ಭಾನುವಾರ, ಮಾರ್ಚ್ 31, 2024

ಸಾಕ್ಷಿ ಬೇಕೆ?

ಸಾಕ್ಷಿ ಬೇಕೇ?

ರವಿಯ ಸುತ್ತ ತಿರುಗೋ ಮರುಳು
ದಿವಸಕ್ಕೊಮ್ಮೆ ಹಗಲು ಇರುಳು
ಕಷ್ಟ ಸುಖದಿ ನಲಿವ ಹತ್ತು ಬೆರಳು
ಒಡ್ಡಬೇಕೇ ಬರಿಯ ಕೊರಳು?

ಚಂದಿರನೇ ಸಾಕ್ಷಿ ಜಗಕೆ
ಸೂರ್ಯ ಧರೆಯ ಗೆಳತನಕೆ
ತುಂಬಿ ಇರುಳ ಬಂಜೆತನಕೆ
ಬೆಳದಿಂಗಳ ಬೆಳಕ ಮೊಳಕೆ

ಗಿರಿಕಿ ಬದುಕು ಸುತ್ತ ಚಲನೆ
ಅಂಡಾಕಾರ ದೇಹ ರಚನೆ
ಶೀತ ಉರಿ ಸಮಶೀತೋಷ್ಣ
ಎತ್ತಿ ಹಿಡಿದ ದೇವ ಕೃಷ್ಣ

ಬಿಸಿಲು ಮಳೆಯು ಭಾರಿ ಚಳಿಯು
ಮಂಜುಗಡ್ಡೆ ಉದುರೊ ಹಿಮವು
ನಿತ್ಯ  ಜೀವ ಜಂತು ಪೊರೆಯೊ
ಕಾಯಕದಲಿ ನೆಮ್ಮದಿ ಪಡೆಯೋ

ದೇವಿ ದೈವ ಗುರುವ ಒಲವು
ಸಾಕಿ ಸಲಹುತ್ತಿರುವ ಬಲವು
ಹುಟ್ಟು ಸಾವು ಒಂದೇ ನೆಲದಿ
ಹೆಸರು ಒಂದೇ ಸಾಕು ಕುಲದಿ
@ಹನಿಬಿಂದು@
01.04.2024

ಯಾಕೋ

ಯಾಕೋ
ಅದು ಯಾರದೋ ನೋವು
ಅದು ಯಾರದೋ ಕಷ್ಟ
ಸುಡುವುದು ಯಾರನ್ನೋ
ನೋವು ಮತ್ತೆ ಯಾರಿಗೋ..

ದ್ವೇಷ ಯಾರದೋ
ಪ್ರೀತಿ ಯಾರದೋ
ಅನುಭವಿಸುವವರು ಇನ್ಯಾರೋ
ಆಳುವವರು ಯಾರೋ

ನಗುವವರು ಯಾರೋ
ಅಳು ಇರುವುದು ಎಲ್ಲೋ
ಪ್ರಯೋಗ  ಯಾರ ಮೇಲೋ
ಮನಸ್ಸು ಎಲ್ಲೋ

ದೇವನೊಲುಮೆ ಬಲ್ಲವರಾರೊ
ತಪ್ಪಿಗೆ ಶಿಕ್ಷೆ ಯಾರಿಗೋ
ಮನಗಳ ಮಾತೆಲ್ಲೊ
ಮರೆತ ಭಾಷೆ ಎಲ್ಲೋ

ಎಲ್ಲವೂ ನಿನ್ನಲ್ಲೇ
ಕುಣಿವವ ನಾನು
ಕುಣಿಸುವ ನೀನು
ಆಡಿಸಿ ಬೀಳಿಸುವವನೂ ನೀನೇ
@ಹನಿಬಿಂದು@
31.03.2024

ಶನಿವಾರ, ಮಾರ್ಚ್ 30, 2024

ಮುಸ್ಸಂಜೆ

ಮುಸ್ಸಂಜೆ

ಬಾರೆ ಬಾರೆ ಮುಸ್ಸಂಜೆ ಹೊತ್ತಲ್ಲಿ
ತೋರೆ ಮೊಗವ ಪ್ರೀತಿಯ ತುತ್ತಲ್ಲಿ//

ಜಗವ ಮೆರೆವ ಆಸೆ ನನ್ನಲ್ಲಿ
ನಿನ್ನ ಹೊರತು ಯಾರಿಲ್ಲ ಬಾಳಲ್ಲಿ
ಸ್ನೇಹ ಪ್ರೇಮ ಮೋಹ ನೀನೇ
ಕ್ಷೇಶ ಕಳೆವ ಪ್ರಪಂಚ ತಾನೇ//ಬಾರೆ//

ಪಾರ್ಕು ಸಿನೆಮಾ ಹೋಟೆಲೆಮಗೆ
ಸುತ್ತಿ ಸುತ್ತಿ ಬಹಳ ಸಲುಗೆ
ನೀನು ನಾನು ನಾನು ನೀನು
ಪರರ ಚಿಂತೆ ನಮಗೆ ಏನು!//ಬಾರೆ//

ಬದುಕು ಎಲ್ಲ ನಿನ್ನ ಜೊತೆಗೆ
ಕಳೆಯುವಾಸೆ ಹೀಗೆ ನನಗೆ
ಪ್ರತಿ ಸಂಜೆಯೂ ನಡೆವ ಘಳಿಗೆ
ಕೈ ಹಿಡಿದು ಇರುವ ಬೆಸುಗೆ//ಬಾರೆ//

ಏಳೇಳು ಜನುಮ ಇದ್ದರೂನು
ನಿನ್ನ  ಜೊತೆಗೆ ತಾನೇ ನಾನು
ಭಯವು ಏಕೆ ನೀನೇ ಜೇನು
ಬಾಳಿನಲ್ಲಿ ನಾವೊಂದೆ ಅಲ್ವೇನು? //ಬಾರೆ//
@ಹನಿಬಿಂದು@
30.03.2024

ಶುಕ್ರವಾರ, ಮಾರ್ಚ್ 29, 2024

ಕಾತರವಿರಲಿ

ಕಾತರವಿರಲಿ

 ಆತುರ ಬೇಡ ಕಾತರವಿರಲಿ
ನಾಳೆಯ ಬಗೆಗಿನ ಬಾಳಿನಲಿ
ಸೂತ್ರದಾರನು ಮೇಲೆಯೆ ಇರುವನು
ಮಾತನಾಡದೆ ಮೌನದಲಿ

ರಾತ್ರಿಯೆ ಇರಲಿ ಹಗಲೇ ಆಗಲಿ
ತನುವಿಗೆ ಬೇಕು ವಿಶ್ರಾಂತಿ
ಜಾತಿ ಧರ್ಮಗಳು ಒಂದೇ ಆಗಿವೆ
ಮಾನವತೆಯ ಈ ಶ್ವಾಸದಲಿ

ಕಾಯಕ ಮಾಡದೆ ಕಾಯುತ ಕುಳಿತರೆ
ಸಿಗುವುದೇ ಹಸಿವಿಗೆ ಊಟ?
ಮಾಯದಿ ಬಂದು ತಥಾಸ್ತು ಎನುವನೆ
ಕೈಯಲಿ ಹಿಡಿದು  ಬಾಡೂಟ

ಕಸುವದು ಇರಲು ದುಡಿಯಲು ಬೇಕು
ಮಸಾಲೆ ತಿಂದ ದೇಹ
ದಣಿವು ಬಂದು ಕೇಳಲು ಉದಕವ
ಇಂಗಿಸಬೇಕು ದಾಹ..
@ಹನಿಬಿಂದು@
29.03.2024

ಮಂಗಳವಾರ, ಮಾರ್ಚ್ 26, 2024

ಹುಡುಕು

ಹುಡುಕು

ನಾನು ಕಳೆದು ಹೋಗಿದ್ದೇನೆ
ಕಳೆದೇ ಹೋಗಿದ್ದೇನೆ
ನನ್ನೊಳಗಿಂದ...
ನಿನ್ನೊಳಗಿರುವೆನೆ?
ಹುಡುಕಿ ನೋಡು ಒಮ್ಮೆ..
ಒಳಗಿರುವೆನೆ ನಿನ್ನ
ಹೊರಗೆ ಇರುವೆನೆ
ನಡುವೆ ಇರುವೆನೆ

ನಿನ್ನ ಒಳಗೆ ಹೊರಗೆ ನಡುವೆ
ತಪ್ಪಿದಲ್ಲಿ ಮನದ ಬದಿಗೆ
ಇಲ್ಲದಿರಲು ಹಿಂದೆ ಮುಂದೆ
ಮೇಲೆ ಕೆಳಗೆ ಎಲ್ಲಾ ನೋಡು
ನಿನ್ನ ಕಣ ಕಣಗಳಲ್ಲು
ಒಳಗೆ ಸೇರಿ ಹೋಗಿ
ಕರಗಿ ಹೋಗಿ ಕಾಣದಾಗಿ
ಮತ್ತೆ ಸೇರಿ ಹೋಗಿ
ಒಂದೇ ಆಗಿ ಬೇರೆ ಸಿಗದೆ
ಬೆರೆತು ಸೇರಿ ಹೋಗಿ

ಮತ್ತೆ ಹೇಗೆ ಹುಡುಕಿ ತಂದು
ಇಡಲು ನೀನು ನನ್ನ
ಹಾರಿ ಜಾರಿ ಹೋಗಲಾರೆ
ಅವಿತು ಒಳಗೆ ನಿನ್ನ
@ಹನಿಬಿಂದು@
26.03.2024


ಇಣುಕುತ್ತಿರುವೆ

ಇಣುಕುತಿರುವೆ

ಇಣುಕುತಿರುವೆ ನಿತ್ಯ ಮನದ
ಕಿಟಕಿಯಲ್ಲಿ ನಿನ್ನ ನಾನು
ಕ್ಷಣಿಕವೆಂಬ ಬಾಳು ಇಲ್ಲ
ಬದುಕಿನಲ್ಲಿ ಮೊದಲು ನೀನು

ನಡುವೆ ಯಾರೂ ಬೇಡ ನಮಗೆ
ನಿತ್ಯ  ಒಲವ ಧಾರೆ
ತಂಪು ಬಿಸಿಯ ಹೊರುವ ಕ್ಷಣಕೆ
ಸತ್ಯ ಪ್ರೀತಿ ತಾರೆ

ನಮಗೆ ನಾವೇ ಹೂವ ಹಾರ
ಬೇಕು ಇನ್ನು ಏನು?
ಭಯ ಎನ್ನುವ ಮಾತೇ ಇಲ್ಲ
ಸಾಕು ಒಲವ ಗಾನ

ನೂರು ಮಾತು ಬೇಡ ಇನ್ನು
ಪ್ರೀತಿ ಝರಿಯು ಉಕ್ಕಲು
ಸೋರುತಿರಲಿ ಮುತ್ತು ರತ್ನ
ತುಟಿಯ ಮೆತ್ತಿ ಸವಿಯಲು..
@ಹನಿಬಿಂದು@
26.03.2024

ಸೋಮವಾರ, ಮಾರ್ಚ್ 25, 2024

ಖುಷಿಯ ಕ್ಷಣ

ಖುಷಿಯ ಕ್ಷಣ

ಹೃದಯದೊಳಗೆ ಪ್ರೇಮ ವೀಣೆ
ಮೃದುವಾಗಿ ಮೀಟಿ ಹಾಡಲು
ಕೃತ್ರಿಮತೆಯ ಪರದೆ ಇರದು
ಭೃಂಗ ನಲಿದು ಹಾಡಲು..

ಗಮನ ದೀಪ ಪ್ರೀತಿ ಎಣ್ಣೆಯಲ್ಲಿ
ಉರಿದು ಬೆಳಗಲು
ಮೋಸ ಸುಳ್ಳು  ಕಷ್ಟ ನೋವು
ಸುಟ್ಟು ನಾಶವಾಗಲು

ಒಂದೇ ಜೀವ ಒಂದೇ ಒಲವ
ಮೊಲ್ಲೆ ಕಂಪು ಬೀರಲು
ಮುಂದೆ ಮುಂದೆ ಕೈಯ ಹಿಡಿದು
ಜೊತೆಗೆ ದಾರಿ ಸಾಗಲು

ಸಿಹಿಯ ನೀಡಿ ಕಹಿಯ ಮರೆತು
ಖುಷಿಯ ಕ್ಷಣವ ಸವಿಯಲು
ಬೇಧ ಭಾವವಿರದೆ ಮನದಿ
ನಲಿದು ನಾಟ್ಯವಾಡಲು..

