ಸೋಮವಾರ, ಮೇ 1, 2023

ಒಂದಿಷ್ಟು .....176

              ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 176

       ಕನ್ನಡ ಶಾಲೆಗಳು ಮುಚ್ಚುತ್ತಿವೆ. ಆಂಗ್ಲ ಮಾಧ್ಯಮಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಪಾಶ್ಚಾತ್ಯರ ಅನುಕರಣೆ ಮಾಡುತ್ತಾ ಇಂಗ್ಲಿಷ್ ಎಂದರೆ ಗ್ರೇಟ್, ಇಂಗ್ಲಿಷ್ ಮಾತನಾಡಲು ಬರುವ ಮಗು ಗ್ರೇಟ್, ಕನ್ನಡ ಕಲಿತರೆ ಏನೂ ಪ್ರಯೋಜನ ಇಲ್ಲ, ನಾಳೆ ಕೆಲಸ ಸಿಗಲು ಇಂಗ್ಲಿಷ್ ಬೇಕು, ಬಂಧುಗಳ ಮಕ್ಕಳೆಲ್ಲ ಆಂಗ್ಲ ಮಾಧ್ಯಮ , ಸಿ ಬಿ ಎಸ್ ಇ , ಐ ಸಿ ಎಸ್ ಇ ಶಾಲೆಗಳಲ್ಲಿ  ಕಲಿಯುತ್ತಿದ್ದು, ತನ್ನ ಮಗ ಒಬ್ಬನೇ ಹೇಗೆ ತಾನೇ ಸರಕಾರಿ ಶಾಲೆಯಲ್ಲಿ ಓದಿ ಕುಟುಂಬದಲ್ಲಿ ತಾನು ಕೀಳಾಗಿ ಕಾಣುವಂತೆ ಆದರೆ? ತನ್ನ ಸ್ಟೇಟಸ್? ಸಮಾಜದಲ್ಲಿ ತನ್ನ ಘನತೆ, ಗೌರವ ಎಲ್ಲಿಯವರೆಗೆ ಹೋದೀತು! ಇಂತಹ ಆಲೋಚನೆಗಳು ಸಾಮಾನ್ಯ ಜನರ ಮನದ ಅಂತರಾಳದಲ್ಲಿ ನೆಲೆಯೂರಿ ಬಿಟ್ಟಿವೆ. ಇದಕ್ಕೆ ಕೆಲವೊಂದು ಕಾರಣಗಳೂ ಇಲ್ಲದೆ ಇಲ್ಲ. 
ಕನ್ನಡ ಶಾಲೆಗಳಲ್ಲಿ ಕಲಿತ ಮಕ್ಕಳು ಜೀವನದಲ್ಲಿ ಸೋಲುವುದು ಕಡಿಮೆ. ಇದು ಎಲ್ಲರೂ ಹೇಳುವ ಮಾತು. ಅವರಿಗೆ ಫಿಲ್ಟರ್ ವಾಟರ್ ಕೊಡುವವರಿಲ್ಲ ಮನೆಯಿಂದ, ಸ್ನಾಕ್ಸ್ ಎಂದರೆ ಏನು ಎಂಬುದನ್ನು ಅರಿಯರು! ಅಲ್ಲದೆ ಬ್ರಾಂಡೆಡ್ ಐಟಂಸ್ ಬಳಸುವವರು ಅಲ್ಲವೇ ಅಲ್ಲ!
