ಗುರುವಾರ, ಜುಲೈ 29, 2021

ನಾನು ನಾನಲ್ಲ

ನಾನು ನಾನಲ್ಲ

ನಾನು ನಾನಲ್ಲ
ನೀನು ನೀನಲ್ಲ
ನಿನ್ನೊಳಗಿನ ನೀನಿಗೆ ಜೀವ 
ತುಂಬಿದ ದೇಹ ನೀನು
ನನ್ನೊಳಗಿನ ನಾನೆಂಬ 
ಆತ್ಮದ ಹಕ್ಕುದಾರ ನೀನೇ!

ನಾನೂ ನೀನೇ
ನೀನೂ ನೀನೇ
ಅವನೂ ನೀನೇ
ಅವಳೂ ನೀನೇ
ಅದೂ ನೀನೇ
ಇದೂ ನೀನೇ
ಮತ್ತೆ ನಾನು ಯಾರು?

"ನಾನು" ಹೋದರೆ ತಿಳಿವುದು
ನಾನಾರೆಂಬ ಪ್ರಶ್ನೆಗುತ್ತರ!
ಮೊದಲು ತಿಳಿಸಿದ ಕನಕ
ನಿಮಗಿದೋ ನಮಸ್ಕಾರ!

ನನ್ನೊಳಗಿನ ನಾನು
ಹೋಗುವವರೆಗೆ ನಾ ಬೆಳೆಯಲಾರೆ
ನಿನ್ನೊಳಗೆ ಸೇರುವ ಕಾಲ
ಬರುವವರೆಗೆ  ನಾ ಸಾಯಲಾರೆ!

ನಾನು ನಾನು ಹೇಗೋ
ಹಾಗೆಯೇ ನಾನು ನೀನು ಕೂಡಾ
ನೀನು ಸತ್ಯ ಹೇಗೋ
ಹಾಗೆಯೇ ನಾನು 
ಮಿಥ್ಯ ಕೂಡಾ
ನೀನು ನಿತ್ಯ!
ನನ್ನೊಳಗೆ ಪಿತ್ತ!

ನೀನು ಬೆಳೆಸಿದಂತೆ
ನಾ ಬೆಳೆದೆ
ನಿನ್ನ ನೋಡಿದರೂ 
ನಂಬದೆ ಬೆಳೆದೆ
ಸತ್ಯವರಿಯದೆ!
ಅಂತರಾತ್ಮ ತೆರೆಯದೆ!
ಕದ ತಟ್ಟಿ ನಾನೇ ಮೇಲೆ ಎಂದೆ
ಬಳಿಕ ತಿಳಿಯಿತು
ನೀ ಮೇಲಿನವನೆಂದು
ಆಗ ನಾನು ಸಿದ್ಧವಾಗುತಲಿದ್ದೆ
ನಿನ್ನೆಡೆಗೆ ಮೇಲೆ ಸಾಗಲು!
@ಪ್ರೇಮ್@
29.07.2021

ಮಂಗಳವಾರ, ಜುಲೈ 27, 2021

ಕುಬುದ್ಧಿ ಗೆಲ್ಲುವುದೆ?

ಕುಬುದ್ಧಿ ಗೆಲುವುದೆ?

ಹುಟ್ಟಿನಿಂದಲೂ ಸಾವಿನವರೆಗೂ
ಕೆಟ್ಟದ್ದೇ ಮಾಡುತ್ತಾ ಬಂದ ದುರ್ಯೋಧನ!
ಪಾಂಡವರಿಗೆ ಸಿಗಬೇಕಾದ ರಾಜ್ಯ ಕೊಡದೆ!
ಮೋಸದಿ ಸೋಲಿಸಿ, ಪತ್ನಿಯ ಹಂಗಿಸಿ
ಇದ್ದ ರಾಜ್ಯವ ಕಿತ್ತುಕೊಂಡು, ಕಾಡು ಭೂಮಿಯ ಕೊಟ್ಟು!

ಆದರೂ ಎದೆಗುಂದದೆ ದೇವರ ಕೃಪೆಯಲ್ಲಿ ಬದುಕಿದರು ಐವರು
ಅವಮಾನ ಅಪಮಾನ ಎಲ್ಲವ ಸಹಿಸಿ
ಅರ್ಧ ರಾಜ್ಯ ಬೇಡ ಒಂದು ಹಳ್ಳಿಯಾದರೂ ಕೊಡೆನುತ ವಿನಂತಿಸಿದರು
ನರಬಲವ ಉಡುಗಿಸಿದ, ಮಾತಲ್ಲೇ ಕಟ್ಟಿ ಹಾಕಿದ
ಸತ್ಯ ಧರ್ಮವ ಪರೀಕ್ಷಿಸಿದ
ತಾ ಮೆರೆದ! ಜಗತ್ತಿಗೆ ಹಠವ ಸಾರಿದ
ಸರ್ವರ ದೃಷ್ಟಿಯಲ್ಲಿ ಹಠಕ್ಕೆ ಸಾರಥಿಯಾಗಿ ನಿಂತ
ತಾನೇ ಹೀರೊ ಆದ!
ಅವ ಮಾಡಿದ್ದೇ ಸರಿ ಎಂದರು ಜನರು!
ಅವನ ಹೊಗಳಿ ಅಟ್ಟಕ್ಕೇರಿಸಿದರು!

ಹೇಳಿ, ಈ ಜಗತ್ತಿನಲ್ಲಿ ಹೀರೋ ಎನಿಸಿಕೊಳ್ಳಲು ಕೆಟ್ಟದ್ದನ್ನೇ ಮಾಡಬೇಕೇ?
ತನ್ನ ಹಠವ ಸಾಧಿಸಲು ಪರರ ಬಲಿ ಪಡೆದವನೆ ಯೋಗ್ಯನೆ?
ಪರರ ನೋಯಿಸಿ ಬದುಕ ಕಟ್ಟಿದ ಹಟಮಾರಿಯೇ ಸರ್ವೋತ್ತಮನೆ?
ಸತ್ಯ, ಧರ್ಮ, ನ್ಯಾಯಪರತೆಗೆ ಬೆಲೆಯೇ ಇಲ್ಲವೇ?
ಹೀರೋಗಳ ಮರೆತು ವಿಲನ್ ಗಳೆ ದೇಶವಾಳುವ ದೇಶವೇ ನಮ್ಮದು?
ಸತ್ಯವಂತರಿಗೆ ಕಾಲವೇ ಇಲ್ಲವೇ ಇಂದು?
ದುಡ್ಡಿದ್ದವ, ಶಕ್ತಿ ಇದ್ದವ, ಆಸ್ತಿವಂತನೇ ದೊಡ್ಡಪ್ಪನೆ!

