ಶನಿವಾರ, ಜನವರಿ 14, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -168

ಒಂದಿಷ್ಟು ರಿಲಾಕ್ಸ್ ತಗೊಳ್ಳಿ -168

ಜನವರಿ ಬಂದ ಕೂಡಲೇ ಆಂಗ್ಲರ ಒಂದು ಕಾಮಿಡಿ ನೆನಪಾಗುತ್ತದೆ. ಎಲ್ಲರಿಗೂ ಹೊಸ ವರ್ಷದ ದಿನ ಖುಷಿ ಆದರೂ ಮುಂದೆ ಹೊಸ ವರ್ಷದ ಯೋಜನೆಗಳನ್ನು ಮಾಡುವಾಗ ಬೇಸರ ಆಗುವ ಕಾರಣ 'ವರಿ ' ಪ್ರಾರಂಭ. ಅದು ಮುಂದಿನ ತಿಂಗಳಿನ ವರೆಗೂ ಸಾಗಿ ' ಫೆಬ್ರ "ವರಿ". ಮತ್ತೆ ಸರಿಯಾಗಿ ಮುಂದೆ ನಡೆಯಲು ಪ್ರಾರಂಭ ಮಾರ್ಚ್ ತಿಂಗಳಿನಲ್ಲಿ. ಬ್ರಿಟಿಷರು ಭಾರತವನ್ನು ಆಳಿ ಹೋದ ಬಳಿಕ ಎಪ್ಪತ್ತೈದು ವರ್ಷಗಳಾದರೂ ನಾವು ಅವರ ಕ್ರಮವನ್ನು ಅನುಸರಿಸುವುದು ಬಿಟ್ಟಿಲ್ಲ. ಸೈನ್ಯ ವ್ಯವಸ್ಥೆ, ಕೋರ್ಟು ಕಚೇರಿಗಳು, ಶಾಲೆಗಳು ಎಲ್ಲವೂ ಆಂಗ್ಲರಂತೆ. ಅಂತೆಯೇ ಕ್ಯಾಲೆಂಡರ್, ರಜೆ ಕೂಡಾ. ಹಾಗಾಗಿ ಈಗ 2023 ಹೊಸ ಕ್ಯಾಲೆಂಡರ್ ಆಂಗ್ಲ ವರ್ಷ ಪ್ರಾರಂಭ ಆಗಿದೆ. ಜನವರಿ ಬಂದರೆ ನಾವು ಭಾರತೀಯರಿಗೆ ಎರಡು ಖುಷಿ. ಹೊಸ ವರ್ಷದ ಸಂಭ್ರಮದ ಜೊತೆಗೆ ಸಂಕ್ರಾಂತಿ ಹಬ್ಬ ಮತ್ತು ಒಂದು ರಾಷ್ಟ್ರೀಯ ಹಬ್ಬದ ಆಚರಣೆ. ಅದೇ ನಮ್ಮ ಭಾರತೀಯ ಸಂವಿಧಾನ ಜಾರಿಗೆ ಬಂದ ದಿನ ಗಣರಾಜ್ಯೋತ್ಸವ. 

ಭೂಮಿ ತಿರುಗುವಾಗ ಒಂದು ಸಂಕ್ರಾಂತಿಯನ್ನು ಪಡೆಯುವ ಸುಸಂದರ್ಭ ಸಂಕ್ರಾಂತಿ ಹಬ್ಬಕ್ಕೆ ನಾವು "ಸಂ ಕ್ರಾಂತಿಯನ್ನು" ಕಾಣ ಬಯಸಿದರೆ ಪ್ರಕೃತಿಯ ಚಳಿಗಾಲದ ಎಳೆಯ ಚಿಗುರಿನ ರಮ್ಯ ನೋಟ ಸವಿಯುತ್ತಾ ಎಳ್ಳು ಬೆಲ್ಲ ಬೀರುವ ಆನಂದದ ಹಬ್ಬ. ಅದರ ಹಿಂದೆಯೇ ಬರಲಿದೆ ಇಡೀ ದೇಶಕ್ಕೆ ಗಣರಾಜ್ಯೋತ್ಸವದ ಸಂತಸ. ದೆಹಲಿಯಲ್ಲಿ ಆಚರಿಸುವ ಆ ಹಬ್ಬಕ್ಕೆ ಇಡೀ ದೇಶವೇ ಒಂದಾಗಿ ಭಾರತೀಯತೆ ಮೈ ಮರೆಯುವ ಕ್ಷಣ. ಈ ಗಣರಾಜ್ಯೋತ್ಸವಕ್ಕೆ 74 ವರ್ಷಗಳ ಸಂಭ್ರಮ. ಭಾರತ ಅದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ಪಡೆಯುದತ್ತ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ. ಸ್ವಾತಂತ್ರ್ಯ ಪಡೆದು ಅಮೃತ ಮಹೋತ್ಸವ ಆಚರಿಸಿಕೊಂಡ ಬಳಿಕವಾದರೂ ಸ್ವಲ್ಪ ಮುಂದುವರೆದು ಸಣ್ಣ ಪುಟ್ಟ ದೇಶಗಳಿಗಿಂತ ಮೇಲೇರಿ ಒಲಿಂಪಿಕ್ಸ್ ಆಟಗಳ ಪದಕ ಪಟ್ಟಿಯಲ್ಲಿ ಕೆಳಗಾದರೂ ಕಾಣುವಂತೆ ಆಗಿ, ಮೇಲೇರುತ್ತಾ ತನ್ನ ಸಾಧನೆ ತೋರುತ್ತಿರುವ ದೇಶದ ಹೆಮ್ಮೆಯ ಪುತ್ರರಾದ ನಾವು ದೇಶ ಭಕ್ತಿಯನ್ನು ಬೆಳೆಸಿಕೊಳ್ಳುವ ಜೊತೆಗೆ ಪ್ರಕೃತಿ ಮಾತೆಯ ಆರಾಧಕರು ಕೂಡಾ ಆಗಬೇಕು ಎಂದು ಸಾರುವ ತಿಂಗಳು ಈ ಜನವರಿ. ಭಾರತೀಯರಿಗೆ ಇದು ಬರೀ ವರಿ ಕೊಡುವ ತಿಂಗಳು ಅಲ್ಲ. 
ಬರಿ ವರಿ ಬೇಡ ಬರೋಬರಿ ತರಾವಳಿ ಕ್ರಮವಿರಲಿ ಎಂಬಂತೆ ಹಚ್ಚ ಹಸಿರು ಹೊದ್ದ ಭೂತಾಯಿ ಮೈದುಂಬಿ ನಿಂತು ಪರಿಸರ ವೀಕ್ಷಕರನ್ನು ಕೈಬೀಸಿ ಕರೆಯುತ್ತಿದ್ದಾಳೆ. ನೋಡ ಬಾ ನಮ್ಮೂರ....ಎಂದು ಕವಿ ಹಾಡಿದ ಹಾಗೆ ರಮ್ಯ ಪ್ರಕೃತಿ ತಾ ಚಿಗುರು, ಕಾಯಿ ಹೂಗಳಿಂದ ಕಂಗೊಳಿಸುತ್ತ ಸರ್ವ ಹಸಿರು ಪ್ರೇಮಿಗಳ ಕಣ್ಣಿಗೆ ಹಬ್ಬದೂಟ ಬಡಿಸಲು ನಿಂತ ಹಾಗಿದೆ. 

ಇದರ ನಡುವೆ ಕ್ರೂರ ಮಾನವರು ಸ್ವಚ್ಛತೆ, ತಾಂತ್ರಿಕತೆ, ಹೊಸ ಜಗತ್ತು, ಬದಲಾವಣೆ, ಹೊಸತನ ಎಂಬ ಹೆಸರಿನಲ್ಲಿ ಹಲವಾರು ವರ್ಷಗಳಿಂದ ಬೆಳೆದು ನಿಂತು ಸಾವಿರಾರು ಜನರಿಗೆ ಆಮ್ಲಜನಕ ಒದಗಿಸಿದ ಹಳೆ ಮರಗಳನ್ನು ಅವು ಬಿದ್ದು ಹೋದರೆ ನಮಗೆ ತೊಂದರೆ ಎಂದು ತಾವು ತಾವೇ ಅಂದಾಜಿಸಿಕೊಂಡು, ಬುಡ ಸಮೇತ ಮರಗಳ ಸಾಮೂಹಿಕ ಕಗ್ಗೊಲೆ ನಡೆದರೆ ಉಳಿದ ಜನ ಮೂಕ ಪ್ರೇಕ್ಷಕರು ಅಷ್ಟೇ. ಅಲ್ಲಿ ಬದುಕಿನ ಗಾಳಿ ನೀಡುವ ಮರಗಳಿಗಿಂತ ಬದುಕಿರುವ ಸಿರಿವಂತ ಮನುಷ್ಯರು ಓದಿಸುವ ಐಷಾರಾಮಿ ಕಾರುಗಳು ಮುಖ್ಯ. ಆ ಕಾರುಗಳು ವೇಗವಾಗಿ ಓಡಾಡಲು ಅಗಲವಾದ ಅಂದದ ರಸ್ತೆ ಮುಖ್ಯ. ಅಲ್ಲಿರುವ ಹೆಮ್ಮರ ಕಸ, ಅದು ಅಡ್ಡ! ಮತ್ತೆ ಮರವಾಗುವ ಗಿಡ ನೆಟ್ಟು ಕೇರ್ ಮಾಡಿ ಬೆಳೆಸುವ ವ್ಯವಧಾನ ಯಾರಿಗಿದೆ ಹೇಳಿ? ಇದು ಫಾಸ್ಟ್ ಯುಗ. ತನ್ನ ಸಮಯ, ನಿದ್ದೆ, ಊಟದ ಕಡೆಗೆ ಕೂಡಾ ಮನುಷ್ಯ ಹೆಚ್ಚು ಹೊತ್ತು ಯೋಚಿಸಲು ಸಮಯ ಇಲ್ಲ, ಇನ್ನೂ ಬದುಕಿರುವ , ಸಾಯಿಸಿದ ಮರಗಳ ಬಗ್ಗೆ ಯಾರೂ ತಾನೇ ಯೋಚಿಸುತ್ತಾರೆ ಹೇಳಿ? 

ಇದೀಗ ಯಾವುದೇ ಯುಗ ಆದರೂ ಕುಡಿಯಲು ನೀರು, ತಿನ್ನಲು ಊಟ ಉಸಿರಾಡಲು ಗಾಳಿಗೆ ಮೂಲ ಸಸ್ಯಗಳೆ. ಯಾವ ಕಾಲ ಆದರೂ ಗಿಡ ಮರ ಕೊಂದು ನಾವು ಬದುಕಲಾರೆವು ಎಂಬ ಸಾರ್ವಕಾಲಿಕ ಸತ್ಯವನ್ನು ಮರ ಕಡಿದು ಬೋಳಾಗಿಸುವ ಮಾನವರಾದ ನಾವು ಒಪ್ಪಿಕೊಳ್ಳಲೇ ಬೇಕಲ್ಲವೇ? ನೀವೇನಂತೀರಿ?
@ಹನಿಬಿಂದು@
13.01.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -167

ಒಂದಿಷ್ಟು ರಿಲಾಕ್ಸ್ ತಗೊಳ್ಳಿ -167

ಇಂದು ನಿಜವಾಗಿ ತಪ್ಪು ಮಾಡುವವರು ಚಿಕ್ಕ ಮಕ್ಕಳೋ ಅಥವಾ ಹಿರಿಯರೋ ಎಂಬ ಜಿಜ್ಞಾಸೆ. ಕರೋನ ವೈರಸ್ ಸಮಾಜವನ್ನು ಬಾಧಿಸಿತು. ಕಷ್ಟ ಪಟ್ಟು ಸಾಲ ಮಾಡಿ ಎಮ್ಮೆ , ದನ, ಚಿನ್ನ ಮಾರಿ ಆದ್ರೂ ಲಾಕ್ ಡೌನ್ ಸಮಯದಲ್ಲಿ ಮಕ್ಕಳ ಕೈಗೆ ಆನ್ಲೈನ್ ಕ್ಲಾಸ್ ಗೆ ಮೊಬೈಲ್ ಕೊಟ್ಟು ಅವರಿಗೆ ಅದಕ್ಕೆ ನೆಟ್ ರೀಚಾರ್ಜ್ ಮಾಡಿಸಿ ಮೊಬೈಲ್ ಫೋನಿನ ಹುಚ್ಚು ಹಿಡಿಸಿದ್ದು ಸರಕಾರ, ಹಿರಿಯರಾದ ಶಿಕ್ಷಕರು! ತೆಗೆದು ಕೊಟ್ಟವರು ಪೋಷಕರು! ಈಗ ಪ್ರತಿ ತಿಂಗಳೂ ಅದಕ್ಕೆ ಕರೆನ್ಸಿ ಹಾಕಿ ಕೊಡುತ್ತಿರುವವರು ಯಾರು?

    ಇಂದು ನಮ್ಮ ಮಕ್ಕಳು ಮೊಬೈಲ್ ಬಿಟ್ಟಿರಲು ಸಾಧ್ಯ ಆಗದೆ ಮಾನಸಿಕವಾಗಿ ಖಿನ್ನಾರಾಗುತ್ತಿದ್ದಾರೆ. ಮೊಬೈಲ್ ಗೀಳಿಗೆ ಬಿದ್ದ ಯುವಕ ಯುವತಿಯರು ತಮ್ಮ ಅಮೂಲ್ಯ ಸಮಯವನ್ನು ಅದರ ಜೊತೆ ಕಳೆಯುತ್ತಿರುವ ಕಾರಣದಿಂದ ಒಂಟಿತನ ಇಷ್ಟ ಪಡುತ್ತಾರೆ. ಕುಟುಂಬದ ಜನರ ನಡುವೆ ಮಾತುಕತೆ ಕಡಿಮೆ ಆಗಿದೆ. ಸಣ್ಣ ಮಕ್ಕಳ ತಾಯಂದಿರೂ ಮೊಬೈಲ್ ಗೀಳಿಗೆ ಬಿದ್ದ ಕಾರಣ ಅವರ ಮಕ್ಕಳ  ಮೇಲೆ ನಿಗಾ ಕಡಿಮೆ ಆಗಿ, ಅವರು ಬೇಕಾಬಿಟ್ಟಿ ಬೆಳೆಯುತ್ತಿದ್ದಾರೆ. ದೇಶದಲ್ಲಿ ಕೆಲಸ ಕಡಿಮೆ ಆಗಿರುವ ಕಾರಣ ದೇಶದ ಪ್ರಗತಿಗೂ ಅದು ಮಾರಕ.  ಕನಸುಗಳು ಸಾಕಾರಗೊಳ್ಳಲು ಪ್ರಾರಂಭಿಸುವ ಪ್ರೌಢ ವಿಭಾಗ, ಕಾಲೇಜು ಮತ್ತು ಪದವಿಯ ವಯಸ್ಸಿನ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದು ಅವರ ಓದು ಕುಂಠಿತವಾಗಿದೆ. ಬೇಡದ ವಿಡಿಯೋಗಳ ವೀಕ್ಷಣೆ ಅವರ ಕಾಮನೆಗಳನ್ನು ಉತ್ತುಂಗಕ್ಕೆ ಏರಿಸಿ ಇಂದಿನ ಹೆಣ್ಣು ಮಕ್ಕಳಿಗೆ ಸೆಕ್ಯೂರಿಟಿ ಇಲ್ಲವಾಗಿದೆ. ಇದು ಅವರ ಬದುಕಿಗೂ, ಜ್ಞಾನಕ್ಕೂ ಪೆಟ್ಟು ಕೊಡುತ್ತದೆ. ಮುಂದೆ ಒಳ್ಳೆಯ ಕೆಲಸಕ್ಕೆ ಸಮಸ್ಯೆ ಆಗಬಹುದು. 

ಮಕ್ಕಳ ಮಾತಿಗೆ ಬೆಲೆ ಇರಬೇಕು. ದೈರ್ಯ ತುಂಬುವ ಕೆಲಸ ಸರಿ ಇರುವ ನಾವೇ ಮಾಡಬೇಕು. ಅಲ್ಲವೇ? ಪೋಷಕರ ಮಾತನ್ನು ಮಕ್ಕಳು ಕೇಳುವ ಹಾಗೆ ಇರಬೇಕು. ಅದು ಆಗದೆ ಇದ್ದರೆ ಗಿಡವಾಗಿ ಬಗ್ಗದ್ದು ಎಂದು ಅರ್ಥ. ಅದೆಷ್ಟೋ ಪೋಷಕರು ನಮ್ಮ ಮಕ್ಕಳು ನಮ್ಮ ಮಾತು ಕೇಳುವುದಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ತಂದು ಹಾಸ್ಟೆಲ್, ಆಶ್ರಮ ಶಾಲೆಗಳಲ್ಲಿ ಕಳಿಸಿ ಓದಲು ಬಿಟ್ಟಿರುತ್ತಾರೆ. ಒಂದಿಬ್ಬರು ಮಕ್ಕಳನ್ನು ಮನೆಯಲ್ಲಿ ಹತ್ತಿರದಿಂದ ಕೂಡಿಸಿ ಓದಿಸಲು ಸಾಧ್ಯ ಆಗದ ನಮ್ಮ ಪರಿಸ್ಥಿತಿಯ ಜೊತೆಗೆ ನೂರಾರು ಮಕ್ಕಳನ್ನು ಒಂದೆಡೆ ಸೇರಿಸಿ ಓದಿಸುವ ಹಾಸ್ಟೆಲ್ ವಾರ್ಡನ್ ಬಗ್ಗೆ ನಾವು ಯೋಚನೆ ಮಾಡುವುದೇ ಇಲ್ಲ. 

ಅವರವರ ಮನಸ್ಥಿತಿ ಅವರು ಬದುಕಲ್ಲಿ ಎದುರಿಸಿದ ಕಷ್ಟಗಳನ್ನು ಆವರಿಸಿ ಇದೆ. ನಾನು ಕಷ್ಟಗಳನ್ನು ಎದುರಿಸಿದ್ದರೆ ಮಾತ್ರ ನನಗೆ ಕಷ್ಟಗಳ ಬಗ್ಗೆ, ಕಷ್ಟ ಪಡುವವರ ಬಗ್ಗೆ ತಿಳಿದಿರುತ್ತದೆ. ಇಲ್ಲದೇ ಇದ್ದರೆ ನಾನು ಪರರ ಕೆಲಸಗಳನ್ನು ದೂರಿಕೊಂಡೆ ಬದುಕುತ್ತಿರುತ್ತೇನೆ. ಬದುಕಿನ ದೃಷ್ಟಿ ಬದಲಾಗಬೇಕು ಎಂದಾದರೆ ಪರರ ಮಾತನ್ನು ಕೇಳಿ ತಲೆಕೆಡಿಸಿಕೊಳ್ಳ ಬಾರದು. ನಮ್ಮ ಸ್ವಂತ ಬುದ್ದಿಯಿಂದ ನಮ್ಮ ಬಾಳು ನಡೆಸಲು ಕಲಿಯಬೇಕು. ಹೇಳಿಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ ಜೀವನಪೂರ್ತಿ ಇರಲಾರದು. ನಮ್ಮ ಮಕ್ಕಳನ್ನು ಅವರು ಇದ್ದಂತೆ ಸ್ವೀಕರಿಸೋಣ. ಪರರ ಮಕ್ಕಳ ಸಾಧನೆ ನೋಡಿ ಕರುಬದೆ ಇರೋಣ. ನೀವೇನಂತೀರಿ?
@ಹನಿಬಿಂದು@
07.01.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -166

ಒಂದಿಷ್ಟು ರಿಲಾಕ್ಸ್ ತಗೊಳ್ಳಿ -166

ಸರ್ವರಿಗೂ ಹೊಸ ಆಂಗ್ಲ ಕ್ಯಾಲೆಂಡರ್ ನ ಹೊಸ ವರ್ಷದ ಮೊದಲ ದಿನದಂದು ಹೊಸ ವರುಷದ ಶುಭಾಶಯಗಳು. ಹೊಸ ಕ್ಯಾಲೆಂಡರ್ ವರ್ಷ ಸರ್ವರಿಗೂ ಸುಖ, ಶಾಂತಿ , ನೆಮ್ಮದಿ, ಆರೋಗ್ಯ ತರಲಿ ಎಂಬ ಹಾರೈಕೆ. 2023ನ್ನು ಸ್ವಾಗತಿಸುತ್ತಾ, ಕೊರೋನ ವೈರಸ್ ಎಂಬ ಮಹಾಮಾರಿ ದೇಶಕ್ಕೆ ಮಾರಕ ಆಗದೆ ಇರಲಿ ಎಂಬ ಆಶಯ. 

            ಕೊರೋನ ವೈರಸ್ ನಿಂದ ಸ್ವಲ್ಪ ಚೇತರಿಸಿಕೊಂಡು ಮತ್ತೆ ಬದುಕನ್ನು ಭಯದಲ್ಲೇ ಕಟ್ಟಿಕೊಂಡ ವರ್ಷ ಇದು. ಶಾಲಾ ಕಾಲೇಜು, ಪ್ರವಾಸ, ಜಾತ್ರೆ ಪೂಜೆ ಆರಂಭ. ಅಬ್ಬಾ ಎಲ್ಲಾ ಸರಿ ಆಯ್ತು ಎಂದು ನಿಟ್ಟುಸಿರು ಬಿಡುವಲ್ಲಿ  ಮತ್ತೊಂದು ಅಲೆಯ ಪ್ರಾರಂಭ. ಒಳಗಿದ್ದ ಮಾಸ್ಕ್ ಸ್ಯಾನಿಟೈಸರ್ ಗಳು ಮತ್ತೆ ಪತ್ತೆ. ಮತ್ತೆ ಮತ್ತೆ ಭಯ. ಯಾವಾಗ ಎಲ್ಲಾ ಬಂದ್ ಆಗುವುದೋ ಎಂಬ ಆತಂಕ. ಮತ್ತೆ ಬಸುರಿ, ಖಾಯಿಲೆಯ ಜನರಿಗೆ ಆಸ್ಪತ್ರೆಗೆ ಹೋಗುವುದು ಹೇಗೋ ಎಂಬ ಭಯ. ಸಾಧಾರಣ ತಲೆನೋವು, ಶೀತ, ಜ್ವರಕ್ಕೆ ಡಾಕ್ಟರ್, ಆಸ್ಪತ್ರೆಗೆ ಹೋಗಲು ಭಯ. ಎಲ್ಲಿ ಯಾವ ಪರೀಕ್ಷೆ ಮಾಡಿ ಮೂರು ಲಕ್ಷದ ವರೆಗೆ ಬಿಲ್ ಮಾಡ್ತಾರೋ, ಆ ಟೆಸ್ಟ್ ಈ ಟೆಸ್ಟ್ ಅಂತ ಮಾಡಿ ಒಂದು ವಾರ ಅಲ್ಲೇ ಉಳಿಸಿ ಡೆಡ್ ಬಾಡಿ ಮಾಡಿ ಬಿಡ್ತಾರಾ ಅಂತ ಭಯ. ಒಟ್ಟಿನಲ್ಲಿ ಈ ವರ್ಷ ಇಡೀ ಭಯದಲ್ಲೇ ಕಳೆದು ಹೋಯ್ತು. ಎಲ್ಲರೂ ಆ ಕೊರೋನ ವೈರಸ್ ಗೆ ಹೆದರಿ ಕಷಾಯ ಕುಡಿದದ್ದೆ ಕುಡಿದದ್ದು. ಸಣ್ಣ ಪುಟ್ಟ ಖಾಯಿಲೆಗೆ ಅಡುಗೆ ಕೋಣೆಯ ಅಜ್ಜಿ ಮದ್ದನ್ನೆ ಮಾಡಿದ್ದು. ಹಳೆ ಆಹಾರ ಪದ್ಧತಿಗೆ ಒಗ್ಗಿದ್ದು. ಆಯುರ್ವೇದಿಕ್ ಪದ್ದತಿ, ನಾಟಿ ಔಷಧಿ ಇಂಪ್ರೂವ್ ಆಗಿ ಹೊಟ್ಟೆಗೆ ಕೆಮಿಕಲ್ ಬೀಳುವುದು ಸ್ವಲ್ಪ ಕಡಿಮೆ ಆಗಿದ್ದದ್ದು ಈ ವರ್ಷ ಮತ್ತೆ ಮೊದಲಿನ ಜೀವನ ವಿಧಾನ  ನಿಧಾನವಾಗಿ ವಕ್ಕರಿಸ ತೊಡಗಿತ್ತು. ಸಭೆ ಸಮಾರಂಭ ಜಾತ್ರೆ ತೇರು ಪ್ರಾರಂಭ ಆಗಿತ್ತು. ಸಾರ್ವಜನಿಕ ಕಾರ್ಯಕ್ರಮಗಳು ಮತ್ತೆ ಸೇರಿದ್ದವು. ಜನತೆಯ ಕ್ಯೂ ಎಲ್ಲೆಡೆ ಇತ್ತು. ಕೆಲವರು ಮಾಸ್ಕ್ ಬಳಸಿದರೆ ಮತ್ತೆ ಕೆಲವರು ಮರೆತಿದ್ದರು. ಗುಂಪು ನೃತ್ಯಗಳು, ಮನೋರಂಜನಾ ಕಾರ್ಯಕ್ರಮಗಳು, ಥಿಯೇಟರ್ ಗಳು, ಮಾಲ್ ಗಳಿಗೆ ಜನ ನುಗ್ಗ ತೊಡಗಿದ್ದರು. 

     ಇನ್ನೇನು ಕರೋನ ಕಾಲದ ಭಯ ಮರೆಯಬೇಕು, ಅಷ್ಟು ಹೊತ್ತಿಗೆ ಇಂಜೆಕ್ಷನ್, ಮದ್ದು, ಮಾತ್ರೆ , ಬೂಸ್ಟರ್ ಡೋಸ್ ಎಲ್ಲಾ ಹಳೆಯ ವಿಧಾನವಾಗಿ ಹೋಗಿ ಮೂಗಿನ ಮೂಲಕ ಪಡೆಯುವ ಲಸಿಕೆ ಬಂದು ಬಿಡ್ತು! ಇನ್ನು ಮುಂದೆ ಅದೆಲ್ಲಿಗೆ ಚುಚ್ಚುವ ಲಸಿಕೆಗಳು ಬರ್ತಾವೋ ಆ ದೇವರಿಗೇ ಗೊತ್ತು, ಮತ್ತು ಕರೋನ ವೈರಸ್ ಬಿಡುವ ಚೈನಾಕ್ಕೆ ಗೊತ್ತು.

ವರ್ಷದ ಮೊದಲನೇ ದಿನವೇ ಇಡೀ ವರ್ಷಕ್ಕೆ ಬೇಕಾದ ಪ್ರತಿ ತಿಂಗಳ ಹಾಗೂ ವರ್ಷದ ಟಾರ್ಗೆಟ್ ಇಟ್ಟುಕೊಳ್ಳೋಣ. ಅದಕ್ಕೆ ಸರಿಯಾಗಿ ಗುರಿ ತಲುಪಲು ಮುನ್ನಡೆಯೋಣ. ಎಲ್ಲಕ್ಕಿಂತ ಮೊದಲು ಆರೋಗ್ಯವೇ ಭಾಗ್ಯ. ನೀವೇನಂತೀರಿ?
@ಹನಿಬಿಂದು@
01.01.2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -165

ಒಂದಿಷ್ಟು ರಿಲಾಕ್ಸ್ ತಗೊಳ್ಳಿ -165

Aim should be high to reach the sky...ಹೀಗೆಂದು ಹೇಳಿದವರು ಡಾ. ಎಪಿಜೆ ಅಬ್ದುಲ್ ಕಲಾಂ ಅವರು. ದೊಡ್ಡ ದೊಡ್ಡ ಕನಸು ಕಾಣದೆ ಸಣ್ಣ ಕನಸುಗಳನ್ನು ಹೊತ್ತ ಮನುಷ್ಯ ಮನುಷ್ಯನೇ ಅಲ್ಲ. ನಮ್ಮ ಕನಸುಗಳು ಯಾವಾಗಲೂ ಬಹಳ ದೊಡ್ಡದಾಗಿ ಇರಬೇಕು. ಇಲ್ಲದೇ ಹೋದರೆ ಯಾವುದನ್ನೂ ಸಾಧಿಸಲು ನಮ್ಮಿಂದ ಆಗದು. ದೊಡ್ಡ ದೊಡ್ಡ ಆಕಾಂಕ್ಷೆಗಳನ್ನು ಇಟ್ಟುಕೊಂಡಾಗ ಮಾತ್ರ ನಾವು ಹೆಚ್ಚು ಎತ್ತರಕ್ಕೆ ಏರಲು ಸಾಧ್ಯ ಅಲ್ಲವೇ? ನಮ್ಮ ಕನಸುಗಳು ಆಕಾಶದ ಎತ್ತರಕ್ಕೆ ಬೆಳೆದಾಗ ಮಾತ್ರ ಪರೀಕ್ಷೆಗಳು ನಮಗೆ ಚಿಕ್ಕದಾಗಿ ಕಾಣಿಸುತ್ತವೆ. ಇಲ್ಲದೇ ಹೋದರೆ ಪರೀಕ್ಷೆಗಳೇ ಜೀವನದ ದೊಡ್ಡ ಸವಾಲಾಗಿ ಕಂಡು ಅವುಗಳನ್ನು ಎದುರಿಸಲು ಆಗದೆ ನಾವು ಅಲ್ಲಿಯೇ ಅಸಫಲರಾಗುತ್ತೇವೆ. ಇದೇ ನಮ್ಮ ಜೀವನ. ನಮ್ಮ ಜೀವನದಲ್ಲಿ ಸಾಧಿಸಲು ನನ್ನಿಂದ ಸಾಧ್ಯ ಆಗದು ಎಂದು ಅದೆಷ್ಟೋ ಜನ ವಿದ್ಯಾರ್ಥಿಗಳು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಾರೆ. ಪರೀಕ್ಷೆಗಳು ಇಲ್ಲದೇ ಜೀವನ ಇಲ್ಲ. ಜೀವನದ ಪ್ರತಿ ಹಂತದಲ್ಲೂ ಪರೀಕ್ಷೆಗಳನ್ನು ಎದುರಿಸಲೇ ಬೇಕು. ಇಲ್ಲವಾದರೆ ಬದುಕು ಮುನ್ನಡೆಯದು. 

ಬಾಲ್ಯದಲ್ಲಿ ಎದ್ದು ನಿಲ್ಲುವ, ಮಾತನಾಡಲು ಕಲಿಯುವ, ಎಡವಿ ನಡೆಯುವ ಪರೀಕ್ಷೆ, ಕೇಳಿ, ನೋಡಿ ಅನುಕರಣೆ ಮಾಡುವ ಪರೀಕ್ಷೆ, ಬೆಳೆಯುತ್ತಾ ಅಕ್ಷರ ಕಲಿಕೆ, ಹೊಸ ಹೊಸ ಭಾಷಾ ಕಲಿಕೆಯ ಜೊತೆಗೆ ವಿವಿಧ ಕೆಲಸಗಳ ಕಲಿಕೆ, ವೈಯಕ್ತಿಕ ಸ್ವಚ್ಛತೆ, ತಾನೇ ತಿನ್ನುವುದು, ಬಟ್ಟೆ ತೊಡುವುದು, ಗುಂಡಿ ಹಾಕಿಕೊಳ್ಳುವುದು, ಶೂ ಲೇಸ್ ಕಟ್ಟುವುದು, ತನ್ನ ಬ್ಯಾಗ್ ನಲ್ಲಿ ಪುಸ್ತಕಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿಕೊಳ್ಳುವುದು, ಪುಸ್ತಕಗಳನ್ನು ಅಂದವಾಗಿ ಇಡುವುದು, ಹಾಕಿದ ಬಟ್ಟೆಯನ್ನು ಜೋಪಾನವಾಗಿ ಕೊಳೆ ಮಾಡದೆ ಇಟ್ಟುಕೊಳ್ಳುವುದು ಇವೆಲ್ಲವೂ ಕಲಿಕೆಗಳೆ. 
                   ಮಹಾಭಾರತ ಯುದ್ಧ ಕಾಲದಲ್ಲಿ ಗುರು, ತಾತ, ಅಣ್ಣಂದಿರನ್ನು ಎದುರು ಹಾಕಿಕೊಂಡು ನಾನು ಯುದ್ಧ ಮಾಡುವುದಿಲ್ಲ ಎಂದು ಅರ್ಜುನ ಹೇಳಿದಾಗ ಶ್ರೀ ಕೃಷ್ಣ ಅವನಿಗೆ ಭಗವದ್ಗೀತೆಯನ್ನು ಬೋಧಿಸಿದ. ಅದರ ಸಾರ ಇಷ್ಟೇ. ಭೂಮಿಗೆ ನೀನು ಯಾವುದೋ ಕರ್ತವ್ಯಕ್ಕಾಗಿ ಬಂದಿರುವೆ. ಅದನ್ನು ನಿಷ್ಠೆಯಿಂದ ಮಾಡಿ ಮುಗಿಸು. ಅದು ಕೆಟ್ಟ ಕೆಲಸವಲ್ಲ, ಬದಲಾಗಿ ನೀಚರನ್ನು ಸಂಹರಿಸಿ ಉತ್ತಮ ರಾಜ್ಯ ಕಟ್ಟುವ ಕಾರ್ಯ. ಹಾಗೆಯೇ ನಮ್ಮ ಕರ್ತವ್ಯವನ್ನು ನಾವು ನಿಷ್ಠೆಯಿಂದ ಮಾಡಬೇಕಿದೆ. ಇದುವೇ ನಮ್ಮ ವ್ಯಕ್ತಿತ್ವದ ಉನ್ನತಿಗೆ ಕಾರಣ. ಇಲ್ಲಿಯೇ ನಮ್ಮ ಯಶಸ್ಸು ಅಡಗಿದೆ. ಈಗಿನ ಪೋಷಕರೂ ಕೆಲವರು ಮಕ್ಕಳಿಗೆ ಅವರು ಇನ್ನೂ ಚಿಕ್ಕ ಮಕ್ಕಳು ಎಂಬ ಮುದ್ದಿನಿಂದ ತಾವೇ ಎಲ್ಲಾ ಕೆಲಸಗಳನ್ನು ಮಾಡಿ ಕೊಟ್ಟು ಅವರನ್ನು ಸೋಮಾರಿಗಳಾಗಿ ಬೆಳೆಸಿರುತ್ತಾರೆ. ಐದನೇ ತರಗತಿಯಲ್ಲಿ ಇರುವ ಮಗನಿಗೆ ಊಟವನ್ನು ಅಮ್ಮ ಬಾಯಿಗೆ ಕೊಡಬೇಕು, ಅದೂ ಅವ ತಿನ್ನ ಬೇಕಾದರೆ ಅದರಲ್ಲಿ ಅವನಿಗೆ ಬೇಕಾದ ಐಟಂ ಮಾತ್ರ ಇರಬೇಕು. "ಪ್ರತಿದಿನ ಮಾಂಸಾಹಾರ ಇದ್ದರೆ ಮಾತ್ರ ನನ್ನ ಮಗ ಊಟ ಮಾಡುವುದು" ಎಂದು ಎಲ್ಲರ ಮುಂದೆ ತನ್ನ ಮಗನ ಬಗ್ಗೆ ಕೊಚ್ಚಿಕೊಳ್ಳುವ ಅಮ್ಮ ಅವನ ಮುಂದಿನ ಭವಿಷ್ಯದ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕು. ಫ್ಯಾನ್ ಇಲ್ಲದೆ ನನ್ನ ಮಗು ಒಂದು ದಿನವೂ ಮಲಗಲ್ಲ...ಎನ್ನುವ ಪೋಷಕರು ಒಳ್ಳೆಯವರು ಅಂತಲ್ಲ. ಮುಂದೆ ಮಗುವಿಗೆ ರಾಜಸ್ಥಾನದ ಥಾರ್ ಮರುಭೂಮಿಯಲ್ಲೋ, ಸಿಯಾಚಿನ್ ನಂತಹ ಸೊನ್ನೆ ಡಿಗ್ರೀ ತಾಪಮಾನಕ್ಕೆ ಕಡಿಮೆ ತಾಪ ಇರುವ ಪ್ರದೇಶದಲ್ಲಿ ಅವನು ಕೆಲಸ ಮಾಡಬೇಕಾಗಿ ಬಂದರೆ ಅವನ ದೇಹದಲ್ಲಿ ಅತಿ ಶೀತ ಮತ್ತು ಅತಿ ಉಷ್ಟ್ನವನ್ನು ತಡೆಯುವ ಶಕ್ತಿ ಇರಬೇಕು. ಆ ತಾಯಿ ಮಗನ ಆ ಶಕ್ತಿಯನ್ನು ಎಲ್ಲೋ ಕಡಿಮೆ ಮಾಡುತ್ತಿದ್ದಾಳೆ ಎಂದು ಅರ್ಥ. ಮಕ್ಕಳು ಊಟ ಮಾಡುವುದಿಲ್ಲ ಎಂದು ಬರೀ ನೂಡಲ್ಸ್, ಕುರ್ಕುರೆ , ಲೇಸ್, ಚಿಪ್ಸ್, ಕುಡಿಯಲು ಯಾವಾಗಲೂ ಸ್ಪ್ರೈಟ್, ಕೋಕಾಕೋಲ ಇಂತಹ ಲೈಟ್ ಡ್ರಿಂಕ್ಸ್ ಕೊಡುವ ಪೋಷಕರನ್ನು ನೋಡಿರುವೆ. ಕೆಲಸದಿಂದ ಮನೆಗೆ ಹೋಗುವಾಗ ನಿತ್ಯ ಲೇಸ್ ಪ್ಯಾಕ್ ಮಕ್ಕಳಿಗೆ ಕೊಂಡು ಹೋಗದಿರಿ. ಅದು ಅವರ ಹೊಟ್ಟೆಯ ಹಾಗೂ ದೇಹದ ಆರೋಗ್ಯವನ್ನು ಹಾಳು ಮಾಡುವ ವಸ್ತು. 