ಬಾಳ ಕುಸುಮ ಬಿರಿದು ನಗಲು
ನೋವನೆಲ್ಲ ಮಾರಲು
ಆಳ ತಲುಪಿದಂತೆ ಪ್ರೀತಿ
ಕ್ಷಣವೂ ಇಲ್ಲಿ ಕಾವಲು..
@ಹನಿಬಿಂದು@
25.03.2024

ಗುರುವಾರ, ಮಾರ್ಚ್ 21, 2024

ಕವಿತೆ ಹುಟ್ಟಿದ್ದು ಅಲ್ಲಿ

ಕವಿತೆ
ಕವಿತೆ ಹುಟ್ಟಿದ್ದು ಅಲ್ಲಿ ...
ಬಚ್ಚಲು ಮನೆಯ ಬದಿಯಲ್ಲಿ
ಬಟ್ಟೆಗಳೆ ಇಲ್ಲದೆ ಕೊರೆವ ಚಳಿಯಲ್ಲಿ ಅಳುತ್ತಿದ್ದ ಕಂದಮ್ಮನ ಮಡಿಲಲ್ಲಿ
ಕೊರೆವ ಹಿಮವನ್ನೂ ಲೆಕ್ಕಿಸದೆ ಹಿಮಾಲಯದ ತುದಿಯ ತಲುಪುವ ಗುರಿಯಿಟ್ಟು ಸಾಗುತ್ತಿದ್ದ ಹುಟ್ಟು ಕುರುಡನ ಕನಸ ವೇಗದ ಪಾದಗಳ ಹೆಜ್ಜೆಗಳಲ್ಲಿ

ಕವಿತೆ ಹುಟ್ಟಿದ್ದು ಅಲ್ಲಿ ....
ಎದ್ದು ಬಿದ್ದು ಹಿಡಿದ ಪುಸ್ತಕವ ಬಿಡದೆ ರಾತ್ರಿ ಎರಡರ ತನಕ ಓದಿ ಮುಗಿಸಿದ ಮೇಲೆ ಸಿಕ್ಕ ಖುಷಿಯಲ್ಲಿ
ಪ್ರೀತಿ ನೀಡೆಂದು ದೇವರಿಗೆ ಕೈ ಮುಗಿದ ಬಳಿಕ ಸಿಕ್ಕ ನಿಸ್ವಾರ್ಥ ಹೃದಯದ ಬಡಿತದ ಶಬ್ದದಲ್ಲಿ
ತನ್ನ ಆರೋಗ್ಯ ಸರಿ ಇಲ್ಲದೆ ಹೋದರೂ ತನ್ನ ಮಕ್ಕಳು ಹಸಿವೆ ಕಾಣದಿರಲೆಂದು ಕೆಲಸಕ್ಕೆ ಹೋಗಿ ಸಂಬಳದ ಹಣದಲಿ ಕೊಂಡ ಅಕ್ಕಿ ಕಾಳುಗಳಲಿ

ಕವಿತೆ ಹುಟ್ಟಿದ್ದು ಅಲ್ಲಿ....
 ಅಪಘಾತವಾಗಿ ಪ್ರಜ್ಞೆ ತಪ್ಪಿ ಬಿದ್ದಿರುವ ಪೋಷಕರ ನಡುವಿನಲಿ ರಸ್ತೆಯ ನಡುವೆ ಆಟವಾಡುತ್ತ ಕುಳಿತ ಕಂದನ ನಗುವಿನಲಿ
ಚಿಮಿಣಿ ದೀಪದ ಮುಂದೆ ಬಗ್ಗಿ ಕುಳಿತು ಕೂದಲು ಸುಟ್ಟುಕೊಂಡು ರಾತ್ರಿ ಹನ್ನೆರಡರ ವರೆಗೆ ಓದಿ ಶಾಲಾ ಮೊದಲಿಗರ ಪಟ್ಟಿಯಲ್ಲಿ ಹೆಸರು ಕಂಡಲ್ಲಿ

ಕವಿತೆ ಹುಟ್ಟಿದ್ದು ಅಲ್ಲಿ..
ಚಿಂದಿ ಆಯ್ದ ಗೋಣಿಯ ಬೆನ್ನ ಮೇಲೆ ಹೊತ್ತು ತನ್ನಂತಹ ಮಕ್ಕಳು ಸಮವಸ್ತ್ರ ಧರಿಸಿ ಶಾಲೆಗೆ ಹೋಗುವುದನ್ನು ತನ್ನಾಸೆಯ ಕಂಗಳಿಂದ ನೋಡುತ್ತಾ  ನಿಂತ ಕಣ್ಣಿನ ನಕ್ಷತ್ರದ ಮಿಂಚಿನಲಿ
ಕಸದ ತೊಟ್ಟಿಯಲ್ಲಿ ಸಿಕ್ಕಿದ ಎರಡು ಶೂಗಳ ತಂದು ತೊಳೆದು, ಧರಿಸಿ ಸರಿಯಾಗಿದೆ ಎಂದು ಅಮ್ಮನಿಗೆ ಹೇಳುವ, ಆದ ಹಾಕಿ ಸಂತಸ ಪಡುವ ಮುಗ್ಧ ಮಾತುಗಳಲಿ...
@ಹನಿಬಿಂದು@
Honey Bindu HoneyBindu-Tulu Kalpuga 
21.03.2024

ಮಂಗಳವಾರ, ಮಾರ್ಚ್ 19, 2024

ಶುಭ ಮುಂಜಾನೆ

ಶುಭ ಮುಂಜಾನೆ

ಬಂದಿದೆ ಹೊಸ ದಿನ ಹೊತ್ತು ಹೊಸತನ
ಬದುಕಿನ ಹಾದಿಯ ಮೆಟ್ಟಿಲಲಿ
ತಂದಿದೆ ಹೊಸ ಕಳೆ ಮೆತ್ತಿ ಮಧುವಿನ
ಸವಿಯನು ಸರ್ವರ ಮನಸಿನಲಿ

ರಾಜಗು ಮಂತ್ರಿಗು ಪ್ರಜೆಗೂ ಇಹುದು
ಇಪ್ಪತ್ನಾಲ್ಕು ಗಂಟೆ ಇಲ್ಲಿ
ಬಹು ನಾಜೂಕಲಿ ಬಳಸಲು ಬೇಕಿದೆ
ಸಾಧನೆ ಶಿಖರವ ಏರುತಲಿ 

ಅದೇ ರವಿ ಅದೇ ಚಿಲಿಪಿಲಿಯಾದರೂ
ನವ ಭಾವಗಳು ಹೊಮ್ಮುವವು
ಧರೆಯ ಮಾಸಗಳು ಬದಲಾಗುತ ಸಾಗುವ
ಹಾಗೆಯೇ ಬಾಳಿನ ಕ್ಷಣಗಳವು

ಹೊಸದಿನ ಹೊಸಮನ ತೆರೆಯಲಿ ಹೊಸತನು
ನವ ಕನಸುಗಳು ಮೂಡುತಲಿ
ನಾವೀನ್ಯ ಬೇಕಿಂದು ಎಲ್ಲರ ನೆನಪಿಗೆ
ಸಾಧನೆ ಪಥದಲಿ ಏರುತಲಿ..
@ಹನಿಬಿಂದು@
20.03.2024

ಆಧುನಿಕ ವಚನಗಳು

ಆಧುನಿಕ ವಚನಗಳು
1. ವಚನ -೧
ಬೇಡದ ತಿಂದು ಹೊಟ್ಟೆಯ ಬೆಳೆಸುತ
ಖಾಯಿಲೆ ಬಂದಾಗ ದೇವರ ದೂರುತ
ಸಾಗುವ ಮನುಜಗೆ ಏನೆನ್ನಬೇಕೋ ಈಶಾ...

2. ವಚನ -೨

ಧರೆಯಲಿ ಹುಟ್ಟಿಹ ಕೋಟಿ ಜೀವಿಯಲಿ
ಮಾನವ ಒಂದು ತಿಳಿದಿರಲಿ
ಪರ ಜೀವಿಗಳ ಬದುಕನು ಕೊಲ್ಲುತ ತಾ ಮೆರೆಯಲುಂಟೆ ಈಶಾ..

3. ವಚನ -೩

ಬದುಕೊಂದು ಸಂತೆ ಅದರೊಳಗೆ ನೀ ಒಬ್ಬನಂತೆ
ಸರ್ವರೊಡನೆ ಹೊಂದಿ ಬಾಳಲು ಸ್ವರ್ಗ ಸುಖ
ನಾನು ನಾನೇ ನನ್ನದು ನನಗೇ ಎನುತಿರಲು
ಇಲ್ಲೇ ನರಕ ಕಾಣೋ ಈಶಾ..
@ಹನಿಬಿಂದು@
20.03.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -223

