ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-178
ನಿಮಗೆಲ್ಲಾ ತಿಳಿದ ಹಾಗೆ ಮಾರ್ಚ್ ತಿಂಗಳು ಬಂತೆಂದರೆ ಅದು ಮಹಿಳೆಯರಿಗೆ ಮೀಸಲು. ಮಾರ್ಚ್ 8 ಮಹಿಳಾ ದಿನಾಚರಣೆ. ತದನಂತರ ಅಲ್ಲಲ್ಲಿ ಮಹಿಳಾ ದಿನಾಚರಣೆ ಆಚರಿಸುವ ಸಂಭ್ರಮವೋ ಸಂಭ್ರಮ. ಮಹಿಳೆಯರಿಗೆ ಸಡಗರ! ಸಂಘಗಳಲ್ಲಿ ಇರುವ ಎಲ್ಲ ಮಹಿಳೆಯರ ಅಡಿಗೆ ಬೆಳಗ್ಗೆಯೇ ರೆಡಿಯಾಗುತ್ತದೆ. ಉದ್ದ ಸಾರು ರಾತ್ರಿಯವರೆಗೆ ''ನಾನೇ ನಿನ್ನ….'' ಅಂತ ಕೂಗಿ ಕರೆಯುತ್ತಿರುತ್ತದೆ. ಮನೆಯಲ್ಲಿ ಯಾರಾದರೂ ಇದ್ದರೆ ಮುಗೀತು! ಕೆಲಸ ಅವರ ಮೇಲೆಯೇ!
ಮಹಿಳೆ ಆಕಾಶದಲ್ಲಿ ವಿಮಾನ ಓಡಿಸುವುದನ್ನು ಮಾತ್ರವಲ್ಲ, ಚಳಿಯಲಿ ದೇಶ ರಕ್ಷಣೆ ಮಾಡುವ ಯೋಧರ ಕಾರ್ಯವನ್ನೂ ಮಾಡಬಲ್ಲ, ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಹುದು ಎಂದು ತೋರಿಸಿದ ಹಲವಾರು ಮಹಿಳೆಯರು ನಮ್ಮ ನಿಮ್ಮ ನಡುವೆ ಇರುವರು. ಜಗತ್ತಿನ ಗದ್ದುಗೆ ಹಿಡಿಯುವುದರಿಂದ ಹಿಡಿದು ವಿಜ್ಞಾನಿ, ವೈದ್ಯೆ, ನ್ಯಾಯಾಧೀಶೆ, ಗುರು, ಸುಷ್ರೂಶಕಿ, ಕಾವಲು ಗಾರ್ಡ್, ಬ್ಯುಸಿನೆಸ್ ಹೆಡ್…ಹೀಗೆ ಅದ್ಯಾವ ಕೆಲಸವಿದೆ ಮಹಿಳೆ ಮಾಡದ್ದು?
ಸ್ಮಶಾನದಲ್ಲಿ ಹೆಣ ಕಾಯುವ ಕಾರ್ಯವನ್ನೂ ಮಾಡಿದ ಮಹಿಳೆಯರು ನಮ್ಮೊಡನಿರುವರು! ಬೀಡಿ ಕಟ್ಟಿ, ಕೂಲಿ ಮಾಡಿ ನಮ್ಮನ್ನು ಮೂರು ಜನರನ್ನು ಸಾಕಿ, ಓದಿಸಿ, ಕೆಲಸ ಕೊಡಿಸಿ ನಿಟ್ಟುಸಿರು ಬಿಟ್ಟು ನಿರಾಳತೆ ಪಡೆದ ನಮ್ಮಮ್ಮನು ಕೂಡಾ ದಿಟ್ಟೆ ಎನಲು ಸಂತಸ ನನಗೆ! 9 ನೇ ತಿಂಗಳ ಗರ್ಭಿಣಿಯು ಕೂಡಾ ಕುದುರೆಮಖ ಎಂಬ ಗೊತ್ತಿಲ್ಲದ ಊರಿನಲ್ಲಿ ಹೋಗಿ ಅವಿದ್ಯಾವಂತ ಗಂಡನನ್ನು ಕಟ್ಟಿಕೊಂಡು, ಪರರಿಗಂಜದೆ ತನ್ನ ಜೀವನದ ಗುರಿಯ ಸಾಧಿಸಿದ ಅಮ್ಮನಂತಹ ಅದೆಷ್ಟೋ ತಾಯಂದಿರು ನಮ್ಮೊಡನಿರುವರಿಂದು. ಕಲ್ಲು ಕುಟ್ಟುವ ಕೆಲಸ, ರಸ್ತೆ ಬದಿ ಗುಂಡಿ ತೋಡುವ ಕೆಲಸಕ್ಕೂ ಸೈ! ಸಿಮೆಂಟ್ ಮೂಟೆ ಹೊರಲೂ ಸೈ! ಗಂಡೆಂಬ ದರ್ಪದ ಪ್ರಾಣಿಯ ಮಾನಸಿಕ ಹಿಂಸೆಗೆ ಕುಗ್ಗಿ ಹೈರಾಣಾಗಿ ಮಹಿಳೆ ದುರ್ಬಲಳಾಗುತ್ತಾಳೆಯೆ ಹೊರತು ಮಹಿಳೆಯರು ಎಂದೂ ದೈಹಿಕವಾಗಿ , ಮಾನಸಿಕವಾಗಿ ದುರ್ಬಲರಲ್ಲ. ಮಾನಸಿಕವಾಗಿ ತವರು, ಗಂಡನ ಮನೆ, ಸಮಾಜ, ಸ್ತ್ರೀ ಕುಲ, ಅಕ್ಕ - ಪಕ್ಕ ದವರು ಮಹಿಳೆಯನ್ನು ಮಾನಸಿಕವಾಗಿ ಕುಗ್ಗಿಸುವ ದುಷ್ಟಶಕ್ತಿಗಳು! ಹೆಣ್ಣು ಮಾನಸಿಕವಾಗಿ ಪ್ರೀತಿಗೆ ತಲೆ ಬಾಗುವಳು! ಅದೇ ಅವಳ ವೀಕ್ನೆಸ್! ಅದನ್ನೇ ಈ ಸಮಾಜ ಬಳಸಿ ಅವಳಿಗೆ ಹಲವಾರು ಕಟ್ಟುಪಾಡುಗಳ ಹಾಕಿ ಬಿಟ್ಟಿದೆ. ಎಲ್ಲೇ ಹೋದರೂ ಶಬ್ದದ ಮೂಲಕ ತಿಳಿಯಲು ಕೈಗೆ ಬಳೆ, ಕಾಲಿಗೆ ಗೆಜ್ಜೆ! ಮೂಗಿಗೆ ಚುಚ್ಚಿ ನತ್ತು, ಕತ್ತಿಗೆ ತಾಳಿ ಹಾಕಿ ಹೆಣ್ಣಿನ ಬಾಳಿಗೆ ಬೇಲಿ ಹಾಕಿದ ಸಮಾಜ ಗಂಡಿಗೆ ಯಾವುದೇ ಕಟ್ಟು ಕಟ್ಟಳೆ ಇಡದೆ ಅವರನ್ನು ಆರಾಮವಾಗಿ ಊರಿನುದ್ದಕ್ಕೂ ರಾತ್ರಿ ಹಗಲು ಹೇಗೆ ಬೇಕೋ ಹಾಗೆ ಓಡಾಡುವ ಸ್ವಾತಂತ್ರ್ಯ ನೀಡುತ್ತಾ ಬಂದಿದೆ.
ಹೆಣ್ಣಿಗೆ ಅದೆಷ್ಟು ಕಟ್ಟುಪಾಡಿನ ಸಂಪ್ರದಾಯಗಳು! ಅಬ್ಬಾ! ಗಂಡಿಗೇನಿದೆ? ಯಾವುದೂ ಅಡೆತಡೆಗಳಿಲ್ಲ! ಅವನು ಗಂಡು! ಹೆಣ್ಣು ಮನೆಯಿಂದ ಹೊರ ಹೊರಟಾಗ ಹದಿನಾರು ಸಿಂಗಾರವಾಗಬೇಕಿದೆ! ರಾಜನೆದುರು ನರ್ತಿಸುವ ನರ್ತಕಿಯ ರಿಗೂ ಕೂಡಾ! ನಮ್ಮಷ್ಟಕ್ಕೆ ನಾವೇ ನಮಗಿಷ್ಟ ಬಂದಂತೆ ಇದ್ದರೆ. ಗಂಡುಬೀರಿ! ಸದಾ ಹಣೆ ತುಂಬಾ ಕುಂಕುಮ, ಕೈ ತುಂಬಾ ಬಳೆ, ಸೀರೆ, ಜಡೆ ಹಾಕಿ ಹೂ ಮುಡಿದು ಗಂಡು ಎಂಬ ಪ್ರಾಣಿಗೆ ಚೆನ್ನಾಗಿ ಕಂಡರೆ ಮಾತ್ರ ಹೆಣ್ಣಿನ ಜೀವನ ಸಾರ್ಥಕ್ಯ
ವಂತೆ! ಇಲ್ಲದಿದ್ದರೆ ಅವಳು ದೆವ್ವ, ಭೂತ, ಮನೆಗೆ ಮಾರಿ! ಅದನ್ನೆಲ್ಲ ಸಹಿಸಿ ಪರರಿಗಾಗಿ ಬದುಕಿದವಳು ನಾರಿ! ರಾತ್ರಿ ಹೊರಗೆ ಸುತ್ತಿದರೆ ಬಜಾರಿ, ಹೋದಲ್ಲಿ ಅಲ್ಲಿರುವ ಜನರ ಜೊತೆ ಹೊಂದಾಣಿಕೆ ಆಗದೆ ತನ್ನ ಮನೆಗೆ ತಿರುಗಿ ಬಂದರೆ ಮನೆ ಮುರುಕಿ! ಮಕ್ಕಳಾಗದೇ ಇದ್ದರೆ ಬಂಜೆ! ಮಕ್ಕಳಾಗದೇ ಇರಲು ಗಂಡ ಕೂಡಾ ಕಾರಣ! ಆದರೆ ಅವನಿಗೆ ಯಾವುದೇ ಹೆಸರಿಟ್ಟಿಲ್ಲ ಸಮಾಜ!
