ಒಂದಿಷ್ಟು ರಿಲಾಕ್ಸ್ ತಗೊಳ್ಳಿ -165
Aim should be high to reach the sky...ಹೀಗೆಂದು ಹೇಳಿದವರು ಡಾ. ಎಪಿಜೆ ಅಬ್ದುಲ್ ಕಲಾಂ ಅವರು. ದೊಡ್ಡ ದೊಡ್ಡ ಕನಸು ಕಾಣದೆ ಸಣ್ಣ ಕನಸುಗಳನ್ನು ಹೊತ್ತ ಮನುಷ್ಯ ಮನುಷ್ಯನೇ ಅಲ್ಲ. ನಮ್ಮ ಕನಸುಗಳು ಯಾವಾಗಲೂ ಬಹಳ ದೊಡ್ಡದಾಗಿ ಇರಬೇಕು. ಇಲ್ಲದೇ ಹೋದರೆ ಯಾವುದನ್ನೂ ಸಾಧಿಸಲು ನಮ್ಮಿಂದ ಆಗದು. ದೊಡ್ಡ ದೊಡ್ಡ ಆಕಾಂಕ್ಷೆಗಳನ್ನು ಇಟ್ಟುಕೊಂಡಾಗ ಮಾತ್ರ ನಾವು ಹೆಚ್ಚು ಎತ್ತರಕ್ಕೆ ಏರಲು ಸಾಧ್ಯ ಅಲ್ಲವೇ? ನಮ್ಮ ಕನಸುಗಳು ಆಕಾಶದ ಎತ್ತರಕ್ಕೆ ಬೆಳೆದಾಗ ಮಾತ್ರ ಪರೀಕ್ಷೆಗಳು ನಮಗೆ ಚಿಕ್ಕದಾಗಿ ಕಾಣಿಸುತ್ತವೆ. ಇಲ್ಲದೇ ಹೋದರೆ ಪರೀಕ್ಷೆಗಳೇ ಜೀವನದ ದೊಡ್ಡ ಸವಾಲಾಗಿ ಕಂಡು ಅವುಗಳನ್ನು ಎದುರಿಸಲು ಆಗದೆ ನಾವು ಅಲ್ಲಿಯೇ ಅಸಫಲರಾಗುತ್ತೇವೆ. ಇದೇ ನಮ್ಮ ಜೀವನ. ನಮ್ಮ ಜೀವನದಲ್ಲಿ ಸಾಧಿಸಲು ನನ್ನಿಂದ ಸಾಧ್ಯ ಆಗದು ಎಂದು ಅದೆಷ್ಟೋ ಜನ ವಿದ್ಯಾರ್ಥಿಗಳು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಾರೆ. ಪರೀಕ್ಷೆಗಳು ಇಲ್ಲದೇ ಜೀವನ ಇಲ್ಲ. ಜೀವನದ ಪ್ರತಿ ಹಂತದಲ್ಲೂ ಪರೀಕ್ಷೆಗಳನ್ನು ಎದುರಿಸಲೇ ಬೇಕು. ಇಲ್ಲವಾದರೆ ಬದುಕು ಮುನ್ನಡೆಯದು.
ಬಾಲ್ಯದಲ್ಲಿ ಎದ್ದು ನಿಲ್ಲುವ, ಮಾತನಾಡಲು ಕಲಿಯುವ, ಎಡವಿ ನಡೆಯುವ ಪರೀಕ್ಷೆ, ಕೇಳಿ, ನೋಡಿ ಅನುಕರಣೆ ಮಾಡುವ ಪರೀಕ್ಷೆ, ಬೆಳೆಯುತ್ತಾ ಅಕ್ಷರ ಕಲಿಕೆ, ಹೊಸ ಹೊಸ ಭಾಷಾ ಕಲಿಕೆಯ ಜೊತೆಗೆ ವಿವಿಧ ಕೆಲಸಗಳ ಕಲಿಕೆ, ವೈಯಕ್ತಿಕ ಸ್ವಚ್ಛತೆ, ತಾನೇ ತಿನ್ನುವುದು, ಬಟ್ಟೆ ತೊಡುವುದು, ಗುಂಡಿ ಹಾಕಿಕೊಳ್ಳುವುದು, ಶೂ ಲೇಸ್ ಕಟ್ಟುವುದು, ತನ್ನ ಬ್ಯಾಗ್ ನಲ್ಲಿ ಪುಸ್ತಕಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿಕೊಳ್ಳುವುದು, ಪುಸ್ತಕಗಳನ್ನು ಅಂದವಾಗಿ ಇಡುವುದು, ಹಾಕಿದ ಬಟ್ಟೆಯನ್ನು ಜೋಪಾನವಾಗಿ ಕೊಳೆ ಮಾಡದೆ ಇಟ್ಟುಕೊಳ್ಳುವುದು ಇವೆಲ್ಲವೂ ಕಲಿಕೆಗಳೆ.
