ಒಂದಿಷ್ಟು ರಿಲಾಕ್ಸ್ ತಗೊಳ್ಳಿ -164
ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಪುಸ್ತಕ ಓದಿ ಪಡೆಯುವ ಜ್ಞಾನವನ್ನು ಬೇರೆ ಬೇರೆ ಸ್ಥಳಗಳನ್ನು ನೋಡಿ ಅಲ್ಲಿನ ಜನ ಜೀವನದ ಬಗ್ಗೆ ಅಧ್ಯಯನ ಮಾಡುವುದರಿಂದಲೂ ತಿಳಿಯುತ್ತದೆ. ಶಾಲಾ ಕಾಲೇಜುಗಳ ಮಕ್ಕಳಿಗೆ ನವೆಂಬರ್ - ಡಿಸೆಂಬರ್ ತಿಂಗಳಿನಲ್ಲಿ ಈ ನಿಟ್ಟಿನಲ್ಲಿ ಶಾಲಾ ಶೈಕ್ಷಣಿಕ ಪ್ರವಾಸ ಏರ್ಪಡಿಸುತ್ತಾರೆ. ಸಾಧಾರಣವಾಗಿ ಕರ್ನಾಟಕದಲ್ಲಿ ಬೇಲೂರು, ಹಳೇಬೀಡು, ಮೈಸೂರು, ಬೆಂಗಳೂರು, ಚಿತ್ರದುರ್ಗ, ಕೂಡಲ ಸಂಗಮ, ಹಂಪೆ, ಬಾದಾಮಿ, ಐಹೊಳೆ, ಪಟ್ಟದ ಕಲ್ಲು, ಬಿಜಾಪುರ, ತುಂಗ ಭದ್ರಾ ಅಣೆಕಟ್ಟು, ಆಲಮಟ್ಟಿ ಜಲಾಶಯ, ಬಸವನ ಬಾಗೇವಾಡಿ, ಮುರುಡೇಶ್ವರ, ಗೋಕರ್ಣ, ಧರ್ಮಸ್ಥಳ, ಸುಬ್ರಹ್ಮಣ್ಯ, ಮಡಿಕೇರಿ, ಕಟೀಲು, ಕೊಲ್ಲೂರು, ಮಂಗಳೂರು, ಬೀಚ್, ಕೇರಳದ ವಿಸ್ಮಯ ಸೇರಿ ವಾಟರ್ ಪಾರ್ಕ್ ಗಳು. ಇವು ಎಲ್ಲರೂ ಬೇಟಿ ನೀಡುವ ಸ್ಥಳಗಳು. ಇನ್ನು ಪ್ರಾಥಮಿಕ ಶಾಲಾ ಮಕ್ಕಳಾದರೆ ಪ್ರತಿ ಜಿಲ್ಲೆಯ ಒಳಗೆ ಏನೇನು ನೋಡುವಂತಹ ಸ್ಥಳಗಳಿವೆ ಅವುಗಳನ್ನು ತೋರಿಸಲು ಶಿಕ್ಷಕರು ಕರೆದುಕೊಂಡು ಹೋಗುತ್ತಾರೆ.
ಸರಕಾರಿ ಶಾಲೆಯ ಮಕ್ಕಳನ್ನು ಕಡಿಮೆ ಖರ್ಚಿನಲ್ಲಿ ನಿಭಾಯಿಸಿ ಕರೆದುಕೊಂಡು ಬಂದರೆ, ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರು ಎಷ್ಟು ಹಣವಾದರೂ ನೀಡುವರು ಎಂಬ ಧೈರ್ಯದ ಮೇಲೆ ವಿಮಾನ ಪ್ರಯಾಣ, ರೈಲಿನಲ್ಲಿ, ಗ್ರಾಮ ವಾಸ್ತವ್ಯ, ಅತ್ಯಂತ ಹೆಚ್ಚಿನ ಆಟಗಳು ಇರುವ ಸ್ಥಳಗಳು ಇವುಗಳನ್ನು ತೋರಿಸಿಕೊಂಡು ಬರುವವರಿದ್ದಾರೆ. ಇದು ಪೋಷಕರು ಮತ್ತು ಶಿಕ್ಷಕರು, ಆಯಾ ಶಾಲಾ ಆಡಳಿತ ಮಂಡಳಿಗೆ ಬಿಟ್ಟ ವಿಚಾರ. ಶಿಕ್ಷಣ ಇಲಾಖೆ ಮತ್ತು ಪೋಷಕರ ಅನುಮತಿಯ ಮೇರೆಗೆ ಸರಕಾರಿ ಬಸ್ಸಿನಲ್ಲೇ ಪ್ರವಾಸ ಹೊರಡಬೇಕು ಎಂಬ ಆದೇಶ ಇದೆ. ಆದರೆ ಎರಡೇ ತಿಂಗಳಿನಲ್ಲಿ ಪ್ರವಾಸಕ್ಕೆ ಸಮಯ ಇರುವ ಕಾರಣ ಐಷಾರಾಮಿ ಪ್ರಯಾಣಕ್ಕಾಗಿಯೋ , ಮಕ್ಕಳ ಸಂಖ್ಯೆ , ಬಸ್ಸು ಸಿಗದೆ ಇರುವಿಕೆ, ಖರ್ಚು ವೆಚ್ಚಗಳು ಸರಿದೂಗಿಸಲು ಕೆಲವರು ಖಾಸಗಿ ಮಿನಿ ಬಸ್ ಅಥವಾ ಖಾಸಗಿ ಬಸ್ಸುಗಳಲ್ಲಿ ಕೂಡಾ ಪ್ರಯಾಣ ಬೆಳೆಸುತ್ತಾರೆ.