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ ಬಂಗಾರದ -223

   ಪರೀಕ್ಷಾ ಸಮಯವಿದು. ಇಲ್ಲಿ ನಾನು ಇದರ ಬಗ್ಗೆ ಶಿಕ್ಷಕಿಯಾಗಿ ಇದ್ದುಕೊಂಡು ಕೂಡಾ ಬರೆಯದೆ ಹೋದರೆ ಅದು ತಪ್ಪಾಗುತ್ತದೆ. ಈ ಅಂಕಣ ಪರೀಕ್ಷಾ ಸಿದ್ಧತೆ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮೀಸಲು. ಹಾಗಾಗಿ ಮೊದಲನೆಯದಾಗಿ ರಾಜ್ಯ, ರಾಷ್ಟ್ರದ ವಿವಿಧ ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿರುವ , ಪರೀಕ್ಷೆಗೆ ತಯಾರಿ ನಡೆಸುತ್ತಿರುವ  ಎಲ್ಲಾ  ವಿದ್ಯಾರ್ಥಿಗಳಿಗೂ ಶುಭವಾಗಲಿ ಎಂದು ಆಶಿಸುತ್ತಾ, ಪರೀಕ್ಷೆ ಎಂದರೆ ಪೆಡಂಭೂತವಲ್ಲ, ಆದರೆ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಲು ನಾವು ಕಲಿಯಬೇಕು. ಪರೀಕ್ಷೆ, ಅದರಲ್ಲೂ ಪಬ್ಲಿಕ್ ಪರೀಕ್ಷೆ ಎಂದರೆ ಮನದಲ್ಲಿ ಏನೋ ಅಳುಕು. ಹೇಗೆ ಆಗುವುದೋ ಎಂಬ ಭಯ. ಪ್ರತಿ ಪ್ರಶ್ನೆಗೂ ಉತ್ತರ ಇದ್ದೇ ಇದೇ ಎನ್ನುವ ಮಾತು ನೆನಪಿನಲ್ಲಿ ಉಳಿದರೆ ಸಾಕು. 
   ನನ್ನ ಸುಧೀರ್ಘ ಇಪ್ಪತ್ತು ವರ್ಷಗಳ ಬೋಧನೆಯ ಅನುಭವದಲ್ಲಿ ನಾನು ಕಂಡುಕೊಂಡದ್ದು ಏನೆಂದರೆ ಮನಸ್ಸಿನಲ್ಲಿ ಗಟ್ಟಿ ನಿರ್ಧಾರ ಯಾರಿಗೆ ಇಲ್ಲವೋ ಅಂತಹ ವಿದ್ಯಾರ್ಥಿ ಹಿಂದುಳಿಯುತ್ತಾನೆ. ಯಾವ ಶಿಕ್ಷಕರೂ ಕೂಡ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಿ ಖುಷಿ ಪಡುವ ಅಥವಾ ಮಜಾ ತೆಗೆದುಕೊಳ್ಳುವ ಗುಣವನ್ನು ಹೊಂದಿಲ್ಲ. ಹಾಗೆ ಯಾರೂ ಮಾಡಲಾರರು ಕೂಡ. ಹೇಗಾದರೂ ಸರಿ , ಮಗು ಉತ್ತೀರ್ಣರಾಗಿ ಮುಂದೆ ಹೋಗಲಿ ಎಂಬುದು ಎಲ್ಲರ ಧ್ಯೇಯ ಆಗಿರುತ್ತದೆ. ಇನ್ನು ಜಿಲ್ಲೆ - ಜಿಲ್ಲೆಗಳ ನಡುವೆ, ತಾಲೂಕುಗಳ ನಡುವೆ, ಕ್ಲಸ್ಟರ್ ಗಳ ನಡುವೆ ಅಂಕಗಳ, ಕ್ಯೂಪಿಐ ಗಳ ನಡುವೆ ಸರ್ಧೆ ಯಾಕಿಟ್ಟರೋ ತಿಳಿಯದು. ಬಹುಶಃ ಆ ಸ್ಪರ್ಧಾತ್ಮಕ ಮನೋಭಾವದಿಂದಲಾದರೂ ಕಲಿಕಾ ಸಾಮರ್ಥ್ಯ ಹೆಚ್ಚಲಿ ಎಂದು ಆಗಿರಬಹುದು. ಆದರೆ  ರ್ಯಾಂಕ್ ಪದ್ಧತಿ ತೆಗೆದ ಬಳಿಕ ಇದು ಪ್ರತಿ ಜಿಲ್ಲೆಯ, ತಾಲೂಕಿನ, ಕ್ಲಸ್ಟರ್, ಶಾಲೆಯ, ಊರಿನ, ಕುಟುಂಬದ ಮರ್ಯಾದೆ ಪ್ರಶ್ನೆ ಆದ ಹಾಗಿದೆ. ಸ್ಪರ್ಧಾತ್ಮಕ ಯುಗ ನೋಡಿ, ನಾವು ಅದಕ್ಕೆ ಹೊಂದಿಕೊಂಡರೆ  ಮಾತ್ರ ಬದುಕು ಸಾಧ್ಯ. ಏಕೆಂದರೆ ಸಮಾಜವನ್ನು ಹೊರತುಪಡಿಸಿ ಮಾನವ ಒಂಟಿಯಾಗಿ ಬದುಕಲು ಕಷ್ಟ. ಮುಂದಿನ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಾರ್ಯ ಶಾಲೆಗಳಿಂದಲೆ ಪ್ರಾರಂಭ ಆಗುವಾಗ, ನಮ್ಮ ಶಾಲೆಯ ಫಲಿತಾಂಶ ಮುಂದಿರಬೇಕು, ಚೆನ್ನಾಗಿ ಇರಬೇಕು, ಎಲ್ಲರಿಗಿಂತ ಹೆಚ್ಚಿರಬೇಕು, ನಾವೇ ಮೊದಲಿಗರಾಗಿ ಬರಬೇಕು ಮುಂತಾದ ಭಾವನೆಗಳು ಆಟೋಟ, ದುಡಿಮೆಗಳ  ಹಾಗೆ ಪಾಠದಲ್ಲಿ ಕಲಿಕೆಯಲ್ಲೂ ಬರಬೇಕೆಂಬ ಆಶಯ ಇರಬಹುದು. 
   ಇಂದಿನ ಜನಾಂಗ ಯಾರಿಗೆ ಯಾರೂ ಕಮ್ಮಿ ಇಲ್ಲ. ಎಲ್ಲರೂ ಬುದ್ದಿವಂತರೇ. ಒಬ್ಬೊಬ್ಬರ ಬಳಿ ಒಂದೊಂದು ವಿಶೇಷ ಎನ್ನುವ ಗುಣ ಅವರ ಹುಟ್ಟಿನಲ್ಲೆ ಮೆದುಳಿನ ಒಳಗೆ ಐಕ್ಯವಾಗಿ ಬೆಳೆದು ಬಿಟ್ಟಿದೆ. ಹಾಗಿರುವಾಗ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಜನ ಪರಿಪೂರ್ಣ ಅಂಕಗಳನ್ನು  ಪಡೆಯುತ್ತಾರೆ ಮತ್ತು ಅನುತ್ತೀರ್ಣರಾಗುವ ವಿದ್ಯಾರ್ಥಿಗಳು ತೀರಾ ಕಡಿಮೆ, ಹಿಂದಿನ ಹಾಗಿಲ್ಲ. ಮಾಧ್ಯಮಗಳು ಬೆಳೆದ ಕಾರಣ ಸಮಯ ಒಂದಿದ್ದರೆ ಓದಲು ಸಿಗುವ ವಸ್ತುಗಳ ಸಂಖ್ಯೆ ಅಪರಿಮಿತ. ಇಂಟರ್ ನೆಟ್ ನಮ್ಮ ಕೈಯಲ್ಲೇ ಇರುವ ಕಾರಣ ಯಾರು, ಯಾವ ಮೂಲೆಯಲ್ಲಿ ಶಾಲೆಯಲ್ಲಿ ಇರುವ ಯಾವ ಶಿಕ್ಷಕ ಅಥವಾ ವಿದ್ಯಾರ್ಥಿಯ ಬಳಿ ಬೇಕಾದರೂ ಮಾತನಾಡಿ ವಿಷಯ ಸಂಪಾದಿಸಬಹುದು. ಅಷ್ಟೇ ಯಾಕೆ, ಶಿಕ್ಷಕರು ಹೇಳುವ ಮೊದಲೇ ಸಾಮಾಜಿಕ ಜಾಲ ತಾಣಗಳ ಮೂಲಕ ಯೂಟ್ಯೂಬ್ ಗಳಿಂದ ಆ ವಿಷಯದ ಹೆಚ್ಚಿನ ಮಾಹಿತಿ ಪಡೆಯಬಹುದು, ಇನ್ನು ಈಗ ಗುರುಗಳನ್ನು ಮೀರಿಸಿದ ವಿದ್ಯಾರ್ಥಿಗಳು ಹೆಚ್ಚು ಇರುವರು. 
           ಆಟೋಟ, ವಿಜ್ಞಾನ ಪ್ರಯೋಗ, ಬರವಣಿಗೆ, ನಾಟಕ, ಹಾಡು,  ಸಂಗೀತ ವಾದ್ಯಗಳು, ವಿವಿಧ ಪ್ರಕಾರಗಳ ನೃತ್ಯ, ಚಿತ್ರಕಲೆ , ಭಾಷಣ, ಕಾರ್ಯಕ್ರಮ ನಿರೂಪಣೆ, ಛದ್ಮವೇಷ , ಪಠಣ, ವ್ಯಾಖ್ಯಾನ, ಅಭಿನಯ, ಟೆಕ್ನಾಲಜಿಯ ಉಪಯೋಗ, ಇವೆಲ್ಲ ಕ್ಷೇತ್ರಗಳಲ್ಲೂ ಮುಂದಿರುವ ವಿದ್ಯಾರ್ಥಿ, ನಾಳಿನ ಭಾರತದ ಭವ್ಯ ಶಿಲ್ಪಿಗಳು ಹಾಗೂ ನಾಯಕರಾದ ಮಕ್ಕಳು ಕನಿಷ್ಠ ಅಂಕ ಪಡೆದು ತೇರ್ಗಡೆ ಹೊಂದುವುದು ಯಾವ ಲೆಕ್ಕ?
       ಮನಸ್ಸಿನ ಧೃಢ ಸಂಕಲ್ಪ ಮುಖ್ಯ. ನಾನು ಮಾಡಿಯೇ ತೀರುತ್ತೇನೆ ಎನ್ನುವ ಆತ್ಮ ವಿಶ್ವಾಸ ಮುಖ್ಯ. ಇಂದು ಉತ್ತೀರ್ಣರಾಗುವುದು ಕಷ್ಟದ ಮಾತೇ ಅಲ್ಲ. ಬೇಕಂತ ಬರೆಯದೆ ಹಾಗೆ ಆಗುವವರು ಕೂಡಾ ಇದ್ದಾರೆ. ಒಂದು ತರಗತಿಯಲ್ಲಿ ಒಬ್ಬರೋ ಇಬ್ಬರೋ ಕಲಿಕೆಯಲ್ಲಿ ಹಿಂದೆ ಬೀಳುವರು ಇರುವುದು ಅಪರೂಪ ಏನಲ್ಲ, ಅದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದುದು. ಅದರಲ್ಲಿ ಯಾವ ತಪ್ಪೂ ಇಲ್ಲ. ಹಾಗಿರುವಾಗ ಶೇಕಡಾ ನೂರು ಫಲಿತಾಂಶ ಎಲ್ಲಾ ಶಾಲೆಗಳಲ್ಲೂ ಬರಬೇಕು ಎಂಬ ಒತ್ತಡದ ನಡುವೆ ಬದುಕುತ್ತಿರುವ, ದುಡಿಯುತ್ತಿರುವ , ಓದುತ್ತಿರುವ ಜನರು ಪ್ರಯತ್ನ ಪಡುತ್ತಾರೆ ಅಷ್ಟೇ. ಎಲ್ಲವೂ ವಿದ್ಯಾರ್ಥಿಗಳ ಶ್ರಮ, ಕಲಿಕಾ ಮಟ್ಟದ ಜೊತೆಗೆ ಅವರ ಮನದ ಭಾವಗಳ ಮೇಲೆ ಅವಲಂಬಿತ ಆಗಿದೆ.
     ಕಡಿಮೆ  ಕಲಿಕಾ ಸಾಮರ್ಥ್ಯ ಇದ್ದ ವಿದ್ಯಾರ್ಥಿ ಒಬ್ಬ ಎಷ್ಟು ಕಲಿತರೂ ವಿಷಯ ನೆನಪಿನಲ್ಲಿ ಉಳಿಯದೆ, ಸ್ವಂತ ಬರೆಯಲು ಕೂಡಾ ಬಾರದೆ ಇದ್ದಾಗ ಏನು ಗೊತ್ತೋ ಅದನ್ನೇ ಬರೆದು ತಾನು ಪಾಸ್ ಆಗಲಿ ದೇವರೇ ನಿನಗೆ ಮಂಗಳಾರತಿ ಮಾಡಿಸ್ತೇನೆ ಅಂತ ಹರಕೆ ಹೊತ್ತುಕೊಂಡು ದೇವರ ಸಹಾಯದಿಂದ ಪಾಸ್ ಆದರೆ, ಇನ್ನೊಬ್ಬ ಪೇಪರ್ ಮೇಲೆ ದಯವಿಟ್ಟು ನನ್ನನ್ನು ಪಾಸ್ ಮಾಡಬೇಡಿ, ನನಗೆ ಕಾಲೇಜಿಗೆ ಹೋಗಲು ಇಷ್ಟ ಇಲ್ಲ, ನಾನು ಮಠಕ್ಕೆ ಸ್ವಾಮೀಜಿ ಆಗಲು ಹೋಗಬೇಕು, ಪಾಸ್ ಆದರೆ ಮನೆಯವರು  ಕಾಲೇಜಿಗೆ ಕಳುಹಿಸುತ್ತಾರೆ ಎನ್ನುತ್ತಿದ್ದ. 
   ಶಿಕ್ಷಕರೊಬ್ಬರು ಹೇಳಿದ ಹಾಗೆ ಈಗ ಉಪ್ಪು ಗಂಜಿ ತಿಂದು ಬರುವ ಜನಾಂಗದ ಮಕ್ಕಳಲ್ಲ, ಬದಲಾಗಿ ನೂಡಲ್ಸ್, ಪಿಜ್ಜಾ, ಬರ್ಗರ್ ಅಂತ ಮಾಡ್ರನ್ ಫುಡ್ ತಿಂದು ಬೆಳೆದ ವೆರೈಟಿ ಯೋಚನೆಯ ಮಕ್ಕಳು. ಹೇಗೂ ಜನಸಂಖ್ಯೆಯಲ್ಲಿ ಭಾರತಕ್ಕೆ ಮೊದಲ ಸ್ಥಾನ. ಮಾನವ ಸಂಪನ್ಮೂಲದ ಸದ್ಬಳಕೆ ದೇಶಕ್ಕೆ ಬೇಕಾಗಿದೆ. ಅದೇನೇ ಇದ್ದರೂ ಎಸೆಸೆಲ್ಸಿ, ಪಿಯುಸಿ ಪಾಸ್ ಆಗಲೇ ಬೇಕಿದೆ. ಅದು ಬದುಕಿನ ಪಾಯ. 
ಹೆದರದಿರಿ ವಿದ್ಯಾರ್ಥಿಗಳೇ, ಇನ್ನೂ ವಾರ, ತಿಂಗಳಿನ ಸಮಯವಿದೆ, ಕಾಲ ಇನ್ನೂ ಮಿಂಚಿಲ್ಲ, ಹತ್ತು ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಿ ಕಲಿಯಿರಿ, ಅಲ್ಲದೆ ಶಿಕ್ಷಕರು ಅತಿಮುಖ್ಯ ಎಂದು ಹೇಳಿದ್ದನ್ನು ನೂರು ಸಲ ಬರೆದಾದರೂ ಸರಿ, ಕಲಿಯಿರಿ. ಅಷ್ಟು ಸಾಕು. ಇನ್ನು ಬರವಣಿಗೆ. ಡಾನ್ಸ್ ಹೇಗೆ ಅಭ್ಯಾಸ ಮಾಡಿದರೂ ಪ್ರದರ್ಶನದ ಸಮಯದಲ್ಲಿ ಉತ್ತಮ ವೇಷ ತೊಟ್ಟು ದೂಮ್ ಧಾಮ್ ಆಗಿ ವೈಭವೀಕರಿಸಿ ಕುಣಿಯುವುದಿಲ್ಲವೆ ಈ ಹಾಗೆ, ನಿಮ್ಮ ಪರೀಕ್ಷಾ ಪತ್ರಿಕೆಯ ಎಲ್ಲಾ ವಿಷಯಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರಲಿ, ತಪ್ಪಾದರೆ ನೆಗೆಟಿವ್ ಅಂಕ ಇಲ್ಲವಷ್ಟೆ? ಸರಿ ತಪ್ಪು ತಿದ್ದಲು ಶಿಕ್ಷಕರಿದ್ದಾರೆ, ನಿಮ್ಮ ಟೀಚರ್ ಅಂತೂ ಅಲ್ಲ, ಹಾಗಾಗಿ ಇದುವರೆಗೂ ಕಲಿತ , ಈಗ ಕಲಿತ ಎಲ್ಲಾ ಭಾಷೆ, ಗಣಿತ, ವಿಜ್ಞಾನ, ಸಮಾಜ ನೆನಪಿಸಿಕೊಂಡು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ. ಪಾಸ್ ಅಂತೂ ಆಗ್ತೀರಿ. ಇನ್ನು ಹೈ ಸ್ಕೋರರ್ ಗಳಿಗೆ, ಮೂರು ಪ್ರಿಪರೇಟರಿ ಪರೀಕ್ಷೆಗಳಲ್ಲಿ ಆದ ತಪ್ಪುಗಳನ್ನು ಸರಿ ಪಡಿಸಿಕೊಳ್ಳಿ ಅಷ್ಟೇ. ಯೂ ಆರ್ ದ ವಿನ್ನರ್ಸ್.. ಆಲ್ ದ ಬೆಸ್ಟ್ ಮಕ್ಕಳೇ... ಚೆನ್ನಾಗಿ ಓದಿ ಅಭ್ಯಸಿಸಿ, ಪರೀಕ್ಷೆಗೆ ಹೇಳಿ, "ನಾನು ಒಂಭತ್ತು ವರ್ಷ ಪರೀಕ್ಷೆ ಬರೆದ ಸರ್ವೀಸ್ ಆದ ಮನುಷ್ಯ ನಿನಗೆ ಹೆದರುವ ಅಲ್ಲ " ಅಂತ  ಅಲ್ಲವೇ? ನೀವೇನಂತೀರಿ?
#ಹನಿಬಿಂದು@
16.02.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -224

         ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -224

                  ಹಲವಾರು ಬಾರಿ ಕೆಲವು ಮಹಿಳೆಯರಿಗೆ ಅನ್ನಿಸಬಹುದು ಹೀಗೆ, ಅದೇನೆಂದರೆ "ನಾನು ಬದುಕಿನಲ್ಲಿ ತುಂಬಾ ನೊಂದಿರುವ ಹೆಣ್ಣು, ಕಂಡಿದ್ದು ಬರೀ ನೋವೇ, ಕಷ್ಟ ಕಷ್ಟದ ಮುಳ್ಳಿನ ಹಾದಿ..." ಎಂದು. ಆದರೆ ಕಷ್ಟ ಯಾರಿಗೆ ತಾನೆ ಇಲ್ಲ ಹೇಳಿ? ಕಷ್ಟವೆಂದು ಕೈ ಕಟ್ಟಿ ಕೂತರೆ ಬದುಕು ಸಾಗುವುದೇ? " ನಮಗೆ ಬೇಕಾದದ್ದು ಸ್ವಲ್ಪ ಸಂತೋಷ, ಒಂದಿಷ್ಟು ಹಿಡಿ ಪ್ರೀತಿ, ಆದರೆ ಅದನ್ನು ನಾವು ಎಲ್ಲರಿಂದ ಬಯಸಲು ಸಾಧ್ಯ ಇಲ್ಲ ಅಲ್ಲವೇ? ನಾವು ಹುಡುಕುತ್ತಾ ಹೋದರೂ ಅದು ಒಮ್ಮೆ ಸಿಕ್ಕ ಹಾಗೆ ಅನ್ನಿಸಿದರೂ ಅದು ಮರೀಚಿಕೆ ಅಷ್ಟೇ. ಮತ್ತೆ ನಮಗೆ ನಾವೇ! ಆಗ ನಾವು ಏನು ಮಾಡಬಹುದು? 
      ತಾಳ್ಮೆ, ಒಳ್ಳೆಯ ಮನಗಳ ಜೊತೆ ಬೆರೆಯುವುದು,  ಹಿಂದಿನ ದುಃಖದ  ಕ್ಷಣ ಮರೆಯುವುದು,  ಆರೋಗ್ಯ ಸಮಸ್ಯೆ,  ಜವಾಬ್ದಾರಿಗಳ ಸವಾರಿ, ಒತ್ತಡ ನಿರ್ವಹಣೆಗೆ ಬೇಕಾದ ಮದ್ದು, ಇದೆಲ್ಲಕ್ಕೂ ಬದುಕಲ್ಲಿ ಯಾರು ಜೊತೆ ಆಗುತ್ತಾರೋ ಅವರನ್ನು ದೇವರ ಪ್ರಸಾದ ಎಂದು ಸ್ವೀಕರಿಸಿದ ಜನಗಳು ನಾವಾಗಬೇಕು. ಮತ್ತು ಅವರಿಗೆ ಸಂತಸ ಹಂಚಿ ಖುಷಿಯಿಂದ ಬಾಳುವ ಬಾಳು ನಮ್ಮದಾಗ ಬೇಕು. ನಾವು ಯಾರ ಜೊತೆ ಬದುಕುತ್ತೇವೆಯೋ ಅವರಿಂದ ನಮಗೆ ಖುಷಿ ಸಿಗಬೇಕೇ ಹೊರತು ಮತ್ತೆ ಮತ್ತೆ ನೋವಲ್ಲ. ಮತ್ತೆ ಮತ್ತೆ ನೋವೇ ಕೊಡುವ ಧೂರ್ತರು ನಮ್ಮ ಬದುಕಿಗೆ ಯಾಕೆ ಬೇಕು ಅಲ್ಲವೇ? ನಮ್ಮಿಂದ ಬೇಕಾದ ಎಲ್ಲವನ್ನೂ ಪಡೆದು, ಮತ್ತೆ ನಮಗೆ ನೋವು ಉಣಿಸುವ ಮುಖಗಳು ನಮ್ಮ ಬಾಳಿನಿಂದ ತೊಲಗಲಿ. ಅವರಿಗೆ ಎಲ್ಲಿ, ಹೇಗೆ, ಯಾರ ಜೊತೆ ಖುಷಿ ಸಿಗುವುದೋ ಅಲ್ಲೇ ಇರಲಿ. ನಾವು ನಾವಾಗಿ ನೆಮ್ಮದಿಯಿಂದ ನಾಲ್ಕು ದಿನ ಬಾಳೋಣ, ಅಲ್ಲವೇ? 