ಮಹಾಭಾರತ ಯುದ್ಧ ಕಾಲದಲ್ಲಿ ಗುರು, ತಾತ, ಅಣ್ಣಂದಿರನ್ನು ಎದುರು ಹಾಕಿಕೊಂಡು ನಾನು ಯುದ್ಧ ಮಾಡುವುದಿಲ್ಲ ಎಂದು ಅರ್ಜುನ ಹೇಳಿದಾಗ ಶ್ರೀ ಕೃಷ್ಣ ಅವನಿಗೆ ಭಗವದ್ಗೀತೆಯನ್ನು ಬೋಧಿಸಿದ. ಅದರ ಸಾರ ಇಷ್ಟೇ. ಭೂಮಿಗೆ ನೀನು ಯಾವುದೋ ಕರ್ತವ್ಯಕ್ಕಾಗಿ ಬಂದಿರುವೆ. ಅದನ್ನು ನಿಷ್ಠೆಯಿಂದ ಮಾಡಿ ಮುಗಿಸು. ಅದು ಕೆಟ್ಟ ಕೆಲಸವಲ್ಲ, ಬದಲಾಗಿ ನೀಚರನ್ನು ಸಂಹರಿಸಿ ಉತ್ತಮ ರಾಜ್ಯ ಕಟ್ಟುವ ಕಾರ್ಯ. ಹಾಗೆಯೇ ನಮ್ಮ ಕರ್ತವ್ಯವನ್ನು ನಾವು ನಿಷ್ಠೆಯಿಂದ ಮಾಡಬೇಕಿದೆ. ಇದುವೇ ನಮ್ಮ ವ್ಯಕ್ತಿತ್ವದ ಉನ್ನತಿಗೆ ಕಾರಣ. ಇಲ್ಲಿಯೇ ನಮ್ಮ ಯಶಸ್ಸು ಅಡಗಿದೆ. ಈಗಿನ ಪೋಷಕರೂ ಕೆಲವರು ಮಕ್ಕಳಿಗೆ ಅವರು ಇನ್ನೂ ಚಿಕ್ಕ ಮಕ್ಕಳು ಎಂಬ ಮುದ್ದಿನಿಂದ ತಾವೇ ಎಲ್ಲಾ ಕೆಲಸಗಳನ್ನು ಮಾಡಿ ಕೊಟ್ಟು ಅವರನ್ನು ಸೋಮಾರಿಗಳಾಗಿ ಬೆಳೆಸಿರುತ್ತಾರೆ. ಐದನೇ ತರಗತಿಯಲ್ಲಿ ಇರುವ ಮಗನಿಗೆ ಊಟವನ್ನು ಅಮ್ಮ ಬಾಯಿಗೆ ಕೊಡಬೇಕು, ಅದೂ ಅವ ತಿನ್ನ ಬೇಕಾದರೆ ಅದರಲ್ಲಿ ಅವನಿಗೆ ಬೇಕಾದ ಐಟಂ ಮಾತ್ರ ಇರಬೇಕು. "ಪ್ರತಿದಿನ ಮಾಂಸಾಹಾರ ಇದ್ದರೆ ಮಾತ್ರ ನನ್ನ ಮಗ ಊಟ ಮಾಡುವುದು" ಎಂದು ಎಲ್ಲರ ಮುಂದೆ ತನ್ನ ಮಗನ ಬಗ್ಗೆ ಕೊಚ್ಚಿಕೊಳ್ಳುವ ಅಮ್ಮ ಅವನ ಮುಂದಿನ ಭವಿಷ್ಯದ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕು. ಫ್ಯಾನ್ ಇಲ್ಲದೆ ನನ್ನ ಮಗು ಒಂದು ದಿನವೂ ಮಲಗಲ್ಲ...ಎನ್ನುವ ಪೋಷಕರು ಒಳ್ಳೆಯವರು ಅಂತಲ್ಲ. ಮುಂದೆ ಮಗುವಿಗೆ ರಾಜಸ್ಥಾನದ ಥಾರ್ ಮರುಭೂಮಿಯಲ್ಲೋ, ಸಿಯಾಚಿನ್ ನಂತಹ ಸೊನ್ನೆ ಡಿಗ್ರೀ ತಾಪಮಾನಕ್ಕೆ ಕಡಿಮೆ ತಾಪ ಇರುವ ಪ್ರದೇಶದಲ್ಲಿ ಅವನು ಕೆಲಸ ಮಾಡಬೇಕಾಗಿ ಬಂದರೆ ಅವನ ದೇಹದಲ್ಲಿ ಅತಿ ಶೀತ ಮತ್ತು ಅತಿ ಉಷ್ಟ್ನವನ್ನು