ಶನಿವಾರ, ಏಪ್ರಿಲ್ 15, 2023

ಆತುರದ ನಿರ್ಧಾರ

ದುಡುಕಿನ ನಿರ್ಧಾರ

                 ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷಾ ವೇಳಾಪಟ್ಟಿ ಬಂದಿತ್ತು. ಪರೀಕ್ಷಾ ಸಮಯ, ಅದ್ವಿಕ್ ಮತ್ತು ಅದಿತಿ ತಮ್ಮ ತಮ್ಮ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಅದಿತಿ ಸಣ್ಣ ತರಗತಿಯಲ್ಲಿ ಇದ್ದ ಕಾರಣ ಮತ್ತು ತಾನೇ ಉತ್ತಮವಾಗಿ ಕಲಿಯುತ್ತಿದ್ದ ಕಾರಣದಿಂದಾಗಿ ಅವಳಿಗೆ ಮನೆಯಲ್ಲಿ ಟ್ಯೂಷನ್ ಇರಲಿಲ್ಲ. ಅದ್ವಿಕ್‌ಗೆ ತರಗತಿಗಳ ವಿಷಯಗಳು ಕಷ್ಟವಾದದ್ದರಿಂದ ವಿಶೇಷ ತರಗತಿಗಳ ಜೊತೆಗೆ ಟ್ಯೂಷನ್ ಗೂ ಹಾಕಿದ್ದರು. ಶಾಲೆಯಿಂದ ಬಂದ ಕೂಡಲೇ ಅರ್ಧ ಕಿಲೋ ಮೀಟರ್ ದೂರದ ವಸಂತಕ್ಕನ ಮನೆಗೆ ಟ್ಯೂಷನ್ ಗೆ ಹೋಗಬೇಕಿತ್ತು.

         ಅದ್ವಿಕ್ ಗೆ ಟ್ಯೂಷನ್ ಗೆ ಹೋಗಲು ಬಹಳವೇ ಇಷ್ಟ. ಅಲ್ಲಿ ಓದು ಬರಹ ಕಲಿಸುತ್ತಾರೆ ಎಂದಲ್ಲ. ಮನೆ ಕೆಲಸ ಮಾಡಲಿಕ್ಕೂ ಅಲ್ಲ. ಬದಲಾಗಿ ನಡೆದುಕೊಂಡು ಹೋಗುವಾಗ ಸಿಗುವ ಹಲವು ಹೊಸತಾದ, ಹಳೆಯದಾದ ಸ್ನೇಹಿತರ ಜೊತೆ ಮಾತನಾಡುವುದು, ಹರಟೆ ಹೊಡೆಯುವುದು, ಹೊಸ ಜನರೊಡನೆ ಗೆಳೆತನ ಸಂಪಾದಿಸಿ ಅವರ ಅನುಭವಗಳನ್ನು ಕೇಳುವುದು, ವಯಸ್ಸಾದ ಹಿರಿಯರ ಜೊತೆ ಅವರ ಕಥೆ ಕೇಳುವುದು, ಮಕ್ಕಳ ಆಟ ನೋಡುವುದು ಅವನಿಗಿಷ್ಟ. ಅಷ್ಟೇ ಅಲ್ಲ. ಅಲ್ಲಿಗೆ ಹೋಗುವಾಗ ಮಧ್ಯೆ ಸಿಗುವ ನದಿಯಲ್ಲಿ ಕಲ್ಲು ಬಿಸಾಡಿ ಆ ನೀರಿನ ಆಟ, ಆ ನದಿಯಲ್ಲಿ ಹಲವು ಮಕ್ಕಳು ಈಜಾಡುತ್ತಾ ಕಿರುಚುತ್ತಾ ಖುಷಿ ಪಡುವುದನ್ನು ನೋಡುವುದೆಂದರೆ ಅದ್ವಿಕ್ ಗೆ ಪಂಚಪ್ರಾಣ. “ಅವರ ಪೋಷಕರು ಎಷ್ಟು ಒಳ್ಳೆಯವರು! ಅವರಿಗೆ ಸ್ವಾತಂತ್ರ್ಯ ಕೊಟ್ಟು ಸಂಜೆಯವರೆಗೂ ನದಿಯಲ್ಲಿ ಈಜಾಡಲು ಬಿಡುತ್ತಾರೆ! ಮುಂದಿನ ಜನ್ಮವಿದ್ದರೆ ನನಗೆ ಆ ಪೋಷಕರೇ ಸಿಗಲಿ, ನಾನೂ ಬಡವನಾಗಿ ಜನಿಸಲಿ, ನನಗೂ ಈ ಸಂತಸ ಸಿಗಲಿ ದೇವರೇ” ಎಂಬುವುದು ಅವನ ಪ್ರತಿನಿತ್ಯದ ಪ್ರಾರ್ಥನೆ ಆಗಿತ್ತು.

