ಶನಿವಾರ, ಸೆಪ್ಟೆಂಬರ್ 10, 2022
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -145
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -145
ಮನೆಯಲ್ಲಿ ಪ್ರತಿ ಭಾನುವಾರ ಹೆಚ್ಚಿನ ಮಹಿಳೆಯರ ಕೆಲಸ ಶುಚಿತ್ವ. ಇಡೀ ವಾರ ಬಾಕಿಯಾದ ಕೆಲಸಗಳನ್ನು ಹಾಗೂ ಮನೆಯ ಅಚ್ಚುಕಟ್ಟುತನವನ್ನು ಅಂದು ಮಾಡುವ ದಿನ. ಆ ದಿನ ಯಾರಾದರೂ ನೆಂಟರು ಬಂದರೆ ಮುಗಿಯಿತು, ಆ ದಿನದ ಕೆಲಸ ಬಾಕಿ ಆದ ಹಾಗೆಯೇ! ಅಥವಾ ಆ ದಿನ ಎಲ್ಲಾದರೂ ಏನಾದರೂ ಕಾರ್ಯಕ್ರಮ ಇದ್ದರೂ ಅದೇ ಕಥೆ. ಬದುಕಿನಲ್ಲಿ ಒಂದು ವೀಕೆಂಡ್ ಸ್ವಲ್ಪ ಎಡವಟ್ಟಾದರೂ ಇಡೀ ವಾರ ಸರಿ ಇರುವುದಿಲ್ಲ. ಹಾಗೆಯೇ ಜೀವನ ಕೂಡಾ. ಒಂದು ಹೆಜ್ಜೆ ತಪ್ಪಿದರೂ ಕಷ್ಟವೇ.
ನಾವೆಲ್ಲ ನಮ್ಮನ್ನು ಬೇರೆಯವರು ಪ್ರೀತಿಸಲಿ, ಗುರುತಿಸಲಿ, ನಾವು ಮಾಡಿದ ಕೆಲಸಕ್ಕೆ ಪರರು ಭೇಷ್ ಅನ್ನಲಿ, ನಮ್ಮ ಕಾರ್ಯ ಗುರುತಿಸಲಿ, ಬೆನ್ನು ತಟ್ಟಲಿ, ಹೊಗಳಲಿ ಅಂತೆಲ್ಲಾ ಅಂದುಕೊಳ್ಳುತ್ತೇವೆ. ನಮ್ಮ ಯೂ ಟ್ಯೂಬ್ ಚಾನೆಲ್ ಎಲ್ಲರೂ ನೋಡ ಬೇಕು, ಲೈಕ್ ಸಬ್ಸ್ಕ್ರೈಬ್ ಮಾಡಬೇಕು ನಮಗೆ. ನಮ್ಮ ವೀಡಿಯೋವನ್ನು ಎಲ್ಲರೂ ಶೇರ್ ಮಾಡಬೇಕು! ಅದರಲ್ಲೂ ಕಾಂಪಿಟೇಷನ್! ಹಾಗಾಗಿ ಕಮೆಂಟ್ ಗಳು, ಲೈಕುಗಳು ಬಾಯಿ ಬಿಟ್ಟು ಎಲ್ಲರ ಬಳಿ ಬಿಕ್ಷೆ ಬೇಡಿ ಕೇಳುವ ಹಾಗೆ ಆಗಿದೆ ಇಂದು! ಕೆಲವರು ಅದನ್ನೇ ಕಾಯಕವಾಗಿ ಮಾಡಿಕೊಂಡು ತಮ್ಮ ವ್ಲಾಗ್ ಗಳಲ್ಲೇ ಜಾಹೀರಾತು ನೀಡಿ ಬಹಳಷ್ಟು ಗಳಿಸುತ್ತಾರೆ ಅಲ್ಲವೇ? ಯಾರ್ದೋ ಲೈಕು, ಕಮೆಂಟು, ಶೇರು, ಇನ್ಯಾರದೋ ಇನ್ ಕಂ. ಇದಿಷ್ಟೇ ಬದುಕು. ಕಷ್ಟದಲ್ಲಿ ಬದುಕಿ ತೋರಿಸೋದು ಮುಖ್ಯ. ಗುರಿಯೆಡೆ ನಡೆದು, ಗುರಿ ಮುಟ್ಟುವುದರ ಜತೆಗೆ ಯಾರಿಗೂ ತೊಂದರೆ ಕೊಡದ ಹಾಗೇ ಬದುಕಬೇಕು ಎಂಬುದೇ ಎಲ್ಲಾ ಧರ್ಮಗಳ ಮೂಲ ತತ್ವ ಅಲ್ಲವೇ? ಸಾಧ್ಯವಾದರೆ ಸಹಾಯ ಮಾಡಿ, ಇಲ್ಲದೆ ಇದ್ದರೆ ಸುಮ್ಮನಿದ್ದು ಬಿಡಿ. ಮಾತನಾಡುವುದಾದರೆ ನಿಮ್ಮ ಬಗ್ಗೆ ಮಾತನಾಡಿ. ಪರರ ಬಗ್ಗೆ , ಅವರ ವರ್ತನೆ, ಅವರ ಬಟ್ಟೆ ಬರೆ, ಅವರ ಫೋನ್ ಕಾಲ್, ಅವರ ಸುತ್ತಾಟ, ಅವರ ಶಾಪಿಂಗ್, ಅವರ ಖರ್ಚಿನ ತಲೆಬಿಸಿ ಅವರಿಗೆ ಇರುತ್ತದೆ. ನಿಮಗೆ ಯಾಕೆ ತಲೆ ಬಿಸಿ ಮಾಡುವ ತೊಂದರೆ? ಎದುರು ಮನೆಗೆ ನಿತ್ಯ ನೆಂಟರು ಬಂದರೆ ಅವರೆಲ್ಲರನ್ನೂ ಪ್ರೀತಿಯಿಂದ ಸುಧಾರಿಸುವವರು ಅವರು. ನಿಮಗೇನು ತೊಂದರೆ? ಪಕ್ಕದ ಮನೆಯವಳ ಮಗ ಓದದೇ ಇದ್ದರೆ ಬಿಡಲಿ, ಅದರ ಕಷ್ಟ ಅವರಿಗೆ ಗೊತ್ತು, ನಿಮಗೆ ಯಾಕೆ ಸಂಕಟ, ಬೇಕಿದ್ದರೆ ಕರೆದು ಸ್ವಲ್ಪ ಹೇಳಿಕೊಡಿ. ಅದರ ಬದಲು ಗೇಲಿ ಮಾಡಿ ನಗುವುದಲ್ಲ.
ಮೇಲಿನ ಮನೆ , ಕೆಳಗಿನ ಮನೆ, ಒರಗಿತ್ತಿ, ನಾದಿನಿಯ ಅತ್ತೆ, ಅತ್ತೆ ಮಗಳ ಅತ್ತಿಗೆ ಇವರು ಹೇಗಿದ್ದರೂ ನಿಮಗೇನು? ನಿಮ್ಮ ಜೀವನ ಚೆನ್ನಾಗಿದೆಯೇ? ನಿಮ್ಮ ಸಹೋದ್ಯೋಗಿ ಕಷ್ಟ ಪಡುತ್ತಿದ್ದಾರೆ ಎಂದು ಗೊತ್ತಾದರೆ ಸಾಧ್ಯವಾದರೆ ಸಹಾಯ ಮಾಡಿ ಇಲ್ಲದೆ ಇದ್ದರೆ ನಾಲ್ಕು ಸಾಂತ್ವನದ ನುಡಿಗಳನ್ನಾದರೂ ಹೇಳಿ. ಅದರ ಬದಲಾಗಿ ಅವರು ದುಡ್ಡಿಗೆ ತೊಂದರೆ ಎದುರಿಸುತ್ತಿದ್ದಾರೆ ಎಂದರೆ ಬಡವಿ ಎಂದು ಕೀಳಾಗಿ ನೋಡದಿರಿ. ಅಗತ್ಯ ಬಿದ್ದಾಗ ಸಹಾಯ ಮಾಡಿದವರನ್ನು ಜನ ಮರೆತರೂ ದೇವರು ಮರೆಯೋಲ್ಲವಂತೆ! ನೀವು ಮಾಡಿದ ಪಾಪ ಪುಣ್ಯಗಳ ಬುತ್ತಿಯನ್ನೇ ನಾಡಿದ್ದು ನಾಲ್ಕು ಜನರ ಹೆಗಲ ಮೇಲೆ ಸಾಗುವಾಗ ಹೊತ್ತುಕೊಂಡು ಹೋಗ್ಲಿಕ್ಕೆ ಇರೋದು. ಅದು ನೆನಪಿರಲಿ.
ನಾವು ಬೇರೆಯವರ ಮನ ನೋಯಿಸಿದರೆ ನಮ್ಮ ಮಕ್ಕಳು, ಮೊಮ್ಮಕ್ಕಳ ಕಾಲಕ್ಕೂ ಆ ಶಾಪ ಹೋಗುವುದಿಲ್ವ0ತೆ. ಪಾಪ ಪುಣ್ಯಗಳ ನೀವು ನಂಬದೆ ಇದ್ದರೂ ಸರ್ವರಿಗೂ ಒಳಿತಾಗಬೇಕು ಎಂದು ನಾವು ನಂಬುತ್ತೇವೆ, ಬೇಡುತ್ತೇವೆ, ದೇವರಲ್ಲಿ ಕೇಳುತ್ತೇವೆ ಅಲ್ಲವೇ? ದೇವರನ್ನೇ ನಂಬದವನೂ ಕೂಡಾ ಬಿದ್ದರೆ ಅಮ್ಮಾ ಎನ್ನುವನು. ಆಕೆಯೂ ದೇವರ ಸ್ವರೂಪವೇ ಅಲ್ಲವೇ?
ಇಷ್ಟೆಲ್ಲಾ ಬಯಸುವ ನಾವು ಕಾರಣ ಇಲ್ಲದೆ ಅದೆಷ್ಟು ಜನರನ್ನು ನಿಷ್ಕಲ್ಮಶವಾಗಿ ಪ್ರೀತಿಸುತ್ತೇವೆ? ಅದೆಷ್ಟು ಜನರಿಂದ ವಂಚನೆಗೆ ಒಳಗಾಗಿದ್ದೇವೆ! ಅದೆಷ್ಟು ಜನರನ್ನು ನಂಬಿ ಮೋಸ ಹೋಗಿ ಅವರ ನಿಜ ಬಣ್ಣ ಬಯಲಾದ ಮೇಲೆ ಅವರಿಗೆ ಶಾಪ ಹಾಕ್ತಾ ಕಾಲ ಕಳೆಯುತ್ತೇವೆ? ಯಾರಿಗೆ ಗೊತ್ತು ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಅವರ ಋಣ ಇಟ್ಟುಕೊಂಡು ಸತ್ತು ಹೋಗಿರಬಹುದು, ಅಥವಾ ಅವರ ಕೈಯಲ್ಲಿ ಸಾಲ ಪಡೆದು ಕೊಡದೆ ಹೋಗಿರಬಹುದು, ಅಪಘಾತ ಮಾಡಿ ಗಾಡಿ ಗುದ್ದಿ ಹೇಳದೆ ಕೇಳದೆ ಓಡಿರಬಹುದು. ಕಾಲಾಯ ತಸ್ಮಯೇ ನಮಃ!