ಈ ಪ್ರವಾಸ ಹೊರಡುವಾಗ ಪ್ರತಿ ಶಿಕ್ಷಕರೂ ಮಕ್ಕಳ ಗುಂಪುಗಳನ್ನು ಮಾಡಿ, ಕೆಲವರು ಆಯಾ ಗುಂಪಿಗೆ ಪ್ರತ್ಯೇಕ ಸಮವಸ್ತ್ರ, ಟಿ ಶರ್ಟ್, ಕ್ಯಾಪ್ ಗಳನ್ನು ಮಾಡಿ ತಮ್ಮ ಮಕ್ಕಳ ಗುರುತು ಸರಿಯಾಗಿ ಸಿಗಲಿ, ತಪ್ಪಿಸಿಕೊಳ್ಳಲು ಸಾಧ್ಯ ಆಗದೆ ಇರಲಿ ಎಂಬ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಉತ್ತಮವಾದ ಕಾರ್ಯವೇ. ಪ್ರತಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವಾಗ ಪೋಷಕರು ಅವರ ಖರ್ಚಿಗೆಂದು ಒಂದಷ್ಟು ಹಣ ಕೊಟ್ಟಿರುತ್ತಾರೆ. ಅಥವಾ ವಿದ್ಯಾರ್ಥಿಗಳೇ ಅವರಿಗೆ ಬಂದ ವಿದ್ಯಾರ್ಥಿ ವೇತನ, ಇತರರು ಕೊಟ್ಟ ಹಣ, ಕೂಡಿಟ್ಟ ಪಿಗ್ಗಿ ಬ್ಯಾಂಕ್ ನ ಹಣ ಎಂತೆಲ್ಲ ಸಾವಿರಾರು ರೂಪಾಯಿ ತಂದು ಖರ್ಚು ಮಾಡುವವರು ಇದ್ದಾರೆ. ಹಲವು ವಿದ್ಯಾರ್ಥಿಗಳು ತಾವೇ ದುಡಿದ ಹಣವನ್ನು ತರುವವರು ಕೂಡಾ ಇದ್ದಾರೆ. ತುಂಬಾ ಬಡತನದ ವಿದ್ಯಾರ್ಥಿಗೆ ಪ್ರವಾಸ ಬರಲು ಇಷ್ಟ ಇದ್ದು , ಕಲಿಕೆ ಹಾಗೂ ಶಾಲಾ ಚಟುವಟಿಕೆಗಳಲ್ಲಿ ಮುಂದಿದ್ದರೆ ಅದೆಷ್ಟೋ ಜನ ಶಿಕ್ಷಕರು ತಾವೇ ಹಣ ಹಾಕಿ ಅವರನ್ನು ಕರೆದುಕೊಂಡು ಹೋಗುವವರಿದ್ದಾರೆ.