       ದೇವರ ವರ ಪ್ರಸಾದ ಒಮ್ಮೆ ಮಾತ್ರ ಸಿಗಲು ಮತ್ತು ಅದನ್ನು ನಾವು ಸ್ವೀಕರಿಸಲು ಸಾಧ್ಯ ಅಲ್ಲವೇ.ಹಾಗೆಯೇ ಜನರ ಹಾಗೂ ನಮ್ಮ ಪ್ರೀತಿ ಕೂಡಾ. .ಹಾಗಾಗಿ ನಮ್ಮ ಹೃದಯದಲ್ಲಿ ನೋವೇ ಇದ್ದರೂ ಮೋಸ, ವಂಚನೆ, ತಿರಸ್ಕಾರ ಎಂದಿಗೂ ಇರಬಾರದು. ನಮ್ಮ ಬದುಕು ದೇವರ ಜೊತೆಗೆ ಇರಬೇಕು. ನಾವು ಕಷ್ಟ ಸುಖ ಹಂಚಿಕೊಳ್ಳುವುದು ಕೂಡ ಆ ದೇವರ ಜೊತೆಗೇ ಆಗಿರಬೇಕು. ಮಾತು, ಹರಟೆ, ನೋವು ಎಲ್ಲಾ ಆ ದೇವರ ಜೊತೆ ವಿನಿಮಯ ಆದರೆ ದೇವರು ಇನ್ನೊಬ್ಬರಲ್ಲಿ ಆಡಿಕೊಂಡು ನಗುವುದಿಲ್ಲ ಅಲ್ಲವೇ? ಏನಾದರೂ ಬೇಡುವುದು ಇದ್ದರೆ ಅದು ಸಹ ಆ ದೇವರಲ್ಲಿಯೇ ಕೇಳಿಕೊಳ್ಳಬೇಕು. ಏಕೆಂದರೆ ಮಾನವ ಕೊಟ್ಟರೆ ಮನೆ ತನಕ, ದೇವರು ಕೊಟ್ಟರೆ ಕೊನೆ ತನಕ ಅಂತ ಗಾದೆ ಇದೆ ಇಲ್ಲವೇ? ಬದುಕಿನಲ್ಲಿ ದೇವರು ಒಳ್ಳೆಯವರನ್ನೇ  ಕೊಡುತ್ತಾರೆ ಅಂದುಕೊಂಡು ಸ್ವೀಕರಿಸಿ ಮೋಸ ಹೋದವರು ಅದೆಷ್ಟೋ ಜನರು ಇರಬಹುದು. ನಾವು ಒಮ್ಮೆ ಪಡೆದ ನೋವಿಗೆ ಔಷಧಿಗಳನ್ನು ಮಾಡುವುದೇ  ಈ ಬದುಕು. ಮನಸ್ಸಿನ ನೋವಿಗೆ ಇದುವರೆಗೂ ಯಾವ ಮುಲಾಮು ಕೂಡ ಬಂದಿಲ್ಲ, ಪ್ರೀತಿ ಸಾಂತ್ವನಗಳ ಹೊರತಾಗಿ. ಹಾಗಾಗಿ ಮತ್ತೆ ಮತ್ತೆ  ಕೋಮಕ್ಕೆ ಹೋಗುವ ಮೊದಲೇ ಆಲೋಚನೆ ಮಾಡಬೇಕು. ಯಾರು ನಮ್ಮನ್ನು ಅರ್ಧದಲ್ಲೇ ಬಿಟ್ಟು  ಎಲ್ಲೇ ಹೋದರೂ, ನಾವು ಯಾವ ಮಟ್ಟಕ್ಕೆ ಹೋದರೂ, ಬದುಕುವ ಶಕ್ತಿ ನಮಗೆ ಇದೆಯೇ ಎಂದು. ನಮ್ಮನ್ನು ಈ ಸ್ಥಿತಿಗೆ ತಲುಪಿಸಿದ ಆ ವ್ಯಕ್ತಿಗಳು ಎಂದಾದರೂ ಬದಲಾಗ ಬಲ್ಲರೆ? ನಾವು ಅವರ ಜೊತೆ ಇದ್ದರೆ ನಿಜ ಖುಷಿ ಸಿಗುವುದೇ ಎಂದು ಅಳೆದು, ಸುರಿದು, ತೂಗಿ ನೋಡಬೇಕು. ಕೆಲವೊಮ್ಮೆ ಅಲ್ಲೂ ತಪ್ಪುತ್ತೇವೆ. ಏಕೆಂದರೆ ಭವಿಷ್ಯ ಅರಿತವ  ಆ ದೇವರು ಮಾತ್ರ. ನಮ್ಮ ಪುಣ್ಯ ಹಾಗೂ ಕರ್ಮ ಫಲಗಳು ಚೆನ್ನಾಗಿ ಇರಬೇಕು ಅಲ್ಲವೇ? ಅದಾಗಲೇ ಉತ್ತಮ ಮನಗಳು ನಮ್ಮ ಜೊತೆಗೆ ಇರಲು ಸಾಧ್ಯ. 
    ತುಂಬಾ ನಾಜೂಕಿನ ಬದುಕು ಇದು ಅಂತ ನಿಮಗೆ ಆಗಾಗ ಅನ್ನಿಸುವುದಿಲ್ಲವೇ? ಒಮ್ಮೆ ಒಬ್ಬರಿಗೆ ಮಾತು ಕೊಟ್ಟ ಮೇಲೆ ನಿಭಾಯಿಸುವುದು ನಮ್ಮ ಧರ್ಮ,  ಆದರೆ ಕುಡುಕರು, ನಾನೇ ಸರಿ ಎಂದು ವಾದಿಸುವವರು, ಕಟುಕರು, ಕಬ್ಬಿಣದ ಹೃದಯದವರು, ಕಣ್ಣಲ್ಲಿ ರಕ್ತ ಇಲ್ಲದವರು, ಪರರ ಜೊತೆ ನಮ್ಮನ್ನು ಹೋಲಿಸಿ ನಾವು ಸರಿ ಇಲ್ಲ ಎಂದು ಹೀಗಳೆವ  ಜನ, ನಮ್ಮ ಜೊತೆ ಮತ್ತು ಸಂಶಯ ಪಿಶಾಚಿಗಳ ಜೊತೆ ಬಾಳು ಸಾಧ್ಯ ಇಲ್ಲ ಎಂದು ಹತ್ತು ಇಪ್ಪತ್ತು ವರ್ಷಗಳ ಕಷ್ಟ , ನೋವು ಹಾಗೂ ಕಣ್ಣೀರಿನಲ್ಲಿ ಅರಿತ ಬಳಿಕ ಅವರ ಜೊತೆಯಲ್ಲಿಯೇ ಚೆನ್ನಾಗಿ ಬಾಳುತ್ತವೆ, ಅವರು ಇಂದಲ್ಲ ನಾಳೆ ಬದಲಾಗುತ್ತಾರೆ ಎಂಬ ಅದು ಯಾವ ಭಂಡ  ಧೈರ್ಯ ನಮ್ಮಲ್ಲಿ ಮೊಳೆಯಲು ಸಾಧ್ಯ? ಮತ್ತೆ ನಮಗೆ ಬೇಕಾದದ್ದು ಇಷ್ಟೇ ಒಂದಷ್ಟು ಖುಷಿ
ಒಂದು ಹಿಡಿ ಪ್ರೀತಿ ಅಷ್ಟೇ. ತಪ್ಪು ನಮ್ಮದೂ ಇರಬಹುದು ಎಂದು ಅರಿತು, ಕೆಲವೊಮ್ಮೆ ಸಂಬಂಧ ಸರಿಯಾಗಿ ನಿಭಾಯಿಸಲು ನಮ್ಮ ತಪ್ಪೇ ಇಲ್ಲದೆ ಹೋದರೂ, ಕ್ಷಮೆ ಕೇಳಬೇಕಾಗುತ್ತದೆ. 
        ಮನುಜರು ಅಂದ ಮೇಲೆ ತಪ್ಪುಗಳು ಸಹಜ ತಾನೇ? ಕ್ಷಮಾ ಗುಣವೂ , ಒಪ್ಪಿಕೊಳ್ಳುವ ಗುಣವೂ ಎರಡೂ ಇರಬೇಕು ತಾನೇ? ಆದರೆ ಆ ತಪ್ಪು ಖಂಡಿತವಾಗಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶಕ್ಕಾಗಿ ಆಗಬಾರದು ಅಷ್ಟೇ. ಮೋಸ ಮಾಡಲಿಕ್ಕಂತೂ ಹೋಗಬಾರದು. ಅದು ಎಂದಿಗೂ ಕೆಟ್ಟದ್ದೇ. ಬದುಕಿನಲ್ಲಿ ಖುಷಿ ಕಳೆದುಕೊಂಡ ನಾವು ಇತರರ ಬಾಳಿಗೂ ಖುಷಿ ಕೊಡಲು ಬಯಸುವವರಾಗಬೇಕು. ಕಾರಣ ನಾವು ಬಯಸಿದ್ದನ್ನೇ ಇತರರು ಕೂಡಾ ಬಯಸುತ್ತಾರೆ. ಮಾನವ ಸಹಜ ಗುಣ. ಪ್ರೀತಿ, ಪ್ರೇಮ, ಶಾಂತಿ, ಸಹನೆ, ನೆಮ್ಮದಿ,ಕ್ಷಮೆ, ಉತ್ತಮ ಆರೋಗ್ಯ ಬೇಕು, ಜೊತೆಗೆ ಒಂದಷ್ಟು ಹಣ, ಆಸ್ತಿ, ಜಾಗ, ಮನೆ, ಒಡವೆ. ಇದು ಸರ್ವರ ಕೋರಿಕೆ ಅಲ್ಲವೇ?ಪ್ರೀತಿ, ಸಣ್ಣ ಪುಟ್ಟ ಸಂತೋಷ ಕೊಡುವ ಧೈರ್ಯದ ಬಗ್ಗೆ ನಮಗೂ ಅರಿವು ಇರಬೇಕು. ಅದನ್ನೇ ನಾವು ಪರರಿಂದ ಬಯಸುವ ಬದಲು ನಾವೂ ನೀಡಬೇಕು. ನಾವು ಏನು ಬಯಸುತ್ತೇವೆಯೋ ಅದನ್ನೇ ನಮ್ಮೊಡನೆ ಇರುವ ಹೃದಯಗಾಳಿಗೂ ಧಾರೆ ಎರೆಯ ಬಯಸೋಣ. ಹುಡುಕುತ್ತಾ ಹೋದರೆ ಬದುಕಿಗೆ ಸಾವಿರ ಜನ ಸಿಗಬಹುದು. ಆದರೆ ಅದರಲ್ಲಿ ಪ್ರೀತಿಯ ಒಂದು ಮನವ ಮಾತ್ರ  ಬಯಸುವುದು ಅಲ್ಲವೇ? ಪ್ರಾಣಿಗಳು ಕೂಡಾ ಒಂದೇ ಪಾಟ್ನರ್ ನ್ನು ಸೆಲೆಕ್ಟ್ ಮಾಡುತ್ತವೆ. ಮಾನವತೆ ಮೆರೆವ ನಿಷ್ಕಲ್ಮಶ ಹೃದಯ ಮಾತ್ರ ನಮಗೆ ಬೇಕಾಗಿದೆ ಅಲ್ಲವೇ? ನನಗೆ ಸುಖ ನೀಡು ಎನ್ನುವ ಬದಲು, ನಿನ್ನ ಬಾಳಿಗೆ ನಾನು ಎಂದೆಂದೂ ಬೆಳಕಾಗಿ ಇರುತ್ತೇನೆ, ನಿನ್ನ ಜೀವನದ ಕಟ್ಟ ಕಡೆಯ ದಿನದವರೆಗೂ ನಾ ನಿನ್ನ ಬಾಳಿನಲ್ಲಿ ಜೊತೆಯಾಗಿಯೇ ಇರುವ ಮಾತು ಕೊಡುತ್ತೇನೆ ಎನ್ನುವ ಜೀವ ನಮ್ಮನ್ನು ಕಾಯುತ್ತದೆ. ಆದರೂ ಕೆಲವೊಮ್ಮೆ ಆ ಲೆಕ್ಕಾಚಾರವೂ ತಪ್ಪಾಗುತ್ತದೆ. ಕೇವಲ ಬಾಯಿ ಮಾತಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಹಾಗೆ ಹೇಳಿರಲೂ ಬಹುದು.ತದ ನಂತರ ನಂಬಿಸಿ, ನಂಬಿಕೆಗೆ ದ್ರೋಹ ಮಾಡುವವರು ಇಲ್ಲ ಎಂದಲ್ಲ ಅಲ್ಲವೇ? 
      ಎಲ್ಲೋ ಸಣ್ಣ ಪುಟ್ಟ ತಪ್ಪುಗಳಾದರೆ ಕ್ಷಮೆ ಇರಲಿ ಅಲ್ಲವೇ?
ಕ್ಷಮಿಸಲು ಸಾಧ್ಯ ಆಗದ ತಪ್ಪುಗಳಿದ್ದರೆ ಶಿಕ್ಷೆಯೇ ಬರಲಿ. ಯಾರೂ  ನಮ್ಮ ನಂಬಿಕೆಗೆ ದ್ರೋಹ ಬಗೆಯಲಾರರು ಎಂದು ಹೇಳುವ ಹಾಗಿಲ್ಲ, ನಾವು ಹಾಗೆ ಮಾಡುವುದೇ ಇಲ್ಲ ಅಂತ ಬದುಕಬೇಕು ಅಷ್ಟೇ. ನಮ್ಮ ಪ್ರೀತಿಗೆ ಮೋಸ ಆಗಲಾರದು ಎಂಬ ಭಾವನೆ ಇಲ್ಲದೆ ಸಾಗುತ್ತಾ ಇರುತ್ತೇವೆ. ನಾಜೂಕಿನ ಬದುಕಿನಲ್ಲಿ ಕೇಳಿದ್ದು ನೋಡಿದ್ದು ಯಾವುದೂ ಸುಳ್ಳು ಆಗಬಹುದು. ಆದರೆ ಅನುಭವಿಸಿದ್ದು ಮಾತ್ರ ಸತ್ಯ. ಅದನ್ನು ಮರೆಯಲು ಸಾಧ್ಯವೇ ಇಲ್ಲ. ಹಾಗಂತ ಬದುಕು ನಿಲ್ಲದು. ನಾವು ಏನು ಎಂದು ನಮಗೆ ಗೊತ್ತಿರಬೇಕು. ನಮ್ಮ ಜೊತೆಗೆ ಇರುವವರು ಹೇಗೆ ಇದ್ದಾರೆ ಎಂಬುದನ್ನು ಕೂಡಾ ನಾವು ಅರ್ಥ ಮಾಡಿಕೊಳ್ಳ ಬೇಕು. ನಮ್ಮನ್ನು ಒಟ್ಟಾಗಿ ಇತರ ಜನರ ಜೊತೆ ಸೇರಿಸುವುದು ಆ ದೇವರು. ಆ ದೇವರ ಸಂಬಂಧ ಕೆಡುಕಾಗದು.ನಮ್ಮ ಮನಸ್ಸು ಸ್ಥಿರವಾಗಿ ಇರಬೇಕು. ನಮ್ಮಲ್ಲಿ
ಕೆಟ್ಟ ಭಾವನೆಗಳು ಬರಬಾರದು. ಯಾವತ್ತಾದರೂ ನಮ್ಮವರು ನಮ್ಮವರೇ. ಯಾರು ಏನೇ ಅಂದರೂ ಅವರು ಪರರಲ್ಲ. ಅವರಲ್ಲಿ ನಮ್ಮ ನಂಬಿಕೆ ಹೇಗಿದೆ ಎಂಬುದನ್ನು ನಾವು ಅರಿತಿರಬೇಕು.
       ನಾವೇ ಸಮಾಜ ಅಲ್ಲವೇ?  ಕ್ಷಮೆ ನಮ್ಮಲ್ಲಿ ಇರಬೇಕು.
ಯಾವ ಮನುಜನೂ ನೂರು ಶೇಕಡಾ ಸರಿ ಇರಲು ಸಾಧ್ಯ ಇಲ್ಲ.
ದೇವರು ಕೂಡಾ ಎಲ್ಲರನ್ನೂ ಒಂದೇ ರೀತಿ ಇಟ್ಟಿಲ್ಲ, ಸೃಷ್ಟಿಸಿಲ್ಲ. 
ಏರು ತಗ್ಗುಗಳ ಜೊತೆ ಆಟವಾಡುತ್ತ ಸಂತಸದಿ ಬದುಕುವುದೇ ಜೀವನ. ಕಷ್ಟ ಸುಖಗಳ ಮೀಲನವಿದು. ಮನದ ಭಾವ ಮುಖ್ಯ ಇಲ್ಲಿ. ಚೆನ್ನಾಗಿ ಬದುಕಲು ಒಂದಿಂಚೂ ಕೆಟ್ಟದು ಅಲ್ಲಿ ಸುಳಿಯಬಾರದು. ನಮ್ಮದು ಎಂದರೆ ಅದು ನಮ್ಮದು ಮಾತ್ರ. ಪ್ರೀತಿಯಲ್ಲಿ ಹೊಟ್ಟೆಕಿಚ್ಚು, ಮತ್ಸರ ಆಗಾಗ ಸುಳಿಯುತ್ತದೆ. ನಮ್ಮ ಪದಗಳಿಂದ,  ಮಾತಿನಿಂದ ಪರರ ನೋಯಿಸಿ ನಾವು ಚೆನ್ನಾಗಿ ಬದುಕಲು ಆಗದು. ನಮ್ಮ ಪ್ರೀತಿ ಪಾತ್ರರರನ್ನು ಅವರು ನಮಗೆ ಬೇಕಾದರೆ ಅವರನ್ನು ಬೇರೆಯವರ ಪಾಲಾಗಲು ಬಿಡಬಾರದು. 
             ಏಕೆಂದರೆ ನೀರು ಸಮುದ್ರದ ಕಡೆ ಹರಿದ ಹಾಗೆ
ಮನಸ್ಸು ಶಾಂತಿ ನೆಮ್ಮದಿ ಸಂತಸದ ಕಡೆ ಹರಿಯುತ್ತದೆ. ನಾವು ಇಷ್ಟ ಪಟ್ಟವರಿಗೆ ಅದು ನಮ್ಮ ಕಡೆಯಿಂದಲೇ ಹರಿಯಬೇಕು. 
ನಮಗೆ ಬೇಡದವರು ಅದನ್ನು ಹುಡುಕಿ ಎಲ್ಲಿ ಬೇಕಾದರೂ ಹೋಗಲಿ, ಅಲ್ಲವೇ? ಒಟ್ಟಿನಲ್ಲಿ ಎಲ್ಲಾ ಸಂಬಂಧಗಳೂ ಚೆನ್ನಾಗಿರಲಿ. ನೋವು ಪಟ್ಟವರಿಗೆ ಮತ್ತೆ ಮತ್ತೆ ನೋವೇ ಸಿಗದೆ ಇರಲಿ. ಸರ್ವರ ಬಾಳು ಬಂಗಾರವಾಗಲಿ ಎಂದು ಆಶಿಸೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
24.02.2024