ನಮ್ಮ ಬೆನ್ನು ನಮಗೆ ಕಾಣದು. ನಮ್ಮ ನಾಳೆಗಳ ಬಗ್ಗೆಯೂ ನಮಗೆ ತಿಳಿಯದು. ಉಪ್ಪು ತಿಂದವ ನೀರು ಕುಡಿಯಲೇ ಬೇಕು, ಕೆಸರಿಗೆ ಕೈ ಹಾಕಿದವ ಕೈ ತೊಳೆಯಲೇ ಬೇಕು. ಇಲ್ಲದೆ ಹೋದರೆ ಅವನ ಆರೋಗ್ಯ ಹಾಳಾಗುವುದು ಖಚಿತ. ನೀವು ಬೇರೊಬ್ಬರ ಹಣ ತಿಂದು ಇಂದು ನಕ್ಕು ನಲಿದರೆ ಅವನ ಅಳು ಮುಂದೊಂದು ದಿನ ನಿಮ್ಮ ಆರೋಗ್ಯಕ್ಕೇ ಕುತ್ತು ತರುತ್ತದೆ. ನೂರು ರೂಪಾಯಿ ನೀವು ಇತರರಿಗೆ ಮೋಸ ಮಾಡಿದರೆ ನಿಮ್ಮ ಸಾವಿರ ರೂಪಾಯಿ ಡಾಕ್ಟರ್ ಪಾಲಾಗುತ್ತದೆ ನೆನಪಿರಲಿ. ನ್ಯಾಯ, ಸತ್ಯ, ಅಹಿಂಸೆ, ನಂಬಿಕೆ ಕಡಿಮೆ ಆದಾಗಲೇ ಕರೋನ ವೈರಸ್ ಅಟ್ಟಹಾಸಕ್ಕೆ ಪ್ರಾರಂಭಿಸಿ ಎಲ್ಲರನ್ನೂ ಕಷಾಯ ಕುಡಿಸಿದ್ದು, ಮರೆಯದಿರಿ. ನೀವು ಇಂದು ಮಾಡಿದ ಪಾಪ ನಿಮ್ಮ ತಲೆಯ ಮೇಲಿನ ತೂಗೂಗತ್ತಿ ಆಗುವುದರಲ್ಲಿ ಎರಡು ಮಾತಿಲ್ಲ.
ಬದುಕಿ, ಬದುಕಲು ಬಿಡಿ. ಕಷ್ಟ ಪಡಿ, ಚಿಂತೆ ಆ ದೇವನಿಗೆ ಬಿಡಿ.ಆಯುಷ್ಯ ಮುಗಿದು ಸಾಯುವವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವೇ ಇಲ್ಲ. ಒಂದು ವೇಳೆ ಹಾಗಿದ್ದಿದ್ದರೆ ಯಾವ ಆಸ್ಪತ್ರೆಯಿಂದಲೂ ಮೃತದೇಹ ಹೊರ ಬರುತ್ತಿರಲಿಲ್ಲ. ಎಲ್ಲೆ ಹೋದರೂ ಜನರಿಗೆ ಪ್ರೀತಿ, ಸಹಾಯ ಹಸ್ತ ತೋರಿಸುವುದರಲ್ಲಿ ನಾವು ಒಂದು ಹೆಜ್ಜೆ ಮುಂದಿರೋಣ. ನೀವೇನಂತೀರಿ?
@ಪ್ರೇಮ್@
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -148
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -148
ಈಗ ಭಾರತ ವಿಶ್ವಗುರುವಾಗಿ ಬೆಳೆಯುತ್ತಿದೆ ನಿಮಗೆ ಅನ್ನಿಸುತ್ತಾ ಇಲ್ಲವೇ? ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ಎಲ್ಲಾ ದೇಶಗಳಿಗಿಂತಲೂ ಭಾರತ ಒಂದು ವಿಭಿನ್ನ ದೇಶವಾಗಿದೆ. ಭಾರತವನ್ನು ವಿವಿಧ ಆಯಾಮಗಳಲ್ಲಿ ಗಮನಿಸಿದಾಗ ಅದೊಂದು ಸುಂದರವಾದ ದೇಶವಾಗಿದೆ ಮತ್ತು ಮೂರು ಕಡೆ ನೀರಿನಿಂದ ಆವೃತವಾದ ಪ್ರದೇಶವಾಗಿದೆ. ಇಲ್ಲಿ 28 ರಾಜ್ಯಗಳಿದ್ದು 7 ಕೇಂದ್ರಾಡಳಿತ ಪ್ರದೇಶಗಳಿವೆ. 28 ದೇಶಗಳ ಭಾಷೆ, ಆಚರಣೆ, ಸಂಸ್ಕೃತಿ, ಆಚಾರ ವಿಚಾರಗಳೂ ವಿಭಿನ್ನವಾಗಿದ್ದರೂ ಐಕ್ಯತೆಯ ಮಂತ್ರವನ್ನು ನಾವು ಪಠಿಸುವುದೇ ನಮ್ಮನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಿದ ಒಂದು ಬಿಂದು. ವೇಷ ಬೇರೆ, ಭಾಷೆ ಬೇರೆ ದೇಶವೊಂದೇ ಭಾರತ... ಇದು ನಮ್ಮ ಧ್ಯೇಯ ಅಲ್ಲವೇ?
ಯಾವುದೇ ದೇಶದಲ್ಲಿ ಯುದ್ಧಗಳಾಗಲಿ, ನೋವು ಉಂಟಾಗಲಿ ಸಹಾಯಕ್ಕೆ ತೆರಳುವ ಮೊದಲ ದೇಶವೆಂದರೆ ಅದು ನಮ್ಮದೇ ದೇಶ ಅಲ್ಲವೇ? ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಸರ್ವ ಮಾನವ ಕುಲಕ್ಕೂ "ಮಾನವ ಜಾತಿ ತಾನೊಂದೆ ಒಲಮ್"ಎಂದು ಸರ್ವರಿಗೂ ಸಹಾಯ ಹಸ್ತ ಚಾಚಿ ಸಹಕಾರ ನೀಡುವ ಒಳ್ಳೆಯ ಗುಣ ಭಾರತಕ್ಕೆ ಇರುವುದು ನಾವು ವಿಶ್ವಗುರು ಎಂದೆನಿಸಲು ಎರಡನೇ ಕಾರಣ.
ಮತ್ತೆ ನಮ್ಮಿಂದ ಸಾಲ ಪಡೆದು ಬೆಳೆದ ಮತ್ತು ಬೆಳೆಯುತ್ತಿರುವ ಸಣ್ಣ ರಾಷ್ಟ್ರಗಳು. ಭಾರತದ ಸಹಾಯಕ್ಕಾಗಿ ಸದಾ ಚಿರಋಣಿಗಳಾಗಿದ್ದು, ಸಣ್ಣ ಪುಟ್ಟ ಕಷ್ಟಗಳಲ್ಲಿ ಭಾರತ ತನ್ನ ಕೈ ಬಿಡಲಾರದು ಎಂಬ ನಂಬಿಕೆಯ ಮೇಲೆ ಇರುವುದರಿಂದಲೂ ಭಾರತ ವಿಶ್ವಗುರು ಎನಿಸಿಕೊಳ್ಳಲು ಸಹಕಾರಿ ಆಗಿದೆ.
ಶಾಂತಿ, ಸಹನೆ, ಐಕ್ಯತೆ, ಸಹಬಾಳ್ವೆ, ಆರೋಗ್ಯ, ಪ್ರಕೃತಿದತ್ತ ಕೊಡುಗೆ, ಸೌಂದರ್ಯ, ಉತ್ತಮ ಪರಿಸರ, ಜಲ, ಉತ್ತಮ ಮನುಷ್ಯತ್ವದ ಜನ ಭಾರತದಲ್ಲಿ ಹೆಚ್ಛಾಗಿ ಸಿಗುತ್ತಾರೆ. ಇಲ್ಲಿನ ಜನರು ಒಳ್ಳೆಯ ಚಿಂತನೆಗಳನ್ನು ಮಾಡುತ್ತಾರೆ. ಹಾಗೆಯೇ ಧಾರ್ಮಿಕ ಗ್ರಂಥಗಳ ಅಧ್ಯಯನ, ಇಲ್ಲಿನ ಪೂಜೆ, ಮಂತ್ರ, ತಂತ್ರಸಾರಗಳು ಬಹಳ ವಿಭಿನ್ನವಾಗಿ ಇರುವುದರಿಂದ ಹಲವಾರು ಜನ ಪ್ರೇರಿತರಾಗಿ ಇಲ್ಲಿಗೆ ಬಂದು ಭಾರತವನ್ನು ಬೆಳೆಸಿರುವುದೂ ಕೂಡಾ ಇದಕ್ಕೆ ಸಾಕ್ಷಿಯಾಗಿದೆ.
ಉತ್ತಮ ಬೆಟ್ಟ ಗುಡ್ಡಗಳು, ಎಷ್ಟು ಸಂಶೋಧನೆ ನಡೆಸಿದರೂ ಮತ್ತಷ್ಟು ವಿಷಯಗಳನ್ನು ಅಡಗಿಸಿ ಇಟ್ಟುಕೊಂಡಿರುವ ಹಿಮಾಲಯದ ತಪ್ಪಲು, ಗುಹೆಗಳು, ದೇವಾಲಯಗಳು, ಪುರಾತನ ನಂಬಿಕೆ, ಆವಿಷ್ಕಾರಗಳು, ವೈಜ್ಞಾನಿಕ ಚಿಂತನೆಗಳು, ಗಣಿತದ ಲೇಖ್ಖಾಚಾರ ಗಳು, ಜ್ಯೋತಿಷ್ಯ ಶಾಸ್ತ್ರ, ಸಂಸ್ಕೃತ ಭಾಷೆ, ವೇದ ಪುರಾಣಗಳ ಆಶಯಗಳು ಓದಿದಷ್ಟು ಮುಗಿಯದ ಪುರಾಣ ಕತೆ, ಧಾರ್ಮಿಕ ವಿಚಾರಗಳು ಎಲ್ಲಾ ದೇಶದ ಜನರನ್ನೂ ಇಲ್ಲಿಗೆ ಕೈ ಬೀಸಿ ಕರೆಯುವ ಕಾರಣ ಭಾರತ ಸರ್ವರಿಗೂ ಶಾಂತಿಯ ಪಾಠ ಕಲಿಸುವ ವಿಶ್ವಗುರು ಹೌದಲ್ಲವೇ?