       ತಾಯಿ ಕೌಸಲ್ಯ ಹಾಗೂ ತಂದೆ ವಿಶಾಲ್ ಇಬ್ಬರೂ ಹೊರಗೆ ದುಡಿಯುವವರೇ ಆದ ಕಾರಣ ಅದಿತಿ ಅದ್ವಿಕ್ ರವರೇ ಹೆಚ್ಚಿನ ಸಮಯದಲ್ಲಿ ಮನೆಯ ಹಿರಿಯಾಳುಗಳು, ಶಾಲೆಯಿಂದ ಬಂದು ತಾವೇ ಮನೆಕೆಲಸ ಮಾಡಿ, ಏನಾದರೂ ಇದ್ದುದನ್ನು ಬಿಸಿ ಮಾಡಿಯೋ ಹಾಗೆಯೇ ತಿಂದು ಹೊಟ್ಟೆ ತುಂಬಿಸಿಕೊಂಡು, ಸ್ವಲ್ಪ ಟಿವಿ ನೋಡಿ, ಇಬ್ಬರೂ ಜಗಳವಾಡಿ, ಮತ್ತೆ ಒಂದಾಗಿ ಅವರಿಬ್ಬರೇ ಆಟ ಆಡುವುದು. ಮನೆಯ ಕಾಂಪೌಂಡ್ ನಿಂದ ಹೊರಗೆ ಹೋಗಲು ಪೋಷಕರ ಅನುಮತಿ ಇಲ್ಲ. ಕಾರಣ ಇಂದಿನ ಯುಗದಲ್ಲಿ ಹೊರಗೆ ಹೋದರೆ ಏನಾದೀತೋ ಏನೋ ಎಂಬ ಭಯ, ಜೊತೆಗೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಹಿರಿಯರಿಲ್ಲದ ಕಾರಣ ಅವರು ಮನೆಯ ಒಳಗೆ ಇದ್ದರೆ ಸೇಫ್ ಎನ್ನುವ ಭಾವನೆ ಅವರಿಗೆ. ಇದು ಇಂದಿನ ಎಲ್ಲಾ ಸಣ್ಣ ಕುಟುಂಬಗಳ ಕಥೆಯೇ ಇಂದು! ಆದರೆ ಅದ್ವಿಕ್ ಗೆ ಹಾಗಲ್ಲ, ತಂಗಿಯ ಬಳಿ ಹಲವಾರು ಬಾರಿ ಹೇಳಿದ್ದ, “ಹೇ! ಅದಿತಿ, ಸ್ವಲ್ಪ ಹೊತ್ತು ನಾವಿಬ್ಬರೂ ಹೊರಗೆ ಹೋಗಿ ಎಲ್ಲ ಮಕ್ಕಳ ಜೊತೆ ಆಟ ಆಡಿ ಬರೋಣ, ಮಮ್ಮಿ ಡ್ಯಾಡಿಗೆ ಹೇಳುವುದು ಬೇಡ..” ಅಂತ. ಆದರೆ ತನ್ನ ಮೇಲೆ ಕೋಪ ಬಂದಾಗ ಅವಳೆಂದಾದರೂ ಹೇಳಿ, ತನ್ನ ಬಗ್ಗೆ ಬಾಯಿ ಬಿಟ್ಟರೆ ಬೆಲ್ಟ್, ಮೊಬೈಲ್ ಚಾರ್ಜರ್ ಮಾತ್ರವಲ್ಲ ಅಪ್ಪ ಕಟ್ಟಿ ಹಾಕಿ ಹೊಡೆಯುತ್ತಿದ್ದ! ಹೀಗಾಗಿ ಭಯದ ವಾತಾವರಣವೇ ಇತ್ತು!