ಶುಭಾಶಯಗಳು

ಬೆಳಗಲಿ ಬಾಳು

ಪರರು ಕಂಡ ಹಾಗಲ್ಲ ನೀವು
ಮಾತಿನಲಿ ಮೆಚ್ಚಿಸುವ ಗುಣ ನಿಮ್ಮದಲ್ಲ
ನಿಮ್ಮೊಡನೆ ನಿಮ್ಮಂತೆ ಇರಬೇಕೆಂದರೆ
ಹೃದಯದಲಿ ಮಚ್ಚಿರಬಾರದು..

ಅಬ್ಬಾ..ಅದೇನು ಸಹನೆ ಒಳಗೆ
ಹೊರಗೆ ಜವಾಬ್ದಾರಿಯುತ ದರ್ಪ
ತಪ್ಪು ಮಾಡದಿರೆ ಬಗ್ಗುವ ಮನವಲ್ಲ
ಪ್ರೀತಿಯ ಪ್ರಶ್ನೆಗೆ ಪ್ರೀತಿಯುತ್ತರ

ಪ್ರೀತಿ ಕಡಲಲ್ಲಿ ಮಿಂದೇಳಿಸುವ ಪರಿ
ಪ್ರೀತಿಯಲೆ ಹೃದಯ ಗೆಲುವಿರಿ
ಮುಖದ ಕಿರುನಗೆ ಸರ್ವರಿಗೆ ಓದಲಾಗದು
ಒಂಥರಾ ಸಿಟ್ಟಿನೊಳಗಿನ ಗುಟ್ಟು

ಬಲ್ಲವನೇ ಬಲ್ಲ ಬೆಲ್ಲದ ಸವಿಯ
ನಿಮ್ಮೊಡನೆ ಬೆರೆತವಗೆ ಗೊತ್ತು ನಿಮ್ಮೊಲವ
ಪಡೆದವ ಪುಣ್ಯವಂತ ನಿಮ್ಮ ಗೆಳೆತನವ
ಕತ್ತಿಗೆ ಕತ್ತಿ ಮುತ್ತಿಗೆ ಮುತ್ತು

ಅದೆಷ್ಟು ಗಾಂಭೀರ್ಯತೆ ತುಂಟತನ
 ಎಲ್ಲಾ ಕಲಿಯಬೇಕಿದೆ ನಮ್ಮ ಮನ
ಅದೊಂದು ದಿಟ್ಟತನ, ಛಲ
ಯಾರಿಗೂ ಸೋಲದ ಅಚಲ ಬಲ

ಬೇರೆ ತನ್ನದು ಎನ್ನದ ಭಾವ
ಶಾಂತಿಯ ಬಯಸುವ ಮನೋಭಾವ
ಕೆಟ್ಟದೆಂದರೆ ಆಗದ ಸದ್ಭಾವ
ಮೆಟ್ಟಿ ನಿಲ್ಲುವ ದೃಢ ಸ್ವಭಾವ

ನಿಮಗೆ ನೀವೇ ಸಾಟಿ
ನಿಮ್ಮ ತಿಳಿದವರು ಕಡಿಮೆ
ಅರ್ಥೈಸಿದವರು ಎಂದೂ 
ಮರೆಯಲಾರರು ನಿಮ್ಮೊಲವ ಹಿರಿಮೆ

ಬಾಳಿ ಬದುಕಿ ಸಾವಿರ ವರುಷ
ತುಂಬಿರಲಿ ಸದಾ ಉಕ್ಕುವ ಹರುಷ
ಬರಿದಾಗದೆ ಇರಲಿ ವಿರಸ ಸರಸ
ಸದಾ ಬೆಳಗುತ್ತಾ ಬಾಳ ಖುಷಿ

ಹುಟ್ಟು ಹಬ್ಬದ ರಸ ನಿಮಿಷ
ಬರುತಲಿರಲಿ ವರುಷ ವರುಷ
ತರುತ್ತ ಬಾಳಲಿ ಮತ್ತೆ ಸಂತಸ
ನೆನಪಿಸುತ್ತಾ ಹಿಂದಿನ ನವರಸ

ಶುಭಾಶಯಗಳೊಂದಿಗೆ 
@ಹನಿಬಿಂದು@
25.02.2024

ಪದರಾಜ

ಪದರಾಜ

ಹುಡುಕುವೆ ನಿನಗಾಗಿ
ಪದಮಾಲೆ ಹೆಣೆಯಲು
ಪದದೊಂದಿಗೆ ಪದಕಟ್ಟಿ
ಪಾದ ಪೂಜೆ ಮಾಡಲು..

ಪದದಲ್ಲೆ ಶೃಂಗಾರ ಮಾಡಿ 
ಪದ ಕುಸುಮದಲೆ ಪೂಜೆ
ಪದ ಪುಂಜದ ನಡುವಲೆ
ನಿನ್ನ ಪ್ರತಿಷ್ಠಾಪಿಸಿ ಬಿಡಲು

ಎದೆ ಪದದ ಜಪಮಾಲೆ
ನಿನಗಾಗಿ ಮೀಸಲಾಗಿಸಿ
ಕದ ತೆರೆದು ನೋಡೊಮ್ಮೆ
ನಿನ್ನ ಪದವಿಹುದು ಒಳಗೆ

ನನ್ನ ಪದ ಪ್ರಪಂಚದ ಕಾವಲಿಗ
ನನ್ನೊಳಗಿನ ಭಾವನೆಗಳ
ಪದ ರೂಪಕೆ ತರುವ ಹಂಬಲವ
ಬಿತ್ತುವ ರೈತ ನೀನು..

ಪದ ಪದ್ಮದಲಿ ಮೆರೆವ
ಪಾದುಕಾ ರಾಜನಂತಿರುವ
ಪದಕ ಧರಿಸದೆಯೂ ಮೇಲಿರುವ
ಪದಕ ಪಟ್ಟಿಯ ಮೊದಲ ಸ್ಥಾನ ನಿನಗೆ
@ಹನಿಬಿಂದು@
01.03.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -225