ಸನಾತನ ಧರ್ಮದ ಎಷ್ಟು ಕಲಿತರೂ ಮುಗಿಯದ ಕಟ್ಟು ಕಟ್ಟಳೆಗಳ ಮೂಲ ತಿಳಿಯುವ ಕುತೂಹಲ ಒಂದೆಡೆಯಾದರೆ ವಿಶ್ವದಲ್ಲೆ ಅತಿ ಹೆಚ್ಚು ಜನ ಸಂಪನ್ಮೂಲ ಹೊಂದಿರುವ ಇಲ್ಲಿನ ಜನರಿಂದ ವ್ಯಾಪಾರವನ್ನೂ ಪಡೆಯಬಹುದು, ಕೆಲಸವನ್ನೂ ಪಡೆಯಬಹುದು ಎಂಬ ಲೆಕ್ಕಾಚಾರ ಹಲವು ವ್ಯಾಪಾರೀ ದೇಶಗಳದ್ದು. ಚೀನಾ, ಅಮೇರಿಕಾ, ರಷ್ಯಾ, ಅರಬ್ ದೇಶಗಳಿಗೆ ಭಾರತ ಉತ್ತಮ ಮಾರುಕಟ್ಟೆ. ಅಲ್ಲಿ ಉತ್ಪಾದಿಸಿದ ಪ್ರತಿ ವಸ್ತುವಿಗೂ ಇಲ್ಲಿ ಬೇಡಿಕೆ ಇದೆ. ಹಣ್ಣು ಹೂವುಗಳಿಂದ ಹಿಡಿದು ಯುದ್ಧ ವಿಮಾನಗಳವರೆಗೂ, ಕಾರುಗಳು, ಕಂಪ್ಯೂಟರ್ ಮೊಬೈಲ್ ವರೆಗೂ ನಮ್ಮ ಬೇಡಿಕೆಯೇ ಹೆಚ್ಚು. ಹಾಗೂ ಭಾರತ ಎಲ್ಲರಿಗೂ ಬೇಕು.
ಪ್ರಪಂಚದ ಯಾವುದೇ ಹೂಡಿಕೆದಾರರಿಗೂ ಅವಕಾಶ ಇದೆ. ಹಾಗೆಯೇ ಕೊಡು ಕೊಳ್ಳುವುದರಲ್ಲೂ ನಾವು ಮುಂದು. ಎಲ್ಲಾ ಹಿರಿಯ ರಾಷ್ರ್ರಗಳೊಂದಿಗೂ ಉತ್ತಮ ಸ್ನೇಹ, ಗೆಳೆತನದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವುದೂ ನಮ್ಮ ದೇಶವನ್ನು ಎಂದೆಂದಿಗೂ ವಿಶ್ವಗುರುವನ್ನಾಗಿ ಮಾಡಿದೆ ಎನ್ನಲು ಎರಡು ಮಾತಿಲ್ಲ ಅಲ್ಲವೇ? ನೀವೇನಂತೀರಿ?
ಜೈ ಭಾರತ್.
@ಪ್ರೇಮ್@
10.09.2022
ಗುರುವಾರ, ಸೆಪ್ಟೆಂಬರ್ 8, 2022
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -146
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -146
ಹಲವಾರು ಕುಟುಂಬಗಳಲ್ಲಿ ನೋಡಿರುವೆ. ಕಷ್ಟ ಬಂದಾಗ ಒಬ್ಬರನ್ನು ಒಬ್ಬರು ಗಮನಿಸಿ ಸಹಾಯ ಮಾಡುತ್ತಾರೆ. ಎಲ್ಲರೂ ಆರ್ಥಿಕ ಸಹಾಯ ನೀಡದಿದ್ದರೂ, ಮಾನಸಿಕವಾಗಿ ನಿಮ್ಮೊಡನೆ ನಾವಿದ್ದೇವೆ ಎಂಬ ಹಿತನುಡಿ, ಜೊತೆಗೆ ಬಂದು ಕೆಳ ಹೊತ್ತು ಇದ್ದು, ಏನಾದರೂ ಸ್ವಲ್ಪ ತಂದು ಕೊಟ್ಟು, ಬೇಗ ಗುಣಮುಖರಾಗಿ ಎಂದು ಹೇಳಿ ಹೋಗುವ ಬಂಧುಗಳನ್ನು ನೋಡಿದಾಗ ನಮಗೆ "ಅಬ್ಭಾ ! ಎಷ್ಟು ಜನ ನಮ್ಮೊಡನೆ ಇದ್ದಾರೆ, ಧನ ಸಹಾಯ ಎಲ್ಲರಿಗೂ ಅಸಾಧ್ಯ. ಆದರೂ ತಮ್ಮ ಕೆಲಸವನ್ನೆಲ್ಲ ಬದಿಗೊತ್ತಿ ಬಂದು ನಮ್ಮನ್ನು ನೋಡಿ ಮಾತನಾಡಿಸಿ ಹೋದರಲ್ಲ, ಇವರೆಲ್ಲ ನಮ್ಮವರೇ..ಅನ್ನಿಸಿ ಮಾನಸಿಕ ಸಂತಸ ಸಿಗುತ್ತದೆ. ಕೆಲವೊಮ್ಮೆ ಬಂಧುಗಳೇ ಅಲ್ಲದ ದೂರದ ಗೆಳೆಯರು, ಮನೆಯ ನೆರೆ ಹೊರೆಯವರು, ಬಂಧುಗಳ ನೆರೆಹೊರೆಯವರು, ಹಿಂದಿನ ಕ್ಲಾಸ್ಮೇಟ್ಸ್ ಎಲ್ಲರನ್ನೂ ನೋಡಿ ಮಾತನಾಡಿ ಹಳೆಯದನ್ನು ಮೆಲುಕು ಹಾಕುವಾಗ ಬದುಕು ಕಷ್ಟಗಳನ್ನೆಲ್ಲಾ ಮರೆತು ಸಂಸದಿ ಹಾಡುತ್ತದೆ. ಈ ಸುಖಕ್ಕೆ ಸ್ನೇಹಿತರು ಮತ್ತು ಬಂಧುಗಳು ಇರಬೇಕು ಅಲ್ಲವೇ?
ಕೆಲವೊಮ್ಮೆ ಇವರು ಸಮಸ್ಯೆಗಳನ್ನೂ ಬದುಕಲ್ಲಿ ತಂದು ಹಾಕಬಹುದು, ನಮ್ಮ ನೆರೆಹೊರೆಯವರು ನಮ್ಮ ಸಂಸಾರದಲ್ಲಿ ನುಗ್ಗಿ ನೆರೆ - ನಿಜ ಹೊರೆಯಾಗಬಹುದು. ಗಂಡ ಹೆಂಡತಿಯನ್ನು ಬೇರೆ ಮಾಡಬಹುದು, ತಾಯಿ ತಂದೆ -ಮಕ್ಕಳನ್ನು ಆಸ್ತಿಗಾಗಿ ಕಚ್ಚಾಡುವ ಹಾಗೆ ಮಾಡಬಹುದು. ಏನೇನೋ ಹೇಳಿಕೊಟ್ಟು ಜಗಳ ಹಬ್ಬಿಸಿ ನೋಡಿ ಖುಷಿ ಪಡಬಹುದು. ಇಂಥವರೂ ಇದ್ದಾರೆ. ಅವರೇ ಊಟಕ್ಕೆ ಏನಾದರೂ ಬೆರೆಸಿ ಕೊಟ್ಟು, ನಂತರ ನಮ್ಮನ್ನು ನೋಡಲು ಬರಲೂ ಬಹುದು. ಹಾಗಾಗಿ ಈಗೀಗ ಪಕ್ಕದ ಮನೆಯವರನ್ನೂ ಕೂಡಾ ನಂಬುವುದು ಕಷ್ಟ. ಕಾರಣ ವಿದ್ಯಾಭ್ಯಾಸ ಹೆಚ್ಚಾಗಿ, ಹಣದ ಮೌಲ್ಯ ಕಡಿಮೆಯಾದ ಈ ಕಾಲದಲ್ಲಿ "ಫಿಶ್ ಗಳಿಗೆ ನೀರು, ಸೆಲ್ಫಿಶ್ ಗಳಿಗೆ ಭೂಮಿ" ಎಂಬಂತಾಗಿ ಭೂಮಿ ಮೇಲೆ ಹೆಚ್ಚಿನ ಎಲ್ಲಾ ಸೆಲ್ಫಿಶ್ ಗಳೇ ತುಂಬಿ ಹೋಗಿರುವ ಕಾರಣ ಒಳ್ಳೆಯವರನ್ನೂ ಜನ ನಂಬಲಾರದ ಪರಿಸ್ಥಿತಿ ಬಂದಿದೆ. ಒಂದೊಮ್ಮೆ ಸರಿಯಾಗಿರುವ ಹಲವಾರು ಜನ ರೋಗಿಗಳ ಹಾಗೆ ನಾಟಕ ಮಾಡಿ ಮನೆ ಮನೆಗೆ, ಬಸ್ಸಿನ ಒಳಗೆ, ರಸ್ತೆಯಲ್ಲಿ, ಸಿಗ್ನಲ್ ಗಳಲ್ಲಿ ಅಡ್ಡ ಹಾಕಿ ಭಿಕ್ಷೆ ಬೇಡಿ ಹಣ ಮಾಡಿಕೊಂಡು ಐಷಾರಾಮಿ ಬದುಕು ನಡೆಸುವ ಅದೆಷ್ಟೋ ಜನರೂ ಇದ್ದಾರೆ. ಭಾರತದ ಸಂಸ್ಕೃತಿ ಮಾತ್ರವಲ್ಲ ಪಾಶ್ಚಾತ್ಯ ಜನರಲ್ಲೂ ಒಳ್ಳೆಯದು, ಕೆಟ್ಟದು ಎನ್ನುವಂಥದ್ದು ಇದೆ. ಪರಸ್ಪರ ಸಹಾಯ ಸಹಕಾರ, ನೋವು ನಲಿವುಗಳಲ್ಲಿ ಒಟ್ಟಾಗುವುದು ಇತ್ಯಾದಿ ಎಲ್ಲಾ ಜನರಲ್ಲೂ ಇದೆ. ನಾನು ಎಂಬ ಅಹಂಕಾರ ಇರಬಾರದು ಎಂದು ಎಲ್ಲರೂ ಹೇಳುತ್ತಾರೆ. ಹಾಗೆಯೇ ನಿನ್ನ ಅನ್ನದ ಅಕ್ಕಿಯನ್ನು ನೀನೆ ಬೆವರು ಹರಿಸಿದ ದುಡ್ಡಿನಿಂದ ಬೇಯಿಸಬೇಕೇ ಹೊರತು ಅದು ಬೇರೆಯವರ ಬೆವರಿನ ಪಾಲಾಗಿರಬಾರದು ಎಂದು ಹೇಳಿದ ಶಾಸ್ತ್ರಗಳೇ ನಿನ್ನಲ್ಲಿ ಹೆಚ್ಚಾಗಿರುವುದನ್ನು ಪರರಿಗೆ, ಅನಾಥ, ನಿರ್ಗತಿಕರಿಗೆ, ಕಷ್ಟದಲ್ಲಿ ಇರುವವರಿಗೆ ದಾನ ಮಾಡು ಎಂದೂ ಹೇಳಿವೆ. ಪರಸ್ಪರ ಸಹಕಾರ, ಸಹಬಾಳ್ವೆ ಮಾತು ಬರುವ ಮನುಜನಲ್ಲಿ ಮಾತ್ರ ಅಲ್ಲ, ಪ್ರಾಣಿಗಳಲ್ಲೂ ಇದೆ. ಸಿಂಹ, ಹುಲಿ, ಆನೆಗಳು, ಜಿಂಕೆಗಳು ಗುಂಪಿನಲ್ಲೇ ವಾಸಿಸುತ್ತವೆ.
