ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -232
ನಾವು ಬದುಕನ್ನು ಅದು ಬಂದ ಹಾಗೆ ಸ್ವೀಕರಿಸಬೇಕು. ನಿನ್ನೆಯ ನೋವಿಗೆ ಅಳಲು ಇಂದು ಸಮಯ ಯಾರಿಗೂ ಇಲ್ಲ. ಸದಾ ನಗುವುದನ್ನು ರೂಡಿಸಿಕೊಂಡವನೆ ಇಂದು ಜಾಣ. ನಮ್ಮ ಆಲೋಚನೆಗಳು, ಕನಸುಗಳು, ಚಿಂತನೆಗಳು ನಿರಂತರವಾಗಿ ಮೂಡಿ ಬಂದು, ಅವು ನಮ್ಮನ್ನು ಪ್ರೀತಿಸುವ ಹೃದಯಕ್ಕೆ ಲಗ್ಗೆ ಇಡಲು ಶುರು ಹಚ್ಚಿಕೊಳ್ಳುತ್ತವೆ. ಅವು ಧನಾತ್ಮಕ ಚಿಂತನೆ ಆಗಿದ್ದರೆ ಎಲ್ಲರಿಗೂ ಸಂತಸ ಹಂಚಿ ಸಂಭ್ರಮ ಕೊಡುತ್ತವೆ. ಅದರ ಬದಲು ನಮ್ಮ ಆಲೋಚನೆಗಳು ಋಣಾತ್ಮಕವಾಗಿದ್ದರೆ ನಮಗೂ, ಇತರರಿಗೂ ನೋವು ತರುತ್ತವೆ. ಕೆಲವೊಮ್ಮೆ ಬೇಡ ಎಂದರೂ ಋಣಾತ್ಮಕ ಆಲೋಚನೆಗಳು ನಮ್ಮ ಮನದಲಿ ಹುಟ್ಟು ಪಡೆದು ನಮ್ಮನ್ನು ಕಲಕಿಸಿ ಬಿಡುತ್ತವೆ. ಏನೂ ಮಾಡಲು ಆಗದು. ಅದನ್ನು ಹಿಡಿದೆ ಕುಳಿತರೆ ನಮ್ಮ ಕೆಲಸ ಆಗದು.
ಈಗ ಸಮಾಜದಲ್ಲಿ ನಿರಂತರ ನಡೆಯುವ ಅಪಘಾತಗಳು, ಕೊಲೆ, ದರೋಡೆ, ಕಳ್ಳತನ, ಕೊಚ್ಚಿ ಸಾಯಿಸುವುದು, ಮನೆಯಿಂದ ಹಿರಿಯ ಪೋಷಕರನ್ನು ಹೊರಗೆ ನಿರ್ದಾಕ್ಷಿಣ್ಯವಾಗಿ ಅಟ್ಟುವುದು, ನಾಯಿ, ಬೆಕ್ಕು ದನಗಳಿಗೆ ಹಿಂಸೆ ಕೊಡುವುದು, ತಮ್ಮದೇ ಮಕ್ಕಳನ್ನು ಮಾರಕವಾಗಿ ಹಿಂಸಿಸುವುದು, ಎಲ್ಲರೊಡನೆ ಕಷ್ಟ ಹೇಳಿ ಕೊಳ್ಳುತ್ತಾ ಲೈವ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲಾದ ಭೀಕರತೆಯ ವಿಡಿಯೋಗಳನ್ನು ನಮಗೆ ಗೊತ್ತಿಲ್ಲದೆ ನಾವು ಹೆಚ್ಚೆಚ್ಚು ನೋಡುತ್ತೇವೆ.
ಸಣ್ಣ ಮಕ್ಕಳ ಆಟಗಳಲ್ಲೂ, ಚಲನ ಚಿತ್ರಗಳಲ್ಲೂ, ಸೀರಿಯಲ್ಸ್, ವೆಬ್ ಸೀರಿಸ್ ಗಳಲ್ಲೂ ಸಾಯಿಸುವುದು ಎಂದರೆ ಸಾಮಾನ್ಯ. ಇದನ್ನು ನೋಡುತ್ತಾ ಬೆಳೆದ ಮಕ್ಕಳ ಮನದಲ್ಲಿ ಏನು ಬೆಳೆದಿದೆ ಎಂದರೆ, ವಿಷ ಕೊಟ್ಟು, ಗಾಡಿ ಹತ್ತಿಸಿ, ಹೇಗಾದರೂ ಸರಿ, ನಮಗೆ ಆಗುವುದಿಲ್ಲ ಎನ್ನುವವರನ್ನು ಸಾಯಿಸಬಹುದು.
