ಶುಕ್ರವಾರ, ಮಾರ್ಚ್ 10, 2023

ಗಝಲ್

ಗಝಲ್

ಹೊಸ ಹೂವು ತಲೆಯೆತ್ತಿ ಹೊಸರಾಗ ಹಾಡಿತ್ತು
ಕಸ ಮುಸುರೆ ತೊಳೆದರೂ ಬದುಕ ದಾರಿ ಸಾಗಿತ್ತು

ಲತೆ ಮರವ ಏರುತ್ತಾ ಬಾಳ ಬಂಡಿ ಸಾಗಿತ್ತು
ಮನಸಾರೆ ಕೊಂಡಾಡುತ್ತಾ  ನವ ಲಹರಿ ಹೊಮ್ಮಿತ್ತು

ಸಂತಸದ ಹಾದಿಯಲಿ ಹಸಿರ ಗಿಳಿ ಮಾತಾಡಿತ್ತು
ಕೆರೆ ಕಟ್ಟೆಯ ಮೇಲೆ ನವಿಲ ಗರಿ ಕುಣಿದಿತ್ತು

ಮೋಹ ಮದ ಮಾತ್ಸರ್ಯದ ಹಗ್ಗ ತುಂಡಾಗಿ ಹೋಗಿತ್ತು
ಚಂದಿರನ ಕಾಂತಿಯಂತೆ ಅವಳ ಮುಖಸಿರಿ ಹೊಳೆದಿತ್ತು

ರಗಳೆ ಕವಿ ಹಾಡಿದಂತೆ ಪದಗಳಾಟ ಉರುಳಿತ್ತು
ರಮಿಸುವ ಪತಿಯ ಹಾಗೆ ನೆರಳು ಸುರಿ ಸುರಿದಿತ್ತು

ಕೋಮು ದಳ್ಳುರಿಯ ಮರೆತು ಕಣ ಕಣವೂ ಬೆಳಗಿತ್ತು
ಪ್ರೇಮದರಮನೆಯಲ್ಲಿ ಹೊಸ ಬದುಕ ಗುರಿ ಸಾಗಿತ್ತು.
@ಹನಿಬಿಂದು@
11.03.2023

ಗಝಲ್

ನೀ

ನೀ ಕೊಟ್ಟ ಮುತ್ತಿನ ಮತ್ತಿನ್ನೂ ಇಂಗಿಲ್ಲ
ನಿನ್ನ ಅಪ್ಪುಗೆಯ ಬಿಸಿ ಇನ್ನೂ ಮಾಸಿಲ್ಲ
ಮುದ ನೀಡಿರುವೆ ಹೃದಯ ಹಂಚಿ ಜೊತೆಜೊತೆಗೆ
ನಿನ್ನೊಡನೆ ಕಳೆದ ಪ್ರತಿ ಕ್ಷಣವನ್ನೂ ಮರೆತಿಲ್ಲ!

ಮಾತಲ್ಲೇ ಮನ ಗೆದ್ದುದ ತೊರೆದಿಲ್ಲ
ಕಷ್ಟ ಸುಖ ಹಂಚಿಕೊಳ್ಳದೆ ಬದುಕಿಲ್ಲ
ಮಾನವತೆ ಮರೆತೊಡನೆ ಬಾಳಿಲ್ಲ
ನಾ ನೀನು ಎಂಬ ಬೇಧವಂತೂ ಇಲ್ಲವೇ ಇಲ್ಲ

ಮನಸಾರೆ ಹರಟಿದ್ದ ಮರೆಯೋಲ್ಲ
ಕಣ್ಣಾ ಮುಚ್ಚಾಲೆಯಲ್ಲೆ ಮನ ಗೆದ್ದೆಯಲ್ಲ
ಪ್ರೀತಿಯ ಆಟದಲಿ ಯಾರಿಗೂ ಸೋಲಿಲ್ಲ
ನಿನ ಮೇಲಿನ ಭರವಸೆಗೆ ಎಂದಿಗೂ ಕೊನೆಯಿಲ್ಲ

ಯಾರಿಹರು ಬಾಳಿನಲಿ ಅನುದಿನ ಅನುಕ್ಷಣ
ಕಾದಿರುವೆ ನೋವಿನಲು ಪ್ರೀತಿಗಾಗಿ ಪ್ರತಿಕ್ಷಣ
ಬಳ್ಳಿಗಾಸರೆಯಾಗಿ ಮರದಂತೆ ಹಬ್ಬಿರುವೆ ಮನದಲ್ಲಿ
ಮೂಲೆ ಮೂಲೆಯಲ್ಲೂ ಅವಿತಿರುವೆ ಎದೆಯಲ್ಲಿ
@ಪ್ರೇಮ್@

ನೆಮ್ಮದಿ ಬೇಕು ಬದುಕಲ್ಲಿ

ನೆಮ್ಮದಿ ಆರೋಗ್ಯ ಬೇಕು ಬದುಕಲ್ಲಿ....

ಉತ್ತಮ ಊಟವು ನಡಿಗೆಯು ಸ್ವಲ್ಪ
ನಿತ್ಯವು ವ್ಯಾಯಾಮ  ದೇಹಕೆ ಕಲ್ಪ
ಬತ್ತದ ಆರೋಗ್ಯ ಬದುಕಲಿ ಇರಲು
ಸುತ್ತಲು ಸಂತಸ ನೆಮ್ಮದಿ ಸಿಗಲು..

ಮಾನವ ಬಾಳಲಿ ನಿದ್ರೆಯು ಉತ್ತಮ
ದೊರಕುತ ಕಣ್ಣು ಮನ ದೇಹಕೆ  ಆರಾಮ 
ಸಣ್ಣ ಒತ್ತಡ  ಆತಂಕ ನೋವು ನಿತ್ಯ ನರಕವು
ಓಡುವ ಕ್ಷಣವಿದು ಓಡಲು ಭಯಾನಕವು!

ವೇಗದ ಓಟದಿ ಇಲ್ಲವು ತನುವಿಗೆ  ವಿಶ್ರಾಂತಿ
ಯೋಗದ ಮಹತ್ವ ತಿಳಿದವ ಕೋಟ್ಯಾಧಿಪತಿ
 ಉತ್ತಮ ಅಭ್ಯಾಸದಿ ಬದುಕಿನ ಏರುಗತಿ
ಸಾವಯವ ತರಕಾರಿ, ಮನೆ ಆಹಾರ ಸದ್ಗತಿ!

ಮೋಸದ ಹಾದಿಯ ದೂರವೆ ಬಿಡುತಲಿ
ತೋಷವ ಹಂಚುತ  ಬೆರೆಯುತ ನಡುವಲಿ
ಘೋಷದಿ ಕೂಗುತ ನೆಮ್ಮದಿ ಉಸಿರಲಿ
ಹಿರಿಯರ ಸೇವೆಯ  ಮಾಡುತ ಮನೆಯಲಿ

ದುಷ್ಟ ಚಟಗಳಲಿ ಬೆರೆತರೆ ಕೆಡುವೆ
ಶಿಷ್ಟಾಚಾರವ ಕಲಿತೊಡೆ ಮೆರೆವೆ
ಜಗದಲಿ ಮೂರು ದಿನ ನಮ್ಮಯ ಬಾಳ್ವೆ
ನಗುತಲಿ ಕಳೆಯಲು ಅಂದದಿ ಬಾಳುವೆ..
@ಹನಿಬಿಂದು@
15.02.2023








ದಶಕ -105

ದಶಕ - 105

ಹರ ಕಾಯೋ ನಮ್ಮ ಶಿವ ಕಾಯೋ
ಭಯವ ಬಿಡಿಸಿ ಜಗ ನೋಡೋ..
ವರವ ನೀಡಿ ಸಮಾನತೆ ಕಾಪಾಡೋ
ವಿವರ ಕೇಳದೆ ನೆಮ್ಮದಿ ನೀಡೋ..

ಜಗದ ನೋವನು ನೋಡಲು ಕನಿಕರ
ಕಠಿಣ ದಾರಿಯ ಸರಿಪಡಿಸಿ ಸರಸರ
ನೋವಿನ ಬಾಳಿಗೆ ನೀಗಿಸಿ ಬೇಸರ
ಜತನದಿ ಕಾಯೋ ಜೀವಿಯ ಹರಿಹರ

ನಿನ್ನನೇ ನಂಬಿಹ ಜೀವಕೆ ನೀ ಗತಿ
ಬೇಡುವ ಕಾಯಕೆ ನೀಡೋ ಸದ್ಗತಿ..
@ಹನಿಬಿಂದು@
18.02.2023

ದಶಕ -106

ದಶಕ - 106

ಗಿರಿಜಾರಮಣ ಮನಸಾ ಸ್ತುತಿಪೆ
ಈಶನೆ ಮುನಿಸ ಬಿಡುತಲಿ ಭಜಿಪೆ
ಮೂಷಿಕ ವಾಹನ ನಿನ್ನಯ ಕುವರ
ಕೂಸಿಗು ಬೇಕು ನಿನ್ನದೇ ಆ ವರ!

ಮೂಜಗ ಕಾಯುವ ದೇವನೆ ರಕ್ಷಿಸು
ಮುಕ್ಕೋಟಿ ದೇವರ ರಾಜನೆ ಕರುಣಿಸು
ಭಕ್ತರ ಪಾಲಕ ಶಿಷ್ಟರ ಉದ್ಧಾರಕ
ಶಕ್ತತೆ ತರುವ ಸರ್ವರ ಪ್ರೋಕ್ಷಕ

ಲಯ ಕರ್ತನೇ ಹರ ಗಂಗಾಧರನೇ 
ದಯದಿಂದಲಿ ಪೊರೆ ನೀಲಕಂಠನೇ ..
@ಹನಿಬಿಂದು@
19.02.2023

ಮೊಬೈಲ್ ಪರಿಣಾಮ

ಜನರೇ ಕೇಳಿರಿ

ಕೇಳಿರಿ ಕೇಳಿರಿ ನಾಡಿನ ಜನಗಳೇ
ಮೊಬೈಲ್ ಫೋನನ್ನು ಹಿಡಿದವರೆ
ನೆಟ್ಟನು ಬಳಸಿ ಅಪ್ಲೋಡ್ ಡೌನ್ಲೋಡ್
ಎನ್ನುತ ಖುಷಿಯ ಪಡುವವರೆ...

ಬೆರಳಿನ ಗೆರೆಗಳ ಮುಖದ ಆಕಾರವ
ನೀಡಿ ಬಿಡುವಿರಿ ಸುಲಭದಲಿ
ಮಾರಿಹ ದೇಶದ ಕೋಡಿಂಗ್ ಅದನು
ಹಿಡಿದಿಡುವುದು ತನ್ನ ಹಿಡಿತದಲಿ..

ನಿಮ್ಮಯ ಪಟಗಳ ಬ್ಯಾಂಕಿನ ವಿಷಯವ
ಹಂಚಲು ಬೇಡಿರಿ ಎಲ್ಲರಿಗೆ
ಓಟಿಪಿ ಸಂಖ್ಯೆಯ ಬ್ಯಾಂಕದು ಕೇಳದು
ಹೇಳಲು ಬೇಡಿರಿ ಕರೆಗಳಿಗೆ..

ಒತ್ತುತ ಎಳೆಯುತ ಕಣ್ಣಿಗೆ ಆಯಾಸ
ಕಣ್ಣಿನ ಮೇಲೆ ಕಣ್ಣಿರಲಿ
ಓಡುವ ಚಿತ್ರ ಪಟಗಳ ನೋಡುತ
ಸಮಯದ ಬಗ್ಗೆ ಅರಿವಿರಲಿ..

ಮನೆಯಲು ದಾರಿಲು ಬಸ್ಸಿನ ಒಳಗೂ
ಡ್ರೈವಿಂಗ್ ನಲ್ಲೂ  ಫೋನುಗಳೇ 
ಆಫೀಸು ಕೆಲಸವ ಮಾಡಲು ಎಂದು
ಕುಳಿತಲ್ಲೇ ಕುಳಿತು ತಲೆ ನೋವೇ..

ಹಿರಿಯರಿಗಾಗಿ ಕುಟುಂಬಕ್ಕಾಗಿ
ಸಮಯವ ನಾವು ನೀಡೋಣ
ಮೊಬೈಲ್ ಬದಿಗಿಟ್ಟು  ಮಕ್ಕಳ ಜೊತೆಗೆ
ಆಡುತ ಹರ್ಷಿತರಾಗೋಣ..
@ಹನಿಬಿಂದು@
20.02.2023






ಕಾಡುವ ಮನ

ಕಾಡುವ ಮನ

ಆ ಮನಕೆ ಗೊತ್ತು ತಾನಿಲ್ಲದೆ ಆ ಹೂವು ತೀರಾ ಒಂಟಿಯೆಂದು!
ಆದರೂ ದಿನದ ಸಾವಿರದ ನಾಲ್ಕು ನೂರ ನಲವತ್ತು ನಿಮಿಷಗಳಲ್ಲಿ ಪ್ರೀತಿ ಕಾವು ಕೊಡಲು ಒಂದು ನಿಮಿಷವೂ ಇಲ್ಲ ಹೃದಯದ ಬಳಿ ಎಂದೂ..

ಲೆಕ್ಕಾಚಾರದಲ್ಲೇನೋ ಬಹಳ ಬುದ್ಧಿವಂತನಂತೆ ಕೆಲಸದಲಿ
ಆದರೆ ಮನದ ನೋವುಗಳ ಲೆಕ್ಕಾಚಾರದಲಿ ಶೂನ್ಯ ಫಲಿತಾಂಶ ಸರ್ವ ದಿನಗಳಲಿ 
ಸಮಾಂತರ ರೇಖೆಗಳಂತೆ ಬಾಳು ನಿತ್ಯ ಸಾಗುತಿದೆ ಜಗದಲಿ
ಕೂಡಿ ಕಳೆವುದೆಂತೋ ನೋವು ನಲಿವುಗಳ ಕ್ಷಣಗಳಲಿ

ಮೆದುಳಿಗೆ  ಕಾಣದು ಕಾಡುವ ವಿರಹ ವೇದನೆಯ ಗುಣಾಕಾರ
ಭಾಗಿಸುತಿಹನಲ್ಲ ಮಾಡಿ ಹಲವಾರು ಕೆಲಸಗಳ ಲೆಕ್ಕ ಪೂರಾ!
ಪರರ ಚಿಂತೆ ನಮಗೆತಕಯ್ಯಾ ಎಂಬ ಗಾದೆಯ ಸರದಾರ
ಬಳಿಗೆ ಬಂದಾಗ ಮಾತ್ರ ಬಹು  ಹೊಗಳಿಕೆಯ ಸೂತ್ರಧಾರ!

ತನ್ನದೆನುವುದನು ಬದುಕಿನಲಿ ತೀರಾ ಅಲಕ್ಷಿಸಲುoಟೆ ಹೀಗೆ?
ಕಣ್ಣ ಮುಂದೆ ಇರಬೇಕೆಂಬ ಆಸೆಯಿಲ್ಲವೇ ಎದೆ ಗುಡಿಯಾಗೆ?
ಯಾವ ತಪ್ಪಿನ ಫಲವೋ ಬದುಕಲ್ಲಿ ನೋವಿನ ನೆರಳುಗಳೆ
ಕಾವ ದೇವಗೆ ಗೊತ್ತು ಪ್ರೀತಿ ಫಲ ಸದಾ ಕೊಡುವ ಬಗೆ!