ಇಂದು ಕಾಲ ಬದಲಾಗಿದೆ. ಅಂತರಿಕ್ಷದಲ್ಲಿ ಕೂಡಾ ಜಾರುವ ಹೆಣ್ಣು ಅಲ್ಲಿ ಗರತಿ ಗೌರಮ್ಮನ ಹಾಗೆ ಸಿಂಗಾರ ಮಾಡಿಕೊಳ್ಳಲು ಸಾಧ್ಯ ಆಗದ ಕಾರಣ ತನಗೊಪ್ಪುವ, ಆರಾಮವೇನಿಸುವ ಹಿತಕರ ಬಟ್ಟೆಗಳನ್ನು ಧರಿಸುತ್ತಾಳೆ. ಕಲಿಸಲು ಶಾಲೆಗೆ ಹೋಗುವಾಗ ಸೀರೆಯನ್ನೇ ಉಡಬೇಕು ಎಂಬ ನಿಯಮ ಈಗಿಲ್ಲ, ಹಾಗೆಯೇ ಪೊಲೀಸ್ ಕೆಲಸಕ್ಕೆ ಹೋಗುವ ಹೆಣ್ಣನ್ನೂ, ಆಸ್ಪತ್ರೆಯಲ್ಲಿ ಕೆಲಸ ಮಾಡುವ, ಆಟೋಟಗಳಲ್ಲಿ ಭಾಗವಹಿಸುವ ಹೆಣ್ಣು ಮಕ್ಕಳನ್ನು ನೀವು ಸೀರೆಯನ್ನೇ ಉಡಬೇಕು ಎಂಬ ನಿಯಮ ಮಾಡಿ ಕಟ್ಟಿ ಹಾಕಲು ಸಾಧ್ಯ ಇಲ್ಲ ಅಲ್ಲವೇ? ಏನೂ ಇಲ್ಲ , ಸುಮ್ಮನೆ ಹೋಗಿ ಬರುವ ಕಾರ್ಯಕ್ರಮಕ್ಕೆ ಸೀರೆ ಉಟ್ಟು ಹೋಗಿ ಬರಬಹುದು. ನೂರಾರು ಮೈಲಿಗಳ ನಡಿಗೆ, ವಾಹನ ಚಲಾಯಿಸುವ ಕಾರ್ಯ, ಟ್ರೆಕಿಂಗ್, ಬೆಂಕಿ ನಂದಿಸುವಲ್ಲಿ, ರಾತ್ರಿ ಪಾಳಿಯ ಕೆಲಸದಲ್ಲಿ ಇದೆಲ್ಲ ಕಷ್ಟ ಸಾಧ್ಯ. ಕಾಲಕ್ಕೆ ತಕ್ಕ ಹಾಗೆ, ಕೆಲಸಕ್ಕೆ ತಕ್ಕ ಹಾಗೆ ನಮ್ಮ ದೇಹಕ್ಕೆ ಹಿತವಾಗಿ ಕಾಣುವ, ಅಂದ ಕಾಣುವ, ಪರಿಸ್ಥಿತಿಗೆ ಅನುಗುಣವಾದ ಉತ್ತಮ ಉಡುಪು , ದೇಹಕ್ಕೆ ರಕ್ಷಣೆ ನೀಡುವ ಉಡುಪು ಶ್ರೇಯಸ್ಕರ!