ಅತ್ಯಾಚಾರ, ಕೊಲೆ, ಸುಲಿಗೆ, ಅನ್ಯಾಯ, ಅನಾಚಾರ, ದಬ್ಬಾಳಿಕೆ, ದೂರ್ತತನಕ್ಕೆ,ನೋವು ಕೊಟ್ಟು ನಗುವ ಅಟ್ಟಹಾಸಕ್ಕೆ ಕೊನೆಯೇ ಇಲ್ಲವೇ?
ಅಂಥವನ ಹಿಂದೆಯೇ ಬಾಲ ಮುದುರಿ ಓಡಾಡುವ ಜನಕ್ಕೆ, 
ಅವನನ್ನೇ ದೇವರೆಂದು ಆರಾಧಿಸುವ ಕುಲಕ್ಕೆ , ಈ ಅಂಧಕಾರಕ್ಕೆ ಕೊನೆಯೆಂದು?
ಕೆಟ್ಟದು ಮಾಡಿ ಗೆದ್ದವನೇ ನಾಯಕನೇ?
@ಪ್ರೇಮ್@
28.07.2021

ಭಾನುವಾರ, ಜುಲೈ 25, 2021

ಆಷಾಢದಲ್ಲಿ ಒಂದು ದಿನ

ಆಷಾಡದೊಂದು ದಿನ

ಹೋಗುತ್ತಲಿದ್ದೆ ರಸ್ತೆಯ ಮೇಲೆ ನಡೆಯುತಲಿ
ಮನದಲಿ ಬೇರೆಯೇ ಲೀಲೆಯ ತಾನು ಗುನುಗುತಲಿ
ದಾರಿಯ ಉದ್ದಕೂ ನಾಯಿಯ ಹಿಂಡನು ನೋಡುತಲಿ
ಹೆಣ್ಣನ್ನು ಕೆದಕುವ ಗಂಡಿನ ದಂಡಿನ ಹಾಗಿರುತಲಿ

ಒಂಟಿ ಹೆಣ್ಣದು ರಸ್ತೆಯಲ್ಲಿದ್ದರೆ ಮಾನವ ವರ್ತನೆ ಹೀಗೆಯೇ ಅಲ್ಲವೇ?
"ತನಗೂ ಒಮ್ಮೆ ಸಿಗಲಿ" ಎನುತ ಕಾಲೆತ್ತಿ ಬರುವ ಗಂಡಿನ ಮದವೇ!
ಅಷಾಡವಾದರೆ ಶ್ವಾನದ ಹಿಂಡದು ವಕ್ಕರಿಸುವುದು
ನಾ ಮುಂದೆ ತಾ ಮುಂದೆ0ದು ಸದಾ ಬೀಗುವುದು!

ಜಗಳದಿ ತನ್ನ ಕಾರ್ಯವ ಮಾಡಲು ಹಾತೊರೆಯುವುದು
ಜನಗಳ ಹಾಗೆ ಗಲಾಟೆಯ ಮಾಡುತ ಮೆರೆಯುವುದು
ಒಂದರ ಮೇಲೊಂದು ಕೋಪದಿ ಹಾರಾಡುವುದು!
ತನ್ನ  ಮಂತ್ರಿಗಿರಿ ಕುರ್ಚಿಗೆ ತಾನೇ ಹೋರಾಡುವುದು!
@ಪ್ರೇಮ್@
26.07.2021

ಶನಿವಾರ, ಜುಲೈ 24, 2021

ಪ್ರಶಸ್ತಿ ಬೇಕೆ?

ಪ್ರಶಸ್ತಿ ಬೇಕೆ?

ಅವರವರ ಭಾವಗಳು ಅವರಿಗೆ ಮಿಗಿಲು
ಭಾವ ಬಳ್ಳಿಯ ಕೂಸು ತಾನೇ ಮುಗಿಲು
ಭಾವ ತೀವ್ರತೆಯ ಅಳೆಯಲು ಮಾಪನವಿದೆಯೇ
ಕಾವ್ಯ ಕವನ ಸ್ಪರ್ಧೆಗಳಿಗೆ ಅರ್ಥವಿದೆಯೇ?

ಪದ ಬಳಕೆ ಸಂಪತ್ತು ಮನಸ್ಸಿನಾಳದಲಿ
ಸದಾ ಬರೆವ ಕವಿಗದು ಹೃದಯದಲಿ
ಕದ್ದು ಸಾಲುಗಳ ಸೇರಿಸಿ ತಾನೇ ಗೆದ್ದ ಭರದಲಿ
ಸರ್ವೆಡೆ ಹಂಚಿದರು ಕರಪತ್ರವ ಸಂತಸದಲಿ..

ಭಾವ ಬರಿದಾಗದು ಬಹುಮಾನ ಬರದ ಬೇಸರಕೆ
ಕವಿಯು ಬರೆವುದು ತನ್ನ ಮನದ ಸಂತಸಕೆ
ಹಾರ ತುರಾಯಿ ಕುರ್ಚಿಯ ಆಸೆಯಿಂದಲ್ಲ
ಭಾವಗಳು ಸ್ಪುರಿಸೆ ಯಾವುದೂ ಬೇಕಿಲ್ಲ..

ಸಮಾಜ ತಿದ್ದುವ ಪ್ರೀತಿ ಉಕ್ಕಿಸುವ
ನಲಿವ ಹೇಳುವ ನೋವು ಹಂಚುವ
ತನ್ನ ಪದಗಳ ಓದುಗರಿಗೆ ತಲುಪಿಸುವ
ಓದಿ ಚಪ್ಪಾಳೆ ತಟ್ಟಿದೊಡೆ ಸಿಗುವ ಸಂತಸವ

ಕವಿಗೇನು ಬೇಕು ಮತ್ತೆ ಓದುಗ ಮನಗಳ ಹೊರತು
ತನ್ನ ಭಾವವ ಪರರಿಗೆ ಹಂಚಿದೊಡೆ ಒಳಿತು
ಸ್ಪರ್ಧೆ ಬಹುಮಾನಕೆ ಬಾಗದು ಪದ ಸಂಪತ್ತು
ಭಾವ ಬಳ್ಳಿಗೆ ಕವನವಾದ ಗಮ್ಮತ್ತೇ ಕಿಮ್ಮತ್ತು!
@ಪ್ರೇಮ್@
25.07.2021