ಬುದ್ಧಿ ಹೆಚ್ಚಾದ ಹಾಗೆ ಮಾನವ ಬೇರೆ ಬೇರೆ ರಂಗಗಳಲ್ಲಿ ಎಷ್ಟು ಬೆಳೆಯುತ್ತಾನೋ ಅಷ್ಟೇ ಕೆಟ್ಟತನವನ್ನೂ ಹೆಚ್ಚಿಸಿಕೊಂಡು ಹೋಗುತ್ತಾನೆ. ವಿಶ್ವದ ದೊಡ್ಡಣ್ಣ ಎನಿಸಿದ ಅಮೇರಿಕಾದಲ್ಲಿ ಎಲ್ಲಾ ದೇಶಗಳ ಜನರನ್ನು ಯುದ್ಧ ಮಾಡುವಂತೆ ಮಾಡುವ ಬಾಂಬುಗಳು ತಯಾರಾಗುತ್ತವೆ! ಅದರ ಬಳಕೆ ಆಗಲೆಂದು ಅವರು ಕಾಯುತ್ತಾ ಇರುತ್ತಾರೆ ಕಾರಣ? ವ್ಯಾಪಾರೀ ದೃಷ್ಟಿ! ಅದರ ಮುಂದೆ ಮಾನವತೆ, ಸರಳತೆ, ಒಗ್ಗಟ್ಟು, ಶಾಂತಿ ಮಂತ್ರ, ಸರ್ವರ ಏಳಿಗೆ ಇತ್ಯಾದಿ ಎಲ್ಲಾ ಒಳ್ಳೆಯ ಗುಣಗಳೂ ನಶಿಸಿ, ನಾನು, ನನ್ನದು, ನನ್ನ ದೇಶ, ನನ್ನ ಧರ್ಮ, ನನ್ನ ಕುಟುಂಬ, ನನ್ನ ಭಾಷೆ, ನನ್ನ ಊರು ಇತ್ಯಾದಿ "ನನ್ನ" ಗಳು ಹೆಚ್ಚಾದ ಹಾಗೆ ಸ್ವಂತಿಕೆ ಮೆರೆದು ಜಗಳ, ಕದನ, ಗುಂಪುಗಾರಿಕೆ ಹೆಚ್ಚಿ ಶಾಂತಿ ವ್ಯವಸ್ಥೆ ಹದಗೆಡುತ್ತದೆ.
ಇವೆಲ್ಲಕ್ಕೂ ಕಾರಣ ನಮ್ಮ ಆಸೆಗಳು, ಆಕಾಂಕ್ಷೆಗಳು, ದುರಾಸೆಗಳು, ರಕ್ತ ಹೀರುವ ಗುಣ, ವ್ಯಾಪಾರೀ ಮನೋಭಾವ, ಅಸೂಯೆ, ಅಹಂಕಾರ, ಮದ, ಮಾತ್ಸರ್ಯ ಇವುಗಳೇ ಆಗಿವೆ. ನಮ್ಮಲ್ಲಿ ಹಲವರ ಮೆಂಟಾಲಿಟಿ ಹೇಗಿದೆ ಎಂದರೆ "ನನಗೆ ಸಿಗದ್ದು ಬೇರೆಯವರಿಗೂ ಸಿಗಬಾರದು". ಅದಕ್ಕೆ ಅದೆಷ್ಟೋ ಜನ ಹುಡುಗರು ಪ್ರೀತಿಸಿದ ಹುಡುಗಿ ಒಪ್ಪಿಕೊಳ್ಳದೇ ಹೋದರೆ, ಸಿಗದೇ ಹೋದರೆ ಅವಳನ್ನು ಸಾಯಿಸಿ ಬಿಟ್ಟವರು ಇಲ್ಲವೇ? ಇದು ಮಾನವನ ವಿಕೃತ ಮುಖ. ಕೆಟ್ಟ ವ್ಯಸನಗಳು, ಕಷ್ಟ ಪಡದ ಹಣ, ದುರಭ್ಯಾಸಗಳು ಇದಕ್ಕೆ ಸಹಾಯ ಮಾಡುತ್ತವೆ. ಸರಿಯಾಗಿ ಕಷ್ಟ ಪಟ್ಟು ದುಡಿದ ಯಾರೆ ಆದರೂ ತನ್ನ ಹಣವನ್ನು ವ್ಯರ್ಥ ಮಾಡಲು, ಕೆಟ್ಟದ್ದಕ್ಕೆ ಉಪಯೋಗಿಸಲಾರ ಅಲ್ಲವೇ?
ಬದುಕಿಗೆ ಯಾವುದೇ ಗ್ಯಾರೆಂಟಿ ವಾರೆಂಟಿ ಇಲ್ಲ ಎಂದು ಎಲ್ಲೈಸಿ ಪಾಲಿಸಿಯ ನಾವೇ ಸಹಿ ಹಾಕಿದ ಬಾಂಡ್ ಪೇಪರನ್ನು ಒಮ್ಮೆ ಓದಿದರೆ ಗೊತ್ತಾಗುತ್ತದೆ. ನಮ್ಮ ಹಣ ಪಡೆದು ನಮಗೆ ಕೊನೆಯಲ್ಲಿ ಕೊಡುವ ಸಂಸ್ಥೆಗಳು ಹಲವಾರು ಇವೆ. ಆದರೆ ಈಗ ನಮಗೆ ದೊಡ್ಡ ಮೊತ್ತದ ಹಣ ಕೊಡಿ, ನಾವು ದುಡಿದು ಸ್ವಲ್ಪ ಸ್ವಲ್ಪ ಹಿಂದೆ ಕೊಡುತ್ತೇವೆ ಎಂದರೆ ಅದಕ್ಕೆ ಆ ಕಂಪನಿ ಗಳು ಸಹಕರಿಸಲಾರವು. ಲೋನ್ ಹಣ ಪಡೆಯಬೇಕಾದಾರೆ ಅದೆಷ್ಟು ಕಷ್ಟ, ಅದೆಷ್ಟು ಓಡಾಡಬೇಕು, ಚೆಕ್, ಸ್ಟಾಂಪ್ ಪೇಪರ್, ಶೂರಿಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಫಾರಂ ನಂಬರ್ 16, ವೋಟರ್ ಐಡೆಂಟಿಟಿ ಕಾರ್ಡ್, ಸಂಬಳ ಪಡೆದ ಸರ್ಟಿಫಿಕೇಟ್, ಬ್ಯಾಂಕ್ ಟ್ರಾನ್ಸಾಕ್ಷನ್ ಸ್ಟೇಟ್ಮೆಂಟ್, ಹಿರಿಯ ಅಧಿಕಾರಿಗಳ ಶಿಫಾರಸ್ಸು, ವಾಸಸ್ಥಳ ದೃಢೀಕರಣ ಪತ್ರ ಎಲ್ಲಾ ಕೊಟ್ಟರೂ ಬಜಾಜ್ ನವರು ರಿಜೆಕ್ಟ್ ಮಾಡಿ ಬಿಟ್ಟರು ಒಮ್ಮೆ ನನಗೆ. ಕಾರಣ ಟ್ಯಾನ್ ನಂಬರ್ ಸರಿ ಇಲ್ಲ ಎಂದು. ಅದು ಏಕೆಂದರೆ ನಾನು ಕಳೆದ ವರ್ಷ ಇದ್ದ ಶಾಲೆಯಿಂದ ಈ ವರ್ಷ ಟ್ರಾನ್ಸ್ಫರ್ ಪಡೆದು ಬಂದಿದ್ದೆ. ಅಲ್ಲಿಗೂ ಇಲ್ಲಿಗೂ ಟ್ಯಾನ್ ಸಂಖ್ಯೆಯ ವ್ಯತ್ಯಾಸ ಇತ್ತು! ಬ್ಯಾಂಕ್ ಅಕೌಂಟ್ ನಾವು ಇದ್ದ ಊರಿಗೆ ನಾವು ಬದಲಾಯಿಸ ಬೇಕಲ್ಲವೇ? ಹಾಗೆ ಮಾಡಿದರೆ ಐಎಫೆಸ್ಸಿ ಕೋಡ್ ಬದಲಾಯಿತು ಎಂದು ರಿಜೆಕ್ಟ್ ಮಾಡ್ತಾರೆ. ಅದೇ ಎಲ್ ಐ ಸಿ ಪಾಲಿಸಿಗಾಗಿ ಮನೆ ಮನೆಗೆ ಹುಡುಕಿಕೊಂಡು ಬರ್ತಾರೆ! ಯಾರಾದ್ರೂ ಲೋನ್ ಕೊಡ್ತೇವೆ ಅಂತ ಬರ್ಲಿ ನೋಡೋಣ! ನಮ್ಮ ಮೇಲೆ ಯಾರಿಗೂ ನಂಬಿಕೆ ಇಲ್ಲ! ತೆಗೆದುಕೊಳ್ಳುವವರೇ ಎಲ್ಲಾ, ಕೊಡುವವರು ಇಲ್ಲ ಅಲ್ಲವೇ?
ನೀವೇಷ್ಟೇ ದೊಡ್ಡ ದಾನಿಗಳಾದರೂ, ಎಲ್ಲವನ್ನೂ ಧಾರೆ ಎರೆದರೂ ನಿಮ್ಮ ಕಷ್ಟಕ್ಕೆ ನೀವು ನಂಬಿಕೆ ಇಟ್ಟ ಯಾರೂ ಸಹಾಯಕ್ಕೆ ಬರಲಾರರು. ಬಂದರು ಎಂದಾದರೆ ನೀವು ಮಹಾನ್ ಪುಣ್ಯವಂತರು. ಹಿರಿಯರು ಹೇಳಿಲ್ಲವೇ, "ನಿಮ್ಮ ತಲೆಗೆ ನಿಮ್ಮ ಕೈ" ಅಂತ.
