ಬುಧವಾರ, ಅಕ್ಟೋಬರ್ 25, 2023

ಬೀಸುತಿರಲಿ ತಂಗಾಳಿ

ಬೀಸುತಿರಲಿ ತಂಗಾಳಿ

ಬದುಕ ನಾವೆಯಲಿ ಬೀಸಿತು
ಹಿತವಾದ ತಂಗಾಳಿ
ಸೆಕೆಯಿಂದ ಬೆವರ ಹನಿ ಹೊದ್ದು
ಕಿತ್ತೆಸೆದ ಭಾವದ ಬೇರಿನ 
ಒಳಗಿಂದ ಸ್ಪುರಿಸಿದ ಅದೇನೋ 
ತಣ್ಣನೆಯ ಕುಳಿರ್ಗಾಳಿ..

ಪಂಕದ ಗಾಳಿ ಸಾಲದೆನಿಸಿ
ಏಸಿ ಕೂಲರ್ ಗಳ ಬದಿಗೆಸೆದು
ಅಲ್ಲೆಲ್ಲೋ ದೂರದ ಬೆಟ್ಟದ ತುದಿಯಲ್ಲಿ
ಪ್ರಕೃತಿಯ ರಮ್ಯ ಮಡಿಲಲ್ಲಿ
ಝುಳು ಝುಳು ಹರಿವ ತುಂಗೆಯ ದಡದಲ್ಲಿ
ಶಾಂತವಾಗಿ ಕುಳಿತು ಒಂದಷ್ಟು ಹೊತ್ತು
ಮೈ ಮನ ಹಗುರಾಗಿಸಿ ಇಹಪರ ಮರೆತು

ತನ್ನಷ್ಟಕ್ಕೆ ತಾನೇ ಬದಲಾಗಿ
ಕೊಂಚವಾದರೂ ಸುಧಾರಿಸಿ ಬೆಳೆಯಬೇಕು
ಆಲೋಚನೆಗಳ ಬದಲಾಯಿಸಿ
ಸಾಗರದ ಅಲೆಯಂತೆ ಚಿಮ್ಮಿ ದಡಕ್ಕೆ ಹಾರಿ ಬರಬೇಕು

ಮುಗಿಲಿಂದ ಅವಿತು ಕುಳಿತ ತುಂತುರು ಮಳೆ ಹಾನಿಯಾಗಿ
ಭೋರ್ಗರೆದು ಇಳೆಗೆ ಅಪ್ಪಿ 
ಮಣ್ಣಿನೊಡನೆ ಮುದ್ದಾಡಿ
ಮಣ್ಣಿನೊಳಗೆ ಒಂದಾಗಿ
ಇಳೆಯೊಡನೆ ಬೆರೆತು ಹೋಗಬೇಕು

ಮತ್ತೊಮ್ಮೆ ಇಳೆಯಲಿ ಹಸಿರಾಗಿ ಹುಟ್ಟಿ
ಕುದಿಯುತಿಹ ಧರೆಯ ತಣ್ಣಗೆ ಇರಿಸಬೇಕು

ತಣ್ಣಗಿನ ಮಂಜು ಹೊದ್ದ
ಹಿಮಾಲಯದ ತಪ್ಪಲಿನ ಬೆಟ್ಟದಲಿ
ಒಂಟಿಯಾಗಿ ನಡೆದು ಕುಣಿದು ಕುಪ್ಪಳಿಸಬೇಕು
ಇನ್ನೊಮ್ಮೆ ಭಾರತ ಮಾತೆಯ ಶಿಖರದ
ಹಿಮ ಮಣಿಯಾಗಿ ಮಿಂಚುವ 
ರವಿಕಿರಣವಾಗಿ ಪುಟಿದೇಳಬೇಕು

ಹೀಗೆಲ್ಲಾ ಕನಸು ಕಾಣುತ್ತಾ
ಮನದಲ್ಲೇ ಮಂಡಿಗೆ ಮೆಲ್ಲುತ್ತಾ
ಸೆಕೆಯಲಿ ಬಿಸಿಯಾದ ಭಾವಗಳ
ದೂರ ಬಿಸಾಕಿ ಕುಳಿತಾಗ

ಅದೆಲ್ಲಿಂದ ಬಂತೋ
ಎದೆ ಝಲ್ಲೆನಿಸುವ
ತಂಪು ತಂಪಾದ
ಭವ್ಯತೆಯ ಹೊತ್ತ
ಅಂಜದ ಅಳುಕದ
ನೆಚ್ಚಿನ ಮೆಚ್ಚಿನ
ಇಣುಕಿದರೂ ಬೇಕೇನಿಸುವ
ತಣ್ಣನೆಯ ಕುಳಿರ್ಗಾಳಿ..
ಮೈ ಮನ ತಣ್ಣಗಾಗಿಸಲು

ಯಾರೋ ನನ್ನೆದೆಯ ಬಳಿಗೆ
ಉಡುಗೊರೆಯ ಕಳಿಸಿ ಕೊಟ್ಟಂತೆ
ಅದಾರೋ ನನ್ನ ಮೊರೆಯ ಕೇಳಿ
ಸಾಂತ್ವನದ ಐಸ್ ಕ್ರೀಂ ಕೊಡಿಸಿದಂತೆ
ಅದೆಲ್ಲಿಂದಲೋ ಮಗು ಆಸೆ ಪಟ್ಟ
ದೊಡ್ಡ ಚಾಕೋಲೇಟ್ ಸಿಕ್ಕಂತೆ

ಮತ್ತೆ ಮತ್ತೆ ಕಚಗುಳಿ ಇಡುತ್ತಾ
ಬಂದೇ ಬಂತು
ತಣ್ಣನೆಯ ಸ್ಪರ್ಶದ ಅನುಭವದ
ತಂಪು ಭಾವಗಳ ಬೀಜ ಹೊತ್ತ
ಈಗಷ್ಟೇ ಮೊಳಕೆ ಕಟ್ಟಿ
ಗಿಡವಾಗಲು ತಯಾರಾದ
ಮುದ್ದು ಮುಖದ ಚೆಲುವೆಯಂತೆ

ನವೋಲ್ಲಾಸದ ಹಾಡು ಹೊತ್ತ
ಕವನದ ಪ್ರಾಸ ಪಡೆದ
ದಾಹದಲ್ಲಿ ಉದಕದಂಥ
ತಣ್ಣನೆಯ ಕುಳಿರ್ಗಾಳಿ.. 
ಬೀಸಿತು ತಂಪು ತಂಗಾಳಿ..
ಮತ್ತೆ ಮತ್ತೆ
ಮಾಸದಿರಲಿ
ಸದಾ ಬೀಸುತಿರಲಿ
ಮರಳುಗಾಡಿನ ಓಯಸಿಸ್ ನಂತೆ
ಮತ್ತೆ ಮತ್ತೆ ಹಿತವಾಗಿ..
ಬೀಸುತಿರಲಿ ಪ್ರೀತಿಯ ತಂಗಾಳಿ..
@ಹನಿಬಿಂದು@
26.10.2023