ನವ ಭಾವ

*ನವ ಭಾವ*

ಓದದೇ ಬರೆಯಲದು ವ್ಯರ್ಥವೆನುವರು ಜನರು
ಓದಿ ಬರೆದಾಗ ಸಾಹಿತ್ಯ ತೂಕವಂತೆ
ಬದುಕ ಪ್ರತ್ಯಕ್ಷ ಅನುಭವವದು ಓದಿಗಿಂತಲೂ ಶ್ರೇಷ್ಠ
ಬದುಕ ಓದಿದವ ಬರೆಯಬಲ್ಲ ಗಟ್ಟಿ
ಬರವಣಿಗೆ ಪದಗಳ ಒಟ್ಟು ಮುದ್ದೆಯಲ್ಲ
ಅದು ಬಾಳಿನ ಅನುಭವದ ಚಿನ್ನದ ಗಟ್ಟಿ
ಓದಿಗಿಂತಲೂ ಹೆಚ್ಚು ಅನುಭವದ ಸಾರ
ನೋವುಂಡ ಜೀವಕೆ ಬಾರದೆ ಪದಗಳ ರಾಶಿ
ಮನದ ನೋವನು ಬಿತ್ತಲು ಗದ್ದೆ ಸಾಹಿತ್ಯ ಕ್ಷೇತ್ರ
ತನು ಮನವ ಹಸನುಗೊಳಿಸಿ..
ಮತ್ತೆ ಮುಂದಿನ ಬದುಕಿಗೆನ್ನ ಒರೆ ಹಚ್ಚಿ ಸರಿಪಡಿಸೆ
ನವ ಭಾವ ಹುಟ್ಟುತ ಮಾಡಿಹುದು ಮೋಡಿ
ನೋವಿನಲೆಯಲು ಹೊಸ ಭಾವ ಹುಟ್ಟಲದು
ಕಾರಣವು ಸಾಹಿತ್ಯದೊಲವ ಮಳೆಯು
ಹನಿ ಹನಿಯ ಬೀಳುತಿರೆ ತುಂಬುವುದು ಸಾಗರವು
ಬದುಕ ನಾವೆಯು ಅಲ್ಲಿ ತೇಲುತಿರಲಿ
ಉದಕದಂತೆಯೆ ಬಣ್ಣರಹಿತ ತಿಳಿಯಾದ ಕ್ಷಣಗಳು ಬರಲಿ
ಮುತ್ತು ಆಕಾಶದಿಂದುದುರಿದಂತೆ ಹೊಸ ಹೊಸ ಭಾವಗಳು ಚಿಮ್ಮಿ ಬಂದು ಬಾಳು ಬೆಳಗಲಿ...
@ಪ್ರೇಮ್@
25.07.2021

ಬಿರುಕನ್ನು ಸರಿಪಡಿಸೋಣವೇ?

ಬಿರುಕನ್ನು ಸರಿ ಪಡಿಸೋಣವೇ?

ಬಿರುಕಿರದ ಬದುಕಿಹುದೇ? ಎಲ್ಲರ ಮನೆಯ ದೋಸೆಯೂ ತೂತಿನದ್ದೇ ಅಲ್ಲವೇ? ಎಲ್ಲರ ಕುಟುಂಬಗಳಲ್ಲಿ ಪ್ರತಿ ಧಾರಾವಾಹಿಯಲ್ಲಿ ಇರುವಂತಹ ಒಂದಾದರೂ ಕ್ರಿಮಿ, ಹುಳಗಳು ಇದ್ದೇ ಇರುತ್ತವೆ ಅಲ್ಲವೇ? ಅಲ್ಲಿ ಎರಡು ಬಣಗಳು. ಒಂದು ಒಳ್ಳೆಯವರದ್ದು ಮತ್ತೊಂದು ಪಿತೂರಿ ನಡೆಸಿ ಮೋಸ ಮಾಡುವವರದ್ದು. ಅವರು ಯಾವಾಗಲೂ ತಮ್ಮ ಜೋಳಿಗೆಯನ್ನು ತುಂಬಿಸಲು ನೋಡುತ್ತಿರುತ್ತಾರೆ. ಅಂಥವರಿಗೆ ದಿನ ಇಂದು. ದೇವರು ಅವರಿಗೇ ಹೆಚ್ಚು ತಲೆ ಬಾಗುತ್ತಾನೆ ಅನ್ನಿಸುತ್ತದೆ ಕೆಲವೊಮ್ಮೆ.

ಆದರೆ ದೇವರು ಸತ್ಯದ ಕಡೆಗೆ. ನಮ್ಮ ಬದುಕನ್ನು ಒಮ್ಮೆ ಸಿಂಹಾವಲೋಕನ ಮಾಡುತ್ತಾ ಹೋದರೆ ನಾವು ಮಾಡಿದ ಒಳ್ಳೆಯ ಕೆಲಸಗಳಿಗೆ ನಮಗೆ ಖಂಡಿತಾ ಸುಖ ದೊರೆತಿದೆ. ಕೆಟ್ಟ ಕೆಲಸಗಳಿಗೆ ದೇವರ ಶಿಕ್ಷೆಯೂ ಸಿಕ್ಕಿದೆ. ಅಲ್ಲದೇ ನಮ್ಮ ಒಳ್ಳೆಯತನಕ್ಕೆ ದೇವರು ಒಳ್ಳೆಯದೇ ಮಾಡಿರುವನು.

ಸಂಬಂಧಗಳಲ್ಲಿ ಅತಿರೇಕಕ್ಕೆ ಹೋದಾಗ ಗಲಾಟೆ ಆಗುತ್ತದೆ. ಪ್ರತಿಯೊಬ್ಬನ ತಾಳ್ಮೆಗೂ ಒಂದು ಮಿತಿ ಇದೆ. ಆ ಮಿತಿ ಮೀರಿದಾಗ ಕೃಷ್ಣನೂ ಕೊಲ್ಲಲಿಲ್ಲವೇ 100 ತಪ್ಪುಗಳ ಬಳಿಕ? ಆದರೆ ತಪುಗಳು, ಬಿರುಕುಗಳು, ಕೋಪಗಳು, ಲೋಪಗಳು, ಒಡಕುಗಳು, ನೋವು ನಮ್ಮಿಂದ ಆಗದಿರಲಿ, ನಾವದಕ್ಕೆ ಕಾರಣರಾಗುವುದು ಬೇಡ. ನಮ್ಮಿಂದ ಪರರಿಗೆ ತೊಂದರೆ ಆಗಬಾರದು. ನಮ್ಮಿಂದ ಪರರ ಬದುಕಿಗೆ ನೋವು ಉಂಟಾಗ ಬಾರದು!