ಆದರೆ ಅಲ್ಲೋ ಇಲ್ಲೊ ಒಬ್ಬೊಬ್ಬರು ದೇವರ ಹಾಗೆ ಬಂದು ಸಹಾಯ ಮಾಡುವವರು, ಏನೂ ಬಯಸದೆ ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಹಸ್ತ ಚಾಚುವವರು, ಕಷ್ಟ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದಾಗ ಅಕೌಂಟ್ ಗೆ ಒಂದಿಷ್ಟು ತಾವು ಕಷ್ಟಪಟ್ಟು ದುಡಿದ ಹಣ ಹಾಕುವವರು ಸಾಮಾನ್ಯ ಭಾವುಕ ಜೀವಿಗಳು, ನಾಳೆ ನಮಗೆ ಏನಾದರೂ ಹೆಚ್ಚು ಕಮ್ಮಿ ಆದರೆ ಇದೇ ಪರಿಸ್ಥಿತಿ ಅಲ್ಲವೇ ಎಂದು ಆಲೋಚಿಸಿ ತಮ್ಮ ಕೈಲಾದ ಸಹಾಯ ನೀಡುತ್ತಾರೆ ಅವರು. ನಮ್ಮ ಕಷ್ಟದ ಸಮಯದಲ್ಲಿ ಅವರು ನಮಗೆ ದೇವರ ಹಾಗೆ ಕಾಣುವರು. ಆದರೆ ಕಷ್ಟ ಕೊಟ್ಟು ಓಡಿಸಿ ನಮಗೆ ಕೊಡಬೇಕಾದ ಮುಂಗಡ ಹಣವನ್ನೂ ಕೊಡದೆ ಇರುವ ಬಾಡಿಗೆ ಮನೆ ಓನರ್ ಅನ್ನು ಕುಡಾ ನಾ ನೋಡಿರುವೆ. ಹಣ ಕೇಳಿದರೆ ಜಗಳ ಮಾಡಿ "ಕೊಡೋದಿಲ್ಲ ಹೋಗು" ಎಂದಾಗ ತುಂಬಾ ನೋವಿನಲ್ಲಿ ಬಂದುಬಿಟ್ಟೆ. ಇನ್ನು ಕೋರ್ಟು ಕಚೇರಿ ಸುತ್ತಲು ರಜೆಯೂ ಇಲ್ಲ, ಮತ್ತಷ್ಟು ಹಣ ನಾವೇ ವ್ಯಯಿಸ ಬೇಕು. ಅಲ್ಲೂ ರಾಜಕೀಯ, ಅವನದೇ ಊರು, ಅವನದೇ ಜನ! ಮುಖಂಡರು , ಜನ ನಾಯಕರು ಓಟಿಗಾಗಿ ಅವನ ಕಡೆಗೆ ವಾಲುವರು.ಹೀಗಾದಾಗ ಕೆಲವೊಮ್ಮೆ ಕೈಲಾಗದ ಹತಾಶ ಭಾವನೆ ನಮ್ಮನ್ನು ಕಾಡುತ್ತದೆ. ಪರವೂರು, ಪರಮ ಕಷ್ಟ. ಹೇಳಿಕೊಳ್ಳಲು, ನ್ಯಾಯ ಕೊಡಲು ಯಾರೂ ಇಲ್ಲ ಇಲ್ಲಿ. ನೋವುಂಡ ಮನಕ್ಕೆ ನೋವೆ ಕೊಡುವವರು ಜಗದಲ್ಲಿ. ನಿಮಗೂ ಇಂತಹ ಅನುಭವ ಆಗಿದೆಯೇ? ಏನಂತೀರಿ?
@ಪ್ರೇಮ್@
27.08.2022
ಗಝಲ್
ಗಜ಼ಲ್
ಅರೆ ತೆರೆದ ಕಣ್ಣಲ್ಲಿ ಪ್ರೀತಿ ಹೇಗೆ ಕಾಣಬಲ್ಲದು ಹುಜೂರ್
ಕರೆಯುವ ಹೃದಯದ ದನಿ ಅದು ಹೇಗೆ ತಾನೇ ಕೇಳಬಲ್ಲದು ಹುಜೂರ್
ಮರದೊಳಗೆ ಹೂ ಕಾಯಿ ಹಣ್ಣ ರುಚಿ ಅಡಗಿಹುದು ಖರೆ
ಒಡಲೊಳಗೆ ಸುರಿದ ಮದಿರೆಯಲಿ ಪ್ರೀತಿ ಹೇಗೆ ಉಕ್ಕುಬಲ್ಲದು ಹುಜೂರ್
ಕಗ್ಗತ್ತಲೆಯಲಿ ಕಣ್ಣ ಭಾಷೆ, ಮುಖದ ಭಾವಗಳ ಓದಲಾಗದು ನಿಜ
ಮಗ್ಗದ ಬಟ್ಟೆಯಡಿಯಲ್ಲು ಮನದ ಹೇಯ ಕೃತ್ಯವ ನೋವು ಅಳೆಯಬಲ್ಲದು ಹುಜೂರ್
ಮೋಸ ವಂಚನೆಗಳ ಅರಿಯದ ಮನಸ್ಸು ಸುಲಭವಾಗಿ ಕಳ್ಳರ ಗುರುತಿಸಲಾಗದು ದಿಟ
ಕೋಶ ಓದಿ ದೇಶ ತಿರುಗಿದ ಮೆದುಳು ನ್ಯಾಯ ನೀತಿ ಹೇಗೆ ಮರೆಯಬಲ್ಲದು ಹುಜೂರ್
ರಾಗಿ ಕಪ್ಪಾದರೂ ಅದರೊಳಗಿನ ಪೋಷಕಾಂಶದ ಉತ್ತಮ ರುಚಿ ಬದಲಿಸದು ಎಂದೂ
ಪ್ರೇಮನ ಪರಿಶುದ್ಧ ಪ್ರೀತಿಯ ಕಡೆಗಣಿಸಿದರೆ ತಡೆಯಲು ಹೇಗೆ ಸಾಧ್ಯವಾಗಬಲ್ಲದು ಹುಜೂರ್ ?
@ಪ್ರೇಮ್@
31.08.2022
ಶಿಶುಗೀತೆ -ಇರುವೆ
ಇರುವೆ
ಸೊಕ್ಕಿನ ಇರುವೆಯು ಪಕ್ಕದ ಮನೆಕಡೆ
ಸಾಗುತಲಿತ್ತದು ಸಂತಸದಿ
ಮುಕ್ಕುತ ಸಿಹಿಯನು ಕಕ್ಕುತ ಕಹಿಯನು
ನಡೆಯುತಲಿತ್ತು ಹೊಸತನದಿ..
ತಟ್ಟನೆ ನೋಡಿತು ಸತ್ತು ಬಿದ್ದಿದ್ದ
ದಪ್ಪನೆ ಒಂದು ಜಿರಳೆಯನು
ಪಟ್ಟನೆ ಓಡಿ ಗೆಳೆಯರ ಕರೆಯಲು
ಓಡುತ ಬಂದವು ಮಾಡಿ ಸಾಲನ್ನು
ಬಿಟ್ಟವು ಬಾಯಿಯ ಶಕ್ತಿಯು ಒಗ್ಗಟ್ಟಿನ
ನೋಡುತ ನಿಂತವು ಹಿಂದುಗಡೆ
ಕೆಟ್ಟೆವು ಸಾಲಲಿ ಒಟ್ಟಿಗೆ ಬನ್ನಿರಿ
ಎತ್ತೋಣ ನಾವು ಮುಂದುಗಡೆ..
ಸಾಲನು ಬಿಟ್ಟವು ಎದುರಿಗೆ ಬಂದವು
ಮೂತಿಯ ತೂರಿಸಿ ಎಳೆದಾಡಿದವು
ಪಾಲನು ಪಡೆಯಲು ವೇಗದಿ ಎಲ್ಲವೂ
ನೂಕುತ ಮನೆಕಡೆ ಸಾಗಿದವು..
@ಪ್ರೇಮ್@
01.09.2022
ದಶಕ -94
ದಶಕ -94
ಗುರುತರ ಜವಾಬ್ದಾರಿಯ ಹೊತ್ತು
ಗುರುವಾಗುವುದನು ಲಘುವಾಗಿ ಕಲಿಸಿ
ಗುರುಗುಟ್ಟದೆಯೇ ಗುರುವಾದ
ಗುರುವಿಗೆ ನನ್ನಯ ಎಂಟೆದೆ ನಮನವು..
ಒಳಿತನು ಕಲಿಸಿ ಕೆಡುಕನು ಓಡಿಸಿ
ಕಲಿತರೆ ಮಾತ್ರ ಗೆಲುವೆಂದು ಬೋಧಿಸಿ
ಕೊಳದಲಿ ಹೋದರೂ ವಿದ್ಯೆಯು ಇರಲಿ
ಎನುತಲಿ ತಲೆಗೆ ಬುದ್ಧಿಯ ತೂರಿದ
ಗುರುವೇ ನಿನ್ನಯ ಪಾದಕೆ ಬಾಗುವೆ
ನೀನಿಲ್ಲದೆ ನಾನಿಲ್ಲವು ಎನ್ನುತ ನಮಿಸುವೆ..
@ಪ್ರೇಮ್@
05.09.2022
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -147
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -147
ನಾಳೆ ಶಿಕ್ಷಕರ ದಿನಾಚರಣೆ. ನಮ್ಮ ದೇಶದಲ್ಲಿ ಮಾಜಿ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಾ ಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವೆಂದು ಆಚರಿಸುವ ಬಗ್ಗೆ ನಿಮಗೆ ತಿಳಿದಿದೆ. ಈ ವರ್ಷ ಅವರ 135ನೇ ಜಯಂತಿಯ ಆಚರಣೆ. ಈ ಶುಭ ಸಂಧರ್ಭದಲ್ಲಿ ನನಗೆ ಕಲಿಸಿ, ನನ್ನನ್ನು ಈ ಹಂತಕ್ಕೆ ತಂದ ನನ್ನೆಲ್ಲಾ ಅಂಗನವಾಡಿ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಕಾಲೇಜು, ಸ್ನಾತಕೋತ್ತರ ಪದವಿವರೆಗಿನ ಎಲ್ಲಾ ಶಿಕ್ಷಕಿಯರು, ಶಿಕ್ಷಕರು, ಬೋಧಕರು, ಉಪನ್ಯಾಸಕರು ಪ್ರಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಭಾಷಾ ಶಿಕ್ಷಕರು, ಕೋರ್ ಶಿಕ್ಷಕರು, ಸಂಗೀತ ಶಿಕ್ಷಕರು, ಕಲಾ ಕ್ರಾಫ್ಟ್ ಶಿಕ್ಷಕರು, ಟೈಲರಿಂಗ್ ಶಿಕ್ಷಕರು, ಪ್ರಾಚಾರ್ಯರು, ಸಿ ಆರ್ ಪಿ ಗಳು, ಬಿ ಆರ್ ಪಿ ಗಳು, ಪ್ರಾಂಶುಪಾಲರು, ಬಿ ಇ ಓ, ಡಿ ಡಿ ಪಿ ಐ ಯವರು , ಹಾಗೂ ಶಿಕ್ಷಣ ಇಲಾಖೆಗೆ ತಮ್ಮ ಜೀವನವನ್ನು ಮುಡಿಪಾಗಿತ್ತು, ಸದಾ ದುಡಿಯುತ್ತಿರುವ ಹಿರಿಯ ಕಿರಿಯ ಹಂತದ ಎಲ್ಲಾ ಬೋಧಕ ವೃಂದಕ್ಕೆ ನನ್ನ ಹೃದಯಾಂತರಾಳದ ನಮನಗಳು.
