ಭಾನುವಾರ, ಜುಲೈ 19, 2020

1493. ಕಟ್ಟದಿರಿ ಗೋಡೆ

ಕಟ್ಟದಿರಿ ಗೋಡೆ

ಕಟ್ಟಿಕೊಳ್ಳಿ ಗೋಡೆಯನು
ಎರಡು ಮನೆಗಳ ನಡುವೆ
ಕಟ್ಟದಿರಿ ಗೋಡೆಗಳನು
ಎರಡು ಮನಗಳ ನಡುವೆ..

ಬೆಳೆಸಿಕೊಳ್ಳಿ ಅಂತರವ
ಎರಡು ದೇಹಗಳ ನಡುವೆ
ಬೆಳೆಸದಿರಿ ಅಂತರವ
ಎರಡು ಹೃದಯಗಳ ನಡುವೆ..

ಮುಚ್ಚಿಕೊಳ್ಳಿರಿ ನಿಮ್ಮ
ಕೈ ಮೂಗು ಬಾಯಿಗಳ
ಮುಚ್ಚದಿರಿ ನಿಮ್ಮ
ಎದೆಯೊಳಗಿನ ಭಾವನೆಗಳ

ಮರೆತುಬಿಡಿ ಜನರ
ಕೋಪ ದ್ವೇಷಗಳನು
ಮರೆಯದಿರಿ ಗೆಳೆಯರ
ಪ್ರೀತಿ ಸ್ನೇಹಗಳನು..

ಬಿತ್ತಿ ಬೆಳೆಸಿರಿ ನಾಡಲಿ
ಸೌಹಾರ್ದತೆಯ ಹಸಿರನು
ಕೆತ್ತಿ ಬಿಸಾಕಿರಿ ಬೇಗ
ಮತಾಂಧತೆಯ ರೋಗವನು..

ಮುಚ್ಚಿ ಬಿಡಿ ಬಾಯಿಯನು
ಜಗಳ ಕದನಗಳೆಡೆಯಲಿ
ಬಿಚ್ಚಿ ಬಿಡಿ ಕರಗಳನು
ದೇಶ ಸೇವಾ ಕಾರ್ಯಗಳಲಿ

ಮೆಚ್ಚಿಕೊಳ್ಳೋಣ ಜನರಲ್ಲಿ
ವಿಶಾಲವಾದ ಆಲೋಚನೆಗಳ
ಬಚ್ಚಿಟ್ಟುಕೊಳ್ಳೋಣ ಒಳಗಿಲ್ಲಿ
ಹತ್ತು ಹಲವು ನೋವುಗಳ..

ಚುಚ್ಚದಿರೋಣ ಪದಗಳಲಿ
ಜತೆಗಾರರಿಗೆ ಎಂದೂ
ಎಚ್ಚರಿಸೋಣ ಸರ್ವರಲಿ
ದಯೆಯನು ಮುಂದೂ..
@ಪ್ರೇಮ್@
15.07.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