ಅಷ್ಟೇ ಅಲ್ಲ , ಕೇಳಿದ್ದನ್ನು, ಬೇಕು ಬೇಕು ಎಂಬುದನ್ನೆಲ್ಲ ಪೋಷಕರು ಕೊಡಿಸುವುದನ್ನು ಇಂದು ಮರೆಯುವುದಿಲ್ಲ. ಒಂದು ವೇಳೆ ಸಿಗದೆ ಇದ್ದರೆ ಆಗ ಮಗು ಕಿತ್ತು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡು ಇರುತ್ತದೆ. ಈಗಿನ ಮಕ್ಕಳು ಯಾರಲ್ಲೂ ಹೆಚ್ಚು ಮಾತನಾಡುವುದಿಲ್ಲ. ಬದಲಾಗಿ ಗೆಳೆಯರ ಜೊತೆ ಫೋನ್, ಮೊಬೈಲ್, ಲ್ಯಾಪ್ ಟಾಪ್ ಅವುಗಳಲ್ಲಿ ಮಾತ್ರ ಚರ್ಚೆ. ಎದುರು ಕುಳಿತು ಸಮಸ್ಯೆ ಪರಿಹರಿಸುವ ವ್ಯವಧಾನ ಇಲ್ಲ. ಹಿರಿಯರಿಗೆ ಗೌರವ ಕೊಡುವುದು ಕೂಡ ಕಲಿಸಿಲ್ಲ ನಾವು. ಅಪ್ಪ, ಅಮ್ಮ, ಅಜ್ಜಿ, ತಾತ ಎಲ್ಲರನ್ನೂ ಏಕವಚನದಲ್ಲೇ ಸಂಬೋಧಿಸುವ ಕಾಲ. ಹಿರಿಯರ ಬಗ್ಗೆ ಕಾಳಜಿಯೂ ಕಡಿಮೆ. ಮನೆಗೆ ಯಾರಾದರೂ ಹಿರಿಯರು, ಬಂಧುಗಳು ಬರಲಿ, ಅವರು ತಮ್ಮ ಕೊನೆಯಲ್ಲಿ ತಮ್ಮದೇ ಲೋಕದಲ್ಲಿ ಇರುತ್ತಾರೆ. ಮನುಷ್ಯರ ಸಂಬಂಧ, ನೋವು, ನಲಿವು, ಹರಟೆ, ಮಾತು ಇವುಗಳು ಗಲಾಟೆ, ಡಿಸ್ಟರ್ಬೆನ್ಸ್ ಅವರಿಗೆ. ಸೈಲೆಂಟ್, ಡಿಸೆಂಟ್ ಬದುಕು ಬೇಕು.
ಹದಿ ಹರೆಯಕ್ಕೆ ಕಾಲಿಟ್ಟ ಕೂಡಲೇ ಒಂದೊಂದು ಜೊತೆಗಾರರನ್ನು ಹುಡುಕಿ, ಮೊಬೈಲ್ ನಲ್ಲೆ ಸಂಸಾರ ನಡೆಸುವ ಕಾಲ ಬಂದಿದೆ ಈಗ. ಕಲಿಯಿರಿ ಎಂದು ತೆಗೆದುಕೊಟ್ಟ ಮೊಬೈಲ್ ನಲ್ಲೆ ಬೇಕಾದ್ದು, ಬೇಡದ್ದು ಎಲ್ಲವನ್ನೂ ಹಿರಿಯರಿಗಿಂತಲೂ ವೇಗವಾಗಿ ಕಲಿತಿರುತ್ತಾರೆ ಅವರು. ಅಂತಹ ಅವಕಾಶ ಸೃಷ್ಟಿಸಿ ಕೊಡುವುದು ಕೂಡ ಹಿರಿಯರೇ. ಯಾರ ತಪ್ಪು ಇಲ್ಲಿ? ಯಾರನ್ನು ದೂರುವುದು? ಯಾರಿಗೆ ಶಿಕ್ಷೆ ಕೊಡುವುದು?
