವ್ಯಸನಗಳು, ಕಷ್ಟ ಪಡದ ಹಣ, ದುರಭ್ಯಾಸಗಳು ಇದಕ್ಕೆ ಸಹಾಯ ಮಾಡುತ್ತವೆ. ಸರಿಯಾಗಿ ಕಷ್ಟ ಪಟ್ಟು ದುಡಿದ ಯಾರೆ ಆದರೂ ತನ್ನ ಹಣವನ್ನು ವ್ಯರ್ಥ ಮಾಡಲು, ಕೆಟ್ಟದ್ದಕ್ಕೆ ಉಪಯೋಗಿಸಲಾರ ಅಲ್ಲವೇ?
ಬದುಕಿಗೆ ಯಾವುದೇ ಗ್ಯಾರೆಂಟಿ ವಾರೆಂಟಿ ಇಲ್ಲ ಎಂದು ಎಲ್ಲೈಸಿ ಪಾಲಿಸಿಯ ನಾವೇ ಸಹಿ ಹಾಕಿದ ಬಾಂಡ್ ಪೇಪರನ್ನು ಒಮ್ಮೆ ಓದಿದರೆ ಗೊತ್ತಾಗುತ್ತದೆ. ನಮ್ಮ ಹಣ ಪಡೆದು ನಮಗೆ ಕೊನೆಯಲ್ಲಿ ಕೊಡುವ ಸಂಸ್ಥೆಗಳು ಹಲವಾರು ಇವೆ. ಆದರೆ ಈಗ ನಮಗೆ ದೊಡ್ಡ ಮೊತ್ತದ ಹಣ ಕೊಡಿ, ನಾವು ದುಡಿದು ಸ್ವಲ್ಪ ಸ್ವಲ್ಪ ಹಿಂದೆ ಕೊಡುತ್ತೇವೆ ಎಂದರೆ ಅದಕ್ಕೆ ಆ ಕಂಪನಿ ಗಳು ಸಹಕರಿಸಲಾರವು. ಲೋನ್ ಹಣ ಪಡೆಯಬೇಕಾದಾರೆ ಅದೆಷ್ಟು ಕಷ್ಟ, ಅದೆಷ್ಟು ಓಡಾಡಬೇಕು, ಚೆಕ್, ಸ್ಟಾಂಪ್ ಪೇಪರ್, ಶೂರಿಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಫಾರಂ ನಂಬರ್ 16, ವೋಟರ್ ಐಡೆಂಟಿಟಿ ಕಾರ್ಡ್, ಸಂಬಳ ಪಡೆದ ಸರ್ಟಿಫಿಕೇಟ್, ಬ್ಯಾಂಕ್ ಟ್ರಾನ್ಸಾಕ್ಷನ್ ಸ್ಟೇಟ್ಮೆಂಟ್, ಹಿರಿಯ ಅಧಿಕಾರಿಗಳ ಶಿಫಾರಸ್ಸು, ವಾಸಸ್ಥಳ ದೃಢೀಕರಣ ಪತ್ರ ಎಲ್ಲಾ ಕೊಟ್ಟರೂ ಬಜಾಜ್ ನವರು ರಿಜೆಕ್ಟ್ ಮಾಡಿ ಬಿಟ್ಟರು ಒಮ್ಮೆ ನನಗೆ. ಕಾರಣ ಟ್ಯಾನ್ ನಂಬರ್ ಸರಿ ಇಲ್ಲ ಎಂದು. ಅದು ಏಕೆಂದರೆ ನಾನು ಕಳೆದ ವರ್ಷ ಇದ್ದ ಶಾಲೆಯಿಂದ ಈ ವರ್ಷ ಟ್ರಾನ್ಸ್ಫರ್ ಪಡೆದು ಬಂದಿದ್ದೆ. ಅಲ್ಲಿಗೂ ಇಲ್ಲಿಗೂ ಟ್ಯಾನ್ ಸಂಖ್ಯೆಯ ವ್ಯತ್ಯಾಸ ಇತ್ತು! ಬ್ಯಾಂಕ್ ಅಕೌಂಟ್ ನಾವು ಇದ್ದ ಊರಿಗೆ ನಾವು ಬದಲಾಯಿಸ ಬೇಕಲ್ಲವೇ? ಹಾಗೆ ಮಾಡಿದರೆ ಐಎಫೆಸ್ಸಿ ಕೋಡ್ ಬದಲಾಯಿತು ಎಂದು ರಿಜೆಕ್ಟ್ ಮಾಡ್ತಾರೆ. ಅದೇ ಎಲ್ ಐ ಸಿ ಪಾಲಿಸಿಗಾಗಿ ಮನೆ ಮನೆಗೆ ಹುಡುಕಿಕೊಂಡು ಬರ್ತಾರೆ! ಯಾರಾದ್ರೂ ಲೋನ್ ಕೊಡ್ತೇವೆ ಅಂತ ಬರ್ಲಿ ನೋಡೋಣ! ನಮ್ಮ ಮೇಲೆ ಯಾರಿಗೂ ನಂಬಿಕೆ ಇಲ್ಲ! ತೆಗೆದುಕೊಳ್ಳುವವರೇ ಎಲ್ಲಾ, ಕೊಡುವವರು ಇಲ್ಲ ಅಲ್ಲವೇ? 