ಸಾಲುಗಳ ಬರೆದು ಗೀಚಿ ಏನದು ಮಹಾ ಪ್ರಯೋಜನ?
ನಿಜ ಪ್ರೀತಿ ಹೃದಯದಿಂದ ಬಗೆದು ಬರಲು ಹರ್ಷವೀ ಮನ
ಕಾಟಾಚಾರದ ಒತ್ತಡದ ಪ್ರೀತಿಗಿಲ್ಲ ಬಾಳ್ವಿಕೆಯ ಯೋಗ
ಮನದಿ ಸ್ಪುರಣವಾಗಿ ಆವೀರ್ಭವಿಸಿದಾಗ ಮಾತ್ರ ತ್ಯಾಗ..
@ಹನಿಬಿಂದು@
18.02.2023




ವ್ಯಕ್ತಿ ಪರಿಚಯ - ನಾರಾಯಣ ಕುಂಬ್ರ

ಯಶೋಗಾಥೆ -5 ನಾರಾಯಣ ಕುಂಬ್ರ

            ಸಣ್ಣ ವಯಸ್ಸಿನಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿ ಹಲವಾರು ಗಿನ್ನೆಸ್ ರೆಕಾರ್ಡ್ ಗಳನ್ನೂ ಮಾಡಿದವರ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಅವರಿಗೆ ಬೇಕಾದ ಅವಕಾಶ ಹಾಗೂ ಸಮಯದ ಸದುಪಯೋಗ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಆಗುವ ಸಾಧನೆ ಇದಾಗಿದೆ. ಅದಲ್ಲದೆ ನಮ್ಮ ಮುಂದೆ ಕೆಲವು ಜನರಿದ್ದಾರೆ. ಮನೆಯಲ್ಲಿ ಯಾವುದೇ ಅವಕಾಶಗಳು ಇಲ್ಲದೆ, ಕಡು ಬಡತನದಲ್ಲಿ ಹುಟ್ಟಿ ಬೆಳೆದು ತಾನು ಏನನ್ನಾದರೂ ಸಾಧಿಬೇಕೆಂಬ ಹಠ ತೊಟ್ಟು, ಏಕಲವ್ಯನಂತೆ ತಾನೇ ಒಂದು ಗುರುವನ್ನು ನೋಡಿ, ಅವರಂತೆ ನಾನಾಗಬೇಕು ಎಂಬ ಪ್ರೇರಣೆ ಪಡೆದು, ತನ್ನ ಪ್ರಯತ್ನವನ್ನು ಬಿಡದೆ ಸಾಧನೆ  ಮಾಡಿ ಒಂದು ಸ್ಥಾನವನ್ನು ಈ ಭೂಮಿಯಲ್ಲಿ ತನಗಾಗಿ ಗಟ್ಟಿಯಾಗಿ ಭದ್ರ ಪಡಿಸಿಕೊಂಡು ನೋಡಲು ದೇಹ ಸಣ್ಣದಾದರೂ  ಅವರ ಜೀವನ ಸಾಧನೆಯಲ್ಲಿ "ಏನೋ ಒಂದು ಚೂರು ನಾನೂ ಕೂಡಾ ಸಾಧಿಸಿದೆ, ಇನ್ನಷ್ಟು ಸಾಧಿಸುವುದು ಬಹಳ ಇದೆ" ಎಂದು ನಂಬಿಕೊಂಡ ಸಾಧನೆಗೆ ಬಡತನ, ಸಿರಿತನದ ಹಂಗಿಲ್ಲ ಎಂದು ತೋರಿಸಿದ ಮನಗಳು! ಹೌದು, ಇಂದು ಇಲ್ಲಿ ನಾ ನಿಮಗೆ ಹೇಳಲು ಹೊರಟಿರುವುದು ಒಬ್ಬ ಮಹಾನ್ ಕಷ್ಟಗಳಿಂದ ಮೇಲೆದ್ದು ಬಂದು, ಆ ಕಷ್ಟದಲ್ಲೂ ತನ್ನತನದ ಬೇರನ್ನು ಬಿಟ್ಟು ಕನ್ನಡ ಸಾರಸ್ವತ ಲೋಕದಲ್ಲಿ  ಹೆಸರಾಗಿರುವ  ವಿವೇಕಾನಂದ ಕಾಲೇಜು ನೆಹರು ನಗರ ಪುತ್ತೂರು ಇಲ್ಲಿನ ರಸಾಯನ ಶಾಸ್ತ್ರ ಲ್ಯಾಬ್ ಸಹಾಯಕರಾಗಿರುವ ಶ್ರೀಯುತ ನಾರಾಯಣ ಕುಂಬ್ರ ಅವರ ಬಗ್ಗೆ! 
         ನಾರಾಯಣ ಕುಂಬ್ರ ಅವರ ಬಗ್ಗೆ ಬಲ್ಲವರು ಮತ್ತು ಈ ಲೇಖನ  ಓದಿದ ಮೇಲೆ ನಾನು ಮಾತ್ರ ಅಲ್ಲ, ನೀವೂ ಕೂಡಾ ಅವರ ಬದುಕಿನಿಂದ ಬಹಳ ಪ್ರೇರಿತರಾಗುವಿರಿ. ಕನ್ನಡದ ಮೇರು ಕವಯತ್ರಿ ಸಾರಾ ಅಬೂಬಕ್ಕರ್ ಮೇಡಂ ನೆನಪಾದರು ನನಗೆ ಇವರ ಜೀವನದ ಬಗ್ಗೆ ತಿಳಿಯುತ್ತಾ ಹೋದಂತೆ! ಹೌದು, ಸಾಧನೆ ಎಂದರೆ ಹಾಗೆಯೇ, ಅದು ನಿಲ್ಲದ ಪ್ರಯತ್ನ! ನಮ್ಮ ಬದುಕಿನ ನೆಲೆಗಟ್ಟಿನ ಮಟ್ಟದಲ್ಲಿ ನಿಂತು ನಾವು ಇತರರಿಗಿಂತ ಮೇಲೇರುವುದೇ ಅಸಾಧ್ಯ ಎಂದಿರುವಾಗ "ನಾನು ಏನಾದರೂ ಮಾಡಿ ಖಂಡಿತಾ ಮೇಲೆ ಏರಬಲ್ಲೆ" ಎಂದು ಬದುಕಿನಲ್ಲಿ ಸಾಧಿಸಿ ತೋರಿಸುವುದಕ್ಕಿಂತ ದೊಡ್ಡ ಸಾಧನೆ ಬೇರೆ ಇದೆಯೇ?

               ದಿವಂಗತ ಕುಕ್ಕ ಮತ್ತು ಶ್ರೀಮತಿ ಮಾಣಿಗ ಇವರ ನಾಲ್ವರು ಮಕ್ಕಳಲ್ಲಿ ಒಬ್ಬರಾಗಿ ಜನಿಸಿದವರು ನಾರಾಯಣ. ಕಡು ಬಡತನದ ಮನೆ. ತಂದೆ ಒಬ್ಬರು ಕೂಲಿ ಕೆಲಸಕ್ಕೆ ಹೋಗಿ ದುಡಿದ ದುಡಿತದಲ್ಲಿ ಐದು ಜನರ ಸಾಕಬೇಕಿತ್ತು, ಆರು ಜನರ ಬದುಕು ನಡೆಯಬೇಕು. ಈಗಿನಂತೆ ಸುಲಭವಾಗಿರಲಿಲ್ಲ ಆ ಜೀವನ. ಶಾಲೆಗೆ ಹೋಗಿ ಕಲಿಯುವುದೇ ಕಷ್ಟದ ಮಾತು. ಪುಸ್ತಕ, ಬ್ಯಾಗು, ಪೆನ್ನು, ಪೆನ್ಸಿಲ್, ಸ್ಲೇಟಿಗೂ ದುಡ್ಡಿಲ್ಲ ಮನೆಯಲ್ಲಿ! ಆದರೂ "ನಾನು ಓದಬೇಕು" ಎಂಬ ಹಠ! ಛಲ! ಈ ಛಲಗಾರ ಮನಸ್ಸೇ ಮನುಷ್ಯನನ್ನು ಎತ್ತರಕ್ಕೆ ಒಯ್ಯಲು ಸಾಧ್ಯ ಅಲ್ಲವೇ? 

            ಈಗಿನಂತೆ ಮೊದಲು ಶಾಲೆಗಳಲ್ಲಿ ಉಚಿತ ಪುಸ್ತಕ, ಬಟ್ಟೆ, ಊಟ ಸಿಗುತ್ತಿರಲಿಲ್ಲ. ನಾವೆಲ್ಲಾ ಹಳೆ ಪುಸ್ತಕಗಳನ್ನು ಅರ್ಧ ರೇಟಿಗೆ ಪಡೆದು ಓದಿದವರು ಅಲ್ಲವೇ? ಇಂತಹ ಬಡತನದ ಮನೆಯಲ್ಲೇ ಬೆಳೆದವರು ನಾರಾಯಣರು. ಅವರ ನೆನಪಿನ ಬುತ್ತಿಯನ್ನು ಬಿಚ್ಚುತ್ತಾ ಹೋದಂತೆ ಸಾಧಾರಣ ಐದನೇ  ತರಗತಿ ಕಲಿಯುತ್ತಿರುವ ಸಮಯದಲ್ಲಿ ಕುಯ್ಯಾರು ಗಂಗಾಧರ ರೈಯವರ ಮನೆಯಿಂದ ಹಾಲು ಡೈರಿಗೆ ಕೊಟ್ಟು ಆಮೇಲೆ ಶಾಲೆಗೆ ಹೋಗುತ್ತಿದ್ದರು. ಅವರು ಕೊಟ್ಟ ಕಿಂಚಿತ್ತು ಹಣದಲ್ಲಿ ಅವರಿಗೆ ಬೇಕಾದ ಪುಸ್ತಕ ಪೆನ್ ಹೀಗೆ ತೆಗೆದುಕೊಳ್ಳಲು ಹಣ ಆಗುತ್ತಿತ್ತು. ರೈ ಅವರ ಮಡದಿ ಭಾರತಿ ಅಕ್ಕ ಅವರಿಗೆ ಕಲಿಯಲು  ತುಂಬಾ ಸಹಾಯ ಮಾಡಿದ್ದಾರೆ. ಕಲಿಕೆಯಲ್ಲಿ ಮುಂದಿರುವ ಮಕ್ಕಳು ಎಂದರೆ ಎಲ್ಲರೂ ಪ್ರೋತ್ಸಾಹ ನೀಡುತ್ತಾರೆ ತಾನೇ? ಅಂತೆಯೇ ಶ್ರೀಮತಿ ಭಾರತಿಯವರ ಕಿಂಚಿತ್ ಸಹಾಯ ಇಂದು ನಾಲ್ಕು ಜನರ ನಡುವೆ ಗುರುತಿಸುವ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸದಾ ಉಳಿಯುವ ಒಬ್ಬ ಕವಿಯ ಜೀವನವನ್ನು ರೂಪಿಸಿದೆ. ಭಾರತಿ ಅಕ್ಕನವರ  ಸಹಾಯವನ್ನು ನಾರಾಯಣರು ಎಂದೂ ಮರೆಯಲಾರರು.ತನ್ನ ಏಳಿಗೆಗೆ ಸಹಾಯ ಮಾಡಿದವರ ಎಲ್ಲರ ಸಹಾಯವನ್ನು ನಾರಾಯಣರು ಸದಾ ನೆನಪಿಸಿ ಅವರಿಗೆ ಆಭಾರಿಯಾಗಿದ್ದಾರೆ. ಇದೇ ನಾರಾಯಣ ಕುಂಬ್ರ ಅವರ ದೊಡ್ಡ ಗುಣ. 

             ಶ್ರೀಯುತ ನಾರಾಯಣ ಕುಂಬ್ರ ಅವರು ತಮ್ಮ ಜೀವನದಲ್ಲಿ ತಿರುವು ಪಡೆಯಲು ಕಾರಣರಾದ ವ್ಯಕ್ತಿ ಅವರ ಪ್ರಾಥಮಿಕ  ಶಾಲೆಗೆ ಬಂದ ಪಿ.ಟಿ .ಮಾಸ್ಟ್ರು,  ಅವರ ಹೆಸರು ವಿಶ್ವೇಶ್ವರ ಭಟ್. ನಾರಾಯಣ ಅವರು ಕಲಿಕೆಯಲ್ಲಿ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದ  ವಿದ್ಯಾರ್ಥಿ. ಹಾಗಾಗಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಲವಾರು  ಬಹುಮಾನಗಳು ಇವರಿಗೆ ದೊರೆಯುತ್ತಿತ್ತು. ಉಳಿದ ಮಕ್ಕಳಿಗೆ ಆಟದಲ್ಲಿ ಬಹುಮಾನ ಸಿಗುತ್ತಿದ್ದರೆ  ಇವರಿಗೆ ವಿಶೇಷ ಬಹುಮಾನ ಓದಿಗೆ. ಪಾಠದಲ್ಲಿ, ಓದಿನಲ್ಲಿ ಚುರುಕಾಗಿದ್ದ ಕಾರಣಕ್ಕೆ ಆರನೇ ತರಗತಿಯಲ್ಲಿ ಅವರನ್ನು ಶಾಲೆಯಲ್ಲಿ ಶಿಕ್ಷಣ ಮಂತ್ರಿ ನನ್ನ ಮಾಡಿದ್ದು ಅವರಿನ್ನೂ ಮರೆತಿಲ್ಲ.

              ಶಾಲೆ ಅಥವಾ ಕಾಲೇಜಿನ ಕೆಲಸದಲ್ಲಿಯೇ ತನ್ನ ಜೀವನ ಕಟ್ಟಬೇಕು ಎಂಬ ಕನಸನ್ನು ಹೊತ್ತಿದ್ದ ನಾರಾಯಣ ಕುಂಬ್ರ ಅವರ ಕನಸನ್ನು ನನಸು ಮಾಡಿದ್ದು ಪುತ್ತೂರಿನ  ವಿವೇಕಾನಂದ ಕಾಲೇಜು. ಅದಕ್ಕೆಲ್ಲ ಕಾರಣ ವಿಶ್ವೇಶ್ವರ ಭಟ್ ಸರ್ ಅವರು. ಈಗಲೂ ತನ್ನ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿಸುವ ಈ ಗುರುಗಳೆಂದರೆ ಎಲ್ಲಾ ಶಿಷ್ಯರಿಗೆ ಅಚ್ಚುಮೆಚ್ಚು. 

