ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -181
ಬದುಕಿನ ಪ್ರತಿ ಕ್ಷಣವೂ ಕೂಡ ನಾವು ಮೊದಲೇ ನೆನೆಸಲು ಆಗದೆ ಇರುವಂತದ್ದು. ಈ ಕ್ಷಣದಲ್ಲಿ ಹೀಗಿದ್ದೇವೆ, ಮುಂದಿನ ಕ್ಷಣದಲ್ಲಿ ಏನಾಗುವುದು ಏನು ಯಾರಿಗೂ ತಿಳಿಯುವುದಿಲ್ಲ. ಎಷ್ಟೇ ಭವಿಷ್ಯವಾಣಿ ಕೇಳಿದರೂ, ಅಂಗೈ - ಮುಂಗೈ - ಕಾಲು - ಮುಖ - ಕಣ್ಣಿನ ರೇಖೆ ಓದಿಸಿದರೂ ಕೂಡ ಮುಂದಿನ ಕ್ಷಣದಲ್ಲಿ ಏನಾಗುತ್ತದೆ ಎಂಬ ಅರಿವು ಸ್ವತಃ ಭವಿಷ್ಯವಾಣಿ ನುಡಿದವರಿಗೂ ತಿಳಿಯದು. ದೇವರ ಈ ಒಂದು ಕಾಲದ ನಿರ್ಣಯ ಕ್ರಿಯೆ ಬಹಳವೇ ನಾಜೂಕಾದುದು. ಯಾರು ಯಾವಾಗ ಎಲ್ಲಿ ಯಾರನ್ನು ಭೇಟಿಯಾಗುವರು, ಯಾರ ಜೊತೆಗೆ ಬದುಕುವವರು ಯಾರು, ಒಂಟಿಯಾಗುವವರು ಯಾರು , ಯಾರು ನಗುವರು, ಯಾರು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವರು, ಯಾರು ರೋಗಿಗಳಾಗುವವರು, ಯಾರು ನೋವುಣ್ಣುವರು, ಯಾರು ಸಂತಸದಲ್ಲಿ ಬೇಗುವರು, ಯಾರು ಯಾರಿಗೆ ನೋವು ಕೊಡುವರು, ಯಾರು ಯಾರ ಮನಸ್ಸಿಗೆ ಸಾಂತ್ವನ ನೀಡುವರು... ಇವೆಲ್ಲವೂ ಆ ದೇವರಲ್ಲಿ ಸರಿಯಾದ ರೀತಿಯಲ್ಲಿ ಮೊದಲೇ ಯೋಜಿಸಲ್ಪಟ್ಟಿದೆ.
ಹುಟ್ಟುವಾಗಲೇ ಸಮಯವನ್ನು ನೋಡಿ ಸರಿಯಾಗಿ ತಿಳಿದವರು ಆ ಮಗುವಿನ ಬಗ್ಗೆ ಒಂದು ಜಾತಕವನ್ನು ರಚಿಸುವರು. ಆ ಜಾತಕದಲ್ಲಿ ಇಂತಹ ವಯಸ್ಸಿಗೆ ಇವನು ಇಂತಹವನಾಗುತ್ತಾನೆ ಎಂಬುದನ್ನು ತಿಳಿಸಿ ಬಿಡುವರು. ಜಾತಕ ಬರೆದವನು ಎಷ್ಟು ತಿಳಿದವನೋ ಗೊತ್ತಿಲ್ಲ. ಆದರೆ ದೇವರು ಮಾತ್ರ ಬಹಳವೇ ತಿಳಿದವನು. ಬಹಳವೇ ನಿಯತ್ತಾಗಿ ಸರಿಯಾಗಿ ಎಲ್ಲರ ಕ್ಷಣಗಳನ್ನು ಕೂಡ ನಿಭಾಯಿಸುವವನು. ಯಾವುದೇ ತಪ್ಪಿಲ್ಲದೆ ಅಥವಾ ಯಾವುದೇ ಮೋಸವಿಲ್ಲದೆ ಪ್ರತಿಯೊಬ್ಬರ ಜೀವನದಲ್ಲೂ ಅಳು - ನಗು - ಸುಖ - ಕಷ್ಟಗಳನ್ನು ತುಂಬಿ, ಅವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕ್ಕೆ ಅನುಗುಣವಾಗಿ ಅವರಿಗೆ ರೂಪ, ವಿದ್ಯೆ, ಧನ, ಸಂಪತ್ತು, ನೋವು, ನಲಿವು, ಗೆಳೆತನ, ಗುಣ ಎಲ್ಲವನ್ನು ಕೊಟ್ಟು ಭೂಮಿಗೆ ಕಳುಹಿಸಿರುತ್ತಾನೆ.