ಮಕ್ಕಳನ್ನು ಸರಿಯಾಗಿ ಬೆಳೆಸದೆ ತಮ್ಮ ಮಕ್ಕಳಿಗೆ ಭವಿಷ್ಯದಲ್ಲಿ ಏನೂ ತೊಂದರೆ ಆಗಬಾರದು, ನಮ್ಮ ಹಾಗೆ ಕಷ್ಟ ಪಡಬಾರದು ಎಂದು ಕಷ್ಟ ಪಟ್ಟು ದುಡಿಯುತ್ತಾ ಇರುವ ಪೋಷಕರನ್ನೋ, ಪೋಷಕರ ಕಷ್ಟ ಅರಿಯದೆ ತಮ್ಮ ಬದುಕಲ್ಲಿ ಯಾವುದೇ ಗುರಿ ಇಟ್ಟುಕೊಳ್ಳದೆ , ಬದುಕನ್ನು ಎಂಜಾಯ್ ಮಾಡುತ್ತಿರುವ ಮಕ್ಕಳನ್ನೋ, ಎರಡು ಮೂರು ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ ಮಾಡಿ ಇಟ್ಟು, ಮುಂದಿನ ಜನಾಂಗವನ್ನು ಸೋಮಾರಿಗಳಾಗುವ ಹಾಗೆ ಕುಳಿತು ತಿನ್ನಿಸಿ ಬೆಳೆಸಿದ ಹಿರಿಯರನ್ನೋ, ನೀನು ಮಾಡಿದ್ದೇ ಸರಿ, ನನ್ನ ಮಗನ ತಪ್ಪೇ ಇಲ್ಲ, ಅವನು ಮಾಡುವುದೆಲ್ಲಾ ಸರಿ ಎಂದು ತಪ್ಪು ತಿದ್ದದೆ ಬೆಳೆಸಿದ ಪೋಷಕರನ್ನೋ, ಬೇಕು ಎಂಬುದು ಸಿಗದಾಗ ಹಠವಾದಿಯಾಗಿ ಕತ್ತಿ, ಚೂರಿ ಹಾಕಿ ಇರಿದು ಸಾಯಿಸುವ ಮಟ್ಟಕ್ಕೆ ಬಂದರೂ ತಡೆಯದ ಸಮಾಜವನ್ನೋ ಯಾರನ್ನು ದೂರುವುದು?
ಮುಖ್ಯವಾಗಿ ಇರುವುದು ಎರಡೇ ಪಕ್ಷಗಳು ಭಾರತದಲ್ಲಿ. ಆ ಎರಡು ಪಕ್ಷಗಳ ನಡುವೆ ಮತದಾನ ಆಗಿ ಸಣ್ಣ ಪುಟ್ಟ ಇತರ ಪಕ್ಷಗಳ ಬೆಂಬಲ ಪಡೆದು ನ್ಯಾಯಯುತ ಹಾಗೂ ಶಾಂತಿಯುತ ಮತದಾನ ನಡೆಸುವ ಬದಲು ಅಲ್ಲಿ ಗಲಾಟೆ ಎಬ್ಬಿಸಿ, ಯಂತ್ರ ತುಂಡರಿಸಿ ಹೋಗುವ ಕಾರ್ಯ ಬೇಕೆ? ತಪ್ಪು ಯಾರದ್ದೋ? ಶಿಕ್ಷೆ ಯಾರಿಗೋ!