             ಅದ್ವಿಕ್ ಅದಿತಿಯಂತೆ ಹೆಚ್ಚು ಅಂಕ ಗಳಿಸದೇ ಇದ್ದರೂ ಡಲ್ ವಿದ್ಯಾರ್ಥಿಯೇನೂ ಆಗಿರಲಿಲ್ಲ! ಅವನಿಗೆ ಪೈಂಟಿಂಗ್ ಅದರಲ್ಲೂ ಪರಿಸರ ಚಿತ್ರ ಬಿಡಿಸುವುದು, ಹಿರಿಯರಿಂದ ಕಥೆ ಕೇಳುವುದು, ಬಿಯರ್ ಗಿಲ್ಸ್ ತರಹ ಹೊಸ ಹೊಸ ಪರಿಸರದ ವಿವಿಧ ಭಾಗಗಳನ್ನು ವೀಕ್ಷಿಸುವುದು ಎಂದರೆ ಇಷ್ಟ. ಅದೇ ಅವನ ಹವ್ಯಾಸ ಕೂಡಾ, ಟ್ರೆಕಿಂಗ್, ಸೈಕ್ಲಿಂಗ್, ಪಿಕ್ ನಿಕ್, ಸೈಟ್ ವಿಸಿಟಿಂಗ್ ಕ್ರಿಕೆಟ್, ಕಬಡ್ಡಿ ಇವೆಲ್ಲಾ ಅವನ ಆಸಕ್ತಿಯ ಕ್ಷೇತ್ರಗಳು. ಅವನು ಸದಾ ಅವುಗಳಲ್ಲಿ ತನ್ನನ್ನು ತಾನು ತೆರೆದುಕೊಂಡು, “ಅದು ಏಕೆ, ಇದು ಹೇಗೆ, ಎಲ್ಲರೂ ಎಲ್ಲಾ ಕಡೆ ಒಂದೇ ತೆರನಾಗಿ ಇಲ್ಲ ಏಕೆ?” ಎಂದು ದೇವರನ್ನು ಕೇಳಿಕೊಂಡಾಗ ಅದೇ ಸಮಯದಲ್ಲಿ ಅವನಿಗೆ ನಿದ್ದೆ ಬಂದು ಉತ್ತರವೇ ಸಿಗದೆ ಪ್ರಶ್ನೆ ಹಾಗೆಯೇ ಉಳಿಯಿತು.

             ಕೌಸಲ್ಯ, ವಿಶಾಖ್ ರಿಗೆ ನಮ್ಮ ಮಗನೇ ತರಗತಿಯಲ್ಲಿ ಟಾಪರ್ ಆಗಬೇಕು ಎಂಬ ಬಯಕೆ, ಒಂದು ಅಂಕ ಕಡಿಮೆ ತೆಗೆದರೂ ಸಹಿಸಲಾರರು ಅವರು. 'ಕಡಿಮೆ ಅಂಕಗಳ ಪಡೆದರೆ ಅದು ನಮ್ಮ ಪ್ರೆಸ್ಟಿಜನ್ನು ಕೆಳಕ್ಕೆ ತಳ್ಳುತ್ತದೆ' ಎಂಬ ಆತಂಕದಲ್ಲಿ ಮಗನ ಕಲಿಕಾ ಮಟ್ಟವನ್ನು ಲೆಕ್ಕಿಸದೆ ಚೆನ್ನಾಗಿ ಓದಿ ಪರೀಕ್ಷೆ ಬರೆದರೆ ಸಾಧ್ಯ ಎಂಬ ನಂಬಿಕೆಯ ಪೋಷಕರ ಸಾಲಿಗೆ ಇವರೂ ಸೇರಿದ್ದರು. ಹಾಗಾಗಿ ಪ್ರತಿದಿನ ಶಾಲೆಯಲ್ಲೂ, ಟ್ಯೂಷನ್ ತರಗತಿಯಲ್ಲೂ, ಮನೆಯಲ್ಲೂ, ರಜಾದಿನಗಳಲ್ಲೂ ಸ್ಪೆಶಲ್ ಕ್ಲಾಸ್ ಓದು ಓದು .. ಓದು. ಇದು ಅಡ್ರಿಕ್ ಗೆ ಅಲರ್ಜಿ ತಂದಿತ್ತು. ಅವನೆಷ್ಟೇ ಓದಿ ಬರೆದರೂ ಅರವತ್ತು ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಅಮ್ಮ ಅಪ್ಪನ ಆಸೆ ಶೇಕಡಾ ನೂರು, ಅದನ್ನು ಪಡೆಯಲು ತನಗೆ ಆಗದು ಎಂಬ ಅಂಶವನ್ನು ಅವನು ಮೊದಲೇ ಒಪ್ಪಿಕೊಂಡು ಆಗಿದ್ದರೂ ಪೋಷಕರನ್ನು ಒಪ್ಪಿಸುವುದು ಸುಲಭದ ಮಾತಾಗಿರಲಿಲ್ಲ. ತಂಗಿಯ ಬಳಿ ಹೇಳಿಸಿದರೂ ಆ  ಪೋಷಕರಿಗೆ ಅವನ ಮೇಲೆ ಅಸಮಾಧಾನವೇ.

