ಶುಕ್ರವಾರ, ಮಾರ್ಚ್ 14, 2025

ವಿಶ್ರಾಂತಿ -1

ಮಾನವತೆಯ ಬಯಸುವವರಿಗೆ...
   
ನಾವು ಮಾನವರು.....ಮಾನವರಾಗಿರೋಣ....
    ಮಂಗನಿಂದ ಮಾನವರು ಎನ್ನುತ್ತಾರೆಯೇ ಹೊರತು ಮಂಗ ಮಾನವನಲ್ಲ. ಮಂಗನಿಗಿಂತ ಮಾನವನಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಕಾಣಬೇಕು ಅಂದರೆ ಅದು "ಮಾನವತೆ". ಅದೇ ಇಲ್ಲ ಎಂದರೆ ನಮಗೂ ಮಂಗಗಳಿಗೂ ಏನು ವ್ಯತ್ಯಾಸ ಅಲ್ವೇ?
  ಹೌದು, ನಾವೆಲ್ಲಾ ಮಾನವತೆಯನ್ನು ಪರರಿಂದ ನಿರೀಕ್ಷಿಸುತ್ತೇವೆ. ನ್ಯಾಯ, ನೀತಿ, ಸತ್ಯ, ಧರ್ಮ, ಸಮಾನತೆ, ಪರಸ್ಪರ ಕೊಡು ಕೊಳ್ಳುವಿಕೆ, ಸುಖ, ಶಾಂತಿ, ನೆಮ್ಮದಿ ಎಲ್ಲವೂ ನಮಗೆ ಪರರಿಂದ ಬೇಕು. ಬೇರೆಯವರು ನಮ್ಮನ್ನು ಏನೂ ಹೇಳದೆ ನಮ್ಮಷ್ಟಕ್ಕೆ ನಾವು ಬಾಳಲು ಬಿಡಬೇಕು, ಬೇರೆಯವರು ನಮ್ಮನ್ನು ಪ್ರಶ್ನಿಸಬಾರದು, ಬೇರೆಯವರು ನಮ್ಮ ವೈಯಕ್ತಿಕ ವಿಷಯಗಳನ್ನು ಕೆದಕಬಾರದು. ಇವೆಲ್ಲವೂ ನಮ್ಮ ಬದುಕಿನಲ್ಲಿ ನಮ್ಮ ರೂಲ್ಸ್ ಮತ್ತು ಕಂಡಿಶನ್ಸ್. ಇವೆಲ್ಲಾ ಎಲ್ಲರೂ ಪರರಿಂದ ಬೇಕೆನ್ನುವ ಆಸೆ ಪಡುತ್ತಿರುವಾಗ ' ದೀಪದ ಅಡಿ ಕತ್ತಲು ' ಎಂಬ ಗಾದೆ ನೆನಪಾಗುತ್ತದೆ. ತನ್ನ ಕಾಲ ಬುಡಕ್ಕೆ ತಾನು ನೋಡಿಕೊಳ್ಳದ ಮನುಷ್ಯ ಪರರಿಗೆ ಕಾನೂನು ಕಟ್ಟಳೆ ವಿಧಿಸಿ ಅವರನ್ನು ಆಳಲು ಪ್ರಾರಂಭಿಸಿ ಬಿಡುತ್ತಾನೆ ಅಲ್ಲವೇ?
     ನಾನು ಯಾರು, ನಾನು ಹೇಗಿದ್ದೇನೆ? ನಾನು ಮಾಡುತ್ತಿರುವುದೆಲ್ಲ ಸರಿಯೇ? ನನ್ನಿಂದ ಪರರಿಗೆ ಏನಾದರೂ ತೊಂದರೆ ಆಗುತ್ತಿದೆಯೇ? ಮನೆಯಲ್ಲಿನ ಜಗಳಗಳಿಗೆ ನಾನೆ ಕಾರಣವೋ,  ನನ್ನಿಂದ ಏನು ತಪ್ಪುಗಳು ನಡೆದಿವೆ? ನನ್ನ ವ್ಯಕ್ತಿತ್ವವನ್ನು ನಾನು ಹೇಗೆ ಬದಲಾಯಿಸಿಕೊಳ್ಳಬೇಕು ಮೊದಲಾದ ಹಲವಾರು ವಿಷಯಗಳ ಬಗ್ಗೆ ನಾವು ಯೋಚನೆಯನ್ನೇ ಮಾಡುವುದಿಲ್ಲ. ಬದಲಾಗಿ ನಾನು ಚೆನ್ನಾಗಿದ್ದೇನೆ ಎಂಬ ಸರ್ಟಿಫಿಕೇಟ್ ಅನ್ನು ನಮಗೆ ನಾವೇ ಕೊಟ್ಟುಕೊಂಡು ಬಿಟ್ಟಿರುತ್ತೇವೆ. ಅದು ಸರಿಯೋ, ತಪ್ಪೋ ಎಂಬ ವಿಮರ್ಶೆಯನ್ನು ನಾವು ಮಾಡಬೇಕಾದದ್ದು ಸತ್ಯ. ನನ್ನ ತಪ್ಪು ಎಲ್ಲಿ. ನಾನು ಏನು ಮಾಡಬಹುದಾಗಿತ್ತು..? ಒಂದು ಘಟನೆ ನಡೆಯಲು ಮೂಲ ಕಾರಣ ಯಾರು? ಅದು ನನ್ನಿಂದವಾಗಿದೆಯೇ.. ಮೊದಲಾದ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡು  ನಮ್ಮನ್ನು ನಾವು ತಿದ್ದಿಕೊಳ್ಳ ಬೇಕಾಗುತ್ತದೆ. 