       ಇನ್ನು ಕನ್ನಡ ಸರಕಾರಿ ಶಾಲೆಗೆ ಬರುವ ಮಕ್ಕಳು ಬಿಜಾಪುರ, ಧಾರವಾಡ, ಗುಲ್ಬರ್ಗದಿಂದ ಇಲ್ಲಿಗೆ ವಲಸೆ ಕಾರ್ಮಿಕರಾಗಿ ಬಂದವರ ಮಕ್ಕಳು, ಕೆಲವು ಕೂಲಿ ಕಾರ್ಮಿಕರ ಮಕ್ಕಳು, ಸಮಾಜದಲ್ಲಿ ತೀರಾ ಕೆಳ ಮಟ್ಟದ, ಬಡತನ ರೇಖೆಗಿಂತ ಕೆಳಗಿನ, ಬಿಪಿಎಲ್ ಕಾರ್ಡ್, ಭಾಗ್ಯ ಲಕ್ಷ್ಮಿ ಬಾಂಡ್ ಪಡೆದ ಮಕ್ಕಳು. ಇನ್ನು ಕೆಲವು ಕುಟುಂಬದಲ್ಲಿ ಗಲಾಟೆ ಮಾಡಿ ಗಂಡ ಬಿಟ್ಟು ಹೋದ, ಗಂಡ ಸತ್ತು ಹೋದ, ಗಂಡ ಬೇರೆ ಮದುವೆ ಆದ ತಾಯಿ ಒಬ್ಬಳೇ ಕೂಲಿ ನಾಲಿ ಮಾಡಿ ದುಡಿದು ಸಾಕುವ ಬಡ ವಿದ್ಯಾರ್ಥಿಗಳು. ತಂದೆ ಏನಾದರೂ ಕೆಟ್ಟ  ಕೆಲಸ ಮಾಡಿ ಜೈಲಿಗೆ ಹೋಗಿ, ತಾಯಿ ಒಬ್ಬಳೇ ಇರುವ ಪೋಷಕರ ಮಕ್ಕಳು, ಇನ್ನೂ ಕೆಲವರು ತಂದೆಯ ಕುಡಿತದ ಅಬ್ಬರವನ್ನು ನಿತ್ಯ ರಾತ್ರಿ ನೋಡಿ ಬದುಕಿಗೆ ಹೇಸಿಗೆ ಪಟ್ಟುಕೊಂಡು ಅಮ್ಮನಿಗಾಗಿ ಬದುಕುತ್ತಿರುವ ಪುಟಾಣಿಗಳು. ಮತ್ತೆ ಕೆಲವರು ರೋಗಿಷ್ಟ ತಂದೆ ತಾಯಿಯ ಮಕ್ಕಳು. ತಂದೆ ತಾಯಿಯರನ್ನು , ತಮ್ಮ ತಂಗಿಯರ ಜವಾಬ್ದಾರಿ ಹೊತ್ತು, ಉಳಿದ ಸಮಯದಲ್ಲಿ ಶಾಲೆಗೆ ಬರುವವರು, ಇನ್ನೂ ಕೆಲವರು ತಂದೆ ತಾಯಿ ಇಬ್ಬರೂ ಕುಡುಕರಾಗಿದ್ದು, ಅವರನ್ನು ರಾತ್ರಿ ಸಂಬಾಳಿಸಿ, ಮಕ್ಕಳ ಮುಂದೆ ಮತ್ತಿನಲ್ಲಿ ಮಾಡಬಾರದ್ದನ್ನು ಮಾಡುವ, ನೋಡ ಬಾರದ್ದನು ನೋಡಿರುವ ಮಕ್ಕಳು, ನಿರಂತರ ಹನ್ನೆರಡು ವರ್ಷದಿಂದಲೇ ತನ್ನ ತಂದೆಯಿಂದಲೇ ದೈಹಿಕ ಹಿಂಸೆಗೆ ಒಳಪಟ್ಟು, ಅದನ್ನು ಯಾರ ಬಳಿಯೂ ಹೇಳಿಕೊಳ್ಳಲು ಆಗದೆ ಮಾನಸಿಕವಾಗಿ ವ್ಯಥೆ ಪಡುತ್ತಿರುವ, ಬದುಕಿನ ಮುಂದಿನ ಕನಸು ಸುಟ್ಟ ಮಕ್ಕಳು, ತಂದೆಯಿಂದ ಸದಾ ಕುಡಿದ ಮತ್ತಿನ ಶಿಕ್ಷೆಗೆ ಒಳಗಾಗಿ ಸಾವಿಗೂ ಹೆದರದ ಶಾಲೆಯೇ ಸ್ವಲ್ಪ ನೆಮ್ಮದಿ ಎನ್ನುವ ಮಕ್ಕಳು, ತಂದೆ ತಾಯಿಗೆ ಮದುವೆಗೆ ಮೊದಲು ಹುಟ್ಟಿ, ಅವರಿಗೆ ಬೇಡವಾಗಿ, ಅಜ್ಜಿಯೂ, ಕುಟುಂಬದವರೋ ಸಾಕಿದ ಅನಾಥ ಮಕ್ಕಳು, ಎಲ್ಲಿಯೋ ಆಸ್ಪತ್ರೆಯಲ್ಲಿ, ಅನಾಥಾಲಯದಲ್ಲಿ ಬೆಳೆಯುತ್ತಿರುವ ಮಕ್ಕಳು, ದಾರಿ ತಪ್ಪಿ ರಿಮ್ಯಾಂಡ್ ಹೋಂ ನಲ್ಲಿರುವ ಮಕ್ಕಳು, ಯಾರದೋ ತಪ್ಪಿಗೆ ಬಲಿಯಾದ ಹೆಚ್ ಐ ವಿ ಏಡ್ಸ್, ಕ್ಯಾನ್ಸರ್, ಅಲ್ಸರ್, ನ್ಯುಮೋನಿಯಾ, ಸಕ್ಕರೆ ಖಾಯಿಲೆ, ಮೆದುಳಿನ ನಿಧಾನಗತಿಯ ಕಾರ್ಯ, ಮಾತು ಬಾರದೆ ಇರುವುದು, ಅಂಗ ವೈಕಲ್ಯತೆ ಇರುವ ವಿಕಲ ಚೇತನ ಮಕ್ಕಳು, ಬುದ್ಧಿ ಮಾಂದ್ಯ ಮಕ್ಕಳು, ತಂದೆ ತಾಯಿಯ ಕೋಪಕ್ಕೆ ಬಲಿಯಾಗಿ ಸದಾ ಪ್ರೀತಿ ಇಲ್ಲದೆ ಪೆಟ್ಟಿನಲ್ಲೆ ಬೆಳೆಯುವ ಮನಸು ಕಲ್ಲಾದ ಮಕ್ಕಳು, ಮನೆ ಕೆಲಸಕ್ಕೆಂದು ಬೇರೆಡೆಯಿಂದ ಕರೆದುಕೊಂಡು ಬಂದು, ತಾವು ಆಫೀಸಿಗೆ ಹೋಗುವಾಗ ಶಾಲೆಗೆ ತಂದು ಬಿಟ್ಟು ಸಂಜೆ ಮತ್ತೆ ಕೆಲಸಕ್ಕೆ ಕರೆದುಕೊಂಡು ಹೋಗುವ , ತಂದೆ ತಾಯಿ ಇಲ್ಲದೆ ಯಾರದೋ ಮನೆಯಲ್ಲಿ ಯಾವುದೇ ಶಿಸ್ತು ಇಲ್ಲದೆ ಬೆಳೆಯುತ್ತಿರುವ ಮಕ್ಕಳು, ದುಡಿದು ಕೊಟ್ಟು, ಏನು ಮಾಡುತ್ತಾನೆ ಮಗ ಎಂದು ನೋಡದೆ, ಪ್ರಪಂಚದಲ್ಲಿ ನಮ್ಮ ಮಕ್ಕಳೇ ಶ್ರೇಷ್ಠ, ಅವರು ಮಾಡಿದ್ದೆ ಸರಿ ಎಂಬ ಭಾವನೆ ಇರುವ ಅವಿದ್ಯಾವಂತ  ಅಕ್ಷರಸ್ಥರ ಮಕ್ಕಳು, ಯಾವ ಶಾಲೆಗೆ ಸೇರಿಸಿದರೂ ನನ್ನ ಮಗ ಕಲಿಯುವುದಿಲ್ಲ ಎಂದು ಗೊತ್ತಾದ ಬಳಿಕ ತಂದು ಸರಕಾರಿ ಶಾಲೆಗೆ ಸೇರಿಸಿದ ,  ತಂದೆ ತಾಯಿಯರು ಯಾವುದೋ ಊರಿನಲ್ಲಿ ದುಡಿಯುತ್ತಿದ್ದು ವಿದ್ಯಾರ್ಥಿಗಳನ್ನು ಹಾಸ್ಟೆಲ್ ಗಳಲ್ಲಿ ಬೆಳೆಸುತ್ತಿರುವ ಮಕ್ಕಳು, ತಾಯಿ ಇಲ್ಲದ ತಬ್ಬಲಿಗಳು, ಎರಡನೇ ಹೆಂಡತಿಯ ಜೊತೆಗೆ ಇರುವ ಕಷ್ಟ ಪಡುತ್ತಾ, ನೋವು ತಿನ್ನುತ್ತಾ ತಂದೆಯ 2ನೇ ಮಡದಿಯ ಜೊತೆಗೆ ಪೆಟ್ಟು ತಿನ್ನುತ್ತಾ ಬದುಕುವ, ದಿನಕ್ಕೆ ಹತ್ತು ರೂಪಾಯಿ ಬಸ್ಸಿಗೆ ಪರದಾಡುವ ಬಟ್ಟೆ, ಪುಸ್ತಕ, ಎಲ್ಲಾ ಯಾರೋ ದಾನಿಗಳು ಕೊಡುತ್ತಿರುವ ಮಕ್ಕಳು, ತಮ್ಮ ತಂದೆ ತಾಯಿಯರು ಯಾರು ಎಂದು ;ಅರಿಯದ  ಮುಗ್ದ ಕಂದಮ್ಮಗಳು. ಎಲ್ಲಾ ಸರಕಾರಿ ಶಾಲೆಗಳಲ್ಲಿ ಈ ರೀತಿಯ ಮಕ್ಕಳ ಸಂಖ್ಯೆ ಇದ್ದೇ ಇದೆ. 