"ವರ್ಣ ಮಾತ್ರಮ್ ಕಳಿಸಿದಾತಮ್ ಗುರು " ಎಂಬ ಮಾತಿದೆ. ಆತ ಒಂದಕ್ಷರ ಕಳಿಸಿದರೂ ಗುರುವೇ. ಅವನ ಕಾಲ ಮಟ್ಟಕ್ಕೆ ಇಳಿದರಷ್ಟೇ ನಾವು ಕಲಿಯಬಲ್ಲೆವು, ಬೆಳೆಯಬಲ್ಲೆವು. ಅದಕ್ಕೇ ದಾಸರು ಹೇಳಿದ್ದು, "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.." ಎಂದು. ಈಗೀಗ "ಶಾಲೆಯಲ್ಲಿ ಏನೇ ತಪ್ಪು ಮಾಡಿದರೂ ಶಿಕ್ಷೆ ಕೊಡುವ ಅಧಿಕಾರ ಶಿಕ್ಷಕರಿಗೆ ಇಲ್ಲ "ದ ಕಾರಣ ಶಿಕ್ಷಕ ಸಫರರ್. ಈ ಕೆಲಸವನ್ನು ಪೊಲೀಸ್ ಡೆಪಾರ್ಟ್ಮೆಂಟ್ ಮಾಡುತ್ತಿದೆ. ಇದು ಕೆಟ್ಟದು, ಹೀಗೆ ಮಾಡಿದರೆ ಇದು ಒಳ್ಳೆಯದು, ಇದು ಜೀವನದ ಸರಿಯಾದ ಮಾರ್ಗ ಎಂದು ಕೇಳದ ಆ ವಯಸ್ಸಿನ ಮಕ್ಕಳಿಗೆ ಒಂದೆರಡು ಕೊಟ್ಟು ಬುದ್ಧಿ ಕಲಿಸುವ ಕಾಲ ಹೋಗಿದೆ. ಈಗ ಏನಿದ್ದರೂ ವಿದ್ಯಾರ್ಥಿ ಸ್ನೇಹಿ ಶಿಕ್ಷಣ. ಮಗು ಏನೇ ಮಾಡಿದರೂ ಅದು ಸರಿ. ಶಿಕ್ಷಕರು ಅವನ ಮಟ್ಟಕ್ಕೆ ಇಳಿಯಬೇಕು. ಶಿಕ್ಷಕರಿಗೆ ಗೊತ್ತಿರುವುದನ್ನು ಹೇಳಿ ಕೊಡುವುದಲ್ಲ, ಅವನಿಗೆ ಬೇಕಾದ್ದನ್ನು ಕಲಿಸಿ ಕೊಡುವುದೂ ಅಲ್ಲ, ಅವನೇ ಕಲಿಯಬೇಕು, ಶಿಕ್ಷಕರು ಗೈಡ್ ಆಗಿ ಸಹಕರಿಸಬೇಕು. ಕಲಿಯುವ ಕೆಲಸ ಮಗುವೇ ಮಾಡಬೇಕು. ಅವನ ಕಲಿಕೆಗೆ ಬೇಕಾದ ಸಾಧನ ಸಲಕರಣೆ ಹಿಡಿದುಕೊಂಡು, ಬರವಣಿಗೆ ಮೂಲಕ ಮಾತ್ರ ಅಲ್ಲ, ಕಂಪ್ಯೂಟರ್, ಇಂಟರ್ನೆಟ್, ಗೂಗಲ್ ಬಳಸಿ ಅವನಿಗೆ ತಾಂತ್ರಿಕ ಪಾಠ ನೀಡ ಬೇಕು. ಅದರಲ್ಲಿನ ವಿಡಿಯೋ ಎಡಿಟರ್, ಫ್ಲೆಕ್ಸ್, 3ಡಿ ಮೋಷನ್ ಚಿತ್ರಗಳ ತಯಾರಿಕೆ ಇವುಗಳನ್ನೆಲ್ಲ ಕಲಿತು ಇವುಗಳನ್ನು ಬಳಸಿ ಶಿಕ್ಷಕರು ಕಲಿಸ ಬೇಕು. ಇದು ಇಂದಿನ ಶಿಕ್ಷಣ ಪದ್ದತಿ. ಇದರ ಜೊತೆ ಕಳಿಸಿದ್ದನ್ನು ನೀವು ಏನೆಲ್ಲಾ ಕಳಿಸಿದ್ದೀರಿ, ಶಾಲೆಯಲ್ಲಿ ಏನೆಲ್ಲಾ ಮಾಡಿದ್ದೀರಿ, ಮಕ್ಕಳಿಗೆ ಕಲಿಕಾ ವಾತಾವರಣ ಸೃಷ್ಟಿಸಲು ಕೈಗೊಂಡ ಕಾರ್ಯಕ್ರಮಗಳು ಇವುಗಳ ಎಲ್ಲದರ ಬಗ್ಗೆ ಸಚಿತ್ರ ವರದಿ ತಯಾರಿಸಬೇಕು. ಅದುವೇ ಸಾಕ್ಷಿ. ಇಷ್ಟೇ ಮುಗಿಯಲಿಲ್ಲ, ಅದು ಯಾವುದೇ ವಿದ್ಯಾರ್ಥಿ ಇರಲಿ ಅವನಿಗೆ ಆರರಿಂದ ಹದಿನಾಲ್ಕು ವರ್ಷದ ವರೆಗೆ, ಕಡ್ಡಾಯ ಪ್ರಾಥಮಿಕ ಶಿಕ್ಷಣ ಸಿಗಬೇಕು, ಅವನು ಶಾಲೆಯಿಂದ ಹೊರಗುಳಿಯ ಬಾರದು. ಮೂರರಿಂದ ಆರು ವರ್ಷದ ವರೆಗೆ ಪೂರ್ವ ಪ್ರಾಥಮಿಕ ಶಿಕ್ಷಣ ಮಗುವಿಗೆ ಸಿಗಬೇಕು. ಆದ ಕಾರಣ ಅವನು ಅಕ್ಷರ ಕಲಿಯದೇ ಇದ್ದರೆ, ಅವನಿಗೆ ಓದಲು ಬರೆಯಲು ಬಾರದೆ ಇದ್ದರೆ ಅದಕ್ಕೆ ಶಿಕ್ಷಕರೇ ಜವಾಬ್ದಾರಿ. ಅದು ಯಾವ ಮೆತಡ್ ಉಪಯೋಗಿಸಿ ಆದರೂ ಸರಿ, ಮಗು ಶಾಲೆಗೆ ಬರದೇ ಇದ್ದರೆ ಅವನ ಮನೆಗೆ ಹೋಗಿ ಆದರೂ ಸರಿ, ಅವನಿಗೆ ವಿದ್ಯೆ ಅವನಿಗೆ ಕಲಿಸಬೇಕು ಮತ್ತು ಅವನು ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ಅರವತ್ತಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣನಾಗಬೇಕು. ಇದು ಇಂದಿನ ಶಿಕ್ಷಣದ ವಿಚಾರ.
ಇನ್ನೊಂದು ವಿಚಾರ ಏನೆಂದರೆ ಹಿಂದಿನ ಹಾಗೆ ಇಂದು ಫಸ್ಟ್ ಕ್ಲಾಸ್ ಅಂಕ ಪಡೆದು ಪಾಸಾದರೆ ಯಾವುದೇ ಪ್ರಯೋಜನ ಇಲ್ಲ ಮತ್ತು ಅದು ಏನೂ ಸಾಲದು. ಈಗ ಔಟ್ ಆಫ್ ಔಟ್ ಕಾಲ, ಮತ್ತು ತೊಂಭತ್ತು ಶೇಕಡಾಕ್ಕಿ0ತ ಹೆಚ್ಛು ಅಂಕ. ಎ ಪ್ಲಸ್ ಗ್ರೇಡ್. ಇದಕ್ಕೆ ಶಾಲಾ ಸಮಯದಲ್ಲಿ ಮಾತ್ರವಲ್ಲ, ಪ್ರತಿ ದಿನ ಬೆಳಗ್ಗೆ ಸಂಜೆ ಸ್ಪೆಷಲ್ ಕ್ಲಾಸ್ ಕೊಟ್ಟು ಓದಿಸಬೇಕು. ಇಷ್ಟು ಅಂಕ ಎಲ್ಲಾ ವಿದ್ಯಾರ್ಥಿಗಳು ಪಡೆದರೆ ಮಾತ್ರ ಶಾಲಾ ಕ್ಯೂಪಿಐ, ತಾಲೂಕಿನ ಕ್ಯೂಪಿಐ, ಜಿಲ್ಲಾ ಕ್ಯೂಪಿಐ ಹೆಚ್ಚು ಬಂದು ರಾಜ್ಯ ಪಟ್ಟಿಯಲ್ಲಿ ಜಿಲ್ಲೆಯ ಹೆಸರು ಮೇಲೇರುತ್ತದೆ. ಇಲ್ಲದೆ ಹೋದರೆ, ಅಂದರೆ ಅಕಸ್ಮಾತ್ ಜಿಲ್ಲೆಯ, ತಾಲೂಕಿನ, ಕ್ಲಸ್ಟರ್ ನ, ಶಾಲೆಯ ಫಲಿತಾಂಶ ಏನಾದರೂ ಕಡಿಮೆ ಬಂದು ಕ್ಯೂ ಪಿ ಐ ಪಟ್ಟಿಯಲ್ಲಿ ಸ್ಥಾನ ಕೆಳಗೆ ಬಂದರೆ ಮುಗೀತು ಕತೆ. ಮುಂದಿನ ವರ್ಷವೆಲ್ಲಾ ಎಲ್ಲರ ಕಣ್ಣು ಅವರ ಮೇಲೆಯೇ. ಹಿಂದಿನ ವರ್ಷದಲ್ಲಿ ಕಲಿತ ಮಕ್ಕಳೇ ಬೇರೆ, ಇಂದು ಆ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳೇ ಬೇರೆ, ಅವರ ಭಾಷೆ, ಮನೆಯ ಪರಿಸರ,ಪರಿಸ್ಥಿತಿಗಳು, ಆಹಾರ ಪದ್ಧತಿ, ಸಮಸ್ಯೆಗಳು ಬೇರೆಯೇ. ಅದು ಹೇಗೆ ಈ ವರ್ಷಕ್ಕೆ ಅದನ್ನು ತಾಳೆ ಮಾಡುವುದೋ ತಿಳಿಯದು. ಶಿಕ್ಷಕರು ತಮ್ಮ ಕಲಿಕೆಯ, ಕಲಿಸುವ ಸಾಮರ್ಥ್ಯವನ್ನು ಬದಲಾಯಿಸಿಕೊಂಡು ಮತ್ತೆ ಹೆಚ್ಚಿನ ಕಲಿಕೆಗೆ ಪ್ರೋತ್ಸಾಹ ನೀಡಬಹುದು, ಕಲಿಕಾ ವಿಚಾರ, ಕೌಶಾಲಗಳನ್ನು ತಿಳಿಸಿ ಕೊಡಬಹುದು. ಆದರೆ ಕಲಿಕಾ ಕಾರ್ಯ ವಿದ್ಯಾರ್ಥಿಯೇ ಸ್ವತಃ ಮಾಡಬೇಕು ಅಲ್ಲವೇ? ಅಮ್ಮ ಮನೆಯಲ್ಲಿ ಅಡುಗೆ ಮಾಡ ಬಹುದು, ತಿನ್ನಲು ಸಾಧ್ಯ ಆಗದೆ ಇದ್ದರೆ ಬಾಯಿಯೊಳಗೂ ಆಹಾರ ಇಡಬಹುದು ಆದರೆ ಜಗಿದು ನುಂಗುವ ಕಾರ್ಯ ಮಗುವೇ ಮಾಡಬೇಕು ಅಲ್ಲವೇ? ಆ ಕಾರ್ಯವನ್ನು ಮಾಡದ ಮಗುವಿಗೆ ಅದನ್ನೂ ಶಿಕ್ಷಕರೇ ಪ್ರೀತಿ ಹಾಗೂ ತಾಳ್ಮೆಯಿಂದ ಮಾಡಿಸುವ ಗುರುತರ ಜವಾಬ್ದಾರಿ ಇಂದಿನ ಶಿಕ್ಷಕರ ಮೇಲಿದೆ.