       ಮುಂದೆ ಬರುವ ಎಸ್ ಎಸ್ ಎಲ್ ಸಿ, ಪಿಯುಸಿ, ಡಿಗ್ರಿ, ಹಾಗೂ ಇತರ ತರಗತಿಗಳ ಮಕ್ಕಳ ಪರೀಕ್ಷೆ. ಇದರಲ್ಲಿ ಪಾಸು ನಪಾಸು ಕಡಿಮೆ ಹೆಚ್ಚು ಅಂಕಗಳು ಇದ್ದಿದ್ದೇ. ಆದರೆ  ಶಾಲೆಯಲ್ಲಿ ವಿದ್ಯಾರ್ಥಿಗಳು ಕಲಿತ ಉತ್ತಮ ಗುಣಗಳು ಎಲ್ಲರನ್ನೂ  ಎತ್ತರೆತ್ತರಕ್ಕೆ ಕೊಂಡೊಯ್ಯಬಲ್ಲವು. ಮೂರನೇ ತರಗತಿ ಕಲಿತ  ರಾಜ್ ಕುಮಾರ್ ಡಾಕ್ಟರ್ ಬಿರುದು ಪಡೆಯಲು ಕಾರಣ ಅವರ ಕಠಿಣ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆ. ತನ್ನ ಕಾರ್ಯವನ್ನು ಸರಿಯಾಗಿ ಮಾಡಿದ ಸರ್ ಎಂ ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ನಾರಾಯಣ ಗುರು, ಕನಕದಾಸರು, ಕವಿಗಳು, ದಾರ್ಶನಿಕರು, ಸಾಮಾಜಿಕ ಹೋರಾಟಗಾರರು, ಶರಣರು, ಬಸವಣ್ಣ, ಭಾರತ ಸ್ವಾತಂತ್ರ್ಯ ಹೋರಾಟಗಾರರು ಇವರನ್ನೆಲ್ಲ ಜನ ಇನ್ನೂ ನೆನೆಯುತ್ತಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಅವರ ಜ್ಞಾನ, ಕರ್ತವ್ಯ, ಶಿಸ್ತು. ಸಮಯ ಪ್ರಜ್ಞೆ, ಉತ್ತಮ ಗುಣಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಜನರಿಗೆ ಅವರ ಬದುಕಲ್ಲಿ ಯಶಸ್ಸನ್ನು ತರುತ್ತವೆ. 

ಗೇಟು ತೆರೆದಿರವುದು ನೋಡಿದರೆ ತಾನು ಹಾಕಿ ಬರುವುದು, ಕಸ ಬಿದ್ದಿದ್ದರೆ ಅದನ್ನು ಹೆಕ್ಕಿ ಕಸದ ಬುಟ್ಟಿಗೆ ಹಾಕುವುದು, ತಾನು ಎಲ್ಲೂ ಪರಿಸರಕ್ಕೆ ಹಾನಿ ಆಗುವ ಹಾಗೆ ಪ್ಲಾಸ್ಟಿಕ್ ಎಸೆಯದೆ ಇರುವುದು, ನೀರು ತೊಟ್ಟಿಕ್ಕುತ್ತಿದೆ ಎಂದಾದಲ್ಲಿ ಅದನ್ನು ತಡೆಯುವ ಪ್ರಯತ್ನ ಮಾಡುವುದು ಇವೆಲ್ಲಾ ಯಾರೂ ಹೇಳದೆ ತನ್ನಿಂದ ತಾನೇ ಬರಬೇಕಾದ ಉತ್ತಮ ಗುಣಗಳು. ತಂದೆ ತಾಯಿ, ಶಿಕ್ಷಕರು, ಹಿರಿಯರು ಸಾವಿರಾರು ಸಲ ಇದನ್ನು ಹೇಳಿ ಕೊಟ್ಟಿರುತ್ತಾರೆ. ಆದರೂ ಮರೆವು, ಸೋಮಾರಿತನ. ಒಳ್ಳೆಯ ಗುಣಗಳನ್ನು ಜೀವನದಲ್ಲಿ ನಾವು  ಬಳಸಿಕೊಂಡು ಜೀವನ ನಡೆಸಿದಲ್ಲಿ ಮುಂದಿನ ತಲೆಮಾರಿನ ವಿದ್ಯಾರ್ಥಿಗಳು ಓದುವ ಪಠ್ಯ ಪುಸ್ತಕದಲ್ಲಿ ನಮ್ಮ ಜೀವನದ ಸಂದೇಶ ಹೊತ್ತ ಹೊಸ ಪಾಠಗಳು ಇರುತ್ತವೆ. ಆ ದಿಸೆಯಲ್ಲಿ ನಾವು ಯೋಚಿಸೋಣ. ಹುಟ್ಟು ಉಚಿತ, ಸಾವು ಖಚಿತ. ಹುಟ್ಟು ಸಾವುಗಳ ಮಧ್ಯ ಹೆಸರು ಉಳಿಸುವಂತಹ ಒಳ್ಳೆ ಕಾರ್ಯಗಳನ್ನು ಮಾಡೋಣ. ನಮ್ಮ ಜನ್ಮ ದಿನವನ್ನು ಇತರರು ಆಚರಿಸುವಂತೆ ಆಗಲಿ.ನಮ್ಮ ಹೆಸರು ಜನನ ಮರಣಗಳ ದಾಖಲೆಗಳ ಹೊರತಾಗಿ ಪುಸ್ತಕಗಳಲ್ಲಿ, ಶಾಸನಗಳಲ್ಲಿ ಅಜರಾಮರವಾಗಿ ಉಳಿಯುವಂತಹ ಉತ್ತಮ  ಕೆಲಸಗಳನ್ನು ನಾವು ಮಾಡಿ ಇತರರಿಗೆ ಮಾದರಿ ಆಗೋಣ. ಯಾರೋ ನೋಡಲು ಕೆಲಸ ಮಾಡುವುದಲ್ಲ, ದೇವರಿಗಾಗಿ ಹಾಗೂ ನಮ್ಮ ಮನಸ್ಸಿನ ತೃಪ್ತಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡೋಣ, ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳೋಣ. ನೀವೇನಂತೀರಿ?
@ಹನಿಬಿಂದು@
24.12.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -164

ಒಂದಿಷ್ಟು ರಿಲಾಕ್ಸ್ ತಗೊಳ್ಳಿ -164
ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಪುಸ್ತಕ ಓದಿ ಪಡೆಯುವ ಜ್ಞಾನವನ್ನು ಬೇರೆ ಬೇರೆ ಸ್ಥಳಗಳನ್ನು ನೋಡಿ ಅಲ್ಲಿನ ಜನ ಜೀವನದ ಬಗ್ಗೆ ಅಧ್ಯಯನ ಮಾಡುವುದರಿಂದಲೂ ತಿಳಿಯುತ್ತದೆ. ಶಾಲಾ ಕಾಲೇಜುಗಳ ಮಕ್ಕಳಿಗೆ  ನವೆಂಬರ್ - ಡಿಸೆಂಬರ್ ತಿಂಗಳಿನಲ್ಲಿ ಈ ನಿಟ್ಟಿನಲ್ಲಿ ಶಾಲಾ ಶೈಕ್ಷಣಿಕ ಪ್ರವಾಸ ಏರ್ಪಡಿಸುತ್ತಾರೆ. ಸಾಧಾರಣವಾಗಿ ಕರ್ನಾಟಕದಲ್ಲಿ ಬೇಲೂರು, ಹಳೇಬೀಡು, ಮೈಸೂರು, ಬೆಂಗಳೂರು, ಚಿತ್ರದುರ್ಗ, ಕೂಡಲ ಸಂಗಮ, ಹಂಪೆ, ಬಾದಾಮಿ, ಐಹೊಳೆ, ಪಟ್ಟದ ಕಲ್ಲು, ಬಿಜಾಪುರ, ತುಂಗ ಭದ್ರಾ ಅಣೆಕಟ್ಟು, ಆಲಮಟ್ಟಿ ಜಲಾಶಯ, ಬಸವನ ಬಾಗೇವಾಡಿ, ಮುರುಡೇಶ್ವರ, ಗೋಕರ್ಣ, ಧರ್ಮಸ್ಥಳ, ಸುಬ್ರಹ್ಮಣ್ಯ, ಮಡಿಕೇರಿ, ಕಟೀಲು, ಕೊಲ್ಲೂರು, ಮಂಗಳೂರು, ಬೀಚ್, ಕೇರಳದ ವಿಸ್ಮಯ ಸೇರಿ ವಾಟರ್ ಪಾರ್ಕ್ ಗಳು. ಇವು ಎಲ್ಲರೂ ಬೇಟಿ ನೀಡುವ ಸ್ಥಳಗಳು. ಇನ್ನು ಪ್ರಾಥಮಿಕ ಶಾಲಾ ಮಕ್ಕಳಾದರೆ ಪ್ರತಿ ಜಿಲ್ಲೆಯ ಒಳಗೆ ಏನೇನು ನೋಡುವಂತಹ ಸ್ಥಳಗಳಿವೆ ಅವುಗಳನ್ನು ತೋರಿಸಲು ಶಿಕ್ಷಕರು ಕರೆದುಕೊಂಡು ಹೋಗುತ್ತಾರೆ. 

ಸರಕಾರಿ ಶಾಲೆಯ ಮಕ್ಕಳನ್ನು ಕಡಿಮೆ ಖರ್ಚಿನಲ್ಲಿ ನಿಭಾಯಿಸಿ ಕರೆದುಕೊಂಡು ಬಂದರೆ, ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರು ಎಷ್ಟು ಹಣವಾದರೂ ನೀಡುವರು ಎಂಬ ಧೈರ್ಯದ ಮೇಲೆ ವಿಮಾನ ಪ್ರಯಾಣ, ರೈಲಿನಲ್ಲಿ, ಗ್ರಾಮ ವಾಸ್ತವ್ಯ, ಅತ್ಯಂತ ಹೆಚ್ಚಿನ ಆಟಗಳು ಇರುವ ಸ್ಥಳಗಳು ಇವುಗಳನ್ನು ತೋರಿಸಿಕೊಂಡು ಬರುವವರಿದ್ದಾರೆ. ಇದು ಪೋಷಕರು ಮತ್ತು ಶಿಕ್ಷಕರು, ಆಯಾ ಶಾಲಾ ಆಡಳಿತ ಮಂಡಳಿಗೆ ಬಿಟ್ಟ ವಿಚಾರ. ಶಿಕ್ಷಣ ಇಲಾಖೆ ಮತ್ತು ಪೋಷಕರ ಅನುಮತಿಯ ಮೇರೆಗೆ ಸರಕಾರಿ ಬಸ್ಸಿನಲ್ಲೇ ಪ್ರವಾಸ ಹೊರಡಬೇಕು ಎಂಬ ಆದೇಶ ಇದೆ. ಆದರೆ ಎರಡೇ ತಿಂಗಳಿನಲ್ಲಿ ಪ್ರವಾಸಕ್ಕೆ ಸಮಯ ಇರುವ ಕಾರಣ ಐಷಾರಾಮಿ ಪ್ರಯಾಣಕ್ಕಾಗಿಯೋ , ಮಕ್ಕಳ ಸಂಖ್ಯೆ ,  ಬಸ್ಸು ಸಿಗದೆ ಇರುವಿಕೆ, ಖರ್ಚು ವೆಚ್ಚಗಳು ಸರಿದೂಗಿಸಲು ಕೆಲವರು ಖಾಸಗಿ  ಮಿನಿ ಬಸ್  ಅಥವಾ ಖಾಸಗಿ ಬಸ್ಸುಗಳಲ್ಲಿ ಕೂಡಾ ಪ್ರಯಾಣ ಬೆಳೆಸುತ್ತಾರೆ. 

ಈ ಪ್ರವಾಸ ಹೊರಡುವಾಗ ಪ್ರತಿ ಶಿಕ್ಷಕರೂ ಮಕ್ಕಳ ಗುಂಪುಗಳನ್ನು ಮಾಡಿ, ಕೆಲವರು ಆಯಾ ಗುಂಪಿಗೆ ಪ್ರತ್ಯೇಕ ಸಮವಸ್ತ್ರ, ಟಿ ಶರ್ಟ್, ಕ್ಯಾಪ್ ಗಳನ್ನು ಮಾಡಿ ತಮ್ಮ ಮಕ್ಕಳ ಗುರುತು ಸರಿಯಾಗಿ ಸಿಗಲಿ, ತಪ್ಪಿಸಿಕೊಳ್ಳಲು ಸಾಧ್ಯ ಆಗದೆ ಇರಲಿ ಎಂಬ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಉತ್ತಮವಾದ ಕಾರ್ಯವೇ. ಪ್ರತಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವಾಗ ಪೋಷಕರು ಅವರ ಖರ್ಚಿಗೆಂದು ಒಂದಷ್ಟು ಹಣ ಕೊಟ್ಟಿರುತ್ತಾರೆ. ಅಥವಾ ವಿದ್ಯಾರ್ಥಿಗಳೇ ಅವರಿಗೆ ಬಂದ ವಿದ್ಯಾರ್ಥಿ ವೇತನ, ಇತರರು ಕೊಟ್ಟ ಹಣ, ಕೂಡಿಟ್ಟ ಪಿಗ್ಗಿ ಬ್ಯಾಂಕ್ ನ ಹಣ ಎಂತೆಲ್ಲ ಸಾವಿರಾರು ರೂಪಾಯಿ ತಂದು ಖರ್ಚು ಮಾಡುವವರು ಇದ್ದಾರೆ. ಹಲವು ವಿದ್ಯಾರ್ಥಿಗಳು ತಾವೇ ದುಡಿದ ಹಣವನ್ನು ತರುವವರು ಕೂಡಾ ಇದ್ದಾರೆ. ತುಂಬಾ ಬಡತನದ ವಿದ್ಯಾರ್ಥಿಗೆ ಪ್ರವಾಸ ಬರಲು ಇಷ್ಟ ಇದ್ದು , ಕಲಿಕೆ ಹಾಗೂ ಶಾಲಾ ಚಟುವಟಿಕೆಗಳಲ್ಲಿ ಮುಂದಿದ್ದರೆ ಅದೆಷ್ಟೋ ಜನ ಶಿಕ್ಷಕರು ತಾವೇ ಹಣ ಹಾಕಿ ಅವರನ್ನು ಕರೆದುಕೊಂಡು ಹೋಗುವವರಿದ್ದಾರೆ. 

ಬದುಕಿನ ಹಲವಾರು ಶಾಲಾ ಜೀವನದ ನೆನಪುಗಳಲ್ಲಿ ಶೈಕ್ಷಣಿಕ ಪ್ರವಾಸದ ಅಚ್ಚಳಿಯದ ನೆನಪುಗಳು ಸದಾ ಹಸಿರಾಗಿ ಇರುವುದು ಒಂದು ಕಡೆ ಆದರೆ ಅದರಿಂದ ಜೀವನವನ್ನು ಬದಲಾಯಿಸಿ ಕೊಳ್ಳುವವರು, ಅಲ್ಲಿ ಪಾಠ ಕಲಿತವರು, ಅಲ್ಲಿಂದ ಬಂದ ಮೇಲೆ ತಮ್ಮ ಜೀವನವನ್ನು ರೂಪುಗೊಳಿಸಿಕೊಂಡವರು, ಪ್ರವಾಸ ಕಥನ ಬರಹಗಾರರು, ವ್ಯಾಪಾರದ ತಂತ್ರಗಳನ್ನು ಮೈಗೂಡಿಸಿಕೊಳ್ಳುವವರು, ಬೇಗನೆ ಸಿಕ್ಕಿದ , ಬೇರೆ ಬೇರೆ ತರಹದ ಊಟಕ್ಕೆ ಹೊಂದಿ ಕೊಳ್ಳುವವರು, ಹಲವರ ಜೊತೆ  ಬೆರೆಯುವುದು, ಕಷ್ಟಕ್ಕೆ ಸಹಕಾರ, ನರ್ಸಿಂಗ್, ಪರಸ್ಪರ ಸಹಾಯ, ಪರಸ್ಪರ ಹೊಂದಾಣಿಕೆ, ಚಿಕ್ಕವರನ್ನು ಜೋಪಾನ ಮಾಡುವುದು, ತಾನು ನೋಡಿದ ಬಗ್ಗೆ ಉಳಿದವರಿಗೆ ಮಾಹಿತಿ ನೀಡುವುದು ಇವೆಲ್ಲ ಅಲ್ಲಿನ ಕಲಿಕೆಗಳು. ಜೀವನ ಶಿಕ್ಷಣ ಅದರಲ್ಲಿ ಸಿಗುತ್ತದೆ. ಗೆಳೆಯನೊಬ್ಬನ ಆರೋಗ್ಯ ಕೆಟ್ಟರೆ ಅವನನ್ನು ನೋಡಿಕೊಳ್ಳುವುದು, ದೈಹಿಕ ತೊಂದರೆ ಇರುವ ವಿದ್ಯಾರ್ಥಿಗಳು ಇದ್ದರೆ ಅವರಿಗೆ ಸಹಾಯ ಮಾಡಿ ಅವರನ್ನು ತಮ್ಮಲ್ಲಿ ಒಬ್ಬನಾಗಿ ಸ್ವೀಕರಿಸಿಕೊಂಡು ಹೋಗುವುದು ಇವೆಲ್ಲವೂ ಜೀವನ ಶಿಕ್ಷಣಗಳೆ ಆಗಿವೆ. 

ಇದರ ಜೊತೆ ಜೊತೆಯಲ್ಲಿ ಹಲವಾರು ವಿದ್ಯಾರ್ಥಿಗಳಲ್ಲಿ ನಾನು ಗಮನಿಸಿದ ಅಂಶವೆಂದರೆ ಸ್ವಚ್ಛತಾ ಪಖ್ವಾಡ ನಾವು ಶಾಲೆಗಳಲ್ಲಿ ಮಾಡಿ ಶಾಲಾ ಸ್ವಚ್ಛತೆ ಕಾಪಾಡಿಕೊಳ್ಳಲು ಹೇಳಿ ಕೊಟ್ಟಿರುತ್ತೇವೆ, ಪ್ರತಿನಿತ್ಯ ಗುಡಿಸಿ ತರಗತಿ ಕೋಣೆ ಸ್ವಚ್ಚ ಮಾಡುವ ಕಾರ್ಯ, ವಾರಕ್ಕೊಮ್ಮೆ ಶಾಲಾ ಆವರಣದ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ ಎಲ್ಲಾ ಶಿಕ್ಷಕರು ಹೇಳಿ ಕೊಟ್ಟಿದ್ದರೂ ಸಹ , ಹೆಚ್ಚಿನ ವಿದ್ಯಾರ್ಥಿಗಳಿಗೆ ಅವರ ಕುಟುಂಬದ ಹಿರಿಯರನ್ನು ನೋಡಿ  ಕಲಿತೇ ಅಭ್ಯಾಸ. ಇನ್ನೂ ಕೆಲವರು ಕೇರ್ ಲೆಸ್. 

ಈ ಕಾರಣಕ್ಕೆ ಪರಿಸರ ಜಾಗೃತಿ ಅಗತ್ಯ ಆಗಿರುವ ಇಂದಿನ ಕಾಲದಲ್ಲಿ ನಾವು ಸ್ವಚ್ಚ ಭಾರತ ಸೆಸ್ ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಶಿಕ್ಷಕರೂ ಪ್ರತಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಪ್ರವಾಸ ಹೊರಡುವ ಮೊದಲು ಒಂದು ಪ್ರತಿಜ್ಞೆಯನ್ನು ಮಾಡಿಸಬೇಕಾಗುತ್ತದೆ. *"ನಾನು ಬಳಸಿದ , ಮತ್ತು ನನಗೆ ಬೇಡವಾದ ಪ್ಲಾಸ್ಟಿಕ್ ಹಾಗೂ ಪೇಪರ್ ವಸ್ತುಗಳನ್ನು ನಾನು ಬಸ್ಸಿನಿಂದ ಹೊರಗೆ ಎಸೆಯುವುದಿಲ್ಲ, ನಾನು ಅದನ್ನು ಕಸದ ಬುಟ್ಟಿಗೆ ಹಾಕುತ್ತೇನೆ"* ಎಂದು. ಇಲ್ಲವಾದರೆ ರಸ್ತೆ ರಸ್ತೆಗಳಲ್ಲಿ ಬಸ್ಸಿನಿಂದ ಹೊರಗೆಸೆದ ಬಿಂಗೊ, ಚಿಪ್ಸ್, ಕುರ್ಕುರೆ, ಬಿಸ್ಕೆಟ್, ಜ್ಯೂಸ್ ನ ಪ್ಯಾಕೆಟ್ ಗಳು, ಚಾಕಲೇಟು ಸಿಪ್ಪೆಗಳಾದ ಪ್ಲಾಸ್ಟಿಕ್ ತುಣುಕುಗಳು ಇಡೀ ರಸ್ತೆಯ ಉದ್ದಗಲಕ್ಕೂ ಬಿಸಾಕುವುದೇ ಅಲ್ಲದೆ, ಶಾಲೆಯಲ್ಲಿ ಮಾಡಿದ ಸ್ವಚ್ಛತಾ ಪಾಠ ಶಾಲೆಯಲ್ಲಿಯೆ ಕೊನೆಗೊಂಡಿರುತ್ತದೆ. ಲಾಲಿ, ಐಸ್ ಕ್ರೀಮ್ ಕಪ್  ನೋಡಿದಾಗ, ತಿಂದ ಮೇಲೆ ಅದೆಲ್ಲಾ ಮರೆತೇ ಹೋಗುತ್ತದೆ. 

ನಮ್ಮ ಭೂಮಿ ನಮ್ಮ ತಾಯಿ. ಅದನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸುವುದು ನಮ್ಮೆಲ್ಲರ ಹೊಣೆ ಹಾಗೂ ಜವಾಬ್ದಾರಿ. ಇದು ವಿದ್ಯಾರ್ಥಿ ಹಂತದಲ್ಲೇ ಮೈಗೂಡಿಸಿಕೊಳ್ಳಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಇದಕ್ಕೆ ಪೋಷಕರ ಅತಿ ಮುದ್ದು, ಕೇರ್ ಲೆಸ್ನೆಸ್ ಕೂಡಾ ಕಾರಣ. ಬಿಎಡ್ ಪ್ರಶಿಕ್ಷಣಾರ್ಥಿ ಒಬ್ಬರು ನಮ್ಮ ಶಾಲೆಗೆ ಎರಡು ತಿಂಗಳ ಮಟ್ಟಿಗೆ ಕಲಿಕಾ ಉತ್ತಮಿಕೆಗೆ ಬಂದಿದ್ದರು. ಅವರ ಮೂರು ವರ್ಷದ ಮಗು ಜ್ಯೂಸ್ ಕುಡಿದು ಬಾಟಲಿಯನ್ನು ಅಲ್ಲೇ ಹಾಕಿತು. ತಕ್ಷಣ ಕೋಲು ಹಿಡಿದ ಅವರು ಅದನ್ನು ಹೆಕ್ಕಿಸಿ ಕಸದ ಬುಟ್ಟಿಗೆ ಹಾಕುವ ವರೆಗೂ ಬಿಡಲಿಲ್ಲ. ಇದು ನಾವು ನಮ್ಮ ಮಕ್ಕಳಿಗೂ, ಶಾಲಾ ವಿದ್ಯಾರ್ಥಿಗಳಿಗೂ ಕಲಿಸಬೇಕಾದ ಪಾಠಗಳು. ಇವನ್ನು ಮಗು ಒಮ್ಮೆ ಜೀವನದಲ್ಲಿ ರೂಪಿಸಿಕೊಂಡರೆ ಎಂದಿಗೂ ಬಿಡಬಾರದು. ಮಕ್ಕಳಿಗೆ ಶಿಕ್ಷಕರು ಎಷ್ಟೇ ಹೇಳಿಕೊಟ್ಟರು ಕೂಡಾ ಅವರು ಅನುಕರಿಸುವುದು ಪೋಷಕರನ್ನು. ಆದ್ದರಿಂದ ನಾವು ಚಿಕ್ಕ ಮಕ್ಕಳು, ಮುಂದೆ ಸರಿ ಆಗುತ್ತಾರೆ ಎಂದೆಲ್ಲ ಅಂದುಕೊಂಡು ಅವರ ಕಡೆ ಗಮನ ಕೊಡದೆ ಏನಾದರೂ ತಿಂದ ತಕ್ಷಣ ಅದರ ಪ್ಲಾಸ್ಟಿಕ್ ಕವರ್ ಗಳನ್ನು ಅಲ್ಲಲ್ಲೇ ಬಿಸಾಕುವ ಪರಿಪಾಠ ಬೆಳೆಸಿಕೊಳ್ಳುತ್ತಾರೆ. ಶಿಕ್ಷಕರು ಪ್ರವಾಸ ಹೋದಾಗ ಅದನ್ನು ಗಮನಿಸಲು ಸಾಧ್ಯ ಆಗುವುದಿಲ್ಲ. ಕಾರಣ ಅಲ್ಲಿ ಎಲ್ಲಾ ವಿದ್ಯಾರ್ಥಿಗಳ ಸಂಖ್ಯೆಯನ್ನು ಅವರು ಗಮನಿಸುವಾಗ ಬಸ್ಸಿನ ಒಳಗೆ ಕುಳಿತ ಮಕ್ಕಳು ತಿಂದು ಬಸ್ಸಿನ ಕಿಟಕಿಯ ಮೂಲಕ ಬಿಸಾಕುವ ದೃಶ್ಯ ಅವರ ಕಣ್ಣಿಗೆ ಬೀಳುವುದಿಲ್ಲ. ಇದನ್ನು ಸರಿ ಮಾಡುವುದು ಪೋಷಕರು ಮತ್ತು ಶಿಕ್ಷಕ ವೃಂದ ಇಬ್ಬರದ್ದೂ ಜವಾಬ್ದಾರಿ ಆಗಿದೆ. ಇದರಲ್ಲಿ ಹಿರಿಯರು ಮತ್ತು ಸಮಾಜದ ಪಾತ್ರವೂ ಇದೆ. ನೋಡಿಯೂ ಏನೂ ಹೇಳದೆ ನೋಡದ ಹಾಗೆ ಇರುವುದು ತಪ್ಪು. ಕೆಲವು ಪ್ರವಾಸ ಸ್ಥಳಗಳಲ್ಲಿ ಇಂತಹ ಉಪ್ಪು ಭರಿತ ಪ್ಲಾಸ್ಟಿಕ್ ಕವರ್ಗಳನ್ನು ರುಚಿಗಾಗಿ ಅದು ಕೆಟ್ಟದು ಎಂದು ಅರಿಯದ ಮೂಕ ಪ್ರಾಣಿಗಳಾದ ದನಗಳಂತಹ ಪ್ರಾಣಿಗಳು ತಿಂದು ಸಾವನ್ನಪ್ಪುತ್ತವೆ. ಅದು ಹೊಟ್ಟೆಯ ಒಳಗೆ ಕರಗದೆ, ಕೊಳೆತು ಉಂಡೆ ಕಟ್ಟಿ ಅದರ ಜೊತೆ ಪಿನ್, ಹೇರ್ ಪಿನ್, ಗಾಜಿನ ಚೂರು ಮೊದಲಾದ ಸಣ್ಣ ಸಣ್ಣ ವಸ್ತುಗಳು ದನಗಳ ಹೊಟ್ಟೆ ಸೇರಿ ದನ ಸತ್ತಾಗ ಅದರ ಸಾವಿಗೆ ಕಾರಣವಾದ ವಸ್ತುಗಳನ್ನು ಆಪರೇಶನ್ ಮಾಡಿ ಹೊರ ತೆಗೆದು ಧರ್ಮಸ್ಥಳದಲ್ಲಿ ಅದೆಷ್ಟೋ ಬಾರಿ, ಕೃಷಿ ಮೇಳದಲ್ಲಿ ಕೂಡಾ ಅಲ್ಲಲ್ಲಿ ತೋರಿಸುತ್ತಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಮಂಗ ಜ್ಯೂಸ್ ಬಾಟಲಿ, ಪ್ಯಾಕೆಟ್ ಹಿಡಿದು ಜ್ಯೂಸ್ ಕುಡಿಯುವುದು ಈ ಮೊದಲಾದ ದೃಶ್ಯಗಳನ್ನು ವಿಡಿಯೋ ಮಾಡಿ ಶರಿಯ ಬಿಡುವವರು ಅದನ್ನು ತಪ್ಪಿಸಲು ನೋಡಲಾರರು.  ಬೆಕ್ಕಿಗೂ ಸಾರಾಯಿ ಕುಡಿಸಿ ತಾವೂ ಹಾಳಾಗುವುದಲ್ಲದೆ ಮೂಕ ಪ್ರಾಣಿಗಳನ್ನೂ ತಮ್ಮ ಸಂತೋಷಕ್ಕಾಗಿ ಹಾಳು ದಾರಿಗೆ ಒಯ್ಯುವ ಮನುಷ್ಯರನ್ನು ಕಂಡರೆ ಹೇಸಿಗೆ ಅನ್ನಿಸುವುದಿಲ್ಲವೇ?