            ಬದುಕು ನಿಂತ ನೀರಲ್ಲ. ಏಳು ಬೀಳುಗಳ ಕೊಂಡಿ. ಕುಂಬ್ರರು ತನ್ನ ಹನ್ನೆರಡನೆಯ ವಯಸ್ಸಿನಲ್ಲಿ, ಅಂದರೆ ಏಳನೇ ತರಗತಿಯಲ್ಲಿ ಇರುವಾಗಲೇ ತಮ್ಮ ತಂದೆ ಹಾಗೂ ತಮ್ಮ ತಾಯಿಯವರನ್ನೂ ಕಳೆದುಕೊಂಡರು. ದೊಡ್ಡಪ್ಪನವರ  ಮನೆಯಲ್ಲಿ ಇದ್ದುಕೊಂಡು ಮತ್ತೆ ಶಾಲೆಗೆ ಸೇರಿಕೊಂಡರು. ಓದಲು ಮನಸ್ಸಿತ್ತು, ಶಾಲೆಯೂ ಇತ್ತು. ಆದರೆ ಜೊತೆಗೆ ಬಡತನ ಹಾಗೂ ಹೊಟ್ಟೆ ತುಂಬಿಸಿಕೊಳ್ಳುವ ಜವಾಬ್ದಾರಿಯೂ ಇತ್ತು. ಅಣ್ಣನ ಮದುವೆ ಆಗುವಾಗ ಅವರಿನ್ನೂ ಎಂಟನೇ ತರಗತಿಯಲ್ಲಿ ಇದ್ದರು. ಮುಂದೆ ಅವರಿಗೆ ಓದಲು ಸಾಧ್ಯ ಆಗಲಿಲ್ಲ. ಅಣ್ಣ ಓದಿದ್ದು ಸಾಕು, ಇನ್ನು  ಕೆಲಸಕ್ಕೆಂದು ಇವರನ್ನು ಕರೆದುಕೊಂಡು ಹೋದರು. ಕೈಯಲ್ಲಿ ಒಂದಷ್ಟು ದುಡ್ಡಾದ ಬಳಿಕ ಮರು ವರ್ಷವೇ ಕಲ್ಲಡ್ಕದ ಶ್ರೀರಾಮ ಶಾಲೆಗೆ ಎಂಟನೇ ತರಗತಿಗೆ ಸೇರಿದರು. ರಜಾ ದಿನಗಳಲ್ಲಿ ಕೆಲಸ ಮಾಡಿ, ಮಿಕ್ಕ ದಿನಗಳಲ್ಲಿ ಶಾಲೆಗೆ ಹೋಗುತ್ತಿದ್ದರು. ತನ್ನ ಶಾಲಾ ಫೀಸು, ಪುಸ್ತಕದ ಹಣವನ್ನು ತಾವೇ ಭರಿಸಿಕೊಳ್ಳುತ್ತಿದ್ದರು. ಓದಿನ ಹಣಕ್ಕಾಗಿ ರಜಾ ದಿನಗಳಲ್ಲಿ  ಸಣ್ಣ ಪುಟ್ಟ ಹೋಟೆಲ್ ಗಳಲ್ಲಿ ಗ್ಲಾಸು, ಪಾತ್ರೆ ತೊಳೆಯುತ್ತಿದ್ದರು. ಮುಂದೆ ಹೀಗೆಯೇ ದುಡಿದು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ಒಂಭತ್ತು ಮತ್ತು ಹತ್ತನೇ ತರಗತಿ ಮುಗಿಸಿದರು.

     ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಕಷ್ಟವಾಯ್ತು. ವಿದ್ಯೆಯನ್ನು ಮೊಟಕುಗೊಳಿಸಿ ಎರಡು ವರ್ಷ ಕುಂಬ್ರ ಪದವಿ ಪೂರ್ವ ಕಾಲೇಜಲ್ಲಿ ಗೌರವ ನೆಲೆಯಲ್ಲಿ ಕಚೇರಿ ಸಿಬ್ಬಂದಿಯಾಗಿ ₹900 ತಿಂಗಳಿಗೆ ದುಡಿದರು.  ನಂತರ ಸುದಾನ ಶಾಲೆಗೆ ಅಟೆಂಡರ್ ಆಗಿ ಹತ್ತು ವರ್ಷಗಳ ಕಾಲ  ಕರ್ತವ್ಯ ನಿರ್ವಹಿಸಿದರು. ಇಲ್ಲಿ ಇರುವಾಗಲೇ ಪಿ ಯು ಸಿ ಗೆ ಪ್ರೈವೇಟ್ ಕಟ್ಟಿ ಐದು ಸಬ್ಜೆಕ್ಟ್ ಪಾಸ್ ಮಾಡಿ ಕೊಂಡರು! 

             ಶ್ರೀಯುತ ನಾರಾಯಣ ಅವರ ಪ್ರೀತಿಯ ವಿಷಯ ಕನ್ನಡ.ಕನ್ನಡ ಪಾಠ ಅಂದರೆ ಅವರಿಗೆ ಅಚ್ಚು ಮೆಚ್ಚು. ಆಗ ಕನ್ನಡ ಟೀಚರ್ ಆಗಿದ್ದವರು ಸರೋಜಿನಿ ಮೇಡಂ,
ಲಕ್ಷ್ಮಿ ಮೇಡಂ, ಜಯಶ್ರೀ ನಾಯ್ಕ್ ಮೇಡಂ, ಜಯಾನಂದ ಪೆರಾಜೆ ಸರ್ ಅವರು.  ಸೂರ್ಯ ನಾರಾಯಣ ಕಾರಂತ್, ಶಿವರಾಮ್ ಕಾರಂತ್... ಇವರನ್ನು ಮರೆಯುವಂತಿಲ್ಲ... ಕತ್ತಲೆಯ ಬದುಕಿಗೆ ಬೆಳಕು ಚೆಲ್ಲಿ ಸ್ಫೂರ್ತಿ ತುಂಬಿದವರು ಇವರು.ಸರ್ವ ಗುರುಗಳ ನೆನಪಿಟ್ಟ ವಿದ್ಯಾರ್ಥಿ! 

              ನಾರಾಯಣರವರು  ಮೊದಲ  ಹನಿಗವನ ಏಳನೇ ತರಗತಿಯಲ್ಲಿರುವಾಗಲೇ ಬರೆದಿದ್ದರು.ನಂತರ ಅವರ ಸಾಹಿತ್ಯದ ಒಲವು ಸುದಾನ ಶಾಲೆಗೆ ಸೇರಿದ ಮೇಲೆ ಹೆಚ್ಚಾಯ್ತು.ಅಲ್ಲಿಯ ಪರಿಸರ, ಸಂಸ್ಕಾರ ಸಂಸ್ಕೃತಿಗೆ ನೀಡುವ ಮಹತ್ವ ಅವರನ್ನು ಬರೆಯಲು ಪ್ರೇರಣೆ ನೀಡಿತು.ಖ್ಯಾತ ಅಂಕಣಕಾರರೂ, ವಾಗ್ಮಿಗಳು ಕೂಡಾ ಆದ ಕವಿತಾ ಅಡೂರ್ ಮೇಡಂ, ಅಲ್ಲಿಯ ಸಂಚಾಲಕರು, ಅವರಿಗೆ ಉತ್ತಮ ಸಹಕಾರ ನೀಡಿದರು. ಗಾಳಿಪಟ ಮೇಲೇರಲು ಸಣ್ಣ ದಾರವೊಂದು ಸಾಲದೇ?

            ಶ್ರೀಯುತ ನಾರಾಯಣ ಕುಂಬ್ರ ಎಂಬ ಯುವ ಕವಿಗೆ ಕವಿಗೋಷ್ಠಿಗೆ ಮೊದಲು ವೇದಿಕೆ ನೀಡಿದವರು ದಿವಂಗತ ಚಿದಾನಂದ ಕಾಮತ್ ಕಾಸರಗೋಡು.ಅವರ ಬಾರಿಸು ಕನ್ನಡ ಡಿಂಡಿಮವ ವೇದಿಕೆಯ ಮೂಲಕ ಪ್ರತಿ ತಿಂಗಳು ಪುತ್ತೂರಿನಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿ ಹೊಸ ಕವಿ ಮನಸುಗಳಿಗೆ  ವೇದಿಕೆ ನೀಡುತಿದ್ದರು.  ಅವರು ಅಂತಹ ಅವಕಾಶವನ್ನು ಉಪಯೋಗಿಸುತ್ತಿದ್ದರು ಮಾತ್ರ ಅಲ್ಲದೆ ಆ ಪರಂಪರೆಯನ್ನು ಮುಂದುವರೆಸಿದರು. ತಮ್ಮ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀಯುತ ನಾರಾಯಣ ಅವರು ಪುತ್ತೂರಿನಲ್ಲಿ ಇರುವ ಹೊಸ ಹೊಸ ಉದಯೋನ್ಮುಖ ಕವಿಗಳಿಗೆ ಅವಕಾಶ ನೀಡಿ, ವೇದಿಕೆ ಕಲ್ಪಿಸಿ ಕೊಟ್ಟರು. 

                  A ಪುತ್ತೂರು ಸಾಹಿತ್ಯ ವೇದಿಕೆ, ಚಂದನ ಸಾಹಿತ್ಯ ವೇದಿಕೆ ಸುಳ್ಯ, ಕಡಲೂರಿನ ಲೇಖಕರು ಬಳಗ ಪುತ್ತೂರು, ನೇತಾಜಿ ಗ್ರಂಥಾಲಯ ಪೆರ್ಲ, ಕವಿ ಹೃದಯದ ಸವಿ ಮಿತ್ರರು,
ಸತ್ಯ ಶಾಂತ ಪ್ರತಿಷ್ಠಾನ ಉಪ್ಪಿನಂಗಡಿ, ವರುಣ್ ಕಲಾ ಸಾಂಸ್ಕೃತಿಕ ಸಂಸ್ಥೆ ಸವಣೂರು, ಕೊಡಗು  ಹೀಗೆ ಹಲವು ವೇದಿಕೆಗಳಲ್ಲಿ ತಮ್ಮ ಕವನಗಳನ್ನು ವಾಚಿಸಿದ ಗರಿಮೆ ಅವರದು. ತನಗೆ ಅವಕಾಶ ಮಾಡಿಕೊಟ್ಟ ಎಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರನ್ನು ಎಂದೂ ಮರೆತಿಲ್ಲ ನಾರಾಯಣ್ ಅವರು. ತಮ್ಮ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ತನಗೆ ಅವಕಾಶ ಕೊಟ್ಟ ಎಲ್ಲರನ್ನೂ ಸನ್ಮಾನಿಸಿದ ಹೆಗ್ಗಳಿಕೆ ಅವರದು. ಹಾಗಾಗಿ "ನಾನು ಅವರಿಗೆಲ್ಲಾ ಅಭಾರಿಯಾಗಿದ್ದೇನೆ" ಎನ್ನುವ ಮಾತನ್ನು ಕೇವಲ ಆಡಿ ತೋರಿಸದೆ ಕೃತಿಯಲ್ಲೂ ತೋರಿಸಿರುವರು. 

                ಶ್ರೀಯುತ ನಾರಾಯಣ ಕುಂಬ್ರ ಅವರನ್ನು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ  ಕಾವ್ಯಶ್ರೀ ಪ್ರಶಸ್ತಿ, ಸಾಹಿತ್ಯ ರತ್ನ, ಕವಿಚೇತನ ಪ್ರಶಸ್ತಿ. ಅಲ್ಲದೇ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಪಡ್ಡಾಯೂರು ವತಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಗೆ ನವರಾತ್ರಿ ಸಂದರ್ಭದಲ್ಲಿ ಸನ್ಮಾನಿಸಿದ್ದಾರೆ.

           ರಾಜ್ಯಮಟ್ಟದ, ಜಿಲ್ಲಾ ಮಟ್ಟದ, ಅಂತರ್ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಕವಿಗೋಷ್ಠಿ ಭಾಗವಹಿಸಿದ ಹೆಮ್ಮೆ. ಕೊರೋನ ಸಂದರ್ಭದಲ್ಲಿ ಕೂಡಾ ಆನ್ಲೈನ್ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಬರವಣಿಗೆಯ ಮೆರುಗು ಹೆಚ್ಚಿಸಿ ಕೊಂಡಿದ್ದಾರೆ. ಕವಿಗೋಷ್ಠಿಗಳಲ್ಲಿ ಹೆಚ್ಚು ಭಾಗವಹಿಸಿ ಹಿರಿಯ ಕಿರಿಯ ಕವಿಗಳಿಂದ ತುಂಬಾ ಅನುಭವದ ಪಾಠ ಕಲಿತುಕೊಂಡಿರುವೆ ಎನ್ನುವ ಇವರು ಎಲ್ಲರೊಂದಿಗೆ ಬೆರೆತು, ಎಲ್ಲರಿಂದ ಕಲಿತು ಬಾಳಬೇಕು ಎನ್ನುವ ಮಹಾದಾಸೆ ಹೊಂದಿರುವ ಕವಿ. 

              ಅಬ್ಬರಿಸಲು ಹೋಗದೆ ಅವಕಾಶ ಸಿಕ್ಕಾಗ ಎಲ್ಲರೂ ಉಪಯೋಗಿಸಿಕೊಳ್ಳಬೇಕು, ಯುವ ಸಮುದಾಯದ ಸಕಾರಾತ್ಮಕ ಚಿಂತನೆ ಸಮಾಜದ ಅಂಕು ಡೊಂಕುಗಳ ತಿದ್ದುವಲ್ಲಿ ಬರವಣಿಗೆಗಳು ಸಹಕಾರಿಯಾಗಲಿ. ಸರ್ವೇ ಜನಾ ಸುಖಿನೋ ಭವಂತು ಎನ್ನುವುದು ಇವರ ಆಶಯ ನುಡಿ.

               ವಿವೇಕಾನಂದ ಕಾಲೇಜಿನಲ್ಲಿ ಅವರು ಬರೆದ ಕವನಗಳನ್ನು ಟೈಪ್ ಮಾಡಿ ಕೊಡುವ ಗೀತಾ ಮೇಡಂ, ನಿವೇದಿತಾ, ಚೈತ್ರಾ, ವೇದಾವತಿ ಮೇಡಂ ಮತ್ತು ತೋಟರ್ ಸರ್ ಹೀಗೆ ಸಹಕರಿಸಿದ ಯಾರನ್ನೂ ಮರೆಯಲಾರರು ಅವರು.  ಅವರು ಪತ್ನಿ  ಶ್ರೀಮತಿ ರೂಪರೊಡನೆ ಪ್ರಸ್ತುತ ಅಳಿಕೆಯಲ್ಲಿ ನೆಲೆಸಿರುವರು. 