ಮಕ್ಕಳು ದೇವರು. ಮಕ್ಕಳು ಹಾಳಾಗಿದ್ದಾರೆ ಎಂದರೆ ಪೋಷಕರ ಉದಾಸೀನ, ಅವರು ಸರಿಯಾಗಿ ಕೇರ್ ಮಾಡದೆ ಇರುವುದು ಕಾಣುತ್ತದೆ. ಮಕ್ಕಳ ಒಳ್ಳೆಯ ಬೆಳವಣಿಗೆಯ ಹಿಂದೆ ಅವರ ಪೋಷಕರ ಶ್ರಮ ಎಷ್ಟಿದೆಯೋ, ಮಕ್ಕಳ ಕೆಟ್ಟ ಕೆಲಸ, ಸೋಮಾರಿತನದ ಹಿಂದೆಯೂ ಪೋಷಕರ ಸೋಮಾರಿತನ ಕಾಣಬೇಕು. ಮಕ್ಕಳನ್ನು ದೂರುವ ಮೊದಲು ಪೋಷಕರು ನಾನು ತಪ್ಪಿದ್ದು ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. 
    ಒಂದು ಮನೆಯಿರಲಿ, ಶಾಲೆ ಇರಲಿ. ಸಂಸಾರ ಇರಲಿ, ಸಂಸ್ಕಾರ ತಪ್ಪಿದರೆ ಅದು ತಪ್ಪೇ. ಅದನ್ನು ಎಲ್ಲರೂ ಎಲ್ಲಾ ಕಡೆ ಖಂಡಿಸಿ, ಸರಿ ಪಡಿಸಲು ತಿಳಿಸಿ ಹೇಳಬೇಕು. ಇಲ್ಲದೆ ಹೋದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ. ಮುಂದೆ ಸಂಸ್ಕಾರ ಇಲ್ಲದ ಜನಾಂಗ ಸೃಷ್ಟಿ ಆಗುತ್ತದೆ. ರಸ್ತೆ ರಸ್ತೆಯಲ್ಲಿ ಹೆಣ ಬೀಳುವುದು, ಕೊಚ್ಚಿ ಕಡಿದು ಸಾಯಿಸುವುದು, ಡ್ರಗ್, ಮಾಫಿಯಾ, ದರೋಡೆಕೋರರು, ಕೊಲೆಗಾರರು, ಕಳ್ಳರು ಇಂಥವರೇ ಆಗುವುದು. ಪ್ರೀತಿ, ಸಂಸ್ಕಾರ ಕೊಟ್ಟು ಕಲಿತ ಯಾರೂ ಹೀಗಾಗಲು ಅವಕಾಶ ಇಲ್ಲ. 
    ಪ್ರತಿ ದಿನ ಪ್ರತಿ ಕ್ಷಣ ನಮ್ಮ ಮಕ್ಕಳ ಬೆಳವಣಿಗೆಯ ಮೇಲೆ ನಾವೊಂದು ಕಣ್ಣಿಡಬೇಕು. ಮಗು ಹೆಣ್ಣಿರಲಿ , ಗಂಡಿರಲಿ, ನಾವು ಎಷ್ಟು ಆ ಮಗುವಿನ ಮೇಲೆ ನಂಬಿಕೆ ಇದೆಯೋ, ಇನ್ನೊಂದು ಕಣ್ಣು ಸರಿಯಾಗಿ ನೋಡುತ್ತಲೇ ಇದ್ದರೆ ಮಾತ್ರ ಅದರ ಬದುಕು ಮೆತ್ತಗಿನ ನೆಟ್ಟಗಿನ ದಾರಿಯಲ್ಲಿ ಸಾಗುತ್ತದೆ. ಇಲ್ಲದೆ ಹೋದರೆ ಒಂದಲ್ಲ ಎರಡಲ್ಲ.  ತಪ್ಪುವ , ತಪ್ಪಿಸುವ ಸಾವಿರಾರು ಅಡ್ಡ ದಾರಿಗಳಿವೆ. ತಪ್ಪು ಯಾರದೋ, ಮುಂದೆ ಅದರ ಪರಿಣಾಮ ಅನುಭವಿಸುವವರು ಯಾರೋ. ಹಾಗೆ ಆಗದೆ ಇರಲಿ ಎಂಬ ಆಸೆ ಇದ್ದರೆ ನಮ್ಮವರಿಗೆ, ನಮ್ಮ ಮಕ್ಕಳಿಗೆ ಮಾನವತೆ ಮತ್ತು ಸಂಸ್ಕಾರ ಕಲಿಸಬೇಕು, ಪರರ ಸುಖ ಕಷ್ಟಗಳ, ನೋವಿನ ಅರಿವು ಅವರಿಗೆ ತಿಳಿಯಬೇಕು, ಹಾಗೆ ಪೋಷಕರು ಬೆಳೆಸಬೇಕು. ಅದರ ಬದಲು ಪರರ ವಸ್ತುಗಳನ್ನು ಸುಲಭವಾಗಿ ಬಾಚಿ, ಎಳೆದುಕೊಂಡು ತಿನ್ನುವ, ಕಡಿಯುವ ಕೆಲಸವನ್ನು ಪೋಷಕರು ಕೂಡ ಮಾಡಬಾರದು, ತಮ್ಮ ಮಕ್ಕಳಿಗೆ ಆ ರೀತಿ ಹೇಳಿ ಕೊಡಲೂ ಬಾರದು. ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ. ಭೂಮಿಯಿಂದ ಎಲ್ಲರೂ ಒಂಟಿ ಕೈಯ್ಯಲ್ಲೇ ಹೋದವರು ಅಲ್ಲವೇ?