ಹಾವು ಪ್ಲಾಸ್ಟಿಕ್ ಮಧ್ಯೆ ಸಿಕ್ಕಿ ಒದ್ದಾಡುವುದು, ಸಣ್ಣ ಪ್ರಾಣಿಗಳು ಪ್ಲಾಸ್ಟಿಕ್ ಬಾಟಲಿಗಳ ಒಳಗೆ ತಲೆ ಹಾಕಿ ತೆಗೆಯಲು ಬಾರದೆ ಸಾಯುವುದು, ಇಲಿ ಪಾಷಾಣ ತಿಂದು ಸತ್ತ ಇಲಿಯನ್ನು ತಿಂದು ಕಾಗೆ, ಗಿಡುಗ, ಗೂಬೆ,  ಗರುಡ ಪಕ್ಷಿಗಳು ತಿಂದು ಅವುಗಳ ಸಂತತಿ ನಾಶ ಆಗುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದ ಸಂಶೋಧನೆಗಳು. ಪ್ಲಾಸ್ಟಿಕ್ ಹೊಟ್ಟೆಗೆ ಹೋಗಿ ಸಾಯುವ ಪ್ರಾಣಿಗಳಲ್ಲಿ ದನಕ್ಕೆ ಅಗ್ರ ಸ್ಥಾನ. ಆದ್ದರಿಂದ ವಿದ್ಯಾರ್ಥಿಗಳು ಮಾತ್ರವಲ್ಲ, ಹಿರಿಯರು, ಯುವಕರು, ಯುವತಿಯರೂ ಕೂಡಾ ತಾವು ಬಳಸಿದ ವಸ್ತುಗಳ ಕವರ್ ಗಳು, ಪ್ಲಾಸ್ಟಿಕ್, ಪಿನ್, ಗಾಜಿನ ಚಿಕ್ಕ ಚಿಕ್ಕ ವಸ್ತುಗಳು, ಇವನ್ನೆಲ್ಲ ನೆಲದಲ್ಲಿ ಕಂಡ ಕಂಡಲ್ಲಿ ಬಿಸಾಕುವ ಬದಲು ನೇರವಾಗಿ ಮನೆಗೊಯ್ದು ಪಂಚಾಯತ್ ಅಥವಾ ಪುರ(ನಗರ)ಸಭಾ  ಕಸದ ಗಾಡಿಗೆ, ಕಸದ ತೊಟ್ಟಿಗೆ, ಅಥವಾ ಸಮೀಪದ ಅಂಗನವಾಡಿ ಕೇಂದ್ರಕ್ಕೆ ನೀಡಬೇಕು. ಹಿರಿಯರು ಅದನ್ನು ಒಟ್ಟು ಸೇರಿಸಿ ಸರಿಯಾದ ವಿಲೇವಾರಿ ಮಾಡಿದಾಗ ಮಕ್ಕಳೂ ಕೂಡಾ ಕಲಿಯುತ್ತಾರೆ. ನೀವೇನಂತೀರಿ? 
@ಹನಿಬಿಂದು@
21.12.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -163

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -163

ಒಂದಿಷ್ಟು ಕಾವ್ಯಾತ್ಮಕವಾಗಿ ಬರೆದರೆ ಹೇಗೆ? ಯಾವಾಗಲೂ ಸೀರಿಯಸ್ ಆದ ಪ್ರಚಲಿತ ವಿಷಯಗಳೇ ಏಕೆ ಅಲ್ವಾ? ನಾ ನೋಡಿದ ಆ ಮರ ..ಇದೊಂದು ವಿಷಯ. ಎಲ್ಲರೂ ಪ್ರತಿನಿತ್ಯ ಮರಗಳನ್ನು ನೋಡುವುದಿಲ್ಲವೇ? ನೋಡುತ್ತೇವೆ. ಅದರಲ್ಲಿ ಏನು ಬಂತು ಸ್ಪೆಷಲ್ ಅಂದರೆ ಕೇರಳಕ್ಕೆ ಹೋಗಿ ಜಲಾವೃತ ಕಾಡನ್ನು ನೋಡುವುದಕ್ಕೂ, ಹಿಮಾಲಯದ ತಪ್ಪಲಿನ ಜಾಗದಲ್ಲಿ ಐಸನ್ನು ತನ್ನ ಮೇಲೆ ಹೊತ್ತು ನಿಂತ ಕೊನಿಫೆರಸ್ ಮರಗಳಿಗೂ, ಮಾವಿನ ಮರಕ್ಕೆ ಮತ್ತೆ ಹಲಸಿನ ಮರಕ್ಕೂ ವ್ಯತ್ಯಾಸ ಇಲ್ಲವೇ? ಜೊತೆಗೆ ಅದರ ಹಸಿರು ಮಿಶ್ರಿತ ವಿವಿಧ ಬಣ್ಣದ ತಾವೇ ಆಹಾರ ತಯಾರಿಸಿ, ಆಮ್ಲಜನಕ ಬಿಡುಗಡೆ ಮಾಡಿ, ನಾವು ಹೊರ ಬಿಟ್ಟ ಇಂಗಾಲದ ಡೈ ಆಕ್ಸೈಡ್ ನ್ನೂ ಒಳ ಸೇರಿಸಿಕೊಂಡು ಸರ್ವ ಪ್ರಾಣಿಗಳಿಗೆ ಬೇಕಾದ ಆಮ್ಲಜನಕ ತಯಾರಿಕೆ ಹಗಲಿನಲ್ಲಿಯೆ ಮಾಡಿ ಕೊಡುವ ಏಕೈಕ ಜೀವಿಗಳು ಮರಗಳು. ವೈಜ್ಞಾನಿಕವಾಗಿ ಹೀಗಾದರೆ, ಕಾವ್ಯಾತ್ಮಕವಾಗಿ 7ನಮ್ಮ ಗಿಡ ಮರಗಳು ನಮ್ಮನ್ನು ರಕ್ಷಿಸುವ ದೇವತೆಗಳು. ದೇವರ ಆರಾಧನೆ ಮಾಡುವ ಬದಲು ಗಿಡ ಮರಗಳನ್ನು ಬೆಳೆಸಿದರೆ ಸಾಕು, ಮಕ್ಕಳನ್ನು ಸಾಕುವ ಬದಲು ಗಿಡ ಮರಗಳನ್ನು ಸಾಕಿದರೆ ಪ್ರಶಸ್ತಿ ಆದ್ರೂ ತಂದು ಕೊಡುತ್ತವೆ. ಆದರೆ ಕೆಲವು  ಮಕ್ಕಳು ಆಸ್ತಿ, ದುಡ್ಡಿಗಾಗಿ ತಮ್ಮ ಹೆತ್ತವರನ್ನು ದೂರ ಮಾಡಿ, ವೃದ್ಧಾಶ್ರಮಕ್ಕೆ ಹಾಕಿ ಬಿಡುವವರು ಅದೆಷ್ಟೋ ಮಂದಿ ಇದ್ದಾರೆ. ಆದರೆ ಸಾಲು ಮರದ ತಿಮ್ಮಕ್ಕ ಮಾದರಿ, ನಾವು ಗಿಡ ಮರಗಳನ್ನು ಬೆಳೆಸಿದರೆ ಅವು ನಮ್ಮ ನು ಬೆಳೆಸುತ್ತವೆ ಎಂಬ ಮಾತಿಗೆ. 

ಗಿಡ ನೋಡಲು ಚಿಕ್ಕದಾದರೂ ಅದರ ಸಹಾಯ ಬಹಳವೇ ಇದೆ. ಚಿಗುರು, ಕಾಂಡ, ಬೇರು, ಎಲೆ, ಹೂ, ಕಾಯಿ, ಹಣ್ಣು, ಬೀಜ , ತಿರುಳು ....ಯಾವ ಭಾಗವನ್ನು ಬಿಟ್ಟಿದ್ದೇವೆ ನಾವು ಹೇಳಿ? ಎಲ್ಲಾ ಭಾಗಗಳ ಬಳಕೆ! ಬಿದಿರು, ಕಬ್ಬಿನ ಹುಲ್ಲು ಗಿಡಗಳಿಂದ ಹಿಡಿದು, ಗರಿಕೆ ಹುಲ್ಲಿನ ಜ್ಯೂಸ್, ಚೆಕ್ಕೆಯ ಕಷಾಯ, ಹೂವುಗಳ ಮದ್ದು, ತರಕಾರಿಯಾಗಿ, ಪೂಜೆಗೆ, ತಿನ್ನಲು, ಹಣ್ಣುಗಳ ಬಳಕೆ ಇಲ್ಲದೆ ಬದುಕು ಸಾಧ್ಯವೇ? ಇನ್ನೂ ನಾರು, ಬೇರು, ಕಾಂಡ, ಚಿಗುರು ಎಲ್ಲವೂ ಬೇಕಲ್ಲವೇ ನಮಗೆ! ಮಿತಿ ಮೀರಿದ ಜನಸಂಖ್ಯೆಗೆ ಸಸ್ಯಗಳು ಹೆಚ್ಚೇ ಬೇಕು. ಕಾರಣ ಅವು ನಮ್ಮ ಹೊಟ್ಟೆಯನ್ನು ತುಂಬುವುದರ ಜೊತೆಗೆ ಶ್ವಾಸಕೋಶದಲ್ಲಿ ಕೂಡಾ ಗಾಳಿ ತುಂಬುವ ಕಾರ್ಯ ಮಾದ ಬೇಕು. ಪರಿಸರ ಸ್ವಚ್ಚವಾಗಿ, ಸಮತುಕವಾಗಿ ಇಡಬೇಕು, ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸಬೇಕು. 

ಇಷ್ಟೇ ಸಸ್ಯಗಳ ಕಾರ್ಯವಲ್ಲ. ವಾತಾವರಣದ ತಾಪಮಾನವನ್ನು ಕಡಿಮೆ ಮಾಡುವುದು, ಎಲ್ಲಾ ಪ್ರದೇಶದಲ್ಲಿ ಕಾಲ ಕಾಲಕ್ಕೆ ಮಳೆ ಬರುವ ಹಾಗೆ ಮೋಡವನ್ನು ತಡೆದು ಮಳೆ ಸುರಿಸಿ, ಗಿಡ ಮರಗಳ ಅಸ್ತಿತ್ವವನ್ನು ಉಳಿಸಿ ಕೊಳ್ಳುವುದು. ಸೂರ್ಯನ ಪ್ರಖರ ಬೆಳಕಿಗೆ ತಂಪಿನ ನೆರಳು ನೀಡುವುದು. ರಸ್ತೆಗೆ ಅಡ್ಡವಾಗಿ ರಸ್ತೆ ಬದಿಯಲ್ಲಿ ಇದ್ದರೆ ರಸ್ತೆ ಅಗಲೀಕರಣದ ಸಮಯದಲ್ಲಿ ತಮ್ಮ ಪ್ರಾಣ ಕೊಡುವುದು. ಸತ್ತವರನ್ನು ಸುಡಲು, ಇದ್ದವರ ಊಟಕ್ಕೆ ಕಟ್ಟಿಗೆಯಾಗಲು ಸಾಯಲು ಯಾವ ಕಾಲಕ್ಕೂ ಸಿದ್ಧನಾಗಿ ಇರುವುದು! ಇದು ಮಾನವರು ಮಾಡುವ ಕುಹಕ ಕಾರ್ಯಗಳೇ ಅಲ್ಲವೇ? 

ಗಿಡ ಮರ, ಹಸಿರು ಪರಿಸರ, ಗುಡ್ಡ ಬೆಟ್ಟ ಉಳಿಸಿ ಬೆಳೆಸಿ ಎಂಬ ಕೂಗು ಮಾತ್ರ ಕೇಳುತ್ತಿದೆ ಸರ್ವ ಕಡೆ. ವರ್ಷದ ಒಂದು ದಿನ ವನ ಮಹೋತ್ಸವ ಆಚರಿಸಿ ಆ ದಿನ ಗಿಡವನ್ನು ನೆಡಲಾಗುತ್ತದೆ ಮತ್ತು ಪರಿಸರವನ್ನೂ ಕೂಡಾ ಹೊಗಳುತ್ತಾರೆ. ಮತ್ತೆ ಮರುದಿನ ನೆಟ್ಟ ಗಿಡಕ್ಕೆ ನೀರು ಹಾಕುವವರೂ ಇಲ್ಲ ಅಲ್ಲಿ. ಪ್ರತಿ ವರ್ಷ ವನ ಮಹೋತ್ಸವದ ದಿನ ನೆಟ್ಟ ಗಿಡಗಳೆಲ್ಲ ಬದುಕಿದ್ದಿದ್ದರೆ ಇಂದು ಪರಿಸರ ಮಾಲಿನ್ಯ ಆಗುತ್ತಿರಲಿಲ್ಲ. ಅಲ್ಲದೆ ಪ್ರತಿಯೊಬ್ಬರ ಹೆಸರಿನಲ್ಲಿ ಒಂದೊಂದು ಗಿಡ ನೆಟ್ಟರು ಕೂಡಾ ಭಾರತದಲ್ಲಿ ಕನಿಷ್ಠ ಪಕ್ಷ ನೂರ ಐವತ್ತು ಕೋಟಿ ಹೊಸ ಗಿಡಗಳು ಬೆಳೆಯುತ್ತವೆ. 

ಸಾಹಿತ್ಯ, ಬರವಣಿಗೆ, ಭಾಷಣ, ಹೊರತುಪಡಿಸಿ ಎಷ್ಟು ಗಿಡಗಳನ್ನು ನಾನು ನೆಟ್ಟು ಬೆಳೆಸುತ್ತಿದ್ದೇನೆ ಅದರಲ್ಲಿ ಯಾವ ಯಾವ ವರ್ಷ ನೆಟ್ಟ ಗಿಡಗಳು ಎಷ್ಟು, ಫಲ ನೀಡುವ ಗಿಡಗಳು ಎಷ್ಟು ಇತ್ಯಾದಿ ಲೆಕ್ಕ ಹಾಕಿ ಅತಿ ಹೆಚ್ಚು ಗಿಡ ನೆಟ್ಟವನು ಮತ್ತು ಅವುಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಮನುಜ ನಿಜವಾದ ಸಿರಿವಂತ ಅಲ್ಲವೇ? 

ಈ ಪದ್ಮ ಭೂಷಣ, ಕರ್ನಾಟಕ ರತ್ನ ಪ್ರಶಸ್ತಿಗಳು ಇರುವ ಹಾಗೆ ಗ್ರಾಮ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಚ್ಚು ಗಿಡ ಮರ  ನೆಟ್ಟು ಬೆಳೆಸುತ್ತಿರುವವರಿಗೂ ಒಂದು ಪ್ರಶಸ್ತಿ ಕೊಡಬೇಕು. ದುಡ್ಡು ಕೊಟ್ಟು ಪಡೆಯಲು ಸಾಧ್ಯ ಆಗದು ಇದು. ಕಾರಣ ಅವರು ನೆಟ್ಟ ಮರವನ್ನು ತೋರಿಸಬೇಕು ಅಲ್ಲವೇ? ಆಡಳಿತ ಪಕ್ಷ ಅದು ಯಾವುದೋ ಸಾಧನೆಗೆ ಯಾರಿಗೋ ಪ್ರಶಸ್ತಿ ನೀಡುವ ಬದಲು ಹೆಚ್ಚು ಹೆಚ್ಚು ಗಿಡ ಮರ ನೆಟ್ಟು ಅದನ್ನು ಪೋಷಿಸುವ ಕಾರ್ಯ ಮಾಡುತ್ತಿರುವವರನ್ನು ಗುರುತಿಸಿ ಅವರಿಗೆ ಮೇಲಿನ ಸ್ತರದ ವರೆಗೆ ಪ್ರಶಸ್ತಿ ಕೊಟ್ಟರೆ ಅದೆಷ್ಟೋ ಜನ ಭಾರತದಲ್ಲಿ ಪರಿಸರವನ್ನು ಬೆಳೆಸಲು ಪಣ ತೊಡುವುದು ಕಂಡು ಬರಬಹುದು. ಅದು ಪ್ರಶಸ್ತಿಗಾಗಿ ಬೆಳೆದರೂ ಸಮಾಜಕ್ಕೆ ಉಪಯೋಗವೇ ಅಲ್ಲವೇ? ಅದರಲ್ಲಿ ಸಂಘ ಸಂಸ್ಥೆಗಳಿಗೂ ಬೇರೆ ಪ್ರಶಸ್ತಿ ಇದ್ದರೆ ಗಿಡ ಮರದ ಹಸಿರು ಮತ್ತೆ ಹೆಚ್ಚಾಗಬಹುದು. ಟೆರೇಸ್ ಮೇಲಿನ ಗಿಡಗಳೂ ಹೆಚ್ಚಾದಾವು! ಮರಗಳಿಗೇ ಬೇರೆ ಪ್ರಶಸ್ತಿ ಆದರೆ ಮರಗಳ ಸಂಖ್ಯೆಯೂ ಹೆಚ್ಚಾದೀತು! 

ಒಟ್ಟಾರೆ ಸಮಾಜ, ಆಡಳಿತ ಪಕ್ಷ, ಜನರ ಮನಸ್ಸುಗಳು ಒಂದಾಗಿ ಮನಗಳು ನಿಷ್ಕಲ್ಮಶವಾಗಿದ್ದರೆ, ಜಾತಿ ಬೇಧ ರಾಜಕೀಯ ಮರೆತು ಗಿಡ ಮರ ಬೆಳೆಸುವತ್ತ ಜನ ತಮ್ಮ ಮನಸ್ಸು ಹರಿಸಿದರೆ ಭಾರತವನ್ನು ಹಸಿರಾಗಿಸುವ ಕನಸು ನನಸಾಗಲು ಸಾಧ್ಯ ಇಲ್ಲವೇ? ನೀವೇನಂತೀರಿ?
@ಹನಿಬಿಂದು@
17.12.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -162

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 162

       ಕಲ್ಪನೆ ಎನ್ನುವುದು ಮಾನವನಿಗೆ ದೇವರು ಕೊಟ್ಟ ವಿಶೇಷ ಗುಣ. ಅದನ್ನೇ ಕವಿ ಬೇಂದ್ರೆಯವರು " ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ" ಎಂದು ಹಾಡಿರುವರು.  ಆ ಕಲ್ಪನೆಯ ಪದಗಳ ಬಿತ್ತರದಿಂದಲೇ ಕವಿ, ಸಾಹಿತಿ, ಕಥೆಗಾರ, ಕಾದಂಬರಿಗಾರರಾಗುತ್ತಾರೆ. ಒಳ್ಳೆಯ ಹೆಸರನ್ನೂ ಪಡೆಯುತ್ತಾರೆ. ಹೀಗಿರಲು ನಾವು ಕಾಣುವ ಹಲವಾರು ಕನಸುಗಳಲ್ಲಿ ನಾವು ನೋಡುವ ಒಂದು ವಿಚಿತ್ರ ಜೀವಿಗಳು, ಕೀಟಗಳು, ಹುಳಗಳು, ಕಣ್ಣಿಗೆ ಕಾಣದ ಜೀವಿಗಳು ಅದರಲ್ಲೂ ನಿತ್ಯ ನೋಡುವ ಸಂತಸ ಪಡುವ  ಜೀವಿಗಳು ಎಂದರೆ ಹಾರುವ ಹಕ್ಕಿಗಳು, ಅವುಗಳ ಬಗೆಗಿನ ಕನಸುಗಳು. 

     ನಾನು ತುಂಬಾ ಶ್ರೀಮಂತನಾಗಿದ್ದರೆ, ನಾನು ಮುಖ್ಯಮಂತ್ರಿ ಆಗಿದ್ದಿದ್ದರೆ, ನಾನು ಕೊಟ್ಯಾಧೀಶನಾಗಿದ್ದರೆ, ನಾನು ಹುಲಿಯಾಗಿ ಇದ್ದಿದ್ದರೆ, ನಾನು ಅಂತಹ, ಇಂತಹ ಪ್ರಾಣಿ ಆಗಿದ್ದಿದ್ದರೆ ಹಾಗೆಯೇ ನಾನು ಹಾರಾಡುವ ಪಕ್ಷಿ  ಆಗಿದ್ದಿದ್ದರೆ.. ಹೀಗೆಲ್ಲಾ ಯೋಚನೆಗಳು ನಮ್ಮನ್ನು ಕಾಡುತ್ತವೆ..

ಹೌದಲ್ಲವೇ? ನಾನು ಹಾರಾಡುವ ಪಕ್ಷಿಯಾಗಿದ್ದರೆ? ನಾನು ಏನೆಲ್ಲಾ ಮಾಡುತ್ತಿದ್ದೆ? ನಿತ್ಯ ನಾನಾ ಶಾಲೆಗೆ ಹಾರಿಕೊಂಡೇ ಹೋಗಿ ಬರುತ್ತಿದ್ದೆ. ಆಗ ನನಗೆ ಶಾಲೆಗೆ ಹೋಗಲು ಬಸ್ಸಿಗೆ ಕಾಯಬೇಕು ಎಂದಿಲ್ಲ, ಸ್ಕೂಟರ್ ಗೆ ಪೆಟ್ರೋಲ್ ಹಾಕಬೇಕು ಎಂದಿಲ್ಲ, ಮನೆಗೆ ತರಕಾರಿ ಸಾಮಾನು ತರಬೇಕು ಎಂದಿಲ್ಲ, ಮಡದಿಯ ಬೈಗುಳ ಇಲ್ಲ, ಗಂಡನ ಕೂಗಾಟ ಕಿರುಚಾಟವೂ ಇಲ್ಲ! ಇನ್ನೂ ಒಂದಿದೆ. 

ಶಾಲೆಗೆ ಹೋಗಬೇಕೆಂದು ಇಲ್ಲ, ಮನೆ ಕೆಲಸ ಮಾಡಬೇಕೆಂದು ಇಲ್ಲ, ಅಡುಗೆ ಮಾಡು, ಬಟ್ಟೆ ಒಗೆ, ಮನೆ ಕೆಲಸ ಮಾಡು, ಕೆಲಸಕ್ಕೆ ಹೋಗು ಎಂಬ ಯೋಚನೆ ಇಲ್ಲ ಅಲ್ಲವೇ? ಕಾಳು ಹುಡುಕಿ ಹೆಕ್ಕಿ ತಿಂದರೆ ಆಯಿತು, ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿ ಮುಂದಿನ ಜನಾಂಗ ಬೆಳೆಸಿದರೆ ಆಯಿತು. 

    ಬದುಕು ಮಾನವರಿಗೆ ಕಷ್ಟ ಆಗಿದೆ. ಎಲ್ಲಿ ಹೋದರೂ ಮಾಡರ್ನಿಟಿ. ಇಂದು ಇದ್ದ ಬಟ್ಟೆ ಬರೆ, ನಾಳೆ ಇಲ್ಲ. ಪ್ರತಿದಿನ ಹೊಸತನ್ನು ಕೇಳುವ ಮಾನವನಿಗೆ ಸಂಬಳ ಸಾಲಲ್ಲ. ಬ್ಯುಸಿನೆಸ್ ಬೇಕು, ಹಣ, ಒಡವೆ, ಬಂಗಲೆ, ಕಾರು, ಆಸ್ತಿ ಬೇಕು. ಅದಕ್ಕಿಲ್ಲ ಬ್ರೇಕು! ಅದು ಬೇಕು, ಇದು ಬೇಕು, ಬೇಕು, ಬೇಕು, ಬೇಕು! ಪ್ರಾಣಿ ಪಕ್ಷಿಗಳಿಗೆ ಹಾಗಲ್ಲ, ಊಟ, ರಕ್ಷಣೆ, ಸಂತಾನೋತ್ಪತ್ತಿ, ಪ್ರೀತಿ, ಸ್ವಾತಂತ್ರ್ಯ ಇಷ್ಟೇ ಸಾಕು. 

ಬದುಕು ಅಷ್ಟೇ ಅಲ್ಲವೇ? ಹುಟ್ಟು, ಬದುಕು, ಸಾವು. ಪಕ್ಷಿಗಳಿಗೂ ಮರಿ ಹಕ್ಕಿಗಳಿಗೆ ಬಾಯಲ್ಲಿ ಕಚ್ಚಿಕೊಂಡು ಬಂದು ಗುಟುಕು ಕೊಡಬೇಕು. ಅವುಗಳಿಗೆ ಹಾರಲು ಕಲಿಸ ಬೇಕು.  ಗೂಡು ಕಟ್ಟಬೇಕು. ಅಲ್ಲಿಗೆ ಮುಗಿಯಿತು. ಬದುಕು ಆರೋಗ್ಯವಾಗಿ ಸಂತಸದಿಂದ ಕೂಡಿರಬೇಕು. ನಾನೂ ಪಕ್ಷಿಯಾಗಿದ್ದರೇ..... ವಾವ್...ಈ ಆಲೋಚನೆ ತುಂಬಾ ಚೆನ್ನಾಗಿದೆ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
07.12.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -161

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -161
ನನ್ನ ಹಲ್ಲುಗಳಿಗೆ ನನ್ನ ಕಂಡರೆ ಅತೀವ ಮುದ್ದೋ, ವೈರತ್ವವೋ ತಿಳಿಯದು. ನನ್ನ ತುಂಬಾ ಕಾಡಿಸಿ ಬಿಡುತ್ತವೆ. ಹಾಗೆ ಕಾಡಿಸುವಾಗ ನೋವು ಸಹಿಸದ ನಾನು ದಂತ ವೈದ್ಯರ ತಲಾಷೆಯಲ್ಲಿ ಇರುತ್ತೇನೆ. ಹಲವಾರು ಊರುಗಳನ್ನು ಆಗಾಗ ಬದಲಿಸುವ ಅಲೆಮಾರಿ ಜನಾಂಗದ ಹಾಗೆ ಇರುವ ನನಗೆ ಆಗಾಗ ಆಯಾ ಊರಿನ ವೈದ್ಯರನ್ನೂ ಬದಲಾಯಿಸುವ ಅನಿವಾರ್ಯತೆ ಇದ್ದೇ ಇದೆ ಅಲ್ಲವೇ? 

ಬಂಟ್ವಾಳದ ಮೂಲೆಯ ಕಟ್ಟ ಕಡೆಯ ಹಳ್ಳಿ ಅಥವಾ ಗ್ರಾಮ ಉಳಿ. ಅಲ್ಲಿರುವಾಗ ಬಂಟ್ವಾಳ ಅಥವಾ ಉಪ್ಪಿನಂಗಡಿಯ ವೈದ್ಯರಾದರೆ, ಕುದುರೆಮುಖದಲ್ಲಿ ಇರುವಾಗ ಕಳಸದ ವೈದ್ಯರು, ಸುಳ್ಯಕ್ಕೆ ಹೋದ ಬಳಿಕ ಅಲ್ಲಿನ ವೈದ್ಯರು, ಹತ್ತಿರದ ಬೆಳ್ಳಾರೆಯ ವೈದ್ಯರು, ಈಗ ಮೂಲ್ಕಿ ಗೆ ಬಂದ ಮೇಲೆ ಮಂಗಳೂರು, ಸುರತ್ಕಲ್,ಕಿನ್ನಿಗೋಳಿಗೆ ಹೋಗಲು ಇಲ್ಲಿನ  ಜನರ ಪುಕ್ಕಟೆ ಸಲಹೆ. ನಾನು ಹುಡುಕುವುದು ಮೂಲ್ಕಿಯಲ್ಲಿ ಇರುವ ವೈದ್ಯರನ್ನು. ಹತ್ತಿರ ಇದ್ದರೆ ಒಳ್ಳೆಯದಲ್ಲವೇ?

                  ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿದ್ದರೂ ಮನೆ ಗೆಲ್ಲಿ ಮಾರು ಗೆಲ್ಲು ಎಂಬ ಮಾತೂ ಇದೆ ಅಲ್ಲವೇ? ಹಣ ಕೊಡುವಾಗ ಉತ್ತಮ ಸೇವೆಯನ್ನು ಕೊಡುವ ವೈದ್ಯರನ್ನು ನಾವೇ ಸೃಷ್ಟಿಸಿಕೊಳ್ಳವ ಪ್ರಯತ್ನ ಮಾಡಬೇಕು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತಾರೆ. ಎಲ್ಲೇ ಹೋಗಲಿ, ಅದೇ ಎಂಬಿಬಿಎಸ್ ಅಥವಾ ದುಡ್ಡು ಹೆಚ್ಚಿದ್ದರೆ ಎಂ ಡಿ ಡಾಕ್ಟರ್. ಹಲ್ಲಿಗಾದರೆ ಬಿಡಿಎಸ್ ಎಂ ಡಿ ಎಸ್ ಡಾಕ್ಟರ್, ಸ್ಪೆಷಲ್ ಸರ್ಜನ್. ನಮ್ಮ ಬಜೆಟ್ ನ ಮೇಲೆ ನಮ್ಮ ಡಾಕ್ಟರ್, ಜೀವನ ಶೈಲಿ, ಬಟ್ಟೆ ಬರೆ, ಆಹಾರ, ಶಾಪಿಂಗ್ ಗಳ ನಿರ್ಧಾರ. ಬಡವ ಕಡ್ಲೆಕಾಯಿ ತಿಂದರೆ ಸಿರಿವಂತ ಬಾದಾಮಿ ತಿಂದಾನು, ಬಡವ ಗಂಜಿ ತಿಂದರೆ ಸಿರಿವಂತ ಬಿರಿಯಾನಿ ತಿಂದಾನು ಅಷ್ಟೇ ವ್ಯತ್ಯಾಸ. ಚಿನ್ನದ ತಟ್ಟೆ ಆದ್ರೂವೆ ತಿನ್ನೋದು ಅಕ್ಕಿ ಬೇಯಿಸಿದ ಅನ್ನವನ್ನೇ! ಆ ಅಕ್ಕಿಯನ್ನು ಬೆಳೆಯುವವ ರೈತನೇ!

ಜೀವನ ಮಟ್ಟಕ್ಕೆ ತಕ್ಕ ಹಾಗೆ ಟೈಲರ್ ಅಂಗಡಿ. ಅವನೇ ಎ ಸಿ ರೂಮಲ್ಲಿ ಕುಳಿತು ಹೊಲಿಯುವುದು, ರೇಟ್ ಹೆಚ್ಚು ಗ್ರಾಹಕ ಕೊಡೋದು, ಅವನೇ ಎಸಿ ರೂಮಲ್ಲಿ ಕುಳಿತು ಹೇರ್ ಕಟ್ಟಿಂಗ್ ಮಾಡೋದು. ಹೋಗಿ ಒಂದರ್ಧ ಗಂಟೆ ಕುಳಿತಿದ್ದು ಬಂದುದಕ್ಕೆ ಹೆಚ್ಚು ಕೊಡೋದು ಗ್ರಾಹಕ!! ಡಾಕ್ಟರ್ ವಿಷಯದಲ್ಲೂ ಅಷ್ಟೇ. ಎಂಬಿಬಿಎಸ್ ಮಾಡಿ ಎಂ. ಡಿ ಮಾಡಲು ಎರಡು ಕೋಟಿ ಸುರಿದಿದ್ದರೆ ಅದರ ಡಬ್ಬಲ್ ಪೇಷಂಟ್  ಕೊಟ್ಟು ಆಗಬೇಕು!!
ಇನ್ನೆಲ್ಲಿ ಸಿಗೋದು! ಅದೆಲ್ಲಾ ಜನರಿಂದಲೇ ಆಗಬೇಕು ತಾನೇ! ಇಂದು ದುಡಿದ ಹಣವೆಲ್ಲಾ ಆಸ್ಪತ್ರೆಗೇ ಮೀಸಲು. ಆದರೆ ಅಷ್ಟು ಖರ್ಚು ಮಾಡಿಯೂ ಉತ್ತಮ ಆರೋಗ್ಯ ದೊರೆತರೆ ತಾನೇ? ಹಲ್ಲು ನೋವೆಂದು ಹಲ್ಲಿನ ಡಾಕ್ಟರ್ ಬಳಿ ಹೋದರೆ ಹಣ ಪಡೆದರೂ ಬೇಕಾಬಿಟ್ಟಿ ಕೆಲಸಮಾಡಿ ಹತ್ತಿಯನ್ನು ಹಲ್ಲಿನ ಒಳಗೇ ಬಿಟ್ಟು ರೂಟ್ ಕೆನಾಲ್ ಮಾಡಿ ಕ್ಯಾಪ್ ಹಾಕಿದ್ದನ್ನು ನಾನೇ ನೋವು ಅನುಭವಿಸಿರುವೆ. ಇನ್ನು ಒಂದು ಹಲ್ಲು ನೋವೆಂದು ಡಾಕ್ಟರ್ ಬಳಿ ಹೋದರೆ ಇನ್ನೊಂದು ಹಲ್ಲು ಕಿತ್ತು ಹಾಕಿ ಕಳಿಸಿದ ಡಾಕ್ಟರ್ ಗಳು ಎಷ್ಟು ಮಂದಿ ಇಲ್ಲ! 
ಹಾಗಂತ ಡಾಕ್ಟರುಗಳು ಎಲ್ಲರೂ ಕೆಟ್ಟವರಲ್ಲ. ಈಗಂತೂ ಸಮಾಜದಲ್ಲಿ ಎಲ್ಲವೂ ಡೂಪ್ಲಿಕೇಟ್. ಡಾಕ್ಟರ್ ಗಳೂ ಇದ್ದಾರಂತೆ ಇಂಥವರು. ಸರಿಯಾದ ಕೌಟುಂಬಿಕ ಡಾಕ್ಟರ್ಗಳನ್ನು ನಾವು ದೇವರಂತೆ ನಂಬುತ್ತೇವೆ. ತಮ್ಮ ಕರ್ತವ್ಯವನ್ನು ಊಟ, ನಿದ್ರೆ ಬಿಟ್ಟು, ತುಂಬಾ ಸಂತಸದಿಂದ ಮಾಡುವ ವೈದ್ಯರು ಸಮಾಜದಲ್ಲಿ ಹಲವಾರು ಜನ ಇದ್ದಾರೆ ಮತ್ತು ಅವರಿಗೆ ಒಂದು ಸಲಾಂ. ಹಾಗೆಯೇ ಒಂದು ದೇಹವನ್ನು ತಮ್ಮ ಸಂಶೋಧನೆ ಅಥವಾ ಪ್ರಯೋಗಕ್ಕಾಗಿ ಬಳಸಿ ಸಾಯಿಸುವವರೂ ಇದ್ದಾರೆನ್ನಿ. ಮೊದಲೇ ಇಷ್ಟು ಲಕ್ಷ ತಂದರೆ ಮಾತ್ರ ಟ್ರೀಟ್ಮೆಂಟ್ ಆರಂಭ ಎನ್ನುವ ಮಾತೂ ನಾವು ಕೇಳಿದ್ದೇವೆ. ತಾವೇ ಹಣಕ್ಕಾಗಿ ಮೆಸ್ಸೇಜ್ ಕಳಿಸಲು ಟೈಪ್ ಮಾಡಿ ಕೊಟ್ಟ ಡಾಕ್ಟರ್ ಗಳು ರೋಗಿಯ ಸಾವು ಖಚಿತ ಎಂದು ತಿಳಿದಿದ್ದರೂ ನಲವತ್ತು ಲಕ್ಷ ತಂದರೆ ಬದುಕಿಸುತ್ತೇವೆ, ಅರವತ್ತು ಲಕ್ಷ ಕೊಟ್ಟರೆ ಉಳಿಯಬಹುದು ಎನ್ನುವವರೂ ಇದ್ದಾರೆ. ಇಂತಹ ಕೆಲವು ಕೇಸ್ ಗಳಲ್ಲಿ ತಮ್ಮೆಲ್ಲಾ ಆಸ್ತಿ ಮಾರಿ ದುಡ್ಡು ತಂದು ಒಂದಷ್ಟು ದಿನ ತಮ್ಮವರ ಜೀವ ಉಳಿಸಿಕೊಂಡ ಜನರಿದ್ದಾರೆ. 

ಪ್ರತಿಯೊಂದು ತಪ್ಪಿಗೂ ಡಾಕ್ಟರನ್ನು ನಾವು ದೂರಾಲಾಗದು. ಕೆಲವೊಮ್ಮೆ ಡಾಕ್ಟರ್ ಹೇಳಿದಂತೆ ನಡೆಯದ ನಾವು ಹೆಚ್ಚು ಹೆಚ್ಚು ಆರೋಗ್ಯ ಕೆಟ್ಟಾಗ ಡಾಕ್ಟರ್ ಮೇಲೆ ಹಾಕಿ ಅವರು ಸರಿ ಇಲ್ಲ ಎಂದು ಮತ್ತೊಂದು ಡಾಕ್ಟರ ಬಳಿ ಓಡುತ್ತಾ ಹಣ ವ್ಯಯ ಮಾಡಿಕೊಳ್ಳುತ್ತೇವೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ ಅಲ್ಲವೇ? ಹೊರಗೆ ಹೋಗಿ ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ತಿಂದು ಆರೋಗ್ಯ ಕೆಡಿಸಿಕೊಂಡು ಮತ್ತೆ ಡಾಕ್ಟರನ್ನು ದೂರಿ ಅವರು ಸರಿ ಇಲ್ಲ ಎಂದರೆ ಏನು ಪ್ರಯೋಜನ? ಸಮಾಜದಲ್ಲಿ ವಿವಿಧ ರೀತಿಯ ಜನರಿರುವ ಹಾಗೆ ವಿವಿಧ ರೀತಿಯ ವೈದ್ಯರೂ ಇದ್ದಾರೆ. ಉತ್ತಮ ವೈದ್ಯರನ್ನು ಆರಿಸಿಕೊಳ್ಳುವ ಜಾಣ್ಮೆ ಕೂಡಾ ನಮಗೆ ಇರಬೇಕು ಅಲ್ಲವೇ?

ಆರೋಗ್ಯವೇ ಭಾಗ್ಯ. ನಾವು ದುಡಿದ ಹಣವನ್ನು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹಾಕಿ, ಹೊಳೆಯಲ್ಲಿ ಹುಳಿ ಹಿಂಡಿದ ಹಾಗೆ ಬದುಕು ಆಗುವ ಬದಲು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳೋಣ. ಉತ್ತಮ ಎಣ್ಣೆ, ಒಳ್ಳೆಯ ಆಹಾರ, ಸರಿಯಾದ ನಿದ್ದೆ, ಒಂದಷ್ಟು ವ್ಯಾಯಾಮ, ಯೋಗ, ದ್ಯಾನ ಎಲ್ಲವೂ ಸ್ವಲ್ಪ ಸ್ವಲ್ಪ ಇದ್ದಾಗ, ಕೆಟ್ಟ ಅಭ್ಯಾಸಗಳು ಇಲ್ಲದಾಗ ಆರೋಗ್ಯವೂ ಉತ್ತಮವಾಗಿ ಇರುತ್ತದೆ. ನೀವೇನಂತೀರಿ?
@ಹನಿಬಿಂದು@
03.12.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -160

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -160

ಹಾಯ್ ಎಲ್ಲರಿಗೂ. ಹೇಗಿದ್ದೀರಿ? ಚಳಿಗಾಲ ಬಂದಿದೆ. ಭಾರತ ನಡುಗುತ್ತಿದೆ. ಮೊನ್ನೆ ಮೊನ್ನೆಯವರೆಗೆ ಮಳೆ ಬಂದರೂ ಕೂಡಾ ವಿಪರೀತ ಚಳಿ. ಈಗ ಎಣ್ಣೆ ಕಾಳುಗಳ ಬಳಕೆ ಎಳ್ಳು ತೆಂಗು ಹೀಗೆ ಆಹಾರದಲ್ಲಿ ಇದ್ದರೆ ಉತ್ತಮ. ಹಾಗೆಯೇ ಸ್ನಾನಕ್ಕೆ ಮೊದಲು ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಚರ್ಮ ಒಣಗಿ ಹೋಗುವುದಿಲ್ಲ. 76% ಕ್ಕಿಂತ  ಹೆಚ್ಚು TFM ಇರುವ ಸಾಬೂನು ಬಳಸಬೇಕು. ಆಗ ಚರ್ಮಕ್ಕೆ ತೊಂದರೆ ಆಗದು. ಹೆಚ್ಚು ಬಿಸಿ ನೀರು ಕುಡಿಯುವುದು ಉತ್ತಮ. ಜಾತ್ರೆ, ನೇಮ, ಕೋಲ, ವಾರ್ಷಿಕೋತ್ಸವ, ಲಕ್ಷದೀಪೋತ್ಸವ, ಪೂಜೆ, ಆಯನಗಳು ಈಗ ಹೆಚ್ಚು. ಅಲ್ಲೆಲ್ಲಾ ಹೋಗಿ ಸಾರ್ವಜನಿಕ ಊಟ ಮಾಡುವಾಗ ಸ್ವಚ್ಛತೆ ಹೇಗಿದೆ ನೋಡಿಕೊಂಡು, ಸಿಕ್ಕಿ ಸಿಕ್ಕಿದಲ್ಲಿ ನೀರು ಕುಡಿಯದೆ ತಮ್ಮ ಆರೋಗ್ಯ ಕಾಪಾಡುವುದು ಒಳ್ಳೆಯ ಗುಣ. 

 ಇಂದಿನ ತಾಂತ್ರಿಕ ಯುಗದಲ್ಲಿ ಶೈಕ್ಷಣಿಕ ಅಂಕಗಳು ಉತ್ತಮ ಉದ್ಯೋಗ ಪಡೆಯಲು ಸಹಕಾರಿ ಆಗಿದೆಯೇ ಎಂಬ ಪ್ರಶ್ನೆ  ಎಲ್ಲರಿಗೂ ಇದೆ. ಇದು ಆಗಾಗ ನಮ್ಮ ಪ್ರಶ್ನೆಯೂ ಹೌದು. ಆದರೆ ಇದಕ್ಕೆ ಉತ್ತರ ಕೊಡುವ ಸರದಿ ನನ್ನದಾದಾಗ ನಾನೆನ್ನುವುದು "ಹೌದು, ಶೈಕ್ಷಣಿಕ ಅಂಕಗಳು ಒಂದು ಹಂತದಲ್ಲಿ ಕೆಲವೊಂದು ಉದ್ಯೋಗ ಪಡೆಯಲು ಖಂಡಿತಾ ಸಹಕಾರಿ. ಹೆಚ್ಚು ಅಂಕ ಪಡೆದವರಿಗೆ ಮಾತ್ರ ಅಲ್ಲವೇ ವಿದ್ಯಾರ್ಥಿವೇತನ, ಫ್ರೀ ಸೀಟು, ಸನ್ಮಾನ, ಅಭಿಮಾನ ಎಲ್ಲಾ! ಇನ್ನು ಕೆಲವು  ಕೆಲಸಗಳೂ ಕೂಡ!

ಆದರೆ ಬದುಕಿನಲ್ಲಿ ಹಲವಾರು ಕ್ಷೇತ್ರಗಳಿವೆ. ಕೆಲವೊಂದು ಕ್ಷೇತ್ರಗಳಲ್ಲಿ ಇದು ಅನಿವಾರ್ಯ ಆಗಿರದೇ ಇರಬಹುದು.  ಅಂಕಗಳ ಮೇಲೆಯೇ ಇಂದಿಗೂ ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರಿ ಸಿಗುವುದು. ಬ್ಯಾಂಕಿಂಗ್, ಪೋಸ್ಟ್ ಆಫೀಸ್, ಇಂಜಿನಿಯರ್ , ವೈದ್ಯ, ⁶⁵ಉಪನ್ಯಾಸಕ, ಬೋಧಕ - ಶಿಕ್ಷಕ ವರ್ಗ ತಮ್ಮ ಅಂಕಗಳ ಮೇಲೆಯೇ ಬಂದಿರುವರು. ಕೆಲಸ ಗಳಿಸಿರುವರು. ಬುದ್ಧಿವಂತರಾದಾಗ ಮಾತ್ರ ಅಂಕ ಗಳಿಕೆ ಸಾಧ್ಯ. ವಾಮ ಮಾರ್ಗ ಎಂದಿಗೂ ಆಗದು. ಹಾಗೆ ಮಾಡಿದರೆ ಒಂದಲ್ಲ ಒಂದು ಹಂತದಲ್ಲಿ ನಿಜ ಬಣ್ಣ ಬಯಲಾಗಿಬಿಡುವ ಸಾಧ್ಯತೆಗಳು ಅನೇಕ. ಒಂದು ಸುಳ್ಳನ್ನು ಸಾಧಿಸಲು ಹಲವಾರು ಸುಳ್ಳುಗಳನ್ನು ಪೋಣಿಸಬೇಕಾಗುತ್ತದೆ. ಆಗ ಸ್ವಲ್ಪ ಎಡವಿದರೂ ಪಿಎಸ್ಐ ಪರೀಕ್ಷೆಯಲ್ಲಿ ನಡೆದ ರದ್ದಾಂತದ ರೀತಿ ಆಗುತ್ತದೆ. 

ಯಾವುದೇ ಉದ್ಯೋಗ ಪಡೆಯಲು ಪ್ರತಿ ಒಬ್ಬರಿಗೂ ಒಂದು ಮಾನದಂಡಗಳು ಬೇಕು. ಆ ಮೂಲಕ ಹೆಚ್ಚು ಅಂಕ ಗಳಿಸಿದವರು ಮೊದಲ ಸಾಲಿನಲ್ಲಿ  ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಮತ್ತೆ ಹೆಚ್ಚು ಅಂಕಗಳನ್ನು ಗಳಿಸಬೇಕಾದರೆ ಜ್ಞಾನಶಕ್ತಿ, ಬುದ್ಧಿಮತ್ತೆ ಹೆಚ್ಚಿದ್ದರೆ ಮಾತ್ರ ಸಾಧ್ಯ ತಾನೇ? ಹಾಗಾಗಿ ಐ ಎ ಎಸ್ , ಕೆ ಎ ಎಸ್, ನೀಟ್, ನೆಟ್ ಪರೀಕ್ಷೆಗಳು  ಮೊದಲಾದವು ದೊಡ್ಡ ಕೆಲಸಗಳು ಸಿಗಬೇಕಾದರೆ ಇರುವ ಅಂಕಗಳ ಮೇಲೆ ಅವಲಂಬಿತವಾಗಿ ಇರುವ ಪರೀಕ್ಷೆಗಳೇ ಅಲ್ಲವೇ? 

ಇನ್ನು ಒಂದು ಕಾರ್ಯ ಕ್ಷೇತ್ರ ಇದೆ. ವ್ಯಾಪಾರ. ಇಲ್ಲಿ ಅಂಕಗಳು ನಮ್ಮ ನೆರವಿಗೆ ಬರಲಾರವು. ಪ್ರಪಂಚದ ಸಿರಿವಂತರ ಪಟ್ಟಿಯಲ್ಲಿ ಇರುವವರೆಲ್ಲ ಬ್ಯುಸಿನೆಸ್ ಮ್ಯಾಗ್ನೆಟ್ ಗಳು. ಅವರಿಗೆ ಕೆಲಸ, ಜ್ಞಾನ, ಹೆಚ್ಚು ಆಲೋಚನೆಗಳು, ಹೊಸ ಹೊಸ  ನಿಪುಣತೆ ಮುಖ್ಯ. ಗ್ರಾಹಕರನ್ನು ತನ್ನೆಡೆ ಆಕರ್ಷಿಸುವುದು ಅಗತ್ಯ. ಒಳ್ಳೆಯ  ವಸ್ತುಗಳು ಇದ್ದರೆ ಜನರೇ ಹೋಗುತ್ತಾರೆ. ಕೆ ಎಪ್ ಸಿ ಚಿಕನ್ ನ ಓನರ್ ಅದನ್ನು ಪ್ರಾರಂಭಿಸುವಾಗ ಅವನ ವಯಸ್ಸು 70. ಆಗ ಅವನ ಅಂಕಗಳು ಯಾರಿಗೆ ಬೇಕು ಅಲ್ಲವೇ? ಬುದ್ಧಿವಂತಿಕೆ ಮುಖ್ಯ. 

ಕ್ರೀಡಾ ಸ್ಪರ್ಧಿಗಳಿಗೆ, ಗುಂಪಿನ ಆಟಗಳಾದ ಕ್ರಿಕೆಟ್, ಕಬಡ್ಡಿ, ಫುಟ್ ಬಾಲ್ ಆಟಗಾರರಿಗೆ, ಹಾಡುಗಾರರು, ಕಲಾ ಆರಾಧಕರಿಗೆ, ನೃತ್ಯಪಟು, ನಟರು, ರಂಗಭೂಮಿ ಕಲಾವಿದರು, ಯಕ್ಷಗಾನ ಕಲಾವಿದರು ಇವರಿಗೆಲ್ಲ ಅಂಕಾಗಳಿಗಿಂತಲೂ ಅವರವರ ಕ್ಷೇತ್ರದಲ್ಲೂ ಸಾಮಾನ್ಯ ಜ್ಞಾನದಲ್ಲೂ ತಿಳುವಳಿಕೆ ಮುಖ್ಯ. ಸತತ ಅಭ್ಯಾಸ, ಪರಿಪಕ್ವತೆ ಇದ್ದರೆ ಆಯಿತು. ಅವರು ಆಯಾ ಕ್ಷೇತ್ರದಲ್ಲಿ ಅಂಕಗಳನ್ನು ಲೆಕ್ಕ ಹಾಕಬೇಕಾಗಿ ಇಲ್ಲ ಎಂದು ನನ್ನ ಅನಿಸಿಕೆ. 

ಸಮಾಜದಲ್ಲಿ ಒಂದೇ. ಯಾವುದೇ ಕೆಲಸ ಮಾಡುತ್ತಿರಲಿ, ಅಂಕಗಳಿಗಿಂತಲೂ ಜ್ಞಾನ ಮುಖ್ಯ. ಕೆಲವು ಉದ್ಯೋಗಕ್ಕೆ ಅಂಕಾಗಳೆ ಮುಖ್ಯ ಆದರೂ, ಆ ಉದ್ಯೋಗ ದೊರೆತ ಬಳಿಕ ಅದನ್ನು ನಿಭಾಯಿಸಲು ಅವನ ಓದು, ಜ್ಞಾನ, ಕಲಿಕೆಯೇ ಹೆಚ್ಚು ಅವನಿಗೆ ಸಹಕಾರಿ. ಅಂಕಗಳನ್ನು ನೋಡಿ ಬರೆದು ಕೂಡಾ ಪಡೆಯಬಹುದು. ಆದರೆ ಕೆಲಸ ನಿಭಾಯಿಸಲು ಆ ವಿಷಯ ಕೊನೆಯವರೆಗೂ ತಿಳಿದಿರಬೇಕು.

 ಡ್ರೈವರ್ ಆದ ಹಾಗೆ. ಡ್ರೈವಿಂಗ್ ಕಲಿತು, ವಾಹನದ ಬಿಡಿ ಭಾಗಗಳ ಬಗ್ಗೆ ಅರಿವಿದ್ದು, ವಾಹನ ಚಲಾಯಿಸಲು ಬಂದರೆ ಸಾಕು. ಪರೀಕ್ಷೆ ಮಾಡಿ ಡ್ರೈವಿಂಗ್ ಲೈಸೆನ್ಸ್ ಕೊಡುತ್ತಾರೆ. ಈ ರೀತಿಯ ಪ್ರಾಯೋಗಿಕ ಅನುಭವ ಎಲ್ಲಾ ಕೆಲಸಗಳಲ್ಲಿ ನಮಗೆ ಸಹಾಯಕ , ಕೆಲವು ಕೆಲಸಗಳನ್ನು ಪಡೆದುಕೊಳ್ಳಲು ಮಾತ್ರ ಅಂಕಗಳು ಸಹಾಯಕ ಎಂದು  ನನ್ನ ಭಾವನೆ. ನೀವೇನಂತೀರಿ?
@ಹನಿಬಿಂದು@
24.11.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -159

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -159


ಈ ವಾರದ ಒಂದು ಸುದ್ದಿ. ಬೆಂಗಳೂರಿನಲ್ಲಿ ಒಂದು ಖಾಸಗಿ ಶಾಲೆಯಲ್ಲಿ ಮೊದಲನೇ ಸಂಕಲನಾತ್ಮಕ ಪರೀಕ್ಷೆ ಬರೆಯುವಾಗ ಓದದ ವಿದ್ಯಾರ್ಥಿನಿ ಒಬ್ಬಳು ಚೀಟಿ ತಂದಿದ್ದಾಳೆ ಮತ್ತು ಪರೀಕ್ಷಾ ಸಮಯದಲ್ಲಿ ಚೀಟಿ ಇಟ್ಟು ಬರೆಯುವುದು ತಪ್ಪು ಮತ್ತು ಇತರ  ಓದಿದ ವಿದ್ಯಾರ್ಥಿಗಳಿಗೆ ಮೋಸ ಆಗುವುದಿಲ್ಲವೇ? ಅದಕ್ಕೆ ಎಲ್ಲಾ ಶಿಕ್ಷಕರೂ ಇದು ತಪ್ಪು ಹೀಗೆ ಮಾಡಬಾರದು ಎಂದು ಹೇಳುವುದು ಸಹಜ. ಹಾಗಂತ ಬುದ್ಧಿ ಹೇಳಿದರು ಎಂಬ ಮಾತ್ರಕ್ಕೆ ನೇಣಿಗೆ ಶರಣಾಗುವುದು ಹೇಡಿತನ ಅಲ್ಲವೇ?

ಜೀವನದಲ್ಲಿ ಹಲವಾರು ಕಷ್ಟಗಳನ್ನು  ಎದುರಿಸಬೇಕಾಗುತ್ತದೆ. ಅದರ ಮುಂದೆ ಎಸ್ ಎಸ್ ಎಲ್ ಸಿ ಪರೀಕ್ಷೆ ತೀರಾ ಚಿಕ್ಕದು. ಫೈನಲ್ ನಲ್ಲಿ ಅದು ಪಬ್ಲಿಕ್ ಪರೀಕ್ಷೆ ಅಷ್ಟೇ. ತಿದ್ದುವವರು ಯಾವುದೋ ಜಿಲ್ಲೆಯ ಯಾವುದೋ ಶಿಕ್ಷಕರು. ಹಿಂದಿನ ವರ್ಷಗಳಲ್ಲಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಸಿಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಕಡಿಮೆ ಫಲಿತಾಂಶ ಬರಲಿ ಎಂದೋ ಏನೋ, ಅತ್ಯಂತ ಹೆಚ್ಚು ಮಕ್ಕಳು ಅನುತ್ತೀರ್ಣರಾಗಿದ್ದರು. ಮರು ಮೌಲ್ಯಮಾಪನಕ್ಕೆ ದುಡ್ಡಿದ್ದ ವಿದ್ಯಾರ್ಥಿಗಳು ಮತ್ತು ಕೆಲವು ಬಡ ಮಕ್ಕಳಿಗೆ ಅವರ ಶಿಕ್ಷಕರು ಹಣ ಕಟ್ಟಿ ಅರ್ಜಿ ಸಲ್ಲಿಸಿದ ಬಳಿಕ ಒಂದೇ ವರ್ಷದಲ್ಲಿ ಒಂದು ಜಿಲ್ಲೆಯ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಅದಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಉತ್ತಮವಾದ (ಹೆಚ್ಚು) ಅಂಕಗಳನ್ನೂ ಪಡೆದಿದ್ದರು. ಹೀಗೆ ಪಬ್ಲಿಕ್ ಪರೀಕ್ಷೆ ಆದರೆ ಅವರ ಅಂಕಗಳ ಬಗ್ಗೆ ಸರಿಯಾಗಿ ಹೇಳಲು ಬಾರದು. ಕೆಲವು ಬಾರಿ ನಪಾಸಾಗುವ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 
ಆದರೆ ಯಾವ ಶಿಕ್ಷಕರೂ ಓದುವ ವಿದ್ಯಾರ್ಥಿಗೆ ಮೋಸ ಮಾಡಲು ಬಯಸುವುದಿಲ್ಲ ಎಂಬುದು ನಮ್ಮ ಭಾವನೆ. ಕಾರಣ ಓದುವ ಮಕ್ಕಳಿಗೆ ದೊರೆತ ಪೂರ್ಣ ಅಂಕಗಳನ್ನು ನೀಡಿರುವುದನ್ನು  ನೀವು ನಾವು ನೋಡಿದ್ದೇವೆ. ಹಾಗೆಯೇ ಯಾವ ಶಿಕ್ಷಕರಿಗೂ ಯಾವ ವಿದ್ಯಾರ್ಥಿಯ ಮೇಲೆಯೂ ವೈಯಕ್ತಿಕ ದ್ವೇಷ ಇಲ್ಲ. ಎಲ್ಲಾ ವಿದ್ಯಾರ್ಥಿಗಳೂ ಚೆನ್ನಾಗಿ ಓದಿ ಉತ್ತೀರ್ಣರಾಗಿ ಮುಂದೆ ಸಾಗಲಿ ಎಂಬುದೇ ಎಲ್ಲಾ ಶಿಕ್ಷಕ ವೃಂದದ ಆಶಯ. ಕಣ್ ತಪ್ಪಿನಿಂದ ಎಲ್ಲೋ ಏನೋ ಒಂದಷ್ಟು ಏರು ಪೇರಾಗುವುದು ಸಹಜ. ಕಾರಣ ಟೀಚರ್ ಯಂತ್ರ ಅಲ್ಲ ತಾನೇ?

 ಓದದೇ ಇರುವ, ಮಾನಸಿಕವಾಗಿಯೂ ಶೈಕ್ಷಣಿಕವಾಗಿಯೂ ಕಲಿಕೆಯಲ್ಲಿ ಹಿಂದುಳಿದ ಅದೆಷ್ಟೋ ವಿದ್ಯಾರ್ಥಿಗಳು ಪಿಯುಸಿ ನಂತರ ಎಚ್ಚೆತ್ತುಕೊಂಡು ಪದವಿ ಪೂರ್ಣಗೊಳಿಸಿದ, ಬೇರೆ ಬೇರೆ ಉತ್ತಮ ಕೋರ್ಸ್ ಗಳನ್ನೂ ಮಾಡಿದ ಉದಾಹರಣೆಗಳಿವೆ. ಹಾಗಾಗಿ ಕಲಿಕೆಗೆ ಶಿಕ್ಷಕರು ಮತ್ತು ಪೋಷಕರು ಸಹಕರಿಸಬಹುದು ಮತ್ತು ಉತ್ತೇಜಿಸಿ ಬಹುದು. ಪೋಷಣೆ ನೀಡಬಹುದು, ಪಾಠ ಹೇಳಿ ಕೊಡಬಹುದು, ಸಾಮಾಗ್ರಿಗಳ ತಂದು ಕೊಡ ಬಹುದು. ಓದುವ ಮತ್ತು ಚೆನ್ನಾಗಿ ಪರೀಕ್ಷೆ ಬರೆಯುವ ಕಾರ್ಯ ವಿದ್ಯಾರ್ಥಿಯೇ ಮಾಡ ಬೇಕು ಅಲ್ಲವೇ? ಅದನ್ನು ಸತ್ಯ, ಪ್ರಾಮಾಣಿಕತೆ, ನಿಷ್ಠೆಯಿಂದ ಮಾಡಬೇಕು. ಇದು ಎಲ್ಲಾ ಪೋಷಕರ, ಶಿಕ್ಷಕರ, ಸಮಾಜದ ಆಸೆ, ಆಶಯ. ಎಲ್ಲಾ ಶಾಲೆಗಳು ಈ ರೀತಿಯ ವಿದ್ಯಾರ್ಥಿಗಳನ್ನು ಬೆಳೆಸುವ ಗುರಿಯನ್ನೇ ಇಟ್ಟುಕೊಂಡಿವೆಯೇ ಹೊರತು, ಸಣ್ಣ ಸಣ್ಣ ಕಾರಣಗಳಿಗೆ ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳುವ  ಗುಣಗಳನ್ನು  ಬೆಳೆಸುವ ಕಾರ್ಯ ಪ್ರಪಂಚದ ಯಾವ ಮೂಲೆಯಲ್ಲೂ ಆಗದು. 

ವಿದ್ಯಾರ್ಥಿ ಶಾಲಾ ಶಿಕ್ಷಕರು ನೀಡುವ ಸಣ್ಣ ಪುಟ್ಟ ಪೆಟ್ಟು ಅಥವಾ ಬೈಗುಳಗಳು, ನಿಂದನೆಗಳು ಇವಕ್ಕೆಲ್ಲ ಹೆದರಿ ಆತ್ಮಹತ್ಯೆ ಮಾಡಿಕೊಂಡು ಆ ಸಾವಿಗೆ ಆ ಶಿಕ್ಷಕರೇ ಕಾರಣರು ಎಂದಾದರೆ ಯಾವ  ತಂದೆ ತಾಯಿ ಬುದ್ಧಿ ಮಾತು ಹೇಳಬಾರದು, ಗದರ ಬಾರದು, ತಮ್ಮ ಮಕ್ಕಳಿಗೆ ಹೊಡೆಯ ಬಾರದು, ಏನೂ ಹೇಳಲೇ ಬಾರದು. ವಿದ್ಯಾರ್ಥಿ ಮನೋಶಾಸ್ತ್ರದ ಪ್ರಕಾರ ಕೆಲವೊಂದು ಒಳ್ಳೆಯದಲ್ಲದ ಗುಣಗಳನ್ನು ವಿದ್ಯಾರ್ಥಿಗಳು ಬೇಗ ಸಂಘ ದೋಷದಲ್ಲಿ ಕಲಿಯುವರು. ಅದನ್ನು ಬಿಡಿಸಲು ಸುಮ್ಮನೆ ಬಾಯಿ ಮಾತಿನಲ್ಲಿ ಹೇಳಿದರೆ ಅವರು ಕೇಳುವುದಿಲ್ಲ. ಹಾಗಂತ ಆಯುಧಗಳನ್ನು ಬಳಸಬೇಕು ಎಂದಲ್ಲ. ಹಿಂದಿನ ಕಾಲದ ಜನಪದದಲ್ಲಿ ಹೇಳಿರುವ ಹಾಗೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಹಾಗೆಯೇ ಬೆಳೆಯ ಸಿರಿ ಮೊಳಕೆಯಲ್ಲಿಯೇ ನೋಡಬೇಕು. ಮಕ್ಕಳು ಕುಂಬಾರರು ಮಾಡುವ ಮಡಕೆಯಂತೆ. ಒಳಗೆ ಪ್ರೀತಿಯಿಂದ ಕೈಯ್ಯಾಡಿಸುತ್ತಿರಬೇಕು, ಹೊರಗಿನಿಂದ ಉತ್ತಮ ರೂಪ ಬರಲು ಸ್ವಲ್ಪ ಆಕಾರವೂ ಬರಲು ಮೆಲ್ಲಗೆ ತಟ್ಟುತ್ತಿರಬೇಕು. ಹೆಚ್ಚು ತಟ್ಟಿದರೂ ಅಪಾಯಕಾರಿ. ವಿದ್ಯೆ, ಬುದ್ಧಿ, ಉತ್ತಮ ಗುಣಗಳನ್ನು ತಪ್ಪಿದರೆ ಭವಿಷ್ಯ ಅಪಾಯಕಾರಿ. ಹಾಗೆ ಆಗದೆ ಇರಲು ಬುದ್ಧಿ ಮಾತು, ತಪ್ಪು ತಿದ್ದುವುದು ಸಹಕಾರಿ. ಸಮಾಜದಲ್ಲಿ ಯುವ ಜನತೆ ಹಾಳಾಗಲು ಎಳವೆಯಲ್ಲಿ ಅವರನ್ನು ಮುದ್ದು ಮಾಡಿ ಬೆಳೆಸಿ, ಅವರ ತಪ್ಪುಗಳನ್ನು ತಿದ್ದದೆ, ನೀನು ಮಾಡಿದ್ದೆಲ್ಲಾ ಸರಿ ಎಂದು ಬೆಳೆಸಿರುವುದೂ ಒಂದು ಕಾರಣ ಹಾಗೂ ದುರಂತ ಅಲ್ಲವೇ?

 ಶಾಲೆ ಒಂದು ಸಂಸ್ಥೆ. ಇಲ್ಲಿ ಬೇರೆ ಬೇರೆ ಜಾತಿ, ಧರ್ಮ, ಸಂಸ್ಕೃತಿ, ನೆಲೆಗಟ್ಟು, ಆಚರಣೆಯನ್ನು ನಂಬುವ ಕುಟುಂಬದಿಂದ ಬಂದ ವಿದ್ಯಾರ್ಥಿಗಳು ಜೊತೆಯಾಗಿ ಕಲೆತು ಕಲಿಯುವ ವಿದ್ಯಾ ಮಂದಿರವೇ ಜ್ಞಾನ ದೇಗುಲ. ಯಾವುದೇ ಜಾತಿ ಧರ್ಮದ ವಿದ್ಯಾರ್ಥಿಗಳೇ ಆದರೂ ಆ ಶಾಲೆಯ ರೀತಿ ರಿವಾಜುಗಳನ್ನು ಪಾಲಿಸಲೇ ಬೇಕು. ಅದನ್ನು ಪೋಷಕರ ಸಹಕಾರ ಇಲ್ಲದೇ ಶಾಲೆ ನಡೆಸಲು ಆಗದು. ಶಾಲೆಯಲ್ಲಿ ಬದಲಾವಣೆ ಬೇಕೆಂದು ಅನ್ನಿಸಿದರೆ ಪೋಷಕರೂ, ಶಿಕ್ಷಕರೂ, ಆಡಳಿತ ಮಂಡಳಿಯವರು ಕೂಡಾ ಒಪ್ಪಿ ಅದನ್ನು ಬದಲಾಯಿಸಬೇಕು. ಸರಕಾರಿ ಶಾಲೆ ಆದರೆ ಸರಕಾರದ ಮತ್ತು ವಿದ್ಯಾ ಇಲಾಖೆಯ ಕಾನೂನುಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲಿ ಪ್ರತಿ ಶಿಕ್ಷಕ, ವಿದ್ಯಾರ್ಥಿ, ಪೋಷಕ ಎಲ್ಲರೂ ಮುಖ್ಯರೇ. ಅಲ್ಲಿ ಶಿಕ್ಷಕರು ಮತ್ತು ಪೋಷಕರಿಗೆ ಕಲಿಕೆಯ ಜೊತೆಗೆ ಮಗುವನ್ನು ಒಳ್ಳೆಯ ಪ್ರಜೆಯಾಗಿ ರೂಪಿಸುವ ಜವಾಬ್ದಾರಿ ಇರುತ್ತದೆ. ಹಾಗೆಯೇ ವಿದ್ಯಾರ್ಥಿಗಳಿಗೆ ಹಿರಿಯರ ಮಾತನ್ನು ಪಾಲಿಸುವ, ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಇರುತ್ತದೆ. ಅವರ ಆಸೆ, ಆಕಾಂಕ್ಷೆಗಳಿಗೆ ಸಹ ಬೆಲೆ ಕೊಡಲಾಗುತ್ತದೆ. 