ತಡೆಯುವ ಶಕ್ತಿ ಇರಬೇಕು. ಆ ತಾಯಿ ಮಗನ ಆ ಶಕ್ತಿಯನ್ನು ಎಲ್ಲೋ ಕಡಿಮೆ ಮಾಡುತ್ತಿದ್ದಾಳೆ ಎಂದು ಅರ್ಥ. ಮಕ್ಕಳು ಊಟ ಮಾಡುವುದಿಲ್ಲ ಎಂದು ಬರೀ ನೂಡಲ್ಸ್, ಕುರ್ಕುರೆ , ಲೇಸ್, ಚಿಪ್ಸ್, ಕುಡಿಯಲು ಯಾವಾಗಲೂ ಸ್ಪ್ರೈಟ್, ಕೋಕಾಕೋಲ ಇಂತಹ ಲೈಟ್ ಡ್ರಿಂಕ್ಸ್ ಕೊಡುವ ಪೋಷಕರನ್ನು ನೋಡಿರುವೆ. ಕೆಲಸದಿಂದ ಮನೆಗೆ ಹೋಗುವಾಗ ನಿತ್ಯ ಲೇಸ್ ಪ್ಯಾಕ್ ಮಕ್ಕಳಿಗೆ ಕೊಂಡು ಹೋಗದಿರಿ. ಅದು ಅವರ ಹೊಟ್ಟೆಯ ಹಾಗೂ ದೇಹದ ಆರೋಗ್ಯವನ್ನು ಹಾಳು ಮಾಡುವ ವಸ್ತು.
ಮುಂದೆ ಬರುವ ಎಸ್ ಎಸ್ ಎಲ್ ಸಿ, ಪಿಯುಸಿ, ಡಿಗ್ರಿ, ಹಾಗೂ ಇತರ ತರಗತಿಗಳ ಮಕ್ಕಳ ಪರೀಕ್ಷೆ. ಇದರಲ್ಲಿ ಪಾಸು ನಪಾಸು ಕಡಿಮೆ ಹೆಚ್ಚು ಅಂಕಗಳು ಇದ್ದಿದ್ದೇ. ಆದರೆ ಶಾಲೆಯಲ್ಲಿ ವಿದ್ಯಾರ್ಥಿಗಳು ಕಲಿತ ಉತ್ತಮ ಗುಣಗಳು ಎಲ್ಲರನ್ನೂ ಎತ್ತರೆತ್ತರಕ್ಕೆ ಕೊಂಡೊಯ್ಯಬಲ್ಲವು. ಮೂರನೇ ತರಗತಿ ಕಲಿತ ರಾಜ್ ಕುಮಾರ್ ಡಾಕ್ಟರ್ ಬಿರುದು ಪಡೆಯಲು ಕಾರಣ ಅವರ ಕಠಿಣ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆ. ತನ್ನ ಕಾರ್ಯವನ್ನು ಸರಿಯಾಗಿ ಮಾಡಿದ ಸರ್ ಎಂ ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ನಾರಾಯಣ ಗುರು, ಕನಕದಾಸರು, ಕವಿಗಳು, ದಾರ್ಶನಿಕರು, ಸಾಮಾಜಿಕ ಹೋರಾಟಗಾರರು, ಶರಣರು, ಬಸವಣ್ಣ, ಭಾರತ ಸ್ವಾತಂತ್ರ್ಯ ಹೋರಾಟಗಾರರು ಇವರನ್ನೆಲ್ಲ ಜನ ಇನ್ನೂ ನೆನೆಯುತ್ತಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಅವರ ಜ್ಞಾನ, ಕರ್ತವ್ಯ, ಶಿಸ್ತು. ಸಮಯ ಪ್ರಜ್ಞೆ, ಉತ್ತಮ ಗುಣಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಜನರಿಗೆ ಅವರ ಬದುಕಲ್ಲಿ ಯಶಸ್ಸನ್ನು ತರುತ್ತವೆ.