       ಸರ್,  ತಮ್ಮ ಲೇಖನಿ ತಟಸ್ಥವಾಗದೆ ಹೀಗೆಯೇ ಮುಂದುವರಿಯಲಿ, ಸಾಹಿತಿಗಳಾಗಿ ನಿಮ್ಮಿಂದ ಇನ್ನಷ್ಟು ಹೊಸ ಕವಿಗಳ ಉದಯವಾಗಲಿ, ನಿಮ್ಮ ಸಹಕಾರ, ನೆನಪು, ಗುರುತಿಸುವಿಕೆ ಸದಾ ಮುಂದುವರೆಯಲಿ, ಆ ದೇವರು ಆನಂದ, ಆರೋಗ್ಯ, ಶಕ್ತಿ ಇನ್ನಷ್ಟು ಕೊಡಲಿ, ನಿಮ್ಮಿಂದ ಕನ್ನಡಕ್ಕೆ ಸೇವೆ ಸದಾ ಹರಿದು ಬರಲಿ ಎಂಬ ಶುಭ ಹಾರೈಕೆಗಳೊಂದಿಗೆ, 
@ಹನಿಬಿಂದು@
10.03.2022

ಶಿವ ಭಕ್ತಿ

ಶಿವಭಕ್ತಿ
ಅಂಗವ ಹೊತ್ತಿಹ ಮಂಗನ ರೂಪದ
ಸಂಘವ ಕಟ್ಟುವ ಮನುಜನದು 

ಭೃಂಗದ ರೂಪಿ ಮಂಗಳೆ ಪತಿಯು
ಗಂಗಾದೇವಿಯ ಹೊತ್ತವಗೆ
ನಮನವ ಸಲ್ಲಿಸೆ ಕವನವ ಬರೆದಿಹೆ
ಗಮನವ ನೀಡುತ ಕ್ಷಣ ಘಳಿಗೆ

ಗಹನದ ಕಾರ್ಯವ ಸಮಾನ ಭಾವದಿ
ಸಹನೆಯ ಸಾಧಿಸಿ ಮಾಡುವಗೆ
ದಹನವ ಮಾಡಿ ಕ್ರೋಧ ಲೋಭಗಳ
ಅಹನಿಯ ಮೇಲೆ ಬದುಕುವಗೆ

ಗಂಗಾಧರನು ನೀಡುವ ವರಗಳ
ಲಿಂಗಕೆ ಬಾಗಿ ನಡೆದವಗೆ
ಜಂಘಾಬಲವು ಉಡುಗಿ ಹೋಗದು
ಡಂಗುರ ಬಾರಿಸೋ ಕೈಗಳಿಗೆ

ಪಾಲಿಸೆ ನೀತಿ ಭಕ್ತಿಯ ಸ್ಪೂರ್ತಿ
ಗೂಳಿಯ ಹಾಗೆ ವರ್ತಿಸದೆ
ಆಳುತ ಮೆರೆವರು ದೇಶವನೆಲ್ಲ
ಬಾಳಲಿ ಭಕ್ತಿಯ ನೆಚ್ಚಿದೊಡೆ

ಉತ್ತಮ ಕರ್ಮವೆ ಭಕ್ತಿಯ ಮರ್ಮವು
ಹತ್ತರ ಜೊತೆಯಲಿ ನಗುತಿರಲು
ಬತ್ತದ ಪ್ರೀತಿಯು ಎತ್ತಲೂ ಇರಲು
ಮುತ್ತುವ ಹರನು ಬಾಳಿನೊಳು
@ಹನಿಬಿಂದು@
04.03.2023


ಚುಟುಕು

ತುಳುನಾಡು
ಕೋಟಿ ಚೆನ್ನಯರು ಅವತರಿಸಿದ ತುಳುನಾಡು
ಅಗೊಳಿ ಮಂಜಣ್ಣನ ಸಾಹಸದ ನೆಲೆವೀಡು
ಪರಶುರಾಮರ  ಕೊಡಲಿ ಗುರುತನ್ನು ನೋಡು
ವೀರ ಶೂರರ ಧೀರರ ನೆನೆದು ಕೊಂಡಾಡು..

2. ರಕ್ಷಣೆ
ಮರಗಳ ಉರುಳಿಸಿ ಹೆದ್ದಾರಿಯ ನಿರ್ಮಾಣ
ಹಾಕಬೇಕಿದೆ ಗಿಡ ಮರಗಳ ಕಡಿತಕ್ಕೆ ಕಡಿವಾಣ
ಮೂಗಿಗೆ ಅಡ್ಡವಾಗಿ ಮಾಸ್ಕ್ ಹಾಕುವವರು ನಾವೇ
ಪರಿಸರ ನಾಶವಾದರೆ ಮಣ್ಣು ತಿನ್ನುವವರು ನಾವು ನೀವೇ
@ಹನಿಬಿಂದು@
01.03.2023

ದಶಕ -108

ದಶಕ -108

ಖರ್ಚನು ಮಾಡಿ ಸ್ವಂತ ಸಮಯವ ನೀಡಿ
ಕವಿಗೋಷ್ಠಿಯ ಮಾಡುವ ಕವಿಗಳಿಗೆ ಜೈ ಜೈ!

ಸಾವಿರ ಕೆಲಸವ ತಲೆಯಲಿ ಹೊತ್ತು
ಸ್ವಕಾರ್ಯವ ತಾ ಬದಿಯಲಿ ಇಟ್ಟು 
ಕನ್ನಡಕಾಗಿ ಮುಂದಡಿ ಇಡುವ
ಕವಿ ಮನಸಿಗೆ  ತಲೆಬಾಗಿ ನಮಿಸುವ..

ಸೇವೆಯ ಮಾಡೆ ಮನಸಿಗೆ ಶಾಂತಿ
ಸರ್ವರ ನಗುವಲಿ ಪಡೆಯುವ ಕೀರ್ತಿ
ಅವಕಾಶವನು ಕೊಡುವುದೇ ಪ್ರೀತಿ
ಬೆಳೆಯುತ ಬೆಳೆಸುತ ಕಲಿವುದೇ ಸ್ಪೂರ್ತಿ!
@ಹನಿಬಿಂದು@
09.03.2023

ಬದುಕೊಂದು ಪಾಠ

ಬದುಕೊಂದು ಪಾಠ

ಇಂದಿಲ್ಲಿ ಇರಬಹುದು ಹೋದರೂ ಹೋಗಬಹುದು
ಕಂದೀಲು ಬದುಕಿದು ಸಂದಿಯಲಿ ಇಣುಕಬಹುದು
ಸಂದು ಗೊಂದಿನಲಿ ಸಿಹಿ ಸುಖವ ಪಡೆಯಬಹುದು
ಕಂದು ಬಣ್ಣ ಬರುವ ಮೊದಲು ಜೀವನದ ಗುರಿ ಸೇರಬಹುದು..

ಮಂದಿಯೊಳು ಸುಮ್ಮನಾದರೂ ಸಿಹಿ ಮಾತನಾಡಬಹುದು
ಸತ್ಯವನು ಕೇಳಿದೊಡನೆ ಕೋಪವದು ಬರಬಹುದು
ಗೊತ್ತಿರದೆ ಇದ್ದರೂ ಅವಕಾಶ ಕೇಳಬಹುದು!
ಕೊಟ್ಟ ಅವಕಾಶಕಾಗಿ ಮಣ್ಣುಪಾಲು ಮಾಡಬಹುದು

ಸುತ್ತಲಿರುವುದು ಸುಟ್ಟ ಬೆಕ್ಕಿನ ಬಾಲಕ್ಕೆ ಗಂಟೆ ಕಟ್ಟುವವರು
ಸತ್ತ ಕೂಡಲೇ ದುಡ್ಡಿಗಾಗಿ ಗಲಾಟೆ ಮಾಡುವವರು
ಹೆತ್ತಮ್ಮ ಅಪ್ಪನನೂ ನರಕಕ್ಕೆ ನೂಕುವವರು
ಕೆತ್ತನೆಯಲಿ ಶಿಳೆಯಂತೆ ಇದ್ದರೂ ಮನದೊಳಗೆ ನೋವು ಇರುವವರು 
@ಹನಿಬಿಂದು@
06.03.2023

ಗಝಲ್

ಗಝಲ್

ಮಾತು ಬೇಡವಾಗಿ ಮೌನವೇ ಕಣ್ಣಲಿ ಮಾತಾದಾಗ ಅದೇನು ಮುಖ
ಪದವು ಮರಗಟ್ಟಿ ಹೋಗಿ ನಗೆಯೊಂದು ಇಣುಕಿದಾಗ ಚಿಕ್ಕದೇನು ನಿಖಾ!

ನೋಟಗಳು ಸೇರಿ ನಯನಗಳು ಜಗಳವಾಡುತಿರಲು ಬದುಕು ನರಕ
ಮೋಸದಲಿ ಗೆದ್ದು ಮೆರೆಯುತಿರುವ ಮೀನಿಗೆ ನರಕದಲೇನು  ಸುಖ!

ಮಾತು ಬೆಳ್ಳಿ ಮೌನವೇ ಬಂಗಾರ ಅನ್ನಲಿಲ್ಲವೇ ತಿಳಿದ ಹಿರಿ ಸಖ?
ಮೌನಕೂ ಪೆನ್ನು ಕೊಟ್ಟರೆ ತನ್ನ ನೋವುಗಳ ಬರೆಯದೇನು ದುಃಖ!

ಬದುಕಲೊಂದಿಷ್ಟು ಪೆಟ್ಟು ತಿಂದಾಗಲೆ ರೂಪಗೊಳ್ಳುವುದು ಕಲ್ಲಿನಿಂದ ಶಿಲೆ
ಹಾಗಾಗಿಯೇ ಹಲವಾರು ಕಡೆಗಳಿಂದ ಮೇಲೇಳುವನು ಗಾಯಕ - ಲೇಖಕ

ಪ್ರೀತಿ ಪ್ರೇಮಗಳ ಅಕ್ಕಿ ದೋಸೆಗಳನ್ನು ತಿಂದಂತೆ ಬಿಡಲಾರದು ಬಾಳ್ವಿಕೆ
ನೀತಿ ನಿಯಮಗಳ ರೂಪಿಸಿ ನಿಜ  ಕ್ಷಣಗಳ -ಕಳೆವವನು ದ್ಯೋತಕ!
@ಹನಿಬಿಂದು@
23.02.2023





174. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -174

          ಮತ್ತೆ ಬಂತು ಪರೀಕ್ಷೆ! ಮಕ್ಕಳು ಇಡೀ ವರ್ಷ ಕಲಿತ ಪಾಠ ಪ್ರವಚನಗಳ, ಬರೆದ ಹೋಂ ವರ್ಕ್ ಗಳ ಕೊನೆಯ ತಿದ್ದುವಿಕೆ ಮತ್ತು ಕಲಿಕಾ ದೃಢತೆ! ಮುಂದಿನ ತರಗತಿಗೆ ತೇರ್ಗಡೆಗೊಳ್ಳುವ ಬಗ್ಗೆ ಶಿಕ್ಷಕರಿಗೆ ಮಾನದಂಡವಾಗಿ ಇರುವ ಅಳತೆಗೋಲು ಇದು. ಆದರೆ ದೇಶಕ್ಕೆ ರಾಜಕೀಯ ಬಿರುಗಾಳಿ ಬೀಸಿದ ಹಾಗೆ ತಮ್ಮ ಮಕ್ಕಳ ವಾರ್ಷಿಕ ಫಲಿತಾಂಶ ಇಂದು ಪೋಷಕರ ಡಿಗ್ನಿಟಿ, ಅಕ್ಕ ಪಕ್ಕದ ಮನೆಯವರ ಜೊತೆಗಿನ ಉತ್ತಮ ಬಾಂಧವ್ಯ , ಕುಟುಂಬದ ಜೊತೆಗಿನ ಸ್ಟೇಟಸ್ ಇವೆಲ್ಲವನ್ನೂ ಅವಲಂಬಿಸಿದೆ. ಅಷ್ಟೇ ಅಲ್ಲ , ದೇಶದಲ್ಲಿ ಪ್ರತಿ ರಾಜ್ಯದಲ್ಲಿ ಇರುವ ಜಾಣರ ಫಲಿತಾಂಶ, ಜಾಣರ ಶೇಕಡಾವಾರು ಲೆಕ್ಕಾಚಾರ, ರಾಜ್ಯಕ್ಕೆ ತೋರಿಸಲು ಜಿಲ್ಲಾವಾರು ಫಲಿತಾಂಶ, ತಾಲೂಕಿನ ಫಲಿತಾಂಶ, ಕ್ಲಸ್ಟರ್ ಫಲಿತಾಂಶ, ಶಾಲಾ ಫಲಿತಾಂಶ ಹೆಚ್ಚು ಇರಬೇಕು ಎಂಬ ಅದೇಕೋ ಗೊತ್ತಿರದ ಶೇಕಡಾ ಫಲಿತಾಂಶ! ಅಷ್ಟೇ ಅಲ್ಲ, ಶಾಲಾ ಗುಣಮಟ್ಟ ಕಲಿಕೆಯ ಲೆಕ್ಕಾಚಾರ! ಅದಕ್ಕಾಗಿ ಪರದಾಟ! ಆ ಮೂಲಕ ಶೇಕಡಾ ಫಲಿತಾಂಶದ ಮೂಲಕವೇ ತೇರ್ಗಡೆಯನ್ನು ಮಾತ್ರ ಅಲ್ಲ, ರಾಜ್ಯದ ಜಿಲ್ಲೆಗಳ ಪ್ರತಿಭೆ, ಜಾಣತನದ ಅರಿವು ಸಿಗುವುದು ಎಂಬ ಕಾರಣಕ್ಕಾಗಿ ಶಿಕ್ಷಕರ , ಉಪನ್ಯಾಸಕರ ಮೇಲೆ ಭೀಕರ ಒತ್ತಡ! ಅವರು ಅದನ್ನು ವಿದ್ಯಾರ್ಥಿಗಳ ಮುಂದೆ ಒತ್ತಡ ಹಾಗೆ ಆಗುವಷ್ಟು ಆಗಿದೆ. 

               ಈಗಂತೂ ಪಿಯುಸಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಮನೆ, ಕುಟುಂಬ, ಶಾಲೆ, ಊರು, ತಾಲೂಕು, ರಾಜ್ಯ, ಜಿಲ್ಲೆಗೆ ಹೆಮ್ಮೆ ತರುವ ಕಾರ್ಯ. ಅದರ ಮುಂದೆ ನಿಂತು ಅದು ಯಾಕೆ ಓದಲು ಬಾರದ ವಿದ್ಯಾರ್ಥಿಗಳನ್ನು ಕೂಡಾ ಆರರಿಂದ ಹದಿನಾಲ್ಕು ವರ್ಷಗಳ ವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಂದು ಪರೀಕ್ಷೆ ಬರೆಯಲಿ ಅಥವಾ ಬರೆಯದೆ ಇರಲಿ, ಪಾಸ್ ಮಾಡಿ, ಕೆಲ ಪೋಷಕರೂ ಹತ್ತನೇ ತರಗತಿಯವರೆಗೆ ಕಲಿಯದೆ ಇರುವ ಕಾರಣ ಅವರಿಗೆ ಶಾಲೆಗೆ ಬರಲು ಕೀಳರಿಮೆ. ಹಾಗಂತ ಕೆಲವು ಪೋಷಕರಿಗೆ ವಿದ್ಯೆಯ ಬಗ್ಗೆ ಅರಿವಿದೆ, ಇನ್ನೂ ಕೆಲವರಿಗೆ ಅರಿವಿದ್ದರೂ ಸಮಯ ಇಲ್ಲ. ಆದರೆ ಎಲ್ಲರ ಒತ್ತಡ ಮಕ್ಕಳ ಮೇಲೆ. ಶಾಲೆಯಲ್ಲಿ ಮುಖ್ಯ ಶಿಕ್ಷಕರೂ, ವಿಷಯ ಶಿಕ್ಷಕರು, ಮನೆಯಲ್ಲಿ  ಪೋಷಕರು ಎಲ್ಲರೂ ಎಲ್ಲಾ ಸಮಯದಲ್ಲೂ ಮಕ್ಕಳನ್ನು ಓದಿ ಓದಿ ಎಂದು ಪೀಡಿಸಿ, ಅವರ ಸಮಯವನ್ನೆಲ್ಲಾ ಓದಲೆಂದು ಇರಿಸಿ ಅವರ ಒಂದು ವರ್ಷವೆಲ್ಲಾ ಓದುವುದರಲ್ಲಿಯೇ ಕಳೆದು ಹೋಗುತ್ತದೆ. ಕೆಲವು ಸೋಮಾರಿ ಮಕ್ಕಳಿಗೆ ಇದು ಸರಿಯಾದುದೆ ಆದರೂ ಎಲ್ಲಾ ಮಕ್ಕಳಿಗೂ ತಮ್ಮ ಮುಂದೆ ಗುರಿ ಎಂಬುದು ಇರುವ ಕಾರಣ ಅತಿಯಾದ ಒತ್ತಡವನ್ನು ಅವರ ಮೇಲೆ ಹಾಕುವುದು ತರವೇ? 

        " ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕೇ ಹೊರತು ಭತ್ತ ತುಂಬುವ ಚೀಲಗಳಾಗಬಾರದು" ಎಂದು ಕುವೆಂಪುರವರು ಹೇಳಿರುವಂತೆ ಮಕ್ಕಳಿಗೆ ಸ್ವಂತವಾಗಿ ಆಲೋಚಿಸಲು, ಸ್ವಂತವಾಗಿ ತಮ್ಮ ಅನಿಸಿಕೆಗಳನ್ನು ಬರೆಯಲು ಅವಕಾಶ ಸಿಕ್ಕಾಗ ಮಾತ್ರ ಸ್ವಂತಿಕೆ ಬರುತ್ತದೆ. ಈಗ ನಾವು ಪಾಯಿಂಟ್ ಬೈ ಪಾಯಿಂಟ್ ಕಲಿಸುವ ಕಾರಣ ಉತ್ತರವನ್ನು ಓದಿ ಬಾಯಿ ಪಾಠ ಮಾಡಿ ಕಲಿತಿದ್ದರೆ ಮಾತ್ರ ಆ ವಿದ್ಯಾರ್ಥಿ ಬರೆಯುತ್ತಾನೆಯೇ ಹೊರತು ಬೇರೇನೂ ಇಲ್ಲ. ಸ್ವಲ್ಪ ಗೊತ್ತಿಲ್ಲದೆ ಇದ್ದರೂ ಆ ಪ್ರಶ್ನೆಗೆ ಏನೂ ಬರೆಯದೆ, ಬಿಟ್ಟು ಬರುವುದೇ ಹೆಚ್ಚು. ಹೀಗಾದಾಗ ಪಾಸ್ ಅಂಕಗಳು ದೊರೆಯುವುದು ಕಷ್ಟ.  ಇದಕ್ಕೆ ಪರಿಹಾರ ಬರೆಸುವುದೇ ಆಗಿದೆ. ಬರೆಸಿ, ತಿದ್ದಿಸಿ ಮತ್ತೆ ಮತ್ತೆ ಬರೆಯಿಸುವ ಕಾರ್ಯ ಏಕೆ ಎಂದರೆ ಅಕ್ಷರ, ಪದ, ವಾಕ್ಯ ರಚನೆಗಳನ್ನು ಸ್ವಂತವಾಗಿ ಬರೆಯಲು ಕಲಿಯದೆ ಇರುವುದು, ಅಕ್ಷರಗಳ ಕಡೆ ಉತ್ತಮ ಗಮನ ಕೊಡದೆ ಇರುವುದು, ಓದದೇ ಇರುವುದು, ಓದುವಾಗ ಚೆನ್ನಾಗೇ ಬರೆಯುತ್ತಿದ್ದರೂ ಅರೀಕ್ಷೆಯ ದಿನ ಮರೆತು ಹೋಗುವುದು, ಅಕ್ಷರ ಬಾರದೆ ಇರುವುದು, ಮರೆವು, ಟೆನ್ಶನ್, ಮನೆಯ ಸಮಸ್ಯೆಗಳು, ದೈಹಿಕ ಹಾಗೂ ಮಾನಸಿಕ ಅನಾರೋಗ್ಯ ಇವೆಲ್ಲ ಕಡಿಮೆ ಅಂಕ ಗಳಿಕೆಗೆ ಕಾರಣ. 

ವಿದ್ಯಾರ್ಥಿಗಳಿಗೆ ಒಂದು ಕಿವಿ ಮಾತು. ಪರೀಕ್ಷೆಯ ಸಮಯದಲ್ಲಿ ಯಾವುದನ್ನೂ ಲೆಕ್ಕಿಸದೆ ಗಮನವನ್ನು ಕೇಂದ್ರೀಕರಿಸ ಬೇಕು. ಹೆದರಬಾರದು, ದೃತಿಗೆಡಬಾರದು, ಸ್ವಲ್ಪ ವ್ಯಾಯಾಮ, ಧ್ಯಾನ ಮಾಡಿ ಮನಸ್ಸನ್ನು ಆರಾಮಗೊಳಿಸಿ, ನಾನು ಈ ವರ್ಷ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುತ್ತೇನೆ ಎಂಬ ಮಾತನ್ನು ಹೇಳಿಕೊಂಡು ಮುಂದುವರೆಯಬೇಕು. ನಾವು ಬಯಸಿದ್ದನ್ನು ನಾವು ಸಾಧಿಸಬಲ್ಲೆವು. ನಾನು ಎಂಬ ಆತ್ಮವನ್ನು ಗಟ್ಟಿ ಮಾಡಿಕೊಳ್ಳಬೇಕು. ನೀವು ಆಸೆ ಪಟ್ಟಿರುವುದನ್ನು ನೀವು ಸಾಧಿಸಬಲ್ಲಿರಿ. ಛಲವಿರಲಿ, ಹಟವಿರಲಿ. ನೀವೇನಂತೀರಿ?
@ಹನಿಬಿಂದು@ 
28.02.2023

173. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 173

"ಯಾಕೆ ಹೀಗೆ?" ಎಂಬ ಪ್ರಶ್ನೆ ನನ್ನನ್ನು ಹಲವಾರು ಭಾರಿ ಕಾಡುತ್ತದೆ. ಇದಕ್ಕೆ ಉತ್ತರ ಸಿಗದೆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದು ಬಿಡುತ್ತದೆ. ಹೌದು, ದಿನನಿತ್ಯ ವಾರ್ತಾ ಪತ್ರಿಕೆಗಳ ಪುಟ ತಿರುವಿ ಹಾಕಿದರೆ ಒಂದೆರಡು ಪುಟಗಳನ್ನು ಸ್ಥಳೀಯ ಸುದ್ದಿಗಳಿಗೆ ಮೀಸಲಾಗಿ ಇರಿಸುತ್ತಾರೆ. ಅದರ ಸುತ್ತ ಕಣ್ಣಾಡಿಸುವಾಗ "ಆತ್ಮಹತ್ಯೆ "ಗಳ ದೊಡ್ಡ ಪಟ್ಟಿ ಒಂದು ಕಡೆಗೆ ಇರುತ್ತದೆ. ಇದು ಸಾಮಾನ್ಯ ವಾರ್ತೆ ಅಂತ ಓದಿ ಮರೆತು ಪೇಪರ್ ಆಚೆ ಬಿಸಾಕಿ ಬಿಡಬಹುದು ಆದರೆ ಆರೋಗ್ಯವಂತ ಸಮಾಜದ ಬಗ್ಗೆ ಯೋಚಿಸುವಾಗ ಇದರ ಬಗ್ಗೆ ತುಂಬಾ ಮನನ ಮಾಡಿ, ಇದಕ್ಕೆ ಏನು ಪರಿಹಾರ ಎಂಬ ಹುಳ ನಮ್ಮ ತಲೆಯೊಳಗೆ ಹರಿದಾಡುತ್ತದೆ. 

ಒಂದೆರಡು ತಿಂಗಳ ಅಂತರದಲ್ಲಿ ಮೂರು ವಿದ್ಯಾರ್ಥಿಗಳು ಮತ್ತು ಮೂವರು ಶಿಕ್ಷಕರು, ಮತ್ತು ಇತರರು ಆತ್ಮಹತ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ವರದಿಯಾದ  ಸುದ್ದಿ. ವಿದ್ಯಾರ್ಥಿಗಳ ಆತ್ಮಹತ್ಯೆ ಅನುಭವ ಇರದ ಬಾಲಿಶ ವೃತ್ತಿ. ಇದಕ್ಕೆ ಕಾರಣ ಹಿರಿಯರು ಮತ್ತು ಸಮಾಜ. ಹೇಗೆಂದರೆ ಮಕ್ಕಳಿಗೆ ಮೊಬೈಲ್ ಕೊಡಬೇಡಿ ಅಂದರೂ ತೆಗೆದು ಕೊಡುವವರು ಅವರ ಪೋಷಕರು. ಅದಕ್ಕೆ ಪ್ರತಿ ತಿಂಗಳು ಹಣ ಹಾಕಿ ಕೊಡುವವರೂ ಅವರೇ. ಅಲ್ಲಿ ಮಕ್ಕಳಿಗೆ ಬೇಕಾದ್ದು , ಬೇಡದ್ದು ಎಲ್ಲವನ್ನೂ ನೋಡಲು ಅವಕಾಶ ಮಾಡಿ ಕೊಟ್ಟದ್ದು ಸರಕಾರ, ಅದನ್ನು ಆ ಮೊಬೈಲ್ ನ ಒಳಗೆ ತುಂಬಿದ್ದು ಹಣಕ್ಕಾಗಿ ಏನು ಮಾಡಲೂ ತಯಾರಿ ಇರುವ ನಮ್ಮ ಪ್ರಜ್ಞಾವಂತ, ವಿದ್ಯಾವಂತ, ಅಕ್ಷರಸ್ಥ ಜನ! 

ವಸ್ತುವೊಂದು ಎಲ್ಲರ ಕೈಗೂ ಸಿಗುವಾಗ ಅದರ ಉಪಯೋಗ ಹೇಗೆ ಮಾಡಬೇಕು ಎಂದು ಅರಿತ ಜನ, ಇದರಿಂದ ಸುಲಭವಾಗಿ ನಾನು ಯಾವ ಸಹಾಯ ಪಡೆದುಕೊಳ್ಳಬಹುದು ಎಂದು ಯೋಚಿಸುವ ಕಾಲ ಇದು. ಹಾಗಿರುವಾಗ ಬೇರೆಯವರ ಮಕ್ಕಳು ಹಾಳಾದರೆ ಆಗಲಿ ಎಂಬ ಮನಸ್ಥಿತಿಯನ್ನು ಹೊಂದಿ ಬೇಡದ ವಿಚಾರಗಳನ್ನು ಸಾಮಾಜಿಕ ವಿಚಾರಗಳನ್ನೆಲ್ಲಾ ತುಂಬಿ,  ಬೆಳೆಯುವ ಮಕ್ಕಳು ಕುತೂಹಲದಿಂದ ಅಂತಹ ಎಲ್ಲಾ ವಿಡಿಯೋಗಳನ್ನು ನೋಡಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವ ಜೊತೆಗೆ ಕಲಿಕೆಯಲ್ಲಿ ಹಿಂದೆ ಬೀಳುವುದರ ಜೊತೆಗೆ ಮಾನಸಿಕವಾಗಿ ಕುಗ್ಗಿ, ನೊಂದು, ಅದರಿಂದ ಹೊರ ಬರಲು ಆಗದೆ ಚಿಕ್ಕ ಚಿಕ್ಕ ಹೆಣ್ಣು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ನಿತ್ಯ ಸತ್ಯ. ಇದು ಒಂದೆಡೆ ಆದರೆ, ಕಲಿತ, ಸಮಾಜವನ್ನು ತಿದ್ದಬೇಕಾದ, ವಿದ್ಯಾರ್ಥಿಗಳನ್ನು ತಿದ್ದುತ್ತಿರುವ, ಸರಿ ದಾರಿಯಲ್ಲಿ ನಡೆಸಬೇಕಾಗಿರುವ ಶಿಕ್ಷಕ ಸಮುದಾಯವೇ ಹೀಗೆ ಆತ್ಮಹತ್ಯೆ ಮಾಡಿಕೊಂಡರೆ! ಒಮ್ಮೆ ಯೋಚಿಸಬೇಕಾದ ವಿಚಾರ! ಅದೂ ಕೂಡ ಪ್ರಾಥಮಿಕ, ಪ್ರೌಢ ಎಂದಲ್ಲ! ಪಿಯು ಕಾಲೇಜಿನ ಉಪನ್ಯಾಸಕರು, ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಇವರೆಲ್ಲ ಜೀವನದಲ್ಲಿ ಕಷ್ಟಗಳು ಇವೆ ಎಂಬ ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಇನ್ನು ಸಾಮಾನ್ಯರ ಪಾಡೇನು? 
        ಹೆಣ್ಣು ಮಕ್ಕಳು ಪ್ರತಿ ಕುಟುಂಬದಲ್ಲೂ ಕಷ್ಟ ಸಹಿಸುವುದು ಸರ್ವೇ ಸಾಮಾನ್ಯ. ಗಂಡ ಕುಡುಕ, ಬೇಡದ ಚಟ ಇರುವವ, ಸೋಮಾರಿ, ದುಡಿಯದೆ ಊರು ತಿರುಗುವವ, ಕೆಲಸ ಮಾಡದೆ ಮಡದಿ ದುಡಿದ ಹಣವನ್ನು ಖರ್ಚು ಮಾಡುವವ, ಕೆಟ್ಟ ಗೆಳೆಯರ ಜೊತೆ ಸೇರಿ ದುಷ್ಟ ಚಟಗಳ ಬೆಳೆಸಿಕೊಂಡವರು, ತಾಯಿ, ಅಕ್ಕ ತಂಗಿಯರ ಮಾತು ಕೇಳಿ ಬಂದ ಹೆಣ್ಣು ಮಗಳಿಗೆ ಕಷ್ಟ ಕೊಟ್ಟು ಅವಳನ್ನು ಕಣ್ಣೀರಲ್ಲಿ ಕೈ ತೊಳೆಸುವವರು, ಶಿಕ್ಷೆ ಕೊಡುವವರು, ಮಾತುಗಳಿಂದಲೇ ತೊಂದರೆ ಕೊಟ್ಟು ಚುಚ್ಚುವವರು, ದೈಹಿಕವಾಗಿ ಹಿಂಸಿಸುವವರು, ಸಾಯಿಸುವವರೇ ಇದ್ದಾರೆ ಬಿಡಿ! ಮದುವೆಗೆ ಮುಂಚೆ ಯಾವ ಸಾಧನೆ ಮಾಡಿದ್ದರೂ ಮದುವೆಯ ಬಳಿಕ ನೋವು ಎನ್ನುತ್ತಿರುವ ಜೀವಂತ ಉದಾಹರಣೆ ನಮ್ಮ ಮುಂದೆ ಇಂದು ಹಲವಾರು ಹೆಣ್ಣು ಮಕ್ಕಳೇ ಅಲ್ಲದೆ ರಾಖಿ ಸಾವಂತ್ ಎಂಬ ಹೆಣ್ಣು ಮಗಳದ್ದೆ ಇದೆ. 