 ಅಕ್ಷರ ಜ್ಞಾನದ ಜೊತೆಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜೀವನ ಶಿಕ್ಷಣ ಕಲಿಯುವುದು ಕೂಡಾ ಅಗತ್ಯ. ಪರೀಕ್ಷೆಯನ್ನು ಯಾವಾಗ ಬೇಕಾದರೂ ಬರೆಯಬಹುದು  ಆದರೆ ಸತ್ಯಸಂದತೆ, ಪ್ರಾಮಾಣಿಕತೆ, ದಯೆ, ಪ್ರೀತಿ, ಉತ್ತಮ ಹವ್ಯಾಸಗಳು, ಗಟ್ಟಿತನ, ಗೆಳೆಯರೊಡನೆ ಹೊಂದಿಕೊಂಡು ಬಾಳುವ ಗುಣ, ತಾಳ್ಮೆ, ಸಹನೆ, ಇದೆಲ್ಲವನ್ನೂ ಬದುಕಿನಲ್ಲಿ ಕಲಿಯಬೇಕಿದೆ ವಿದ್ಯಾರ್ಥಿಗಳು. ಮೂರು ವರ್ಷದಲ್ಲಿ ಕಲಿತದ್ದು ನೂರು ವರ್ಷಗಳವರೆಗೆ ಬಾಳ ಬೇಕಿದೆ ಕೂಡಾ. ನಕಲು ಮಾಡಿ ಎಂದು ಶಿಕ್ಷಕರು ಸುಮ್ಮನೆ ಬಿಟ್ಟು ಬಿಡಬೇಕೆ? ಶಿಕ್ಷಕರಿಗೆ ಬುದ್ಧಿ ಹೇಳುವ ಅವಕಾಶವೂ ಇಲ್ಲವೇ? ಪೋಷಕರು ಮಕ್ಕಳನ್ನು ಬೆಳೆಸುತ್ತಿರುವ ದಾರಿ ಸರಿ ಇಲ್ಲ. ಮಕ್ಕಳು ಏನು ಮಾಡಿದರೂ ಸರಿ. ಇತರರು ತಪ್ಪು ಎಂದು ಬೆಳೆಸಿದರೆ ಹೀಗೇ ಆಗೋದು. ಮಕ್ಕಳಿಗೆ ತಾವು ಕೂಡಾ ತಿದ್ದಿ ಬುದ್ಧಿ ಹೇಳ ಬೇಕೆ ಹೊರತು ತಮ್ಮ ತಪ್ಪಿಗೆ ಶಿಕ್ಷಕರನ್ನು ದೂರುವುದು ಅಲ್ಲ. ಮಕ್ಕಳ ಮನಸ್ಸನ್ನೂ ಗಟ್ಟಿ ಮಾಡಬೇಕು. ಜೀವನದಲ್ಲಿ ಮುಂದೆ ಅದೆಂಥ ದೊಡ್ಡ ಸವಾಲು ಬಂದರೂ ಎದುರಿಸಲು ಸಿದ್ಧರಾಗಬೇಕು ಅವರು. ಅದರ ಬದಲು ಕಷ್ಟಕ್ಕೆ ಹೆದರಿ ಬದುಕನ್ನು ತಾವೇ ಕೊನೆಗೊಳಿಸುವ ಯೋಚನೆ ತಪ್ಪು. ಇದರಲ್ಲಿ ದೃಶ್ಯ ಮಾಧ್ಯಮಗಳ ಪ್ರಭಾವವೂ ಇದೆ. ಈ ರೀತಿಯ ಚಿತ್ರಣಗಳನ್ನು ಅರ್ಧರ್ಧ ಗಂಟೆ ಲೈವ್ ಆಗಿ ತೋರಿಸುತ್ತಾ ಬಿತ್ತರಿಸುವುದು ಕೂಡಾ ತಪ್ಪೇ ಅಲ್ಲವೇ? ಸಾಮಾಜಿಕ ಜಾಲ ತಾಣಗಳು ಕೂಡಾ ಮಕ್ಕಳ ಸಮಯವನ್ನು ತಿಂದು, ಅವರು ಓದದೇ ಶಾಲೆಗೆ ಹೋಗಿ, ಕದ್ದು ಅಂಕ ಪಡೆಯುವ ಈ ದಾರಿಗೆ ಮುಂದಾಗುತ್ತಾರೆ. ಮೊಬೈಲ್ ಮಕ್ಕಳ ಕೈಗೆ ಕೊಡುವ ಪೋಷಕರೂ ಕೂಡಾ ಹೊಣೆ ಅಲ್ಲವೇ ಇಂತಹ ಘಟನೆಗಳಿಗೆ? ಮನಸ್ಸಿಗೆ ನೋವಾದಾಗ ಯಾರು ಮುಂದೆ ಸಿಗುತ್ತಾರೋ ಅವರನ್ನು ದೂಷಿಸುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ಸುಲಭವಾಗಿ ಕೈಗೆ ಸಿಗುವುದು ಶಿಕ್ಷಕರೇ! ಪೆಟ್ಟು ಕೊಟ್ಟರೆ ತಪ್ಪು(ಕೆಲವೊಂದು ಹಿಂಸಾತ್ಮಕ ಘಟನೆಗಳನ್ನು ಹೊರತು ಪಡಿಸಿ), ಬುದ್ಧಿ ಹೇಳುವುದು ತಪ್ಪು, ತಪ್ಪು ಮಾಡಿದರೆ ದೂಷಿಸುವುದು ತಪ್ಪು, ಆಟ ಆಡಿಸುವುದು ತಪ್ಪು, ಬಟ್ಟೆಯ ಬಗ್ಗೆ ಹೇಳುವುದು ತಪ್ಪು..ಹಾಗಾದರೆ ಬುದ್ಧಿ ಹೇಗೆ ಕಲಿಸುವುದು? ಶಾಲೆಗೆ ಯಾಕೆ ಕಳಿಸುವುದು? ಮನೆಯಲ್ಲೇ ಹೇಳಿ ಕೊಡಬಾರದೇ? ಶಿಕ್ಷಕರಿಗೂ ಮನಸ್ಸಿದೆ, ಕುಟುಂಬ ಇದೆ, ಜವಾಬ್ದಾರಿಗಳಿವೆ, ಒತ್ತಡಗಳಿವೆ, ನೋವುಗಳಿವೆ, ಅವರ ಮನಸ್ಸು ಕೂಡಾ ಮರುಗುತ್ತದೆ. ಅವರು ಯಾರೂ ತನ್ನ ವಿದ್ಯಾರ್ಥಿ ಸಾಯಲಿ ಎಂದು ಖಂಡಿತಾ ಎಂದೂ ಬಯಸುವುದಿಲ್ಲ. ಸಮಾಜ ಶಿಕ್ಷಕರ ಪರಿಧಿಯನ್ನು ಸಂಕುಚಿತ ಗೊಳಿಸುತ್ತಾ ಬಂದು ಬಯ್ಯೋ ಹಾಗಿಲ್ಲ, ಕೋಲು ಹಿಡಿಯುವ ಹಾಗಿಲ್ಲ, ಕಣ್ಣಲ್ಲೂ ಜೋರು ಮಾಡುವಂತಿಲ್ಲ, ಓದು, ಬರಿ ಅನ್ನುವ ಹಾಗಿಲ್ಲ, ಜಸ್ಟ್ ಅ ಗೈಡ್ ಅಷ್ಟೇ. ಇದನ್ನೇ ಮುಂದುವರೆಸಿಕೊಂಡು ಹೋಗಿ ಹತ್ತನೆ ತರಗತಿಯಲ್ಲಿ ಓದುತ್ತಿರುವ ಹಲವಾರು ವಿದ್ಯಾರ್ಥಿಗಳಿಗೆ ಇಂದಿಗೂ ತಮ್ಮ ಸ್ವಂತವಾದ ಒಂದು ವಾಕ್ಯವನ್ನು ಕೂಡಾ ರಚಿಸಲು ಬರುವುದಿಲ್ಲ. ಇದು ಇಪ್ಪತ್ತು ವರ್ಷಗಳ ನನ್ನ ಅನುಭವದಲ್ಲಿ ನಾನು ಕಂಡುಕೊಂಡ ಸತ್ಯ. ಮೊಬೈಲ್, ಟಿವಿ ಮತ್ತು ಅತಿ ಮುದ್ದು, ಸಮಯ ಕೊಡದೆ ಇರುವುದು ಇದಕ್ಕೆ ಕಾರಣ. ಇದರಿಂದಾಗಿ ಹತ್ತನೇ ತರಗತಿಯಲ್ಲಿ ಕಡಿಮೆ ಅಂಕಗಳು ಬಂದರೆ ಅದಕ್ಕೆ ಕಾರಣ ಶಿಕ್ಷಕರು.! ಯಾರನ್ನೂ ದೂರುವ ಹಾಗಿಲ್ಲ. ಶಿಕ್ಷಕರಿಗೆ ಯಾರೂ ಕೇಳುವವರೇ ಇಲ್ಲ! 
ತಪ್ಪು ಎಲ್ಲರದ್ದೂ ಇದೆ. ಚಿಕ್ಕಂದಿನಿಂದ ಮಕ್ಕಳನ್ನು ಬೆಳೆಸುವಾಗ ಕುಟುಂಬ ಮತ್ತು ಶಾಲೆ ಅವರನ್ನು ಗಮನಿಸಿ, ತಪ್ಪು ತಿದ್ದಿ ಬದುಕಿನ ಬಗ್ಗೆ ತಿಳಿಸಿ ಕೊಟ್ಟಲ್ಲಿ ಬದುಕಿನ ಸಣ್ಣಪುಟ್ಟ ತೊಂದರೆಗಳನ್ನು ನಿಭಾಯಿಸಲು ಅದು ಸಹಕಾರಿ. ಅದನ್ನು ಬಿಟ್ಟು ಒಬ್ಬರು ಇನ್ನೊಬ್ಬರ ಮೇಲೆ ಗೊಬೆ ಕೂರಿಸುತ್ತ ಹೋದರೆ ಸಮಸ್ಯೆಗಳು ಹಾಗೆಯೇ ಮುಂದುವರೆದು ಎಲ್ಲರಿಗೂ ನಷ್ಟವೇ ಅಲ್ಲವೇ? ಆ ದಿಸೆಯಲ್ಲಿ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡಲು ಪೋಷಕರು ಮತ್ತು ಶಿಕ್ಷಕರೆಲ್ಲ ಸಹಕರಿಸೋಣ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
17.11.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -158

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -158


ಎಲ್ಲಾ ವಾರಕ್ಕಿಂತ ಈ ವಾರ ಸ್ವಲ್ಪ ಚೇಂಜ್ ಮಾಡೋಣ ಅನ್ನಿಸಿತು. ಅದಕ್ಕೆ ರೈಲಿನ ಸುತ್ತ ಹೊರಟಿರುವೆ. ನೀವೂ ಬರ್ತೀರಲ್ಲಾ...

ಒಯಿ..ಹೇಗಿದ್ದೀರಿ? ಎಲ್ಲಾ ಕ್ಷೇಮ ತಾನೇ..ನಿಮ್ಮನ್ನೆಲ್ಲ ಈಗ ರೈಲಿನಲ್ಲಿ ಕರ್ಕೊಂಡು ಹೋಗ್ತೇನೆ. ರೈಲು ಬಿಡ್ತಾ ಇದ್ದೇನೆ ನಾನು..ಗೊತ್ತಲ್ಲ ನಿಮ್ಗೆ .. ಅಲ್ಲಾ, ರೈಲು ಬಿಡ್ಲಿಕ್ಕೆ ಯಾರ್ಗೆ ಗೊತ್ತಿಲ್ಲ ಹೇಳಿ? ನೀವು ರೈಲ್ ಬಿಡದವರ....ಎಲ್ರೂ ರೈಲ್ ಬಿಟ್ಟವರೆ.. ಟ್ರೈನ್ ಹತ್ತಿದವರೆ....

ನಿಮ್ಗೆ ರೈಲಲ್ಲಿ ಕೂತು ಅನುಭವ ಇರಬಹುದು ಅಥವಾ ಇಲ್ಲದೇ ಇರಬಹುದು, ಕರಾವಳಿ ಕಡೆಯವರಾದರೆ ಕಡಿಮೆ ಇರಬಹುದು. ಯಾಕೆ ಗೊತ್ತಾ...ಇಲ್ಲಿ ರೈಲಿಗಿಂತ ಫಾಸ್ಟ್ ಓಡೋ ಪ್ರೈವೇಟ್ ಬಸ್ ಗಳಿವೆ. ಡ್ರೈವರ್ ಅದನ್ನು ಗಾಳಿಯಲ್ಲೇ ಹಾರಿಸಿಕೊಂಡು ಹೋಗ್ತಾನೆ... ಇನ್ನು ಕಂಡಕ್ಟರ್ ಗೆ ಟಿಕೆಟ್ ಹರಿದು ಕೊಡಲೂ ಪುರುಸೊತ್ತು ಇಲ್ಲ. ಅಷ್ಟು ಫಾಸ್ಟ್. ನೀವೇನಾದರೂ ಸುರತ್ಕಲ್ ಇಳೀಬೇಕು ಅಂತ ಮಂಗಳೂರಲ್ಲಿ ಬಸ್ ಹತ್ತಿದ್ರೆ, ಕಣ್ಣು ಮುಚ್ಚಿ ಬಿಡುವ ಒಳಗೆ ಸುರತ್ಕಲ್ ದಾಟಿ ಹಳೆಯಂಗಡಿ ತಲುಪಿರ್ತೀರಿ. ಅಷ್ಟು ಸೂಪರ್ ಎಕ್ಸ್ಪ್ರೆಸ್ ಬಸ್ ಇರುವಾಗ ಇನ್ನು ರೈಲಿಗೆ ಎಲ್ಲಿ ಬೆಲೆ??? ರೈಲ್ವೇ ಸ್ಟೇಷನ್ ದೂರ, ಅಲ್ಲಿ ಹೋಗಿ ಕಾಯಬೇಕು, ಹೋಗುವಾಗ ರಿಕ್ಷಾ ಮಾಡಿ ಹೋಗ್ಬೇಕು, ಅಷ್ಟು ಹೊತ್ತಿಗೆ ಮಂಗಳೂರಿನವರು ಫ್ಲೈಟಲ್ಲಿ ಮುಂಬೈ ಮುಟ್ಟಿರ್ತಾರೆ. ಅದಕ್ಕೆ ಬಸ್, ವಿಮಾನ ಓಕೇ. ರೈಲು ಪ್ರಯಾಣ  ಕಡಿಮೆ. ಇದು ನಾನು ರೈಲು ಬಿಡೋದಲ್ಲ ಮಾರ್ರೆ. ಆ ರೈಲು ಎಕ್ಸ್ಪ್ರೆಸ್, ಎಲ್ಲಾ ಕಡೆ ನಿಲ್ಲಿಸಲ್ಲ, ಬಸ್ ಆದ್ರೆ ಹಾಗಲ್ಲ ನೋಡಿ, ನಮಗೆ ಬೇಕಾದಲ್ಲಿ ನಿಲ್ಲಿಸ್ತಾರೆ, ಇಲ್ಲಾಂದ್ರೆ ಡ್ರೈವರ್ ಗೆ ಬೈದ್ರೆ ಆಯ್ತು, ನಾಳೆ ಬರ್ತೀಯಲ್ಲ ನೀನು, ಇದೇ ರೂಟಲ್ಲ ನಿಂದು... ನೋಡಿಕೊಳ್ತೇನೆ...ಅಂತ...

ರೈಲು ಬಿಡೋದು ಹಾಗಿರ್ಲಿ, ಅದು ಯಾರಿಗೂ ಯಾರೂ ಪಾಠ ಮಾಡಬೇಕಂತ ಇಲ್ಲ, ಕೆಟ್ಟದೆಲ್ಲ ತಾನಾಗೇ ಬರುತ್ತೆ, ಒಳ್ಳೆಯದಕ್ಕೆ ಕ್ಲಾಸ್ ನಲ್ಲಿ ಕೂಡಿ ಹಾಕಿ ವರ್ಷ ಇಡೀ ಪಾಠ ಮಾಡಿದ್ರೂ ಅರ್ಧಕ್ಕರ್ಧ ಫೈಲ್ ಪರೀಕ್ಷೇಲಿ. ಅದೇ ಲವ್ ಲೆಟರ್ ಬರೆಯೋದು, ಪ್ರೊಪೋಸ್ ಮಾಡೋದು, ಓಡಿ ಹೋಗೋದು, ಕೈ ಕೊಡೋದು, ಮಕ್ಕಳು ಆಗೋದು ಇದೆಲ್ಲ ಯಾರೂ ಪಾಠ ಕಲಿಸಬೇಕು ಅಂತ ಇಲ್ಲ, ತಾನಾಗೇ ಕಲಿತುಕೊಳ್ತಾರೆ...ಯಾವ ಶಾಲೆಯಲ್ಲಿ ಕಳ್ಳತನ ಮಾಡಲು, ಬಯ್ಯಲು, ರೈಲು ಬಿಡಲು ಹೇಳಿ ಕೊಡ್ತಾರೆ ಹೇಳಿ? ಆದರೆ ಎಲ್ಲರೂ ಅದರಲ್ಲಿ ಎಕ್ಸ್ಪರ್ಟ್ಸ್...ಅದೇ ಗಣಿತ ಟೀಚರ್ ಎ ಪ್ಲಸ್ ಬೀ ಹೋಲ್ ಸ್ಕ್ವೆರ್ ಸೂತ್ರ ಅಪ್ಲೈ ಮಾಡಿ ಲೆಕ್ಕ ಮಾಡಲು ಎಷ್ಟು ಟೈಮ್ ಚಾಕ್ ವೇಸ್ಟ್ ಮಾಡಿರಲಿಕ್ಕಿಲ್ಲ? ಆದರೂ ಬಾರದು!!

ರೈಲು ಅಂದಾಗ ನೆನಪಾಯಿತು ನೋಡಿ, ರೈಲ್ ಹಾರಿಸೋದು! ಗೊತ್ತಿಲ್ಲ ಅಂತ ಸುಮ್ನೆ ರೈಲ್ ಹಾರಿಸಬೇಡಿ..ಮೊನ್ನೆ ಮೊನ್ನೆ ದೀಪಾವಳಿ ಹಬ್ಬದಲ್ಲಿ ರಾಕೆಟ್ ಹಾರಿಸಿದಷ್ಟೆ ಸುಲಭ ಕನ್ನಡ ಮಾತನಾಡುವವರಿಗೆ ರೈಲು ಹಾರಿಸೋದು!!! ಎಲ್ಲಿಂದ ಎಲ್ಲಿಗೆ ಬೇಕಾದರೂ ರಾಕೆಟ್ ವೇಗದಲ್ಲೇ ರೈಲು ಹಾರಿಸ್ತಾರೆ ಅವ್ರು! ಹಾಗೆಯೇ ನೀವೂ ಕೂಡಾ...ಅಲ್ವೇ?

ರೈಲ್ ಕಾಯೋದು? ಅಭ್ಯಾಸ ಇದೆಯೇ..ಫ್ಲೈಟ್ ಕಾಯೋಕೆ ಅರ್ಧ ಗಂಟೆ ಮುಂಚೆ ಹೋಗ್ಬೇಕು. ರೈಲಿಗೆ ಅಂತ ದಿನಗಟ್ಟಲೆ ಕಾದವರೂ ಇರಬಹುದೇನೋ.. ಕಾದು ಕಾದು ಬಸ್ಸಲ್ಲಿ ಹೋದವರು ಕೂಡಾ ಇರಬಹುದು. ರೈಲ್ ಕಾಯೋ ಕೆಲ್ಸ ಅಲ್ಲ ಮಾರೆ ..ಹೆಣ ಕಾದ ಹಾಗೆ...ಬಾರಿ ಕಷ್ಟ ಅದು...ಮೊನ್ನೆ ಮೊನ್ನೆ ಒಬ್ರು ಪರಿಚಯದವರು ರೈಲು ಹತ್ತಲು ಟ್ರಾಕ್ ಕ್ರಾಸ್ ಮಾಡ್ತಾ ಇರ್ವಾಗ ಇಂಜಿನ್ ಹೊಡೆದು ಒಂದು ಕೈ, ಒಂದು ಕಾಲು ಕಳ್ಕೊಂಡಿದ್ದಾರೆ ಪಾಪ. ಡಾಕ್ಟರರು ಪಟ್ಟಿ ಕೊಟ್ಟರು. ಈಗೆಲ್ಲಾ ಆಸ್ಪತ್ರೆಗಳು ಹೈ ಟೆಕ್ ಅಲ್ವಾ... ಎಲ್ಲಾ ಒಂದೋ ಎರಡೋ ಕೋಟಿ ಸುರಿದು ಎಂ. ಡಿ ಅನ್ನುವ ಕೋರ್ಸ್ ಮಾಡಿ ಬಂದಿರ್ತಾರೆ. ಹಗಲು ದರೋಡೆ ಮಾಡಿಯೇ ಅದನ್ನು ವಾಪಸ್ ಪಡ್ಕೋಬೇಕು. ನಿಮ್ಮ ಜೀವ ವಾಪಸ್ ಬೇಕು ಅಂದ್ರೆ ಹೇಳಿದ ಲಕ್ಷ ಕೊಡಬೇಕು. ಅವರೇ ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಡಲು ಕನಿಕರದಿಂದ ಕೂಡಿದ ಫೋಟೋ ಸಮೇತ ಮೆಸ್ಸೇಜ್ ಟೈಪ್ ಮಾಡಿ ಕೊಡುತ್ತಾರೆ. ನೀವು ಫಾರ್ವರ್ಡ್ ಮಾಡಿದರೆ ಆಯ್ತು. ಪಾಪ , ಪುಣ್ಯ ಬರಲಿ ಅಂತ ಯಾರ್ಯಾರೋ ನಿಮ್ಮ ಅಕೌಂಟಿಗೆ  ಒಂದಷ್ಟು ದುಡ್ಡು ಹಾಕಿ ಪುಣ್ಯ ಸಂಪಾದಿಸಿಕೊಂಡು ನಿಮಗಾಗಿ ಒಂದಷ್ಟು ಪ್ರಾರ್ಥನೆ ಮಾಡುತ್ತಾರೆ .ವೈದ್ಯರು ತಮ್ಮ ಮಕ್ಕಳನ್ನು ಯಾವುದೋ ಪ್ರತಿಷ್ಠಿತ ಕಾಲೇಜಿನಲ್ಲಿ ವರ್ಷಕ್ಕೆ ಒಂದಷ್ಟು ಕೋಟಿ ಕೊಟ್ಟು  ಎಂಬಿಬಿಎಸ್ ಓದಿಸುತ್ತಾ ಇರುತ್ತಾರೆ..ಮುಂದೆ ಅದೇ..ಎಂಡಿ...

ರೈಲಿನಿಂದ ವಿಷಯ ಹಳಿ ತಪ್ಪಿತೋ ಹೇಗೆ? ಜೀವನ ಪೂರ್ತಿ ಪ್ರೀತಿಸುತ್ತಿದ್ದು ಮದುವೆ ಆಗಲು ಸಾಧ್ಯ ಅಗದವರಿಗೆ ರೈಲು ಹಳಿಯ ಜೀವನ ಅಂತಾರೆ ಅಲ್ವಾ? ಯಾವಾಗಲೂ ಒಟ್ಟಿಗೆ ಜೊತೆಯಲ್ಲೇ ಸಾಗುತ್ತಿದ್ದರು ಒಂದಾಗುವ ಯೋಗ ಇಲ್ಲದ ಬದುಕು. ಇನ್ನೂ ಇದೆ, ಜೀವನದಲ್ಲಿ ಸಾಯಬೇಕು ಅನ್ನಿಸಿದಾಗ ಸೀದಾ ಹೋಗಿ ರೈಲು ಹಳಿಯ ಮೇಲೆ ಮಲಗಿ, ರೈಲಿಗೆ ತಲೆ ಕೊಟ್ಟು ಸಾಯುವುದು ಅತಿ ಸುಲಭದ ವಿಧಾನ ಅಂದುಕೊಂಡ ಕೆಲವರು ತಮ್ಮ ಅಮೂಲ್ಯ ಜೀವನವನ್ನು ರೈಲಿನ ಕೆಳಗೆ ದಾನ ಮಾಡುತ್ತಾರೆ! ಹೀಗೂ ಉಂಟು ಜಗದಲಿ! ಅಂದರೆ ಬದುಕು ಬೇಡ ಅನ್ನಿಸಿದಾಗ ಸಹಾಯ ಮಾಡುವವರಲ್ಲಿ ರೈಲು ಕೂಡಾ ಒಂದು ಎನ್ನಲು ಅಡ್ಡಿ ಇಲ್ಲ ಅಲ್ಲವೇ?

ಇನ್ನೂ ಇದೆ ರೈಲಿನ ಬಗ್ಗೆ ಹೇಳಲು. ರೈಲು ಹಳಿ ತಪ್ಪಿದರೆ ಬಹಳ ಪ್ರಯಾಣಿಕರಿಗೆ ಮಾರಣಾಂತಿಕ ಹೊಡೆತ, ಬದುಕಿನ ಹಳಿ ತಪ್ಪಿದರೆ ನಮ್ಮ ಜೀವ, ಜೀವನಕ್ಕೂ ಅನಾಹುತ. ಎಲ್ಲೂ, ಯಾರೂ ರೈಲಿನ ಹಾಗೆ ಹಳಿ ತಪ್ಪಬಾರದು. ರೈಲಿಗೆ ಮತ್ತೆ ರೈನಿಗೆ ಅದೆಲ್ಲಿಯ ನಂಟೋ ತಿಳಿಯದು. ರೈಲು ರೈನಿಗೆ , ರೈನು ರೈಲಿಗೆ ಹೆದರದು. ರೈನು ಉದ್ದುದ್ದ ಉದ್ದ, ರೈಲು ಅಡ್ಡಡ್ಡ ಉದ್ದ ಅಷ್ಟೇ! ಬದುಕಲ್ಲಿ ರೈಲು ಇರದೇ ಇದ್ದರೂ ಆದೀತು. ರೈನು ಮಾತ್ರ ಬರಲೇ ಬೇಕು. ಇಲ್ಲದಿದ್ದರೆ ರೈತ ಕಂಗಾಲು. ರೈಲಿಲ್ಲದಿದ್ದರೆ ರೈತ ಬದುಕಬಲ್ಲ, ರೈನಿಲ್ಲದಿದ್ದರೆ ನಾವೂ ಬದುಕಿರೋಲ್ಲ ಅಲ್ಲವೇ?

ರೈಲಿನ ಕಾನ್ಸೆಪ್ಟ್ ಬಸ್ಸುಗಳನ್ನು ಜೋಡಿಸುವ ಐಡಿಯಾದಲ್ಲಿ ಬಂತೋ, ಕಲ್ಲಿದ್ದಲು ನೋಡಿ ಬಂತೋ ತಿಳಿಯದು. ಆದರೆ ರೈಲು ಉಗಿಬಂಡಿ ಆಗಿ ಕನ್ನಡಕ್ಕೆ ಬಂದಿದೆ. ಹೀಗೆ ಹೊಗೆ ಉಗುಳುವ ಬಂಡಿ, ಹಳಿಯಲ್ಲಿ ಓಡುವ, ಹಲವಾರು ಜನ ಓಡಾಡುವ, ಬಸ್ಸಿನ ಹಾಗೆ ಸುಸ್ತಾಗದ ಈ ರೈಲಿನ ಬಗ್ಗೆ ಇನ್ನೂ ಬರೆದರೆ ರೈಲಿನಷ್ಟೆ ಉದ್ದವಾಗಿ, ನೀವು ನನಗೆ ರೈಲಿನಷ್ಟು ಉದ್ದದ ಕೋಲು ತರುವುದು ಬೇಡ ಮಾರೇ..ರೈಲು ಪ್ರಯಾಣ ಬಸ್ಸು, ವಿಮಾನದಷ್ಟು, ರಿಕ್ಷದಷ್ಟೂ ದುಬಾರಿ ಅಲ್ಲವೇ  ಅಲ್ಲ ಅಲ್ವಾ?ನೀವೇನಂತೀರಿ?
@ಹನಿಬಿಂದು@
29.10.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -155

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -155

ಭಾರತ  ಹಲವಾರು ಜಾತಿ, ಅನೇಕ ಧರ್ಮ, ವಿವಿಧ ವೇಷ ಭೂಷಣ, ವಿದ ವಿಧ ಸಂಸ್ಕೃತಿಗಳನ್ನು ಒಳಗೊಂಡ ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರ. ಪ್ರಾಣಿ, ಪಕ್ಷಿ, ಕೀಟಗಳನ್ನೂ ಪೂಜಿಸುವ, ಕಲ್ಲು ಮರಗಳನ್ನೂ ದೇವರೆಂದು ನಂಬುವ, ಅಹಂ ಬ್ರಹ್ಮಾಸ್ಮಿ ಎನುವ, ಸೊನ್ನೆಯನ್ನು ಪ್ರಪಂಚಕ್ಕೆ ಉಡುಗೊರೆಯಾಗಿ ಕೊಟ್ಟ, ಹಲವಾರು ಪಂಡಿತರ, ಬುದ್ಧಿವಂತರ, ಋಷಿಗಳ, ಧ್ಯಾನಿಗಳ,ಸಂತರ,ಪಕೀರರ, ಆಯುರ್ವೇದ  ಮಹಾ ಸಿದ್ಧಿ ಪುರುಷರ ದೇಶ. ಅಂಬೇಡ್ಕರ್, ವ್ಯಾಸ ಮಹರ್ಷಿ, ಸ್ವಾಮಿ ವಿವೇಕಾನಂದ, ಮದರ್ ತೆರೆಸಾ,ಅಬ್ದುಲ್ ಕಲಾಂರ ತರಹದ ಅದೆಷ್ಟೋ ಮೇಧಾವಿಗಳ ಬೀಡು. ಹಲವಾರು ಭಾಷೆಗಳ , ಆಚಾರ ವಿಚಾರಗಳ ಗೂಡು. 
ಹೀಗಿರುವಾಗ ಇಲ್ಲಿ ಜೀವಿಸುತ್ತಿರುವ ನಮ್ಮ ಬದುಕು ಹೇಗಿರಬೇಕು? ಅನ್ಯ ಧರ್ಮೀಯರ ಜೊತೆ ನಮ್ಮ ಸಂಬಂಧ ಹೇಗೆ ಸಾಗಬೇಕು? ಇದರ ಕುರಿತಾದ ಒಂದೆರಡು ಅನಿಸಿಕೆಗಳ ಇಲ್ಲಿ ವ್ಯಕ್ತಪಡಿಸುವ ಹೆಮ್ಮೆ ನನ್ನದು.

       ಕ್ರೈಸ್ತ ಮಂದಿರದ ಪಕ್ಕದಲ್ಲಿ ಹರಿ ದರ್ಶನ ಹೋಟೆಲ್, ಅದರ ಬದಿ ಫಾತಿಮಾ ಮಾಲ್, ಕ್ರಿಸ್ತ ಕೃಪಾ ಕಟ್ಟಡದಲ್ಲಿ ದುರ್ಗಾ ಪರಮೇಶ್ವರಿ ಟೀ ಸ್ಟಾಲ್, ಬದಿಯಲ್ಲಿ ಅರಾಫ ಫ್ಯಾನ್ಸಿ ಸ್ಟೋರ್ , ಪಕ್ಕದಲ್ಲಿ ಜಿನ ಪುಸ್ತಕಾಲಯ. ಇದು ನಿಮಗೆ ಭಾರತದಲ್ಲಿ ಮಾತ್ರ ಕಾಣ ಸಿಗುವ ಅನ್ಯೋನ್ಯತೆಯ ದೃಶ್ಯಗಳು. ಇಲ್ಲಿ ಜಾತಿ ಧರ್ಮಗಳನ್ನು ಬಿಟ್ಟು ಜನರಿಲ್ಲ, ಎಲ್ಲಾ ಧರ್ಮದ ಜನರ ಬಿಟ್ಟು ಭಾರತ ಇಲ್ಲ. ಯಾವುದೇ ಹೊರಗಿನ ಶಕ್ತಿ ಭಾರತದಂತಹ ಮಹಾನ್ ದೇಶವನ್ನು ಒಡೆಯ ಬೇಕು ಎಂದಿದ್ದರೆ ಅದು ಮೊದಲು ಧರ್ಮದ ಆಧಾರದಲ್ಲಿ ಒಡೆಯುತ್ತದೆ. ಚರ್ಚ್ ಮೇಲೆ ದಾಳಿ, ದೇವಾಲಯಗಳ ಮೇಲೆ ದಾಳಿ, ಮಸೀದಿಗಳ ಮೇಲೆ ಧಾಳಿ ಮಾಡಿ ಒಂದು ಧರ್ಮದ ಜನರಲ್ಲಿ ಮತ್ತೊಂದು ಧರ್ಮದ ಜನರ ಹೆಸರು ಹೇಳಿಬಿಟ್ಟರೆ ಸಾಕು. ಭಾರತದ ಶಾಂತಿ ಕಡದುತ್ತದೆ. ಇಬ್ಬರ ಜಗಳ ಮೂರನೆಯವರು ಇಲ್ಲಿ ನುಗ್ಗಲು ಆಧಾರ. ಅದಕ್ಕೆ ನಾವು ಆಸ್ಪದ ಕೊಡುವಂತೆ ಇರಬಾರದು ಅಲ್ಲವೇ?

     ನಾವು ಚಿಕ್ಕವರಿರುವಾಗ  ಮನೆಯ ಹತ್ತಿರದ ಕಾಕನ ಅಂಗಡಿಗೆ ಹೋಗುತ್ತಿದ್ದೆವು. ಅಲ್ಲಿ ಮನೆ ಸಾಮಾನು ಕೊಟ್ಟ ಬಳಿಕ ಕಾಕಾ ಕೊಡುತ್ತಿದ್ದ ಚಾಕಲೇಟು ಅಥವಾ ಬಾಳೆಹಣ್ಣಿನ ಬೆಲೆ ಅವರು ಪಡೆಯದೆ "ಮಗು ತಿನ್ನಲಿ" ಎಂದು ಪ್ರೀತಿಯಿಂದ ಕೊಡುತ್ತಿದ್ದ ಆ ನಿಷ್ಕಲ್ಮಶ ಪ್ರೀತಿ ಮರೆಯಲು ಸಾಧ್ಯವೇ? ಯಾವುದೇ ಜಾತಿ ಧರ್ಮದ ಜನರಿರಲಿ, ಮಕ್ಕಳನ್ನು ದೇವರಂತೆ ಕಾಣುತ್ತಾರೆಯೇ ಹೊರತು, ಜಾತಿ - ಧರ್ಮದ ನೆಲೆಗಟ್ಟಿನಲ್ಲಿ ಅವರನ್ನು ಭಾರತದಲ್ಲಿ ದ್ವೇಷಿಸುವುದು ಖಂಡಿತಾ ಇಲ್ಲ. ಈ ಪ್ರೀತಿಯ ಸಂಬಂಧ ಭಾರತದಲ್ಲಿ ಎಲ್ಲಾ ಧರ್ಮದ ಜನರ ಜೊತೆ  ನಮ್ಮದಾಗಿರಬೇಕು ಅಲ್ಲವೇ?

     ಇನ್ನು ನಾವು ಏನಾದರೂ ಸಮಸ್ಯೆಗೆ ಸಿಲುಕಿದಲ್ಲಿ, ಶಾಳೆಯಾಗಲಿ, ಹೋಗುವ ದಾರಿಯೇ ಆಗಲಿ ನಮಗೆ ನೋವಾದಲ್ಲಿ ನಮಗೆ ಮೊದಲು ನೆರವಿಗೆ ಬರುತ್ತಿದ್ದವರು ಅಕ್ಕ  ಪಕ್ಕದ ಮನೆಯವರು ಅಥವಾ ಊರಿನವರು. ಅಲ್ಲಿ " ನಮ್ಮ ಊರಿನ ಮಗು " ಎಂಬ ಭಾವವಿತ್ತೇ ಹೊರತು ಅನ್ಯ ಧರ್ಮದವರ ಮಗು ಎಂಬ ಆಲೋಚನೆ ಎಂದೂ ಹೊಳೆಯದು. ಕಾರಣ ಆ ಕಿರಿಯ ದೃಷ್ಟಿಯಲ್ಲಿ ಜನರನ್ನು ನೋಡುವ ಕಿರಿಯ ಮನಗಳ ದೇಶ ನಮ್ಮ ಭಾರತವಲ್ಲ. ಇಲ್ಲಿರುವುದು "ಸರ್ವೇ ಜನಾಃ ಸುಖಿನೋ ಭವಂತು"  ಎಂಬ ಭಾವ. ಸರ್ವೇ ಧರ್ಮಾ: ಸುಖಿನೋ ಭವಂತು ಎಂದು ಧರ್ಮಗಳ ಆಧಾರದಲ್ಲಿ ಯಾರು ಯಾರನ್ನೂ ವಿಭಾಗಿಸಿ ನೋಡಲಾರರು, ಇದು ನಮ್ಮ ದೇಶ. ನಮ್ಮ ಭಾವನೆಯೂ ಭಾರತೀಯರ ರಕ್ತದ ಒಂದು ಕಣದಲ್ಲೆ ಬಂದಿದೆ, ಅದು ನಾನು ಭಾರತ ಮಾತೆಯ ಪುತ್ರ, ಪುತ್ರಿ ಎಂಬುದು. 