ಬದುಕಿನ ಹಲವಾರು ಶಾಲಾ ಜೀವನದ ನೆನಪುಗಳಲ್ಲಿ ಶೈಕ್ಷಣಿಕ ಪ್ರವಾಸದ ಅಚ್ಚಳಿಯದ ನೆನಪುಗಳು ಸದಾ ಹಸಿರಾಗಿ ಇರುವುದು ಒಂದು ಕಡೆ ಆದರೆ ಅದರಿಂದ ಜೀವನವನ್ನು ಬದಲಾಯಿಸಿ ಕೊಳ್ಳುವವರು, ಅಲ್ಲಿ ಪಾಠ ಕಲಿತವರು, ಅಲ್ಲಿಂದ ಬಂದ ಮೇಲೆ ತಮ್ಮ ಜೀವನವನ್ನು ರೂಪುಗೊಳಿಸಿಕೊಂಡವರು, ಪ್ರವಾಸ ಕಥನ ಬರಹಗಾರರು, ವ್ಯಾಪಾರದ ತಂತ್ರಗಳನ್ನು ಮೈಗೂಡಿಸಿಕೊಳ್ಳುವವರು, ಬೇಗನೆ ಸಿಕ್ಕಿದ , ಬೇರೆ ಬೇರೆ ತರಹದ ಊಟಕ್ಕೆ ಹೊಂದಿ ಕೊಳ್ಳುವವರು, ಹಲವರ ಜೊತೆ ಬೆರೆಯುವುದು, ಕಷ್ಟಕ್ಕೆ ಸಹಕಾರ, ನರ್ಸಿಂಗ್, ಪರಸ್ಪರ ಸಹಾಯ, ಪರಸ್ಪರ ಹೊಂದಾಣಿಕೆ, ಚಿಕ್ಕವರನ್ನು ಜೋಪಾನ ಮಾಡುವುದು, ತಾನು ನೋಡಿದ ಬಗ್ಗೆ ಉಳಿದವರಿಗೆ ಮಾಹಿತಿ ನೀಡುವುದು ಇವೆಲ್ಲ ಅಲ್ಲಿನ ಕಲಿಕೆಗಳು. ಜೀವನ ಶಿಕ್ಷಣ ಅದರಲ್ಲಿ ಸಿಗುತ್ತದೆ. ಗೆಳೆಯನೊಬ್ಬನ ಆರೋಗ್ಯ ಕೆಟ್ಟರೆ ಅವನನ್ನು ನೋಡಿಕೊಳ್ಳುವುದು, ದೈಹಿಕ ತೊಂದರೆ ಇರುವ ವಿದ್ಯಾರ್ಥಿಗಳು ಇದ್ದರೆ ಅವರಿಗೆ ಸಹಾಯ ಮಾಡಿ ಅವರನ್ನು ತಮ್ಮಲ್ಲಿ ಒಬ್ಬನಾಗಿ ಸ್ವೀಕರಿಸಿಕೊಂಡು ಹೋಗುವುದು ಇವೆಲ್ಲವೂ ಜೀವನ ಶಿಕ್ಷಣಗಳೆ ಆಗಿವೆ.
ಇದರ ಜೊತೆ ಜೊತೆಯಲ್ಲಿ ಹಲವಾರು ವಿದ್ಯಾರ್ಥಿಗಳಲ್ಲಿ ನಾನು ಗಮನಿಸಿದ ಅಂಶವೆಂದರೆ ಸ್ವಚ್ಛತಾ ಪಖ್ವಾಡ ನಾವು ಶಾಲೆಗಳಲ್ಲಿ ಮಾಡಿ ಶಾಲಾ ಸ್ವಚ್ಛತೆ ಕಾಪಾಡಿಕೊಳ್ಳಲು ಹೇಳಿ ಕೊಟ್ಟಿರುತ್ತೇವೆ, ಪ್ರತಿನಿತ್ಯ ಗುಡಿಸಿ ತರಗತಿ ಕೋಣೆ ಸ್ವಚ್ಚ ಮಾಡುವ ಕಾರ್ಯ, ವಾರಕ್ಕೊಮ್ಮೆ ಶಾಲಾ ಆವರಣದ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ ಎಲ್ಲಾ ಶಿಕ್ಷಕರು ಹೇಳಿ ಕೊಟ್ಟಿದ್ದರೂ ಸಹ , ಹೆಚ್ಚಿನ ವಿದ್ಯಾರ್ಥಿಗಳಿಗೆ ಅವರ ಕುಟುಂಬದ ಹಿರಿಯರನ್ನು ನೋಡಿ ಕಲಿತೇ ಅಭ್ಯಾಸ. ಇನ್ನೂ ಕೆಲವರು ಕೇರ್ ಲೆಸ್.
