ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -122
ಮಾರ್ಚ್ ತಿಂಗಳಲ್ಲಿ ಎಂಟನೆಯ ತಾರೀಕು ವಿಶ್ವ ಮಹಿಳಾ ದಿನಾಚರಣೆ. ಮಹಿಳೆಗೆ ಕೇವಲ ಒಂದು ದಿನದ ದಿನಾಚರಣೆ ಸಾಕೆ? ಕೆಲವರ ವಾದ. ಪುರುಷರು ಮತ್ತು ಮಹಿಳೆಯರು ಈ ಪ್ರಕೃತಿಯ ಸೃಷ್ಟಿಯೇ ಆಗಿರುವಾಗ ಮಹಿಳೆಗೆ ಬೇರೆ ಪುರುಷರಿಗೆ ಬೇರೆ ದಿನ ಬೇಕೆ? ಇದು ಇನ್ನೊಂದು ವಾದ. ಈ ದಿನಾಚರಣೆ, ದಿನಗಳ ಮೀಸಲು ಎಲ್ಲಾ ವಿದೇಶಿಯರ ಕಲ್ಪನೆ. ಹಾಗೆ ದಿನಗಳನ್ನು ಸೃಷ್ಟಿಸಲು, ನಿಗದಿಪಡಿಸಲು ಹೋಗಿ ಇಂದು ವರ್ಷದ ಪ್ರತಿಯೊಂದು ದಿನವೂ ಒಂದೊಂದು ದಿನವೇ. ಗಾಳಿಗೂ, ನೀರಿಗೂ, ಪ್ರೀತಿಗೂ, ಹೆಣ್ಣು ಮಗುವಿಗೂ, ವೈದ್ಯರಿಗೂ, ಎಂಜಿನಿಯರ್ ಗಳಿಗೂ , ಶಿಕ್ಷಕರಿಗೂ, ಕೂಲಿ ಕಾರ್ಮಿಕರಿಗೂ, ದಾದಿಯರಿಗೂ, ಮಕ್ಕಳಿಗೂ, ವಯಸ್ಕ ಪ್ರಜೆಗಳಿಗೂ, ನಾಯಿಗೂ, ಬೆಕ್ಕಿಗೂ ಕೊನೆಗೆ. ಓತಿಕೇತಕ್ಕೂ ಒಂದು ದಿನಾಚರಣೆ ಇರಲೂ ಬಹುದು!
ಈಗಾಗಲೇ ಗೂಬೆಗಳು ಅಳಿವಿನ ಅಂಚಿನಲ್ಲಿವೆ, ಉಳಿಸಿ, ಗಿಡುಗ, ಗರುಡಗಳ ಉಳಿಸಿ, ಕಾಗೆಗಳ ಉಳಿಸಿ ಎಂಬೆಲ್ಲ ಕೂಗು ಕೇಳುತ್ತಿರುವ ಸಮಯದಲ್ಲಿ "ಮಹಿಳೆಯ ಮಾನ, ಪ್ರಾಣಗಳು ಅಳಿವಿನಂಚಿನಲ್ಲಿ ಇವೆ. ಅವುಗಳನ್ನೂ ಮಹಿಳೆಯರು ಹಾಗೂ ಪುರುಷರಿಂದ ಉಳಿಸಿ" ಎನ್ನುವ ಕೂಗು ಕೇಳುವಂತಾಗಿದೆ. ವರದಕ್ಷಿಣೆಯ ಸಮಸ್ಯೆಗೆ ಹಾಗೂ ಸಾವಿಗೆ ದೊಡ್ಡ ಕಾರಣ ಅತ್ತೆ, ನಾದಿನಿ, ಅತ್ತಿಗೆ! ಮಹಿಳೆಯೇ ಮಹಿಳೆಗೆ ಶತವೈರಿ.
ಈಗ ಮಹಿಳೆಯರ ದಿನಾಚರಣೆ ಬಗ್ಗೆ ಬರೋಣ. ಆ ದಿನ ಮಹಿಳೆಯರನ್ನೇ ವೇದಿಕೆ ಮೇಲೆ ಕುಳ್ಳಿರಿಸಿ, ಮಹಿಳೆಯರ ಬಗ್ಗೆಯೇ ಮಾತನಾಡಿ ಮನೆಗೆ ಬಂದು ಮಹಿಳೆಯರ ಬಳಿಯೇ ತನ್ನೆಲ್ಲಾ ಕೆಲಸ ಮಾಡಿಸಿ ಮೆರೆಯುವ ಪುರುಷ ಪ್ರಧಾನ ಸಮಾಜ ನಮ್ಮದು. ಮಹಿಳೆಯರೇ ಪುರುಷರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಎಂದು ಬಿಂಬಿಸಿ ಮನೆಯೊಳಗೆ ತನ್ನದೇ ರೀತಿಯಲ್ಲಿ ಅವರಿಂದ ಎಲ್ಲಾ ಕೆಲಸಗಳ ಮಾಡಿಸಿಕೊಳ್ಳುತ್ತಾರೆ.