           ಈ ಎಲ್ಲಾ ತಲೆಬಿಸಿಗೆ ಪರಿಹಾರ ಏನು ಎಂದು ಯೋಚಿಸಿದಾಗ ಅದ್ವಿಕ್ ಜೀವನ, ಓದು, ಪರೀಕ್ಷೆ, ಅಂಕ ಎಲ್ಲವೂ ಆಯೋಮಯ ಅನ್ನಿಸತೊಡಗಿತು. ಬದುಕಿನಲ್ಲಿ ಬೋರ್ ಬರತೊಡಗಿತು. ಆಗಾಗ ಯೋಚನೆ ಮಾಡುತ್ತಾ ತನಗೆ ಗೊತ್ತಿಲ್ಲದೆ ಉಗುರು ಕಚ್ಚುವುದನ್ನು ಅಭ್ಯಾಸ ಮಾಡಿಕೊಂಡ. ಕೆಲವೊಮ್ಮೆ 'ಕಟ್' ಅಂತ ಉಗುರನ್ನು ಹಲ್ಲಿನಿಂದ ತುಂಡರಿಸಿ 'ತುಕ್' ಅಂತ ಅಲ್ಲಲ್ಲೇ ಉಗಿಯುತ್ತಿದ್ದ. ಇದನ್ನು ನೋಡಿದ ಅವನ ಸ್ನೇಹಿತೆ ಮೋಹಿತ ಒಮ್ಮೆ 'ಏನೋ ಅದು, ಉಗುರು ಕಡಿಯುವುದು, ಕೊಳಕು ಅದು, ಉಗುರು ಕಚ್ಚುವುದು ಶನಿ ಅಂತ ಅಜ್ಜಿ ಹೇಳ್ತಾ ಇದ್ರು..' ಅಂತ ಛೇಡಿಸಿದರೂ ಉಗುರೆಲ್ಲಾ ತುಂಡಾಗಿ ಚಿಕ್ಕದಾಗುವವರೆಗೆ ಬಿಡುತ್ತಿರಲಿಲ್ಲ. ಅವನಿಗೆ ಅದೊಂದು ಖಯಾಲಿ ಆದರೂ ಅದನ್ನು ಗಮನಿಸುವಷ್ಟು ಸಮಯ ಹೆತ್ತವರಿಗೆ ಇರಲಿಲ್ಲ.