  ಪ್ರತಿಯೊಬ್ಬ ಮಾನವನೂ ಒಂದೊಂದು ಧರ್ಮದ ಕಟ್ಟಲೆಗಳನ್ನು ಪಾಲಿಸಿಕೊಂಡು ಬಂದಿರುತ್ತಾನೆ, ಅವನಿಗೆ ಇಷ್ಟವಾದ ಹೆಸರಿನಲ್ಲಿ ದೇವರನ್ನು ಪೂಜಿಸುತ್ತಾನೆ, ಯೋಗ ಧ್ಯಾನದ ಜೊತೆ ಸೂರ್ಯ ನಮಸ್ಕಾರ ಮಾಡುತ್ತಾನೆ, ದೈಹಿಕ ವ್ಯಾಯಾಮ, ಜಿಮ್, ದಿನಕ್ಕೆ ಐದು ಬಾರಿ ನಮಾಜ್, ಸೂರ್ಯ ಮುಳುಗಿದ ಬಳಿಕ ಊಟ ತಿನ್ನದೆ ಇರಬಹುದು ಅದೆಲ್ಲ ಅವನ ನಂಬಿಕೆಗೆ ಬಿಟ್ಟದ್ದು. ಎಲ್ಲವೂ ದೈಹಿಕ ವ್ಯಾಯಾಮಕ್ಕೆ ಧಾರ್ಮಿಕ ನಂಬಿಕೆ ಹಾಗೂ ಮೆರಗು ಕೊಟ್ಟ ಆರೋಗ್ಯಾಭ್ಯಾಸಗಳು. ಎಲ್ಲವೂ ನಮ್ಮನ್ನು ದೇವರೊಡನೆ ಮಾತನಾಡಿಸುವ ತಂತ್ರಗಳು. ಇಲ್ಲಿ ಒಬ್ಬ ಮನುಷ್ಯ ಯಾವುದನ್ನು ಬೇಕಾದರೂ ಅನುಸರಿಸಬಹುದು. ಅದು ಅವನ ನಂಬಿಕೆಗೆ ಬಿಟ್ಟದ್ದು. ಆದರೆ ನಮ್ಮ ನಂಬಿಕೆ ನಮ್ಮ ಮನೆಯಲ್ಲಿ ಇರಬೇಕೆ ಹೊರತು, ಸಾರ್ವಜನಿಕ ಸಂಸ್ಥೆಗಳಲ್ಲಿ ಹೋಗಿ ನಾನು ಮಾಡಿದ ಹಾಗೆಯೇ ಉಳಿದವರು ಮಾಡಬೇಕು, ಅದುವೇ ಸರಿ ಎಂಬ ಭಾವನೆ ನಮ್ಮಲ್ಲಿ ಇರಬಾರದು. 

ಮುಸಲ್ಮಾನ ರಾಜರು ಭಾರತಕ್ಕೆ ಧಾಳಿ ಮಾಡಿ ಇಲ್ಲಿಯ ಜನರೊಡನೆ ಸೇರಿ ಇಲ್ಲಿ ಇಸ್ಲಾಂ ಧರ್ಮವನ್ನು ಬೆಳೆಸಿದರು. ಭಾರತಕ್ಕೆ ಧಾಳಿ ಮಾಡಿದ ಆಂಗ್ಲರು ಇಲ್ಲಿನ ಜನರನ್ನು ಧರ್ಮ ಬದಲಾಯಿಸಿ ಭಾರತದಲ್ಲಿ ಅಷ್ಟೇ ಅಲ್ಲ ಇಡೀ ಪ್ರಪಂಚದ ವಿವಿಧ ದೇಶಗಳಿಗೂ ನುಗ್ಗಿ ಅಲ್ಲಿಯೂ ಕೂಡಾ ಕ್ರಿಶ್ಚಿಯನ್ ಧರ್ಮವನ್ನು ಸ್ಥಾಪಿಸಿದರು. ಬುದ್ಧ ತನ್ನ ಉತ್ತಮ  ಬೋಧನೆಗಳ ಬಿತ್ತಲು ಅವನನ್ನು ನಂಬಿ ಅವನ ಅನುಯಾಯಿಗಳಾದ ಜನರು ಬೌದ್ಧ ಧರ್ಮವನ್ನು ಹರಡಿದರು. ಅದಕ್ಕೆ ಎಲ್ಲಾ ಧರ್ಮಗಳ ಕೆಲವು ಜನರೂ ಸೇರಿಕೊಂಡರು. ಭಗವಾನ್ ಮಹಾವೀರನ ಉನ್ನತ ಆದರ್ಶಗಳನ್ನು ನೋಡಿದ ಜನ, ಪ್ರತಿ ತೀರ್ಥಂಕರರ ಜೀವನ ಶೈಲಿ, ಸಾಮಾನ್ಯರಲ್ಲಿ ಅಸಾಮಾನ್ಯ ಬುದ್ಧಿವಂತಿಕೆಯ ಬದುಕು , ಅನ್ಯೋನ್ಯತೆ, ಪ್ರಾಣಿ ದಯಾ ಸಂಹಿತೆ ಇತರ ಧರ್ಮದ ಜನರನ್ನು ಕೂಡಾ ಜೈನ ಧರ್ಮಕ್ಕೆ ಕರೆದಿರಬಹುದು. ಆದರೆ ಆ ಶಾಂತ ಜನ "ಅಹಿಂಸೆಯೇ ಪರಮ ಧರ್ಮ "  ಎಂಬ ಸೂತ್ರದೊಂದಿಗೆ ಬಾಳುವಾಗ ಅವರನ್ನು ವಿರೋಧಿಸಲು ಭಾರತೀಯರಾದ ನಮಗೆ ಸಾಧ್ಯವೇ? ಹಾಗಾಗಿ ಜೈನರೊಂದಿಗೂ ಸರ್ವ ಧರ್ಮದ ಜನರೂ ಒಂದಾಗಿ ಬಾಳುವ ದೇಶ ನಮ್ಮ ಭಾರತದ ಹೃದಯಗಳ ರಕ್ತದಲ್ಲೇ ಹರಿದು ಬಂದ ಗುಣ. 

ವೇಷ ಬೇರೆ ಭಾಷೆ ಬೇರೆ ದೇಶ ನಮ್ಮ ಭಾರತ
ಒಂದೇ ತಾಯ ಮಕ್ಕಳಂತೆ ಬೆರೆಯಬೇಕು ಸಂತತ.. ಎಂದ ಕವಿವಾಣಿಗೆ ಸಲಾಂ. ಇಲ್ಲಿನ ಕವಿ ಪುಂಗವರಿಗೆ ಧರ್ಮದ ಎಲ್ಲೆ ಇಹುದೇ? ಶಿಕ್ಷಕ, ಬರಹಗಾರ, ಭಾಷಣಕಾರ, ನಟ, ಕ್ರೀಡಾಳು, ಕಲಾ ಆರಾಧಕ ಯಾರನ್ನೂ ಧರ್ಮದ ಬುನಾದಿಯಲ್ಲಿ  ಭಾರತೀಯರು ಅಳೆಯುವುದಿಲ್ಲ. ಕಾರಣ ಇಲ್ಲಿ ಯಾವುದೇ ಧರ್ಮದ ತಾಯಿ ತನ್ನ ಮಗುವಿಗೆ ಕೃಷ್ಣ ವೇಷ ಹಾಕಿಸಿ, ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿ  ತಮ್ಮ ಮಗುವನ್ನು ನೋಡಿ ತಾನೂ ಖುಷಿ ಪಡುತ್ತಾರೆ. ಅದೇ ರೀತಿ ಫ್ಯಾನ್ಸಿ ಡ್ರೆಸ್ ನಲ್ಲಿ ಯಾರು ಬೇಕಾದರೂ ಸಂತಾ ಕ್ರೂಸ್ ಆಗಬಲ್ಲರು, ಪಕೀರ ಆಗಬಲ್ಲರು, ದಶಾವತಾರ ತೋರಬಲ್ಲರು, ಬುದ್ಧ, ಮಹಾವೀರ, ಗುರು ನಾನಕ್ ಆಗಿ ಸರ್ವರ ರಂಜಿಸಲು, ಯಾವುದೇ ಧರ್ಮದ ಹಂಗಿಲ್ಲದೆ ಆರಾಮವಾಗಿ ತನ್ನಿಷ್ಟದ ಪ್ರಕಾರ ಬದುಕಲು ಸ್ವಾತಂತ್ರ್ಯ ಕೊಟ್ಟ ಭಾರತದ ಮೂಲ ಮಂತ್ರ "ನೀನು ಚೆನ್ನಾಗಿ ಬದುಕು ಮತ್ತು ಇತರರನ್ನು ಬದುಕಲು ಬಿಡು" ಅಷ್ಟೇ. ನಮ್ಮ ಬದುಕಿನಲ್ಲೂ ಈ ನೀತಿಯನ್ನು ಅನುಸರಿಸಿದರೆ ಆಯಿತು. ನೆಮ್ಮದಿಯ ಬಾಳು ನಮ್ಮದಾಗುವುದು ಇಲ್ಲಿ. 

ಶಾಲಾ ಸರಸ್ವತಿ ಪೂಜೆ, ಸಂತಾಕ್ರಾಸನು ಕೊಡುವ ಚಾಕಲೇಟು, ಈದ್ ಮಿಲಾದ್ ಸ್ವೀಟು ತಿಂದು ಬೆಳೆದವರೆ ನಾವೆಲ್ಲ. ಮಹಾಭಾರತ, ರಾಮಾಯಣದ ಕಥೆಗಳು, ಪಾತ್ರಗಳು ಎಲ್ಲಾ ಧರ್ಮದ ಭಾರತೀಯರ ಒಡಲಾಲದಲ್ಲಿ ಸೇರಿ ಹೋಗಿಲ್ಲವೇ? ಗುರು ಬ್ರಹ್ಮ, ಗುರು ವಿಷ್ಣು ಹೇಳಿದ ರೀತಿಯೇ ಕ್ರೂಷೆಯ ಮೇಲೆ ಜನರಿಗಾಗಿ ನೋವುಂಡ ಯೇಸಕ್ರಿಸ್ತರನ್ನು ಗೌರವಿಸದ ಭಾರತೀಯ ಇರುವನೇ? ಮಹಮ್ಮದ್ ಪೈಗಂಬರ್ ಅವರ ದೀನ ದಲಿತರಿಗೆ, ಬಡವರಿಗೆ ಸಹಾಯ ಮಾಡಬೇಕು ಎಂಬ ಮಾತನ್ನು ಪಾಲಿಸದ ಭಾರತೀಯನ ಅದೆಲ್ಲಿ ಕಾಣಲು ಸಾಧ್ಯ? ಬುದ್ಧನ "ಅತಿಯಾಸೆ ಗತಿ ಕೇಡು" ಎಂಬ ನೀತಿ ಅನುಸರಿಸದೆ ಇದ್ದರೆ ಬದುಕು ಸಂತಸವಾಗಿ ಇರಲು ಸಾಧ್ಯವೇ? ಈ ಎಲ್ಲಾ ಧರ್ಮಗಳ ಉತ್ತಮ ಅಂಶಗಳನ್ನು ಬೆಳೆಸಿಕೊಳ್ಳದೆ ನಾವು ಸಮಾಜದಲ್ಲಿ ದಿನ ಕಳೆಯಲು ಸಾಧ್ಯವೇ?

    ಸಂಸ್ಕೃತ, ಕೊಂಕಣಿ, ಉರ್ದು, ಮಲಯಾಳಂ, ಹಿಂದಿ, ತುಳು, ಮರಾಠಿ, ಅರೇಬಿಕ್, ರಾಜಸ್ಥಾನಿ, ತಮಿಳು ಹೀಗೆ ಎಲ್ಲಾ ಭಾಷೆಗಳ ತಿರುಳು ಒಂದೇ, ಸಾಮರಸ್ಯದ ಬದುಕು. ಎಲ್ಲಾ ಮನಗಳು ಬಯಸುವುದು ಭಾರತದಲ್ಲಿ ಏಕತಾನತೆ. ಎಲ್ಲರಿಗೂ ಬೇಕಾದದ್ದು ಶಾಂತಿ, ನೆಮ್ಮದಿ, ಆರೋಗ್ಯ. ಇವಿಷ್ಟನ್ನು ಬೆಳೆಸಿಕೊಂಡು ಹೋಗುವ ಮನಸ್ಸು ನಮಗೆ ಇರಬೇಕು. 

ಕೊಲೆಗಡುಕ, ದೂರ್ತನಾಗದೆ, ಕಳ್ಳತನದಲ್ಲಿ ತೊಡಗದೆ, ಸುಳ್ಳು ಹೇಳದೆ, ಪರಧರ್ಮ ಸಹಿಷ್ಣುವಾಗಿ, ತಾಯಿ ಭಾರತಾಂಬೆಯ ಮಗುವು ನಾನು ಎನ್ನುತ್ತಾ, ನಮ್ಮ ನಂಬಿಕೆಯ  ಧರ್ಮವನ್ನು ಪಾಲಿಸುತ್ತಾ, ಪರ ಧರ್ಮಗಳಿಗೆ ಗೌರವ ನೀಡುತ್ತಾ ಬದುಕು ಕಟ್ಟುವ ಕಾರ್ಯ ನಮ್ಮದಾಗಬೇಕು. ಅದುವೇ ಪ್ರತಿ ಭಾರತೀಯರ ಲಕ್ಷಣ. ಯಾವುದೇ ಇತರ ಧರ್ಮದ ಜನರ ಜೊತೆ ನಮ್ಮ ಕ್ಷಣಗಳು ಒಂದಿಷ್ಟು ನಗು, ಒಂದಿಷ್ಟು ಹರಟೆ, ಸ್ವಲ್ಪ ಸಹಾಯ, ಒಂಚೂರು ಮನುಷ್ಯತ್ವ, ಯಾರನ್ನೂ ನೋಯಸದೆ ಇರುವುದು, ಅವರನ್ನು ಅವರಷ್ಟಕ್ಕೆ ಬಾಳಲು ಬಿಡುವುದು, ಸಾಧ್ಯವಾದರೆ ಸಹಾಯ ಮಾಡುವುದು ಇದಿಷ್ಟು ಒಳ್ಳೆಯ ಗುಣಗಳನ್ನು ನಾವು ಬೆಳೆಸಿಕೊಂಡಿದ್ದೆ ಆದಲ್ಲಿ  ಪರಧರ್ಮ ಸಹಿಷ್ಣುತೆ ಬಂದು ನಾವು ಹಾಗೂ ಇತರ ಭಾರತೀಯ ಮನಗಳು ಉತ್ತಮ ಬಾಂಧವ್ಯದ ಜೊತೆ ಬದುಕು ನಡೆಸಲು ಅನುಕೂಲ. ನೀವೇನಂತೀರಿ?
@ಹನಿಬಿಂದು@
20.10.2022

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -157

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -157
ಕಾಡು ನಾಶವಾದರೆ ಮನು ಕುಲವೂ ನಾಶ ಎಂಬ ಮಾತು ನಮಗೆಲ್ಲಾ ತಿಳಿದೇ ಇದ್ದರೂ ನೂರಾರು ವರ್ಷಗಳಿಂದ ಬೆಳೆದು ನಿಂತು ನೆರಳು, ಹೂ, ಹಣ್ಣು, ಗಾಳಿ, ಮಳೆ,ತಂಪಾದ ನೆರಳು, ಪರಿಸರದ ಶುದ್ಧತೆ,  ಆಶ್ರಯ ಕೊಟ್ಟು ನಮ್ಮನ್ನು ರಕ್ಷಿಸುತ್ತಿರುವ ಹೆಮ್ಮರಗಳನ್ನು ಅವುಗಳ ಎಲೆ ಬಿದ್ದು ಕಸ ಆಗುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ಕಡಿದು ಹಾಕುತ್ತಿದ್ದಾರೆ. ರಸ್ತೆಗಳ ಅಗಲೀಕರಣ, ಮನೆ, ಕಾರ್ಖಾನೆಗಳ ಕಟ್ಟುವಿಕೆಯ ಕಾರ್ಯಕ್ಕೆ ಪ್ರತಿದಿನ ಹೆಮ್ಮರಗಳು ನೆಲಕ್ಕುರುಳುತ್ತಲೇ ಇವೆ ಅಲ್ಲವೇ?

ಹಸಿರು... ವಾವ್..ಅದೆಷ್ಟು ಚಂದ! ಹರಿವ ಝರಿ, ಅದು ಉದ್ದಕ್ಕೆ ಬಳುಕಿ ಸಾಗುವ ತೊರೆ, ಹಚ್ಚ ಹಸುರಿನ ಗಿಡಮರ ಬಳ್ಳಿ,. ಅದರ ನಡುವೆ ಪಕ್ಷಿಗಳ ಕಲರವ. ಅದನ್ನು ಆಸ್ವಾದಿಸುತ್ತಾ ಕುಳಿತಾಗ ಅದೇ ಸ್ವರ್ಗ ಅಲ್ವೇ? ಅಂತಹ ರಮ್ಯ ನಿಸರ್ಗದ ನಡುವೆ ನಾವಿದ್ದರೆ ಅದೇ ಸ್ವರ್ಗ. ಅಂತಹ ಸ್ವರ್ಗ ಸಿಗಲಿ ಎಂದು ಬಯಸುವ ನಾವು ಅದನ್ನು ನಾಶ ಮಾಡುತ್ತಿದ್ದೇವೆಯೇ ಹೊರತು "ಕಾಡು ಬೆಳೆಸಿ, ನಾಡು ಉಳಿಸಿ" ಎಂದು ಇತರರಿಗೆ ಕರೆ ಕೊಡುವ ಬದಲು ನಾವೇ ಕೆಡಿಸಿ, ಕಾಂಕ್ರೀಟ್ ಕಾಡು ಬೆಳೆಯುತ್ತಿದ್ದೇವೆ ಅಲ್ಲವೇ?

ಕಾಡು ನಾಶವಾದರೆ ಮನುಕುಲವೂ ನಾಶ. ಇದು ನಮಗೆಲ್ಲ ತಿಳಿದ ವಿಚಾರ. ಆದರೂ ಮನುಕುಲ ನಾಶ ಆಗಬಾರದು ಎಂದು ನಾವು ರಸ್ತೆ ಅಗಲೀಕರಣ ನಿಲ್ಲಿಸಿದ್ದೇವೆಯೆ? ಮನೆ ಕಟ್ಟುವುದು ಕಡಿಮೆ ಮಾಡಿದ್ದೇವೆಯೆ? ಹೊಸ ಹೊಸ ಕಾರ್ಖಾನೆಗಳನ್ನು ತೆರೆಯುವುದನ್ನು ಕಡಿಮೆಗೊಳಿಸಿದ್ದೇವೆಯೇ?  ರಾಸಾಯನಿಕಗಳನ್ನು ಧರೆಗೆ ಸುರಿಯುವುದನ್ನು, ಪ್ಲಾಸ್ಟಿಕ್ ಫೈಬರ್ ವಸ್ತುಗಳನ್ನು ಕಂಡ ಕಂಡಲ್ಲಿ ಎಸೆಯುವುದನ್ನು ಬಿಟ್ಟು ಬಿಟ್ಟಿದ್ದೇವೆಯೇ?  ಉಪಯೋಗಿಸಿ ಎಸೆವ ಪ್ಲಾಸ್ಟಿಕ್ ವಸ್ತುಗಳ ಬ್ಯಾನ್ ಇದ್ದರೂ ನಾವು ಅವುಗಳ ಬಳಕೆ ತೊರೆದಿದ್ದೇವೆಯೇ? ಹಾಗಾದರೆ ಒಳ್ಳೆಯ ಕೆಲಸ ಯಾವುದೂ ಮಾಡದೆ ಕಾಡು ನಾಶ ಆಗಬಾರದು ಎನ್ನುವುದು ಯಾವ ನ್ಯಾಯ? ನೀವೇ ಹೇಳಿ..

ಕಾಡು ಹೇಗೆಲ್ಲಾ ನಾಶವಾಗುತ್ತದೆ ನೋಡೋಣ..ಚಿಕ್ಕ ಮಗುವೊಂದು ಸಣ್ಣ ಚಾಕು ಹಿಡಿದು ಮನೆಯ ಬಳಿ ನೆಟ್ಟ ಮಾವಿನ ಗಿಡವನ್ನು ಗೊತ್ತಿಲ್ಲದೆ ಕಡಿಯುವುದರಿಂದ ಹಿಡಿದು, ರಸ್ತೆ ಅಗಲೀಕರಣಕ್ಕೆ ಉರುಳಿಸುವ ಸಾಲು ಸಾಲು ಹೆಮ್ಮರಗಳವರೆಗೆ, ಕಾರ್ಖಾನೆ, ಮನೆ ಕಟ್ಟಲು, ಜಾಗವನ್ನು ಸಮತಟ್ಟುಗೊಳಿಸುವಲ್ಲಿ ಕಾಡು ನಾಶ ಅಪಾರ. ಜಾಗಗಳ ಕನ್ವರ್ ಶೇಷನ್ ಗಾಗಿ ಸಮತಟ್ಟುಗೊಳಿಸುವುದು ಅಲ್ಲಿರುವ ಎಲ್ಲಾ ಮರಗಳ ನಾಶ, ಇದ್ದ ಮರಗಳ ಕಡಿದು ದುಡ್ಡು ಮಾಡುವವರೂ ಇದ್ದಾರೆ. ಮನೆಯ ಸುತ್ತ ಮುತ್ತ ಇರುವ ಜಾಗಗಳಲ್ಲಿ ಇದ್ದ  ಮರಗಳನ್ನು ಕತ್ತರಿಸದೆ, ಹಾಗೆಯೇ ಬಿಟ್ಟರೆ ಒಳ್ಳೆಯದು ಅಲ್ಲವೇ?

ಕಾಡು ಅಳಿದರೆ ಮನುಕುಲದ ನಾಶ ಹೇಗೆ ಆಗುತ್ತದೆ ಎನ್ನುವ ವಿಚಾರ. ಕಾಡು ಕಡಿದ ಕೂಡಲೇ ಪರಿಸರಕ್ಕೆ ಶುದ್ಧ ಆಮ್ಲಜನಕದ ಪ್ರವಾಹ ಕಡಿಮೆ ಆಗುತ್ತದೆ. ಮನುಜ ಜನಸಂಖ್ಯಾ ಸ್ಪೋಟದಲ್ಲಿ ಮುಂದಿರುವ ಕಾರಣ ಎಲ್ಲರಿಗೂ ಬೇಕಾದ ಜೀವ ವಾಯುವಿನ ಪ್ರಮಾಣ ಕಡಿಮೆ ಆದರೆ ಜನ ಉಸಿರು ಕಟ್ಟಿಯೇ ಸಾಯುತ್ತಾರೆ ದಿಟ. ಅಲ್ಲದೆ ಈಗೀಗ ಎಲ್ಲರಿಗೂ ಉಸಿರುಗಟ್ಟುವ ಖಾಯಿಲೆ ಪ್ರಾರಂಭ ಆಗಿದೆ. ಅಲ್ಲೂ ಮಾನವ ಜನಾಂಗಕ್ಕೆ ಸಾವು.

ಇನ್ನು ಮರಗಳನ್ನು ಧರೆಗೆ ಉರುಳಿಸುವುದರಿಂದ ಮೋಡಗಳನ್ನು ತಡೆದು ಮಳೆ ಸುರಿಸುವವರು ಯಾರು? ಮೋಡಗಳು ಇಲ್ಲದೆ ಮಳೆ ಇಲ್ಲ, ಮಳೆ ಬಾರದೆ ಇದ್ದರೆ ಬೆಳೆ ಇಲ್ಲ, ಬೆಳೆ ಇಲ್ಲದೇ ಇದ್ದರೆ ರಾಷ್ಟ್ರ ಬಡವಾಗುತ್ತದೆ. ಶ್ರೀಲಂಕಾ, ಬ್ರಿಟನ್ ದೇಶಗಳ ಪರಿಸ್ಥಿತಿ ಆಗಿದ್ದೂ ಕೂಡಾ ಹೀಗೆಯೇ. ಯಾವಾಗ ತಿನ್ನುವ ಆಹಾರಕ್ಕೆ ಕುತ್ತು ಬರುವುದೋ ಆಗ ಜನ ಮಹಾ ಸ್ವಾರ್ಥಿಗಳಾಗುತ್ತಾರೆ. ಸಿಕ್ಕಿದ್ದೆಲ್ಲಾ ತಿನ್ನುವ, ನುಂಗುವ ರಕ್ಕಾದರಾಗುತ್ತಾರೆ! ಈಗಂತೂ ಮಾನವ ಮಾಂಸ ತಿನ್ನಲು ಕೂಡಾ ಹೇಸದವರಾಗಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಘಟನೆ ನಿಮಗೆ ಗೊತ್ತಿರಬಹುದು ಅಲ್ಲವೇ?

ನಾವು, ಇತರ ಪ್ರಾಣಿಗಳು ಪರಿಸರಕ್ಕೆ ಬಿಡುವ ಇಂಗಾಲದ ಡೈ ಆಕ್ಸೈಡನ್ನು ವಾತಾವರಣದಲ್ಲಿ ಶುದ್ಧ ಮಾಡಿ ಕೊಡುವುದು ಮರಗಳು. ನಾವು ಮರಗಳನ್ನೇ ಕಡಿದು ಮನೆಯ ಅಂಗಳ ಸ್ವಚ್ಚ ಆಯಿತು ಎಂದು ಬೀಗುತ್ತೇವೆ. ಹಾಗಾದರೆ ನಾವು ಮಾಡುವುದು ಸರಿಯೇ? ನಮ್ಮ ಕಾಲಿಗೆ ನಾವೇ ಕೊಡಲಿ ಹಾಕಿಕೊಳ್ಳುವುದು ಅಲ್ಲವೇ? ಸಾಲು ಮರದ ತಿಮ್ಮಕ್ಕನ ಹೊಗಳಿ ಬಹುಮಾನ ಕೊಡೋದು ಏಕೆ ಎಂದು ಈಗಲಾದರೂ ಗೊತ್ತಾಗಿರಬೇಕು. ಅವರ ನಂತರ ಆ ರೀತಿಯ ಕಾರ್ಯ ಮಾಡುವವರು ಯಾರು? ನಮ್ಮನ್ನು ನಾವೇ ಸಾಕಿಕೊಳ್ಳ ಬೇಕು ಎಂದಾದರೆ ಗಿಡಗಳನ್ನೂ ಮರಗಳನ್ನು ನಾವೇ ಬೆಳೆಸಬೇಕು ಅಲ್ಲವೇ?

ಕಾಡು ಬೆಳೆದರೆ ಹಾಡುತ್ತಾ ಉಣ್ಣಬಹುದು ಎಂದು ಹಿರಿಯರು ಗಾದೆ ಕಟ್ಟಿ ಇಟ್ಟದ್ದು ಸ್ವಂತ ಅನುಭವಗಳಿಂದ ಕಲಿತ ಪಾಠ ಅಲ್ಲವೇ? ಕಾಡಿದ್ದರೆ ಬದುಕು. ಆಹಾರ ಸರಪಣಿ, ಪರಿಸರದ ಸರಪಣಿ ಬದುಕು ಸರಿಯಾಗಿ ನಡೆಯ ಬೇಕಾದರೆ ಕಾಡು ಬೇಕು. ಅರಣ್ಯ ನಾಶ ಹೆಚ್ಚಾದಂತೆ ನಮ್ಮ ಆಯುಷ್ಯವು ಕಡಿಮೆಯಾಗುತ್ತಾ ಹೋಗುತ್ತದೆ. ಅಂದರೆ ಅರಣ್ಯ ಕಡಿಮೆಯಾದ ಹಾಗೆ ಬದುಕೂ ಕಡಿಮೆ. ಆರೋಗ್ಯ ಬೇಕಾದರೆ ಕೋಟಿ ಹಣ ಸುರಿಯಬೇಕು ಇಲ್ಲವೇ ಗಿಡಗಳನ್ನೂ ಮರಗಳನ್ನು ಬೆಳೆಸಬೇಕು. ಮನೆಗೊಂದು ಮಗು, ಊರಿಗೊಂದು ವನ. ಕಾಡಿಲ್ಲದೆ ಇದ್ದರೆ ನಾಡೇ ಇಲ್ಲ ಅಲ್ಲವೇ?

ಗಿಡ ಮರಗಳ ನಾಶ ನಮ್ಮೆಲ್ಲರ ನಾಶ. ನಾವು ತಿಂದ ಹಣ್ಣುಗಳ ಬೀಜಗಳನ್ನು ಜಾಗ ಇರುವೆಡೆ ಎಲ್ಲಾ ಬಿತ್ತೋಣ. ಹೆಚ್ಚು ಹೆಚ್ಚು ಮರಗಳು ಬೆಳೆಯಲು ನಮ್ಮ ಕೈವಾಡ ಭೂಮಿ ಮೇಲಿರಲಿ. ಅದು ಬೆಳೆದು ದೊಡ್ಡದಾದರೆ ಆರೋಗ್ಯದ ಉಡುಗೊರೆ, ಅದೇ ದೊಡ್ಡ ಬಹುಮಾನ! ಈಗಂತೂ ಡಾಕ್ಟರ್ ಹಾಗೂ ಆಸ್ಪತ್ರೆಗಳ ಬಿಲ್ಲು ಲಕ್ಷಕ್ಕೆರಿದೆ. ದುಡಿದ ಹಣವೆಲ್ಲ ಬದುಕಲ್ಲಿ ಒಮ್ಮೆಗೇ ಆಸ್ಪತ್ರೆಗೆ ಸುರಿದು ಬರುವಷ್ಟು ನಮ್ಮ ವೈದ್ಯಕೀಯ ಸೇವೆಗಳು ದುಬಾರಿ ಆಗಿವೆ. ಆದ್ದರಿಂದ ನಮ್ಮನ್ನು ನಾವೇ ನಾಶ ಮಾಡಿಕೊಳ್ಳದೆ ಗಿಡ ಮರಗಳನ್ನು ಬದುಕಿಸಿ ನಾವೂ ಬದುಕೋಣ. ನೀವೇನಂತೀರಿ?
@ಹನಿಬಿಂದು@
01.11.2022

ಒಂದಿಷ್ಟು ರಿಲಾಕ್ಸ್ ತಗೊಳ್ಳಿ -156

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -156

      ಇಂದು ಕನ್ನಡ ಸಾಹಿತ್ಯವೇನೂ ಮೂಲೆಗುಂಪಾಗಿ ಉಳಿದಿಲ್ಲ. ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ ಆದರೂ ಕನ್ನಡದಲ್ಲಿ ಬರೆಯುವವರ ಸಂಖ್ಯೆ ಖಂಡಿತಾ ಹೆಚ್ಚಿದೆ. ಸಾಮಾಜಿಕ ಜಾಲ ತಾಣಗಳು, ಪ್ರತಿಲಿಪಿ, ಬ್ಲಾಗರ್, ಕೂ, ವಾಟ್ಸ್ ಆ್ಯಪ್, ಮುಖ ಪುಟ, ಇನ್ ಸ್ಟಾ ಎಲ್ಲಾ ಆ್ಯಪ್ ಗಳಲ್ಲಿಯೂ ಗೂಗಲ್ ನಲ್ಲಿಯೂ ನಾವು ಕನ್ನಡ ಬರಹ, ಕವನ ಕೋಟ್ ಗಳನ್ನು, ಸಂದೇಶಗಳನ್ನು ಕಾಣಬಹುದು. ಹಾಗೆಯೇ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕವನ, ಕಾದಂಬರಿ, ನೀಳ್ಗತೆ, ಕಥನ ಕವನ, ಅಲಂಕಾರಗಳು, ಛಂದಸ್ಸಿನ ಬಳಕೆ, ಹನಿಗವನ, ಮಿನಿ ಕತೆ, ಹಾಯ್ಕು, ಚುಟುಕು, ಷಟ್ಪದಿ, ಟಂಕಾ , ಗಝಲ್, ಮುಕ್ತಕ.. ಹೀಗೆ ಎಲ್ಲವೂ ಬಳಕೆಯಲ್ಲಿವೆ. ಹಾಗಾಗಿ ಪ್ರತಿ ದಿನ ಲಕ್ಷಕ್ಕಿಂತಲೂ ಹೆಚ್ಚಿನ ಬರವಣಿಗೆಗಳು ಕನ್ನಡದಲ್ಲಿ ಬಿತ್ತರವಾಗುತ್ತಿವೆ. 

ಭಿನ್ನತೆ ಏನೆಂದರೆ ಹಿಂದಿನ ಕಾಲದಲ್ಲಿ ಬರವಣಿಗೆ ಓದನ್ನು ಅವಲಂಬಿಸಿ ಇತ್ತು. ಕಿರಿಯ ಸಾಹಿತಿಗಳು ಹಿರಿಯ ಸಾಹಿತಿಗಳನ್ನು ಓದುತ್ತಿದ್ದರು, ಅವರ ಕವನಗಳನ್ನು ಕೇಳುತ್ತಿದ್ದರು. ಇಂದು ಓದುಗರು ಇಲ್ಲ ಎಂದಲ್ಲ. ನಮಗೆ ಬೇಕಾದುದನ್ನು ಕೈಯಲ್ಲಿ ಇರುವ ಮೊಬೈಲ್ ನಿಂದ ಸುಲಭವಾಗಿ ಪಡೆಯಬಹುದು ಎಂದಾಗುವಾಗ ಐದಾರು ಕಿಲೋ ಮೀಟರ್ ದೂರ ಇರುವ ವಾಚನಾಲಯ ಹುಡುಕಿಕೊಂಡು ಯಾರು ಹೋಗ್ತಾರೆ? ಮೊಬೈಲ್ ಆನ್ಲೈನ್ ಓದುಗರು ಹೆಚ್ಚಾಗಿದ್ದಾರೆ. ಆನ್ಲೈನ್ ಲೈಬ್ರರಿ ಇದೆ, ಗೂಗಲ್ ಇದೆ, ಬೇರೆ ಬೇರೆ ಭಾಷೆಯ ಸಾಹಿತ್ಯವನ್ನು ಕನ್ನಡಕ್ಕೆ ಬದಲಾಯಿಸಿ ಕೊಡುತ್ತದೆ. ಹೊಸ ಹೊಸ ಶಬ್ದ ಪ್ರಯೋಗ, ಶೈಲಿ ಪ್ರಯೋಗ ಮಾಡಬಹುದಾಗಿದೆ. ಹಾಗಾಗಿ ಇಂದು ಯುವ ಜನತೆಯಲ್ಲಿ ಪುಸ್ತಕ ಓದುವ ಹವ್ಯಾಸ ಮೊದಲಿನವರಿಗಿಂತ ಭಾರತದಲ್ಲಿ ಕಡಿಮೆ ಆಗಿದೆ. 