ಒಂದು ಕಾಲದಲ್ಲಿ ಶಿಕ್ಷಕ ವೃತ್ತಿ ಅತಿ ಶ್ರೇಷ್ಠ ಎಂಬ ಭಾವ ಇತ್ತು. ಈ ವೃತ್ತಿ ಸರ್ವ ಕಾಲಕ್ಕೂ ಶ್ರೇಷ್ಠವೇ ಬಿಡಿ. ಆದರೆ ಇಂದಿನ ಒತ್ತಡದ ಪರಿಸ್ಥಿತಿಯ ಕಾರಣದಿಂದಾಗಿ ಇಂಜಿನಿಯರ್ಸ್ ಮಕ್ಕಳು ಇಂಜಿನಿಯರ್ಸ್ ಆಗ ಬಯಸುತ್ತಾರೆ, ಡಾಕ್ಟರ್ಸ್ ಮಕ್ಕಳು ತಾವೂ ಡಾಕ್ಟರ್ಸ್ ಆಗ ಬಯಸುತ್ತಾರೆ, ಆದರೆ ಯಾವುದೇ ಶಿಕ್ಷಕರ ಮಕ್ಕಳು ಮುಂದೆ ತಾವು ಶಿಕ್ಷಕ ವೃತ್ತಿಯಲ್ಲಿ ಮುಂದುವರೆಯಲು ಇಚ್ಛಿಸುವುದಿಲ್ಲ. ಕಾರಣ ಕಷ್ಟದ ಬದುಕು. ಕಲಿಯುವ, ಸದಾ ಕಲಿಯುವ , ಕಲಿಸುವ ಕಾರ್ಯ ಸುಲಭದ ಮಾತಲ್ಲ. ಒಂದು ಮನವನ್ನು ತಿದ್ದುವ ಕಾರ್ಯ, ಅದನ್ನು ಸರಿಗೊಳಿಸುವ ಕಾರ್ಯವಿದು.
ಶಿಕ್ಷಕ ಒಂದು ಕಾಲದಲ್ಲಿ ಶಿಕ್ಷೆ ಕೊಟ್ಟು ಕಳಿಸುವವ ಆಗಿದ್ದ. ಕಾಲ ಬದಲಾದ ಹಾಗೆ ಜನರೂ ಬದಲಾದರು, ಶಿಕ್ಷಣ ಪದ್ದತಿ, ಶಿಕ್ಷಣ ವ್ಯವಸ್ಥೆ ಎಲ್ಲವೂ ಬದಲಾಯಿತು, ಗುರುಕುಲಗಳು ಕಾಣೆಯಾಗಿ ಶಾಲೆಗಳು ಬಂದವು. ರಾಜ್ಯ ಪಠ್ಯಕ್ರಮ ಶಿಕ್ಷಣ, ಕೇಂದ್ರ ಪಠ್ಯಕ್ರಮ ಶಿಕ್ಷಣ ಪದ್ದತಿ, ಅಂತರ ರಾಷ್ಟ್ರೀಯ ಪಠ್ಯಕ್ರಮ ಶಿಕ್ಷಣ ಪದ್ದತಿ ಇದರ ಜೊತೆ ಮಾತೃಭಾಷಾ ಶಿಕ್ಷಣಕ್ಕೆ ಹೋರಾಟ ಬಂದು ಎಲ್ಲಾ ಶಿಕ್ಷಣ ಕ್ರಮಗಳೂ ಈಗ ನಮ್ಮೊಡನೆ ಇವೆ. ಯಾವ ಪಠ್ಯ ಶಿಕ್ಷಣ ಕ್ರಮದಲ್ಲಿ ನಮ್ಮ ಮಕ್ಕಳನ್ನು ಓದಿಸಬೇಕು ಎಂಬುದನ್ನು ಆಯಾ ಪೋಷಕರೇ ನಿರ್ಧಾರಿಸುತ್ತಾರೆ ಆದರೆ ಪ್ರತಿ ಶಾಲೆಗೂ ಮಕ್ಕಳನ್ನು ಕರೆ ತರಬೇಕು, ತಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಬೇಕು ಎಂಬ ಒತ್ತಡ ಶಿಕ್ಷಕರ ಮೇಲಿದೆ.
ಶಿಕ್ಷಣ ಇಂದು ಎರಡು ರೀತಿಯಲ್ಲಿದೆ. ಸರಕಾರದಿಂದ ಸಿಗುವ ಉಚಿತ ಶಿಕ್ಷಣ ಹಾಗೂ ಖಾಸಗಿಯಿ0ದ ಪಡೆಯುವ ಶಿಕ್ಷಣ. ಇದು ಪೋಷಕರ ಜವಾಬ್ದಾರಿ. ಮನವೊಲಿಸುವುದು ನಮ್ಮ ಧರ್ಮ. ಕಲಿಕೆಗೆ ಪ್ರೋತ್ಸಾಹ ಎಲ್ಲಾ ಕಡೆ ಇದೆ. ಎಲ್ಲಾ ಶಿಕ್ಷಕರೂ , ಪೋಷಕರೂ ಶ್ರಮ ಪಡುವುದು ಮಕ್ಕಳ ಶಿಕ್ಷಣದ ಒಳಿತಿಗಾಗಿ, ಉದ್ಧಾರಕ್ಕಾಗಿ. ಇಂದಿನ ಮಕ್ಕಳು ಮುಂದಿನ ನಾಯಕರು. ದೇಶ ಆಳಲು ಅವರಿಗೆ ಬೇಕಾದ ಶಕ್ತಿ, ಸಾಮರ್ಥ್ಯ ಬುದ್ಧಿಯ ಜೊತೆಗೆ ಧೈರ್ಯ ಸ್ಥೈರ್ಯಗಳನ್ನೂ ನೀಡಿ ಅವರನ್ನು ತಯಾರುಗೊಳಿಸುವ ಶಕ್ತಿಗಳು ಮತ್ತು ಆ ಜವಾಬ್ದಾರಿ ಹೊತ್ತವರು ಪೋಷಕರು, ಶಿಕ್ಷಣ ವ್ಯವಸ್ಥೆ ಮತ್ತು ಸಮಾಜ. ಇಲ್ಲಿ ದೈಹಿಕವಾಗಿ ಅನನುಕೂಲ ಇರುವ, ಪೋಷಕರನ್ನು ಕಳೆದುಕೊಂಡ, ಮಾನಸಿಕವಾಗಿ ಸಮಸ್ಯೆಗಳಿರುವ ಮಕ್ಕಳನ್ನೂ ಗಮನಿಸಿಕೊಳ್ಳಬೇಕು. ಯಾವ ಮಗುವಿಗೂ ಅನ್ಯಾಯ ಆಗ ಬಾರದು. ಎಲ್ಲಾ ವಿದ್ಯಾರ್ಥಿಗಳನ್ನು ಕೂಡಾ ಮುಂದಿನ ಜೀವನಕ್ಕೆ ಸದೃಢಗೊಳಿಸುವ ಮಹತ್ಕಾರ್ಯವಿದು. ಆದ್ದರಿಂದ ಈ ಕೆಲಸದಲ್ಲಿ ನಿರತರಾದ ಪ್ರತಿ ಮನಕ್ಕೂ ನನ್ನದೊಂದು ಸಲಾಂ.