         ಪಾಠ, ಪುನರಾವರ್ತನೆ ದಿನದಲ್ಲಿ ಎಂಟು ಒಂಭತ್ತು ಗಂಟೆ ಶಾಲೆಯಲ್ಲಿ ಆದರೆ ಉಳಿದ ಎರಡು ಮೂರು ಗಂಟೆ - ಟ್ಯೂಷನ್, ಅದ್ವಿಕ್ ಗೆ ತನ್ನ ಬಗ್ಗೆ, ತನ್ನ ಆಸೆ ಆಕಾಂಕ್ಷೆಗಳ ಬಗ್ಗೆ ಯಾರೂ ಸಮಯವನ್ನೇ ನೀಡುತ್ತಿಲ್ಲ ಅನ್ನಿಸತೊಡಗಿತು. ಟ್ಯೂಷನ್ ಗೆ ಹೋಗುವ ದಾರಿಯಲ್ಲಿನ ನದಿಗೆ ಹಾರಿ ಈಜಾಡಿ ಖುಷಿ ಪಡಬೇಕು, ಗಾಳ ಹಾಕಿ ಮೀನು ಹಿಡಿಯಬೇಕು. ನದಿಯ ಆಚೆ ಇರುವ ಕಾಡಲ್ಲೆಲ್ಲ ಡಾ. ಬ್ರೋ ನಂತೆ ಸುತ್ತಾಡುತ್ತಾ ತಾನೂ ವಿಡಿಯೋ ಮಾಡಿ ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿ ನನಗೂ ಒಂದು ಮಿಲಿಯನ್ ವೀವರ್ಸ್ ಆಗಬೇಕು ಎಂಬ ಆಸೆ ಇತ್ತು. ಅದಕ್ಕೆ ಅಡ್ಡಿಪಡಿಸುವ ತಂದೆ, ತಾಯಿ, ಟೀಚರ್, ಮುಖ್ಯ ಶಿಕ್ಷಕರು ಎಲ್ಲರೂ ವಿಲನ್ ಗಳಂತೆ ಕಾಣತೊಡಗಿದರು. ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ಗುಂಡು ಹಾಕಿ ಸಾಯಿಸುವಷ್ಟು ಕೋಪ ಅದ್ವಿಕ್ ಗೆ, ಆದರೆ ಅವನ ಒಳಿತಿಗೆ ಹೇಳುತ್ತಿದ್ದಾರೆ, ಎಲ್ಲರೂ ಅವನ ಉತ್ತಮ ಭವಿಷ್ಯವನ್ನು ಬಯಸುತ್ತಾರೆ . ಈಗ ಓದುವ ಸಮಯ, ಬದುಕಲ್ಲಿ ಓದುವ ಕಾಲಕ್ಕೆ ಓದದೇ ಹೋದರೆ ಮುಂದೆ ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂಬ ಮಾತನ್ನು ಶಿಕ್ಷಕರು ಎಷ್ಟು ಒತ್ತಿ ಒತ್ತಿ ಹೇಳಿದರೂ ಅದನ್ನು ಒಪ್ಪಿಕೊಳ್ಳಲು ಅದ್ದಿಕ್ ತಯಾರಿರಲಿಲ್ಲ.

      “ಹೌದು, ಈ ಟೀನೇಜ್ ಅಥವಾ ಹದಿ ಹರೆಯವೇ ಹಾಗೆ, ಮೀಸೆ ಬರುವಾಗ ದೇಶ ಕಾಣುವುದಿಲ್ಲ ಎನ್ನುವ ಹಾಗೆ. ಎಲ್ಲರೂ ತಪ್ಪು, ಯಾರು ಏನು ಬುದ್ಧಿ ಮಾತು ಹೇಳಿದರೂ ತಪ್ಪು, ಗದರಿಸಿದರೂ ತಪ್ಪು ನಾನೇ ಸರಿ, ನನಗೆಲ್ಲಾ ಗೊತ್ತು. ನನ್ನ ಪ್ರೀತಿ ಶಾಶ್ವತ, ನನ್ನದೇ ಸರಿ ಎಂದೆಲ್ಲಾ ಮಕ್ಕಳು ಮನದಲ್ಲಿ ದೊಡ್ಡದನ್ನೇ ಯೋಚಿಸುತ್ತಾ ಬದುಕು ಸುಲಭ ಅಂದುಕೊಂಡಿರುತ್ತಾರೆ, ಕೊನೆಗೆ ಕಷ್ಟ ಬಂದಾಗ ಹತಾಶರಾಗಿ ಬಿಡುತ್ತಾರೆ, ಅದಕ್ಕೆ ಈಗಿನಿಂದಲೇ ಕಷ್ಟಪಟ್ಟು ನಿಮ್ಮ ಬದುಕನ್ನು ರೂಪಿಸಿಕೊಳ್ಳಿ, ಅದಕ್ಕೆ ಭದ್ರ ಬುನಾದಿ ಹಾಕಿ... ಹೀಗೆಲ್ಲಾ ವಿದಾಯ ಸಮಾರಂಭದಲ್ಲಿ ಮುಖ್ಯ ಗುರುಗಳು ಹೇಳಿದ್ದ ಮಾತು ಎಲ್ಲರಿಗೂ ಮರೆತೇ ಹೋದ ಹಾಗಿತ್ತು.