ಅಷ್ಟೇ ಅಲ್ಲ, ಡ್ರಗ್ ಅಡಿಕ್ಟ್ ಆದ ಮಕ್ಕಳು, ಟೀಚರ್ಗಾಗಿ ಬ್ಯಾಗಲ್ಲಿ ಚಾಕು, ಚೂರಿ ಇಟ್ಟುಕೊಂಡು ಬರುವ ಮಕ್ಕಳು, ಮೊಬೈಲ್  ತಂದು ಶಿಕ್ಷಕರು ಇಲ್ಲದ ಸಮಯದಲ್ಲಿ ರೀಲ್ಸ್ ಮಾಡುವ ಮಕ್ಕಳು, ಮಂಗನ ಹಾಗೆ ನೆಗೆಯುವ, ಬೇಕು ಅನ್ನಿಸಿದಾಗ ಮಾತ್ರ ಬರುವ,ಹತ್ತು ಗಂಟೆಯ ನಂತರ ಹೊರಟು ಬರುವ, ಸಂಜೆ ಶಾಲೆ ಬಿಟ್ಟರೂ ಮನೆಗೆ ಹೋಗದ, ಪಾನ್ ಪರಾಗ್ ಗುಟ್ಕಾ ತಿನ್ನುವ, ಯಾರ ಕಾರು ಸಿಕ್ಕರೂ ಅಡ್ಡ ಹಾಕಿ ಹತ್ತುವ ಮನಸ್ಥಿತಿ ಇರುವ ಮಕ್ಕಳು, ಇದ್ದ ಜಾತ್ರೆ, ನೇಮ, ಕೋಲ, ಹಬ್ಬ , ಮದುವೆ, ನಿಶ್ಚಿತಾರ್ಥ, ಸೀಮಂತ, ನಾಮಕರಣ ಹೀಗೆ ಊರಿನ ಎಲ್ಲಾ ಕಾರ್ಯಕ್ರಮ ಮುಗಿಸಿ ಸಮಯ ಇದ್ದರೆ ಶಾಲೆಗೆ ಬರುವ ಮಕ್ಕಳು.  ಇಂತಹ ಮಕ್ಕಳನ್ನು ನೋಡುವಾಗ, ಅವರ ಕಥೆ ಕೇಳುವಾಗ ಕೆಲವೊಮ್ಮೆ ಮರುಕ, ಮತ್ತೆ ಕೆಲವೊಮ್ಮೆ ಸಿಟ್ಟು, ಇನ್ನೂ ಕೆಲವರ ಬಗ್ಗೆ ಬೇಸರ, ಊಟಕ್ಕೆ ಇಲ್ಲದ ಮಕ್ಕಳ ಬಗ್ಗೆ ನಮಗೇ ಬೇಸರ ಅನ್ನಿಸುತ್ತದೆ. 