ದಿನಾಚರಣೆಯ ನೆವದಲ್ಲಿ ಆದರೂ ಆ ಒಂದು ದಿನ ಮನೆಯಿಂದ ಹೊರಗೆ ಬರಲು ಅವಕಾಶ ಸಿಕ್ಕರೂ, ಮನೆಯ ಎಲ್ಲಾ ಕೆಲಸಗಳನ್ನೂ ಮಾಡಿಯೇ ಮನೆಯಿಂದ ಹೊರ ಬೀಳಬೇಕು ಅಲ್ಲವೇ? ಮತ್ತೆಲ್ಲಿಯ ಸ್ವಾತಂತ್ರ್ಯ ನಮ್ಮಲ್ಲಿ ಸತಿಯಾದ ಸುಶೀಳೆಗೆ! ಅಡುಗೆಮನೆಯೇ ಸೆರೆಮನೆ.
ಹೆಣ್ಣು ಮಕ್ಕಳನ್ನು ಬೆಳೆಸುವಾಗ ' ನೀನೂ ಹೆಣ್ಣು ಅನ್ನದೆ, ಹೆಣ್ಣು ಹೊನ್ನಾಗಿ ಬೆಳೆಸಿದಾಗ ಯಾವ ಅಡ್ಡಿ ಆತಂಕವೂ ಇರದೆ ಹೆಣ್ಣಾಗಲೀ ಗಂಡಾಗಲೀ ಎರಡೂ ಒಂದೇ ಎಂಬ ಭಾವನೆ ಬರುತ್ತದೆ. ಆಚರಿಸುವ ಪ್ರತಿ ಹೆಣ್ಣು ಮಗುವಿನ ದಿನಾಚರಣೆ, ಮಹಿಳೆಯರ ದಿನಾಚರಣೆ ಅರ್ಥ ಪೂರ್ಣವಾಗಿ ಇರಲಿ, ಹೆಣ್ಣು ಭ್ರೂಣ ಹತ್ಯೆ ನಿಲ್ಲಲಿ, ಹೆಣ್ಣು ಮಕ್ಕಳ ಉಡುಪು ಗಂಡು ಮಕ್ಕಳ ಕಣ್ಣು ಕುಕ್ಕದಂತೆ, ಬಗ್ಗಿದಾಗ ಎಲ್ಲಾ ಕಾಣದಂತೆ ಇರಲಿ, ಸಿನೆಮಾ , ಧಾರಾವಾಹಿಗಳಲ್ಲಿ ನಿತ್ಯವೂ ಹೆಣ್ಣು ಮಕ್ಕಳ ಅಂಗಾಂಗ ಪ್ರದರ್ಶನ ಕಡಿಮೆ ಆಗಲಿ, ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳು ಕಾಮದ ವಸ್ತುಗಳಾಗಿ ಕಾಣದೆ ಹೆಣ್ಣು ಮಕ್ಕಳ ಭಾವನೆಗಳಿಗೂ ಬೆಲೆ ಸಿಗಲಿ, ಅವರ ಆಸೆಗಳಿಗೂ ನೀರೆರೆದು ಪೋಷಿಸುವ ಕಾರ್ಯ ಪೋಷಕರಿಂದ ಆಗಲಿ. ಹೆಣ್ಣು ಮಕ್ಕಳೂ, ಹೆಂಗಸರೂ ತಮ್ಮ ಮೈಯನ್ನು ಬಿಟ್ಟಿಯಾಗಿ ಪ್ರದರ್ಶನಕ್ಕೆ ಇಡದೆ, ಮಾರಿಕೊಳ್ಳದೆ ತನ್ನ ದೇಹ ಹಾಗೂ ಮನಸ್ಸಿನ ಬೆಲೆ ಹೆಚ್ಚಿಸಿಕೊಂಡು, ಮಾನ ಮರ್ಯಾದೆ ಎನ್ನುವ ಪದಕ್ಕೆ ಅರ್ಥ ಬರಲಿ. ಸಕಲರಿಗೂ ನೆಮ್ಮದಿ ದೊರಕಲಿ, ಮೋಸ ಆಗದಿರಲಿ. ಆಗಲೇ ಮಹಿಳೆಯರ ದಿನಾಚರಣೆ ಅರ್ಥಪೂರ್ಣ ಆದೀತು.ನೀವೇನಂತೀರಿ?
@ಹನಿಬಿಂದು@
12.03.2022
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