       ಅಂದು ಅದ್ವಿಕ್ ಏನೋ ನೆನಪಿಸಿಕೊಂಡವನ ಹಾಗೆ ಪುನರಾವರ್ತನ ತರಗತಿಗೆ ಬಹಳ ಉತ್ಸಾಹದಿಂದ ಹಾಜರಾದ. ಆ ದಿನ ಒಂದೇ ಬಾಕಿ ಪರೀಕ್ಷೆಗೆ, ತನ್ನಲ್ಲಿದ್ದ ಹಣ ಎಲ್ಲಾ ಸೇರಿಸಿ ತರಗತಿಯ ಎಲ್ಲಾ ಸ್ನೇಹಿತರಿಗೆ ಚಾಕಲೇಟ್ ಕೊಟ್ಟು ಮರುದಿನದ ಪರೀಕ್ಷೆಗೆ ಆಲ್ ದ ಬೆಸ್ಟ್ ಹೇಳಿದ, ಎಲ್ಲಾ ಮಕ್ಕಳೂ ಟ್ಯೂಷನ್ ಕ್ಲಾಸ್ ನಲ್ಲಿ ಅವನು ಬಹಳ ಚೆನ್ನಾಗಿ ಓದಿರಬೇಕು ಅಂದುಕೊಂಡರು. "ಈ ಸಲ ಉತ್ತಮ ಅಂಕಗಳೊಂದಿಗೆ ಅದ್ವಿಕ್ ಪಾಸಾಗುತ್ತಾನೆ,  ನಾವೂ ಓದೋಣ ಬನ್ನಿ ಎಲ್ಲಾ " . ಎಂದು ಗೆಳೆಯರು ಮನೆ ಕಡೆ ಬೇಗ ಬೇಗ ಹೆಜ್ಜೆ ಹಾಕಿದರು. ಅದ್ದಿಕ್ ಬಟ್ಟೆ ಬದಲಾಯಿಸಿ ಟ್ಯೂಷನ್ ಕ್ಲಾಸಿಗೆ ಹೋಗ ಬೇಕಿತ್ತು. ಅಂದು ಒಲ್ಲದ ಮನಸಿನಿಂದಲೇ ಹೊರಟ, ಅಲ್ಲಿನ ಎಲ್ಲಾ ಸ್ನೇಹಿತರಿಗೂ ಚಾಕಲೇಟ್ ಕೊಟ್ಟು ಶುಭ ಹಾರೈಸಿದ ಅವರು ಹೇಳಿದ ಯಾವ ಮಾತನ್ನೂ ಕೇಳಿಸಿಕೊಳ್ಳಲಿಲ್ಲ. ಆ ತಾಳ್ಮೆ ಅವನಲ್ಲಿ ಇರಲೇ ಇಲ್ಲ. ಮನದೊಳಗೆ ಬೇರೇನೋ ಯೋಚನೆ ಹರಿದಾಡುತ್ತಿತ್ತು.

          ಕತ್ತಲೆಯವರೆಗೆ ಟ್ಯೂಷನ್ ತರಗತಿಯಲ್ಲಿ ಮಕ್ಕಳನ್ನು ಪರೀಕ್ಷೆಗೆ ರೆಡಿ ಮಾಡಿ ಮನೆಗೆ ಕಳುಹಿಸಿದ ವಸಂತಕ್ಕೆ ದೇವರಿಗೆ ಕೈ ಮುಗಿದು “ ಈ ಹುಡುಗ ತರಗತಿಯಲ್ಲಿ ಹೇಗಾದರೂ ಉತ್ತಮ ಅಂಕಗಳನ್ನು ಪಡೆದು ಮೊದಲಿಗನಾಗಲಿ ದೇವರೇ, ಇಲ್ಲದೇ ಹೋದರೆ ಅವನ ಅಮ್ಮ ಬಂದು ನೀವು ಸರಿ ಕಲಿಸಲಿಲ್ಲ ನನ್ನ ಮಗನಿಗೆ...ಅಂತ ಕಿರಿ ಕಿರಿ ಮಾಡಬಹುದು" ಅಂದುಕೊಂಡರು. ಅದ್ವಿಕ್ ನಿಧಾನವಾಗಿ ಹೊರಟು ದೃಢ ನಿರ್ಧಾರ ಮಾಡಿ ದಾರಿಯಲ್ಲಿ ಸಾಗುತ್ತಾ ಬಂದು ಸೇತುವೆಯ ಮೇಲೆ ನಿಂತು ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು “ಬೋರಾದ ಈ ಬಾಳು ನನಗೆ ಬೇಡ" ಎಂದು ಕೆಳಗಿರುವ ನದಿಗೆ ಹಾರಿ ತನ್ನ ಜೀವನವನ್ನೇ ಅಂತ್ಯಗೊಳಿಸಿಬಿಟ್ಟ. ಬಹಳ ಸಮಯವಾದರೂ ಮನೆಗೆ ಬಾರದ ಅದ್ವಿಕ್ ನನ್ನು ಕಾದು ಪೋಷಕರು ನಾಳೆ ಪರೀಕ್ಷೆ ಇನ್ನಷ್ಟೇ ಹೊತ್ತು ಓದಿಸುವರೇನೋ ಎಂದು ಸುಮ್ಮನಿದ್ದರು. ತಡ ರಾತ್ರಿ ಫೋನ್ ಮಾಡಿದಾಗ ಫೋನ್ ಸಿಗಲಿಲ್ಲ. ಅದ್ವಿಕ್ ನ ತಾಯಿ 'ತಡವಾಯಿತು, ಅವನು ಅಲ್ಲೇ ಮಲಗಲಿ' ಎಂದು ವಸಂತಕ್ಕನಿಗೆ ಮೆಸೇಜ್ ಕಳುಹಿಸಿದರು. ನೆಟ್ ಪ್ಯಾಕ್ ಮುಗಿದ ಕಾರಣ ಆ ಮೆಸೇಜ್ ವಸಂತಕ್ಕನನ್ನು ತಲುಪಲೇ ಇಲ್ಲ.