ಎಷ್ಟೋ ಶಿಕ್ಷಕರು ಪಾಪ ಅನ್ನಿಸಿ ತಾವೇ ಬಟ್ಟೆ, ಊಟ ತಂದು ಕೊಟ್ಟು ತರಗತಿಯಲ್ಲಿ ಕುಳ್ಳಿರಿಸಿ ಪಾಠ ಹೇಳಿ ಕೊಡುವ ಶಾಲೆಗಳಿವೆ. ಇನ್ನು ಕೆಲವು ಕಡೆ ಮಕ್ಕಳೇ ಶಿಕ್ಷಕರಿಗೆ ಪಾಠ ಕಲಿಸುತ್ತಾರೆ! ಬಡತನದ ಬದುಕು, ತಂದೆ ತಾಯಿಯರನ್ನು ತಾನೇ ದುಡಿದು ನೋಡಿಕೊಳ್ಳುವ ಮಗು, ವಿಕಲ ಚೇತನ ತಮ್ಮ ಅಥವಾ ತಂಗಿಗೆ ನೆರಳಾಗಿ ನಿಂತ ಮಗು ಹೀಗೆ. ನನಗೆ ಕೆಲವೊಮ್ಮೆ ಅನ್ನಿಸುವುದೂ ಇದೆ, ನಾವು ಸಾವಿರ ಸಲ ಹೇಳಿ ಕೊಟ್ಟರೂ ಕಲಿಯದ ಮಗು ತಾನೇ ತಾನಾಗಿ ಬಹಳ ವಿಷಯ ಕಲಿತುಕೊಳ್ಳುತ್ತದೆ ಎಂದು. ನಾವು ಎಂದಾದರೂ ವಿದ್ಯಾರ್ಥಿಗಳಿಗೆ " ಕೈಯಲ್ಲಿ, ಕಾಲಲ್ಲಿ, ತೊಡೆಯಲ್ಲಿ, ರಬ್ಬರ್ ಒಳಗೆ, ಶೂ ಒಳಗೆ, ಕಿವಿ ಒಳಗೆ, ಜ್ಯಾಮಿಟ್ರಿ ಪೆಟ್ಟಿಗೆಯ ಒಳಗೆ ಚೀಟಿ ಇಟ್ಟು ಪರೀಕ್ಷೆಗೆ ಬರುವಾಗ ತನ್ನಿ " ಎಂದು ಯಾವುದಾದರೂ ಶಿಕ್ಷಕರು ಅಪ್ಪಿ ತಪ್ಪಿಯೂ ಹೇಳಿ ಕೊಟ್ಟಿರಲಿಕ್ಕಿಲ್ಲ. ಆದರೂ ಈ ಕೆಲಸ ಕೆಲವು  ಮಕ್ಕಳು ಮಾಡುತ್ತಾರೆ. ಮೊಬೈಲ್ ಒತ್ತಲು, ಫೋಟೋ ತೆಗೆಯಲು, ಗೇಮ್ಸ್ ಆಡಲು, ಯುಟ್ಯೂಬ್ ನೋಡಲು ಯಾವ ಟೀಚರ್ ಕೂಡಾ ಕಲಿಸುವುದು ಬೇಡ! ಅದೇ ಪೈಥಾಗೊರಸ್ ಪ್ರಮೇಯ ಒಂದು ಸಾವಿರ ಸಲ ಹೇಳಿ ಕೊಟ್ಟರೂ ಬಾರದು! ಕಾರಣ? ಮಗುವಿಗೆ ಅದು ಬೇಡ! ಇದು ಸರಕಾರಿ ಶಾಲೆ ಮಾತ್ರ ಅಲ್ಲ, ಎಲ್ಲಾ ಮಕ್ಕಳ ಇಷ್ಟಾ ಇಷ್ಟಗಳ ವಿಚಾರ! 