ಅಷ್ಟೇ ಅಲ್ಲ, ಆ ರಾಜಕೀಯ ಪಕ್ಷಗಳಿಗೆ ಜಾತಿ, ಧರ್ಮದ ಹೆಸರಿಟ್ಟು, ಅಲ್ಲೂ ಗಲಾಟೆ. ಆಳುವ ಪಕ್ಷದ ನಾಯಕರಿಗೆ ಗೌರವ ಕೊಡದೆ ಅವರನ್ನು ಕೀಳಾಗಿ ನಾವೇ ಬಿಂಬಿಸಿ ತೋರಿಸುವ ಜೊತೆ, ವಿರುದ್ಧ ಪಕ್ಷದ ನಾಯಕರನ್ನೂ ಕೂಡ ಕೀಳಾಗಿ ಮಾತನಾಡಿ ನಮ್ಮ ಮನಸ್ಸಿನ, ಆಲೋಚನಾ ಮಟ್ಟವನ್ನು ಹರಿಯಬಿಟ್ಟು, ಉಳಿದವರ ಮನಸ್ಸನ್ನೂ ಕೆಡಿಸುವ ಕಾರ್ಯ ಸಮಾಜದಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ, ವಾರ್ತಾ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಬಿಸಿ ಬಿಸಿ ಲೇಖನ, ವಿಡಿಯೋ, ಚರ್ಚೆ ನೆತ್ತರನ್ನು ಕುದಿಸುತ್ತದೆ. ಅಕ್ಕ ಪಕ್ಕದ ಮನೆಯ ಜನ ನೆರೆ - ಹೊರೆಗಳಾಗುತ್ತಿವೆ. ಎಲ್ಲರ ಮನದಲ್ಲೂ ಪ್ರೀತಿಯ ಬದಲು ರಾಜಕೀಯ ಪಕ್ಷಗಳಿಗಾಗಿ ಯಾರದೋ ಆಸೆಗೆ ಇನ್ಯಾರೋ ದ್ವೇಷಿಗಳಾಗಿ ಬದಲಾಗಿ ಶತ್ರುಗಳಾಗಿ ಬಾಳುತ್ತಿದ್ದಾರೆ. ಬದುಕು ಬರ್ಭರವಾಗುತ್ತಿದೆ. ಕಾರಣ ಸಾಮಾಜಿಕ ಜಾಲ ತಾಣಗಳು ಮತ್ತು ಎಲ್ಲಾ ರೀತಿಯ ಮಾಧ್ಯಮಗಳು. ಪ್ರೀತಿಯ ಬದಲು ವೋಟಿಗಾಗಿ ಸಮಾಜವನ್ನು ಒಡೆದು ಆಳಲಾಗುತ್ತಿದೆ.
ಇದನ್ನು ಅರಿಯದ ಸಾಮಾನ್ಯ ಮಾನವ ಮತ್ತವನ ಕುಟುಂಬ ದಂಡ ತೆರುತ್ತಿದೆ. ದುಡಿದು, ಅದರ ಬಹುಪಾಲು ಹಣವನ್ನು ತೆರಿಗೆ ಕಟ್ಟಿ, ದ್ವೇಷ ಬೆಳೆಸಿಕೊಂಡು, ನಾವು ದುಡಿದ ಹಣವನ್ನು ಇನ್ಯಾರಿಗೋ ಅನುಭವಿಸಲು ಬೇಕಾಗಿ ನಾವು ಮನಸ್ಸು ಕೆಡಿಸಿಕೊಂಡು ಬದುಕುವ ಕಾಲ ಬಂದಿದೆ.
ವಿದ್ಯಾಭ್ಯಾಸದ ಮಟ್ಟ ಹೆಚ್ಚಿದಷ್ಟೂ ಸಮಾಜದಲ್ಲಿ ಶಾಂತಿ ಸಮಾಧಾನ ತಾಳ್ಮೆ ಹೆಚ್ಚಬೇಕು. ಬದಲಾಗಿ ದ್ವೇಷ, ಅಸೂಯೆ, ಕೋಪ, ಕೊಲೆ, ನೋವು, ತುಳಿತ, ಸಹಾಯ ಮಾಡದೆ ಇರುವ ಗುಣ, ಸ್ವಾರ್ಥ, ತುಳಿತ ಹೆಚ್ಚಿದೆ. ಇದನ್ನು ಬದಲಾಯಿಸುವುದು ಅಸಾಧ್ಯ ಅನ್ನಿಸುತ್ತದೆ. ಕಾರಣ ಎಲ್ಲರೂ ತಮ್ಮದೇ ಸರಿ, ನಾನು ಮಾಡಿದ್ದೇ ಸರಿ ಎಂದು ವಾದಿಸುತ್ತಾರೆ. ಪರರ ಕೇಳುವ ವ್ಯವಧಾನ ಇಲ್ಲದ ಈ ಸಮಾಜವನ್ನು ತಿದ್ದಲು ಹೋದವನನ್ನೇ ನುಂಗಿ ನೀರು ಕುಡಿಸಿ ಬಿಡುತ್ತದೆ.