ಒಂದು ಕಾಲದಲ್ಲಿ ಟಿವಿ ಶೋ ಒಂದಕ್ಕೆ ತನಗಾಗಿ ಸ್ವಯಂವರ ಎಂದು ಗಂಡು ಹುಡುಕುವ ಕಾರ್ಯ ಮಾಡಿ ಹಲವಾರು ಗಂಡುಗಳನ್ನು ಸಂದರ್ಶನ ಮಾಡಿ, ಒಂದೊಂದು ಎಪಿಸೋಡ್ ನಲ್ಲಿ ಅವರನ್ನು ಎಲಿಮಿನೇಟ್ ಮಾಡಿ  ಕೊನೆಯಲ್ಲಿ ಉಳಿದವರನ್ನು ಕೂಡಾ ಮದುವೆ ಆಗದೆ ತಾನು ತುಂಬಾ ಸುಂದರಿ, ಬುದ್ಧಿವಂತೆ ಆಗಿ ಮೆರೆದ ಚೆಲುವೆ ಇಂದು ಕಾನೂನಿನ ಮೊರೆ ಹೊಕ್ಕು ನಿತ್ಯ ಮಾನಸಿಕ ಹಿಂಸೆ  ಅನುಭವಿಸುತ್ತಿದ್ದಾಳೆ. ಇದು ಇವಳ ಒಬ್ಬಳ ನೋವು ಮಾತ್ರ ಅಲ್ಲ. ಹಲವಾರು ಕುಟುಂಬಗಳಲ್ಲಿ ಮಹಿಳೆಯರು ಸಮಾಜಕ್ಕೆ ಹೆದರಿ, ಎರಡು ಕುಟುಂಬದ ಮರ್ಯಾದೆಗೆ ಅಂಜಿ ನೋವು ನುಂಗಿಕೊಂಡು ಬದುಕುತ್ತಿರುವ ಪರಿ! ಮತ್ತೊಂದು ಕಡೆ ಎದೆಗಾರಿಕೆ ಇರುವ ಹೆಣ್ಣು ಮಕ್ಕಳು ಅವರ ಪೋಷಕರ ಸಹಾಯದಿಂದ ಲಾಯರ್ ಮೂಲಕ ಡೈವೋರ್ಸ್ ಪಡೆದುಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಇದು ಮಹಿಳೆಯರು ಮಾತ್ರ ಅಲ್ಲ, ಕೆಲವು ಪುರುಷರ ಜೀವನದಲ್ಲೂ ಅನ್ವಯ ಆಗುತ್ತದೆ. 

ಆದರೆ ವಿದ್ಯಾರ್ಥಿಗಳನ್ನು ತಿದ್ದಬೇಕಾದ, ಅವರ ಭವಿಷ್ಯವನ್ನು ರೂಪಿಸಬೇಕಾದ ಶಿಕ್ಷಕ ವೃಂದ ತಾವೇ ತಮ್ಮ ಜೀವನದ ಕಷ್ಟಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ ಆಗದೆ ಹೋದರೆ ಹೇಗೆ? ದೊಡ್ಡವರು ಅನ್ನಿಸಿಕೊಂಡವರು, ಕೊಟ್ಯಾಧೀಶರು ಹೀಗೆ ಸತ್ತಾಗ ಬದುಕಿಗೆ ಹಣ ಮಾತ್ರ ಅಲ್ಲ, ಬೇರೇನೋ ಪ್ರೀತಿ, ಧೈರ್ಯ, ತಾಳ್ಮೆ ಬೇಕಿದೆ ಅನ್ನಿಸುವುದಿಲ್ಲವೇ? ಇಂದಿನ ಮಕ್ಕಳಿಗೆ ಅಜ್ಜಿಯರ ಕಥೆಗಳಿಲ್ಲ, ಅಜ್ಜಂದಿರ ಜೊತೆ ಸುತ್ತಾಟವೂ ಇಲ್ಲ. ಅಪ್ಪ ಅಮ್ಮನ ಜೊತೆ ದಿನ ಕಳೆಯುವ ಭಾಗ್ಯವೂ ಇಲ್ಲ. ಕೆಲಸದವರ ಜೊತೆಗೋ, ಯಾವುದೋ ಮನೆಯಲ್ಲಿಯೋ, ಯಾವುದೋ ಪ್ಲೇ ಹೋಂಗಳಲ್ಲಿಯೋ ಅವರ ಬಾಲ್ಯದ  ಬದುಕು ಕಳೆದರೆ ಉಳಿದ ದಿನಗಳೆಲ್ಲ ಶಾಲೆ, ಟ್ಯೂಷನ್, ಸಮ್ಮರ್ ಕ್ಯಾಂಪ್ ಗಳಲ್ಲಿ. ಅವರಿಗೆ ನಿಜ ಜೀವನದಲ್ಲಿ ಜನರೊಡನೆ ಬೆರೆಯುವ, ಅಗತ್ಯ ಇರುವವರಿಗೆ ಸಹಾಯ ಹಸ್ತ ಚಾಚುವ, ಪರರ ಕಷ್ಟಕ್ಕೆ ಮರುಗುವ, ತಮ್ಮ ಕಷ್ಟ ಪರರಿಗಿಂತ ಚಿಕ್ಕದು ಎಂಬ ಭಾವನೆ ಬರುವ ಸನ್ನಿವೇಶಗಳು ಸಿಗುವುದು ಕಡಿಮೆ. ಪೋಷಕರು ದುಡಿಯುವ ಕಾರಣ 'ಬೇಕು ' ಎನ್ನುವುದೆಲ್ಲ ಮನೆಗೆ ಬರುತ್ತದೆ. ತಮ್ಮ  ತಂದೆ ತಾಯಿಯರ ಕಷ್ಟ ಗಮನಕ್ಕೆ ಬರುವುದೇ ಇಲ್ಲ. ನಮ್ಮ ಮಕ್ಕಳಿಗೆ ಏನೂ ತೊಂದರೆ ಆಗದ ಹಾಗೆ ಬೆಳೆಸಬೇಕು ಎಂಬ ಸಂಕಲ್ಪ ಪೋಷಕರಿಗೂ ಇರುತ್ತದೆ. ಪ್ರತಿನಿತ್ಯ ಕಾರಿನಲ್ಲಿ ಓಡಾಡುವ ಮಗುವಿಗೆ ಒಂದು ದಿನ ಕಾರ್ ಕೆಟ್ಟು ನಿಂತರೆ ಶಾಲೆಗೆ ರಜೆ ಆಯಿತು ಎಂಬ ಖಿನ್ನತೆ! ಮತ್ತೆ ಎರಡೆರಡು ದಿನದ ನೋಟ್ಸ್, ಮನೆ ಕೆಲಸದ ಹೊರೆ! ಇಂತಹ ಬಂಧನದಲ್ಲಿ ಬೆಳೆದ ಮಗುವಿಗೆ ಹೊರಗಿನ ಪ್ರಪಂಚದ ಅರಿವಿರದೆ ಬೆಳೆದು, ದೊಡ್ಡವನಾದ ಬಳಿಕ ತಾನೇ ಹೊರಗೆ ಹೋಗಿ ದುಡಿಯುವಾಗ ಒಂಟಿತನ ಕಾಡಿಯೋ, ಸಂಬಂಧಗಳು ಹೊಂದಿಕೆ ಆಗದೆಯೋ, ಪರಿಹಾರ ಇಲ್ಲ ಎಂದೆನಿಸಿ ಸಾವಿಗೆ ಶರಣಾಗುತ್ತಾರೆ. ಅದಕ್ಕೇ ಅಕ್ಕ ಪಕ್ಕದ ಮನೆಯ ಮಕ್ಕಳು ಒಟ್ಟಾಗಿ ಕಲೆತು ಆಟ ಆಡಬೇಕು. ಒಬ್ಬೊಬ್ಬರ ಆಲೋಚನೆಗಳನ್ನು ಮತ್ತೊಬ್ಬರ ಬಳಿ ಹೇಳಿಕೊಂಡು ಅವರವರೇ ಸಾಂತ್ವನ ಹೇಳುವವರಾಗಬೇಕು. ನಮ್ಮ ಕಷ್ಟ ಸುಖಗಳು ಪರರ ಹಾಗೆಯೇ. ನಮ್ಮ ಕಷ್ಟಗಳು ಪರರಿಗಿಂತ ಬಹಳವೇ ಚಿಕ್ಕವು. ಅವುಗಳಿಗೆ ಪರಿಹಾರ ಇದೆ ಎಂಬ ಭಾವನೆ ಬೆಳೆಯಬೇಕು. 

ನಾವು ಚಿಕ್ಕವರಿರುವಾಗ ಹೇಗೆ ಗೆಳೆಯರು ಬಿದ್ದು ಪೆಟ್ಟಾದರೆ ಕಮ್ಯೂನಿಸ್ಟ್ ಗಿಡದ ಎಲೆ ತಂದು, ಅದರ ರಸ ತೆಗೆದು ಗೆಳೆಯನ ಗಾಯಕ್ಕೆ ಹಚ್ಚಿ ಸರಿ ಮಾಡುತ್ತಿದ್ದೆವು! ಕಣ್ಣಿಗೆ ಕಸ ಬಿದ್ದರೆ ಊದಿ ತೆಗೆಯುತ್ತಿದ್ದೆವು! ಜ್ವರ ಬಂದರೆ ತುಳಸಿ ಎಳೆ ಜಗಿಯಲು ಹೇಳುತ್ತಿದ್ದೆವು! ಮಧ್ಯಾಹ್ನದ ಊಟವನ್ನು ಹಂಚಿ, ಬೇಡದಿದ್ದರೆ ಎಕ್ಸ್ಚೇಂಜ್ ಮಾಡಿಕೊಂಡು ತಿನ್ನುತ್ತಿದ್ದೆವು. ಅಲ್ಲಿ ಎಷ್ಟು ಸಹಕಾರ ಮನೋಭಾವ! ನೀರು ಬೇಕಾದರೆ ಕೊಡುತ್ತಿದ್ದವು. ಈಗ ಎಕ್ಸ್ಚೇಂಜ್ ಮಾಡುವ ಹಾಗಿಲ್ಲ! ಕೊರೋನ ಬಂದು ಹೋದ ಮೇಲಂತೂ ಮನುಷ್ಯ ಸ್ವಾರ್ಥಿ ಆಗಿ ಬಿಟ್ಟಿದ್ದಾನೆ! ನೋ ಶೇರಿಂಗ್, ನೋ ಕೇರಿಂಗ್! ತನ್ನಷ್ಟಕ್ಕೆ ತಾನು! ಯಾರು ಸತ್ತರೂ ಇನ್ನೊಬ್ಬರು ನೋಡಲೂ ಬಾರದಷ್ಟು ಆರೋಗ್ಯ ಕಾಳಜಿ ಹೆಚ್ಚಿದೆ ನಮ್ಮಲ್ಲಿ ಸ್ವಾರ್ಥಕ್ಕಾಗಿ!

ಎಲ್ಲಿಗೆ ಬೇಕಾದರೂ ತಮ್ಮದೇ ಕಾರಿನಲ್ಲಿ ನೆನೆಸಿದಾಗ ಹೋಗುವುದು. ಅಲ್ಲಿ ನ್ಯಾರೋ ಮೈಂಡ್ ಅಲ್ಲದೆ ಮನೋ ವಿಕಾಸ ಆಗಲು ಏನಿದೆ? ಅದೇ ಬಸ್ಸಿನಲ್ಲಿ ಆದರೆ,  ಸಣ್ಣ ಮಕ್ಕಳನ್ನು ಹಿಡಿದಿರುವ ತಾಯಂದಿರು, ಗರ್ಭಿಣಿಯರು, ವಯಸ್ಸಾದವರು, ಶಿಕ್ಷಕರು, ಬಂಧುಗಳು ಬಂದರೆ ಅವರಿಗೆ ಸ್ಥಳ ಬಿಟ್ಟು ಕೊಡುವುದು, ಅವರೊಡನೆ ಹರಟೆ, ಲೋಕಾಭಿರಾಮದ ಮೂಲಕ ಮಾತೃ ಭಾಷೆಯ ಬಳಕೆ ಎಲ್ಲವೂ ಚೆನ್ನಾಗಿತ್ತು! ಈಗಂತೂ ಶಾಲೆಯಲ್ಲಿ ಇಂಗ್ಲಿಷ್, ಮನೆಯಲ್ಲಿ ಮಾತನಾಡಲು ಜನ ಇಲ್ಲ, ಇದ್ದವರಿಗೆ ಸಮಯ ಇಲ್ಲ, ಅಲ್ಲೂ ಆಂಗ್ಲ ಭಾಷೆ ಬೆರೆತ ಕಂಗ್ಲೀಷ್! ಮಕ್ಕಳಿಗೆಲ್ಲ ಎಲ್ಲಿ ಬರಬೇಕು ತಾಯ್ನುಡಿ? ಒಂದು ಭಾಷೆಯ ಸಮಾಧಿ ಅಲ್ಲಿಯೇ ಆಯಿತು! ಮತ್ತೆಲ್ಲಿ ಮಾತೃಭಾಷೆ! ಹಿರಿಯರೂ ಮಕ್ಕಳಿಗೆ ತಮ್ಮ ಭಾಷೆ ಬಾರದೆ ಇರುವ ಕಾರಣ ಯಾವ ಮಾತನ್ನೂ ತಮ್ಮ ಮೊಮ್ಮಕ್ಕಳ ಬಳಿ ಆಡಲು ಆಗದು! ಇನ್ನು ಅಜ್ಜಿ ಕತೆ ಹೇಳೋದೆಂತು! ಕೇಳಿ ಅರ್ಥೈಸಿ ಕೊಳ್ಳೋದು ಹೇಗೆ! ನೀತಿ ಕಲಿಯೋದು ಹೇಗೆ? ಮಾನಸಿಕವಾಗಿ ಸದೃಢರಾಗುವುದು ಹೇಗೆ? ಹಾಗಾಗಿಯೇ ಸಣ್ಣ ಸಣ್ಣ ಕಷ್ಟಗಳಿಗೆ ಕೂಡಾ ಹೋಗಿ ಸಾಯುವುದು ಒಂದೇ ದಾರಿ ಎಂದು ಅವರ ಅನಿಸಿಕೆ ಆಗಿರುತ್ತದೆ. 