ಭಾನುವಾರ, ಅಕ್ಟೋಬರ್ 22, 2023

ಕನ್ನಡ ಭಾಷಾ ಸಾಹಿತ್ಯಕ್ಕೆ ಸಾಮಾಜಿಕ ಜಾಲತಾಣಗಳ ಕೊಡುಗೆ

ಕನ್ನಡ ಭಾಷೆಯ ಸಾಹಿತ್ಯಕ್ಕೆ ಜಾಲತಾಣಗಳ ಕೊಡುಗೆ
   ಇಂದಿನ ದಿನಗಳಲ್ಲಿ ಹೆಚ್ಚಿನವರು ಹೇಳೋದಿದೆ. ಏನಂತ ಹೇಳಿದ್ರೆ ಇಂದಿನ ದಿನದಲ್ಲಿ ಪುಸ್ತಕಗಳ ಓದು ಕಡಿಮೆಯಾಗಿದೆ ಹಾಗೂ ಮೊಬೈಲ್ ಬಳಕೆ ಜಾಸ್ತಿಯಾಗಿದೆ. ಜನರ ಜ್ಞಾನಮಟ್ಟ ಕಡಿಮೆಯಾಗಿದೆ ಮತ್ತು ಪುಸ್ತಕ ಓದದೇ ಇರುವುದರಿಂದ ಕಣ್ಣಿನ ಸಮಸ್ಯೆ ಹೆಚ್ಚಾಗಿದೆ ಮತ್ತು ಜ್ಞಾನದ ಮಟ್ಟ ಕಡಿಮೆಯಾಗಿದೆ. ನೇರವಾಗಿ ಬೆಳಕು ಬಿದ್ದಂತಹ ಎಲೆಕ್ಟ್ರಾನಿಕ್ ಮಾಧ್ಯಮಗಳ ಓದು ಉತ್ತಮವಲ್ಲ ಬದಲಾಗಿ ಕಣ್ಣಿಗೆ ಯಾವುದಾದರೂ ಒಂದು ವಸ್ತುವಿನ ಮೇಲೆ ಬೆಳಕು ಬಿದ್ದು ಅದನ್ನು ಓದಿದರೆ ಅದು ಬಹಳ ಕಾಲ ನೆನಪಲ್ಲಿ ಉಳಿಯುತ್ತದೆ ಎಂಬ ವೈಜ್ಞಾನಿಕ ತತ್ವವು ಮೊಬೈಲಿಗೂ ಅನ್ವಯಿಸುತ್ತದೆ ಎಂದು ಇನ್ನೂ ಕೆಲವರು ಹೇಳುತ್ತಾರೆ. ಅದರ ಜೊತೆ ಜೊತೆಗೆ ಲೇಖಕರು ಹಿಂದಿನ ಕಾಲದಲ್ಲಿ ಪುಸ್ತಕವನ್ನು ಆನ್ಲೈನಲ್ಲಿ ಬಿಡುಗಡೆ ಮಾಡುತ್ತಾ ಇರುವವರೂ ಇದ್ದಾರೆ. 
  ಹೇಳಿ ಕೇಳಿ ಎಲೆಕ್ಟ್ರಾನಿಕ್ ಯುಗವಿದು. ಲೈಬ್ರರಿಗೆ ಹೋಗಿ ಕುಳಿತುಕೊಳ್ಳಲು ಯಾರಿಗೆ ಸಮಯವಿದೆ ಹೇಳಿ? ಹಾಗೆಯೇ ಪುಸ್ತಕದ ಕಟ್ಟನ್ನು ಎದುರಿಗಿಟ್ಟುಕೊಂಡು ಓದುವಂತವರು ಎಂದು ಕಡಿಮೆ ಎಂದು ಹೇಳಬೇಕು. ಆದರೆ ಮೊಬೈಲನ್ನು ಕೈಯಲ್ಲಿಟ್ಟುಕೊಂಡು ಒತ್ತುತ್ತಾ ಗಂಟೆಗಟ್ಟಲೆ ಅದರಲ್ಲೇ ಕಳೆಯುವವರು ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ನಾವೆಂದು ಕಾಣುತ್ತೇವೆ. ಆದಕಾರಣ ಓದುವುದು ಕೂಡ ಎಂದು ಹೆಚ್ಚಾಗಿ ಮೊಬೈಲ್ ಗಳಲ್ಲಿ ನಡೆಯುತ್ತದೆ ಅಥವಾ ಕಂಪ್ಯೂಟರ್ ಮೂಲಕ ನಡೆಯುತ್ತದೆ. ಹೀಗಿರುವಾಗ ಕನ್ನಡ ಸಾಹಿತ್ಯಕ್ಕೂ ಕೂಡ ಜಾಲತಾಣಗಳ ಕೊಡುಗೆ ಬಹಳಷ್ಟು ಇದೆ ಎಂದೇ ಹೇಳಬಹುದು. 
  ಹಿಂದಿನ ಕಾಲದಲ್ಲಿ ಕವಿಗಳು ಅದೆಷ್ಟೇ ಬರೆದರೂ ಕೂಡ ಅದನ್ನು ಪ್ರಚಾರ ಮಾಡಲು ಪುಸ್ತಕಗಳೇ ಬೇಕಿತ್ತು. ಅದಕ್ಕೆ ಲೈಬ್ರರಿಗಳು ಹುಟ್ಟಿಕೊಂಡವು. ಸಣ್ಣ ಸಣ್ಣ ಗ್ರಾಮಗಳಲ್ಲಿ ಗ್ರಾಮಾಂತರ ಲೈಬ್ರರಿಗಳು ಹಾಗೆಯೇ ತಾಲೂಕು ಕೇಂದ್ರಗಳಲ್ಲಿ ದೊಡ್ಡದಾದ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಲೈಬ್ರರಿಗಳು ತೆರೆದು ಕೊಂಡವು. ಆದರೆ ಇಂದಿನ ದಿನಗಳಲ್ಲಿ ಈ ಲೈಬ್ರರಿಗಳು ಹೆಚ್ಚು ಕೆಲಸ ಮಾಡುತ್ತಿವೆ ಅನ್ನಿಸುತ್ತಿದೆ. 
ಹೆಚ್ಚಿನ ಜನ ಓದಲಿ ಎಂಬ ಆಸೆಯಿಂದ ಚಿತ್ರವಿಚಿತ್ರವಾಗಿ ಬರೆಯುವುದು, ಅತಿ ಹೆಚ್ಚು ಜನರಿಂದ ಲೈಕುಗಳನ್ನು ಗಿಟ್ಟಿಸಿಕೊಳ್ಳಲು ಅಶ್ಲೀಲವಾಗಿ ಬರೆಯುವುದು, ಹುಡುಗಿಯರ ಬಗ್ಗೆ ಹೆಚ್ಚಾಗಿ ಬರೆದು ಜನಮನ್ನಣೆ ಪಡೆದುಕೊಳ್ಳುವುದು, ತನ್ನ ಪ್ರೇಮಿಗೆ ಅಥವಾ ಪ್ರಿಯಕರಣಿಗೆ ಹೇಳಲು ಸಾಧ್ಯವಾಗದನ್ನು ಕವನದ ಮೂಲಕ ಅಥವಾ ಕಥೆಗಳ ಮೂಲಕ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು, ತನ್ನದೇ ಕಥೆಯನ್ನು ಸ್ವಲ್ಪ ಹೆಸರು ಬದಲಾಯಿಸಿ ಬೇರೆ ತರ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು ಇದೆಲ್ಲವನ್ನು ಕೂಡ ನಾವು ಇಂದು ಕಾಣತ್ತೇವೆ. ಆದರೂ ಕೂಡ ಸಾಮಾಜಿಕ ಜಾಲತಾಣಗಳು ಕನ್ನಡ ಸಾಹಿತ್ಯಕ್ಕೆ ಏನನ್ನು ಕೊಡುಗೆಯಾಗಿ ಕೊಟ್ಟಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಲವಾರು ವಾಟ್ಸಪ್ ಗುಂಪುಗಳಲ್ಲಿ ಮತ್ತು ಫೇಸ್ಬುಕ್ ಗುಂಪುಗಳಲ್ಲಿ ನಾನು ಪ್ರತಿನಿತ್ಯ ಕನ್ನಡ ಬರವಣಿಗೆಗಳನ್ನು ಕಾಣುತ್ತೇನೆ. ಬೇರೆ ಬೇರೆ ರೀತಿಯ ಬರಹಗಳು ಪ್ರತಿನಿತ್ಯವೂ ಜಾಲತಾಣಗಳಲ್ಲಿ ಸಿಗುತ್ತವೆ. ಒಂದೇ ರೀತಿ ಕವನವನ್ನು ಮಾತ್ರ ಎಂದು ಕವಿಗಳು ಬರೆಯುತ್ತಿಲ್ಲ. ಬದಲಾಗಿ ಜಾಲತಾಣಗಳ ಸಹಾಯದಿಂದ ಹಲವಾರು ಹಿರಿಯ ಕವಿಗಳ ಜೊತೆಗೆ ಒಡನಾಟವನ್ನು ಇಟ್ಟುಕೊಂಡು ಅವರ ಜೊತೆಯಲ್ಲಿ ಕೇಳಿ ಕಲಿತು ಗಜಲ್, ಭಾವಗೀತೆ, ಕವನ, ಕವಿತೆ , ಲಾವಣಿ , ಚುಟುಕು , ಹಾಯ್ಕು ಇದೇ ಮುಂತಾದ ಹಲವರು ವಿವಿಧ ಪ್ರಕಾರಗಳಲ್ಲಿ ಬರೆಯುವುದು ಹೇಗೆ ಎಂದು ಒಬ್ಬರಿಗೊಬ್ಬರು ಸಲಹೆಗಳನ್ನು ನೀಡುತ್ತಾ, ಒಬ್ಬರನ್ನು ಮತ್ತೊಬ್ಬರು ತಿದ್ದುತ್ತಾ,  ಪ್ರತಿ ಕವಿಯ ವಿಮರ್ಶೆಯನ್ನು ಮಾಡುತ್ತಾ ಕಲಿಕೆ ಮತ್ತಷ್ಟು ಮಗದಷ್ಟು ಸಾಗಿದೆ. ಬರವಣಿಗೆಯನ್ನು ತಿಳಿದುಕೊಂಡವರು ಮತ್ತಷ್ಟು ಮಗದಷ್ಟು ಓದಿ ಇನ್ನೂ ಒಂದಷ್ಟು ಬರೆದು ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಇತ್ತೀಚೆಗಂತೂ ವರ್ಷಕ್ಕೆ ಹಲವಾರು ಕವನಗಳ ಕವಿತೆಗಳ ಪುಸ್ತಕಗಳು ಬಿಡುಗಡೆಯಾಗುವುದನ್ನು ನಾವು ನೋಡುತ್ತಿದ್ದೇವೆ. 
  ಸಹಜವಾಗಿಯೂ ಉಪಯೋಗ ಮತ್ತು ದುರುಪಯೋಗ ಎಲ್ಲಾ ಕಡೆ ಕಂಡು ಬರುತ್ತದೆ ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಒಬ್ಬರ ಕವನಗಳನ್ನು ಮತ್ತು ಬರಹಗಳನ್ನು ಕದ್ದು ಮತ್ತೊಬ್ಬರು ತಮ್ಮ ಬ್ಲಾಗ್ ಗಳಲ್ಲಿ ಹಾಕಿಕೊಳ್ಳುವುದು, ಹಿರಿಯ ಕವಿಗಳ ಕವನದ ಸಾಲುಗಳನ್ನು ಕದ್ದು ತಮ್ಮ ಕವನದಲ್ಲಿ ಅಳವಡಿಸಿಕೊಳ್ಳುವುದು, ಬೇರೆ ಬೇರೆ ಭಾಷೆಯ ಕವಿಗಳ ಕವನದ ಸಾಲುಗಳನ್ನು ಭಾಷಾಂತರಿಸಿ ಅವರ ಗಮನಕ್ಕೆ ತರದೆ ತಮ್ಮ ಕವನಗಳ ಮಧ್ಯದಲ್ಲಿ ಸೇರಿಸಿಕೊಳ್ಳುವುದು, ನಿಜವಾದ ಕವನ ಬರೆದವರ ಹೆಸರನ್ನು ತೆಗೆದು ತನ್ನ ಹೆಸರನ್ನು ಸೇರಿಸಿ ಪೋಸ್ಟ್ ಮಾಡುವುದು ಇದೆಲ್ಲ ನಡೆದೇ ಇದೆ. ಆದರೆ ನಿಜವಾದ ಬುದ್ಧಿಮತ್ತೆ ಇರುವ ಕವಿಗಳು ಎಲ್ಲಾ ಕಡೆಯೂ ಗುರುತಿಸಲ್ಪಡುತ್ತಾರೆ ಅವರು ಸಾಮಾಜಿಕ ಜಾಲತಾಣಗಳನ್ನು ಕೂಡ ಅತ್ಯುತ್ತಮವಾಗಿ ಬಳಸಲು ಕಲಿತುಕೊಂಡಿರುತ್ತಾರೆ. 
ಒಂದು ಕಡೆ ನೋಡಿದರೆ ನಮಗೆ ಪಾಸಿಟಿವ್ ಥಿಂಕಿಂಗ್ ಅಥವಾ ಧನಾತ್ಮಕ ಆಲೋಚನೆಗಳು ಉತ್ತಮ ಎಂದು ಹೇಳುವಂತೆ ಧನಾತ್ಮಕವಾಗಿ ಯೋಚನೆ ಮಾಡುವುದಾದರೆ ಹೆಚ್ಚಿನ ಕವಿಗಳನ್ನು ನಾವು ಮಾತನಾಡಿಸಲು ಸಾಧ್ಯವಾಗುವುದು ಸಾಮಾಜಿಕ ಜಾಲತಾಣಗಳ ಮೂಲಕವೇ. ಅವರ ಬರಹಗಳನ್ನು ಕೂಡ ಓದಲು ಸುಲಭವಾಗಿ ಸಿಗುವುದು ಸಾಮಾಜಿಕ ಜಾಲತಾಣಗಳ ಮೂಲಕವೇ. ಕೇವಲ ಕನ್ನಡ ಸಾಹಿತ್ಯದ ಬರಹ ಮಾತ್ರವಲ್ಲ ಸಾಹಿತ್ಯದ ಓದು ಹಾಡು ಅಭಿನಯ ಹಾಗೆಯೇ ಸಾಹಿತ್ಯದ ವಿವಿಧ ಪ್ರಕಾರಗಳ ಬಳಕೆ  ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿದೆ ಅಲ್ಲವೇ? 
ನಿಜವಾಗಿ ಓದಿ ಬರೆಯುವವನು ಮತ್ತು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದಿರುವವನು ಸಾಮಾಜಿಕ ಜಾಲವಾದರೆ ಏನು ಪುಸ್ತಕವಾದರೆ ಏನು ಎಲ್ಲಾ ಕಡೆಯೂ ಓದಿಕೊಂಡು ತನ್ನ ಜ್ಞಾನವನ್ನು ಹೆಚ್ಚಿಸಿಕೊಂಡು ಬರೆಯುತ್ತಾನೆ. ಕಳ್ಳ ಕವಿಗಳಿಗೆ ವಾಚನಾಲಯ ಗ್ರಂಥಾಲಯಗಳಿಂದ ಪುಸ್ತಕಗಳನ್ನು ತಂದು ಓದಿ ಅದರಿಂದಲೂ ಹಲವಾರು ಸಾಲುಗಳನ್ನು ಕದಿಯಬಹುದಲ್ಲವೇ? ಜಾನಕ್ಕೆ ಯಾವಾಗಲೂ ಯಾರು ಬೆಲೆ ಕಟ್ಟಲು ಸಾಧ್ಯವಿಲ್ಲ . ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಜ್ಞಾನಿಯಾದವ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಮ್ಮ ಜ್ಞಾನದಿಂದ ಉತ್ತಮವಾದ ಸಾಹಿತ್ಯವನ್ನು ಹೊರಗೆ ತಂದು ಅದರ ಮೂಲಕ ಹಲವಾರು ಬರಹಗಳಿಂದ ಕನ್ನಡದ ಸಾಹಿತ್ಯ ಸೇವೆಯನ್ನು ಮಾಡುತ್ತಾ ತನ್ನ ಮಾತೃಭಾಷೆಯ ಋಣವನ್ನು ತೀರಿಸಲು ಇದು ಅತ್ಯಂತ ಸುಲಭದ ವಿಧಾನವಾಗಿದೆ. 
ಎಲ್ಲೋ ಅಲ್ಲಿ ಇಲ್ಲಿ ಒಂದಷ್ಟು ಕಡೆ ಇದರ ಋಣಾತ್ಮಕತೆ ಇದ್ದರೂ ಕೂಡ ಸರಿಯಾದ ರೀತಿಯಲ್ಲಿ ಧನಾತ್ಮಕವಾಗಿ ಆಲೋಚಿಸುತ್ತಾ ತಮ್ಮ ಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುತ್ತಾ ವಾರ್ತಾ ಪತ್ರಿಕೆಗಳಿಗೆ ಈಮೇಲ್ ಮೂಲಕ ತನ್ನ ಬರಹವನ್ನು ಕಳುಹಿಸುತ್ತಾ ಹಾಗೆಯೇ ಅವುಗಳಿಂದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಂಡು ಓದುತ್ತಾ ಹೀಗೆ ಸಾಮಾಜಿಕ ಜಾಲ ತಾಣಗಳು ಕನ್ನಡದ ಸಾಹಿತ್ಯದ ಪ್ರಚಾರಕ್ಕೆ ಮತ್ತು ತಮ್ಮದೇ ಆದ ಸಾಹಿತ್ಯದ ಬಳಕೆಯನ್ನು ಹೆಚ್ಚಿಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನನ್ನ ಅನಿಸಿಕೆ. ನೀವೇನಂತೀರಿ?
@ಹನಿಬಿಂದು@
18.10.2023