ಭೂಮಿಗೆ ಬಂದ ನಾವು ನಮ್ಮ ಜೀವನವನ್ನು ವ್ಯರ್ಥವಾಗಿ ಕಳೆಯದೆ ಹಲವಾರು ಉತ್ತಮ ಕಾರ್ಯಗಳನ್ನು ಮಾಡುತ್ತಾ ಹಾಗೂ ನಮ್ಮತನವನ್ನು ಬಿಟ್ಟು ಕೊಡದೆ, ಸಾಧ್ಯವಾದಷ್ಟು ತಾವು ಚೆನ್ನಾಗಿ ಬದುಕಿ ಉಳಿದವರಿಗೂ ಬದುಕಲು ಬಿಡಬೇಕಾದದ್ದು ಮಾನವ ಧರ್ಮ. ರೋಷ, ದ್ವೇಷ, ಮತ್ಸರ, ಹೊಟ್ಟೆಕಿಚ್ಚು , ಅಹಂಕಾರ ಇವುಗಳನ್ನೆಲ್ಲ ಬೆಳೆಸಿಕೊಂಡು ಇತರರಿಂದ ನಿಂದನೆಗೂ ಒಳಪಟ್ಟು, ಪರರ ಮನಸ್ಸನ್ನು ನೋಯಿಸಿ ಬದುಕುವುದು ಕೆಟ್ಟದು. ಅಂಥವರಿಗೆ ಖಂಡಿತಾ ಅವರ ನಾಳೆ ದುಃಖವನ್ನು ಅನುಭವಿಸಿಯೆ ಅನುಭವಿಸುವರು.
ಪ್ರತಿಯೊಬ್ಬರ ಬದುಕು ಶಾಶ್ವತವಲ್ಲ, ಕ್ಷಣಗಳು ಕೂಡ! ಇಂದು ಬಡವನಾಗಿರುವವನು ನಾಳೆ ಸಿರಿವಂತನಾಗಬಲ್ಲ . ಇಂದು ಸಿರಿವಂತನಾಗಿ ಮೆರೆಯುತ್ತಿರುವವನು ನಾಳೆ ಏನೂ ಇಲ್ಲದೆ ಅನಾಥನಾಗಬಹುದು . ಇದು ಬದುಕಿನ ನಿಯಮ ಯಾರು , ಯಾವಾಗ, ಎಲ್ಲಿ , ಹೇಗೆ, ಏನು ಎಂಬ ಯಾವುದೇ ಪೂರ್ವ ನಿಯಮಿತ ಪದ್ಧತಿ ನಮಗೆ ತಿಳಿದಿಲ್ಲ. ಇಂದು ಈಗ ಇಲ್ಲಿ ಚೆನ್ನಾಗಿದ್ದೇವೆ ಅಷ್ಟೇ. ನಾಳೆ ಅಥವಾ ಇನ್ನೊಂದು ಕ್ಷಣದಲ್ಲಿ ಯಾವುದೂ ತಿಳಿಯದು. ಇದುವೇ ಬದುಕಿನ ಸೂತ್ರ. ಇದುವೇ ಜೀವನ. ಇದನ್ನು ಅರಿತು ನಡೆದಲ್ಲಿ ಮಾನವರೆಂದೂ ಖಂಡಿತವಾಗಿಯೂ ಸ್ವಾರ್ಥಿಗಳಾಗಲು ಸಾಧ್ಯವಿಲ್ಲ. ಪರಹಿತ , ಪರ ಚಿಂತನೆ, ಪರೋಪಕಾರ, ಪರರಿಗೆ ಸಹಾಯ ಮಾಡುವಂತಹ ಮನೋಭಾವ ಸದಾ ಬೆಳೆಸಿಕೊಳ್ಳುವುದೇ ಜೀವನದ ಅಂಶವಾಗಿದೆ.
ಸರ್ವೇ ಜನ ಸುಖಿನೋ ಭವಂತು ಎಂಬ ಮಾತಿನಂತೆ ಯಾವಾಗಲೂ ಎಲ್ಲಿಯೂ ಸಹ ಸರ್ವರಿಗೆ ಹಿತವನ್ನು ಬಯಸುವವನಿಗೆ ಎಂದೂ ಕೂಡ ನೋವು ಕಾಡದು. ನೋವು ಬಂದರೂ ಕೂಡ ದೇವರೇ ಮನುಷ್ಯ ರೂಪದಲ್ಲಿ ಸಹಾಯ ಮಾಡಲು ಅವನಿಗೆ ಸದಾ ಸಿದ್ಧನಾಗಿರುತ್ತಾನೆ. ಪರಹಿತ ಬಯಸುವವನ ಬದುಕು ಸದಾ ಆ ದೇವರೇ ಬಂದು ನೆಮ್ಮದಿಯಾಗಿ ಇರುವಂತೆ ಮಾಡುತ್ತಾರೆ. ಇದು ಸತ್ಯ.
ಮಾಡಿದ್ದುಣ್ಣೋ ಮಹರಾಯ ಎಂಬಂತೆ ಬದುಕಲ್ಲಿ ಬೇವು ಬಿತ್ತಿದರೆ ಬೇವು ತಿನ್ನಬಹುದು, ಮಾವು ಬಿತ್ತಿ ಬೆಳೆದರೆ ಮಾವು ತಿನ್ನ ಬಹುದು. ಯಾವುದನ್ನು ನಾವು ತಿನ್ನಬೇಕು ಎಂದು ನಿರ್ಧಾರ ಮಾಡುವವರು ನಾವೇ. ಉತ್ತಮರಾಗಿ ಬದುಕೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
21.04.2023
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