          ಬೆಳಗ್ಗೆ ಎಷ್ಟು ಹೊತ್ತಾದರೂ ಮಗ ಬರದೇ ಇದ್ದ ಕಾರಣ ತಬ್ಬಿಬ್ಬಾದ ಪೋಷಕರು ವಸಂತಕ್ಕನಿಗೆ ಕರೆ ಮಾಡಿಯೇ ಮಾಡಿದರು. ಕರೆ ಸಿಗದ ಬಳಿಕ 'ರಜೆ ಹಾಕಬೇಕು, ಏನು ಮಾಡುವುದು..' ಎಂದು ಗೊಣಗುತ್ತಾ ವಿಶಾಖ್ ವಸಂತಕ್ಕನ ಮನೆಗೆ ಬಂದರು. ಅಲ್ಲಿ ಎಲ್ಲೂ ಯಾವ ಮಕ್ಕಳ ಸುಳಿವೂ ಕಾಣಲಿಲ್ಲ. ವಸಂತಕ್ಕೆ ಕೆಲಸಕ್ಕೆ ಹೊರಡುವ ತರಾತುರಿಯಲ್ಲಿ ಇದ್ದರು. ಅದ್ವಿಕ್' ಎಲ್ಲಿ ಎಂದು ವಿಶಾಖ್ ಕೇಳಿದಾಗ, 'ನಿನ್ನೆ ಸಂಜೆ ಟ್ಯೂಷನ್ ಮುಗಿಸಿ ಏಳು ಗಂಟೆಗೇ ಹೋದನಲ್ಲ, ಬರಲಿಲ್ವಾ?'ಎಂದರು. 'ಮನೆಗೆ ಬರಲಿಲ್ಲ. ನಿಮ್ಮ ಫೋನ್ ಸಿಗಲಿಲ್ಲ. ಮೆಸೇಜ್ ನೋಡಲಿಲ್ವಾ ವಸಂತಕ್ಕಾ?' ಎಂದಾಗ ಇಲ್ಲವೆಂದರು. ವಿಶಾಖ್ ನ ಎದೆ ಜೋರಾಗಿ ಬಡಿದುಕೊಳ್ಳಲಾರಂಭಿಸಿತು. ಎಲ್ಲರೂ ಸೇರಿ ಮಧ್ಯಾಹ್ನದವರೆಗೂ ಕಂಡ ಕಂಡಲ್ಲಿ ಹುಡುಕಿದರು. ಎಲ್ಲೂ ಅದ್ವಿಕ್ ನ ಪತ್ತೆಯೇ ಇರಲಿಲ್ಲ. ಮಧ್ಯಾಹ್ನದ ಬಳಿಕ ದಾರಿ ಹೋಕರೊಬ್ಬರು ತೇಲಿ ಬರುತ್ತಿದ್ದ ಹೆಣ ನೋಡಿ ಬೆಚ್ಚಿ ಬಿದ್ದು ಸಮೀಪದ ಪೊಲೀಸ್ ಠಾಣೆಗೆ ತಿಳಿಸಿ, ಆ ವಿಷಯ ಸಂಜೆ ಹೊತ್ತಿಗೆ ಪೋಷಕರಿಗೆ ತಿಳಿಯಿತು.