ಹಾಗಾಗಿ ಬಂದ ಸಾಹಿತ್ಯದಲ್ಲಿ ಅನುಭವಗಳು ಹೆಚ್ಚಾಗಿವೆ, ಪದ ಸಂಪತ್ತು ಕಡಿಮೆಯಾಗಿವೆ, ಗಟ್ಟಿತನ ಕಡಿಮೆಯಾಗಿ, ಟೊಳ್ಳುತನ ಹೆಚ್ಚಾಗಿದೆ. ಹಿಂದಿನ ಸಾಹಿತಿಗಳೂ ಬರೆದ ಎಲ್ಲವನ್ನೂ ನಾವು ನೆನಪಿಡಲಾರೆವು. ಆದರೆ ಗಟ್ಟಿತನ ಇತ್ತು. ಕವಿಗಳ ಸoಖ್ಯೆ ಕಡಿಮೆ ಇತ್ತು. ಇಂದು ಕವಿಗಳು ಎನ್ನುವ ಪದಕ್ಕೆ ಬೆಲೆ ಇಲ್ಲದಂತೆ ಆಗಿದೆ. ಕಾರಣ ಸಾಮಾಜಿಕ ಜಾಲ ತಾಣದಲ್ಲಿ ಸಿಗುವ ಹತ್ತಾರು ಕವಿಗಳ ಎರಡೆರಡು ಸಾಲನ್ನು ಕದ್ದು ತಾನು ಕವಿ ಅಂದುಕೊಂಡು ಮೆರೆಯುತ್ತಿರುವ ಅದೆಷ್ಟೋ ಜನರಿದ್ದಾರೆ. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು, ಒಂದು ಕವನ ಬರೆದು ಅದನ್ನೇ ಹಲವಾರು ಕವಿ ಗೋಷ್ಠಿಗಳಲ್ಲಿ ಓದಿ ಕವಿಗೋಷ್ಠಿಯ ಅಧ್ಯಕ್ಷರಾದವರೂ ಇದ್ದಾರೆ. ಹಾಗೆಯೇ ಕುವೆಂಪು, ಬೇಂದ್ರೆ, ಗೋಕಾಕ ಹೀಗೆ ಹಿರಿಯ ಕವಿಗಳ ಪುಸ್ತಕಗಳನ್ನು ಅರೆದು ಕುಡಿದವರು ಕೂಡಾ ಇದ್ದಾರೆ. ಎಲ್ಲಾ ಷಟ್ಪದಿಗಳಲ್ಲಿ ಕವನ, ಕಾವ್ಯ ಬರೆದು ಎಲ್ಲೂ ಗುರುತಿಸಿಕೊಳ್ಳದ ಮಹಾನುಭಾವರು ಇದ್ದಾರೆ, ಹಾಗೆಯೇ ಯಾರೋ ಬರೆದು ಕೊಟ್ಟ ಒಂದು ಕವನವನ್ನು ಹಿಡಿದುಕೊಂಡು ಇಡೀ ರಾಜ್ಯದಲ್ಲಿ ಐವತ್ತು ಕವಿಗೋಷ್ಠಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಯುವ ಕವಿಗಳೂ ಇದ್ದಾರೆ. 

ಕನ್ನಡ ಉಳಿಯಲು, ಬೆಳೆಯಲು ಯುವ ಕವಿ ಮನಸ್ಸುಗಳು ಅಗತ್ಯ, ಆದರೆ ತಮ್ಮ ಕವನ ಮಾತ್ರ ಓದಿ ಕಾಲು ಕೀಳುವುದು ತಪ್ಪು, ಇತರರ ಕವನಗಳಿಗೂ ಕಿವಿಯಾಗಬೇಕು. ಹಲವು ಕಡೆ, ಅದರಲ್ಲೂ ಹೆಚ್ಚಾಗಿ ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಉತ್ತಮ ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿವೆ. ಕನ್ನಡ ಕೃಷಿ ಅಲ್ಲಿ ತುಂಬಾ ಚೆನ್ನಾಗಿ ಸಾಗಿದೆ. ಎಲ್ಲಾ ಕವಿ ಮನಸುಗಳೂ ಪರಸ್ಪರ ಗೌರವಿಸಿ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾರೆ. ಆದರೆ ಕೆಲವು ಕಡೆ ತಾನೇ ಮೇಲಿರಬೇಕು ಎಂಬ ಅಹಂ ಕಾಣ ಸಿಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಕ್ಕೆ ಎಲ್ಲರೂ ಇಂದು ಕಾದು ಕುಳಿತಿಲ್ಲ. ಕಾರಣ ಅಲ್ಲಿ ಸಿಗುವ ಅವಕಾಶ ಕಡಿಮೆ. ಹಾಗಾಗಿ ತಮ್ಮ ತಮ್ಮ ಪುಸ್ತಕ ಬಿಡುಗಡೆ ಮಾಡುವಾಗ ವಿವಿಧ ಕವಿಗಳು ತಾವೇ ಕವಿಗೋಷ್ಠಿ, ಪ್ರಶಸ್ತಿ ಪ್ರಧಾನ, ಸಂಘಟನೆ ಮಾಡಿ ಅಲ್ಲಿ ಹಲವಾರು ಯುವ ಕವಿಗಳನ್ನು ಪ್ರೋತ್ಸಾಹಿಸುತ್ತಾರೆ. ಹಣ ಇರುವವರಿಗೆ ಅದು ಒಂದು ಪ್ರಶಸ್ತಿಯ ವೇದಿಕೆ ಕೂಡಾ ಆಗುತ್ತದೆ. ಇನ್ನೂ ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಕವಿಗಳ ಸಾವಿರಾರು ಗುಂಪುಗಳಿವೆ. ಅದರಲ್ಲಿ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರು ಎಲ್ಲಾ ಸೇರಿ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಾರೆ. ಕೆಲವು ಗುಂಪುಗಳ ಮನೆ ಮನೆ ಕವಿಗೋಷ್ಠಿ (ಹಾಸನ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿದೆ) , ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕಿನ ತಿಂಗಳ ಕಾರ್ಯಕ್ರಮ, ಪುತ್ತೂರಿನಲ್ಲಿ ನಡೆಯುವ ಹಳ್ಳಿ ಹಳ್ಳಿ, ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮ, ಸುಳ್ಯದಲ್ಲಿ ನಡೆಯುವ ಶಿಕ್ಷಕರ ಕವಿಗೋಷ್ಠಿ, ಉತ್ತರ ಕರ್ನಾಟಕದಲ್ಲಿನ ಗಝಲ್ ಗೋಷ್ಠಿಗಳು, ಚುಟುಕು ಗೋಷ್ಠಿಗಳು, ಇಂದು ಸಾಹಿತಿ ಹಾಗೂ ಕವಿಗಳಿಗೆ ಉತ್ತೇಜನ ನೀಡುತ್ತಿವೆ. 

ಮುಕ್ತವಾಗಿ ಬರೆಯುವ ಮುಕ್ತ ಛಂದಸ್ಸು ಒಂದೆಡೆ, ಮಾಡರ್ನ್ ಕವನಗಳು, ಅಲ್ಟ್ರಾ ಮಾಡರ್ನ್ ಕವನಗಳು, ಭಕ್ತಿ ಸಾಹಿತ್ಯ, ವಿಮರ್ಶೆಗಳು, ದಶಕಗಳು, ಹನಿಗವನ, ನ್ಯಾನೋ ಕತೆ ಯಾವ ವಿಷಯದಲ್ಲಿ ಯುವ ಜನತೆ ಹಿಂದೆ ಬಿದ್ದಿದೆ ಹೇಳಿ? ಕಟ್ಟೆ ಒಡೆದು ಹರಿಯುವ ನದಿಗೆ ದಾರಿ ಬೇಕಾಗಿದೆ ಅಷ್ಟೇ.ಆ ದಾರಿಯನ್ನು ಹಿರಿಯ ಕವಿಗಳು ತೋರಿಸಿ ಕೊಟ್ಟಿದ್ದಾರೆ. ಅವಕಾಶ ಸಿಕ್ಕಿದಾಗ ಬಳಸಿಕೊಳ್ಳುವ ತಾಳ್ಮೆ, ಸಹನೆ, ಇತರರನ್ನು ಬೆಳೆಸುವ ಗುಣ ಯುವ ಕವಿಗಳಲ್ಲೂ ಬೇಕು, ಕೆಲವರಲ್ಲಿ ಇದೆ ಕೂಡಾ. ಒಟ್ಟಿನಲ್ಲಿ ಯುವ ಜನತೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿದಿರುವಾಗ ಕನ್ನಡವನ್ನು ಮರೆಯುವರೇ?

ಯುವ ಜನತೆ ಸಾಮಾಜಿಕ ಜಾಲ ತಾಣಗಳಿಗೆ ತಮ್ಮ ಸಮಯ ಮೀಸಲಿಟ್ಟು ಕೆಲಸ ಮರೆತಿರುವುದು ಒಂದು ಕಡೆ ಆದರೆ ಹಲವಾರು ಯುವ ಕವಿಗಳು ಕನ್ನಡದ ಸೇವೆಗೆ ಕಾಲಿಟ್ಟಿರುವುದು ಸಂತಸದ ಸಂಗತಿ. ಪ್ರತಿನಿತ್ಯ ಹಲವಾರು ಹೊಸ ಕವಿಗಳಿಗೆ ಪ್ರೋತ್ಸಾಹ ನೀಡಿ, ಅವರ ಕವನಗಳ ವಿಮರ್ಶೆ ಮಾಡಿ, ಬೇರೆ ಬೇರೆ ಪ್ರಕಾರಗಳಲ್ಲಿ ಅವರಿಗೆ ಬರೆಯಲು ಉತ್ತೇಜನ ನೀಡಿ, ಯುವ ಕವಿಗಳನ್ನು ಬೆಳೆಸುವ ಗುಂಪುಗಳು ಹಾಗೂ ಕವಿ ಮನಗಳು ಹಲವಾರು ಇವೆ. ಕನ್ನಡ ಸಾಯದು. ಕನ್ನಡಕ್ಕೆ ಅಗಾಧತೆ ಖಂಡಿತಾ ಇದೆ. 
ಯುವ ಮನಸ್ಸುಗಳು ಮತ್ತು ಕನ್ನಡ ಸಾಹಿತ್ಯದ ಬಗ್ಗೆ ನಾನು ಬರೆಯುವಾಗ ಕ್ಲಬ್ ಹೌಸ್ ಆಪ್ ನ ಬಗ್ಗೆ ಹೇಳಲೇ ಬೇಕು. ಅಲ್ಲಿ ಪ್ರತಿ ನಿತ್ಯ ಹಲವಾರು ಗುಂಪುಗಳಲ್ಲಿ ಕವಿ ಗೋಷ್ಠಿ, ವಿವಿಧ ಕವಿಗಳ ನಾಟಕ, ಕಾದಂಬರಿ, ಕವನ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳ ಓದು, ವಿಮರ್ಶೆ ನಡೆಯುತ್ತಲೇ ಇದೆ. ಯುವ ಜನತೆ ದಡ್ಡರಲ್ಲ, ಆದರೆ ಸಮಯದ ಜೊತೆ ಓಡುವವರು ಹಾಗೆ ಓಡುವಾಗ ಓದುವುದ ಮರೆಯದವರು. 

ಇಂದು ಒಬ್ಬ ವ್ಯಕ್ತಿ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ ಕಾರಣ ಒಂದೇ ಕ್ಷೇತ್ರದಲ್ಲಿ ಹೆಚ್ಚು ನೈಪುಣ್ಯತೆ ಪಡೆಯುವುದು ಕಷ್ಟ. ಹೆಚ್ಚಿನ ಕವಿಗಳು ಪ್ರವೃತ್ತಿಯಲ್ಲಿ ಕವಿಗಳು. ವೃತ್ತಿಯಲ್ಲಿ ಕವಿಗಳಾಗಿ ಬದುಕುವುದು ಕಷ್ಟ. ಹಾಗಿದ್ದರೆ ಅವನು ಸಂಘಟಕನಾಗ ಬೇಕಾಗುತ್ತದೆ. ಅದನ್ನೂ ಮಾಡುತ್ತಿದ್ದಾರೆ. ದೂರದರ್ಶನ, ರೇಡಿಯೋಗಳಲ್ಲಿಯೂ ಯುವಜನತೆ ಹಿಂದೆ ಬಿದ್ದಿಲ್ಲ. ಪ್ರತಿ ದಿನ ಹೊಸ ಹೊಸ ಸಾಹಿತ್ಯ ಪ್ರಕಾರಗಳ ನವ ನವೀನ  ಪುಸ್ತಕಗಳು  ಪ್ರಕಟಣೆಗೊಂಡು ಬಿಡುಗಡೆ ಆಗುತ್ತಲೇ ಇವೆ. 

ಯುವ ಜನತೆ ಸಾಹಿತ್ಯದ ಮಜಲು, ವಿಸ್ತಾರ, ಆಳ ಅರಿವನ್ನು ಅರಿತವರು ಕೂಡಾ ಇದ್ದಾರೆ. ಯಾವ ಕ್ಷೇತ್ರದಲ್ಲಿ ಕಡಿಮೆ ಹೇಳಿ ಇಂದಿನ ಓಟ? ಕರ್ನಾಟಕ ಯಾವ ವಿಭಾಗದಲ್ಲೂ ಹಿಂದೆ ಬಿದ್ದಿಲ್ಲ. ಸಾಹಿತ್ಯ ಕ್ಷೇತ್ರದಲ್ಲೂ ಅಷ್ಟೇ. ತುಳು ಸಾಹಿತ್ಯವನ್ನೂ ಯುವ ಜನತೆ ಬಿಟ್ಟು ಕೊಟ್ಟಿಲ್ಲ. ಪುಸ್ತಕಗಳು ತುಳುವಿನ ವಿವಿಧ ಪ್ರಕಾರಗಳಲ್ಲೂ ಬಿಡುಗಡೆ ಆಗುತ್ತಲೇ ಇವೆ. ಕೊಂಕಣಿ, ಬ್ಯಾರಿ ಭಾಷಾ ಸಾಹಿತ್ಯ, ಹವಿಗನ್ನಡ, ಅರೆ ಭಾಷೆ, ಗಡಿ ನಾಡುಗಳಲ್ಲಿ ಮರಾಠಿ, ತಮಿಳು, ಮಲಯಾಳಂ, ತೆಲುಗು ಸಾಹಿತ್ಯ ಕೂಡಾ ಕನ್ನಡಿಗ ಯುವ ಸಾಹಿತಿಗಳಿಂದ ಬೆಳೆಯುತ್ತಿದೆ ಎಂದ ಮೇಲೆ ಕನ್ನಡ ಸಾಹಿತ್ಯವನ್ನು ಯುವ ಮನಸ್ಸುಗಳು ಮರೆಯುವವೇ?

ಯುವ ಕವಿಗಳ ಮಾಡರ್ನ್, ಅಲ್ಟ್ರಾ ಮಾಡರ್ನ್ ಕವನಗಳು, ದಶಕಗಳು, ಚುಟುಕುಗಳು, ಮುಕ್ತ ಛಂದಸ್ಸಿನ ವಿವಿಧ ಸಾಹಿತ್ಯ ಪ್ರಕಾರಗಳು, ಉರ್ದುವಿನಿಂದ ಬಂದ ಗಝಲ್, ಶಾಯರಿಗಳು, ಮುಕ್ತಕಗಳ ಸಾಲುಗಳು, ಹೊಸ ಹೊಸ ಪ್ರಯೋಗಗಳು ಎಷ್ಟು ಚೆನ್ನಾಗಿ ಮೂಡಿ ಬರುತ್ತಿವೆಯೋ, ಹಿರಿಯರಿಂದಲೂ ಕೇಳಿ ಯುವ ಮನಸ್ಸುಗಳು ಜ್ಞಾನ ಪಡೆದುಕೊಳ್ಳುತ್ತಿವೆ. ಪ್ರತಿ ಕವಿಗೋಷ್ಠಿಯಲ್ಲಿಯೂ ಹಿರಿಯ, ಕಿರಿಯ ಸಾಹಿತಿಗಳಿಗೆ, ಯುವ ಮನಸ್ಸುಗಳಿಗೆ ಕೂಡಾ ಅವಕಾಶ ಕೊಡಲಾಗುತ್ತದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ವಯಸ್ಸು ಅದಕ್ಕೆ ಅಡ್ಡಿ ಆಗದು. ಕಲಿಕೆ ಬೇಕು, ಕೇಳುವ ಕಿವಿ ತೆರೆದಿರಬೇಕು, ನೋಡುವ ನೋಟ ಚೆನ್ನಾಗಿ ಇರಬೇಕು. ಬರವಣಿಗೆ ಪಕ್ವವಾಗಿ ಇರಬೇಕು. ಆರಂಭಿಸಿದರೆ ಅನುಭವ ತಾನೇ ತಾನಾಗಿ ಬರುತ್ತದೆ. ಹುಟ್ಟುತ್ತಲೇ ಯಾರೂ ಎಲ್ಲವನ್ನೂ ಪಡೆದುಕೊಂಡು ಬಂದವರಲ್ಲ, ಕಲಿಕೆ, ವಿದ್ಯಾರ್ಥಿಯ ಮನಸ್ಸು, ಗೌರವದ ನಡತೆ ಯಾವ ಯುವ ಜನತೆಯನ್ನು ಸಾಹಿತ್ಯದಲ್ಲಿ ಎಷ್ಟು ಎತ್ತರಕ್ಕೆ ಬೇಕಾದರೂ ಕೊಂಡೊಯ್ಯಬಹುದು. ಕಲಿಕೆಯ ತೀವ್ರತೆ, ಬರೆಯುವ ಹಂಬಲ , ಸಾಮರ್ಥ್ಯ ಇರಬೇಕು ಅಷ್ಟೇ.ಪದ ಲಾಲಿತ್ಯ, ಭಾವನೆ, ವ್ಯಕ್ತಪಡಿಸುವ ರೀತಿ ಉತ್ತಮ ಮಟ್ಟದ್ದಾಗಿದ್ದರೆ ಯಾವ ಯುವ ಸಾಹಿತಿಯೂ ಗುರುತಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾನೆ ಅಲ್ಲವೇ?

ನಮ್ಮ ಭಾಷೆ ನಮ್ಮ ಹೆಮ್ಮೆ. ಅವಕಾಶ ಸಿಗಬೇಕು ಅಷ್ಟೇ. ಚಿಗುರುವ ಚಿಗುರನ್ನು ಹಿರಿಯರು ಚಿವುಟಿ ಹಾಕದಿದ್ದರೆ ಸಾಕು, ಬೆಳೆಯುವ ಕುಡಿಗಳು ಮುಂದೆ ಸಾಗಿಯೇ ಸಾಗುವುವು. ಸ್ವಲ್ಪ ನೀರು ಗೊಬ್ಬರ ಹಾಕುವ ಕಾರ್ಯ ಹಿರಿಯ ಸಾಹಿತಿಗಳಿಂದ ಯುವ ಜನತೆಗೆ ಆಗಬೇಕಿದೆ ಅಷ್ಟೇ. ಕನ್ನಡ ಸಾಹಿತ್ಯವನ್ನು ಅಗಾಧ ಶಕ್ತಿಯ ಯುವಕರು ಮೇಲ್ತುದಿಗೆ ತಂದು ನಿಲ್ಲಿಸುವಲ್ಲಿ ಎರಡು ಮಾತಿಲ್ಲ. ನೀವೇನಂತೀರಿ? 
@ಹನಿಬಿಂದು@
26.10.2022

ಒಂದಿಷ್ಟು ರಿಲಾಕ್ಸ್ ತಗೊಳ್ಳಿ -154

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 154
ಮತದಾನ ನಮ್ಮ ಹಕ್ಕು . ನಾವೆಲ್ಲ ಮತ ಹಾಕಬೇಕು. ಭಾರತದಲ್ಲಿ ಮತ ಹಾಕದವರೂ ಅದೆಷ್ಟೋ ಮಂದಿ ಇದ್ದಾರೆ. ಕೆಲವೊಂದು ಕಷ್ಟಗಳು ಕೂಡಾ ಇದಕ್ಕೆ ಕಾರಣ. ಅಂಚೆ ಮತಗಳಲ್ಲಿ ಕೆಲವೊಮ್ಮೆ ಹಾಕಿದವರ ಸಂಪೂರ್ಣ ಮಾಹಿತಿ ತಿಳಿಯುವುದರಿಂದ ಕಲಿತವರೆ ಹಿಂದೆ ಮುಂದೆ ನೋಡುತ್ತಾರೆ. ಹಾಗಾಗಿ ಪರಿಸ್ಥಿತಿ ಬದಲಾಗುತ್ತದೆ. 

ಮತ ಚಲಾಯಿಸಲು ಯಾವುದಾದರೂ ಒಂದು ಗುರುತಿನ ಪತ್ರ ಬೇಕು. ಅಣ್ಣನ ಗುರುತಿನ ಪತ್ರ ತಂದು ಹದಿನೆಂಟರ ಒಳಗಿನ ತಮ್ಮ ಅದೆಷ್ಟೋ ಬಾರಿ ಮತ ಹಾಕಿ ಹೋಗುತ್ತಾನೆ. ಒಂದೇ ರೀತಿ ಇರುವ ಕಾರಣ ಅವನನ್ನು ಕಂಡು ಹಿಡಿಯುವುದು ಕಷ್ಟ ಸಾಧ್ಯ. ಹಾಗೆಯೇ ಕಣ್ಣಿಲ್ಲದ, ವಯಸ್ಸಾದ ಹಿರಿಯರೊಂದಿಗೆ ಜೊತೆಗಾರರು ಬಂದು ಅವರೇ ಮತದಾನ ಮಾಡಿ ಹೋಗುವುದು. ಕಾರಣ ಹಿರಿಯರಿಗೆ ಕಾಣಿಸದು! 

ಆದರೆ ಇಷ್ಟೊಂದು ಜನಸಂಖ್ಯೆ ಇರುವ ಇಷ್ಟು ದೊಡ್ಡ ದೇಶ ಭಾರತದ ಚುನಾವಣಾ ವ್ಯವಸ್ಥೆಗೆ ತಲೆದೂಗಲೆ ಬೇಕು. ಮತದಾನದ ಕಾರ್ಯ ನಿರ್ವಹಿಸುವ ಶಿಕ್ಷಕರ ಮತ್ತು ಡಿ ದರ್ಜೆ ನೌಕರರ ಕೆಲಸಗಳು, ಎಫ್ ಡಿ ಎ ಮತ್ತು ಎಸ್ ಡಿ ಎ ಗಳ ಕಾರ್ಯಗಳು ನಿಜವಾಗಲೂ ಮೆಚ್ಚ ಬೇಕಾದದ್ದು. ರಾಷ್ರ ಚುನಾವಣಾ ಅಧಿಕಾರಿ, ರಾಜ್ಯ ಚುನಾವಣಾ ಅಧಿಕಾರಿ, ಜಿಲ್ಲಾ, ತಾಲೂಕು, ಗ್ರಾಮ, ಮತಗಟ್ಟೆ ಅಧಿಕಾರಿವರೆಗೂ ಪ್ರತಿಯೊಬ್ಬರ ಪಾತ್ರವೂ ಹಿರಿದಾದುದು. ಪ್ಯಾಕೆಟ್ ನೊಳಗೆ ಬೇಕು ಬೇಕಾದ ವಸ್ತುಗಳನ್ನೆಲ್ಲ ಸರಿಯಾದ ಕ್ರಮದಲ್ಲಿ ತುಂಬಿಸುವ ಕಾರ್ಯವನ್ನು ಕರಾರುವಕ್ಕಾಗಿ ಮಾಡುವುದು, ಪ್ರತಿ ಮತಗಟ್ಟೆಯನ್ನು ನೋಡಿಕೊಳ್ಳುವುದು, ಎಲ್ಲರನ್ನೂ ಫೋನ್ ಮೂಲಕ ಸಂಪರ್ಕಿಸುವುದು ಇವೆಲ್ಲ ಹೊಗಳಬೇಕಾದ ಕಾರ್ಯಗಳೇ. ಒಂದೊಳ್ಳೆ ವ್ಯವಸ್ಥೆಯಲ್ಲಿ ಒಗ್ಗಟ್ಟಿನ ಮಹತ್ವ ಅತಿ ಮುಖ್ಯ ಎಂಬುದನ್ನು ಸಾರುವ ಕಾರ್ಯಗಳಲ್ಲಿ ಇದೂ ಒಂದಾಗಿದೆ. 

ಒಂದು ಬಲಿಷ್ಠ ರಾಷ್ಟ್ರದ ಒಗ್ಗಟ್ಟು, ಶಿಸ್ತು, ಸಂಯಮ ಕಾಪಾಡುತ್ತಾ ಎಲ್ಲಾ ಕೆಲಸಗಳು ಸರಿಯಾಗಿ ನಡೆಯಲು ಆ ರಾಷ್ಟ್ರದ ಭದ್ರತಾ ಸಿಬ್ಬಂದಿ, ಪೊಲೀಸ್ ಇಲಾಖೆ, ಗಡಿ ಭದ್ರತಾ ಪಡೆ, ಸೈನಿಕರು, ಅರೆ ಸೇನಾ ಪಡೆ, ಆಂತರಿಕ ರಕ್ಷಣಾ ಪಡೆಗಳ ಕಾರ್ಯ ಮೆಚ್ಚಬೇಕು ಅಲ್ಲವೇ? ರಕ್ಷಣೆಯ ಮಹತ್ವದ ಜವಾಬ್ದಾರಿ ಅವರದಾಗಿ ಇರುತ್ತದೆ. ಸಿಬ್ಬಂದಿ ಕೊರತೆ ಕಾಣುವಾಗ ಗೃಹ ರಕ್ಷಕ ದಳ, ಎನ್ ಸಿ ಸಿ, ಹೀಗೆ ಎಲ್ಲರೂ ಅವರವರ ಜವಾಬ್ದಾರಿಯನ್ನು ನಿಭಾಯಿಸಿ ಒಟ್ಟಿನಲ್ಲಿ ಕೆಲಸ ಸಾಗುತ್ತದೆ ಅಲ್ಲವೇ?

ಇನ್ನೂ ಇದೆ. ಆರೋಗ್ಯವೇ ಭಾಗ್ಯ. ಮತದಾನದ ಕಾರ್ಯದಲ್ಲೂ ರಾತ್ರಿ ಹಗಲು ಅಲರ್ಟ್ ಆಗಿ ದುಡಿಯುತ್ತಿರುವ ಆರೋಗ್ಯ ಇಲಾಖೆಯ ನೌಕರರು. ಯಾವ ಕ್ಷಣದಲ್ಲಿ ಆಗಲಿ ನಿಮಗೆ ನಾವಿದ್ದೇವೆ ಎಂದು ಬೆನ್ನೆಲುಬಾಗಿ ನಿಂತವರು. ಉತ್ತಮ ಆರೋಗ್ಯಕ್ಕಾಗಿ ಹೋರಾಡುತ್ತಿರುವವರು. ಅವರ ಜೊತೆಗೆ ಸಾರಿಗೆ ಇಲಾಖೆಯ ಡ್ರೈವರ್ ಮತ್ತು ಕಂಡಕ್ಟರ್ ಗಳು. ಪ್ರತಿ ಅಧಿಕಾರಿಯನ್ನು ಕೂಡಾ ಅವರವರ ಜಾಗಕ್ಕೆ ತಲುಪಿಸುವ ಜವಾಬ್ದಾರಿ ಹೊತ್ತವರು. ಮತದಾನ ಮುಗಿಯುವವರೆಗೂ ಕಾದು ಒಟ್ಟಾಗಿ ಪುನಃ ಹಿಂದೆ ಕರೆದುಕೊಂಡು ಬಂದು ನಿಗಧಿತ ಸ್ಥಳದಲ್ಲಿ ಬಿಡುವ ಕಾರ್ಯ ಶ್ಲಾಘನೀಯ. ಅದರ ಜೊತೆ ರೂಟ್ ಆಫೀಸರ್ ಆಗಿ ಕೆಲಸ ಮಾಡುವ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಮತದಾನದ ಕರ್ತವ್ಯಕ್ಕೆ ಬಂದವರಿಗೆ ನಿಷ್ಠೆಯಿಂದ ಹಾಗೂ ಶ್ರದ್ಧೆಯಿಂದ ಅಡುಗೆ ಮಾಡಿ ಬಡಿಸುವ ಶಾಲಾ ಬಿಸಿ ಊಟದ ಸಿಬ್ಬಂದಿಗಳು, ಯಾರೋ ಅಕ್ಕ ಪಕ್ಕದ ಮನೆಯವರು, ಮತದಾನಕ್ಕೆ ಸರಿಯಾದ ಹಾಗೆ ತಮ್ಮ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸುವ ಪ್ರತಿ ಶಾಲೆಯ ಎಸ್ ಡಿ ಎಂ ಸಿ ಸದಸ್ಯರು, ಮುಖ್ಯ ಶಿಕ್ಷಕರು, ಹಾಗೂ ಶಿಕ್ಷಕ ವೃಂದ ಎಲ್ಲರ ಕಾರ್ಯಗಳನ್ನು ನೆನೆದು ಹೆಮ್ಮೆ ಪಡಬೇಕು ನಾವು. 

ಮತದಾನದ ಮುಂಚೆ, ಆ ಸಮಯದಲ್ಲೂ ವಿದ್ಯುತ್ ಸರಬರಾಜಿನ ವ್ಯವಸ್ಥೆ ಕಲ್ಪಿಸುವ ಮೆಸ್ಕಾಂ, ಬೆಸ್ಕಾಂ ನಂತಹ ವಿದ್ಯುತ್ ಸರಬರಾಜು ನಿಗಮದ ಕಾರ್ಯ ವೈಖರಿ, ಪ್ರತಿ ಹಳ್ಳಿ, ಗ್ರಾಮ, ಪಟ್ಟಣ, ಪುರಸಭೆಯ ಪಂಚಾಯತ್ ನ ನೌಕರರು, ನೀರು ಪೂರೈಕೆ, ಆಹಾರ, ತಂಗಲು ವ್ಯವಸ್ಥೆ ಕಲ್ಪಿಸುವವರು ಇವರೆಲ್ಲರೂ ಚುನಾವಣಾ ಕರ್ತವ್ಯದ ಭಾಗಿಗಳೇ! ಇಷ್ಟೆಲ್ಲಾ ತಯಾರಿ ಮಾಡಿ ಮತಗಟ್ಟೆಗೆ ಯಾರೂ ಮತದಾನ ಮಾಡಲು ಬಾರದೆ ಇದ್ದರೆ...?

 ಇದೀಗ ಮತದಾರರ ಪಾತ್ರ. ಹೌದು, ಮತದಾನಕ್ಕೆ ನಾಯಕನ ಸ್ಥಾನಕ್ಕೆ ಸ್ಪರ್ಧಿಸುವ ಜನ ಸೇವಕರಾಗಿ, ಅಳಲು ಬಯಸುವ ಪ್ರತಿಯೊಬ್ಬನೂ ನಮ್ಮ ದೇಶದ ಸಾಮಾನ್ಯ ಪ್ರಜೆ ಮತ್ತು ಸಾಮಾನ್ಯ ಮತದಾರ. ಅವನು ಉತ್ತಮ ಹಾಗೂ ನಾಯಕತ್ವದ ಗುಣಗಳನ್ನು ಹೊಂದಿದ್ದು, ಎಲ್ಲಾ ಜಾತಿ, ಧರ್ಮ, ವರ್ಗದ ಜನರಿಗೂ ಒಳಿತನ್ನು ಬಯಸುವವನಾಗಿದ್ದರೆ ಜನ ಅವನ ಜಾತಿ, ಧರ್ಮ, ವರ್ಗ ನೋಡದೆ ಅವನಿಗೆ ಮತದಾನ ಮಾಡುವರು. ರಾಜಕೀಯ ಪಕ್ಷಗಳು, ಅವುಗಳ ಅಬ್ಬರದ ಪ್ರಚಾರ ಎಷ್ಟೇ ಇರಲಿ, ಮನಸ್ಸುಗಳು ಒಳ್ಳೆಯದಾದರೆ ಜನ ಒಳ್ಳೆಯ ನಾಯಕನನ್ನು ಬೆಂಬಲಿಸುತ್ತಾರೆ ಎನ್ನುವುದು ಸತ್ಯ. ಆದರೆ ಈಗೀಗ ಜನ ಬದಲಾಯಿಸಿದ್ದಾರೆಯೋ ಅಥವಾ ಜಾತಿ, ಧರ್ಮ, ಪಕ್ಷ, ಹಣಗಳಿಂದ ಜನರ ಮನಸ್ಸನ್ನು ಬದಲಾಯಿಸಲಾಗಿದೆಯೋ ತಿಳಿಯದು. ನಾಲ್ಕು ಜನರ ಮುಂದೆ ಶೋಕಿ ಮಾಡಿದವ, ಹಣ ಇದ್ದವ, ಗುಣ ಇಲ್ಲದವ(ಕೆಲವು ಬಾರಿ),  ಚುನಾವಣೆಯಲ್ಲಿ ನಿಲ್ಲಲು ಅರ್ಹತೆ ಇಲ್ಲದವ, ಹೆಣ್ಣುಗಳಿಗೆ ಗೌರವ ಕೊಡದವರೂ ಕೂಡಾ ಹಣದ ಬಲದಿಂದ ಗೆದ್ದು ಮೆರೆಯುತ್ತಿದ್ದಾರೆ. ಅಂಥವರನ್ನು ನೋಡಿದಾಗ ಪ್ರೀತಿ, ಗೌರವ ಉಕ್ಕಿ ಬರುವ ಬದಲು ರೋಷ, ದ್ವೇಷ, ಅವರನ್ನು ಮತ ಹಾಕಿ ಚುನಾಯಿಸಿದ ಪ್ರತಿಯೊಬ್ಬರ ಮೇಲೆ ಹೇಸಿಗೆ ಹುಟ್ಟುತ್ತದೆ. 

ತಮ್ಮ ಅಮೂಲ್ಯ ಮತಗಳನ್ನು ಯಾರು ಯಾರಿಗೆ ಹಾಕಬೇಕು ಎಲ್ಲವನ್ನೂ ಅರಿತು ಸರಿಯಾದ ರೀತಿಯಲ್ಲಿ ಮತದಾನ ಮಾಡುವ ಸ್ವಾತಂತ್ರ್ಯ ಮತದಾರರಿಗೆ ಇದೆ. ಮೊದಲು ಸ್ಪರ್ಧಿಸುವ ಸಮಯದಲ್ಲೇ ಅವರ ಬಗ್ಗೆ ತಿಳಿದು ಒಳ್ಳೆಯ ನಾಯಕನನ್ನು ತಮಗಾಗಿ ಆರಿಸಬೇಕು. ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಜನತೆ ಇದ್ದರೆ ಅವರು ತಮ್ಮ ಕಾಲಿಗೆ ತಾವೇ ಕೊಡಲಿ ಹಾಕಿ ಕೊಂಡಂತೆಯೆ ಸರಿ. ಅಲ್ಲದೆ ದೇಶದ ಮುಂದೆ ಐದು ವರ್ಷಗಳ ಆಡಳಿತ ಚುಕ್ಕಾಣಿಯನ್ನು ಸರಿಯಾದ ನಾಯಕತ್ವದ ಗುಣ ಇರುವ ಭಾರತೀಯನಿಗೆ ನೀಡಬೇಕು. ಅವನು ಭಾರತ ದೇಶವನ್ನು ಪ್ರಪಂಚದಲ್ಲಿ ತಲೆಯೆತ್ತಿ ನೋಡುವಂತೆ ಮಾಡಬೇಕು. ಹೀಗೆ ಇರಬೇಕು. 