ಆದರೆ ಕೆಲವೊಮ್ಮೆ ತೀರಾ ಕನಿಷ್ಟ ಉಡುಪಿನಿಂದ ಮುಜುಗರಕ್ಕೆ ಒಳಪಡಿಸುತ್ತಾ ಇರುತ್ತಾಳೆ ಕೂಡಾ! ಕೆಲ ಹೆಣ್ಣು ಮಕ್ಕಳು ಹಣಕ್ಕಾಗಿ, ಐಷಾರಾಮಿ ಜೀವನಕ್ಕಾಗಿ, ಪರರು ತನ್ನನ್ನು ನೋಡಿ ಹೊಗಳಲಿ ಎಂಬ ಕಾರಣಕ್ಕೋ, ಕುಟುಂಬದಲ್ಲಿ ಸಿಕ್ಕಿದ ವಿಪರೀತ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು, ಹೇಳುವವರು ಕೇಳುವವರು ಯಾರೂ ಇಲ್ಲದೆ ಹೀಗೆ ತಮ್ಮ ಅಂಗಾಂಗ ಪ್ರದರ್ಶನ ಮಾಡುವುದು, ಅಂತಹ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿ ಹೆಸರು, ಹಣ ಪಡೆಯುವುದು ಇಂದು ಸರ್ವೇ ಸಾಮಾನ್ಯ ಆಗಿ ಬಿಟ್ಟಿದೆ. ಇದರಿಂದ ಉಳಿದ ಸರಿ ಇರುವ ಹೆಣ್ಣು ಮಕ್ಕಳನ್ನೂ ಜನ ನಂಬದ ಅಥವಾ ಅನುಮಾನ ಪಡುವ ಕಾಲ ಬಂದಿದೆ. ಹೆಣ್ಣು ಹೆತ್ತವರಿಗೆ ಭಯ ತರುವ ವಿಷಯ ಇದಾಗಿದೆ. ಕೆಲವೊಂದು ಹಿಂದಿ, ಕನ್ನಡ ಇತರ ಭಾಷೆಗಳ ಚಲನಚಿತ್ರ, ಟಿವಿ ಶೋ ವೀಕ್ಷಿಸುವಾಗ ಮಕ್ಕಳೊಡನೆ ವೀಕ್ಷಿಸುವುದು ತೀರಾ ಮುಜುಗರ ಎನಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ನಿರೂಪಕರ, ಜಡ್ಜ್ ಗಳಾಗಿ ಕೂರಿಸಿರುವ ಮಹಿಳೆಯರ ಅರ್ಧಂಬರ್ಧ ಮೈ ಕಾಣುವ ಬಟ್ಟೆಗಳು! ಅವರು ಸ್ವಲ್ಪ ಬಗ್ಗಿದರೂ ಪೂರ್ತಿ ಮಾನ ಹೋಗುವುದು ಗ್ಯಾರಂಟಿ ಎನ್ನುವ ಹಾಗೆ ಇರುವ ಆ ತುಂಡು ಬಟ್ಟೆಗಳ ತಯಾರಕರ ಮೇಲೂ ಬೇಸರ ಹುಟ್ಟುತ್ತದೆ! ಏಳೆಂಟು ಸಾವಿರದ ಬಟ್ಟೆಗಳೂ ಇಂದು ಮಾನ ಮುಚ್ಚುವ ಸ್ಥಿತಿಯಲ್ಲಿ ಇಲ್ಲದವುಗಳು ಇದ್ದಾವೆ. ಅದೇನು ಹೆಣ್ಣು ಮಕ್ಕಳ ವೇಷವೋ ತಿಳಿಯದು, ಕಾಲು ಗಂಟಿಗಿಂತ ಮೇಲಿನ ಚಡ್ಡಿಗಳು, ತೋಳುಗಳಿಲ್ಲದ, ಎದೆ ಭಾಗದವರೆಗೆ ಮೈ ಕಾಣುವ, ಬೆನ್ನು ಪೂರ್ತಿ ಕಾಣುವ, ಸೊಂಟ ಕಾಣುವ ಬಟ್ಟೆಗಳು ಕೆಲವರಿಗೆ ಪ್ರಿಯ. ಇದನ್ನು ಬಿಟ್ಟು ಹೆಣ್ಣು ಮಕ್ಕಳು ತಮ್ಮ ಡಿಗ್ನಿಟಿ ಯನ್ನು ತಾವು ಕಾಪಾಡಿಕೊಳ್ಳ ಬೇಕು. ಅವರ ಪೋಷಕರು ಅವರನ್ನು ತಿದ್ದಿ ಸರಿಪಡಿಸಿ ಬೆಳೆಸಬೇಕು. ಹೆಣ್ಣು ಮಕ್ಕಳು ಕೆಟ್ಟು ಹೋಗಲು ಪೋಷಕರು ಕೊಟ್ಟ ಅತೀವ ಸ್ವಾತಂತ್ರ್ಯ ಹಾಗೂ ಅಪಾರ ನಂಬಿಕೆ ಕೂಡಾ ಕೆಲವೊಮ್ಮೆ ಕಾರಣವಾಗುತ್ತದೆ ಅಲ್ಲವೇ?
@ಹನಿಬಿಂದು@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