ಎಲ್ಲಾ ವಿದ್ಯಾರ್ಥಿಗಳನ್ನೂ ತಮ್ಮ ಮಕ್ಕಳು ಎಂದು ನೋಡಿಕೊಳ್ಳುತ್ತಾ, ತಪ್ಪು ತಿದ್ದಿ ಸರಿ ದಾರಿಗೆ ಅವರನ್ನು ತರುವ ಪಾತ್ರದ ಜೊತೆಗೆ ಅವರ ಮುಂದಿನ ಬದುಕನ್ನೂ ಕಟ್ಟಿ ಕೊಡುವ ಕಾರ್ಯ ಮಾಡುತ್ತಾ, ಸಮಾಜದಲ್ಲಿ ಯಾವುದೇ ಪ್ರಶಸ್ತಿ, ಪುರಸ್ಕಾರಗಳ ಹಿಂದೆ ಹೋಗದೆ ತಮ್ಮ ಕಾರ್ಯವನ್ನು ತಾವು ಶ್ರದ್ಧೆಯಿಂದ ಮಾಡುತ್ತಿರುವ ಅದೆಷ್ಟೋ ಶಿಕ್ಷಕರನ್ನು ಕಂಡಿದ್ದೇನೆ. ಬಡ ವಿದ್ಯಾರ್ಥಿಗಳಿಗೆ ತಮ್ಮ ಹಣದಿಂದ ಬಟ್ಟೆ ತೆಗೆದು ಕೊಡುವ, ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದರೆ ತಮ್ಮ ಹಣದಿಂದ ಅವರಿಗೆ ಧನ ಸಹಾಯ, ಬಹುಮಾನ, ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ, ತಮ್ಮಲ್ಲಿ ಸಿಕ್ಕಿದ, ಇರುವ, ತೆಗೆದುಕೊಂಡು ಬಂದು ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡುವ ಶಿಕ್ಷಕರು ನಮ್ಮ ಹೆಮ್ಮೆ. ಶಿಕ್ಷಕರೊಬ್ಬರು ನಮ್ಮ ಜೊತೆ ಮಥುರಾಕ್ಕೆ ಬಂದಿದ್ದಾಗ ಅಲ್ಲಿ ದೇವಾಲಯದ ಹೊರಗೆ ಭಜನೆ ಹೇಳುವಾಗ ಬಾರಿಸುವ ತಾಳ ಮಾರುತ್ತಿದ್ದರು. ತಕ್ಷಣ ಆ ಶಿಕ್ಷಕರು ಹೇಳಿದ ಮಾತು ಇಂದಿಗೂ ನನ್ನ ಕಿವಿಯಲ್ಲಿ ನಾಟಿ ನಿಂತಿದೆ. "ನಮ್ಮ ಶಾಲಾ ಮಕ್ಕಳಿಗೆ ಕಂಸಾಳೆ ನೃತ್ಯ ಮಾಡಲು ಉಪಯೋಗ ಆಗುತ್ತದೆ. ನಾನು ಅದನ್ನು ಹದಿನಾರು ಸೆಟ್ ನಮ್ಮ ಶಾಲೆಗೆ ತೆಗೆದುಕೊಳ್ಳುತ್ತೇನೆ" ಎಂದಾಗ ನನಗೆ ಅವರ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಯಿತು. ಹಾಗೆಯೇ ಹಳೆಯ ಅಂದವಾದ ಬಟ್ಟೆಗಳನ್ನು ಸಿರಿವಂತರ ಬಳಿ ಸಂಗ್ರಹಿಸಿ ಅದನ್ನು ತಮ್ಮ ಶಾಲಾ ಬಡ ವಿದ್ಯಾರ್ಥಿಗಳಿಗೆ ಹಂಚುವ, ಸಂಜೆ ಆರು ಗಂಟೆಯವರೆಗೂ ಶಾಲಾ ಕಾರ್ಯ ಮಾಡುವ, ಬೆಳಗ್ಗೆ ಎಂಟು ಗಂಟೆಗೇ ಶಾಲೆಯಲ್ಲಿ ಹಾಜರಿರುವ, ರಾತ್ರಿ ಹನ್ನೆರಡು, ಒಂದು ಗಂಟೆಯವರೆಗೂ ಕುಳಿತು ಶಾಲಾ ದಾಖಲೆಗಳನ್ನು ಆನ್ಲೈನ್ ಫೀಡ್ ಮಾಡುವ, ನಿಷ್ಠೆಯಿಂದ ರಾತ್ರಿ ಎರಡು ಗಂಟೆಯವರೆಗೆ ಕುಳಿತು ನಿಷ್ಟಾ ತರಬೇತಿ ಪೂರ್ಣಗೊಳಿಸಿ ನಿಟ್ಟಿಸಿರಿಡುವ ಶಿಕ್ಷಕರು ನಮ್ಮ ನಿಮ್ಮೆಲ್ಲರ ನಡುವೆ ಇದ್ದಾರೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಅವರ ಪೋಷಕರನ್ನೂ ತಮ್ಮ ಖರ್ಚಿನಲ್ಲೇ ಕರೆದುಕೊಂಡು ಹೋಗಿ ಆ ವಿದ್ಯಾರ್ಥಿಗಳಿಗೆ ಬ್ಯಾಂಕ್ ಅಕೌಂಟ್, ಜಾತಿ- ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮಾಡಿಸಲು ನೆರವಾಗುವ ಶಿಕ್ಷಕರು ಪ್ರಶಸ್ತಿಗಾಗಿ ಆಸೆ ಪಡುವವರಲ್ಲ, ಅರ್ಜಿ ಹಾಕಿದವರೂ ಅಲ್ಲ. ತಮ್ಮ ಮನೆಯಲ್ಲಿ ಬೆಳೆದ ತರಕಾರಿ ತಂದು ಬಿಸಿ ಊಟಕ್ಕೆ ಸಹಕರಿಸುವ ಶಿಕ್ಷಕರಿದ್ದಾರೆ. ಅವರೆಲ್ಲರ ಪರಿಶ್ರಮದ ಫಲ ಉತ್ತಮ ಗುಣದ ಆದರ್ಶ ವಿದ್ಯಾರ್ಥಿಗಳು.
ಭಾರತ ಹಲವಾರು ವೈವಿಧ್ಯತೆ ಹೊಂದಿದ್ದರೂ ಏಕತೆ ಬೆಳೆಸುವುದು ಶಿಕ್ಷಣ ಕೇಂದ್ರಗಳೇ ಅಲ್ಲವೇ?
ದೇಶ ಕಟ್ಟುವ ಇಂಜಿನಿಯರ್ ಗಳನ್ನು, ಆರೋಗ್ಯ ಭಾಗ್ಯ ಕೊಟ್ಟು ಜೀವನ ದಾನ ಕೊಡುವ, ಹೃದಯ-ಕಣ್ಣು ಕಸಿ ಮಾಡುವುದನ್ನೂ ಸೇರಿ ಎಲ್ಲಾ ರೀತಿಯ ವೈದ್ಯ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ, ವಾಹನದ ಪ್ರತಿ ಬಿಡಿ ಭಾಗಗಳನ್ನೂ ಪರಿಚಯಿಸಿ ಮೆಕ್ಯಾನಿಕ್ ಕೆಲಸಕ್ಕೆ ಸನ್ನದ್ದುಗೊಳಿಸುವ, ರಾಷ್ಟ್ರ ರಕ್ಷಣೆಯ ಮಾಡಲು ಸೈನಿಕರನ್ನು ತಯಾರುಗೊಳಿಸುತ್ತಿರುವ, ದೇಶದ ಭದ್ರ ಬುನಾದಿಗೆ ಅಡಿಪಾಯ ಹಾಕಲು ನಾಯಕರನ್ನು, ಕೆಲಸದ ಆಳುಗಳನ್ನು, ಕಂಟ್ರಾಕ್ಟರ್ ಗಳನ್ನು, ಶಿಕ್ಷಕರನ್ನು, ಮುಂದಿನ ಪೀಳಿಗೆಯ ಎಲ್ಲಾ ರಂಗಗಳಲ್ಲಿ ಮುಂದೆ ಬರುವ ವಿದ್ಯಾರ್ಥಿಗಳನ್ನು ತಯಾರು ಗೊಳಿಸುತ್ತಿರುವ, ಕಲೆ, ನಾಟಕ, ಭಜನೆ, ಗಾಯನ, ಹಾಡು, ನಟನೆ, ಸಮಾಜ ಸೇವೆ, ಕಾನೂನು ಸೇವೆ, ಪೊಲಿಸ್ ಇಂತಹ ಎಲ್ಲ ಸೇವೆಗಳಿಗೂ ಪ್ರತ್ಯೇಕವಾಗಿ ಆಯಾ ಆಸಕ್ತರನ್ನು ಅಣಿಗೊಳಿಸುತ್ತಾ ಆ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ , ದೇಶದ ಬಗ್ಗೆ ಗೌರವ, ಹಿರಿಯರಿಗೆ ಗೌರವ, ಕಿರಿಯರಿಗೆ ಸಹಕಾರ ನೀಡಲು ಕಲಿಸಿ, ದೇಶದ ಭವಿಷ್ಯಕ್ಕೆ ಭಾಷ್ಯ ಬರೆಯುತ್ತಿರುವ ಸರ್ವ ಗುರು ವೃಂದಕ್ಕೆ ತಲೆ ಬಾಗುತ್ತಾ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ ಆ ದೇವರು ನಿಮಗೆ ಆನಂದ, ಆರೋಗ್ಯ, ಆಯುಷ್ಯ ಹಾಗೂ ಎಲ್ಲಾ ಭಾಗ್ಯಗಳನ್ನೂ ದಯಪಾಲಿಸಿ ಆಶೀರ್ವದಿಸಲಿ ಎನ್ನೋಣ. ನೀವೇನಂತೀರಿ?
@ಪ್ರೇಮ್@
04.09.2022
ಕಾಲೇಜಿನ ಸುವರ್ಣ ಮಹೋತ್ಸವ ಗೀತೆ
ನೋಡಿಯೇ ನೋಡು
ಸಂಭ್ರಮ ಸಂಭ್ರಮ ಎಲ್ಲೆಲ್ಲೂ ಸಂಭ್ರಮ
ಮೂಲ್ಕಿಯ ಸರಕಾರಿ ಕಾಲೇಜಿಗೆ ಈ ವರ್ಷ
ಸುವರ್ಣ ಮಹೋತ್ಸವದ ಸಂಭ್ರಮ..//೧//
ಸಾವಿರಾರು ವಿದ್ಯಾರ್ಥಿಗಳ ಹೆಮ್ಮೆಯ ಬೀಡು
ಸಾಧಕರ ತವರೂರಿನ ಹಾಡು
ಸದಾಶಿವ ರಾಯರ ನೆಲೆವೀಡು
ಕಾರ್ನಾಡಿಗೊಮ್ಮೆ ಬಂದು ನೋಡು//೨//
ಮೂಲ್ಕಿ ಕಂಬಳ ನೋಡಿಯೇ ನೋಡು
ದುರ್ಗಾ ಮಾತೆಯು ಕುಳಿತಿಹ ಜಾಡು...
ಗಾಂಧೀಜಿ ಬಂದ ಮೈದಾನ ನೋಡು
ಮನದಿ ಖುಷಿಯ ಹಾಡನು ಹಾಡು...//೩//
ಶಿಕ್ಷಕ ವೃಂದದ ಉತ್ಸಾಹ ನೋಡು
ಕಲಿಕಾರ್ಥಿಗಳಿಗೆ ಪುಸ್ತಕ ನೀಡು
ಹಳೆ ವಿದ್ಯಾರ್ಥಿಗಳ ಸಾಹಸ ನೋಡು
ಹೆಮ್ಮೆಯ ಶಾಲೆಯ ದರ್ಶನ ಮಾಡು..//೪//
@ಪ್ರೇಮ್@
06.09.2022
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)