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ  -225

    ನಿನ್ನೆ ತಾನೇ ಮಾರ್ಚ್ 8ಕ್ಕೇ ನಾವೆಲ್ಲ ಬಹಳ ಗಮ್ಮತ್ತಾಗಿ ಶಿವರಾತ್ರಿ ಮತ್ತು ಮಹಿಳಾ ದಿನಾಚರಣೆಯನ್ನು ಆಚರಿಸಿದೆವು. ಶಿವ ಎನ್ನುವುದು ಬ್ರಹ್ಮಾಂಡ ಬ್ರಹ್ಮಾಂಡದ ಧನಾತ್ಮಕ ಶಕ್ತಿಯನ್ನೆಲ್ಲವು ಸೇರಿ ಶಿವ ಎಂಬ ಹೆಸರಿನಿಂದ ಕರೆದು ಅದನ್ನು ಪೂಜಿಸುತ್ತೇವೆ. ದೇವನೊಬ್ಬ ನಾಮ ಹಲವು. ಹಿಂದೂ ದೇವರುಗಳಲ್ಲಿ ಶಿವನಿಗೆ ವರದಿ ಆದಂತಹ ಒಂದು ಭಕ್ತಿಯ ಪರತಷ್ಟೇ ಇದೆ. ಉತ್ತರ ಭಾರತದಲ್ಲಿ ಅಂತೂ ಶಿವನ ದೇವಾಲಯಗಳೇ ತುಂಬಿಹೋಗಿವೆ.  ಪ್ರಾಚೀನ ಕಾಲದಿಂದಲೂ ಶಿವನನ್ನು ಪೂಜಿಸುತ್ತಾ ಬಂದಿದ್ದಾರೆ ಎನ್ನುವುದಕ್ಕೆ ಹರಪ್ಪ ಮೊಹೆಂಜೋದಾರೋನಲ್ಲಿ ದೊರೆತಂತಹ ಪಶುಪತಿ ವಿಗ್ರಹವೇ ಸಾಕ್ಷಿ. ಹಾಗಾಗಿ ಶಿವ ಸಾನಿಧ್ಯದಲ್ಲಿ ಬರೆದ ಸಂತಸವನ್ನು ಪಡೆದವನೇ ವಿವರಿಸಬೇಕಷ್ಟೆ. 
    ಈಗೊಂದಿಷ್ಟು ಹೆಣ್ಣುಮಕ್ಕಳ ಬಗ್ಗೆ. ಹೆಣ್ಣು ಮಕ್ಕಳು ಮನೆಯಲ್ಲಿ ಗಂಡನನ್ನು ತಮ್ಮ ಮುಷ್ಟಿಯೊಳಗೆ ಇಟ್ಟುಕೊಳ್ಳುತ್ತಾರೆ,  ಅವನ ಕುಟುಂಬವನ್ನು ನೋಡಿಕೊಳ್ಳಲು ಬಿಡುವುದಿಲ್ಲ, ಯಾವುದೇ ಕುಟುಂಬದಲ್ಲಿ ಹೆಣ್ಣು ಮಕ್ಕಳ ಗ್ರೇಟ್, ಹೆಣ್ಣು ಮಕ್ಕಳಿಲ್ಲದೆ ಸಂಸಾರ ನಡೆಯುವುದೇ ಇಲ್ಲ, ಹೆಣ್ಣು ಹೊನ್ನು ಮಣ್ಣು ಒಂದೇ , ಹೆಣ್ಣು ಮನೆಯ ಕಣ್ಣು.  ಹೆಣ್ಣು ಗೃಹಲಕ್ಷ್ಮಿ. ಹೆಣ್ಣಿನಿಂದಲೇ ಸಂಸಾರ ಬೆಳೆಯುವುದು ಇವೆಲ್ಲಾ ಹಲವಾರು ಮಾತುಗಳಿವೆ. ಅಲ್ಲದೆ ಹೆಣ್ಣು ಮಕ್ಕಳಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ನೀಡುತ್ತಿದ್ದೇವೆ, ಶೇಕಡಾ 30ರಷ್ಟು ಮೀಸಲಾತಿ ಕೂಡ ಇದೆ. ಎಲ್ಲಾ ಹೆಣ್ಣು ಮಕ್ಕಳ ಕಡೆಗೆ ಇವೆ ನ್ಯಾಯ... ಇವೆಲ್ಲವನ್ನೂ ನಾವು ಪತ್ರಿಕೆಗಳಲ್ಲಿ ಓದುತ್ತೇವೆ, ಭಾಷಣಗಳಲ್ಲಿ ಕೇಳುತ್ತೇವೆ. ಅಷ್ಟೇ. ನಿಜ ಜೀವನದಲ್ಲಿ? 
       ಯಾರೋ ಒಂದು ಶೇಕಡಾ ಹೆಣ್ಣು ಮಕ್ಕಳು ತಾಯಿ ಮನೆಯ ದೌಲತ್ತಿನ ಕಾರಣದಿಂದ ಗಂಡನನ್ನು ಅಮ್ಮಾವ್ರ ಗಂಡ ಆಗಿ ಮಾಡಿ ಕೊಂಡಿರಬಹುದು. ಇನ್ನು ಎರಡು ಶೇಕಡಾದಷ್ಟು ಕಲಿತ ಗಂಡಸರು ತಮ್ಮ ಮಡದಿಯನ್ನು ಅರಿತು ಆಕೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರಬಹುದು. ಎಲ್ಲೋ ಒಂದು ಶೇಕಡಾ ಪತಿರಾಯರು ತಮ್ಮ ಮಡದಿ ಹೇಳಿದ ಮಾತುಗಳನ್ನು ಕೇಳಿ ಅದರಂತೆ ನಡೆದುಕೊಳ್ಳುತ್ತಿರಬಹುದು. ಇನ್ನೂ ಅಬ್ಬಬ್ಬಾ ಎಂದರೆ ಮದುವೆ ಆದ ಬಳಿಕ ನಾನು ಗಂಡನ ಮನೆಯಲ್ಲಿ ಅಮ್ಮನ ಮನೆಯಷ್ಟೇ, ಅಥವಾ ಅದಕ್ಕಿಂತಲೂ ಸುಖಿ ಎಂದು ಬದುಕುವ ಹೆಣ್ಣು ಮಕ್ಕಳು ಭಾರತದಲ್ಲಿ ಒಂದು ಅಥವಾ ಎರಡು ಶೇಕಡಾ ತಪ್ಪಿದರೆ ಮೂರು ಶೇಕಡಾ ಅಷ್ಟೇ. ಇನ್ನು ಉಳಿದವರ ಕಥೆ?
    ಕಥೆ ಅಲ್ಲ ಜೀವನ! ನೈಜ ಬದುಕು. ಇದರ ಬಗ್ಗೆ ಅದೆಷ್ಟು ಚಿಂತನೆಗಳು ನಡೆದಿವೆಯೋ ಗೊತ್ತಿಲ್ಲ. ಹೆಣ್ಣು ಮಕ್ಕಳಿಗೆ ತಾಯಿ ಎಂಬ ಜೀವ ಇರಬೇಕು. ತಾಯಿ ಮನೆಯವರು ಸಿರಿವಂತರಾದರೆ ಮಾತ್ರ ಮದುವೆಯ ಬಳಿಕ ಆಕೆಯ ಜೀವನ ಸ್ವರ್ಗ ಎಂಬುದು ಎಲ್ಲರಿಗೂ ತಿಳಿದ ಮಾತು, ಅದು ಕಟು ವಾಸ್ತವದ ಸತ್ಯ ಕೂಡಾ. ತಾಯಿ ಇಲ್ಲದ ಹೆಣ್ಣು ಮಕ್ಕಳ ಬಾಳು ಗೋಳು ಆ ದೇವರಿಗೇ ಗೊತ್ತು. ಅವರ ಕಷ್ಟ ಸುಖ ಕೇಳುವವರು ಯಾರು? ಅಣ್ಣ ಅಥವಾ ತಮ್ಮ, ಮಾವ, ಅಕ್ಕ ತಂಗಿ ಅಷ್ಟು ಜವಾಬ್ದಾರಿಯುತರು ಇದ್ದರೆ ಅವರ ಪುಣ್ಯ. ಅದು ಎಷ್ಟು ಜನರಿಗೆ ಸಿಗಲು ಸಾಧ್ಯ? 
   ಇನ್ನು ಪತಿ ಬಿಟ್ಟು ಹೋದ, ಪತಿ ಕೈ ಕೊಟ್ಟ, ಪತಿ ಸತ್ತು ಹೋದ, ರೋಗಿಷ್ಟ ಪತಿ ಇರುವ, ಪತಿ ಇದ್ದರೂ ಇಲ್ಲದಂತೆ ಇರುವ, ಯಾವುದೇ ಜವಾಬ್ದಾರಿ ತೆಗೆದುಕೊಳ್ಳದೆ ಇರುವ ಪತಿಯನ್ನು ಹೊಂದಿರುವ, ಹೆಸರಿಗೆ ಮಾತ್ರ ಪತಿಯ ಸ್ಥಾನ ಹೊತ್ತ, ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತಹ ಪತಿಯನ್ನು ಪಡೆದ, ಹೆಂಡತಿಯನ್ನೇ ಅವಲಂಬಿಸಿ ಬದುಕುವ ಜನರ ಜೊತೆ ಬಾಳುವ ಹೆಣ್ಣು ಮಕ್ಕಳಿಗಿದೋ ಸಲಾಂ. ಪುರುಷರಿಗಿಂತ ತಾವು ಏನೂ ಕಡಿಮೆ ಇಲ್ಲ ಎಂದು ತೋರಿಸಿ ಬದುಕುವ ಹೆಣ್ಣು ಮಕ್ಕಳಿಗಾಗಿಯೇ ಮಹಿಳೆಯರ ದಿನ ಮೀಸಲು. 
   ಮಹಿಳೆ ಮಾನಸಿಕವಾಗಿ ಶಕ್ತಿಶಾಲಿ . ಪುರುಷ ದೈಹಿಕವಾಗಿ. ಮಾನಸಿಕ ದೃಢ ಶಕ್ತಿ ಎರಡು ಕುಟುಂಬಗಳ ಜೋಡಿಸಬಲ್ಲುದು ಹಾಗೆಯೇ ನಾಶ ಮಾಡಬಲ್ಲುದು. ತೊಟ್ಟಿಲು ತೂಗುವ ಕೈಗಳು ದೇಶವನ್ನೇ ಆಳ ಬಲ್ಲವು. ಅಷ್ಟೇ ಏಕೆ, ಮಗುವನ್ನು ಮಾನವರನ್ನು ಮಾತ್ರ ಅಲ್ಲದೆ ಪ್ರಾಣಿಗಳನ್ನೂ ಮಕ್ಕಳಂತೆ ಪ್ರೀತಿಸಿ ಅವುಗಳ ಕ್ರೋಧವನ್ನು ಕಡಿಮೆ ಮಾಡಬಹುದು. ಪ್ರೀತಿಯ ಇನ್ನೊಂದು ಹೆಸರು ಹೆಣ್ಣು. ಮಹಿಳೆಗೆ ಕೇವಲ ಒಂದು ದಿನ ಅಲ್ಲ. ವರ್ಷಪೂರ್ತಿ ಬೇಕು. ಗಂಡು ದುಡಿದು ತಂದು ಹಾಕಿದರೂ ಅದೆಷ್ಟೋ ಕುಟುಂಬಗಳನ್ನು ಸರಿಯಾಗಿ ನಿಭಾಯಿಸುವುದು ಹೆಣ್ಣೇ. 
    ಕುಡುಕ ಹಾಗೂ ಇತರ ಬೇಡದ ಚಟಗಳಿರುವ ಗಂಡನ ಜೊತೆ ಬಾಳುತ್ತಾ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಕಾರ್ಯ ಸುಲಭದ ಮಾತಲ್ಲ. ದುಷ್ಟ ಚಟಗಳ ದಾಸರಾಗುವುದು ಗಂಡಿಗೆ ಎಷ್ಟು ಸುಲಭವೋ ಅಂತಹ ಕುಟುಂಬ ನಿಭಾಯಿಸುವುದು ಹೆಣ್ಣಿಗೂ ಅಷ್ಟೇ ಕಷ್ಟ. ಆದರೂ ಛಲ ಬಿಡದೆ ಸಾಧಿಸುವ ತ್ರಿವಿಕ್ರಮ ಸಾಧನೆ ಮೆರೆದು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ತಾನು ತೊಡಗಿಸಿಕೊಂಡ ಎಲ್ಲಾ ಮಹಿಳೆಯರಿಗೆ ಈ ಅಂಕಣ ಸಮರ್ಪಣೆ. ಎಲ್ಲರಿಗೂ ಸಲಾಂ ಅನ್ನೋಣ. ನೀವೇನಂತೀರಿ?
@ಹನಿಬಿಂದು@
09.03.2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -226