ತಮ್ಮ ಕಷ್ಟಗಳನ್ನು ಗೆಳೆಯರಲ್ಲಿ ಹೇಳಿಕೊಂಡರೆ ಅವರ ಇಮೇಜ್ ಗೆ ಧಕ್ಕೆ ಬರುತ್ತದೆ ಅಂದುಕೊಂಡು ಯಾರಿಗೂ ಹೇಳದೆ ತನ್ನೊಳಗೆ ತಾನು ಕೊರಗುತ್ತ ಇರುತ್ತಾರೆ! ಕೊನೆಗೆ ಒಂದು ದಿನ ಸತ್ತಾಗಲೆ ಎಲ್ಲರಿಗೂ ಅನ್ನಿಸುವುದು, ಇದು ತೀರಾ ಕ್ಷುಲ್ಲಕ ವಿಚಾರ ಅಂತ! ಬದುಕಿಗೆ ಊಟ , ತಿಂಡಿ, ಗಾಳಿ, ನೀರಿನ ಹಾಗೆ ಪೋಷಕರ ಪ್ರೀತಿ, ಕೇರ್, ಗಮನ ಕೂಡಾ ಬೇಕು. ಪ್ರತಿ ಹೆಜ್ಜೆಯಲ್ಲೂ ಅವರನ್ನು ಗಮನಿಸಿ ಪ್ರೀತಿಯಿಂದ ತಿದ್ದಿ ತೀಡಲು ತಾಳ್ಮೆ ಇರುವ ಹಿರಿಯ ಮನಗಳು ಪ್ರತಿ ಕುಟುಂಬದಲ್ಲಿ ಬೇಕಾಗಿವೆ. ಮಕ್ಕಳ ವಯಸ್ಸಿನಲ್ಲೇ ಮನಸ್ಸನ್ನು ಗಟ್ಟಿಗೊಳಿಸುವ ಪೋಷಕರೂ ಬೇಕು, ತಮ್ಮ ಕಷ್ಟಗಳನ್ನು ಮಕ್ಕಳ ಮುಂದೆ ಸ್ವಲ್ಪ ಮಟ್ಟಿಗಾದರೂ ತೋರ್ಪಡಿಸಿ ಜೀವನ ಕಷ್ಟವಿದೆ, ಸುಲಭವಿಲ್ಲ, ಆದರೂ ಅದನ್ನು ನಿಭಾಯಿಸಬೇಕು ಎನ್ನುವ ಪಾಠ ಪ್ರತಿ ಪೋಷಕರು ಬೆಳೆಯುತ್ತಿರುವ ಮಕ್ಕಳಿಗೆ ಕಲಿಸಿ ಕೊಡಬೇಕಿದೆ. ಆ ದಿಸೆಯಲ್ಲಿ ಮಕ್ಕಳ ಮನಸನ್ನು ಎಳವೆಯಿಂದಲೇ ಬದುಕಿಗೆ ಸಿದ್ಧಗೊಳಿಸಬೇಕಿದೆ. ಆಗ ಮಾತ್ರ ವಯಸ್ಸಾದಾಗ ಎಲ್ಲಾ ಕಷ್ಟಗಳ ನಡುವೆ, ಅದನ್ನು ಮೆಟ್ಟಿ ನಿಂತು ಜನ ಬದುಕಲು ಕಲಿಯಲು ಸಾಧ್ಯ  ಅಲ್ಲವೇ? ನೀವೇನಂತೀರಿ? 
@ಹನಿಬಿಂದು@
24.02.2023

172. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -172
​ಅದೆಷ್ಟು ಹೆಣ್ಣು ಮಕ್ಕಳು ಕಷ್ಟ ಪಡುತ್ತಿದ್ದಾರೆ! ದೇವಾ ನೋಡಿದರೆ ಮನಸ್ಸು ಕುಗ್ಗುತ್ತದೆ. ತಂದೆ ತಾಯಿ ಕಷ್ಟಪಟ್ಟು ಓದಿಸಿ, ತಮ್ಮ ಕರ್ತವ್ಯವನ್ನು ಮೆರೆದು ಮದುವೆ ಮಾಡಿ ಕೊಟ್ಟಿದ್ದಾರೆ. ಆದರೆ ಹಣೆ ಬರಹಕ್ಕೆ ಹೊಣೆ ಯಾರು ಎಂಬ ಮಾತಿನಂತೆಯೋ, ಮನಗಳ ಮಲಿನದಿಂದಲೋ, ಕೋಪ ದ್ವೇಶದಿಂದಲೋ, ಹೊಂದಾಣಿಕೆ ಸಮಸ್ಯೆಯಿಂದಲೋ, ಪರ ಸ್ತ್ರೀ ಅಥವಾ ಪರ ಪುರುಷರ ಪ್ರವೇಶ ಕುಟುಂಬದ ನಡುವೆ ಆದ ಕಾರಣಕ್ಕೋ, ಪುರುಷ/ಸ್ತ್ರೀಯ  ಕುಡಿತ, ಜೂಜು ಮೊದಲಾದ ಕೆಟ್ಟ ಅಭ್ಯಾಸದಿಂದಲೋ, ಹಿರಿಯರ ಆಸ್ತಿ , ಸಂಪತ್ತಿನ ಹಂಚಿಕೆಯ ವಿಚಾರದಲ್ಲಿಯೋ, ಧನ ದಾಹ, ವರದಕ್ಷಿಣೆ, ಕೆಲಸ, ಸಂಬಳದ ಹಣದಾಹ, ಕಾರು ಬಂಗಲೆಗಳ ವ್ಯಾಮೋಹ...ಅದೇನೋ ಒಂದು ಕಾರಣದಿಂದ ಗಂಡ ಅಥವಾ ಪತಿ ಬಿಟ್ಟು ಹೋದ ಬಳಿಕ ತಾನೇ ದುಡಿದು, ಮಕ್ಕಳನ್ನು ಸಾಕುತ್ತಾ, ಮನೆಯ ಸರ್ವ ಕಾರ್ಯಗಳನ್ನೂ ಮಾಡುತ್ತಾ, ಮನೆಯ ಒಳಗೂ, ಹೊರಗೂ, ಮಕ್ಕಳ ಆರೋಗ್ಯ, ಓದು ಎಲ್ಲವನ್ನೂ ತನ್ನ ಒಂಟಿ ದುಡಿಮೆಯಿಂದ ನಿಭಾಯಿಸುತ್ತಾ ಇರುವ ಅದೆಷ್ಟು ಮಂದಿ ಮಹಿಳೆಯರಿದ್ದಾರೆ! ಅದೆಷ್ಟು ಕಷ್ಟ ಪಡುತ್ತಿದ್ದಾರೆ ಒಳಗೊಳಗೇ ಬೇಯುತ್ತಾ!

     ಅವರ ಸ್ವಂತ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಬಗ್ಗೆ ಅವರು ಎಂದೂ ಯೋಚನೆ ಮಾಡಿರುವುದೇ ಇಲ್ಲ. ತಾನು ಹೆಸರು ಕೆಡಿಸಿ ಕೊಂಡರೆ ಮಕ್ಕಳ ಬದುಕು ಹಾಳಾಗುತ್ತದೆ ಎಂದು ಮಕ್ಕಳಿಗಾಗಿ ಸದಾ ತುಡಿಯುವ ಮನಸ್ಸು ಅವರದು. ತಾನು ಏನಾದರೂ ತಿಂದರೆ ಮಕ್ಕಳಿಗೆ ಇಲ್ಲ ಎಂಬ ಕಾರಣಕ್ಕೆ ಬೇರೆ ಯಾರಾದರೂ ಏನಾದರೂ ಕೊಟ್ಟರೂ ಕೂಡಾ ಮಕ್ಕಳಿಗೆ ತಂದು ಕೊಡುವ ಜಾಯಮಾನ, "ತನಗೆ ಕೊಡಿಸಲು ಆಗದು, ಹೀಗಾದರೂ ಪಡೆಯಲಿ" ಎನ್ನುವ ಆಶಯವೂ ಇರಬಹುದು. ಮನೆ ನಡೆಸಲು ಗಂಡಸರೇ ಸರಿ, ಪ್ರತಿ ದಿನ ಹೊರಗೆ ಹೋಗಿ ಹಾಲು, ಮೊಸರು, ತರಕಾರಿ ಅಂತ ಸಾಮಾನು ತಂದು ಹಾಕಿ ಮಾಡೋ ಕಾರ್ಯ ಸುಲಭ ಅಲ್ಲ. ಆದರೂ ಕುಗ್ಗದೆ ಮಹಿಳೆ, ಪುರುಷ ಇಬ್ಬರು ಹೊರುವ ಜವಾಬ್ದಾರಿಯನ್ನು ಕೂಡಾ ತಾನೊಬ್ಬಳೇ ಹೊತ್ತು, ದುಡಿದು ಹೈರಾಣಾಗಿ, ಸಮಾಜದ ಬಾಯಿಗೂ ಸಿಕ್ಕಿ, ಸಮಾಜದ ಕುಹಕ ನೋಟಗಳನ್ನು ಎದುರಿಸಿ ಕಂಡೂ ಕಾಣದಂತೆ, ಕತ್ತಿಯ ಅಲಗಿನ ಮೇಲೆ ನಡೆಯತ್ತ ಕುಟುಂಬದ ಹೊಣೆ ಹೊತ್ತ ಇವರ ಸಾಹಸಕ್ಕೆ ಸಲಾಂ. 

     ಸಂಸಾರ ಸಾಗಿಸಲು ಕುಟುಂಬದಲ್ಲಿ ಒಬ್ಬನೇ ದುಡಿಯುವ ಗಂಡಸು ಕತ್ತೆ ದುಡಿತ ದುಡಿಯುವುದಿಲ್ಲವೇ? ಅದೇ ದುಡಿತ ಎಷ್ಟೇ ಇದ್ದರೂ ತನಗೊಂದು ಸರಿಯಾದ ಬಟ್ಟೆ, ಚಪ್ಪಲಿ ತೆಗೆದುಕೊಳ್ಳಲು ಆಗದೆ ಒದ್ದಾಡುವ ಅಪ್ಪಂದಿರು ಕೂಡಾ ಇದ್ದಾರೆ. ಅದೇ ಸಣ್ಣ ಮೊತ್ತಕ್ಕೆ ದುಡಿಯುತ್ತಾ ತಂದೆ ಇಲ್ಲದ  ಮಕ್ಕಳನ್ನು ಮಡಿಲಲ್ಲಿ ಕಟ್ಟಿಕೊಂಡು ಬಾಳ್ವೆ ಮಾಡುವ ಗಟ್ಟಿಗಿತ್ತಿ ಮಹಿಳೆಯ ನೊಂದ ದನಿ ಹಲವು ಕುಡುಕ, ಲಂಪಟ ಗಂಡ ಅನ್ನಿಸಿಕೊಂಡವರಿಗೆ ಕೇಳುವುದೇ? ಈಗ ಬಿಡಿ, ಕುಡುಕರು ಮಾತ್ರ ಅಲ್ಲ, ಕುಡುಕಿಯರೂ ಇದ್ದಾರೆ. ಸಮಾನತೆ ಬಂದಿದೆ. ಗಂಡನನ್ನೇ ದುಡಿಸಿ, ತಾನು ಮೊಬೈಲ್ ನಲ್ಲಿ ಮುಳುಗಿ, ಮಗುವನ್ನೂ ಗಂಡನ ಕೈಗೇ ಕೊಟ್ಟು ಬೆಳೆಸುವ , ಏನೂ ಅಡುಗೆ ಮಾಡಲು ಗೊತ್ತಿರದೆ ಗಂಡನ ಕೈಯಲ್ಲಿ ಮಾಡಿಸಿಕೊಂಡು ತಿನ್ನುವ ಮಹಿಳೆಯರೂ ಇದ್ದಾರೆ. ಕಟ್ಟಿಕೊಂಡ ತಪ್ಪಿಗೆ ಮನೆ, ಹೋಟೆಲ್ ಅಂತೆಲ್ಲಾ ಗಂಡ ಕಷ್ಟ ಪಡುತ್ತಾ ಇರುತ್ತಾನೆ. ಮಕ್ಕಳಿಗೆ ತಾನೇ ಊಟ ತಯಾರಿಸಿ ಕೊಡುವವರೂ ಇದ್ದಾರೆ. 
            ಮತ್ತೊಂದು ಕಡೆ ಮಡದಿ ಸತ್ತ ಬಳಿಕ ಒಂಟಿಯಾದ ಜೀವ ಅವಳ ಸ್ಥಾನಕ್ಕೆ ಯಾರನ್ನೂ ಕರೆ ತರಲು ಆಗದೆ, ಮಕ್ಕಳಿಗಾಗಿ ಬದುಕಿ ಕೊರಗುವ ದೇಹ ಹಾಗೂ ಮನಸ್ಸು. ಮಡಿದ ಮಡದಿಯ ನೆನಪಿನಲ್ಲೇ ಬದುಕುವ ಜೀವ. ಮಕ್ಕಳ ವಿದ್ಯಾಭ್ಯಾಸ, ಒಳಿತನ್ನು ಬಯಸುವ ದೇವರು. ಸ್ವಲ್ಪ ಕುಟುಂಬಗಳಲ್ಲಿ ಮಡದಿಯರು ಮಕ್ಕಳನ್ನು ಗಂಡನ ಮನೆಯಲ್ಲೇ ಬಿಟ್ಟು ತಮ್ಮ ಪ್ರೇಮಿಯ ಜೊತೆ ತಮ್ಮ ಬದುಕು ಸಾಗಿಸ ಹೊರಡುವರು. ಹೋದ ವಾರದ ದಿನ ಪತ್ರಿಕೆಯ ವಾರ್ತೆ ನೋಡಿದೆ. ವಸತಿ ಯೋಜನೆಯಡಿ ಮನೆ ಕಟ್ಟಲು ಸರಕಾರ ದುಡ್ಡು ಕೊಡುತ್ತಾರಂತೆ. ಅದನ್ನು ಕೆಲವು ಬಡ ಗಂಡಸರು ತಮ್ಮ ಮಡದಿ ಮಹಿಳೆಯರು ತಮ್ಮ ಮನೆಗೆ ಗೃಹ ಲಕ್ಷ್ಮಿಯರು ಎಂದು ತಿಳಿದು ಆವಾಸ್ ಯೋಜನೆಯ ಅನುದಾನಕ್ಕೆ ಮಡದಿಯರ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ ಕೊಟ್ಟು , ಅವರ ಖಾತೆಗೆ ಹಣ ಜಮಾವಣೆ ಆಗಿರಲಿ ಎಂಬುದನ್ನು ಮಾಡಿದವ ಪಾಪ, ಅಕೌಂಟಿಗೆ ಗೋಡೆ ಕಟ್ಟಲು ಐವತ್ತು ಸಾವಿರ ಹಣ ಬೀಳುತ್ತಲೇ ತಮ್ಮ ಪ್ರೇಮಿಗೆ ತಿಳಿಸಿ, ಆ ಐವತ್ತು ಸಾವಿರ ಹಿಡಿದುಕೊಂಡು ಮೂವರು ಮಹಿಳೆಯರು ಗಂಡನ ಬಿಟ್ಟು ಪರಾರಿ ಆದ ವರದಿ ಬಂದಿದೆ. ಅರ್ಧಂಬರ್ಧ ಕಟ್ಟಿದ ಮನೆ, ಮಕ್ಕಳು ಅಲ್ಲೇ ಬಾಕಿ! ಏನು ಹೇಳೋಣ ಸಮಾಜಕ್ಕೆ! 

"ಸಮಾಜಕ್ಕೆ ಹೆದರಿ ಆತ್ಮಹತ್ಯೆ" ಅಂತ ಒಂದು ಕಾಲದಲ್ಲಿ ಇತ್ತು. ಈಗ ಸಮಾಜ , ಗಣಿತಕ್ಕೆ ಹೆದರೋದು ಬಿಡಿ, ಸಾಲ ಮಾಡಿದವನೇ ಬ್ಯಾಂಕಿಗೆ ಹೆದರಿಸುವ ಕಾಲ ಬಂದಿದೆ. ಇನ್ನು ಸಮಾಜವನ್ನೇ ಹೆದರಿ ನಡುಗಿಸುವ ಮಹಾನ್ ಭಯಂಕರ ರಾಕ್ಷಸ ಕ್ರಿಮಿಗಳು ಹುಟ್ಟಿಕೊಂಡಿರುವ ಈ ಕಾಲದಲ್ಲಿ ಹತ್ತು ತಿಂಗಳ ಹೆಣ್ಣು ಮಗುವಿನಿಂದ ಹಿಡಿದು ಎಂಬತ್ತು ವರ್ಷದ ಹಣ್ಣು ಹಣ್ಣು ಮುದುಕಿಯವರೆಗೂ ಟೆಕ್ನಿಕಲ್, ವೈಜ್ಞಾನಿಕ, ಯಾಂತ್ರಿಕ, ಮುಂದುವರೆದ ಯುಗದಲ್ಲೂ ಗಂಡಸು ಆ ಹೆಣ್ಣಿನ ದೇಹ ತನ್ನ ಕಾಮುಕ ಪ್ರವೃತ್ತಿಯನ್ನು ಅವರ ವಯಸ್ಸು ಸಾಮಾಜಿಕ ಪರಿಸ್ಥಿತಿ ನೋಡದೆ ಹಸುಳೆಯನ್ನೂ ಸಾಯಿಸಿ ಬಿಡುತ್ತಾನೆ ಎಂದರೆ ಎಂತಹ ಶಿಕ್ಷಣ ನಾವು ಪಡೆಯುತ್ತಿದ್ದೇವೆ, ಇಂತಹ ಪೀಳಿಗೆಯನ್ನು ನಾವು ಸೃಷ್ಟಿಸುತ್ತಿದ್ದೇವೆ? 

ಭಾರತ ವಿಜ್ಞಾನ, ತಂತ್ರಜ್ಞಾನ, ರಾಕೆಟ್ ಎಲ್ಲಾ ದಿಸೆಯಲ್ಲಿ ಮುಂದುವರಿಯುತ್ತಿದೆ. ರಸ್ತೆಗಳು ಆಗಲವಾಗುತ್ತಿವೆ, ಇಲ್ಲಿ ವ್ಯಾಪಾರ ಮಾಡಲು , ಬಂಡವಾಳ ಹೂಡಲು ವಿದೇಶಿಗರನ್ನು ಕೈ ಬೀಸಿ ಕರೆಯುತ್ತಿದೆ. ಆದರೆ ಇಲ್ಲಿನ ನಿರ್ಭಯರಂತಹ  ಅದೆಷ್ಟೋ ಹೆಣ್ಣು ಮಕ್ಕಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವವರಿಲ್ಲ. ಇಂತಹ ಹೆಣ್ಣು ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದ್ದರೂ, ಬಜೆಟ್ ನಲ್ಲಿ ಆಗಲಿ, ಭಾರತೀಯ ಕಾನೂನಿನಲ್ಲಿ ಆಗಲಿ ಅವರು ಮತ್ತು ಅವರ ಕುಟುಂಬಕ್ಕೆ ಯಾವುದೇ ನ್ಯಾಯ ಇಲ್ಲ. ಕಾರಣ ಉಳ್ಳವರ ದಿನಗಳು. ಅಷ್ಟೇ ಯಾಕೆ, ಓಟಿಗಾಗಿ ಮಾತ್ರ ಹಳ್ಳಿಗೆ ನುಗ್ಗುವ ನಾಯಕರು ಹಳ್ಳಿಯ ಕೆಲ ಜನರ ಬದುಕಿನ ಸ್ಟ್ಯಾಂಡರ್ಡ್ ಬಗ್ಗೆ ತಿಳಿದು ಅದನ್ನು ಹೆಚ್ಚಿಸಲು ಅವರನ್ನೇ ಬಳಸಿಕೊಳ್ಳ ಬೇಕಿದೆ. ಕುಡಿತ, ಮಾದಕ ವ್ಯಸನಗಳ ದುಶ್ಚಟ, ಮೊಬೈಲ್ ಗಳಲ್ಲಿ  ಸುಲಭವಾಗಿ ಸಿಗುವ ಬೇಡದ ನೀಲಿ ಚಿತ್ರಗಳು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಮನಸ್ಸನ್ನೂ ಕೆಡಿಸಿವೆ ಮತ್ತು ಅದುವೇ ಹೆಣ್ಣು ಮಕ್ಕಳ ಅಭದ್ರತೆಗೆ ಕಾರಣ ಅಲ್ಲವೇ?

       ಇಂದು ಹೆಚ್ಚಿನವರು ಓದು ಬರಹ ಕಲಿತವರು, ಆದರೂ ಕೂಡಾ ಅವರು ಅಕ್ಷರಸ್ಥರು ಮಾತ್ರ. ಮಾನವರು ಅಲ್ಲ, ನಡೆಸುವ ಹೀನ ಕೃತ್ಯಗಳನ್ನು ನೋಡಿದರೆ ಭಾರತದ ಕಾನೂನು ಸುವ್ಯವಸ್ಥೆ ಬಡವರ ಪಾಲಿಗೆ, ನೊಂದವರಿಗೆ ಏನೂ ಸರಿ ಇಲ್ಲ ಅನ್ನಿಸುತ್ತದೆ ಒಮ್ಮೊಮ್ಮೆ. ದೇಹಗಳನ್ನು ಕಲ್ಲಂಗಡಿ ಹಣ್ಣಿನಂತೆ ರಸ್ತೆಗಳಲ್ಲೇ ಕೊಚ್ಚಿ ಹಾಕುವುದು, ಮಡದಿಯನ್ನು ತರಕಾರಿ ಕೊಚ್ಚಿದಂತೆ ಕೊಚ್ಚಿ ಕೊಚ್ಚಿ ಕೊಂದು ಫ್ರಿಜ್ ನಲ್ಲಿ ಇಡುವುದು, ಅವನ್ ನಲ್ಲಿ ಬೇಯಿಸುವುದು, ಮೂಟೆ ಕಟ್ಟಿ ಬಿಸಾಕುವುದು, ತುಂಡು ತುಂಡಾಗಿ ಕತ್ತರಿಸಿ ಬಾವಿಗೆ ಎಸೆಯುವುದು...ಅಯ್ಯೋ ದೇವ... ದಿನ ಪತ್ರಿಕೆ ಓದುವಾಗ, ಟಿವಿ ವಾರ್ತೆಯಲ್ಲಿ ಮಕ್ಕಳ ಮುಂದೆ ಆ ದೃಶ್ಯವನ್ನು ಬಿತ್ತರಿಸುವಾಗ ಕರುಳು ಕಿತ್ತು ಬಂದಂತೆ ಆಗುತ್ತದೆ. ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ತುಂಬ ಬೇಕಾದ ಸುದ್ಧಿ ವಾಹಿನಿಗಳು ಟಿ ಆರ್ ಪಿ ಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಲೈವ್ ಆಗಿ ತೋರಿಸುವ ಮಾಧ್ಯಮಗಳಾಗಿ ಬಿಟ್ಟಿವೆ. ಇದು ಸುಲಭ ಎಂದು ಅರಿತ ಮಗು ಅಂಕಗಳು ಕಡಿಮೆ ಬಂದರೂ, ಪೋಷಕರು ಮೊಬೈಲ್ ನೋಡ ಬೇಡ ಎಂದರೂ ಸಾಕು, ಶಿಕ್ಷಕರು ಬುದ್ಧಿ ಮಾತು ಹೇಳಿದರೂ ಸೀದಾ ಹೋಗಿ ಆತ್ಮಹತ್ಯೆಗೆ ಶರಣಾಗುತ್ತದೆ. ಮತ್ತೆ ತಪ್ಪಿತಸ್ಥರು? ಶಿಕ್ಷಕರೇ!!! ಮತ್ತೆ ವಾಹಿನಿಗಳು ಶಿಕ್ಷಕರ ಮೇಲೆ ಗೂಬೆ ಕೂರಿಸಿ ಬಡ ಶಿಕ್ಷಕರನ್ನು ದುಡಿದು ತಿನ್ನದ ಹಾಗೆ ಮಾಡಿ ಬಿಡುತ್ತಾರೆ. 

ಸಮಾಜದ ಒಂದು ಮುಖ ಸಿರಿವಂತಿಕೆ, ಕಾರು, ಬಂಗಲೆ, ಮಾಲ್ ಗಳಲ್ಲಿ ಶಾಪಿಂಗ್, ವಾರದ ಕೊನೆಗೆ ಸುತ್ತಾಟ, ದೂರದ ಪರ್ವತ ಪ್ರದೇಶಗಳಿಗೆ ಹೋಗಿ ಸಂತಸ ಪಡುವುದು ಆಗಿದ್ದರೆ ಮತ್ತೊಂದು ಮುಖ ಬೆಳಗ್ಗೆ ಹೋದರೆ ಸರಿ ಕತ್ತಲೆಯವರೆಗೆ ದುಡಿಯುವ ಪೋಷಕರು, ಮಕ್ಕಳ ಕಡೆ ಗಮನ ಕೊಡಲು ಸಮಯ, ತಾಳ್ಮೆ ಇಲ್ಲ, ಅವರನ್ನು ತಿದ್ದಲು ಮನೆಯಲ್ಲಿ ಹಿರಿಯರೂ ಇಲ್ಲ, ಕಲಿತವನಿಗೂ ಸರಿ ತಪ್ಪು ತಿಳಿದಿಲ್ಲ, ಸಾಮಾನ್ಯ ಜ್ಞಾನದ ಯೋಚನೆ ಇಲ್ಲ, ಹೆಣ್ಣು ಮಕ್ಕಳ ಮೇಲೆ ಕರುಣೆ ಇಲ್ಲ, ಅವರನ್ನು ಭೋಗದ ವಸ್ತುಗಳಂತೆ ತೋರಿಸುವ ಮಾಧ್ಯಮಗಳು, ಸಾಮಾಜಿಕ ಜಾಲ ತಾಣಗಳು, ಹಣಕ್ಕಾಗಿ ಬಟ್ಟೆ ಬಿಚ್ಚಿ ಕುಣಿಯುವ, ದೇಹದ ಅಂಗಾಂಗಳ ಪ್ರದರ್ಶನ ಮಾಡುವ  ನಟ ನಟಿಯರು, ಇದನ್ನೇ ಫ್ಯಾಷನ್, ಜೀವನ ಶೈಲಿ ಎಂದು ತಿಳಿಯುವ ಮುಗ್ಧ ಮಕ್ಕಳು!

ಒಂದು ಕಡೆ ಹಿರಿಯರ, ಯುವ ಜನರ, ಮಕ್ಕಳ, ಮತ್ತೊಂದೆಡೆ ಮಹಿಳೆಯರ ಎಲ್ಲರ ಮನಸ್ಸು ಕೂಡಾ ಕೆಡುತ್ತಿದೆ. ಇದಕ್ಕೆ ಕಾರಣ ಕೆಡುತ್ತಿರುವ ಸಮಾಜ. ಸಮಾಜ ಎಂದರೆ ನಾವೇ. ತಿದ್ದುವವರಿಲ್ಲ ಇಂದು. ಹಣಕ್ಕಾಗಿ, ಜನರ ಲೈಕ್ ಗಾಗಿ ಹದಿ ಹರೆಯದ ಹೆಣ್ಣು ಮಕ್ಕಳು ಅಪ್ಲೋಡ್ ಮಾಡುವ ಕೆಟ್ಟ,  ಮಾದಕ ರೀಲ್ಸ್ ಗಳು ಹುಡುಗರ ಮನಸ್ಸನ್ನು ಹಾಳು ಮಾಡಿದರೆ, ಹುಡುಗಿಯರ ಮೇಲಿನ ಅತ್ಯಾಚಾರ, ದೌರ್ಜನ್ಯದ ನಡವಳಿಕೆಗಳು ಇಂದು ಯುವಕ ಯುವತಿಯರನ್ನು ಮದುವೆಯೇ ಬೇಡ ಎನ್ನುವ ವರೆಗೆ ಕರೆ ತಂದಿವೆ. ತಂದೆ ತಾಯಿಯರು ಪಡುವ ಕಷ್ಟ, ಹೊಂದಾಣಿಕೆಯ ಸಮಸ್ಯೆಯೂ ಇದಕ್ಕೆ ಕಾರಣ. ಹೆಣ್ಣು ಮಕ್ಕಳಿಗೆ ರೋಲ್ ಮಾಡೆಲ್ ಅವರ ಅಮ್ಮಂದಿರು. ಅವರ ಕಷ್ಟ ಗಮನಿಸಿದ ಹೆಣ್ಣು ಮಕ್ಕಳು ನನ್ನ ಬದುಕು ಅಮ್ಮನಂತೆ ಆಗಬಾರದು ಎಂದು ಯೋಚಿಸುವುದರಲ್ಲಿ  ತಪ್ಪಿಲ್ಲ ಅಲ್ಲವೇ?
ಬೆಕ್ಕಿಗೆ ಘಂಟೆ ಕಟ್ಟುವವರು ಯಾರು?ಸಮಾಜದ ಸ್ವಾಸ್ಥ್ಯ ಕಾಪಾಡುವವರು ಯಾರು? ಪದವಿ, ಇಂಜಿನಿಯರಿಂಗ್, ಮೆಡಿಕಲ್, ಸ್ನಾತಕೋತ್ತರ ಕಾಲೇಜುಗಳ ಅರಿತ ವಿದ್ಯಾರ್ಥಿಗಳೂ, ನಟ ನಟಿಯರೂ ಮಾದಕ ವ್ಯಸನಿಗಳ ಪಟ್ಟಿಯಲ್ಲಿ ಸೇರುತ್ತಿದ್ದಾರೆ, ಎನ್ನುವ ಭಯಾನಕ ಸತ್ಯವನ್ನು ಸುಳ್ಳು ಮಾಡುವವರು ಯಾರು..ಮುಂದಿನ ಭಾರತದ ಭವ್ಯ ಭವಿತವ್ಯವನ್ನು ಉಜ್ವಲ ಗೊಳಿಸುವವರು ಯಾರು? ಒಳ್ಳೆಯ ಜನರನ್ನು ಹುಡುಕುವುದು ಹೇಗೆ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಮನುಷ್ಯ ಹೃದಯದಿಂದ ಬದಲಾಗಬೇಕು, ತನ್ನ ಪರಮಾತ್ಮನನ್ನು ತಾನೇ ಸರಿ ಪಡಿಸಿಕೊಂಡಾಗ ಮಾತ್ರ ಆರೋಗ್ಯಕರವಾಗಿ, ಶಾಂತಿಯಿಂದ, ನೆಮ್ಮದಿಯಿಂದ ಹೆಣ್ಣು, ಗಂಡು ಸಮಾಜದಲ್ಲಿ ಬದುಕಲು ಸಾಧ್ಯ ಎಂದು ನನ್ನ ಅನಿಸಿಕೆ. ನೀವೇನಂತೀರಿ?
@ಹನಿಬಿಂದು@
17.02.2023

ಶುಕ್ರವಾರ, ಮಾರ್ಚ್ 3, 2023

ತೆರೆ

ತೆರೆ

ಮನೆಯೊಳಗೆ ಮನವಿಹುದು ತೆರೆ ಬಾಗಿಲನು
ಮನದೊಳಗೆ ಭಾವವಿಹುದು ತೋರು ಒಲವನು
ಭಾವದೊಳಗೆ ಬಿಂಬವಿಹುದು ನೀಡು ಶಕ್ತಿಯನು
ಜೀವದೊಳಗೆ ಜೀವ ಕಣವಿಹುದು ತಿನ್ನು ಸತ್ಯವನು
@ಹನಿಬಿಂದು@
04.03.2023