ನಮ್ಮ ಸಹನೆಯ ಪರೀಕ್ಷೆ ಆಗಿಯೇ ಆಗುತ್ತದೆ. ಮುಂದಿನ ಹಂತಕ್ಕೆ ಹೋಗ ಬೇಕಾದರೆ ಒಂದು ಹಂತದ ಕಠಿಣ ಪರೀಕ್ಷೆಯನ್ನು ಎದುರಿಸಿ ಪಾಸಾಗಲೇ ಬೇಕಿದೆ. ಅದಕ್ಕೆ ಭಯ ಪಡಬಾರದು. ಆದರೆ ಪರೀಕ್ಷೆಯನ್ನು ಬರೆಯುವುದೇ ಜೀವನ ಆಗಬಾರದು. ಪರೀಕ್ಷೆ ಬರೆಯುವುದಕ್ಕೂ ಇತಿ ಮಿತಿಗಳಿವೆ ಅಲ್ಲವೇ? ಬುದ್ಧಿ ತನಗೆ ಬಹಳವೇ ಇದೆ ಎಂದು ಮೆಡಿಕಲ್, ಇಂಜಿನಿಯರಿಂಗ್, ಎಲ್.ಎಲ್.ಬೀ, ಬಿಎಡ್, ಬೀ. ಎ ಪರೀಕ್ಷೆಗಳನ್ನು ಒಟ್ಟಿಗೆ ಬರೆಯಲಾಗದು. ಆದರೆ ಒಂದೊಂದಾಗಿ ಬಿಡಿಸಿದರೆ ಯಾವ ಗಂಟು ಸಿಕ್ಕುಗಳನ್ನೂ ಕೂಡಾ ಬಿಡಿಸಬಹುದು. ಅಂತೆಯೇ ಸಾವಕಾಶವಾಗಿ ಎಲ್ಲಾ ಬಿರುಕುಗಳನ್ನು ನಾವು ಸರಿಪಡಿಸಲು ಪ್ರಯತ್ನಿಸಬೇಕು. ಮನೆಯಲ್ಲೇ ಆಗಲಿ, ಕುಟುಂಬದಲ್ಲೇ ಆಗಲಿ ಬಂದ ಬಿರುಕನ್ನು ಸರಿಪಡಿಸಿ ಬದುಕಬೇಕೇ ಹೊರತು ಮತ್ತೂ ಅದನ್ನು ಕಗ್ಗಂಟು ಮಾಡುವುದಲ್ಲ.

ನೀರ ಮೇಲೆ ಭಾರದ ಹಡಗು ತೇಲುವ ಹಾಗೆ ನಮ್ಮ ಬದುಕು ಕೂಡಾ ಸಂತಸದಿಂದ ತೇಲಿ ಹೋಗ ಬೇಕು. ಕಷ್ಟಗಳು ಸರ್ವೇ ಸಾಮಾನ್ಯ. ಅದು ಮಾನವರಿಗೆ ಬಾರದೆ ಮರಕ್ಕೆ ಬರುತ್ತದೆಯೇ ಎಂಬುದು ಹಳೆಯ ಗಾದೆ. ಈಗ ಮರಗಳಿಗೆ ಬಂದ ಕಷ್ಟದಿಂದಾಗಿ ಮಾನವರ ಬದುಕು ಬೀದಿಗೆ ಬಿದ್ದಿದೆ. ಕಾಡು ಬೆಳೆದರೆ ಹಾಡುತ್ತಾ ಉಣ್ಣಬಹುದು ಎಂಬ ಗಾದೆ ಸತ್ಯವಾಗಿದೆ.

ಸಂಬಂಧ, ಕುಟುಂಬಕ್ಕೆ ಬೆಲೆ ಕೊಡೋಣ, ಮನಸ್ಸುಗಳ ಜೋಡಿಸೋಣ, ಬಿರುಕು ಮೂಡಿಸಲು ಹೋಗದೆ ಇರೋಣ, ಅತಿಯಾಸೆ ದೂರ ಇರಿಸೋಣ, ನಾವು ಬದುಕಿ ಸರ್ವರಿಗೆ ಬದುಕಲು ಬಿಡೋಣ. ನೀವೇನಂತೀರಿ?
@ಪ್ರೇಮ್@
24.07.2021


ಶುಕ್ರವಾರ, ಜುಲೈ 23, 2021

ಪ್ರೀತಿಯ ಹೊರತಾಗಿ

ಪ್ರೀತಿಯ ಹೊರತಾಗಿ...

ನಮ್ಮಲ್ಲಿ ಮಹಡಿ ಮನೆಗಳು ವಿಶಾಲ ಕೋಣೆಗಳಿವೆ
ಪ್ರೀತಿಯ ಹೊರತಾಗಿ
ಐಷಾರಾಮಿ ಕಾರುಗಳು ಶೆಡ್ನಲ್ಲಿ ನಿಂತಿರುತ್ತವೆ
ಪ್ರೀತಿಯ ಹೊರತಾಗಿ..

ಹಲವಾರು ಮನಗಳು ಒಟ್ಟಿಗೆ ಕುಳಿತು ಊಟ ಮಾಡುತ್ತವೆ
ಪ್ರೀತಿಯ ಹೊರತಾಗಿ
ಮಾತುಕತೆಗಳು ಆಗಾಗ ಆಸ್ತಿ ವಿಷಯದಲ್ಲಿ ಆಗುತ್ತಿರುತ್ತವೆ
ಪ್ರೀತಿಯ ಹೊರತಾಗಿ

ಮಕ್ಕಳ ಭವಿಷ್ಯದ ಬಗ್ಗೆ ಯೋಜನೆಗಳು ರೂಪಿತವಾಗುತ್ತವೆ
ಪ್ರೀತಿಯ ಹೊರತಾಗಿ
ಮುಕ್ಕಾಲು ಭಾಗ ನಗೆ ಗುಳಿಗೆಗಳು ಸರ್ವರ ಉಬ್ಬಿಸಿ ಬಿಡುತ್ತವೆ ಪ್ರೀತಿಯ ಹೊರತಾಗಿ