ಹನಿ

ಮಾನವರಾಗೋಣ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -206

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -206

       ಭಾರತ ಮಾತ್ರವಲ್ಲ ಕರ್ನಾಟಕವೂ ವಿವಿಧ ಸಂಸ್ಕೃತಿಯ ನೆಲೆವೀಡು. ಉತ್ತರ ಕರ್ನಾಟಕ, ಕೊಡವ, ಗಡಿ ಭಾಗದಲ್ಲಿ ಮರಾಠಿ, ತೆಲುಗು, ಕೊಂಕಣಿ, ತಮಿಳು, ಲಂಬಾಣಿ, ಬುಡಕಟ್ಟು ಜನಾಂಗ ಹೀಗೆ ಬೇರೆ ಬೇರೆ ಸಂಸ್ಕೃತಿಯ ಹಾಗೆಯೇ ತುಳುವರದ್ದೂ ಕೂಡ ಬೇರೆಯೇ ತೆರನಾದ ಸಂಸ್ಕೃತಿಯಿದೆ. ಬೆಳಗ್ಗೆ ಎದ್ದು ಬಾಗಿಲಿಗೆ ನೀರು ಹಾಕಿ ರಂಗೋಲಿ ಹಾಕುವ ಕಲೆ ಇಲ್ಲಿನದಲ್ಲ ಬದಲಾಗಿ ಬಾಗಿಲು, ಅಂಗಳ, ಮನೆಯೊಳಗೂ ಗುಡಿಸಿ, ಪಾತ್ರೆ ತೊಳೆದು, ಅಂಗಳವನ್ನು ಸೆಗಣಿ  ನೀರಿನಿಂದ ಸಾರಿಸುವ ಕಾರ್ಯ ಹಿಂದಿನದು. ಯಾವುದೇ ಕಾರ್ಯಕ್ರಮ ಇರಲಿ, ಪೂಜೆ ಇರಲಿ ಮನೆಯ ಅಂಗಳವನ್ನು ಸಾರಿಸಲೇ ಬೇಕು. ಹಿಂದಿನ ಕಾಲದಲ್ಲಿ ಸಿಮೆಂಟ್ ಇಲ್ಲದಾಗ ಮನೆಯ ನೆಲವನ್ನೂ ಹೀಗೆಯೇ ಸಾರಿಸುತ್ತಿದ್ದರಂತೆ. ಬಟ್ಟೆ ತೊಡುವಲ್ಲೂ ವಿಶೇಷ. ಮಹಿಳೆಯರಿಗೆ ಸೀರೆಯ ನೆರಿಗೆ ಉದ್ದ ಬಿಟ್ಟು, ಉದ್ದವಾದ ಕಪ್ಪು ಮಣಿಯ ಕರಿಮಣಿ ಸರ, ಒಂಕಿ ಉಂಗುರ. ಕಾಲಿಗೆ ಹಲವು ಸುತ್ತಿನ ಕಾಲುಂಗುರ ಪತಿವ್ರತೆಗೆ. ದೊಡ್ಡದಾದ ರೌಂಡ್ ತುರುಬು. ಅದರ ಸುತ್ತ ಮಂಗಳೂರು ಮಲ್ಲಿಗೆಯ ಅಲಂಕಾರ.  
ಊಟದಲ್ಲೂ ಅಷ್ಟೇ. ಇಲ್ಲಿ ಬಹಳ ವಿಶೇಷತೆ. ಕುಚ್ಚಲಕ್ಕಿ ಅನ್ನ, ತೆಂಗಿನ ಕಾಯಿ ರುಬ್ಬಿ ಹಾಕಿ ತಯಾರಿಸಿದ ಗಟ್ಟಿ ಸಾಂಬಾರ್,  ಸುಕ್ಕ, ಗಸಿ, ಪಲ್ಯ, ಉಪ್ಪಿನ ಕಾಯಿ, ಚಟ್ನಿ, ಪಾಯಸ, ಹೋಳಿಗೆ, ಹಪ್ಪಳ, ಚಕ್ಕುಲಿ ಇಲ್ಲಿನ ವಿಶೇಷ. ಮಿಶ್ರಾಹಾರಿಗಳಿಗೆ ಕೋಳಿ ಸುಕ್ಕಾ ಹಾಗೂ ಕೋಳಿ ಸಾರು, ಅಕ್ಕಿ ರೊಟ್ಟಿ ಇಲ್ಲಿನ ವಿಶೇಷ. ಆಟಿ (ತುಳು ತಿಂಗಳಿನ ಆಷಾಡ) ದಲ್ಲಿ  ಮಾಡುವ ಪತ್ರೊಡೆ, ತಜಂಕ್ ಮತ್ತು ಹಲಸಿನ ಬೀಜದ ಪಲ್ಯ, ಕೆಡ್ಡಸ ಹಬ್ಬಕ್ಕೆ ತಯಾರಿಸುವ ನನ್ಯರಿ ಅಥವಾ ಕುಡುವರಿ, ಬದನೆ ನುಗ್ಗೆ ಸಾಂಬಾರ್, ಇತರ ದಿನಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ತಯಾರಿಸುವ  ಮಂಗಳೂರು ಸೌತೇಕಾಯಿ ಸಾಂಬಾರ್, ಹಾಗೆಯೇ ಮಾವಿನಕಾಯಿ, ಅಮಟೆ ಕಾಯಿ, ಸೌತೆಕಾಯಿ, ಹಲಸಿನ ಎಳೆ ಕಾಯಿಯ ಉಪ್ಪಿನಕಾಯಿ, ತೊಂಡೆಕಾಯಿ ಉಪ್ಪಿನಕಾಯಿ ಇಲ್ಲಿನ ವಿಶೇಷ. 
  ಇನ್ನು ಕಾರ್ಯಕ್ರಮಗಳ ಊಟದಲ್ಲಿ ಕೂಡ ವಿಶೇಷತೆ. ಐಸ್ ಕ್ರೀಮ್ ಇಲ್ಲಿ ಸರ್ವರ ಆಯ್ಕೆ. ಹಾಗೆಯೇ ಇಲ್ಲಿನ ಜೈನರ ಊಟದ ರುಚಿಯೇ ಬೇರೆ. ಅದನ್ನು ತಿಂದವ ಮತ್ತೆ ಮತ್ತೆ ಬೇಕೇನುವ. ಹುಣಸೆ ಹುಳಿ, ಬೆಳ್ಳುಳ್ಳಿಯ ಉಪ್ಪಿನಕಾಯಿ, ಮೆಣಸಿನ ಚಟ್ನಿ, ವಿಶೇಷ ಸಾರು, ಸಿಹಿ ತಿನಿಸು ಮೆಚ್ಚಿ ಒಪ್ಪುವವರೆ ಎಲ್ಲರೂ. ಇನ್ನು ಅಡುಗೆ ಎಂದರೆ ನೆನಪಾಗುವುದು ಭಟ್ಟರು. ಭಟ್ಟರ ಊಟ, ಹೋಟೆಲ್, ಅದರ ಸವಿ ಇನ್ನೊಂಥರ! ಇಡ್ಲಿ ಸಾಂಬಾರ್,  ಹೋಳಿಗೆ ಊಟ, ಭಟ್ಟರ ಸ್ಪೆಷಲ್ ಸಾರು, ಚಟ್ನಿ, ಸಿಹಿ ತಿನಿಸುಗಳು , ಊಟದ, ತಿನ್ನುವ ಪದ್ಧತಿ, ಮಜ್ಜಿಗೆ ಊಟ ಎಲ್ಲವೂ ವಿಶೇಷ. ತಂಬುಳಿ ಯಂತೂ ಆರೋಗ್ಯಕ್ಕೆ ಲೋಕಪ್ರಿಯವಾಗಿದೆ. ಇನ್ನು  ಅದು ಆರೋಗ್ಯಕರ ಊಟ ಕೂಡ. ಬುದ್ಧಿಶಕ್ತಿಯ ಬೆಳವಣಿಗೆಯೂ. 
  
ಇನ್ನು ಮನೆಗಳ ಅಂದ ಅದೊಂದು ಬೇರೆಯೇ. ಎಲ್ಲಾ ಕಡೆ ಮನೆಗಳು ಪೂರ್ವಾಭಿಮುಖವಾಗಿ ಇದ್ದರೆ ಇಲ್ಲಿ ಅದು ಉತ್ತರಾಭಿಮುಖ. ಪೂರ್ವಕ್ಕೊಂದು ಬಾಗಿಲು. ಮಂಗಳೂರು ಹಂಚಿನ ಮನೆ ನೋಡಲು ಸುಂದರ. 
ಊರಲ್ಲಿಯೇ ಬೆಳೆದ ತೆಂಗಿನ ಎಣ್ಣೆಯನ್ನು ಬಳಸಿ ತಯಾರಿಸಿದ ನೀರ್ ದೋಸೆ, ಅದರಲ್ಲೇ ಒಗ್ಗರಣೆ ಹಾಕಿದ ಕೆಂಪು ಚಟ್ನಿ. ತೆಂಗಿನ ಎಣ್ಣೆ ಆಲೀವ್ ಎಣ್ಣೆಗಿಂತಲೂ ಭಾರತದ ಪರಿಸರಕ್ಕೆ ಉತ್ತಮ ಆಹಾರ ಎಂದು ತಜ್ಞರು ಹೇಳುತ್ತಾರೆ. ಬೆಳಗ್ಗೆ ತಿನ್ನುವ ಕುಚಲಕ್ಕಿ ಗಂಜಿ ಚಟ್ನಿ ಯಿಂದ ಯಾವುದೇ ಗ್ಯಾಸ್ಟ್ರಿಕ್ ರೋಗ ಬಾರದು.
ಯಾವುದೇ ಕಾರ್ಯಕ್ರಮಕ್ಕೆ ಆಸನ, ವೇದಿಕೆಗೆ ಹೆಚ್ಚು ಒತ್ತು ಕೊಡದ, ಕೆಲಸಕ್ಕೆ ಹೆಚ್ಚು ಸಮಯ ವ್ಯಯ ಮಾಡುವ ಪ್ರಾಕ್ಟಿಕಲ್ ಜನ ಇಲ್ಲಿನವರು. ಹೆಚ್ಚು ಸಿನೆಮಾ ನೋಡಲು ಸಮಯ ಮೀಸಲಿಡುವುದಿಲ್ಲ. ಬದಲಾಗಿ ತುಳು ನಾಟಕಗಳನ್ನು ಹೆಚ್ಚು ನೋಡುತ್ತಾರೆ. ಈಗಲೂ ಸಿನೆಮಾ ಕಾಲದಲ್ಲಿ ನಾವಿದ್ದರೂ ನಾಟಕದ ಮೋಹ ಜನರನ್ನು ಬಿಟ್ಟಿಲ್ಲ. ಅದರ ಜೊತೆಗೆ ತೆಂಗಿನ ಕಾಯಿಯ ಹಾಗೆಯೇ ಯಕ್ಷಗಾನ ಕೂಡ ಇಲ್ಲಿನ ಜನರ ಉಸಿರು. ಯಕ್ಷಗಾನ ನೋಡದ ತುಳುವನಿಲ್ಲ. 
ಹಣಕ್ಕಾಗಿ ಪರದೇಶ, ಪರವೂರಿಗೆ ಹೆಚ್ಚು ವಲಸೆ. ಅದರಲ್ಲೂ ಉದ್ಯಮ ಇವರ ಕೈ ಬಿಡುವುದಿಲ್ಲ. ಹೋಟೆಲ್ ಗಳು ಇವರ ಆಪ್ಯಾಯಮಾನ ಕೆಲಸ.  ಹಲವರಿಗೆ ಹೊಟ್ಟೆ ತುಂಬಾ ಊಟ ಕೊಡುವ ಕಾರ್ಯ. 
ಇನ್ನು ಸತ್ಯಪ್ರಿಯರು. ನಂಬಿಕೆ ಉಳಿಸಿಕೊಳ್ಳುವಲ್ಲಿ ನಾನು ಹೆಸರಾದವರು. ಕಪಟ ಅರಿಯದವರು. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವವರು. ಸ್ವಾಭಿಮಾನಿಗಳು. ಎಷ್ಟೇ ಕಷ್ಟ ಬಂದರೂ ಹೊರಗಿನ ಜನರಿಗೆ ಅದನು ತೋರಿಸಿ ಕೊಳ್ಳದೆ ತಾವೇ ಕಷ್ಟ ಪಡುವವರು. ಯಾರೊಡನೆಯೂ ಉಚಿತಕ್ಕಾಗಿ ಅಂಗಲಾಚದವರು. ತಾವಾಯಿತು ತಮ್ಮ ಬದುಕಾಯಿತು ಎಂದು ದಿನ ಕಳೆಯುವವರು. ಹೆಣ್ಣು ಮಕ್ಕಳನ್ನು , ಹೆಂಗಸರನ್ನು ಗೌರವಿಸುವವರು. ಕುಟುಂಬದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ಕೊಡುವ ಅಳಿಯಕಟ್ಟು ಸಂಪ್ರದಾಯ ರೂಢಿಸಿಕೊಂಡವರು.  ತಾಯಿ ಮನೆಗೆ ಹೆಚ್ಚು ಪ್ರಾಶಸ್ತ್ಯ ಕೊಡುವವರು .