ಅಂದು ಏಸುಕ್ರಿಸ್ತ, ಮಹಮ್ಮದ್ ಪೈಗಂಬರ್, ಮಹಾವೀರ, ಬುದ್ಧ,ನಾರಾಯಣ ಗುರು, ಗುರು ನಾನಕರು ಎಲ್ಲರೂ ಸಮಾಜವನ್ನು ತಿದ್ದಿ ಸರಿ ದಾರಿಗೆ ತರಲು ತಮ್ಮದೇ ನೀತಿ ನಿಯಮಗಳನ್ನು ತಂದರು. ಜನ ಅವುಗಳನ್ನು ಪಾಲಿಸುತ್ತಾ ಹೊಸ ಧರ್ಮ ಕಟ್ಟಿದರು. ಧರ್ಮ ಮಾರ್ಗದಲ್ಲಿ ನಡೆಯುತ್ತಾ ಬಂದರು. ಇಂದು ಈ ಎಲ್ಲಾ ನಾಯಕರನ್ನು ಅವಹೇಳನ ಮಾಡಲಾಗುತ್ತಿದೆ. ಅವರು ಹಾಕಿಕೊಟ್ಟ ಧರ್ಮದ ತಳಹದಿಯನ್ನು ಮರೆತು ಸಮಾಜದಲ್ಲಿ ಅಧರ್ಮ, ಅಶಾಂತಿಯ ಬೀಜ ಬಿತ್ತಲಾಗುತ್ತಿದೆ.
ಧರ್ಮದ ಒಳಗೂ ಜಗಳ, ಜಾತಿಯ ಒಳಗೂ ಜಗಳ, ಕುಟುಂಬದ ಒಳಗೂ ಜಗಳ, ಸಂಸಾರದ ಒಳಗೂ ಜಗಳ, ಆಸ್ತಿಗಾಗಿ ಪೋಷಕರನ್ನು ಕೊಲೆ ಮಾಡುವವರೆಗೆ ಜಗಳ, ಹಿರಿಯರನ್ನು ಎಲ್ಲೋ ಹೊರಗೆ ಬಿಸಾಕಿ ಬರುವಷ್ಟು ಕೋಪ, ಆಸ್ತಿಗಾಗಿ ಹಿರಿಯರಿಗೆ ವಿಷ ಹಾಕಿ ಸಾಯಿಸುವಷ್ಟು ಕ್ರೂರತನ, ಯಾರ ಮೇಲೆ ಯಾರಿಗೂ ನಂಬಿಕೆ ಇಲ್ಲದಷ್ಟು ಬದಲಾವಣೆ.. ಛೆ ಎಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ ನಾವಿಂದು! ಇಲ್ಲಿ ನಮಗೆ ಬೇಕಾದ ಪ್ರೀತಿ, ಪ್ರೇಮ, ಸ್ನೇಹ, ಶಾಂತಿ, ನೀತಿ, ನ್ಯಾಯ, ಹೊಂದಾಣಿಕೆ, ಸಹಬಾಳ್ವೆ, ಸಹಾಯ ಸಹಕಾರ, ತಾಳ್ಮೆ, ಸಹನೆ ಮೊದಲಾದ ಎಲ್ಲರೂ ಇಷ್ಟಪಡುವ ಗುಣಗಳಿಗೆ ಬೆಲೆಯೇ ಇಲ್ಲವಾಗಿ ಹೋಗಿದೆ. ಅದನ್ನು ಬೆಳೆಸಿಕೊಂಡವ ಗಾಂಧಿ! ಅದು ನಾವು ಹಿರಿಯ ಹೋರಾಟಗಾರರಿಗೆ ಕೊಡುವ ಗೌರವ! ಯಾರಿಗೂ ಗೌರವ ಇಲ್ಲ ಬಿಡಿ ಇಲ್ಲಿ. ಹೆತ್ತ ತಾಯಿ, ಹೊತ್ತ ತಂದೆ, ಕಲಿಸಿದ ಗುರುಗಳನ್ನು ಕೂಡಾ ಮರ್ಡರ್ ಮಾಡುವ ಕಾಲದಲ್ಲಿ ಗೌರವದ ಮಾತು ಬರಲು, ಹುಡುಕಲು ಸಾಧ್ಯವೇ? ಬದುಕಿಸಿದ ವೈದ್ಯರನ್ನೇ ಸಾಯಿಸುವ ಕಾಲ ಇದು!