ಗೇಟು ತೆರೆದಿರವುದು ನೋಡಿದರೆ ತಾನು ಹಾಕಿ ಬರುವುದು, ಕಸ ಬಿದ್ದಿದ್ದರೆ ಅದನ್ನು ಹೆಕ್ಕಿ ಕಸದ ಬುಟ್ಟಿಗೆ ಹಾಕುವುದು, ತಾನು ಎಲ್ಲೂ ಪರಿಸರಕ್ಕೆ ಹಾನಿ ಆಗುವ ಹಾಗೆ ಪ್ಲಾಸ್ಟಿಕ್ ಎಸೆಯದೆ ಇರುವುದು, ನೀರು ತೊಟ್ಟಿಕ್ಕುತ್ತಿದೆ ಎಂದಾದಲ್ಲಿ ಅದನ್ನು ತಡೆಯುವ ಪ್ರಯತ್ನ ಮಾಡುವುದು ಇವೆಲ್ಲಾ ಯಾರೂ ಹೇಳದೆ ತನ್ನಿಂದ ತಾನೇ ಬರಬೇಕಾದ ಉತ್ತಮ ಗುಣಗಳು. ತಂದೆ ತಾಯಿ, ಶಿಕ್ಷಕರು, ಹಿರಿಯರು ಸಾವಿರಾರು ಸಲ ಇದನ್ನು ಹೇಳಿ ಕೊಟ್ಟಿರುತ್ತಾರೆ. ಆದರೂ ಮರೆವು, ಸೋಮಾರಿತನ. ಒಳ್ಳೆಯ ಗುಣಗಳನ್ನು ಜೀವನದಲ್ಲಿ ನಾವು ಬಳಸಿಕೊಂಡು ಜೀವನ ನಡೆಸಿದಲ್ಲಿ ಮುಂದಿನ ತಲೆಮಾರಿನ ವಿದ್ಯಾರ್ಥಿಗಳು ಓದುವ ಪಠ್ಯ ಪುಸ್ತಕದಲ್ಲಿ ನಮ್ಮ ಜೀವನದ ಸಂದೇಶ ಹೊತ್ತ ಹೊಸ ಪಾಠಗಳು ಇರುತ್ತವೆ. ಆ ದಿಸೆಯಲ್ಲಿ ನಾವು ಯೋಚಿಸೋಣ. ಹುಟ್ಟು ಉಚಿತ, ಸಾವು ಖಚಿತ. ಹುಟ್ಟು ಸಾವುಗಳ ಮಧ್ಯ ಹೆಸರು ಉಳಿಸುವಂತಹ ಒಳ್ಳೆ ಕಾರ್ಯಗಳನ್ನು ಮಾಡೋಣ. ನಮ್ಮ ಜನ್ಮ ದಿನವನ್ನು ಇತರರು ಆಚರಿಸುವಂತೆ ಆಗಲಿ.ನಮ್ಮ ಹೆಸರು ಜನನ ಮರಣಗಳ ದಾಖಲೆಗಳ ಹೊರತಾಗಿ ಪುಸ್ತಕಗಳಲ್ಲಿ, ಶಾಸನಗಳಲ್ಲಿ ಅಜರಾಮರವಾಗಿ ಉಳಿಯುವಂತಹ ಉತ್ತಮ ಕೆಲಸಗಳನ್ನು ನಾವು ಮಾಡಿ ಇತರರಿಗೆ ಮಾದರಿ ಆಗೋಣ. ಯಾರೋ ನೋಡಲು ಕೆಲಸ ಮಾಡುವುದಲ್ಲ, ದೇವರಿಗಾಗಿ ಹಾಗೂ ನಮ್ಮ ಮನಸ್ಸಿನ ತೃಪ್ತಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡೋಣ, ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳೋಣ. ನೀವೇನಂತೀರಿ?
@ಹನಿಬಿಂದು@
24.12.2022
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