ಹೀಗೆಯೇ ಅದರದೇ ಆದ ಸಂಸ್ಕೃತಿ ಆಚಾರ ವಿಚಾರಗಳನ್ನು ಹೊಂದಿದ, ವಿವಿಧತೆಯಲ್ಲಿ ಏಕತೆ ಮೆರೆವ ತುಳುನಾಡು ತುಳುಲಿಪಿಯನ್ನು ಹೊಂದಿದ್ದು ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಕೂಡಾ ಒಂದಾಗಿದೆ. ಮಾತೃಭಾಷೆ ತುಳು ಆದರೂ ಕಲಿಯುವ ಭಾಷೆ ರಾಜ್ಯಭಾಷೆ. ಹಿಂದಿ , ಕನ್ನಡ, ಮಲಯಾಳಂ, ಕೊಂಕಣಿ ಬ್ಯಾರಿ ಭಾಷೆ ಇಲ್ಲಿನ ಜನ ತುಳುವಿನ ಜೊತೆಗೆ ಕಲ್. ಇಂತಹ ತುಳುನಾಡ ಜನ ಪ್ರಪಂಚದ ವಿವಿಧ ಭಾಗಗಳಲ್ಲಿ ಇದ್ದಾರೆ. ತುಳುನಾಡು, ತುಳು ಸಂಸ್ಕೃತಿ ಮೆರೆಯಲಿ, ಬೆಳೆಯಲಿ, ಬೆಳಗಲಿ ಎಂಬ ಸದಾಶಯಗಳು. ನೀವೇನಂತೀರಿ?
@ಹನಿಬಿಂದು@
11.10.2023

  

ಅವನ ಅಂತರಂಗ

ಅವನ ಅಂತರಂಗ

ಅದೇಕೋ ಬೇಡ ಬೇಡ ಎಂದರೂ
ನೀನೇ ಮನಸ್ಸಿಗೆ ಬಂದು ಕಾಡ್ತೀಯ ಕಣೆ 
ಮುದ್ದು ಮುಖದ ಹೊನ್ನ ನಗೆ ಕನ್ನಡಿಯಲ್ಲಿ
ನನ್ನೇ ನಾ ಕಾಣುವ ಹಾಗೆ..

ಆ ಬಟ್ಟಲು ಕಂಗಳ ಕಾಂತಿಯ
ಮಿಂಚಿನ ಒಳಗೂ ನನ್ನದೇ ಪ್ರತಿರೂಪ ಕಂಡಂತೆ
ಕನಸಲೂ ನೀನೇ ಮನದ ತುಂಬೆಲ್ಲಾ ನೀನೇ
ಅದ್ಯಾವ ಶಿಲ್ಪಿ ಕೆತ್ತಿ ಜೀವ ತುಂಬಿದರು ನಿನಗೆ

ಬರೆದಷ್ಟು ಪದ ಸಿಗದು
ಗೀಚಿದಷ್ಟು ಸಾಲು ಸಣ್ಣದು
ನಿನ್ನ ಅದು ಹೇಗೆ ಹೊಗಳಲಿ ಚೆಲುವೆ
ನನ್ನೊಡಲ ಕಾವ್ಯದೊಲವೆ

ನೀ ಒಮ್ಮೆ ಮನಸಾರೆ ನಕ್ಕರೆ 
ನನ್ನ ಹೃದಯ  ಬಾಯಿಗೆ ಬಂದಂತೆ
ನಿನ್ನ ಕಣ್ಣಿಂದ ಹನಿ ಮುತ್ತುಗಳು ಉದುರಿದರೆ
ನನ್ನ ನಾ ಮರೆತು ಹೋದಂತೆ

ಧರೆಯೊಳಗಿನ ಸುಖ ಸ್ವರ್ಗ ಸಂತೋಷ ನೀನೇ
ಪೊರೆಯೊಳಗಿನ ಹಾವಿನ ತೆರದಿ ಪೊರೆವೆ
ಮನದಾಳದ ಹೊಂಡದಿಂದ ಆಚೆ ತೆಗೆಯದೆ
ಎದೆ ಗುಡಿಯ ಗರ್ಭ ಗುಡಿಯಲ್ಲಿ ಇಟ್ಟು ಪೂಜಿಸುವೆ

ಮತ್ತೆ ಹಠ ಮಾಡದೇ ಬಾರೆ ಕನಸೇ
ಸತಾಯಿಸದೆ ನನ್ನ ಸೇರೆ ಮುಗಿಲೆ
ನೀರಿನಿಂದ ತೆಗೆದ ಮೀನಂತೆ ಚಡಪಡಿಸುತಿಹೆ
ಮನದ ಕದ ತೆರೆದಿಲ್ಲ ನೀ ಹೊರಗೆ ಓಡುವೆ ಎಂದು
@ಹನಿಬಿಂದು@
04.10.2023