ನೀವೇಷ್ಟೇ ದೊಡ್ಡ ದಾನಿಗಳಾದರೂ, ಎಲ್ಲವನ್ನೂ ಧಾರೆ ಎರೆದರೂ ನಿಮ್ಮ ಕಷ್ಟಕ್ಕೆ ನೀವು   ನಂಬಿಕೆ ಇಟ್ಟ ಯಾರೂ ಸಹಾಯಕ್ಕೆ ಬರಲಾರರು. ಬಂದರು ಎಂದಾದರೆ ನೀವು ಮಹಾನ್ ಪುಣ್ಯವಂತರು. ಹಿರಿಯರು ಹೇಳಿಲ್ಲವೇ, "ನಿಮ್ಮ ತಲೆಗೆ ನಿಮ್ಮ ಕೈ" ಅಂತ. 

ಆದರೆ ಅಲ್ಲೋ ಇಲ್ಲೊ ಒಬ್ಬೊಬ್ಬರು ದೇವರ ಹಾಗೆ ಬಂದು ಸಹಾಯ ಮಾಡುವವರು, ಏನೂ ಬಯಸದೆ ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಹಸ್ತ ಚಾಚುವವರು, ಕಷ್ಟ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದಾಗ ಅಕೌಂಟ್ ಗೆ ಒಂದಿಷ್ಟು ತಾವು ಕಷ್ಟಪಟ್ಟು ದುಡಿದ ಹಣ ಹಾಕುವವರು ಸಾಮಾನ್ಯ ಭಾವುಕ ಜೀವಿಗಳು, ನಾಳೆ ನಮಗೆ ಏನಾದರೂ ಹೆಚ್ಚು ಕಮ್ಮಿ ಆದರೆ ಇದೇ ಪರಿಸ್ಥಿತಿ ಅಲ್ಲವೇ ಎಂದು ಆಲೋಚಿಸಿ ತಮ್ಮ ಕೈಲಾದ ಸಹಾಯ ನೀಡುತ್ತಾರೆ ಅವರು. ನಮ್ಮ ಕಷ್ಟದ ಸಮಯದಲ್ಲಿ ಅವರು ನಮಗೆ ದೇವರ ಹಾಗೆ ಕಾಣುವರು. ಆದರೆ ಕಷ್ಟ ಕೊಟ್ಟು ಓಡಿಸಿ ನಮಗೆ ಕೊಡಬೇಕಾದ ಮುಂಗಡ ಹಣವನ್ನೂ ಕೊಡದೆ ಇರುವ ಬಾಡಿಗೆ ಮನೆ ಓನರ್ ಅನ್ನು ಕುಡಾ ನಾ ನೋಡಿರುವೆ. ಹಣ ಕೇಳಿದರೆ ಜಗಳ ಮಾಡಿ "ಕೊಡೋದಿಲ್ಲ ಹೋಗು" ಎಂದಾಗ ತುಂಬಾ ನೋವಿನಲ್ಲಿ ಬಂದುಬಿಟ್ಟೆ. ಇನ್ನು ಕೋರ್ಟು ಕಚೇರಿ ಸುತ್ತಲು ರಜೆಯೂ ಇಲ್ಲ, ಮತ್ತಷ್ಟು ಹಣ ನಾವೇ ವ್ಯಯಿಸ ಬೇಕು. ಅಲ್ಲೂ ರಾಜಕೀಯ, ಅವನದೇ ಊರು, ಅವನದೇ ಜನ! ಮುಖಂಡರು , ಜನ ನಾಯಕರು ಓಟಿಗಾಗಿ ಅವನ ಕಡೆಗೆ ವಾಲುವರು.ಹೀಗಾದಾಗ ಕೆಲವೊಮ್ಮೆ ಕೈಲಾಗದ ಹತಾಶ ಭಾವನೆ ನಮ್ಮನ್ನು ಕಾಡುತ್ತದೆ. ಪರವೂರು, ಪರಮ ಕಷ್ಟ. ಹೇಳಿಕೊಳ್ಳಲು, ನ್ಯಾಯ ಕೊಡಲು ಯಾರೂ ಇಲ್ಲ ಇಲ್ಲಿ. ನೋವುಂಡ ಮನಕ್ಕೆ ನೋವೆ ಕೊಡುವವರು ಜಗದಲ್ಲಿ. ನಿಮಗೂ ಇಂತಹ ಅನುಭವ ಆಗಿದೆಯೇ? ಏನಂತೀರಿ?
@ಪ್ರೇಮ್@
27.08.2022

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