ಆದರೆ ಲಂಚ, ಬಡತನ, ಕುಡಿತ, ಹಿಂಸಾಚಾರ, ಹಣಕ್ಕಾಗಿ ಕೊಲೆ, ದರೋಡೆ, ಕಳ್ಳತನ ತಾಂಡವವಾಡುತ್ತಿರುವ ನಮ್ಮ ದೇಶದಲ್ಲಿ ಲಂಚ ಪಡೆದು ಸಿರಿವಂತನಾಗುವವ ದಿನ ನಿತ್ಯ ಶ್ರೀಮಂತನೇ ಆಗುತ್ತಿದ್ದಾನೆ. ಬಡವ ಕುಡಿತ, ಜೂಜು ಮೊದಲಾದ ಕೆಟ್ಟ ಗುಣಗಳಿಂದ ಬಡವನೆ ಆಗುತ್ತಿದ್ದಾನೆ. ಇದರಿಂದ ಆರೋಗ್ಯ ಕೆಡಿಸಿಕೊಂಡು ಉಚಿತ ಆರೋಗ್ಯ ಸಲಹೆ ಕೇಳುತ್ತಾನೆ, ದುಡಿದದ್ದೆಲ್ಲ ಕುಡಿತಕ್ಕೆ ವ್ಯಯಿಸಿ ಸರಕಾರದಿಂದ ಕುಟುಂಬಕ್ಕೆ ಉಚಿತ ಅಕ್ಕಿ, ಬೇಳೆ, ಬಟ್ಟೆ, ಶಿಕ್ಷಣ ಕೇಳುತ್ತಾನೆ. ಇನ್ನೂ ಕೆಲವರು ಅನಾರೋಗ್ಯ ಪೀಡಿತರು, ದುಡಿಯಲು ಆಗದೆ ಇರುವವರು, ಮಕ್ಕಳು ಇವರನ್ನು ದೂರ ಮಾಡಿ ಹೋಗಿರುತ್ತಾರೆ. ಗಂಡ ಸತ್ತು ಕೆಲಸ ಇಲ್ಲದ ವಿಧವೆಯರ ಪಾಲಿಗೆ ವಿಧವಾ ವೇತನ, ವೃದ್ದಾಪ್ಯ ವೇತನ, ಪಡಿತರಗಳು ಸಹಕಾರಿ. ಇವರೆಲ್ಲರೂ ಮತದಾರರೇ. ಇಂತಹ ಬಡವರ ಹಾಗೂ ನಿರ್ಗತಿಕರ ಮತದಾನಗಳೂ ಕೂಡಾ ಮುಖ್ಯವೇ. 

ಉತ್ತಮ ನಾಯಕನನ್ನು ಪಡೆಯುವುದು, ಮತದಾನದ ಮೂಲಕ ಅವನನ್ನೇ ಆರಿಸುವುದು, ಅವನು ತನ್ನ ದೇಶದ ಹಿತ ಬಯಸುವುದು ಎಲ್ಲದಕ್ಕೂ ಉತ್ತಮ ಪ್ರಜೆಗಳು ಇರಬೇಕಾದುದು ಮುಖ್ಯ. ಅದರಲ್ಲೂ ಶಿಕ್ಷಣ. ಶಿಕ್ಷಣ ಆರ್ಥಿಕತೆ ಮತ್ತು ದೇಶದ ಬೆನ್ನೆಲುಬು. ಅದು ಕೇವಲ ಅಕ್ಷರ ಜ್ಞಾನ ಕೊಡುವ ಶಿಕ್ಷಣ ಆಗಿರದೆ ಬದುಕಿನ, ದೇಶದ ಉನ್ನತಿಗಾಗಿ ದುಡಿಯುವ, ಮಾನವೀಯತೆಗಾಗಿ ಮಿಡಿಯುವ, ಉತ್ತಮರನ್ನು ಆರಿಸುವ, ದೇಶವನ್ನು ಉದ್ಧಾರದ ಪಥದತ್ತ ಕೊಂಡೊಯ್ಯುವ ಶಿಕ್ಷಣ ನಮ್ಮದಾಗಬೇಕು, ನಮಗೆ ಸಿಗಬೇಕು, ಅದಕ್ಕೆ ಪ್ರತಿ ಪೋಷಕರ ಸಹಕಾರ ಬೇಕು. ತಾವೇ ಮಕ್ಕಳಿಗೆ ದುರಭ್ಯಾಸ ಕಲಿಸಿ ಅವರನ್ನು ಹಣಕ್ಕಾಗಿ ಬಳಸಿಕೊಳ್ಳುವ ಪೋಷಕರೂ ಇರುವ ವರೆಗೆ ಮಕ್ಕಳ ಉನ್ನತಿ ಆ ಮೂಲಕ ದೇಶದ ಉನ್ನತಿ ಸಾಧ್ಯವೇ?
ಮತದಾರರೇ, ಮುಂದೆ ಮತದಾನ ಬರಲಿದೆ. ಜಾತಿ, ಪಕ್ಷ ರಾಜಕೀಯ ಮಾಡದೆ, ನಿಮ್ಮ ಏರಿಯಾಕ್ಕೆ ಸರಿಯಾಗಿ ಯೋಚನೆ ಮಾಡಿ ಉತ್ತಮ ನಾಯಕರನ್ನು ಆರಿಸಿ. ಅದರಿಂದ ಊರಿಗೆ, ಜಿಲ್ಲೆಗೆ, ರಾಜ್ಯ, ದೇಶಕ್ಕೆ ಒಳಿತಾಗುವ ಹಾಗಿರಲಿ. ಇಲ್ಲದೇ ಹೋದರೆ ಶೋಕಿಸವವರು ನೀವೇ. ದೇಶದ ಆಡಳಿತಕ್ಕೆ ಒಳ್ಳೆಯ ನಾಯಕರು ಬರಲಿ. ಹತ್ತು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಮಾಡುವವ ನಾಯಕ , ಮಂತ್ರಿ ಆದರೆ ನಮ್ಮ ಮಕ್ಕಳ, ನಮ್ಮ ತೆರಿಗೆಯ, ನಮ್ಮ ದೇಶ ಇನ್ನೂ ಮುಂದಿನ ಪೀಳಿಗೆಯವರೆಗೂ ಮುಂದುವರಿಯಲಾರದು. ಯೋಚನೆ ಮಾಡಬೇಕಾದ್ದು ಅಗತ್ಯವಾಗಿದೆ. ಪಕ್ಷಕ್ಕಾಗಿ ಅಲ್ಲ, ದೇಶಕ್ಕಾಗಿ ಮತ ಹಾಕಿ, ಜಾತಿ ರಾಜಕೀಯ ಬಿಡಿ, ಉತ್ತಮ ವ್ಯಕ್ತಿ ಯಾವುದೇ ಪಕ್ಷ, ಅಥವಾ ಪಕ್ಷೇತರರನಾಗಿ ನಿಂತರೂ ಆರಿಸಬೇಕು. ಇದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ. 
ಭಾರತ ನಮ್ಮ ದೇಶ. ಅದರ ಉದ್ಧಾರ ನಮ್ಮ ಕರ್ತವ್ಯ. ಉತ್ತಮ ಜನ ನಾಯಕರು ನಮ್ಮ ಸೇವಕರು. ಅವರನ್ನು ಆರಿಸುವವರು ನಾವೇ. ನಾವೇ ನಮ್ಮ ದೇಶವನ್ನು ಅಧಃಪತನಕ್ಕೆ ತಳ್ಳದಿರೋಣ. ಸರಿಯಾದ ಕರ್ತವ್ಯ ನಿಭಾಯಿಸಿ ಭವ್ಯ ಭಾರತ ಕಟ್ಟೋಣ. ನೀವೇನಂತೀರಿ?
@ಹನಿಬಿಂದು@
15.10.2022


ಒಂದಿಷ್ಟು ರಿಲಾಕ್ಸ್ ತಗೊಳ್ಳಿ -153

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -153

   ಪೂಜೆ ನಮ್ಮ ಮನದ ಭಾವಗಳನ್ನು ದೇವರ ಬಳಿ ಸಾಗಿಸುವ ಸಾಧನ. ಅದಕ್ಕೆ ಪೂಜಾರಿ ಅಥವಾ ಪೂಜೆ ಭಟ್ಟರು ಮೀಡಿಯೇಟರ್ ಅಥವಾ ಮಧ್ಯವರ್ತಿ. ಎಲ್ಲಾ ಮಂತ್ರಗಳನ್ನೂ ನಮಗೆ ಉಚ್ಚರಿಸಲು ಬಾರದ ಕಾರಣ ಮತ್ತು ಮಂತ್ರೊಚ್ಚಾರಣೆ ತಪ್ಪಾಗಬಾರದು ಎಂಬ ತತ್ವದ ಅಡಿಯಲ್ಲಿ ನಮ್ಮ ಮನಸ್ಸಿನ ಕೋರಿಕೆಗಳನ್ನು ಈಡೇರಿಸಲು ದೈವ ಭಾಷೆ ಸಂಸ್ಕೃತದಲ್ಲಿ ಸ್ಪಷ್ಟ ಮಂತ್ರಗಳನ್ನು ಹೇಳಿ ನಮ್ಮ ಸಂಕಷ್ಟಗಳ ಪರಿಹಾರಕ್ಕಾಗಿ ಪೂಜಾರಿಯ ಮೂಲಕ ಅಥವಾ ಪೂಜೆ ಭಟ್ಟರ ಮೂಲಕ ನಾವು ಪೂಜೆ ಮಾಡಿಸುತ್ತೇವೆ. ಅದು ದೇವಾಲಯದಲ್ಲಿ ಆಗಿರಬಹುದು ಅಥವಾ ಮನೆಯಲ್ಲಿ. ನಾವು ಸರಿಯಾದ ಪೂಜಾ ವಿಧಿ ವಿಧಾನ ತಿಳಿದ ಅರ್ಚಕರನ್ನೇ ಕರೆಯುತ್ತೇವೆ. ಒಂದು ಕಾಲದಲ್ಲಿ ಅದು ಬ್ರಾಹ್ಮಣರಿಂದ ಮಾತ್ರ ನಡೆಯುತ್ತಿತ್ತು. ಆದರೆ ಈಗ ಇತರ ಜಾತಿಯ ಬೇರೆ ಜಾತಿಯ ಜನರೂ, ಮಹಿಳೆಯರೂ ಅದನ್ನು ಕಲಿತು ಪೂಜಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವರು. ಕಾಲಾನುಘಟ್ಟದಲ್ಲಿ ಅದು ಕೂಡ ವ್ಯಾಪಾರೀ ವ್ಯವಹಾರ ಆಗಿದೆ. ಎಲ್ಲಾ ದೇವಾಲಯಗಳ ಮುಂದೆ ಹೋಟೆಲ್ ನ ಮೆನು ತರಹ ಪೂಜೆಯ ಹೆಸರು ಮತ್ತು ಅದರ ಚಾರ್ಜಿನ ಬೋರ್ಡು ಹಾಕಲಾಗಿದೆ, ಹೋಟೆಲ್ ಗಳಲ್ಲೂ ಅಷ್ಟೇ! ತಿಂಡಿಗಳ,  ಐಸ್ ಕ್ರೀಮ್ ಗಳ ಹೆಸರು, ಜ್ಯೂಸ್ ಗಳ ಹೆಸರು ಮತ್ತು ದರ ಪಟ್ಟಿ ತೂಗು ಹಾಕಲಾಗಿರುತ್ತದೆ. ಹಣವಿದ್ದರೆ ದೊಡ್ಡ ಪೂಜೆ ಮಾಡಿಸ ಬಹುದು, ಇಲ್ಲದೆ ಹೋದರೆ ಚಿಕ್ಕದು. ನಮ್ಮ ಬಜೆಟನ್ನು ಅವಲಂಬಿಸಿದೆ ನಮಗೆ ಸಿಗುವ ಪುಣ್ಯ ಹಾಗೂ ವರ! 

ಕಲಿಯುಗ ನೋಡಿ. ದುಡ್ಡಿಲ್ಲದಿದ್ದರೆ ದೇವಸ್ಥಾನಕ್ಕೆ ಹೋಗುವುದು ಹೇಗೆ? ಅವರಿಗೆ ಮನೆಯೇ ಮಂತ್ರಾಲಯ, ಮನಸೇ ದೇವಾಲಯ! ಕೂಲಿ ಕಾರ್ಮಿಕರಿಗೆ ರಜೆಯ ದಿನ ದೇವರು, ದೇವಾಲಯ , ಸಣ್ಣ ಪೂಜೆ. ಅವರು ತೃಪ್ತರು! ಇನ್ನು ವ್ಯಾಪಾರಿಗಳಿಗೆ ಪ್ರತಿನಿತ್ಯ ಬೆಳಿಗ್ಗೆ ದೇವರ ದರ್ಶನ. ನಿತ್ಯ ಪೂಜೆ. ಸಿರಿವಂತರಿಗೆ ತಮ್ಮ ಕಾರಲ್ಲಿ ಸಮಯ ಸಿಕ್ಕಿದಾಗ ದರ್ಶನ, ಪೂಜೆ. ದೊಡ್ಡ ದೊಡ್ಡ ಪೂಜೆ ಮಾಡಿಸುವವರು ಅವರ ಮಡದಿಯರು! ಪತಿಯ ಆರೋಗ್ಯ, ಮಕ್ಕಳ ಓದು, ಮಗಳ ಮದುವೆ, ಮಗನ ಒಳ್ಳೆಯ ಬುದ್ಧಿ, ಕೆಲಸ, ತನ್ನ ನೆಮ್ಮದಿ ಇದೆಲ್ಲಕ್ಕೂ ಪೂಜೆ. ತಾನು ಮನೆಯಲ್ಲೇ ಇರುವ ಕಾರಣ ಸಮಯ ಹೇಗೂ ಇದೆ. ತಿಳಿದವರ ಬಳಿ, ಸ್ವಾಮೀಜಿಯವರ ಬಳಿ ಕೇಳಿ ಅವರು ಯಾವ ಪೂಜೆ ಮಾಡಿಸಬೇಕು ಎಂದು ತಿಳಿದು ಅದನ್ನೇ ಮಾಡಿಸುತ್ತಾರೆ. ದುಡ್ಡಿಗೆ ಏನೂ ಬರ ಇಲ್ಲ ತಾನೆ? 

ಇನ್ನು ದೆಸೆ, ನಕ್ಸತ್ರ, ಜಾತಕ, ಗ್ರಹಗಳಿಗೂ ಆಯಾ ಸಮಯಕ್ಕೆ ಜ್ಯೋತಿಷ್ಯರ ಮಾರ್ಗದರ್ಶನ ಪಡೆದು,  ಅವರಿಂದ ಅವರು ತಿಳಿದು ಪೂಜೆ ಆಗುತ್ತದೆ. ಮಗಳಿಗೆ ಮದುವೆ ಆಗಲಿಲ್ಲ, ಸರಿಯಾದ ವರ ಸಿಗುತ್ತಿಲ್ಲ ಎಂದು ಆಂಟಿ ಒಬ್ಬರು ಅಮೇರಿಕಾದಲ್ಲಿ ದುಡಿಯುತ್ತಿರುವ ತನ್ನ ಮಗಳನ್ನು ಎರಡು ವಾರಕ್ಕೆ ಊರಿಗೆ ಕರೆಯಿಸಿ, ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಪೂಜೆ ಮಾಡಿಸಿ, ಮತ್ತೆ ಹಿಂದೆ ಕಳಿಸಿದರು.  ನೋಡಿ ಪೂಜೆಗೆ ಅದೆಷ್ಟು ಒತ್ತಡ ಇದೆ! ಲಕ್ಷಗಟ್ಟಲೆ ಖರ್ಚು ಮಾಡಿ ಬರುವಷ್ಟು! 

ನಾವು ಯಾವುದೇ ರೀತಿಯಲ್ಲಿ ಪೂಜೆ ಮಾಡಿದರೂ ದೇವರಿಗೆ ಅದು ಸಲ್ಲುತ್ತದೆ. ಆದರೆ ನಮ್ಮ ಪೂಜೆ ಭಕ್ತಿ ಪ್ರಧಾನ ಮತ್ತು ಶುದ್ಧ ಹೃದಯದಿಂದ ಕೂಡಿರಬೇಕು. ಬೇಡರ ಕಣ್ಣಪ್ಪನ ಭಕ್ತಿಯನ್ನೂ, ಕನಕದಾಸರ ಭಕ್ತಿಯನ್ನೂ ದೇವರು ಮೆಚ್ಚಿ ಒಲಿದಿಲ್ಲವೇ ಆ ದೇವರು? ದೇವರಿಗೆ ಮನುಷ್ಯ, ಅವನ ಜಾತಿ ಮುಖ್ಯ ಅಲ್ಲ, ಪರಿಶುದ್ಧ ಭಕ್ತಿ ಹಾಗೂ ಹೃದಯ ಮುಖ್ಯ ಎಂದು ಎಲ್ಲರಿಗೂ ಅರಿವಾಗುತ್ತದೆ. ದೇವರ ಲೇಖಖಾಚಾರವೇ ಬೇರೆ! ನೀವೇನೇ ಪೂಜೆ ಮಾಡಿ ಪಡೆದುಕೊಂಡು ಬಂದದ್ದನ್ನು ಅನುಭವಿಸಲೇ ಬೇಕು. ಕಷ್ಟ ಸ್ವಲ್ಪ ಮಟ್ಟಿಗೆ ತಗ್ಗಬಹುದು ಅಷ್ಟೇ! ಕಳೆದುಕೊಂಡದ್ದನ್ನು ಮತ್ತೆ ಪಡೆಯಲು ಆಗದು. ಮಾನಸಿಕ ನೆಮ್ಮದಿ ಕೆಲವರಿಗೆ ಇದರಿಂದ ದೊರೆಯಬಹುದು.

ಇನ್ನು ಕೆಲವರು ದೇವರನ್ನು ನಂಬುವುದಿಲ್ಲ, ಅಥವಾ ನಂಬಿದರೂ ದೇವಾಲಯ, ಪ್ರಾರ್ಥನಾಲಯಗಳಿಗೆ ತೆರಳುವುದಿಲ್ಲ. ಬದಲಾಗಿ ಬಡವರು,, ನಿರ್ಗತಿಕರು, ಅಂಧರು, ಅನಾಥರ ಸೇವೆ ಮಾಡುತ್ತಾ, ಹಿರಿಯರನ್ನು ನೋಡಿಕೊಳ್ಳುತ್ತಾ, ಮಕ್ಕಳ ಖುಷಿಯಲ್ಲಿ ತಾವೂ ಸಂತಸ ಕಾಣುತ್ತ, ತನ್ನ ಪಾಲಿನ ದಾನವನ್ನು ನಿರ್ಗತಿಕರಿಗೆ ನೀಡುತ್ತಾ ಕಾಲ ಕಳೆಯುತ್ತಾರೆ. ಅಲ್ಲಿ ಯಾವುದೇ ಬೇಧ ಭಾವವಿಲ್ಲ. ಅವರ ಭಕ್ತಿ ಒಂದೇ. ಅದು ತಪ್ಪೆಂದು ಹೇಳಲಾಗುವುದೇ?ಪರೋಪಕಾರವೇ ಅವರ ಪೂಜೆ. ಪರಹಿತವೇ ಅವರ ಮಂತ್ರ. ಜನ ಅವರನ್ನು ದೇವರಂತೆ ಕಾಣುತ್ತಾರೆ. ಅದೂ ಒಂದು ಪೂಜೆಯೇ ಅಲ್ಲವೇ?

ಇನ್ನು ಕೆಲವರು ಕಾರ್ಯ ಮೂಲಕ ಪರರಿಗೆ ಸಹಾಯ ಮಾಡುವವರಿದ್ದಾರೆ. ತಾವು ದುಡಿದ ಹಣದಲ್ಲಿ ಇವರಿಗೆ ದಾನ ಮಾಡಲು ಸಿಗದು. ಅದಕ್ಕವರು ಕಾಯಾ, ವಾಚಾ, ಮನಸಾ ಸಹಕಾರಿಗಳು. ಅಂದರೆ ಅವರು ಇತರರ ಒಳ್ಳೆಯದಕ್ಕೆ ಅವರು ಏನು ಮಾಡಬಹುದು ಎಂಬ ಸಲಹೆ ಸೂಚನೆಗಳನ್ನು ಕೊಡುತ್ತಾರೆ. ಅವರೇ ಬಂದು ಕೆಲಸ ಮಾಡಿಸಿ ಕೊಡುತ್ತಾರೆ, ಇತರರನ್ನು ಕಳುಹಿಸಿ ಸಹಾಯ ಮಾಡಿಸುತ್ತಾರೆ. ಹೀಗೆ. ಅಥವಾ ಫೋನ್ ಮಾಡಿ ಸಂಬಂಧಿಸಿದವರಿಗೆ ಹೇಳುತ್ತಾರೆ. ಅನೇಕ ಜನ ಶಿಕ್ಷಕರು ತಮ್ಮ ಶಾಲಾ ಮಕ್ಕಳಿಗೆ ತುಂಬಾ ಖರ್ಚು ಮಾಡುವುದನ್ನು ನೋಡಿದ್ದೇನೆ. ಬೆಳಗ್ಗಿನ ತಿಂಡಿಗೆ, ಬಟ್ಟೆಗೆ, ಪುಸ್ತಕಕ್ಕೆ, ಮಕ್ಕಳ ನೃತ್ಯ ಸ್ಪರ್ಧೆಗೆ, ಮಕ್ಕಳನ್ನು ಆಟೋಟ ಹಾಗೂ ವಿವಿಧ ಸ್ಪರ್ಧೆಗಳಿಗೆ ಕರೆದುಕೊಂಡು ಹೋಗುವುದು, ರಜಾ ದಿನಗಳಲ್ಲಿ ಪಾಠ ಮಾಡಿ ತಾವೇ ಊಟ, ತಿಂಡಿ ಒದಗಿಸುವುದು, ಆಟಕ್ಕೆ ಪ್ರಾಕ್ಟೀಸ್ ಮಾಡಿಸಿ ಅದಕ್ಕೆ ಸಹಾಯ ಮಾಡುವುದು ಇತ್ಯಾದಿ. ಅಲ್ಲದೆ ತನ್ನ ಕೈಯಿಂದಲೇ ಹಣ ಹಾಕಿ ಶಾಲೆಯಲ್ಲಿ ತೋಟ ನಿರ್ಮಾಣ, ಶಾಲೆಯ ಕಾಂಪೌಂಡ್, ಮಕ್ಕಳಿಗೆ ತಮ್ಮ ಮನೆಯಲ್ಲೇ ಬೆಳೆದ ತರಕಾರಿ ತರುವುದು ಹೀಗೂ ಸಹಾಯ ಮಾಡುತ್ತಾರೆ. ವರ್ಷಕ್ಕೆ ಐವತ್ತು ಸಾವಿರದ ವರೆಗೆ ವಿದ್ಯಾರ್ಥಿಗಳಿಗೆ ಸ್ವಂತ ಹಣ ಖರ್ಚು ಮಾಡುವ ಶಿಕ್ಷಕರೂ ಇದ್ದಾರೆ. ಅವರೆಲ್ಲ ಎಲೆ ಮರೆಯ ಕಾಯಿಗಳು. ಯಾವುದೇ ಪ್ರಶಸ್ತಿ ಅವರಿಗೆ ಬೇಡ. ಸಾಮಾಜಿಕ ಜಾಲ ತಾಣಗಳಲ್ಲಿ ಅವರು ಫೋಟೋ ಹಾಕುವುದಿಲ್ಲ. ಬದಲಾಗಿ ಮನಸ್ಸಿನ ತೃಪ್ತಿಗಾಗಿ ಮಕ್ಕಳು ಎಂದರೆ ದೇವರು, ಅವರಿಗೆ ಮಾಡಿದ ಸಹಾಯ ಅದು ದೇವರ ಕಾರ್ಯ ಮಾಡಿದಂತೆ ಎಂದು ತಿಳಿದು ಸಂತಸ ಪಡುತ್ತಾರೆ. ಇದೂ ಪೂಜೆಯೇ ಅಲ್ಲವೇ? 

ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ನಿತ್ಯ ಊಟ, ಮನೆಯಲ್ಲಿ ಏಳೆಂಟು ಐಷಾರಾಮಿ ಕಾರುಗಳು, ಅಲ್ಲಲ್ಲಿ ದೊಡ್ಡ ಬಿಸಿನೆಸ್ ಮಾಲ್ ಗಳನ್ನು ಕಟ್ಟಿ ದಿನಕ್ಕೆ ಕೋಟಿ ಹಣ ಬಂದರೂ ಯಾರಿಗೂ ಸಹಾಯ ಮಾಡದ ಮಂತ್ರಿ ಮಹೋದಯರು, ಚಲನ ಚಿತ್ರ ನಟರೂ ಇದ್ದಾರೆ.  ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಅನ್ಯ ದೇಶದ ಮಾರುಕಟ್ಟೆಗೆ ಧಾಳಿ ಇಡುವ ತಾರೆಯರೂ ಇದ್ದಾರೆ. ಇವರು ಬೇರೆ ಬೇಡ ತಾನು ಹುಟ್ಟಿದ ಊರಿನ ಶಾಲೆ, ಬಡವರು, ಕಾಲೋನಿ ಜನರಿಗೆ ಸಹಾಯ ಮಾಡಿದರೆ ಅವರ ಬದುಕು ಹಿತವಾಗದೆ? ಆ ದೇವರ ಆಶೀರ್ವಾದ ಸಿಗದೇ?

ಸಹಾಯವನ್ನು ಯಾರೂ ಹಣದ ರೂಪದಲ್ಲಿ ಕೊಡಬಾರದು, ಸ್ಕಾಲರ್ ಶಿಪ್ ಗೆ ನೀಡಿದ ಹಣ ಮಕ್ಕಳಿಗೆ ಸೇರಿದರೂ ಅವರ ತಂದೆಯ ಕುಡಿತಕ್ಕೋ, ತಾಯಿಯ ಸೀರೆಗೊ ವ್ಯಯ ಆಗುವ ಸಂಧರ್ಭಗಳೇ ಹೆಚ್ಚು. ಬದಲಾಗಿ ನೇರವಾಗಿ ಕಾಲೇಜಿನ ಫೀಸಿಗೋ, ಪುಸ್ತಕದ ಅಂಗಡಿಗೋ, ಬಟ್ಟೆ ಅಂಗಡಿಗೋ ಕೊಡಬಹುದು. ಬಸ್ಸಿನ ಖರ್ಚಿಗೆ ಬೇಕಾದುದು ಸಣ್ಣ ಮೊತ್ತ. ಕೆಲವು ಸರ್ಟಿಫಿಕೇಟು ಗಳನ್ನು ಮಾಡಿಸಲು ಪೋಷಕರು ವಿದ್ಯಾರ್ಥಿಗಳ ಜೊತೆ ಸುತ್ತಬೇಕಾಗುತ್ತದೆ. ಆಗ ಕೆಲಸ ನಷ್ಟ, ಹಣ ಬೇಕು. ಅಂತ ಸಮಯಕ್ಕೆಂದು ಸಣ್ಣ ಮೊತ್ತವನ್ನು ಅರ್ಹರಿಗೆ ನೀಡಬಹುದು. ಇನ್ನೂ ಒಂದು ತರಹ ಯೋಚಿಸುವುದಾದರೆ ಬಡವರಿಗೆ ದಾನ ಮಾಡುವಾಗ ರೇಷನ್ ಅಥವಾ ರೇಷನ್ ಅಂಗಡಿಗೆ ಬಿಲ್ ಕೊಡುವುದು ಸೂಕ್ತ. ಆಸ್ಪತ್ರೆ ಖರ್ಚಿಗೆ ಕೊಡುವುದಾದರೆ ಅಲ್ಲಿನ ಬಿಲ್ ನೋಡಿ ನೇರವಾಗಿ ಆಸ್ಪತ್ರೆಯ ಅಕೌಂಟ್ ಗೆ ಸಂದಾಯ ಮಾಡುವುದು ಒಳಿತು. ಈಗೆಲ್ಲಾ ಡಾಕ್ಟರ್ ಗಳು ಅವರೇ ಮೆಸ್ಸೇಜ್ ಟೈಪ್ ಮಾಡಿ ಹೀಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡಿ, ನಮ್ಮ ಬಿಲ್ ನಿಮ್ಮ ಖಾಯಿಲೆಗೆ ಹದಿನಾರು ಲಕ್ಷ ಆಗುತ್ತದೆ ಎಂದು ಮೊದಲೇ ಹೇಳಿ ಬಿಡುತ್ತಾರೆ. ಅದಕ್ಕೆ ಜನರೂ ಸ್ಪಂದಿಸುತ್ತಾರೆ ಬಿಡಿ, ಭಾರತೀಯರು ಮಾನವತೆ ಮೆರೆವವರು. ಆದರೆ ಜೀವ ಬರುವ ಬದಲು ಮನೆಗೆ ದೇಹ ಬಂದರೆ ಏನು ಮಾಡಿ ಏನು ಪ್ರಯೋಜನ? ದಾನ ಒಳ್ಳೆಯದು, ಆದರೆ ಅದು ಅರ್ಹ ವ್ಯಕ್ತಿಗೆ, ಸರಿಯಾದ ಸಮಯದಲ್ಲಿ ಸುಲಭವಾಗಿ ಸಿಗಬೇಕು. ರೋಗಿಯ ಕಡೆಯಲ್ಲಿ, ಮಗು ಹೆತ್ತ ತಾಯಿಯ ಜೊತೆ ಯಾರೂ ಇಲ್ಲದೆ ಹೋದಾಗ ಸಹಾಯಕ್ಕಾಗಿ ಅಲೆಯುವವರು, ಅರ್ಜಿ ಸಲ್ಲಿಸುವವರು ಯಾರು? ಅದಕ್ಕೆ ಸಹಾಯ ಮಾಡುವ ಮನಸ್ಸಿದ್ದರೆ ಆಸ್ಪತ್ರೆಗಳಿಗೆ ನೇರವಾಗಿ ಹೋಗಿ ರೋಗಿಗಳನ್ನು ಭೇಟಿ ಮಾಡಿ, ಅಲ್ಲಿಯೇ ಅವರ ಬಿಲ್ ಕೊಟ್ಟು ಅಥವಾ ಅವರ ಊಟಕ್ಕೆ ಸಹಾಯ ಮಾಡಿ ಬರುವುದು ಒಳಿತಲ್ಲವೇ? ಅದೂ ಕೂಡ ಪೂಜೆಯೇ ಅಲ್ಲವೇ?

ಮನಃ ಶಾಂತಿಗಾಗಿ ಮಾಡುವ ಯಾವುದೇ ಉತ್ತಮ ಕಾರ್ಯವೂ ಪೂಜೆಯೇ. ಎಲ್ಲಾ ಧರ್ಮಗಳಲ್ಲೂ ದೇವರು ಇದ್ದಾನೆ ಮತ್ತು ಅವನು ಒಳ್ಳೆಯ ಕಾರ್ಯಗಳನ್ನು ಮೆಚ್ಚುತ್ತಾನೆ. ಇತರರಿಗೆ ಕೆಡುಕನ್ನು ಮಾಡಿದವರನ್ನು ಶಿಕ್ಷಿಸುತ್ತಾನೆ. ನೀವು ಯಾರೂ ನೋಡದ ಹಾಗೆ, ಇತರರಿಗೆ ತಿಳಿಯದ ಹಾಗೆ ಕೆಟ್ಟ ಕೆಲಸ ಮಾಡಿದರೂ ನಿಮ್ಮ ಜೀವಾತ್ಮ, ಪರಮಾತ್ಮನಿಗೆ ಅದು ತಿಳಿದೇ ತಿಳಿಯುತ್ತದೆ. ಒಳ್ಳೆಯತನಕ್ಕೆ ಒಳ್ಳೆಯದೇ ಆಗುತ್ತದೆ. ಈ ಒಳ್ಳೆಯ ಕಾರ್ಯಗಳೆಲ್ಲಾ ಭಗವಂತನಿಗೆ ಪ್ರಿಯವಾದ ಕಾರಣ ಎಲ್ಲವೂ ಪೂಜೆ ಅನ್ನಿಸಿಕೊಳ್ಳುತ್ತವೆ. ನಾಲ್ಕು ಜನ ದೇವರ ಮುಂದೆ ನಿಂತು ನಮ್ಮ ಒಳ್ಳೆಯದಕ್ಕಾಗಿ ಪ್ರಾರ್ಥಿಸುವ ಕೆಲಸ ನಾವು ಮಾಡಿದರೆ ಅದಕ್ಕಿಂತ ಒಳ್ಳೆಯ ಪೂಜೆ ಯಾವುದು ಅಲ್ಲವೇ? ನಮ್ಮ ಆತ್ಮ ಸಾಕ್ಷಿಗೆ, ನಾವು ನಂಬಿದ ದೇವರಿಗೆ ಒಳ್ಳೆಯವರಾಗಿ ಬದುಕೋಣ. ತೋರಿಕೆಗಾಗಿ ಅಲ್ಲ. ನೀವೇನಂತೀರಿ? 
@ಹನಿಬಿಂದು@
07.10.2022

ದಶಕ -100

ದಶಕ -100

ಸಂಕ್ರಾಂತಿ ಬಂದಿಹುದು ರವಿಯಿಂದ ಬುಮಿಗೆ 
ಸಂಕ್ರಾಂತಿ ಬರಬೇಕಾಗಿಹುದು ನಮ್ಮ ಭಾವಕ್ಕೆ ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ
ಆಲೋಚನೆ ಸಾಗಲಿ ಧರೆಯ ಉಳಿಸುವೆಡೆಗೆ

ಪ್ಲಾಸ್ಟಿಕ್ ಕಡಿಮೆಯಗಿ ಧರೆಯ ಮಡಿಲೊಳಗೆ
ಜನಸಂಖ್ಯೆ ಕುಗ್ಗಲಿ ಭಾರತಿಯ ಬಸಿರೊಳಗೆ
ಶುದ್ಧ ನೀರು ಆಹಾರ ಗಾಳಿ ನುಗ್ಗಲಿ ನಮ್ಮೊಳಗೆ
ಧನಾತ್ಮಕ ಯೋಚನೆಗಳು ಬರುತಿಲಿ ಹೊರಗೆ!

ನಮ್ಮ ನೋಡಿ ನೋಡಿ ಕಲಿವ ಮಕ್ಕಳವರು..
ಗುರು ಹೇಳಿ ಕೊಡುವುದ ಪರರಿಗೆ ಬಿತ್ತುವರು..
@ಹನಿಬಿಂದು@
14.01.2023