ದನ ಧಾನ್ಯ ಕನಕ ವಜ್ರ ವೈಢೂರ್ಯ ತುಂಬಿ ತುಳುಕುತ್ತಿವೆ
ಪ್ರೀತಿಯ ಹೊರತಾಗಿ
ವಿದ್ಯಾ ದೇವಿಯೇ ಮೇಲೆ ನಿಂತು ಇಲ್ಲಿ ಎಲ್ಲರ ಕಾಯುತಿಹಳು ಪ್ರೀತಿಯ ಹೊರತಾಗಿ

ಶಾಂತಿ ಕಾಂತಿ ಭಕ್ತಿ ನೀತಿ ಯುಕ್ತಿ ಶಕ್ತಿ ಹಬ್ಬ ಬೇಕಿದೆ ಪ್ರೀತಿಯ ಜೊತೆಯಾಗಿ





ಗುರುವಾರ, ಜುಲೈ 22, 2021

From the pages of the diary..

These feelings hurt a lot. Suddenly they rush in the mind to brain and make mental and physical health bad. Why those sad and bad feelings hurt us so much? The answer has feelings depend on patience. The patience has its own limit. When patience is helpless feelings make us sad.

In the road of my life I had only stones and thorns. Beautiful life I got is education, friends, a state  government job and good field, good school, good staff, God's  grace.Graceful daughter (baby)! rest of all tensions! 

Family, No love, doubtful life mate, no care, no giver, only takers! Rest relatives let it be. I least bother about them. But the person who selected me for his life! Very sad, God has not blessed me his good or worked meals! He is very lazy. Since last 10 years he has no job! Yet he travel in a car. We are working ! Yet moves in a bus hourly! 

No qualification, bad audour of scents, as well as the sweat, no proper bath! Smell of drinking, smoke! It's 11.30 PM. Talk to you tomorrow. Good night.
@Prem@
22.07.2021

ಬುಧವಾರ, ಜುಲೈ 21, 2021

88

88




ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-88




ಸಂಬಂಧಗಳ ಬಗೆಗೆ ಒಂದಿಷ್ಟು. ಮೊದಲಿನ ಹಾಗೆ ಒಂದೇ ಕುಟುಂಬದ ಎಲ್ಲಾ ಸದಸ್ಯರು ಒಂದೇ ಕಡೆ ಮನೆ ಕಟ್ಟಿ ಅಲ್ಲೇ ಕೊಡು ಕೊಳ್ಳುವಿಕೆ ಇರುವ ಸಂಪ್ರದಾಯ ಇಂದು ಇಲ್ಲ. ಅಪ್ಪ ಅಮ್ಮ ಹಳ್ಳಿಯಲ್ಲಿ, ಮಗ ಅಮೆರಿಕಾದಲ್ಲಿ, ಮಗಳು ಯುರೋಪ್ ನಲ್ಲಿ ಇರುವ ಕಾಲ ಇದು! ಕೆಲವು ಕುಟುಂಬಗಳಲ್ಲಿ ತಂದೆ ದುಬೈ ಯಲ್ಲಿ, ತಾಯಿ ಭಾರತದಲ್ಲಿ, ಮಗ ಜಪಾನ್ ನಲ್ಲಿ, ಮಗಳು ಅಮೆರಿಕಾದಲ್ಲಿ! ಕೂಡು ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಹಂಚಿ ಹೋದುದೆ ಅಲ್ಲದೆ ಆ ನ್ಯೂಕ್ಲಿಯರ್ ಕುಟುಂಬದಲ್ಲೂ ಒಬ್ಬರೇ ಜನರಿರುವ ಕಾಲ ಬಂದಿದೆ. ನಾನು ಗಮನಿಸಿದಂತೆ ಬೇರೆ ಬೇರೆ ದೇಶದಲ್ಲಿ ಇರುವ ಜನರಲ್ಲಿ ಡಿವೋರ್ಸ್ ಕೇಸುಗಳು ಹೆಚ್ಚು. ಹಣ ಹೆಚ್ಚಾದಂತೆ ಹೊಂದಾಣಿಕೆ ಕಡಿಮೆ ಆಗುವುದೆನೋ? ಕುಟುಂಬಗಳ ಒಗ್ಗೂಡುವಿಕೆ ಇಲ್ಲದ ಕಾರಣ ನಂಬಿಕೆ, ಪ್ರೀತಿ ಕೂಡಾ ಕಡಿಮೆ. ಹಲವು ಬಾಂಧವ್ಯಗಳು ನಂಬಿಕೆಯ ಮೇಲೆಯೇ ನಿಂತಿದ್ದರೂ ಸಹ ಇಂದು ಮಾನವ ದುಡ್ಡಿನ ಹಿಂದೆ ಓಡುತ್ತಿರುವ ಕಾರಣ ಎಲ್ಲಾ ಸಂಬಂಧ, ಬಾಂಧವ್ಯಗಳಿಗಿಂತ ಹೆಚ್ಚಾಗಿ ಹಣಕ್ಕೆ ಬೆಲೆ ಕೊಡುತ್ತಾನೆ. ಇಂದು ಹಣ ನಮ್ಮನ್ನು ಆಳುತ್ತಿದೆ. 