         ತಮ್ಮ ಅತೀವ ಒತ್ತಡದ ಬದುಕು, ಮಕ್ಕಳ ಮೇಲೆ ಒತ್ತಡ ಹೇರಿಕೆ ಸರಿಯಾದ ಬುದ್ದಿ ಇಲ್ಲದ, ಯೋಚನೆ ಮಾಡದ ಮಗನ ದುಡುಕು ನಿರ್ಧಾರ ಅವನ ಜೀವನವನ್ನೇ ಬಲಿತೆಗೆದುಕೊಂಡು ಪೋಷಕರನ್ನು ದು:ಖದ ಸಾಗರದಲ್ಲಿ ಮುಳುಗಿಸಿತ್ತು. ಸ್ವಲ್ಪ ಉತ್ತಮ ಯೋಚನೆ ಮಾಡಿ ನಾಲ್ಕಾರು ದಿನ ಕಷ್ಟಪಟ್ಟು ಓದಿದ್ದಿದ್ದರೆ ಅವನ ಬಾಳು ಹಸನಾಗಿ ಸಾಗುತ್ತಿದ್ದುದರಲ್ಲಿ ಸಂದೇಹವೇ ಇಲ್ಲ. ಅವನೆಂದೂ ನಪಾಸಾಗುವ ವಿದ್ಯಾರ್ಥಿಯೇ ಅಲ್ಲ, ದುಡುಕಿ ತನ್ನ ಬದುಕನ್ನು ತಾನೇ ನಾಶ ಮಾಡಿಕೊಂಡ. ಕಳೆದು ಹೋದದ್ದು ಮರಳಿ ಬಾರದು, ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ, ಬೇಸರ ಮಾಡಬೇಡಿ' ಎಂದು ಶಾಲಾ ಶಿಕ್ಷಕರು, ಊರವರು, ಹತ್ತಿರದವರು ಮಾತಾಡುತ್ತಾ ಬೇಸರ ಮಾಡಿಕೊಳ್ಳುತ್ತಾ ಪೋಷಕರಿಗೆ ಸಮಾಧಾನ ಹೇಳುತ್ತಿದ್ದರು.

         ವಿಶಾಖ್,  ಕೌಸಲ್ಯ ಈ ಮಾತುಗಳನ್ನು ಕೇಳಿ ನೊಂದುಕೊಳ್ಳುವುದು ಬಿಟ್ಟರೆ ಮತ್ತೇನೂ ಸಾಧ್ಯವಾಗಲಿಲ್ಲ ಅವರಿಗೆ. ಅದ್ವಿಕ್ ಬುದ್ಧಿವಂತನಾದರೂ ದುಡುಕಿ ಪ್ರಾಣ ಕಳೆದುಕೊಂಡದ್ದು ತಪ್ಪು, ಎಲ್ಲವನ್ನೂ ಪೋಷಕರ ಬಳಿ ಹೇಳಿ ಕೊಳ್ಳಬಹುದಿತ್ತು" ಎಂದರು ತರಗತಿ ಶಿಕ್ಷಕರು. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದರು. ಆದಿತಿಗೆ ಏನು ಮಾಡಬೇಕು ಎಂಬುದೇ ತೋಚಲಿಲ್ಲ. ಅಳುತ್ತಾ ಒಂದೆಡೆ ಬಿದ್ದು ಬಿಟ್ಟವಳನ್ನು ಯಾರೋ ನೀರು ಕೊಟ್ಟು ಸಮಾಧಾನ ಮಾಡುತ್ತಿದ್ದರು. ಅವಳನ್ನಾದರೂ ಸರಿಯಾಗಿ ಬೆಳೆಸೋಣ ಎಂದು ವಿಶಾಖ್,  ಕೌಸಲ್ಯ ತಬ್ಬಿ ಕಣ್ಣೀರು ಸುರಿಸುತ್ತಿದ್ದರು.
@ಹನಿಬಿಂದು@
01.04.2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