ಮಾನವ ಬದುಕು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 205



ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 205
   ಇನ್ನೊಂದು ವಾರದಲ್ಲಿ ನಾಡ ಹಬ್ಬ ದಸರಾ ಪ್ರಾರಂಭವಾಗುತ್ತದೆ. ಮಕ್ಕಳಿಗೆ ಶಾಲೆಯಲ್ಲಿ ದಸರಾ ರಜೆ ಘೋಷಿಸಲಾಗಿದೆ. ಕಾನ್ವೆಂಟ್ ಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಮುಂದಿನ ವಾರದಿಂದ ರಜೆ. ಇಂತಹ ರಜಾ ದಿನಗಳಲ್ಲಿ ವಿದ್ಯಾರ್ಥಿಗಳು ಅಲ್ಲಿ ಇಲ್ಲಿ ಸುತ್ತಲೂ ಅದರ ಜೊತೆಗೆ ನದಿಗೆ ಸ್ನಾನಕ್ಕೆ ಹೋಗುವುದು, ತಮಗೆ ಗೊತ್ತಿಲ್ಲದ ಹೊಸ ಜಾಗದಲ್ಲಿ ನೀರಿನಾಳ ತಿಳಿಯದೆ ಈಜಾಡಲು ಹೋಗುವುದು ಹಾಗೆ ಗೊತ್ತಿಲ್ಲದ ರಸ್ತೆಯಲ್ಲಿ ಬಂಧುಗಳ ಮತ್ತು ಕಾರುಗಳನ್ನು ಪರವಾನಗಿಲ್ಲದೆ ಓಡಿಸುವುದು ಇಂತಹ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇವೆಲ್ಲ ಜೀವಕ್ಕೆ ಅಪಾಯ ತಂದುಕೊಡುವ ಕೆಲಸಗಳು. 
   ಯಾವುದೇ ವಿದ್ಯಾರ್ಥಿಯಾಗಲಿ 18 ವರ್ಷಕ್ಕಿಂತ ಮೊದಲು ಪರವಾನಗಿ ಇಲ್ಲದೆ ಯಾರ ವಾಹನಗಳನ್ನು ಓಡಿಸುವಂತಿಲ್ಲ ಹಾಗೆ ವಾಹನ ಕೊಟ್ಟವರ ಮೇಲೆ ದಂಡ ವಿಧಿಸಲಾಗುತ್ತದೆ. ಬೇರೆ ಊರಿಗೆ ಬಂದುಗಳ ಮನೆಗೆ ಹೋಗುವಾಗ ಅಲ್ಲಿ ಅವರ ಮೊಬೈಲ್ ಫೋನನ್ನು ತೆಗೆದುಕೊಂಡು ತಮಗೆ ಬೇಕಾದ ಹಾಗೆ ಸಿಕ್ಕಿಸಿದ್ದನ್ನೆಲ್ಲ ಒತ್ತಿ, ನೋಡಬಾರದ್ದನ್ನೆಲ್ಲ ನೋಡಿ ತಮ್ಮ ಬದುಕಿನಲ್ಲಿ ಹಾಳಾಗುವ ಮಕ್ಕಳು ಅದೆಷ್ಟೋ ಇದ್ದಾರೆ. ಪೋಷಕರು ಈ ಬಗ್ಗೆ ತುಂಬಾ ಜಾಗರೂಕರ ಆಗಿರಬೇಕು. ತಮ್ಮ ಮಕ್ಕಳನ್ನು ಬಂಧುಗಳೊಡನೆ ಬಿಡುವಾಗ ಅವರು ಯಾವ ರೀತಿಯ ಜನ ಅವರ ನಡತೆ ಇವುಗಳನ್ನೆಲ್ಲ ನೋಡಿ ಅವರ ಜೊತೆ ತಮ್ಮ ಮಕ್ಕಳನ್ನು ಬೆರೆಯಲು ಬಿಡಬೇಕು. ಅದರಲ್ಲೂ ಪ್ರೌಢಶಾಲಾ ವಿಭಾಗದಲ್ಲಿ ಓದುತ್ತಿರುವ ಮಕ್ಕಳದ್ದು ಟೀನೇಜ್ ಮತ್ತು ಟರ್ನಿಂಗ್ ಪಾಯಿಂಟ್ ಆ ಸಮಯದಲ್ಲಿ ಕುತೂಹಲ ಹೆಚ್ಚಾಗಿರುತ್ತದೆ ಇಂತಹ ಸಮಯದಲ್ಲಿ ಮಗುವೊಂದು ದಾರಿ ತಪ್ಪಿದರೆ ತಾನೇನು ಮಾಡುತ್ತಿದ್ದೇನೆ ಎನ್ನುವಷ್ಟು ತಿಳುವಳಿಕೆ ಆ ವಯಸ್ಸಿನಲ್ಲಿ ಇರುವುದಿಲ್ಲ. ನಾನು ಹೇಗಾದರೂ ಬದುಕಬಲ್ಲೆ ನಾನೆನಾದರೂ ಮಾಡಬಲ್ಲೆ ನನ್ನ ಜೀವನವನ್ನು ನಾನು ಜೀವಿಸಬಲ್ಲೆ ಎನ್ನುವಂತಹ ಭಂಡ ಧೈರ್ಯ ಚಲನಚಿತ್ರಗಳನ್ನು ನೋಡಿ ಸಾಮಾಜಿಕ ಜಾಲತಾಣಗಳನ್ನು ಬಳಸಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುವ ವಿದ್ಯಾರ್ಥಿಗಳಿಗೆ ಅನ್ನಿಸುತ್ತದೆ.
  ಪೋಷಕರು ಕೂಡ ಎಂತಹ ಸಮಯದಲ್ಲಿ ಬಹಳ ನಾಜ್ಯುಕಾಗಿ ಅವರನ್ನು ವಿಚಾರಿಸಿಕೊಳ್ಳಬೇಕು. ಸ್ವಲ್ಪ ಹೆಚ್ಚು ಕಡಿಮೆ ನಾವೇ ದೊಡ್ಡವರು ಎನ್ನುವ ಹಾಗೆ ವರ್ತಿಸುವ ಈ ಮಕ್ಕಳನ್ನು ತಮ್ಮ ಮನಸ್ಸಿಗೆ ಬಂದ ಹಾಗೆ ಥಳಿಸುವ ಹಾಗೂ ಇಲ್ಲ. ಈಗಂತೂ ಸಾಮಾಜಿಕ ಜಾಲತಾಣಗಳು ಮತ್ತು ಟಿವಿಯ ನ್ಯೂಸ್ ಚಾನೆಲ್ ಗಳು ಸತ್ತ ಹೆಣಗಳನ್ನು ಮತ್ತು ಸಾಯುವ ವಿಧಾನವನ್ನು ಲೈವ್ ಆಗಿ ತೋರಿಸುತ್ತಿರುವುದರಿಂದ ಎರಡನೇ ತರಗತಿಯ ಮಗುವಿಗೂ ಸುಯಿಸೈಡ್ ಮಾಡಿಕೊಳ್ಳುವ ವಿಧಾನ ತಿಳಿದಿದೆ. ಹೆತ್ತವರನ್ನು ಬಗ್ಗಿಸಲು ಇದೊಂದೇ ವಿಧಾನ ಎಂದು ಮಕ್ಕಳು ಆಟವಾಡುವಂತೆ ಮಾಡಲು ಹೋಗಿ ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಾರೆ. ಆದ ಕಾರಣ ಮಗುವಿನ ಪ್ರತಿಯೊಂದು ನಡವಳಿಕೆಯನ್ನು ತಿದ್ದುವಾಗಲು ಪ್ರತಿ ಹೆಜ್ಜೆಯಲ್ಲೂ ತುಂಬಾ ಜಾಗರೂಕರಾಗಿರಬೇಕು. ಸಾಯುವುದು ಸುಲಭ ಈಗಿನ ಜನಾಂಗಕ್ಕೆ, ಆದರೆ ಬದುಕುವುದು ಕಷ್ಟ. ಪೋಷಕರು ಓದು ಎಂದು ಒಂದೆರಡು ಮಾತನಾಡಿದರು ಕೂಡಾ ಮಕ್ಕಳು ಸಾಯಲು ಮುಂದೆ ಮುಂದೆ ನೋಡುವುದಿಲ್ಲ. ಸಾವು ಎನ್ನುವುದರ ಬಗ್ಗೆ ಭಯ ಬರುವ ಬದಲು ಫೈಟಿಂಗ್ ಸೀನನ್ನೇ ನೋಡುತ್ತಾ ಬೆಳೆದ ಮಕ್ಕಳ ಮನಸ್ಸಿನಲ್ಲಿ ಸಾವಿನ ಬಗ್ಗೆ ಭಯವಿಲ್ಲ.  ಬದಲಾಗಿ ತಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ಪೋಷಕರಿಗೆ ಬುದ್ಧಿ ಕಲಿಸುವ ಕೆಲಸದಲ್ಲಿ ತೊಡಗಿರುತ್ತಾರೆ ಅವರು. ಇನ್ನು ಮೇಲೆ ನಮಗೆ ಹೇಗೆ ಬುದ್ಧಿ ಹೇಳುತ್ತಾರೆ ನೋಡುತ್ತೇನೆ. ನಾನು ಬದುಕಿದ್ದರಲ್ಲವೇ ಇವರು ನನಗೆ ಬುದ್ಧಿವಾದ ಹೇಳುವುದು ಅಂದುಕೊಂಡು ಸಾವಿಗೆ ಸಿದ್ಧರಾಗುತ್ತಾರೆ. ತಮ್ಮ ಸಾವಿನ ಪರಿಣಾಮ ಪೋಷಕರಲ್ಲಿ ಹೇಗಿರಬಹುದು ಎಂಬುದನ್ನು ಅವರು ಎಂದು ಊಹೆ ಕೂಡ ಮಾಡುವುದಿಲ್ಲ. 
   ಆದ್ದರಿಂದ ರಜೆಯಲ್ಲಿ ಮಕ್ಕಳನ್ನು ಎಲ್ಲೇ ಹೊರಗೆ ಬಿಡುವಾಗ ಪೋಷಕರು ಬಹಳವೇ ಗಮನವಿಟ್ಟು ನೋಡಿಕೊಳ್ಳುತ್ತಿರಬೇಕು. ಅದರಲ್ಲೂ ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಕಣ್ಣಲ್ಲಿ  ಕಣ್ಣಿಟ್ಟು ನೋಡಿಕೊಳ್ಳಬೇಕು ಯಾಕೆಂದರೆ ಹೊರಗಡೆ ಪ್ರಪಂಚ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಗೆ ಬೇರೆ. ಅದು ಹೆಣ್ಣು ಮಕ್ಕಳೆಂದರೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಆಗಬೇಕೆಂದಿಲ್ಲ ಇತ್ತೀಚೆಗೆ ನಾವು ನೋಡುವಂತಹ ಮಾಧ್ಯಮಗಳಲ್ಲಿ ಓದುವಂತಹ ಪತ್ರಿಕೆಗಳಲ್ಲಿ ಬಂದಂತಹ ವಿಚಾರಗಳನ್ನು ನೋಡುವಾಗ ಸಣ್ಣ ಮಗುವಿನ ಹಿಡಿದು ಹಣ್ಣು ಹಣ್ಣು ಮುದುಕಿಯವರೆಗೂ ಹೆಂಗಸರನ್ನು ಕಾಮದ ದೃಷ್ಟಿಯಲ್ಲಿ ನೋಡಲಾಗುತ್ತದೆ. ಒಂದು ಕಾಲದಲ್ಲಿ ಪಡ್ಡೆ ಹುಡುಗರು ಎಂದು ಕರೆಸಿಕೊಳ್ಳುತ್ತಿದ್ದವರು ಮಾತ್ರ.  ಆದರೆ ಇಂದು ಇಡೀ ಸಮಾಜವೇ ಪಡ್ಡೆಯಾಗಿಬಿಟ್ಟಿದೆ ಏನೋ ಅನ್ನಿಸುತ್ತದೆ. ಗಾಂಧೀಜಿಯವರು ರಾಮರಾಜ್ಯದ ಕನಸು ಕಂಡಿದ್ದರು ಕೂಡ ಅರ್ಧ ರಾತ್ರಿಯಲ್ಲಿ ಹೆಣ್ಣು ಮಕ್ಕಳು ಓಡಾಡುವ ಸ್ವಾತಂತ್ರ್ಯ ಭಾರತದಲ್ಲಿ ಸಿಗಬೇಕು ಎನ್ನುವ ನಂಬಿಕೆ ಅವರಿಗಿದ್ದರೂ ಕೂಡ ಇಂದು ಅಂತಹ ಯಾವುದೇ ನಂಬಿಕೆಯು ಸತ್ಯವಾಗಲಿಲ್ಲ. ಕಾರಣ ರಾತ್ರಿಯೆ ಏನು ಹಗಲಲ್ಲಿ ಕೂಡ ಹೆಣ್ಣು ಮಕ್ಕಳು ಒಬ್ಬೊಬ್ಬರೇ ಓಡಾಡುವುದು ಬಹು ಕಷ್ಟದ ವಿಚಾರ. ಮದಿರೆ ಒಂದು ಕಡೆಯಾದರೆ ಹಲವಾರು ರೀತಿಯ ಬೇಡದ ವಿಷ ಪದಾರ್ಥಗಳು ಮನುಷ್ಯನ ಜೀವನದಲ್ಲಿ ನಶೆಯನ್ನು ಹೆಚ್ಚಿಸಲು ಇಂದು ಲಭ್ಯವಿದೆ. ಅದಕ್ಕೆಲ್ಲ ಮತ್ತೇನು ಬೇಡ ಹಣ ಇದ್ದರೆ ಆಯ್ತು. ಹಿಂದಿನ ಕಾಲದಲ್ಲಿ ಜನರಿಗೆ ಹಣ ಮಾಡುವುದು ಕಷ್ಟವಿತ್ತು ಆದರೆ ಇಂದು ಕಸದಲ್ಲೂ ಕೂಡ ಹಣ ತೆಗೆಯುವವರಿದ್ದಾರೆ. ಹಾಗಾಗಿ ಎಲ್ಲಾ ಕಡೆ ಸಿಗುತ್ತದೆ ಹಣದ ಜೊತೆಗೆ ಬೇಡದ ವಸ್ತುಗಳು ಕೂಡ ನಮ್ಮನ್ನು ಹುಡುಕಿಕೊಂಡು ಬಂದು ಹಾಳು ಮಾಡುತ್ತವೆ. ಗಂಡಸರು ಮಾತ್ರವಲ್ಲ ಹೆಣ್ಣು ಮಕ್ಕಳು ಕೂಡ ಇಂತಹ ನಶೆಯ ವಿಷ ವಸ್ತುವಿಗೆ ದಾಸರಾಗಿ ತಮ್ಮ ಬಟ್ಟೆಗಳನ್ನೆಲ್ಲ ಬಿಚ್ಚಿ ನಡು ರಸ್ತೆಯಲ್ಲಿ ಓಡಾಡುವ ದೃಶ್ಯವನ್ನು ಕೂಡ ನಾವು ಮಾಧ್ಯಮಗಳ ಮೂಲಕ ತಿಳಿದುಕೊಂಡವರಾಗಿದ್ದೇವೆ. 
   ಕೆಲವೊಮ್ಮೆ ನನಗೆ ಕನ್ಫ್ಯೂಸ್ ಆಗುತ್ತದೆ ನಾವು ಮುಂದುವರಿಯುತ್ತಿರುವ ದೇಶದಲ್ಲಿದ್ದೇವೆಯೋ ಅಥವಾ ಮತ್ತೆ ಹಿಂದೆ ಹಿಂದೆ ಹೋಗುತ್ತಿದ್ದೇವೆಯೋ ಎಂದು! ವಿದ್ಯೆ ಬುದ್ಧಿ ಹೆಚ್ಚಿದಷ್ಟೂ ಮಾನವನ  ಕಳ್ಳತನ, ಕೊಲೆ, ಸುಲಿಗೆ ಹೆಚ್ಚಿದೆ. ಪರಿಸರ ನಾಶದ ಪ್ರಮಾಣವನ್ನು ಅತ್ಯಧಿಕವಾಗಿದೆ. ನಮ್ಮನ್ನು ನಾವೇ ಸರಿ ಮಾಡಬೇಕು ಅಲ್ಲದೆ ಬೇರೆ ಯಾರಿಲ್ಲ, ನೀವೇನಂತೀರಿ?
@ಹನಿಬಿಂದು@
07.10.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -204

          ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -204

ಮಕ್ಕಳಿಗೆ ಶಾಲೆಯಲ್ಲಿ ಭಾಷೆ ಮತ್ತು ವಿಜ್ಞಾನ ಶಿಕ್ಷಕರು ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಮಣ್ಣಿನ ಮಾಲಿನ್ಯ ಇವುಗಳ ಬಗ್ಗೆ ತಿಳಿಸಿ ಹೇಳಿ ಕೊಡುತ್ತಾರೆ, ಹಾಗೆಯೇ ಅವರಿಂದ ಬೇರೆ ಬೇರೆ ಮಾಡೆಲ್ ರಚನೆ ಮಾಡಿಸಿ ಅವು ಹೇಗೆ ಆಗುತ್ತವೆ ಎಂಬುದನ್ನು ಹೇಳುತ್ತಾರೆ. ಪರಿಹಾರ ಎಲ್ಲರೂ ಹೇಳಿ ಕೊಟ್ಟರೂ ಕೊಡದೆ ಇದ್ದರೂ ಅದು ಒಂದೇ. ಕಾಡು ಬೆಳೆಸಿ, ನಾಡು ಉಳಿಸಿ! ಆದರೆ ಈ ಎಲ್ಲಾ ಮಾಲಿನ್ಯಗಳಿಗಿಂತ  ಭೀಕರ ಮಾಲಿನ್ಯ ಒಂದು ಇಡೀ ಪ್ರಪಂಚದಾದ್ಯಂತ ಆಗುತ್ತಿದೆ. ಅದನ್ನು ಯಾರೂ ಗಮನಿಸಿದಂತೆ ಕಾಣುತ್ತಿಲ್ಲ. 
      ಪ್ರತಿ ಮಕ್ಕಳೂ ಕೂಡ ನ್ಯಾರೋ ಮೈಂಡೆಡ್ ಆಗುತ್ತಿದ್ದಾರೆ. ನಾನು, ನನ್ನದು, ನನ್ನದು ಮಾತ್ರ. ಸ್ನೇಹಿತರ ಜೊತೆ ನೀರು, ಸ್ನಾಕ್ಸ್ ಶೇರ್ ಮಾಡುವುದು ಶಾಲೆಯಲ್ಲಿ ತಪ್ಪು. ಕರೋನ ಪರಿಣಾಮ. ಹಂಚಿ ತಿಂದರೆ ಹಸಿವಿಲ್ಲ ಎಂಬ ಗಾದೆ ಮಾತು ಇಂದಿನ ಯುಗಕ್ಕೆ ಅನ್ವಯಿಸುವುದಿಲ್ಲ. ಕಾರಣ ಹಂಚಿ ತಿಂದರೆ ಸಾಂಕ್ರಾಮಿಕ ರೋಗ ಇಂದು. ಕೈ ಕುಲುಕಿದರೂ ರೋಗ ಬರುವ ಕಾಲದಲ್ಲಿ ಒಬ್ಬ ನೀರು ಕುಡಿದ ಬಾಟಲಿಯಿಂದ ಮತ್ತೊಬ್ಬ ನೀರು ಕುಡಿಯುವ ಹಾಗಿಲ್ಲ. ಒಬ್ಬ ತಿಂದ ಬುತ್ತಿಯ ತುತ್ತು ಮತ್ತೊಬ್ಬರ ಜೊತೆ ಹಂಚಿ ತಿನ್ನುವ ಹಾಗಿಲ್ಲ. ಪ್ಲಾಸ್ಟಿಕ್ ಬ್ಯಾನ್ ಆದ ಪರಿಣಾಮ ಅದರ ಮೇಲೂ ಹಬ್ಬದೆ ಇರುವುದೇ?
             ಇನ್ನು ನಾವೆಲ್ಲಾ ಹಾಸ್ಟೆಲ್ ನಲ್ಲಿ ಓದುತ್ತಿದ್ದಾಗ ನಮ್ಮ ಬಳಿ ಸರಿಯಾದ ಬಟ್ಟೆಗಳು ಇರಲಿಲ್ಲ. ಹಾಸ್ಟೆಲ್ ನ ಗೆಳತಿಯರು ಅವರ ಬಟ್ಟೆಗಳನ್ನು ನಮಗೆ ತೊಡಿಸಿ ಕಾಲೇಜಿನ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ನೆರವಾಗುತ್ತಿದ್ದರು. ಯಾರದೇ ಗೆಳತಿಯರ ಬಟ್ಟೆಯಾಗಲಿ ಅದನ್ನು ನಾವು ನಮ್ಮದೇ ಎನ್ನುವಂತೆ ಉಪಯೋಗಿಸುತ್ತಿದ್ದೆವು. ಅಥವಾ ನಮ್ಮ ಬಟ್ಟೆಗಳಿದ್ದರೆ ಅವರು ಕೂಡ ಅದನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಬೇಕಾದಂತೆ ಉಪಯೋಗ ಮಾಡಿಕೊಳ್ಳುತ್ತಿದ್ದರು. ನಾವೆಲ್ಲ ಒಂದೇ ಮನೆಯವರ ಹಾಗೆ ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡುತ್ತಾ ಬದುಕುತ್ತಿದ್ದೆವು. ಆ ಸಹಾಯ ಸಹಕಾರ ಮುಂದೆಯೂ ಕೂಡ ನಮ್ಮ ಜೀವನದಲ್ಲಿ ಅಚ್ಚಳಿಯದೆ ನಿಂತು ಯಾವಾಗ ಅವರು ಸಿಕ್ಕಿದರು ಕೂಡ ಅವರು ನಮ್ಮ ಮನೆಯವರು ಎಂಬಂತೆ ಭಾಸವಾಗುವುದಲ್ಲದೆ ಅವರ ಮೇಲಿನ ನಮ್ಮ ಪ್ರೀತಿ ಎಂದಿಗೂ ಕೂಡ ಎಂದು ಕಡಿಮೆ ಆಗಲಿಲ್ಲ. ಕುಟುಂಬದ ಹಾಗೆ ಸ್ನೇಹಿತರು ಕೂಡ ಎಂಬ ಪ್ರೀತಿ ವಾತ್ಸಲ್ಯವನ್ನು ಬೆಳೆಸಿಕೊಂಡು ಬಂದವರು ನಾವು. 
  ಆದರೆ ಇಂದಿನ ದಿನಗಳಲ್ಲಿ ಈ ರೀತಿಯ ಪ್ರೀತಿ ವಾತ್ಸಲ್ಯವನ್ನು ನಾವು ಕಾಣಲು ಸಾಧ್ಯವಿಲ್ಲ. ಗೆಳೆಯರು ಅಂದರೆ ತಕ್ಷಣಕ್ಕೆ ಆ ಕಾಲದಲ್ಲಿ ಮಾತ್ರ. ಮುಂದಿನ ದಿನಗಳಲ್ಲಿ ಅವರ್ಯಾರು ಇವರ್ಯಾರು ಅವರ ಪರಿಚಯ ಇವರಿಗಿದ್ದರೂ ಕೂಡ ಇವರು ಅವರನ್ನು ಮುಂದುವರಿಸಿಕೊಂಡು ಹೋಗುವುದಿಲ್ಲ ಮತ್ತು ಅವರು ಇವರನ್ನು ಬಹಳವಾಗಿ ಹಚ್ಚಿಕೊಳ್ಳುವ ವಿಷಯವೇ ಇಲ್ಲ. ಅವರ ಜೊತೆಗಿರುವಷ್ಟು ದಿನ ಮಾತ್ರ ಪ್ರಾಧಾನ್ಯತೆ. ಅದು ಗೆಳೆತನಕ್ಕೆ ಮಾತ್ರವಾಗಿ ಉಳಿದಿಲ್ಲ ಸಂಬಂಧಕ್ಕೂ ಹಾಗೆ ಆಗುತ್ತಿದೆ. ಪೋಷಕರೆಂದರೆ ಅವರನ್ನು ಹೆತ್ತು ಹೊತ್ತು ಬೆಳೆಸಿ ಓದಿಸಿ ಒಂದು ಹಂತದವರೆಗೆ ತಂದು ನಿಲ್ಲಿಸುವವರೆಗೆ ಮಾತ್ರ ಅವರ ಜವಾಬ್ದಾರಿ. ತದನಂತರ ಬದುಕಿನಲ್ಲಿ ಸಂಗಾತಿಯ ಆಯ್ಕೆಯನ್ನು ಮಾಡಬೇಕೆಂದರೆ ಹೆಚ್ಚಿನವರು ಅವರವರೇ ತಮ್ಮ ಸಂಗಾತಿಯ ಆಯ್ಕೆಯನ್ನು ತಮಗೆ ಬೇಕಾದ ಹಾಗೆ ಮಾಡಿಕೊಂಡಿರುತ್ತಾರೆ ಮತ್ತು ಹಿರಿಯರು ಏನಾದರೂ ಅದಕ್ಕೆ ವಿರುದ್ಧವಾಗಿ ಮಾತನಾಡಿದರೆ ಮನೆಯನ್ನು ಬಿಟ್ಟು ತಮ್ಮ ಸಂಗಾತಿ ಜೊತೆ ಸೇರಿಕೊಂಡು ಬಿಡುತ್ತಾರೆ. ಇದು ಇಂದಿನ ಬದುಕಿನ ಪದ್ಧತಿ, ದುಡಿಯುವಾಗಲು ಹಾಗೆಯೆ ದುಡಿಯುತ್ತಿರುವ ಕಂಪನಿಯನ್ನು ಬಿಟ್ಟು ನಾಲ್ಕಾರು ದಿನಕ್ಕೊಮ್ಮೆ ಹೊಸ ಕಂಪನಿಗೆ ಬದಲಾಯಿಸುತ್ತಿರುತ್ತಾರೆ. ಅಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಅಥವಾ ಸಂಬಳ ಕಡಿಮೆಯಾದರೆ ಹೆಚ್ಚು ಸಂಬಳವಿರುವ ಇನ್ನೊಂದು ಕಂಪನಿಗೆ ಹೋಗಿ ಕೆಲಸ ಮಾಡುತ್ತಾರೆ. ಇಷ್ಟು ದಿನ ನನಗೆ ಅನ್ನ ಕೊಟ್ಟ ಕಂಪನಿದು ಇದಕ್ಕೆ ನಾನು ನನ್ನ ಕೆಲಸವನ್ನು ನಾನು ಮಾಡಬೇಕು ಸೇವೆಯನ್ನು ಅರ್ಪಣೆ ಮಾಡಬೇಕು ಈ ರೀತಿಯ ಯಾವುದೇ ಭಾವನಾತ್ಮಕ ಸಂಬಂಧಗಳು ಈಗಿನ ಕಾಲದಲ್ಲಿ ಇಲ್ಲ. ಹಿಂದಿನ ಕಾಲದಲ್ಲಿ ಲ್ಯಾಂಡ್ ಲಾರ್ಡ್ಸ್ ಅಥವಾ ಗದ್ದೆ ತೋಟಗಳು ಹೆಚ್ಚು ಇರುವವನ ಮನೆಯಲ್ಲಿ ಕೆಲಸದಾಳುಗಳಾಗಿ ದುಡಿಯುತ್ತಿದ್ದ ಹಲವಾರು ಜನರು ವರ್ಷಂ ಪ್ರತಿ ಒಂದೇ ಮನೆಯಲ್ಲಿ ದುಡಿದು ಅವರಿಂದ ಸಂಬಳವನ್ನು ಪಡೆದು ಅವರ ಕಷ್ಟಕಾಲದಲ್ಲಿ ಸಂಬಳ ಇಲ್ಲದೆಯೂ ದುಡಿಯುವಂತಹ ಕ್ರಮವಿತ್ತು. ಕೆಲಸ ಮಾಡಿಸಿಕೊಳ್ಳುವವರು ಅಷ್ಟೇ ತಮ್ಮ ಕೆಲಸಗಾರರ ಬದುಕಿನಲ್ಲಿ ಏನಾದರೂ ಕಷ್ಟಗಳು ಅಥವಾ ತೊಂದರೆಗಳು ಬಂದಾಗ ಅವರು ಕೂಡ ಸಹಾಯ ಮಾಡುತ್ತಿದ್ದರು ಅದು ಧನಸಹಾಯವೇ ಇರಬಹುದು ಅಥವಾ ಬೇರೆ ಏನಾದರೂ ವಸ್ತುಗಳ ರೂಪದಲ್ಲಿ ಸಹಾಯವನ್ನು ಮಾಡುತ್ತಿದ್ದರು. ಈ ರೀತಿಯ ಕೊಡುಕೊಳ್ಳುವಿಕೆಯ ಸಹಾಯದಿಂದಾಗಿ ಅವರೆಲ್ಲರೂ ಹತ್ತಿರವಾಗಿರುತ್ತಿದ್ದರು. ಇದು ಸಮಾಜದಲ್ಲಿ ಭಾವನಾತ್ಮಕ ಬೆಸುಗೆಯನ್ನು ಪ್ರಾರಂಭಿಸಿತ್ತು. ಆದರೆ ಇಂದು ಹಾಗಿಲ್ಲ ಎಲ್ಲರನ್ನೂ ಹಣದ ರೂಪದಲ್ಲಿ ಅಳೆಯುತ್ತಾರೆ. ಅದರಿಂದಾದರೂ ಯಾವುದಾದರೂ ಸಹಾಯ ಬೇಕಿದ್ದಲ್ಲಿ ಅವರು ಹಣ ಕೊಟ್ಟೆ ಅದನ್ನು ಖರೀದಿಸಬೇಕು. ಹಣ ಪಡೆದುಕೊಂಡ ಮೇಲೆ ಅವರಿಬ್ಬರಿಗೂ ಯಾವುದೇ ರೀತಿಯ ಭಾವನಾತ್ಮಕತೆ ಇರುವುದಿಲ್ಲ. ಇದನ್ನೇ ಬಿಜಿನೆಸ್ ಮೈಂಡ್ ಎನ್ನುತ್ತಾರೆ. ಇದು ಪಾಶ್ಚಾತ್ಯರ ಸಂಸ್ಕೃತಿ. ಭಾರತವು ಪ್ರೀತಿ ಸ್ನೇಹ ಹೊಂದಾಣಿಕೆ ಸರ್ವೇ ಜನ: ಸುಖಿನೋ ಭವಂತು ಎನ್ನುವ ಭಾವನಾತ್ಮಕತೆಗೆ ಹೆಚ್ಚು ಒತ್ತು ಕೊಡುವ ಸಂಸ್ಕೃತಿಯನ್ನು ಹೊಂದಿರುವ ದೇಶವಾಗಿದೆ. 
     ಆದ್ದರಿಂದ ಈಗ ನಾವು ಮನಸ್ಸಿನ ಮಾಲಿನ್ಯವಾಗಿದೆ ಎಂದು ಹೇಳಬಹುದು. ಯಾವುದೇ ಅಪಘಾತವಾಗಿ ಯಾರಾದರೂ ಕೆಳಗೆ ಬಿದ್ದಿದ್ದರೆ ಅವರನ್ನು ಸಂತೈಸುವ ಅಥವಾ ಅವರಿಗೆ ಸಹಾಯ ಮಾಡುವ ಯಾವುದೇ ಸಹಾಯ ಹಸ್ತವನ್ನು ನಾವೆಗಾ ಕಾಣಲಾರೆವು. ಯಾಕೆಂದರೆ ಅವರವರ ಕೆಲಸ ಅವರವರಿಗೆ ಬೇರೆಯವರನ್ನು ನೋಡುವ , ಅವರಿಗೆ ಸಹಾಯ ಮಾಡುವ ಮತ್ತು ಅವರಿಗೆ ಏನಾದರೂ ಬೇಕಾದನ್ನು ಕೊಡುವಂತಹ ವ್ಯವದಾನ , ಸಮಯ,  ಕಾಲ ಯಾರಿಗೂ ಈ ಸಮಯದಲ್ಲಿ ಇಲ್ಲ. ಏನಿದ್ದರೂ ನಾನು , ನನ್ನ ಕೆಲಸ,  ನನ್ನ ಕುಟುಂಬ,  ನನ್ನ ಮಕ್ಕಳು , ನನ್ನ ಜವಾಬ್ದಾರಿಗಳು ಇವಿಷ್ಟೇ ಇಂದಿನ ಜೀವನದ ಮೂಲತತ್ವಗಳು. ಯಾರೋ ಅಲ್ಲಿಲ್ಲಿ ಒಂದಿಬ್ಬರು ಸಮಾಜ ಸೇವೆ ಎಂದು ಕಷ್ಟಪಟ್ಟು ಪರರಿಗೆ ಸಹಾಯ ಮಾಡುವ ಕೆಲಸಗಳನ್ನು ಮಾಡಿ ಯಾರು ಬಿಟ್ಟರೆ ಉಳಿದವರು ಯಾರು ಈ ಕೆಲಸಕ್ಕೆ ಹೋಗುವುದಿಲ್ಲ. ಪರರೇನಾದರೂ ಸಹಾಯ ಕೇಳಿದರೆ ನಮ್ಮ ಸಮಯ ವ್ಯರ್ಥವಾಗುತ್ತದೆ ಮತ್ತು ಅವರಿಗೆ ಸಹಾಯ ಮಾಡಲು ಹೋದರೆ ನಮ್ಮ ಹಣವು ಖರ್ಚಾಗುತ್ತದೆ ಎಂದು ಯೋಚನೆ ಮಾಡುವ ಜನರೇ ಹೆಚ್ಚು. ಹೋಗುತ್ತಾ ಇರುವಾಗ ದಾರಿಯಲ್ಲಿ ಬಂಧುಗಳ ಮನೆ ಸಿಕ್ಕಿದರು ಇಂದಿನವರು ಅಲ್ಲಿ ನಿಲ್ಲಿಸಿ ಮಾತನಾಡಿ ಬರುವುದು ತೀರಾ ವಿರಳ.  ಕಾರಣ ಸಮಯದ ಅಭಾವ. 
    ಮನಸ್ಸು ಮತ್ತು ಆಲೋಚನೆಗಳಲ್ಲಿ ವಿಶಾಲ ಭಾವ ಮೂಡಿ ಆ ವಿಶಾಲ ಭಾವದಲ್ಲಿ ಎಲ್ಲರೂ ನಮ್ಮವರು ತಮ್ಮವರು ನಾವು ಸಹಾಯ ಮಾಡಬೇಕು ಪರರೂ ಕೂಡ ನಮ್ಮಂತೆ ಮುಂದೆ ಬರಬೇಕು ಎಂಬ ಭಾವನೆಗಳು ಜನರಲ್ಲಿ ಯಾವಾಗ ಮೊಳಕೆ ಒಡೆಯಲು ಪ್ರಾರಂಭಿಸುತ್ತದೆಯೋ ಅಂದು ದೇಶದ ಉದ್ದಾರ ಪ್ರಾರಂಭವಾಗುತ್ತದೆ. ನಾನು ಬದುಕಿ ಪರರನ್ನು ಬದುಕಲು ಬಿಡಬೇಕು ಎಂಬ ಭಾವನೆ ಬಂದಾಗ ಮಾತ್ರ ದೇಶ ಕಟ್ಟುವ ಕಾರ್ಯ ಮುಂದುವರಿಯುತ್ತದೆ. ನಾನು ನನ್ನ ಹೆಂಡತಿ ನನ್ನ ಮಗು ನನ್ನ ಮನೆ ನನ್ನ ಪರಿಸರ ಇದಿಷ್ಟೇ ಬಂದಾಗ ನನ್ನ ದೇಶ ನನ್ನ ರಾಜ್ಯ ನಮ್ಮ ಭೂಮಿ ಎನ್ನುವ ವಿಶಾಲವಾದ ಆಲೋಚನೆಗಳು ಬದಿಗೆ ನಿಲ್ಲುತ್ತವೆ. ಭಾರತ ಸ್ವತಂತ್ರವಾಗಬೇಕಾದರೆ ಅದೆಷ್ಟೋ ಮಾತೆಯರು ತಮ್ಮ ಮಕ್ಕಳ ಜೀವವನ್ನು ಅದಕ್ಕೆ ಬಲಿ ಕೊಟ್ಟಿದ್ದಾರೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೇ ಬಲಿಕೊಟ್ಟು ತಮ್ಮ ಮಕ್ಕಳ ಜೀವನವನ್ನು ಒತ್ತೆ ಇಟ್ಟು ದೇಶಕ್ಕಾಗಿ ವೀರ ಮರಣವನ್ನು ಅಪ್ಪಿಕೊಂಡಿದ್ದಾರೆ. ಅವರೆಲ್ಲ ತಮ್ಮ ಕುಟುಂಬ ತಮ್ಮ ಮಕ್ಕಳು ತಮ್ಮ ಮಡದಿಯರು ಎಂದು ಯೋಚನೆ ಮಾಡಿದ್ದಿದ್ದರೆ ಸ್ವಾತಂತ್ರ್ಯ ಹೋರಾಟದ ಸಂಗ್ರಾಮವೂ ಆಗುತ್ತಿರಲಿಲ್ಲ , ಹಲವಾರು ದಂಗೆಗಳು ನಡೆಯುತ್ತಿರಲಿಲ್ಲ , ಭಾರತಕ್ಕೆ ಸ್ವಾತಂತ್ರ್ಯವೂ ಸಿಗುತ್ತಿರಲಿಲ್ಲ. 
  ಇಂದಿನ ಜಾತಿ ರಾಜಕೀಯಗಳು ಹಣ ಮಾಡುವ ದಂದೆಗಳು , ರಾಶಿ ರಾಶಿ ಮೂಟೆಗಟ್ಟಲೆ , ಕೋಟಿಗಟ್ಟಲೆ, ಹಣವನ್ನು ಒಬ್ಬನೇ ತಿಂದು ತೇಗುವ, 35 ರಿಂದ 40 ತಲೆಮಾರುಗಳಿಗೆ ಬೇಕಾಗುವಷ್ಟು ಹಣವನ್ನು ಇಂದೇ ಕೂಡಿಟ್ಟು ತಾನು ಸತ್ತರೂ ಪರವಾಗಿಲ್ಲ ತಮ್ಮ ಮುಂದಿನ ಪೀಳಿಗೆಯ ಸರಿ ಇರಬೇಕು ಎಂದು ಯೋಚನೆ ಮಾಡುವಂತ ಮನುಷ್ಯನು ತನ್ನ ಸುಖವನ್ನು ಮಾತ್ರ ಬಯಸಿ ಪರರಿಗೆ ನೋವು ಕೊಡುವವನು ಹೇಗೆ ತಾನೇ ಸ್ವರ್ಗಕ್ಕೆ ಹೋಗಲು ಸಾಧ್ಯ? ಚೆನ್ನಾಗಿ ಒಳ್ಳೆಯ ಆಲೋಚನೆ ಮಾಡುತ್ತಾ ಸರ್ವರಿಗೂ ಸುಖವನ್ನು ಕೊಡುತ್ತಾ ಸರ್ವರ ಬಗ್ಗೆಯೂ ಯೋಚನೆ ಮಾಡುತ್ತಾ ಬದುಕು ಅವನಿಗೆ ಭೂಲೋಕವೇ ಸ್ವರ್ಗವಂತೆ. ಇನ್ನು ಮೋಸ, ವಂಚನೆ, ಹಗೆತನ, ದ್ವೇಷ , ಹೊಟ್ಟೆಕಿಚ್ಚು , ರಾಕ್ಷಸತನ ಇವುಗಳನ್ನೇ ಬದುಕಿನಲ್ಲಿ ಮೆಚ್ಚಿಕೊಂಡವನಿಗೆ ಇಲ್ಲು ನರಕ ಸತ್ತ ಮೇಲೂ ನರಕ ಅಲ್ಲವೇ?
  ಬದುಕಿನಲ್ಲಿ ಸಾಧ್ಯವಾದರೆ ನಾಲ್ಕು ಜನಕ್ಕೆ ಸಹಾಯ ಮಾಡೋಣ. ಅಸಾಧ್ಯ ಎಂದಾದರೆ ಸುಮ್ಮನಿದ್ದು ಬಿಡೋಣ. ಪರರಿಗೆ ಉಪದ್ರ ಮಾಡದೇ ಇರೋಣ. ಇತರರನ್ನು ನಿಂದಿಸಲು ,ಜಗಳವಾಡಲು , ಬೇಸರ ಮಾಡಲು,  ಬರದ ಕಣ್ಣಲ್ಲಿ ದುಃಖ ತರಲು,  ಕಣ್ಣೀರನ್ನು ತರಲು ನಾವು ಈ ಭೂಮಿಗೆ ಬರಲಿಲ್ಲ . ದೇವರು ನಮ್ಮನ್ನು ಈ ಭೂಮಿಗೆ ಒಂದು ಉತ್ತಮ ಕಾರ್ಯಕ್ಕಾಗಿ ಕಳಿಸಿದ್ದಾನೆ.  ಆ ಕಾರ್ಯವನ್ನು ಮಾಡುತ್ತಾ,  ನಮ್ಮ ಈ ಜನ್ಮವನ್ನು ಸಾರ್ಥಕ ಗೊಳಿಸಿಕೊಳ್ಳೋಣ.  ನಮ್ಮ ಮನಸ್ಸಿನ ಮಾಲಿನ್ಯವನ್ನು ನಾವೇ ಸರಿಪಡಿಸಿಕೊಳ್ಳೋಣ. ನೀವೇನಂತೀರಿ?
@ಹನಿಬಿಂದು@
30.09.2023