ಹಲವು  ಜನರ ಜೀವನದಲ್ಲಿ ಇಂದು ಅವರ ಖರ್ಚಿಗೆ ಬೇಕಾದಷ್ಟು ಹಣವಿದೆ. ಆದರೆ ನೆಮ್ಮದಿ, ಪ್ರೀತಿ ಸಿಗುತ್ತಿಲ್ಲ. ಕಾರಣ ಅವರ ಮನೋಧೋರಣೆ. ಹಣದಿಂದ ಏನು ಬೇಕಾದರೂ ಪಡೆಯಬಹುದು ಎಂಬುದನ್ನು ಮನುಷ್ಯ ತನ್ನ ಬದುಕಿನಿಂದ ದೂರ ತಳ್ಳಬೇಕಿದೆ. ನಿಷ್ಕಲ್ಮಶ ಪ್ರೀತಿ, ಸ್ನೇಹಗಳು ಸಿಗಲೂ ಹೃದಯದ ಭಾಷೆ ಚೆನ್ನಾಗಿರಬೇಕು, ಮನುಷ್ಯತ್ವ ಬೇಕು. ಅದು ಇಂದು ಮಾನವನಲ್ಲಿ ಕಡಿಮೆಯಾಗಿ ಮೃಗತ್ವ ಬೆಳೆದಿದೆ. ಹಣವಿದ್ದವರೇ ಹೆಚ್ಚು ಮೃಗೀಯ ವರ್ತನೆ ತೋರುತ್ತಿದ್ದಾರೆ. ಒಂದು ಕಾಲದಲ್ಲಿ ಈಗಿನ ಹಾಗೆ ಮಾಹಿತಿ, ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಜನ ಜಾತಿ ಮತ ಅಂತರ ನೋಡದೆ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಚೆನ್ನಾಗಿದ್ದರು. ಅಂಗಡಿಗಳು ಜಾತಿಯ ಆಧಾರದಲ್ಲಿಯೇ ಇದ್ದರೂ ಅಕ್ಕಸಾಲಿಗರ ಬಳಿ ಚಿನ್ನಕ್ಕೆ, ನಾಯಿಂದರ (ಭಂಡಾರಿ) ಬಳಿ ಕೂದಲು ಕತ್ತರಿಸಲು, ಮುಸ್ಲಿಮರ ಬಳಿ ಗುಜೀರಿ ವಸ್ತುಗಳ ಮಾರಲು, ಮೀನು ಮಾಂಸ, ಚಪ್ಪಲಿ ಕೊಳ್ಳಲು, ಭಟ್ಟರ ಬಳಿ ಪೂಜೆ , ಅಡಿಗೆ ಮಾಡಿಸಲು, ಶೆಟ್ಟರ ಅಂಗಡಿಯಿಂದ ದಿನಿಸು ತರಲು, ಕೆಳ ಜಾತಿಯವರನ್ನು ಮನೆಯ ತೋಟದ ಕೆಲಸಕ್ಕೆ ಆಳುಗಳನ್ನಾಗಿ ಕರೆಸಿ ಅವರನ್ನೂ ಚೆನ್ನಾಗಿ ನೋಡಿಕೊಳ್ಳುವ ಸಮಾಜ ಇತ್ತು. ಸಮಾನತೆ ಇರಲಿಲ್ಲ ಆದರೆ ಅವರವರಿಗೆ ಸಮಾಜದಲ್ಲಿ ಅವರದ್ದೇ ಆದ ಜವಾಬ್ದಾರಿ, ಕರ್ತವ್ಯಗಳು ಇದ್ದವು. ಓಲಗ ಊದುವವರು ಬಾರದೆ ಊರ ಜಾತ್ರೆ ಪ್ರಾರಂಭ ಆಗುತ್ತಿರಲಿಲ್ಲ, ಮದುವೆಗಳು ಕೂಡಾ. ಜೀಟಿಗೆ ಹಿಡಿಯುವವರು ಬಾರದೆ ಕೋಲ ಶುರುವಾಗುತ್ತಿರಲಿಲ್ಲ. ಅವರವರಿಗೆ ಅವರದ್ದೇ ಆದ ಬೆಲೆ ಇತ್ತು. ಕೆಲಸಕ್ಕೆ ಕೂಡಾ. ಕೂಲಿ ಕೆಲಸದವರು ಇಲ್ಲದಿದ್ದರೆ ದನಿಯ ಮನೆಯಲ್ಲಿ ಗದ್ದೆ ತೋಟದ ಹಸಿರು ಮಾಸಿ ಹೋಗುತ್ತಿತ್ತು. ಆದರೆ ಈಗ ಓದಿದ ಮಕ್ಕಳೆಲ್ಲಾ ನಗರಗಳಲ್ಲಿ. ಹಿರಿಯರು ದಿಕ್ಕು ಕಾಣದೆ ತಾವು ಕಷ್ಟ ಬಂದು ಕಟ್ಟಿದ ಹಳ್ಳಿಯ ಮನೆಗಳಲ್ಲಿ ಅಸಹಾಯಕರಾಗಿ ಇದ್ದಾರೆ. ನಮ್ಮ ಮಕ್ಕಳು ನಮ್ಮ ಹಾಗೆ ಕಷ್ಟ ಬರಬಾರದು ಎಂದು ವಿದ್ಯೆ ಕಲಿಸಿದ ಹಲವಾರು ಮಕ್ಕಳು ತಂದೆ ತಾಯಿ ಮಾಡುತ್ತಿದ್ದ ಕೃಷಿ ಕೆಲಸ ಮಾಡಲು ಬಾರದೆ ಇದ್ದ ಭೂಮಿಯನ್ನು ಉಪಯೋಗ ಮಾಡಿಕೊಂಡರು. ಜೆಸಿಬಿ ಎಂಬ ವಾಹನ ಬಂದುದೆ  ಮಣ್ಣು ಸಮತಟ್ಟು ಮಾಡಲು.ಗಿಡ ಮರಗಳು ಬೇರು ಸಹಿತ ನೆಲಕ್ಕುದುರಿದವು. ಅವುಗಳ ಜಾಗದಲ್ಲಿ ಕಾಂಕ್ರೀಟ್ ಕಾಡುಗಳು ತಲೆ ಎತ್ತಿದವು. ತಿನ್ನಲು ಅನ್ನ ಇಲ್ಲವಾಯಿತು. ಅದೇ ರೀತಿ ಸಂಬಂಧಗಳೂ ಬೆಲೆ ಕಳೆದುಕೊಂಡವು. 




"ಪರ ಊರು ಪರಮ ಕಷ್ಟ " ಎಂಬ ಗಾದೆಯ ಅರ್ಥ ಜನರಿಗೆ ಅರಿವಾದದ್ದು ಲಾಕ್ ಡೌನ್ ಕಾಲದಲ್ಲಿ. ಯಾರಿಗೆ ಏನು ಬೇಕೋ ಅದು ಸಿಗದಾಯಿತು. ಹಳ್ಳಿಯ ವಯಸ್ಸಾದ ತಂದೆ ತಾಯಿಯರನ್ನು ಕ್ಯಾರೇ ಮಾಡದೇ ನಗರದಲ್ಲೇ ಬದುಕಿ ಜೀವನವನ್ನು "ಎಂಜಾಯ್ " ಮಾಡುತ್ತಿದ್ದವರಿಗೆ ಕೆಲಸ ಇಲ್ಲದೆ ಹಳ್ಳಿಗೆ ಹೋಗುವ ಹಾಗಾಯಿತು. ಅದೆಷ್ಟೋ ಜನ ಕೃಷಿಗೆ ಮತ್ತೆ ಮರಳಿದರು. ತಮಗಿರುವ ಜಾಗದಲ್ಲಿ ತೋಟ ಪ್ರಾರಂಭಿಸಿದರು. ತಮ್ಮ ಹಿರಿಯರ ಕೆಲಸ ಕಾರ್ಯವನ್ನು ನೂತನ ತಂತ್ರಜ್ಞಾನದ ಬಳಕೆಯ ಮೂಲಕ ಮತ್ತಷ್ಟು ಉತ್ತಮಗೊಳಿಸಿದರು. ಹಿರಿಯರಿಂದ ಜವಾಬ್ದಾರಿ ಪಡೆದುಕೊಂಡರು. 