     ಇನ್ನು ಶಾಲೆಗೆ ಬರುವ ಮಕ್ಕಳ ಬ್ಯಾಗಿನಲ್ಲಿ ಇರುವ ವಸ್ತುಗಳನ್ನು ಒಮ್ಮೆ ನೋಡಿದರೆ, ಚಾರ್ಲಿ ಸಿನೆಮಾದಲ್ಲಿ ನೋಡಿದ ಹಾಗೆ ನಾಯಿ, ಬೆಕ್ಕಿನ ಮರಿಗಳು ಕೂಡಾ ಮಕ್ಕಳ ಚೀಲದಲ್ಲಿ ಇರುತ್ತವೆ. ಪುಸ್ತಕ, ಪೆನ್ನು ಪೆನ್ಸಿಲ್, ಪೆನ್ಸಿಲ್ ಬಾಕ್ಸ್ ಮಾತ್ರ ಅಲ್ಲ, ಮಾವಿನ ಕಾಯಿ, ಅದಕ್ಕೆ ಉಪ್ಪು, ಮೆಣಸಿನ ಪುಡಿ, ಕತ್ತರಿಸಲು ಚಾಕು - ಚೂರಿ, ಬೇರೆ ಮಕ್ಕಳಿಗೆ ಕೊಡಲು ಅಥವಾ ಆಟ ಆಡಲು ತಮ್ಮ ಮನೆಯ ಆಟದ ಸಾಮಾನುಗಳು, ಶಾಲೆಯಿಂದ ಬೇರೆ ಕಡೆ ಹೋಗಲು ಕೆಲವೊಮ್ಮೆ ಬಟ್ಟೆ, ಮನೆಯ ಬೀಗದ ಕೀ, ಹರಿದ ಚಪ್ಪಲಿಗಳು, ಮಾವಿನ ಹಣ್ಣು , ಈ ತರಹ ಕೆಲವು ಹಣ್ಣುಗಳು, ಹಣ, ತಂದೆ ತಾಯಿಯ ಎಟಿಎಮ್ ಕಾರ್ಡು, ಬ್ಯಾಂಕ್ ಪಾಸ್ ಬುಕ್, ಹೀಗೇ ಏನೇನೋ. 

ನಿಜವಾಗಿ ಓದಲು ಆಸಕ್ತಿ ಇದ್ದು ಶಾಲೆಗೆ ಬರುವ ಮಕ್ಕಳು ಶೇಕಡಾ ಹತ್ತರಿಂದ ಇಪ್ಪತ್ತು ಅಷ್ಟೇ! ಉಳಿದ ಕೆಲವು ಮಕ್ಕಳು ಪೋಷಕರ ಗಲಾಟೆ, ಪೆಟ್ಟಿಗೆ ಹೆದರಿ, ಇನ್ನೂ ಕೆಲವು ಮಕ್ಕಳು ಟೈಮ್ ಪಾಸ್ ಗೆ, ಮತ್ತೆ ಕೆಲವು ಮಕ್ಕಳು ಊಟಕ್ಕೆ, ಮನೆಯಲ್ಲಿ ನೆಮ್ಮದಿ ಇಲ್ಲದ ಮಕ್ಕಳು ನೆಮ್ಮದಿಗೆ, ತಂದೆ ತಾಯಿ ಸರಿ ಇಲ್ಲದ ಅಥವಾ ಇಲ್ಲದ ಕೆಲವು ಮಕ್ಕಳು ಶಿಕ್ಷಕರ ಪ್ರೀತಿಗೆ, ಕೆಲಸ ಇಲ್ಲ ಎಂಬ ಕಾರಣಕ್ಕೆ ಶಾಲೆಗೆ ಬರುವ ಮಕ್ಕಳೂ ಇದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಒಮ್ಮೆಲೆ ದೊಡ್ಡ ತರಗತಿಗೆ ವಯಸ್ಸಿನ ಮೇಲೆ ಸೇರಿಸಿದ ಮಕ್ಕಳು ಸೀದಾ ಪಾಸ್ ಆಗುತ್ತಾ ಬಂದು ಹತ್ತನೇ ತರಗತಿಯವರೆಗೆ ಬಂದು ಅಕ್ಷರ ಬಾರದೆ, ನಾವು ಅವರನ್ನು ರಿಸಲ್ಟ್  ಗಾಗಿ ಎಡೆಬಿಡದೆ ಇಲಾಖೆಯ ಒತ್ತಡಕ್ಕಾಗಿ ನೂರಾರು ಸಲ ಬರೆಸಿ ಬರೆಸಿ ಕಲಿಸಲು ಪ್ರಯತ್ನಿಸುವಾಗ ಸಾಕಾಗಿ ಶಾಲೆ ಬಿಟ್ಟು ಓಡಿ ಹೋಗುವ ಮಕ್ಕಳೂ ಇದ್ದಾರೆ! ಬೇರೆ ತರಗತಿಯಲ್ಲಿ ಹಾಯಾಗಿ ಒಂಭತ್ತು ವರ್ಷ ಕಲಿತ ಮಕ್ಕಳು ಹತ್ತನೇ ತರಗತಿಗೆ ಬರುವಷ್ಟಲ್ಲಿ ಫೈಲ್ ಎಂದರೆ ಏನು ಎಂದು ಅರಿಯದೆ, ಹತ್ತನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ, ಪಾಸ್ ಆಗಲೇ ಬೇಕು ಎಂಬ ಒತ್ತಡ! ಉಳಿದ ತರಗತಿಗಳಲ್ಲಿ ಅವರು ಹೇಗೇ ಓದಿದ್ದರೂ, ಹೇಗೇ ಪರೀಕ್ಷೆ ಬರೆದಿದ್ದರೂ ಆ ವರ್ಷ ಪಾಸ್ ಎಂದು ಅವರಿಗೆ ತಿಳಿದಿದೆ! 