ಈ ಕಾರಣಕ್ಕೆ ಪರಿಸರ ಜಾಗೃತಿ ಅಗತ್ಯ ಆಗಿರುವ ಇಂದಿನ ಕಾಲದಲ್ಲಿ ನಾವು ಸ್ವಚ್ಚ ಭಾರತ ಸೆಸ್ ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಶಿಕ್ಷಕರೂ ಪ್ರತಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಪ್ರವಾಸ ಹೊರಡುವ ಮೊದಲು ಒಂದು ಪ್ರತಿಜ್ಞೆಯನ್ನು ಮಾಡಿಸಬೇಕಾಗುತ್ತದೆ. *"ನಾನು ಬಳಸಿದ , ಮತ್ತು ನನಗೆ ಬೇಡವಾದ ಪ್ಲಾಸ್ಟಿಕ್ ಹಾಗೂ ಪೇಪರ್ ವಸ್ತುಗಳನ್ನು ನಾನು ಬಸ್ಸಿನಿಂದ ಹೊರಗೆ ಎಸೆಯುವುದಿಲ್ಲ, ನಾನು ಅದನ್ನು ಕಸದ ಬುಟ್ಟಿಗೆ ಹಾಕುತ್ತೇನೆ"* ಎಂದು. ಇಲ್ಲವಾದರೆ ರಸ್ತೆ ರಸ್ತೆಗಳಲ್ಲಿ ಬಸ್ಸಿನಿಂದ ಹೊರಗೆಸೆದ ಬಿಂಗೊ, ಚಿಪ್ಸ್, ಕುರ್ಕುರೆ, ಬಿಸ್ಕೆಟ್, ಜ್ಯೂಸ್ ನ ಪ್ಯಾಕೆಟ್ ಗಳು, ಚಾಕಲೇಟು ಸಿಪ್ಪೆಗಳಾದ ಪ್ಲಾಸ್ಟಿಕ್ ತುಣುಕುಗಳು ಇಡೀ ರಸ್ತೆಯ ಉದ್ದಗಲಕ್ಕೂ ಬಿಸಾಕುವುದೇ ಅಲ್ಲದೆ, ಶಾಲೆಯಲ್ಲಿ ಮಾಡಿದ ಸ್ವಚ್ಛತಾ ಪಾಠ ಶಾಲೆಯಲ್ಲಿಯೆ ಕೊನೆಗೊಂಡಿರುತ್ತದೆ. ಲಾಲಿ, ಐಸ್ ಕ್ರೀಮ್ ಕಪ್ ನೋಡಿದಾಗ, ತಿಂದ ಮೇಲೆ ಅದೆಲ್ಲಾ ಮರೆತೇ ಹೋಗುತ್ತದೆ.
ನಮ್ಮ ಭೂಮಿ ನಮ್ಮ ತಾಯಿ. ಅದನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸುವುದು ನಮ್ಮೆಲ್ಲರ ಹೊಣೆ ಹಾಗೂ ಜವಾಬ್ದಾರಿ. ಇದು ವಿದ್ಯಾರ್ಥಿ ಹಂತದಲ್ಲೇ ಮೈಗೂಡಿಸಿಕೊಳ್ಳಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಇದಕ್ಕೆ ಪೋಷಕರ ಅತಿ ಮುದ್ದು, ಕೇರ್ ಲೆಸ್ನೆಸ್ ಕೂಡಾ ಕಾರಣ. ಬಿಎಡ್ ಪ್ರಶಿಕ್ಷಣಾರ್ಥಿ ಒಬ್ಬರು ನಮ್ಮ ಶಾಲೆಗೆ ಎರಡು ತಿಂಗಳ ಮಟ್ಟಿಗೆ ಕಲಿಕಾ ಉತ್ತಮಿಕೆಗೆ ಬಂದಿದ್ದರು. ಅವರ ಮೂರು ವರ್ಷದ ಮಗು ಜ್ಯೂಸ್ ಕುಡಿದು ಬಾಟಲಿಯನ್ನು ಅಲ್ಲೇ ಹಾಕಿತು. ತಕ್ಷಣ ಕೋಲು ಹಿಡಿದ ಅವರು ಅದನ್ನು