ಪ್ರೀತಿ, ವಿಶ್ವಾಸ, ನಂಬಿಕೆಗಳು ಹಣ, ಧನ, ಕನಕಗಳಿಂದ ಹೊರತಾದವು. ಇವು ಮಾನವನ ಜೀವನದ ಅನನ್ಯ ಬಿಂದುಗಳು. ಎಷ್ಟೇ ದುಡಿದರೂ ದೊಡ್ಡ ಕೋಟ್ಯಾಧಿಪತಿ ಆದರೂ ಅಮ್ಮನ ಪ್ರೀತಿಯಲ್ಲಿ ಅವನು ಮಗುವೇ ಆಗಿ ಬಿಡುತ್ತಾನೆ. ಅದನ್ನು ಅವನ ಪೂರ್ತಿ ಹಣ ಕೊಟ್ಟರೂ ಬೇರೆಯವರಿಂದ ಪಡೆಯಲು ಸಾಧ್ಯ ಇಲ್ಲ. ನಮ್ಮವರು ಅನ್ನಿಸಿಕೊಂಡವರು ಮಾತ್ರ ನಮ್ಮ ಕಷ್ಟದಲ್ಲಿ ನಮ್ಮೊಡನೆ ಇರುತ್ತಾರೆ, ಅದು ಬಿಟ್ಟು ಟ್ವಿಟರ್ ಫ್ರೆಂಡ್ಸ್ ಬಂದು ಆಸ್ಪತ್ರೆಯಲ್ಲಿ ನಿಮ್ಮ ಸೇವೆ ಮಾಡುವರೇ?




ಸಂಬಂಧಗಳ ಬೆಲೆಯನ್ನು ನಾವು ಅರ್ಥೈಸಿಕೊಳ್ಳ ಬೇಕಿದೆ. ಪ್ರತಿ ಸಂಬಂಧಕ್ಕೂ ಬೆಲೆ ಕೊಟ್ಟು ಆ ಪ್ರೀತಿಯನ್ನು ಪಡೆಯ ಬೇಕಿದೆ. ಮೊಬೈಲ್ ನೋಡುತ್ತಾ ಯಾರನ್ನೂ ಗುರುತು ಹಿಡಿಯದವರ ಹಾಗಿದ್ದು ಕೊನೆಗೆ ಒಂದು ದಿನ ಪಶ್ಚಾತಾಪ ಪಡಬೇಕಾಗ ಬಹುದು. ನಮ್ಮ ಪ್ರೀತಿಯನ್ನು ನಮ್ಮವರಿಗೆ ಹಂಚಿ, ಮೋಸ ಹೋಗದೆ, ಹಣದ ಹಿಂದೆ ಓಡದೆ, ನಿಜವಾದ ನೀತಿಯಿಂದ ನಂಬಿಕೆ ಉಳಿಸೋಣ. ವಿಶ್ವಾಸ ಬೆಳೆಸೋಣ. ಪರದೇಶದಲ್ಲಿ ನೆಲೆಸಿದ ಭಾರತೀಯರಿಗೆ ಒಬ್ಬ ಭಾರತೀಯ ಸಿಕ್ಕಿದರೂ ಅವರೆಷ್ಟು ಖುಷಿ ಪಡುತ್ತಾರೆ. ಅಲ್ಲಿ ಉತ್ತರ ಭಾರತ, ದಕ್ಷಿಣ ಭಾರತ, ಪಂಜಾಬಿ, ಬೆಂಗಾಲಿ, ಮಲಯಾಳಿ, ಕನ್ನಡಿಗ, ಬಿಹಾರಿ, ಅಸ್ಸಾಮಿ ಎಲ್ಲಾ ಮರೆತೆ ಹೋಗಿರುತ್ತದೆ. ನಿಮ್ಮ ವಿದ್ಯೆ, ಗುಣ, ನಂಬಿಕೆ, ವಿಶ್ವಾಸಕ್ಕೆ ಮಾತ್ರ ಬೆಲೆ. ಈ ಗುಣಗಳನ್ನು ನಾವೂ ಬೆಳೆಸಿ ಕೊಳ್ಳೋಣ, ಉತ್ತಮ ಸಂಬಂಧಗಳನ್ನು ಗಟ್ಟಿಗೊಳಿಸಿ ಉಳಿಸಿಕೊಳ್ಳೋಣ ಅಲ್ಲವೇ? ನೀವೇನಂತೀರಿ?
@ಪ್ರೇಮ್@
22.07.2021

ಭಾನುವಾರ, ಜುಲೈ 18, 2021

ಗುರುವೇ?

ಗುರುವೇ...

ನಗುವಿಲ್ಲದ ಜೀವನ ನನಗೇಕೆ ದೊರೆಯೇ?
ನಗವಿಲ್ಲದ ಬದುಕು ಬರಿದಲ್ಲವೇ ಪ್ರಭುವೇ! 

ನೋಗವೀ ಕತ್ತಿನಲಿ ಜವಾಬ್ದಾರಿ ಎಂಬುದು
ನಿಗವಿರದ ಬಾಳದು ಸೊಬಗೇನು ಗುರುವೇ?

ನಾಗರಾಜನ ಹಾಗೆ ಹೆಡೆ ಎತ್ತಿ ನಿಲ್ಲಬೇಕು
ನಗು ನಗುತ ತನ್ನೆಲ್ಲ ನೋವ ಮರೆಯಬೇಕು ಗುರುವೇ..

ನೀಗ ಬೇಕು ಬಾಳಿನಲಿ ಕಷ್ಟವೆಂಬ ದುಖವನು
ನಗಲಾರದಿದ್ದರೂ ತೋರಿಸಿದಂತೆ ಇರಬೇಕು ಗುರುವೇ..
@ಪ್ರೇಮ್@
18.07.2021

ಶನಿವಾರ, ಜುಲೈ 17, 2021

Birthday Wishes

Wish You Happy Birthday

It's your day with love and care
Hope your worries come rare..