ಗಾಂಧೀಜಿ ಹೇಳಿದ ಪ್ರಕಾರ ಮೂಲ ಶಿಕ್ಷಣ, ವೃತ್ತಿ ಶಿಕ್ಷಣ ಬೇಕೇನೋ ಅನ್ನಿಸುತ್ತದೆ ಒಮ್ಮೊಮ್ಮೆ! ಮಕ್ಕಳು ಶಾಲೆಗೆ ಬಾರದೆ ಅವರನ್ನು ಕರೆದುಕೊಂಡು ಬರಲು ಶಿಕ್ಷಕರು ಮನೆಗೆ ಹೋದರೆ ಕೆರೆಗೆ ಹಾರುವುದು, ಮರ ಹತ್ತಿ ಮಂಗನ ಹಾಗೆ ನೇತಾಡುವುದು, ಕಲ್ಲು ಬಿಸಾಕುವುದು, ಓದುವುದು, ಬೇರೆಯವರ ಮನೆಗೆ ಓಡಿ ಕದ್ದು ಕೂರುವುದು, ಜೋರಾಗಿ ಕಿರುಚುವುದು, ಸಾಯಲು ಹೋಗುವುದು ಇದನ್ನೆಲ್ಲ ಮಾಡಿದ ವಿದ್ಯಾರ್ಥಿಗಳು ಇದ್ದಾರೆ ಅಲ್ಲವೇ? 
ಶಾಲೆಯ ಸ್ವಚ್ಛತಾ ಕಾರ್ಯ ತಾವೇ ಅಚ್ಚುಕಟ್ಟಾಗಿ ಮಾಡುವ,ತಮ್ಮ ಶಾಲಾ ಖರ್ಚಿಗೆ ತಾವೇ ದುಡಿಯುವ ಹಲವು ಮಕ್ಕಳಿದ್ದಾರೆ. ಅಷ್ಟೇ ಅಲ್ಲ, ಓದುವುದನ್ನು ಬಿಟ್ಟು ಬೇರೆ ಯಾವ ಕೆಲಸ ಬೇಕಾದರೂ ಮಾಡುವ ವಿದ್ಯಾರ್ಥಿಗಳೂ ಇದ್ದಾರೆ! ಯಾಕೆ ಹೀಗೆ ... ಯಾರ ತಪ್ಪು? ಪೋಷಕರದ್ದೇ? ಮಕ್ಕಳದ್ದೇ? ಶಿಕ್ಷಕರದ್ದೇ? ಸಮಾಜದ್ದೇ? ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಸರಕಾರದ್ದೇ? ಕೆಲವರು ನಂಬುವ ಹಾಗೆ ಹಿಂದಿನ ಜನ್ಮದ ಪಾಪವೇ? ಕೆಲವು ಕಷ್ಟಗಳಿಗೆ, ನೋವು, ಖಾಯಿಲೆಗಳು, ಆಪರೇಶನ್, ಲಕ್ಷಗಟ್ಟಲೆ ಖರ್ಚು, ಗುಣವಾಗದ ನೋವುಗಳು ಇವನ್ನೆಲ್ಲಾ ನೋಡಿದರೆ ನಮಗೆ ನೋವು ಬಿಟ್ಟರೆ ಮತ್ತೇನೂ ಕಾಣದು, ನಮ್ಮ ಕೈಲಾಗದ ಕೆಲಸ ಇದು. ಏನು, ಯಾಕೆ ಹೀಗೆ ಎನ್ನುವ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ಇಲ್ಲವೇ ಇಲ್ಲ! ನೀವೇನಂತೀರಿ?
@ಹನಿಬಿಂದು@
18.03.2023
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