ಹೆಕ್ಕಿಸಿ ಕಸದ ಬುಟ್ಟಿಗೆ ಹಾಕುವ ವರೆಗೂ ಬಿಡಲಿಲ್ಲ. ಇದು ನಾವು ನಮ್ಮ ಮಕ್ಕಳಿಗೂ, ಶಾಲಾ ವಿದ್ಯಾರ್ಥಿಗಳಿಗೂ ಕಲಿಸಬೇಕಾದ ಪಾಠಗಳು. ಇವನ್ನು ಮಗು ಒಮ್ಮೆ ಜೀವನದಲ್ಲಿ ರೂಪಿಸಿಕೊಂಡರೆ ಎಂದಿಗೂ ಬಿಡಬಾರದು. ಮಕ್ಕಳಿಗೆ ಶಿಕ್ಷಕರು ಎಷ್ಟೇ ಹೇಳಿಕೊಟ್ಟರು ಕೂಡಾ ಅವರು ಅನುಕರಿಸುವುದು ಪೋಷಕರನ್ನು. ಆದ್ದರಿಂದ ನಾವು ಚಿಕ್ಕ ಮಕ್ಕಳು, ಮುಂದೆ ಸರಿ ಆಗುತ್ತಾರೆ ಎಂದೆಲ್ಲ ಅಂದುಕೊಂಡು ಅವರ ಕಡೆ ಗಮನ ಕೊಡದೆ ಏನಾದರೂ ತಿಂದ ತಕ್ಷಣ ಅದರ ಪ್ಲಾಸ್ಟಿಕ್ ಕವರ್ ಗಳನ್ನು ಅಲ್ಲಲ್ಲೇ ಬಿಸಾಕುವ ಪರಿಪಾಠ ಬೆಳೆಸಿಕೊಳ್ಳುತ್ತಾರೆ. ಶಿಕ್ಷಕರು ಪ್ರವಾಸ ಹೋದಾಗ ಅದನ್ನು ಗಮನಿಸಲು ಸಾಧ್ಯ ಆಗುವುದಿಲ್ಲ. ಕಾರಣ ಅಲ್ಲಿ ಎಲ್ಲಾ ವಿದ್ಯಾರ್ಥಿಗಳ ಸಂಖ್ಯೆಯನ್ನು ಅವರು ಗಮನಿಸುವಾಗ ಬಸ್ಸಿನ ಒಳಗೆ ಕುಳಿತ ಮಕ್ಕಳು ತಿಂದು ಬಸ್ಸಿನ ಕಿಟಕಿಯ ಮೂಲಕ ಬಿಸಾಕುವ ದೃಶ್ಯ ಅವರ ಕಣ್ಣಿಗೆ ಬೀಳುವುದಿಲ್ಲ. ಇದನ್ನು ಸರಿ ಮಾಡುವುದು ಪೋಷಕರು ಮತ್ತು ಶಿಕ್ಷಕ ವೃಂದ ಇಬ್ಬರದ್ದೂ ಜವಾಬ್ದಾರಿ ಆಗಿದೆ. ಇದರಲ್ಲಿ ಹಿರಿಯರು ಮತ್ತು ಸಮಾಜದ ಪಾತ್ರವೂ ಇದೆ. ನೋಡಿಯೂ ಏನೂ ಹೇಳದೆ ನೋಡದ ಹಾಗೆ ಇರುವುದು ತಪ್ಪು. ಕೆಲವು ಪ್ರವಾಸ ಸ್ಥಳಗಳಲ್ಲಿ ಇಂತಹ ಉಪ್ಪು ಭರಿತ ಪ್ಲಾಸ್ಟಿಕ್ ಕವರ್ಗಳನ್ನು ರುಚಿಗಾಗಿ ಅದು ಕೆಟ್ಟದು ಎಂದು ಅರಿಯದ ಮೂಕ ಪ್ರಾಣಿಗಳಾದ ದನಗಳಂತಹ ಪ್ರಾಣಿಗಳು ತಿಂದು ಸಾವನ್ನಪ್ಪುತ್ತವೆ. ಅದು ಹೊಟ್ಟೆಯ ಒಳಗೆ ಕರಗದೆ, ಕೊಳೆತು ಉಂಡೆ ಕಟ್ಟಿ ಅದರ ಜೊತೆ ಪಿನ್, ಹೇರ್ ಪಿನ್, ಗಾಜಿನ ಚೂರು ಮೊದಲಾದ ಸಣ್ಣ ಸಣ್ಣ ವಸ್ತುಗಳು ದನಗಳ ಹೊಟ್ಟೆ ಸೇರಿ ದನ ಸತ್ತಾಗ ಅದರ ಸಾವಿಗೆ ಕಾರಣವಾದ ವಸ್ತುಗಳನ್ನು ಆಪರೇಶನ್ ಮಾಡಿ ಹೊರ ತೆಗೆದು ಧರ್ಮಸ್ಥಳದಲ್ಲಿ ಅದೆಷ್ಟೋ ಬಾರಿ, ಕೃಷಿ ಮೇಳದಲ್ಲಿ ಕೂಡಾ ಅಲ್ಲಲ್ಲಿ ತೋರಿಸುತ್ತಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಮಂಗ ಜ್ಯೂಸ್ ಬಾಟಲಿ, ಪ್ಯಾಕೆಟ್ ಹಿಡಿದು ಜ್ಯೂಸ್ ಕುಡಿಯುವುದು ಈ ಮೊದಲಾದ ದೃಶ್ಯಗಳನ್ನು ವಿಡಿಯೋ ಮಾಡಿ ಶರಿಯ ಬಿಡುವವರು ಅದನ್ನು ತಪ್ಪಿಸಲು ನೋಡಲಾರರು. ಬೆಕ್ಕಿಗೂ ಸಾರಾಯಿ ಕುಡಿಸಿ ತಾವೂ ಹಾಳಾಗುವುದಲ್ಲದೆ ಮೂಕ ಪ್ರಾಣಿಗಳನ್ನೂ ತಮ್ಮ ಸಂತೋಷಕ್ಕಾಗಿ ಹಾಳು ದಾರಿಗೆ ಒಯ್ಯುವ ಮನುಷ್ಯರನ್ನು ಕಂಡರೆ ಹೇಸಿಗೆ ಅನ್ನಿಸುವುದಿಲ್ಲವೇ?
ಹಾವು ಪ್ಲಾಸ್ಟಿಕ್ ಮಧ್ಯೆ ಸಿಕ್ಕಿ ಒದ್ದಾಡುವುದು, ಸಣ್ಣ ಪ್ರಾಣಿಗಳು ಪ್ಲಾಸ್ಟಿಕ್ ಬಾಟಲಿಗಳ ಒಳಗೆ ತಲೆ ಹಾಕಿ ತೆಗೆಯಲು ಬಾರದೆ ಸಾಯುವುದು, ಇಲಿ ಪಾಷಾಣ ತಿಂದು ಸತ್ತ ಇಲಿಯನ್ನು ತಿಂದು ಕಾಗೆ, ಗಿಡುಗ, ಗೂಬೆ, ಗರುಡ ಪಕ್ಷಿಗಳು ತಿಂದು ಅವುಗಳ ಸಂತತಿ ನಾಶ ಆಗುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದ ಸಂಶೋಧನೆಗಳು. ಪ್ಲಾಸ್ಟಿಕ್ ಹೊಟ್ಟೆಗೆ ಹೋಗಿ ಸಾಯುವ ಪ್ರಾಣಿಗಳಲ್ಲಿ ದನಕ್ಕೆ ಅಗ್ರ ಸ್ಥಾನ. ಆದ್ದರಿಂದ ವಿದ್ಯಾರ್ಥಿಗಳು ಮಾತ್ರವಲ್ಲ, ಹಿರಿಯರು, ಯುವಕರು, ಯುವತಿಯರೂ ಕೂಡಾ ತಾವು ಬಳಸಿದ ವಸ್ತುಗಳ ಕವರ್ ಗಳು, ಪ್ಲಾಸ್ಟಿಕ್, ಪಿನ್, ಗಾಜಿನ ಚಿಕ್ಕ ಚಿಕ್ಕ ವಸ್ತುಗಳು, ಇವನ್ನೆಲ್ಲ ನೆಲದಲ್ಲಿ ಕಂಡ ಕಂಡಲ್ಲಿ ಬಿಸಾಕುವ ಬದಲು ನೇರವಾಗಿ ಮನೆಗೊಯ್ದು ಪಂಚಾಯತ್ ಅಥವಾ ಪುರ(ನಗರ)ಸಭಾ ಕಸದ ಗಾಡಿಗೆ, ಕಸದ ತೊಟ್ಟಿಗೆ, ಅಥವಾ ಸಮೀಪದ ಅಂಗನವಾಡಿ ಕೇಂದ್ರಕ್ಕೆ ನೀಡಬೇಕು. ಹಿರಿಯರು ಅದನ್ನು ಒಟ್ಟು ಸೇರಿಸಿ ಸರಿಯಾದ ವಿಲೇವಾರಿ ಮಾಡಿದಾಗ ಮಕ್ಕಳೂ ಕೂಡಾ ಕಲಿಯುತ್ತಾರೆ. ನೀವೇನಂತೀರಿ?
@ಹನಿಬಿಂದು@
21.12.2022
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