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -226
    ಅದ್ಯಾಕೋ ಗೊತ್ತಿಲ್ಲ ದಿನ ಕಳೆಯುತ್ತಿರುವ ಹಾಗೆ ಒಂದಾಗಿ ಬಾಳಬೇಕಾಗಿರುವ ವಿದ್ಯಾರ್ಥಿ ಸಮುದಾಯವು ಒಬ್ಬರ ಮೇಲೊಬ್ಬರು ದ್ವೇಷ ಕಾರುವ ಹಂತಕ್ಕೆ ಬಂದು ನಿಂತಿದ್ದಾರೆ. ಇದು ಒಂದು ಕೇವಲ ಒಂದು ಶಾಲೆಯ ಅಥವಾ ಒಂದು ಕಾಲೇಜಿನ ಸಮಸ್ಯೆಯಲ್ಲ. ಎಲ್ಲಾ ಕಡೆ ಹುಡುಗರು ಮತ್ತು ಹುಡುಗಿಯರು ನಾಯಿ ತರಹ ಕಚ್ಚಾಡುತ್ತಾ ಇರುತ್ತಾರೆ. ಈಗಂತೂ ಕರಾಟೆ ಮೊದಲಾದವುಗಳನ್ನು ಕಲಿತು ಹುಡುಗಿಯರು ಕೂಡ ನಾವೇನು ಕಡಿಮೆ ಇಲ್ಲ ಎನ್ನುವ ಹಾಗೆ ಇರುತ್ತಾರೆ. ಮನೆಯಲ್ಲಿ ಒಬ್ಬರು ಇಬ್ಬರು ಮಕ್ಕಳಿರುವ ಕಾರಣ ಹಿರಿಯರಂತೆ ಮಕ್ಕಳಿಗೂ ಎಲ್ಲವೂ ನಿಭಾಯಿಸುವ ರೀತಿ ತಿಳಿದಿರುತ್ತದೆ. ಅವರವರ ಪೋಷಕರಿಗೆ ಮಕ್ಕಳೇ ಹಿತವಚನ ನೀಡುವಂಥವರಾಗಿರುತ್ತಾರೆ. ಕೆಲವೊಂದು ಮನೆಗಳಲ್ಲಿ ಮಾಡ್ರನ್ ಟೆಕ್ನಾಲಜಿಗಳು ಪೋಷಕರಿಗೆ ಗೊತ್ತಿರುವುದಿಲ್ಲ. ತಮ್ಮ ಮಕ್ಕಳಿಂದಲೇ ಅದನ್ನು ಕೇಳಿ ಕಲಿಯುವ ಪರಿಸ್ಥಿತಿ ಅವರಿಗೆ ಬಂದಿದೆ. ಹಾಗಾಗಿ ಪೋಷಕರಿಗೆ ಇಂದು ತಮ್ಮ ಮಕ್ಕಳ ಮೇಲೆ ಹಿಡಿತ ಇಲ್ಲ. ಬದಲಾಗಿ ಮಕ್ಕಳು ತಮ್ಮ ಪೋಷಕರನ್ನು ಇಂದು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಅದು ಹೇಗೆಂದರೆ "ನಾನು ಕೇಳಿದ್ದು ಕೊಡಿಸಲೇಬೇಕು ಇಲ್ಲವಾದರೆ ನಾನು ನನ್ನ ಜೀವವನ್ನು ಕಳೆದುಕೊಳ್ಳುತ್ತೇನೆ. ನನಗೆ ಈ ಬದುಕು ಬೇಡ. ನಾನು ನಿಮ್ಮೆಲ್ಲರಿಂದ ದೂರವಾಗುತ್ತೇನೆ. " ಇದಿಷ್ಟು ಮಾತುಗಳನ್ನು ಕೇಳಿದ ಕೂಡಲೇ ತುಂಬಾ ಮುಗ್ಧರಾದ ಪೋಷಕರು ತಮ್ಮ ಮಕ್ಕಳು ಹಾಗೆಲ್ಲ ಮಾಡಿಕೊಳ್ಳುವುದು ಬೇಡಪ್ಪ ಹೇಗಾದರೂ ಇರಲಿ ಎಂದು ಅವರು ಹೇಳಿದ ಹಾಗೆ ಕೇಳಿಕೊಂಡು ಸುಮ್ಮನಾಗಿಬಿಡುತ್ತಾರೆ. ಇದನ್ನೇ ಅವರ ಮಕ್ಕಳು ಅವರ ವೀಕ್ನೆಸ್ ಆಗಿ ತೆಗೆದುಕೊಂಡು ಪೋಷಕರನ್ನು ಆಟವಾಡಿಸುತ್ತಿರುತ್ತಾರೆ. 
     ಮಕ್ಕಳು ದೊಡ್ಡವರಾಗಿದ್ದಾರೆ ಮತ್ತು ಹಿರಿಯರು ಅವರ ಅಜ್ಞಾಪಾಲಕರಾಗಿದ್ದಾರೆ. ಹೀಗಿರುವಾಗ ಮನೆಯಲ್ಲಿ ಮಕ್ಕಳು ಮಾಡಿದ್ದೆ ರೂಲ್ಸ್. ಅವರು ಬೇಕು ಎಂದ ತಿಂಡಿ ರೆಡಿ ಆಗುತ್ತದೆ. ಅವರು ಇಷ್ಟ ಪಟ್ಟ ತಿಂಡಿಯೆ ಮನೆಯಲ್ಲಿ ತಯಾರಾಗುತ್ತದೆ. ಅವರು ಬೇಡ ಎಂದದ್ದು.... ಊ ಹೂ..ಇಲ್ಲವೇ ಇಲ್ಲ.. ಎಲ್ಲಾ ಪೋಷಕರ ಗುರಿ ಮಕ್ಕಳನ್ನು ಚೆನ್ನಾಗಿ ಸಾಕುವುದು. ಕೆಲವು ಪೋಷಕರು ಎಡವುವುದು ಅಲ್ಲಿಯೇ. ಮಕ್ಕಳನ್ನು ನಾವು ಚೆನ್ನಾಗಿ ಸಾಕಬೇಕು ಎಂಬ ಗುರಿ ಇಟ್ಟುಕೊಂಡು ಮಕ್ಕಳು ಬೇಕು ಅಂದಿದ್ದನ್ನೆಲ್ಲ ಶಕ್ತಿ ಮೀರಿ ಕೊಟ್ಟು, ಕೊನೆಗೆ ಅವರ ಆಸೆ ದುರಾಸೆಯನ್ನು ತಲುಪಿದಾಗ ಅದನ್ನು ಕೊಡಲು ಸಾಧ್ಯ ಆಗದೆ ಇದ್ದಾಗ ತಮ್ಮ ತಪ್ಪು ಅರಿವಾಗುತ್ತದೆ. ಮಕ್ಕಳಲ್ಲಿ ತಮ್ಮ ಕಷ್ಟ ಸುಖ ಹಂಚಿ ಕೊಳ್ಳದೆ, ತಾವು ಉತ್ತಮವಾಗಿ ಬದುಕುತ್ತಿದ್ದೇವೆ, ನಮಗೆ ಏನೂ ತೊಂದರೆ ಇಲ್ಲ ಎಂಬ ವ್ಯರ್ಥ ತೋರಿಕೆಯ ಬದುಕಿನಲ್ಲಿ ಬದುಕುತ್ತಾ, ಮಕ್ಕಳಿಗೂ ಹಾಗೆಯೇ ಬದುಕಬೇಕೆಂಬ ಕೆಟ್ಟ ಪಾಠವನ್ನು ಕೆಲವರು ಕಲಿಸಿದರೆ, ಇನ್ನೂ ಕೆಲವರು ಎಷ್ಟೇ ಇದ್ದರೂ ಕೂಡ ಸಾಮಾನ್ಯಂತೆ ಸಿಂಪಲ್ ಲಿವಿಂಗ್ ಅನ್ನು ಕಲಿಸಿಕೊಟ್ಟಿರುತ್ತಾರೆ. ಇತರ ಬಡವರ ಹಾಗೆ ಬೆಳೆಯಲು ಕಲಿತ ಮಕ್ಕಳು ಎಲ್ಲಿ ಹೋದರೂ ಕೂಡ ತಮ್ಮ ಬದುಕಿನಲ್ಲಿ ಯಾವ ಪರಿಸ್ಥಿತಿ ಬಂದರೂ ಕೂಡ ತಮ್ಮ ಜೀವನವನ್ನು ನಿಭಾಯಿಸಬಲ್ಲರು. ನನ್ನ ಮಗನಿಗೆ ಕೋಳಿಮಾಂಸವೇ ಆಗಬೇಕು ಅಥವಾ ಮೀನು ಫ್ರೈಯಾದರು ಇರಬೇಕು ಇಲ್ಲದಿದ್ದರೆ ಅವನು ಊಟವನ್ನೇ ಮಾಡುವುದಿಲ್ಲ, ಎoಬಿತ್ಯಾದಿ ರಾಗ ಎಳೆದು, ಮಗ ಬೇಕು ಬೇಕು ಎಂದು ಹೇಳಿದ್ದನ್ನೆಲ್ಲಾ ಕೊಡಿಸಿದ ಅಮ್ಮ ಮುಂದೊಂದು ದಿನ ಅವನು ಅವನಿಗೆ ಇಷ್ಟವಾದ ಹುಡುಗಿಯನ್ನು ಮನೆಗೆ ತಂದು, ಅವಳು ಹೇಳಿದಂತೆ ಕೇಳಿ ತನ್ನ ತಂದೆ ತಾಯಿಯನ್ನೇ ಮನೆಯಿಂದ ಹೊರಗೆ ಅಟ್ಟಿಬಿಡುತ್ತಾನೆ. ತನಗೆ ಇದ್ದದೆಲ್ಲವನ್ನು ಇದ್ದ ಮಗನಿಗೆ ಕೊಟ್ಟಾದ ಬಳಿಕ ವೃದ್ಧ ತಂದೆ ತಾಯಿಗಳು ತಾವು ತಮ್ಮ ಬದುಕಿಗಾಗಿ ಒದ್ದಾಡುತ್ತಿರುತ್ತಾರೆ. ಈ ಕಷ್ಟ ನಮಗೆ ಬರಬಾರದು ಎಂದಿದ್ದಲ್ಲಿ ಮಕ್ಕಳನ್ನು ಈಗಲೇ ಶಿಸ್ತಿನಿಂದ ಬೆಳೆಸಬೇಕು. ವಿಲ್ ವಿದ್ಯೆ ಇಲ್ಲದವ ಪಶುವಿಗೆ ಸಮಾನ ಎಂಬ ಮಾತಿನಂತೆ ಶಿಸ್ತು ಇಲ್ಲದ ಮನುಷ್ಯನು ಕೂಡ ಪಶುವಿಗಿಂತ ಕಡೆ. ಮಕ್ಕಳಲ್ಲಿ ಶಿಸ್ತನ್ನು ಬೆಳೆಸಿದಾಗ ಮಾತ್ರ ಮುಂದೆ ಅವನು ಉತ್ತಮ ನಾಗರಿಕನಾಗಿ ಉತ್ತಮ ಪ್ರಜೆಯಾಗಿ ಬೆಳೆದು ಸಮಾಜವನ್ನು ಉತ್ತಮ ಮಟ್ಟದಲ್ಲಿ ಕೊಂಡಡೊಯುವುದರಲ್ಲಿ ಎರಡು ಮಾತಿಲ್ಲ. ಅದೇ ಯಾವ ಶಿಸ್ತು ಇಲ್ಲದೆ ಒಟ್ಟಾರೆಯಾಗಿ ಬೆಳೆದಂತಹ ಒಬ್ಬ ಅವನ ಬದುಕಿನ ಮಾರ್ಗಗಳು ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಗೆ ಅನ್ವಯಿಸುತ್ತದೆ ಹೊರತು ಒಳ್ಳೆಯ ಶಿಸ್ತನ್ನು ಅವನಿಂದ ಕಾಣಲು ಸಾಧ್ಯವಿಲ್ಲ. ಅವನ ಅಥವಾ ಅವಳಿಗೆ ಬಾಳಲ್ಲಿ ಬಂದ ಬಾಳ ಸಂಗಾತಿಯು ಕೂಡ ನೋವನ್ನೇ ಅನುಭವಿಸುತ್ತಾರೆ. ಅದಕ್ಕೆ ವಿದ್ಯಾರ್ಥಿಗಳನ್ನು ಗಿಡವಾಗಿಯೇ ಬಗ್ಗಿಸುವುದನ್ನು ಕಲಿಯಬೇಕು. ಆದರೆ ಶಾಲೆಗಳಲ್ಲಿ ಇಂದು ಶಿಕ್ಷಕರು ವಿದ್ಯಾರ್ಥಿಗಳನ್ನು ಯಾವುದೇ ರೀತಿಯಲ್ಲಿ ಶಿಕ್ಷಿಸುವಂತಿಲ್ಲ. ಅವರ ತಪ್ಪುಗಳನ್ನು ಶಿಕ್ಷಿಸುವ ಅಧಿಕಾರ ಶಿಕ್ಷಕರಿಗಿಲ್ಲ. ವಿದ್ಯಾರ್ಥಿಗಳು ಏನು ಮಾಡಿದರು ಅದು ಸರಿಯೇ. ಮಗು ಕೇಂದ್ರೀತ ಶಿಕ್ಷಣ ಆದಕಾರಣ ಮಗು ಹೇಳಿದ ಹಾಗೆ ಶಿಕ್ಷಕರು ಕೇಳಬೇಕು. ಒಂದು ವೇಳೆ ಏನೂ ಕಲಿಸಬೇಡಿ ಎಂದರೆ ಕಲಿಸಬಾರದು. ಮಕ್ಕಳಿಗೆ ಅವರಿಗೆ ಬೇಕಾದಷ್ಟು ಸ್ವಾತಂತ್ರ್ಯವನ್ನು ನೀಡಬೇಕು. ಅದರ ಜೊತೆಗೆ ಅವರು ಹೇಳಿದಂತೆ ಕೇಳಿಕೊಳ್ಳುತ್ತಾ ತರಗತಿಯ ಮತ್ತು ಶಾಲೆಯ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಇದು ಈಗ ಶಿಕ್ಷಕರ ಮುಂದಿರುವ ದೊಡ್ಡ ಸವಾಲು. 
     ತರಗತಿಯಲ್ಲಿ ಅಷ್ಟಷ್ಟು ದೊಡ್ಡ ದೊಡ್ಡಕ್ಕೆ ಜಗಳವಾಡುತ್ತಿರುವ ಹುಡುಗ ಹುಡುಗಿಯರಿಬ್ಬರೂ ಕೂಡ ಪರೀಕ್ಷೆಯ ಹಾಲಿಗೆ ಬಂದಾಗ ತಾವು ಒಂದೇ ಎನ್ನುವಷ್ಟು ಒಗ್ಗಟ್ಟನ್ನು ತೋರಿಸಿಕೊಳ್ಳುತ್ತಾರೆ. ಅವರು ಬರೆದ ಉತ್ತರ ಪತ್ರಿಕೆಗಳನ್ನು ಇತರರಿಗೆ ತೋರಿಸಿ ಸಹಾಯ ಮಾಡುವುದು, 
ಇತರರಿಂದ ಕೇಳಿಕೊಂಡು ಇನ್ನೊಬ್ಬರಿಗೆ ಹೇಳುವುದು, ತಂದೆಯಂದಿರ ಹೆಸರಿನಲ್ಲಿ ಮಕ್ಕಳನ್ನು ಕರೆಯುವುದು, ಶಿಕ್ಷಕರಿಗೆ ಎದುರು ಉತ್ತರ ಕೊಡುವುದು ಶಿಕ್ಷಕರು ಹೇಳಿದ ಯಾವುದೇ ಮಾತುಗಳನ್ನು ಕೊಡ ಕೇಳದಿರುವುದು,  ಶಿಕ್ಷಕರು ಏನಾದರೂ ಹೇಳಿದರೆ ಸಾಕು ಅದನ್ನು ಪೋಷಕರಲ್ಲಿ ಮತ್ತು ಊರಿನವರಲ್ಲಿ ಹೇಳಿ ಶಿಕ್ಷಕರ ವಿರುದ್ಧ ಅವರನ್ನು ದಂಗೆ ಹೇಳುವಂತೆ ಮಾಡುವುದು - ಇವೆಲ್ಲ ನಾವು ಇತ್ತೀಚೆಗೆ ಬೇರೆ ಬೇರೆ ಕಡೆ ನಡೆದ ಘಟನೆಗಳನ್ನು ದೃಶ್ಯ ಮಾಧ್ಯಮಗಳಲ್ಲಿ ಮತ್ತು ವಾತಾಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡದ್ದು. ಇಷ್ಟೇ ಅಲ್ಲ ಶಿಕ್ಷಕರಿಗೂ ತಿರುಗಿ ಹೊಡೆಯುವವರು, ಚಾಕು ಹಾಕಿ ಓಡಿದವರು, ಶಿಕ್ಷಕರನ್ನೇ ನಿಂಬದಿಸಿದವರು, ಶಿಕ್ಷಕರು ಮನೆಗೆ ತೆರಳುತ್ತಿದ್ದಾಗ ಮರದ ಮೇಲೆ ನಿಂದ ಬಡಿಗೆಯಲ್ಲಿ ಹೊಡೆದು ಸಾಯಿಸಿದವರು ಇಂಥವರ ಸಂಖ್ಯೆ ಬೆಳೆಯಲು ಕಾರಣ ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಶಿಸ್ತಿನಲ್ಲಿ ಹಿಡಿದಿಡಲು ಇರದ ಸ್ವಾತಂತ್ರ್ಯ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಪದ್ಧತಿ ಏನು ಉತ್ತಮವೆ. ಆದರೂ ಶಿಕ್ಷಕ ವಿದ್ಯಾರ್ಥಿಯ ಮಧ್ಯೆ ಉನ್ನತವಾದ ಗುರು ಶಿಷ್ಯರ ಬಾಂಧವ್ಯ ಇರಬೇಕಲ್ಲವೇ? ಇದು ಹಿರಿಯರಿಗೆ ಕೊಡುವ ಗೌರವವೂ ಆಗಿದೆ. ಈಗ ಹಿರಿಯರು ಕಿರಿಯರು ಎಂದೇನು ಇಲ್ಲ. ಆಂಗ್ಲರ ಹಾಗೆ ಯು ಎನ್ನುವ ಒಂದೇ ಭಾಷೆ, ಎಲ್ಲರಿಗೂ ಒಂದೇ ನೀತಿ, ಎಲ್ಲರೂ ಅವರವರು ಹೇಳಿದ್ದು ಸರಿಯೇ ಮನೆಯಲ್ಲೂ ಶಾಲೆಯಲ್ಲೂ... ಹೀಗಿರುವಾಗ ಶಿಸ್ತಿನ ಶಿಕ್ಷಣ ಶಿಸ್ತಿನ ಬದುಕು ಉತ್ತಮ ಗುಣಗಳು ಹಿರಿಯರಿಂದ ಧಾರೆಯಾಗಿ ಎರೆಯಲ್ಪಟ್ಟ ಕಿರಿಯರ ಗುಣಗಳು ಸದ್ಭಾವನೆ ತಾಳ್ಮೆ ಹಂಚಿ ತಿನ್ನುವ ಗುಣ ಪರರನ್ನು ಉತ್ತಮವಾಗಿ ಕಾಣುವ ವಿಶಾಲ ಹೃದಯ ಎಲ್ಲರೂ ಒಂದೇ ಎಂಬ ಭಾವ ಒಗ್ಗಟ್ಟು ಇವನ್ನೆಲ್ಲ ಎಲ್ಲಿ ಕಾಣಲು ಸಾಧ್ಯ? ಆಂಗ್ಲ ಭಾಷೆಯಲ್ಲಿ ಶಿಕ್ಷಣವನ್ನು ತೆಗೆದುಕೊಳ್ಳುವ ಮುಂದಿನ ಜನಾಂಗವು ಇಲ್ಲಿನ ಮೂಲ ಬದುಕನ್ನು ಕಟ್ಟಿಕೊಳ್ಳುವ ಭಾಷೆಯನ್ನೇ ಕಲಿಯುವುದಿಲ್ಲವಾದ್ದರಿಂದ ಸಂಸ್ಕೃತಿಯನ್ನು ಹೇಗೆ ತಾನೆ ನಾವು ಅವರಿಂದ ನಿರೀಕ್ಷಿಸಲು ಸಾಧ್ಯ? ಹರುಕು ಮುರುಕು ತುಂಡು ಬಟ್ಟೆ ಹಾಕುವ ವಿದೇಶಿ ಭಾಷೆಯನ್ನು ಕಲಿಯುವ ಇಂದಿನ ವಿದ್ಯಾರ್ಥಿಗಳು ಮುಂದಿನ ಯುವಕರಾದಾಗ ಆಂಗ್ಲರ ಸಂಸ್ಕೃತಿಯನ್ನೇ ಕಲಿಯುವುದಲ್ಲದೆ ಅವರ ಹಾಗೆಯೇ ಬೆಳೆಯುವುದಂತೂ ಖಂಡಿತ. ಇನ್ನು ಅವರಲ್ಲಿ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಕಾಣಲು ಸಾಧ್ಯವೇ? ಇದಕ್ಕೆ ಅವರನ್ನು ದೂರಲು ಸಾಧ್ಯವಿಲ್ಲ . ಹಿರಿಯರಾದ ನಾವು ಅವರಿಗೆ ಕಳಿಸಿದ್ದು ಅದನ್ನೇ ಅಲ್ಲವೇ? ನಾವು, ನಮ್ಮ ಮುಂದಿನ ಜನಾಂಗ, ನಮ್ಮ ಮುಂದಿನ ದೇಶದ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುವ ಜನಾಂಗಕ್ಕೆ ಅದೇನನ್ನು ಒಳ್ಳೆಯದನ್ನು ಇಟ್ಟಿದ್ದೇವೆಯೋ ತಿಳಿಯದು. ಮಲಿನವಾದ ಪರಿಸರ ಅಶುದ್ಧ ಗಾಳಿ ಹೊಳಪು ನೀರು ವಿಷ ಸೇರಿಸಿದ ಮಣ್ಣು, ವಿಷಗಳಲ್ಲಿ ಬೆಳೆಯುವ ಹಣ್ಣು ತರಕಾರಿಗಳು, ಅವುಗಳನ್ನು ತಿಂದು ಆರೋಗ್ಯವನ್ನು ಪೂರ್ತಿಯಾಗಿ ಕಳೆದುಕೊಂಡ ಮಾನವ ಸಮಾಜ. ಇವರಿಂದ ನಾವು ಯಾವ ರೀತಿಯ ದೇಶವನ್ನು ಸಮಾಜವನ್ನು ನಿರೀಕ್ಷಿಸಲು ಸಾಧ್ಯ? ಬದುಕ ಲೆಕ್ಕಾಗೆ ಹೋರಾಟ ಜಗಳ ಕದನ ಸಾಧ್ಯವಾದಾಗ ಒಂದಿಷ್ಟು ಸಹಾಯವನ್ನು ಕೊಡುವುದು ಮತ್ತು ಪಡೆದುಕೊಳ್ಳುವುದು ಇವಿಷ್ಟೇ. ಈಗಿನ ಯುವ ಜನಾಂಗ ಮತ್ತು ಮಕ್ಕಳು ಮಾಡುತ್ತಿರುವುದು ಅದನ್ನೇ. ಅವರಿಗೆ ನಾವು ತಿನ್ನಲು ಕೊಟ್ಟದ್ದು ಟೇಸ್ಟ್ ಪೌಡರ್ ಬಳಸಿದ ನೂಡಲ್ಸ್ ಗೋಬಿಮಂಚೂರಿ ಪಿಜ್ಜಾ ಬರ್ಗರ್. ಕುಡಿಯಲು ಹೊಟ್ಟಿದ್ದು ಸ್ಪ್ರೈಟ್ ಮಿರಿಂದ ಕೊಕೊ ಕೋಲಾ ಬಣ್ಣದ ತಂಪು ಪಾನೀಯಗಳು! ಯುವಗಳನ್ನೇ ತಿಂದು ಉಂಡು ಬೆಳೆದ ಅವರ ಮೈಯಲ್ಲಿ ಕೈಗಳಲ್ಲಿ ರಟ್ಟೆಗಳಲ್ಲಿ ಅದೆಷ್ಟು ಶಕ್ತಿ ಇರಬಹುದು? ಅವರ ರುಚಿಕರ ಆಹಾರಕ್ಕಾಗಿ ಹುಡುಕಾಡುತ್ತಾರೆಯೇ ಹೊರತು ಹೊಟ್ಟೆ ತುಂಬ ತಿನ್ನಲಿಕ್ಕಾಗಿ ಅಲ್ಲ. ಇನ್ನು ಲಿಪಿಡ್ ವಿಟಮಿನ್ ಪೋಷಕಾಂಶಗಳ ಬಗ್ಗೆ ಅವರಿಗೆ ಬೇಕಾಗಿಯೇ ಇಲ್ಲ. ದೇಹದ ಆರೋಗ್ಯದಲ್ಲಿ ಏನೇ ಏರುಪೇರಾದರೂ ಡಾಕ್ಟರ್ ಇದ್ದಾರೆ ಎನ್ನುವ ಭರವಸೆ ಅವರಿಗೆ. ಇಂತಹ ಜನಾಂಗದ ಕೈಯಲ್ಲಿ ನಮ್ಮ ದೇಶವನ್ನು ಇಟ್ಟು ದೇಶದ ಬಗ್ಗೆ ಉನ್ನತ ಕನಸು ಕಾಣುತ್ತಿರುವ ನಾವು ಅದೆಷ್ಟರವರು ಎಂದು ನಾವೇ ಸಿಂಹಾವಲೋಕನ ಮಾಡಿಕೊಳ್ಳಬೇಕಾಗಿದೆ. ಕೇವಲ ಮತದಾನದ ವಿಷಯವಾಗಿ ಜಾತಿ ಧರ್ಮಗಳ ನಡುವೆ ಭೇದ ತಂದಿಟ್ಟು, ರಸ್ತೆಯಲ್ಲಿರುವ ಬೀದಿನಾಯಿಗಳ ಹಾಗೆ ಕಚ್ಚಾಡುತ್ತಿರುವ ಹಿರಿಯರನ್ನು ನೋಡಿದ ಯುವ ಜನಾಂಗ ಅದೇನು ತಾನೆ ಕಲಿತುಕೊಳ್ಳಬಲ್ಲದು? ಆಸ್ತಿ ಗಾಗಿ ಜಗಳ ನೀರಿಗಾಗಿ ಜಗಳ ದೇಶ ದೇಶದ ಗಡಿಗಾಗಿ ಜಗಳ ವ್ಯಾಪಾರಕ್ಕಾಗಿ ಜಗಳ ಹಣಕ್ಕಾಗಿ ಜಗಳ ಬದುಕಿನ ಹಕ್ಕುಗಳಿಗಾಗಿ ಜಗಳ ಎಲ್ಲವೂ ಜಗಳ ಕದನ! ಗಂಡ ಹೆಂಡತಿಯರ ನಡುವೆ ಜಗಳ ಕುಟುಂಬದ ವಿವಿಧ ಜನರ ನಡುವೆ ಜಗಳ ನಾಯಿ ಬೆಕ್ಕಿಗಾಗಿಯೂ ಜಗಳ ಇಂತಹ ಪರಿಸ್ಥಿತಿಯಲ್ಲಿ ಬೆಳೆಯುತ್ತಿರುವ ಮುಂದಿನ ಯುವ ಜನಾಂಗದ ಮನಸ್ಥಿತಿ ಅದು ಹೇಗೆ ಬ್ರಾಡ್ಮೈಂಡ್ ಆಗಿ ಬರಲು ಸಾಧ್ಯ? ಇದಕ್ಕೆಲ್ಲ ಉತ್ತರ ಕೊಡುವವರು ನಾವೇ ಆಗಿದ್ದೇವೆ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
15.03.2024

