ಶನಿವಾರ, ಏಪ್ರಿಲ್ 15, 2023

ಅವನು ಅವಳು

ಅವಳು ಅವನೊಂದಿಗೆ....

ಮಳೆ ಇರಲಿ ಇಲ್ಲದಿರಲಿ
ಹೀಗೊಂದು ಪ್ರೇಮ ಕಥೆ
ಅವನು ಸಮಯ ಸಿಕ್ಕಿದಾಗ 
ಅವಳನ್ನು ಮಾತನಾಡಿಸುತ್ತಾನೆ
ಅವಳಿಗೆ ಮನಸ್ಸಾದಾಗ
ವರ್ಷಕ್ಕೆ ಒಂದೆರಡು ಬಾರಿಯೋ
ತಿಂಗಳಿಗೆ ಒಂದು ಬಾರಿಯೋ
ಸ್ಮೈಲಿ ಕಳುಹಿಸುತ್ತಾನೆ

ಏನಾದರೂ ಗೆದ್ದರೆ ಮಾತ್ರ
 ಶುಭಾಶಯ ಕೋರುತ್ತಾನೆ
ಅವಳು ಸೋತರೆ?
ಅವನು ಎಂದಿಗೂ ಅವಳ 
ಬದುಕಿನಲಿ ಇಲ್ಲ!
ಅವಳ ಕಷ್ಟಗಳಿಗೆ
ಅವನೆಂದೂ ಪಾಳುದಾರನಲ್ಲ!

ಅವಳ ನೋವಿಗೆ ಪರಿಹಾರ
ಅವನಲ್ಲಿ ಎಂದೂ ಇಲ್ಲ
ಅವನ ಆಸೆ ಆಕಾಂಕ್ಷೆಗಳ
ಪೂರೈಸಲು ಅವಳು ಇರುವಳಲ್ಲ!
ಅವನಿಗೆ ಬೇಕು ಎಂದಾಗ 
ಅವಳು ಬೇಕೆ ಬೇಕು
ಆಗ ಅವನಿಗೆ ಸಿಗಬೇಕು!

ಅವನು ಅವನಿಗಾಗಿ ಬಂದರೆ
ಖರ್ಚಿನಲ್ಲಿ ಪಾಲು ಕೊಡಬೇಕು!
ಅವಳು ಅವನನ್ನು ಅವಳಿಗಾಗಿ ಕರೆದರೆ
ಪೂರ್ತಿ ಖರ್ಚು ಭರಿಸಬೇಕು!
ಮನೆಯಲ್ಲಿ ಇದ್ದಾಗ ಅವನಿಗೆ 
ಅವಳು ತೊಂದರೆ ಕೊಡ ಬಾರದು!

ಆರ್ಥಿಕ ಸಮಸ್ಯೆಗೆ ಅವನ ಬಳಿ
ಪರಿಹಾರ ಕೇಳಬಾರದು
ಮಾನಸಿಕ ನೆಮ್ಮದಿಗೆ 
ಅವನ ಬಳಿ ಸಮಯ ಇಲ್ಲ
ಅವನ ದೈಹಿಕ ಬಯಕೆಗೆ
ಅವಳೇ ಬೇಕು!

ಅವನ ಬಯಕೆ ತೀರಿಸಲು
ಅವಳೇ ಬೇಕು!
ಅವಳಿಗೆ ಸಹಾಯ ಬೇಕೆಂದರೆ
ಆಕೆ ಇನ್ನು ಯಾರಾದರೂ
ಗೆಳೆಯರ ಬಳಿ ಕೇಳಬೇಕು!

ಅವರಿಬ್ಬರೂ ಮಹಾನ್ ಪ್ರೇಮಿಗಳು
ಬದುಕ ನಾವೆ ನಡೆಸುವ ಜೊತೆಗಾರರು
ಇಬ್ಬರೂ ಹೊರಗೆ ದುಡಿಯುವವರು
ಒಬ್ಬರನೊಬ್ಬರು ಅರಿತವರು
ನಂಬಿಕೆಗೆ ದ್ರೋಹ ಬಗೆಯದವರು
ಅವರು ಜೊತೆಯಾಗಿ ಪ್ರವಾಸ ಹೊರಟರೆ
ಖರ್ಚನ್ನು ಅವಳೇ ನಿಭಾಯಿಸಬೇಕು..

ಅವಳಿಗೆ ಒಂಟಿತನ ಕಾಡಿತು ಎಂದರೆ
ಜೊತೆಗೆ ಅವನು ಬರಲಾರ
ಅವನ ಒಂಟಿತನ ನೀಗಲು
ಅವಳೇ ಬೇಕು ಸದಾ..

ಅವಳು ಸಹನಾಮಾಯಿ ಧರಣಿ
ಅವನು ಮಾತಿನ ಸರದಾರ
ಅವಳು ನೋವು ನುಂಗಿ
ನಗೆ ಉಕ್ಕಿಸುವ ಚಿಲುಮೆ
ಅವನು ಬದುಕನ್ನು ಖುಷಿಯಾಗಿ
ಕಳೆಯುವ ಹಮ್ಮೀರ!

ಕುಡಿದು ತಿಂದು ಬದುಕ
ಸಂತಸವಾಗಿ ಕಂಡುಕೊಂಡ
ವೀರ ಧೀರ ಶೂರ ಅವನು
ಪ್ರತಿ ಹೆಜ್ಜೆಯಲ್ಲೂ ಕಷ್ಟ ಪಡುತ್ತಾ
ನಿಧಾನ ಹೆಜ್ಜೆ ಹಾಕುವ
ನೋವು ತುಂಬಿದ ಗಣಿ ಅವಳು.
@ಹನಿಬಿಂದು@
15.04.2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