Let your cherished dreams come true
With all wishes also fulfil through..

The life should fill with peaceful days..
The good health should follow always .

Let your broad mind grow more..
Happiness rush to you in bundles core...

Let you achieve your dreams very soon..
God shower on you all wants cool like moon...

It's your day forget all tensions
Let love live in your life all the moments..

Here are bundle of wishes from a true heart..
Let your sadness and sorrows move apart...
@Prem@
18.07.2021

ಮಂಗಳವಾರ, ಜುಲೈ 13, 2021

ಚುಟುಕುಗಳು

ಚುಟುಕುಗಳು

1. ಮಳೆಯಲಿ

ನಡೆಯುತ್ತಿದ್ದೆ ಒಬ್ಬಳೇ ನೆನೆಯುತ್ತಾ ಮಳೆಯಲಿ
ಯಾರಿಗೂ ಕಣ್ಣೀರು ಕಾಣಬಾರದೆಂದುದು ನೆನೆಯುತಲಿ
ಮಳೆ ನೋಡಿ ನಗುತಲಿತ್ತು ನನ್ನ
ಎಲೆ ಮನವೆ ಕಾಲವದು ನಿಲ್ಲದು ಶೂನ್ಯ!

2. ಕಣ್ಣೀರು

ಮಳೆ ಹನಿಯುತಲಿತ್ತು ಕಣ್ಣಿನಲಿ ನೀರಾಗಿ
ಬಿಂದುಗಳು ಉದುರುತಲಿದ್ದವು ಒಂದೊಂದಾಗಿ
ಕಾರಣ ಏನಿರಲಿಲ್ಲ ಬಹು ದೊಡ್ಡದಾಗಿ
ಕಾದು ಸಾಕಾಗಿತ್ತು ಪ್ರಿಯಕರನ ಕರೆಗಾಗಿ!!
@ಪ್ರೇಮ್@
14.07.2021

ಸೋಮವಾರ, ಜುಲೈ 12, 2021

ನೀನು

ನೀನು

ಬರಗಾಲದಲ್ಲಿ ಬಲಗಾಲನ್ನು ಒಳಗಿಟ್ಟು ಬಂದೆ ನೀನು
ಕರದಲ್ಲೆಲ್ಲ ಕರವೀರವನು ಹಿಡಿದು ತಂದೆ ನೀನು

ಮೈಮನದಲ್ಲೆ ಮೈದಾನದಂತೆ ಹರಡಿ ಬಿಟ್ಟೆ ನೀನು
ಕೈ ಹಿಡಿದೆನ್ನ ಕೈಬಿದಡಿರುವೆ ಕಣ್ಣ ಕಾಂತಿ ನೀನು

@ಪ್ರೇಮ್@
12.07.2021

ಕವನ - ಬದುಕು

ಬದುಕು

ಬದುಕೊಂದು ಸಂತೆ
ಭಾವಗಳ ಕಂತೆ
ಮಾರಲೆಂದು ಕುಂತೆ
ಯಾವಾಗಲೂ ಚಿಂತೆ!

ಕೊಳ್ಳಲು ಆಗದಂತೆ
ಮಾರಲೂ ಬಾರದಂತೆ
ಬದುಕಲು ಕಷ್ಟವಂತೆ
ಸಾಯಲೂ ಬಿಡರಂತೆ!
@ಪ್ರೇಮ್@
12.07.2021


ಶುಕ್ರವಾರ, ಜುಲೈ 9, 2021

Who am I.... poem

Who am I..

Who am I to love you 
Or hate you..

Who am I to expect from you or give to you..

Who am I to depend on you or satisfied by you..

Who am I to be with you or not with you...

Who am I to teach you or guide to you..

Who am I to expect care and time from you...

Who am I to grab your time as well as your  mind..

Who am I to convince you to give me your time...

Who am I to force you to listen my words?

Who am I to enforce you to give your time to me..

Who am I for you...You may be my world..I may not expect it from you..

Who am I to stop your own work for my sake...

Who am I to request you to listen to my words in your work time..

Who am I to order you to spend your own hours for me to listen my words?
@Prem@
09.07.2021

ಬುಧವಾರ, ಜುಲೈ 7, 2021

ಗಝಲ್

ಗಝಲ್

 ಹೃದಯದ ಭಾವನೆಗಳ ಆಳದಲಿ ಕಾಡದಿರು ಗಝಲ್
ನೊಂದ ಮೂಕ ವೇದನೆಗಳ ನೋಡದಿರು ಗಝಲ್..

ಸರ್ವ ಜನಕೆ ಹಿತವ ಕೋರುವ ಮನವು
ದುರ್ವರ್ತನೆಗಳ ಒಳಗೆ ಬರಲು ಬಿಡದಿರು ಗಝಲ್...

ಸತ್ಯ ಪಥದಿ ನಡೆವ ಹಾದಿಯಲಿ ಸಾಗಿಸುತಿರು
ಸದಾ ಭಕ್ತಿಯಿಂದಲಿ ದೇವಗೆ ಬಾಗುತಿರು ಗಝಲ್..

ಸೋಜಿಗದ ಯುಗವಿದು ಜಗದಲಿ ನಿನ್ನೆ ಇಂದು 
ಬದುಕ ನಾವೆಯಲಿ ದಡಕೆ ನೂಕುತಿರು ಗಝಲ್..

ಮೋಹ, ಮದ, ಮಾತ್ಸರ್ಯದ ಜನರ ಜೊತೆಗಿಹೆವು
ದ್ರೋಹವೆಸಗುವ ಹಾಗೆ ಎಂದೂ ಮಾಡದಿರು ಗಝಲ್...

ಹೋರಾಟದ ಕ್ಷಣವಿದು ಒಳಿತು ಕೆಡುಕುಗಳ ಜೊತೆಗೆ
ಕಡಿಮೆ ಸಂಖ್ಯೆಯೆಂದು ಹೊರ ದೂಡದಿರು ಗಝಲ್...

ಮರುಕ ಪಡುವ ಕರಗುವ ಗುಣದ ಬರಹವಿದು
ಪ್ರೇಮ -ಶಾಂತಿಯ ಕೊನೆವರೆಗೆ ಕಳೆಯದಿರು ಗಝಲ್..
@ಪ್ರೇಮ್@
07.07.2021