   ನಮ್ಮ ಮುಂದಿನ ಜನಾಂಗ ಚೆನ್ನಾಗಿ ಇರಲಿ ಎಂದು ಅವರಿಗೆ ಬೇಕಾದ ಎಲ್ಲವನ್ನೂ ನಾವೇ ಮಾಡಿಟ್ಟರೆ ಅವರಿಗೆ ಸಾಧಿಸಲು ಇನ್ನೇನು ಉಳಿದಿರುತ್ತದೆ? ಅದಕ್ಕೆ ಅವರ ಕನಸುಗಳನ್ನು ನಾವು ಸುಟ್ಟು ಬಿಡಬಾರದು. ಅದಕ್ಕೆ ಚಿಗುರಲು ಅವಕಾಶ ಕೊಡಬೇಕು. ಬೇಕಾದ ಎಲ್ಲವನ್ನೂ ನಾವೇ ಒದಗಿಸಿ ಕೊಟ್ಟರೆ ಅವರ ಆಲೋಚನೆ, ಗುರಿ, ಉದ್ದೇಶ ಏನಾಗಿರುತ್ತದೆ? ಎಲ್ಲವೂ ಸುಲಭವಾಗಿ ಸಿಗುವಾಗ ಯಾರು ತಾನೇ ಕಷ್ಟ ಪಡಲು ಇಚ್ಚೆ ಪಡುತ್ತಾರೆ ಅಲ್ಲವೇ? ಅದಕ್ಕೆ ಅವಕಾಶ ಮಾಡಿಕೊಡುವರು ಹಿರಿಯರು. ನಮ್ಮ ಮಾತು ಕೇಳಿ ಕಳಿಯುವುದಲ್ಲ ಮಕ್ಕಳು.ಬದಲಾಗಿ ನಮ್ಮ ಕೆಲಸ ಕಾರ್ಯ ನೋಡಿ ಕಲಿಯುತ್ತಾರೆ. ತಾನು ಟಿವಿ ನೋಡುತ್ತಾ "ನೀನು ಓದು " ಎಂದು ಮಗುವಿಗೆ ಹೇಳಿದರೆ ಸಾಧ್ಯನಾ? ಅದಕ್ಕೆ ಮಾನವತೆ, ಸಂಸ್ಕಾರ ಮನೆಯಿಂದಲೇ ಬರಬೇಕು. ಅದನ್ನು ಪೋಷಕರೇ ಬೆಳೆಸುವವರು. ಅಂತಹ ಪೋಷಕರೇ ಕುಡುಕರಾದರೆ ನಾವು ಮಕ್ಕಳನ್ನು ದೂರಿ ಏನು ಪ್ರಯೋಜನ? ಮಕ್ಕಳು ತಾನೇ ಯಾರನ್ನು ನೋಡಿ ಕಲಿತಾರು? ಮಕ್ಕಳ ಮುಂದೆ ಜಗಳವಾಡುತ್ತಾ, ಕಾದಾಡುತ್ತಾ ಅವರ ಮನಸನ್ನು ಹಿರಿಯರಾದ ನಾವು ಕೆಡಿಸದೆ ಇರೋಣ. ಚೆನ್ನಾಗಿ ಬದುಕಿ, ಒಳ್ಳೆಯ ಗುಣಗಳನ್ನು ಹಾಗೂ ಮಾನವತೆಯನ್ನು ಅವರ ಮನಸ್ಸಿನಲ್ಲಿ ಬಿತ್ತೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
16.02.2025

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