ಗಝಲ್

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -203

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -203

       ಹಿಂದಿನ ದಿನಗಳ ನೆನೆಸಿಕೊಂಡರೆ ಕೆಲವೊಮ್ಮೆ ನಗು ತರಿಸುತ್ತದೆ, ಇನ್ನೂ ಕೆಲವೊಮ್ಮೆ ಕ್ಯೂರಿಯಾಸಿಟಿಯ ಬಗ್ಗೆ ನೆನಪಾಗುತ್ತದೆ. ಸಾಧಾರಣವಾಗಿ ಮಧ್ಯಮ ವರ್ಗದ ಕುಟುಂಬದಲ್ಲಿ ಅದರಲ್ಲೂ ಹಳ್ಳಿಯಲ್ಲಿ ಹುಟ್ಟಿದ ಮಕ್ಕಳಿಗೆ ಈ ಕಾತರ, ಬೇಸರ, ಕಾಯುವಿಕೆಯ ಅನುಭವ ಇರಬಹುದು. 
    ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
  ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು..
ಮುಂದೆ...
ಪದುಮಳು ಒಳಗಿಲ್ಲ ಪದುಮಳ ಬಳೆಗಳ ದನಿಯಿಲ್ಲ...
ಹೌದು, ಅಮ್ಮಂದಿರು ಪ್ರತಿ ತಿಂಗಳು ಆ ಮುಟ್ಟಿನ ದಿನಗಳಲ್ಲಿ ಅಡುಗೆ ಮನೆ ಹಾಗೂ ಮಲಗುವ ಕೋಣೆ, ದೇವರ ಕೋಣೆ, ಒಳಗಿನ ಕೋಣೆಗಳಿಗೆ ಬರುವ ಹಾಗೆ ಇರಲಿಲ್ಲ. ಬದಲಾಗಿ ಹೊರಗಿನ ಕೋಣೆ ಅಥವಾ ಕೊಟ್ಟಿಗೆಯಲ್ಲಿ ಇರಬೇಕಿತ್ತು. ಅವರಿಗೆ ಅಲ್ಲಿಗೇ ಊಟ ತಿಂಡಿ ಸಪ್ಲೈ ಮಾಡುತ್ತಿದ್ದರು. ಅತ್ತೆ ಅತ್ತಿಗೆ ನಾದಿನಿ ಯಾರೂ ಇಲ್ಲದ ಮನೆಯಲ್ಲಿ, ಮಕ್ಕಳು ಇಲ್ಲದಾಗ ಗಂಡನೇ ಕುಕ್! ಆಗ ಹೆಚ್ಚಿನ  ಎಲ್ಲಾ  ಗಂಡಸರೂ ಅಡುಗೆ ಅಲ್ಪ ಸ್ವಲ್ಪ ಆದರೂ ಕಲಿತಿರುತ್ತಿದ್ದರು. ಕಲಿಯದೆ ಇದ್ದವರ, ಸೋಮಾರಿಗಳ ಆ ಎರಡು ದಿನದ ಪಡಿಪಾಟಲು ಹೇಳ ತೀರದು.
ಉಪ್ಪಿಲ್ಲ, ಮೆಣಸಿಲ್ಲ, ದಾಲ್ಚಿನ್ನಿ ಚೂರಿಲ್ಲ
ಏನ್ ಮಾಡಲಿ ನಾನು ಏನ್ ಮಾಡಲಿ . ಎನ್ನುತ್ತಾ ಕೈಗೆ ಸಿಕ್ಕಿದ್ದು ಹಾಕಿ ಏನೋ ಒಂದು ಮಾಡಿ, ಮೂರು ದಿನಗಳ ಬಳಿಕ ಒಳ ಬಂದ ಮಡದಿಗೆ ಇಡೀ ದಿನ ತಳ ಸುಟ್ಟು ಹಾಕಿದ ಪಾತ್ರೆಗಳನ್ನು ತೊಳೆಯುವುದೇ ಕೆಲಸ. ಅಡುಗೆ ಮನೆ ಸ್ವಚ್ಚ ಮಾಡಲು ಒಂದೆರಡು ದಿನಗಳೇ ಬೇಕಿತ್ತು. ಯಾರು ಮಾಡಿರುವರೋ ಈ ರೂಲ್ ಅಂತ ಬೇಸತ್ತು ಕ್ಲೀನ್ ಮಾಡುವ ಸರದಿ ಮಹಿಳೆಯರದ್ದು ಆಗಿತ್ತು! ಮತ್ತೆ ಉಳಿದ ಕೋಣೆಗಳ ಸ್ವಚ್ಛತೆ. ಬೆಡ್ ಶೀಟ್, ಬೆಡ್ ಸ್ಪ್ರೆಡ್ ಚಾಪೆ ಎಲ್ಲಾ ತೊಳೆದು ಒಣಗಿಸುವ ಕಾರ್ಯಕ್ರಮ! ಎರಡು ದಿನವಪ್ಪ ಹೇಗೆ ಹೇಗೋ ಬೇಯಿಸಿ ಮಾಡಿದ ಅಡುಗೆ ತಿಂದು ಬೇಸತ್ತ ಮಕ್ಕಳು(ಆಗ ಈಗಿನ ಹಾಗೆ ನೂಡಲ್ಸ್, ಪಾಸ್ತಾ ಇರಲಿಲ್ಲ!) ಅದೇ ಮನೆ ಊಟ, ಉತ್ತಮ ಗಾಳಿ, ಉತ್ತಮ ಆರೋಗ್ಯ, ಎರಡೇ ಒಲೆಯ ಅಡುಗೆ! (ಈಗೆಲ್ಲಾ ಅರ್ಜೆಂಟಿನ ಅಡುಗೆ ಮಾಡಲು ಮೂರು ನಾಲ್ಕು ಒಲೆಯ ಸ್ಟವ್ ಬಂದಿವೆ ಅಲ್ಲವೇ?) ಅಮ್ಮ ಅಲ್ಲಿ ಉಫ್ ಅಂತ ಊದುವುದು ಕೇಳಿ ಬರುತ್ತಿತ್ತು. 
   ವೈಜ್ಞಾನಿಕವಾಗಿ  ಆಲೋಚನೆ ಮಾಡುವುದಾದರೆ ಅಂತಹ ಸಮಯದಲ್ಲಿ ದೈಹಿಕವಾಗಿ ತುಂಬಾ ಸುಸ್ತು, ಸಂಕಟ ಆಗುತ್ತದೆ. ಹಿಮೋಗ್ಲೋಬಿನ್ ಕಡಿಮೆ ಆಗುವ ಕಾರಣ ಕಷ್ಟದ ಕೆಲಸ ಸಾಧ್ಯ ಆಗುವುದಿಲ್ಲ. ಯಾವುದೇ ಕೆಲಸ ಮಾಡದೆ ದೈಹಿಕ ಶ್ರಮ ಸಿಗದೇ ಇರಲಿ ಎಂಬ ಉತ್ತಮ ಕಾರಣಕ್ಕೆ ಹಿರಿಯರು ಹೆಂಗಸರಿಗೆ ಹಿಂದಿನ ಕಾಲದಲ್ಲಿ ಮನೆಯ ಒಳಗೆ ಬರಲು ಬಿಡದೆ ಹೊರಗಿನ ಒಂದು ಮೂಲೆಯಲ್ಲಿ ಕುಳ್ಳಿರಿಸಿ ರೆಸ್ಟ್ ಮಾಡಲು ಬಿಡುತ್ತಿದ್ದರು. ಅದು ಅವರ ಆರೋಗ್ಯ ಉತ್ತಮ ಪಡಿಸಿಕೊಳ್ಳಲು, ವಿಶ್ರಾಂತಿ ಪಡೆಯಲು ಸುಲಭವಾಗುತ್ತಿತ್ತು. ಆದರೆ ಇಂದಿನ ಮಾಡ್ರನ್ ಟೆಕ್ನಾಲಜಿ ಕಾಲದಲ್ಲಿ  ಮಹಿಳೆಯರು ಆಟೋಟ, ಪೈಲಟ್, ಎಂಜಿನಿಯರ್, ಡಾಕ್ಟರ್,ಸೈನಿಕ ಹುದ್ದೆಯಲ್ಲಿ ಮಾತ್ರ ಅಲ್ಲದೆ ಸಮಾಜದ ಸರ್ವ ಹುದ್ದೆಗಳಲ್ಲೂ ಪುರುಷರ ಹೆಗಲಿಗೆ ಹೆಗಲಾಗಿ ಅವರಿಗಿಂತ ನಾವೇನೂ ಕಡಿಮೆ ಇಲ್ಲ ಎನ್ನುವ ಹಾಗೆ ದುಡಿಯುತ್ತಿದ್ದಾರೆ. ಅದೊಂದು ಕಾರಣಕ್ಕೆ ಮೂರು ನಾಲ್ಕು ದಿನ ರಜೆ ತೆಗೆದುಕೊಂಡು ಕೆಲಸದಿಂದ ಹೊರಗೆ ಉಳಿಯಲು ಅಸಾಧ್ಯ. ಟೈಲರ್ ಗಳು, ವಿವಿಧ ವ್ಯಾಪಾರಿಗಳು ಅವರದ್ದೇ ಕೆಲಸ ಬಿಡುವಿಲ್ಲದೆ ಮಾಡಬೇಕಾಗುತ್ತದೆ. ಹಾಗಾಗಿ ಕೆಲಸದ ಮಹತ್ವ ತುಂಬಾ ಇದ್ದು, ಕಾಲಕ್ಕೆ ತಕ್ಕಂತೆ ಬದುಕಬೇಕಾಗಿದೆ. ಹೀಗಿರಲು ನಾವು ನಮ್ಮ ಜೀವನವನ್ನು ಸಾಗಿಸುತ್ತಾ, ಎಲ್ಲರಿಗೆ ಸರಿಸಾಟಿಯಾಗಿ ಬದುಕುತ್ತಾ, ಹಿಂದಿನದನ್ನು  ಮರೆಯದೆ, ಹೊಸ ಬದುಕನ್ನು ನಾವೀನ್ಯತೆಯಿಂದ ಕಟ್ಟುತ್ತಾ, ಆರೋಗ್ಯದ ಕಡೆ ಗಮನ ನೀಡುತ್ತಾ ಬದುಕಬೇಕಿದೆ. ಓಡುವ ಕಾಲದ ಜೊತೆ ನೆನಪುಗಳ ಸಿಂಹಾವಲೋಕನದ ಜೊತೆ ಓಡಬೇಕಿದೆ. ನೀವೇನಂತೀರಿ?
@ಹನಿಬಿಂದು@
23.09.2023
     

ದಶಕ -117

ಮಂಗಳವಾರ, ಅಕ್ಟೋಬರ್ 3, 2023

ಪನಿ

ಹನಿ

ಹನಿ

ಮಾನವ ಬದುಕು