ಇನ್ನು ಒಳ್ಳೆಯ ಮನುಷ್ಯತ್ವ ಇರುವ ಮನುಷ್ಯರನ್ನು ಹಿಡಿದು ಕೊಲ್ಲುವ ಕಾಲ ಸನಿಹದಲ್ಲೇ ಇದೆ. ಸಮಾಜದ ಶಾಂತಿ ಕಲಕಿದವರು ನಾಯಕ ಪಟ್ಟಕ್ಕೆ ಏರಬೇಕೆಂದು ಆಸೆ ಪಟ್ಟವರೆ? ಮನಗಳ ಒಳಗೆ ದುರಾಸೆ ಹೆಚ್ಚಿಸಿದವರು ಪೋಷಕರೇ? ಸಮಾಜದ ಶಾಂತಿ ಕದಡಿದವರು ರಾಜಕೀಯ ಪಕ್ಷಗಳ ನಾಯಕರೇ? ಕಾರ್ಯ ಕರ್ತರೇ? ನ್ಯಾಯಕ್ಕಾಗಿ ಹೋರಾಟ ನಡೆಸಲು ಕರೆ ಕೊಟ್ಟವರು ಯಾರು? ಒಂದು ಪಕ್ಷಕ್ಕೆ ಮತ ಹಾಕುವವರು ನೋಟಾ ಒತ್ತಿದರೆ ಲಾಭ ಯಾರಿಗೆ? ಯೋಚಿಸುವ ವ್ಯವಧಾನ ಜನಕ್ಕೆ ಇಂದು ಇಲ್ಲ. ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಯೋಚಿಸುವವರೆ.
ಈ ಸಮಾಜ ತಿದ್ದುವ ಸಮಾಜ ಸುಧಾರಕರು ಈ ಕಾಲದಲ್ಲಿ ಬರಲು ಸಾಧ್ಯವೇ ಇಲ್ಲ. ಕಾರಣ ಅವರ ಮಾತು ಕೇಳುವವರೇ ಇಲ್ಲ.
ಸಮಾಜ ಅಳಿವಿನ ಅಂಚಿನಲ್ಲಿ ಸಾಗುತ್ತಿದೆ ಏನೋ. ವಿಪರೀತ ಆಗುತ್ತಿರುವ ಅರಣ್ಯ ನಾಶ, ವಿಪರೀತ ಜನ ಸಂಖ್ಯೆ, ನೀರು, ಗಾಳಿ, ಮಣ್ಣಿನ ಮಾಲಿನ್ಯ ನೋಡಿದಾಗ ಒಂದು ಯುಗ ಅಂತ್ಯಕ್ಕೆ ಸಮೀಪಿಸುತ್ತಿದೆ ಅನ್ನಿಸುತ್ತಿದೆ. ಧರ್ಮ ಕಡಿಮೆ ಆದಾಗ ಜಗವನ್ನು ತೊಳೆದು ಸರಿ ಮಾಡಲು ಪರಮಾತ್ಮನ ಆಗಮನ ಆಗುತ್ತದೆ. ಮತ್ತೆ ಎಲ್ಲಾ ತೊಳೆದು ಮರುಹುಟ್ಟು! ಹೊಸ ಯುಗ ಆರಂಭ. ಈ ಹಳೆಯ ಯುಗದ ಕೊನೆಯ ಹಂತದಲ್ಲಿ ನಾವೆಲ್ಲಾ ಬದುಕುತ್ತಾ ಇದ್ದೇವೆ. ಯಾರು ಸರಿ ಮಾಡಬೇಕೋ, ಯಾರು ಸರಿ ಆಗ ಬೇಕೋ ಎಂಬುದನ್ನು ನಾವೇ ನಿರ್ಧರಿಸಿ ಬದುಕಬೇಕಿದೆ. ನೀವೇನಂತೀರಿ?
@ಹನಿಬಿಂದು@
21.04.2024