ಜಾಗೃತಿ ಗೀತೆ

ಜಾಗೃತಿ ಗೀತೆ

ಮುಟ್ಟನು ಮೆಟ್ಟಿ ನಿಲ್ಲೋಣ

ಬನ್ನಿರಿ ನಾರೀ ಶಕ್ತಿ ಮಣಿಗಳೆ
ಮುಟ್ಟಿನ ಗುಟ್ಟನು ಕೇಳೋಣ..
ಕಷ್ಟದ ದಿನಗಳ ಸುಲಭದಿ ಎದುರಿಸೋ
ನೈಸರ್ಗಿಕ ಕ್ರಿಯೆಯ ತಿಳಿಯೋಣ..//ಬನ್ನಿರಿ//

ಹುಡುಗಿಯು ಮಹಿಳೆ ಆಗುವ ಕಾಲಕೆ
ಅಂಡಾಣು ಬಿಡುಗಡೆ ಸಹಜವದು
ರಕುತದ ರೂಪದಿ ದೇಹವ ತ್ಯಜಿಸೆ
ಮೂರು ದಿನಗಳ ಕಾಲವದು..//ಬನ್ನಿರಿ//

ಹಿರಿಯರು ಹೊರಗಡೆ ಕೂರಿಸಿ ಬಿಟ್ಟರು
ದೇಹಕೆ ವಿಶ್ರಾಂತಿ ಸಿಗಲೆಂದು
ಕಾಯದ ಸ್ವಚ್ಛತೆ ಬೇಕದು ಎಂದಿಗೂ
ಬಳಸಿರಿ ಶುದ್ಧ ಬಟ್ಟೆಯನು//ಬನ್ನಿರಿ//

ಹೆದರುತ ಕುಳಿತು ಬೇಸರ ಪಡದಿರಿ
ಸರ್ವ ಹೆಣ್ಣಿಗೂ ಬರುವುದದು
ಮದುವೆಯ ಬಳಿಕ ವೀರ್ಯಾಣು ಸೇರಿ
ಸಂತಾನ ಅಭಿವೃದ್ಧಿ ಆಗುವುದು//ಬನ್ನಿರಿ//

ಮೆನ್ ಸ್ಟುರಲ್ ಕಪ್ಪೋ ನ್ಯಾಪೀ ಪ್ಯಾಡೋ
ಉಪಯೋಗ ನೀ ಕಲಿ ನಿತ್ಯಕ್ಕೆ
ಸ್ವಚ್ಚ ಅಂಗಗಳ ಇಡುತಲಿ ಕಾಪಾಡು
ಆರೋಗ್ಯ ಮುಖ್ಯವು ದೇಹಕ್ಕೆ//ಬನ್ನಿರಿ//

ಹುಡುಗರು ಕೂಡ ತಾಯಿ ಸಹೋದರಿ
ಮನಗಳ ಅರಿತು ಸಹಕರಿಸಿ
ಮುಟ್ಟಿನ ದಿನದಲಿ ಕೆಲಸವ ಹಂಚಿ
ವಿಶ್ರಾಂತಿ ನೀಡಿರಿ ಮನೆಯಲ್ಲಿ..//ಬನ್ನಿರಿ//

ಮುಟ್ಟದೆ ಇರಲು ಕಾರಣವಿಲ್ಲ
ವಿಜ್ಞಾನದ ಪುರಾವೆ ಇದಕ್ಕಿಲ್ಲ
ಕಬ್ಬಿಣದಂಶ ಕಡಿಮೆ ಆಗಲು
ದೇಹವು ಸುಸ್ತಿಗೆ ಜಾರುವುದಲ್ಲ//ಬನ್ನಿರಿ//

ಹೊಟ್ಟೆ ನೋವು ನರಗಳ ಸೆಳೆತ
ನಡೆಯಲು ಕಾಲದು ಎಳೆಯುವುದು
ಪ್ರೀತಿ ಆಪ್ತತೆ ಇರಲು ಮನಸಿಗೆ
ಖುಷಿಯಲಿ ಎಲ್ಲಾ ಮರೆಯುವುದು//ಬನ್ನಿರಿ//

ಬದುಕಿನ ಒಂದು ಸಹಜ ಪ್ರಕ್ರಿಯೆ
ಹೆದರಲೇ ಬೇಡಿ ಮಹಿಳೆಯರೇ
ತಿಂಗಳಿಗೊಮ್ಮೆ ಬರುವ ಮುಟ್ಟನು
ಮೆಟ್ಟಿ ನಿಲ್ಲೋಣ ಲಲನೆಯರೇ//ಬನ್ನಿರಿ//
@ಹನಿಬಿಂದು@
14.03.2024