ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -158
ಎಲ್ಲಾ ವಾರಕ್ಕಿಂತ ಈ ವಾರ ಸ್ವಲ್ಪ ಚೇಂಜ್ ಮಾಡೋಣ ಅನ್ನಿಸಿತು. ಅದಕ್ಕೆ ರೈಲಿನ ಸುತ್ತ ಹೊರಟಿರುವೆ. ನೀವೂ ಬರ್ತೀರಲ್ಲಾ...
ಒಯಿ..ಹೇಗಿದ್ದೀರಿ? ಎಲ್ಲಾ ಕ್ಷೇಮ ತಾನೇ..ನಿಮ್ಮನ್ನೆಲ್ಲ ಈಗ ರೈಲಿನಲ್ಲಿ ಕರ್ಕೊಂಡು ಹೋಗ್ತೇನೆ. ರೈಲು ಬಿಡ್ತಾ ಇದ್ದೇನೆ ನಾನು..ಗೊತ್ತಲ್ಲ ನಿಮ್ಗೆ .. ಅಲ್ಲಾ, ರೈಲು ಬಿಡ್ಲಿಕ್ಕೆ ಯಾರ್ಗೆ ಗೊತ್ತಿಲ್ಲ ಹೇಳಿ? ನೀವು ರೈಲ್ ಬಿಡದವರ....ಎಲ್ರೂ ರೈಲ್ ಬಿಟ್ಟವರೆ.. ಟ್ರೈನ್ ಹತ್ತಿದವರೆ....
ನಿಮ್ಗೆ ರೈಲಲ್ಲಿ ಕೂತು ಅನುಭವ ಇರಬಹುದು ಅಥವಾ ಇಲ್ಲದೇ ಇರಬಹುದು, ಕರಾವಳಿ ಕಡೆಯವರಾದರೆ ಕಡಿಮೆ ಇರಬಹುದು. ಯಾಕೆ ಗೊತ್ತಾ...ಇಲ್ಲಿ ರೈಲಿಗಿಂತ ಫಾಸ್ಟ್ ಓಡೋ ಪ್ರೈವೇಟ್ ಬಸ್ ಗಳಿವೆ. ಡ್ರೈವರ್ ಅದನ್ನು ಗಾಳಿಯಲ್ಲೇ ಹಾರಿಸಿಕೊಂಡು ಹೋಗ್ತಾನೆ... ಇನ್ನು ಕಂಡಕ್ಟರ್ ಗೆ ಟಿಕೆಟ್ ಹರಿದು ಕೊಡಲೂ ಪುರುಸೊತ್ತು ಇಲ್ಲ. ಅಷ್ಟು ಫಾಸ್ಟ್. ನೀವೇನಾದರೂ ಸುರತ್ಕಲ್ ಇಳೀಬೇಕು ಅಂತ ಮಂಗಳೂರಲ್ಲಿ ಬಸ್ ಹತ್ತಿದ್ರೆ, ಕಣ್ಣು ಮುಚ್ಚಿ ಬಿಡುವ ಒಳಗೆ ಸುರತ್ಕಲ್ ದಾಟಿ ಹಳೆಯಂಗಡಿ ತಲುಪಿರ್ತೀರಿ. ಅಷ್ಟು ಸೂಪರ್ ಎಕ್ಸ್ಪ್ರೆಸ್ ಬಸ್ ಇರುವಾಗ ಇನ್ನು ರೈಲಿಗೆ ಎಲ್ಲಿ ಬೆಲೆ??? ರೈಲ್ವೇ ಸ್ಟೇಷನ್ ದೂರ, ಅಲ್ಲಿ ಹೋಗಿ ಕಾಯಬೇಕು, ಹೋಗುವಾಗ ರಿಕ್ಷಾ ಮಾಡಿ ಹೋಗ್ಬೇಕು, ಅಷ್ಟು ಹೊತ್ತಿಗೆ ಮಂಗಳೂರಿನವರು ಫ್ಲೈಟಲ್ಲಿ ಮುಂಬೈ ಮುಟ್ಟಿರ್ತಾರೆ. ಅದಕ್ಕೆ ಬಸ್, ವಿಮಾನ ಓಕೇ. ರೈಲು ಪ್ರಯಾಣ ಕಡಿಮೆ. ಇದು ನಾನು ರೈಲು ಬಿಡೋದಲ್ಲ ಮಾರ್ರೆ. ಆ ರೈಲು ಎಕ್ಸ್ಪ್ರೆಸ್, ಎಲ್ಲಾ ಕಡೆ ನಿಲ್ಲಿಸಲ್ಲ, ಬಸ್ ಆದ್ರೆ ಹಾಗಲ್ಲ ನೋಡಿ, ನಮಗೆ ಬೇಕಾದಲ್ಲಿ ನಿಲ್ಲಿಸ್ತಾರೆ, ಇಲ್ಲಾಂದ್ರೆ ಡ್ರೈವರ್ ಗೆ ಬೈದ್ರೆ ಆಯ್ತು, ನಾಳೆ ಬರ್ತೀಯಲ್ಲ ನೀನು, ಇದೇ ರೂಟಲ್ಲ ನಿಂದು... ನೋಡಿಕೊಳ್ತೇನೆ...ಅಂತ...
ರೈಲು ಬಿಡೋದು ಹಾಗಿರ್ಲಿ, ಅದು ಯಾರಿಗೂ ಯಾರೂ ಪಾಠ ಮಾಡಬೇಕಂತ ಇಲ್ಲ, ಕೆಟ್ಟದೆಲ್ಲ ತಾನಾಗೇ ಬರುತ್ತೆ, ಒಳ್ಳೆಯದಕ್ಕೆ ಕ್ಲಾಸ್ ನಲ್ಲಿ ಕೂಡಿ ಹಾಕಿ ವರ್ಷ ಇಡೀ ಪಾಠ ಮಾಡಿದ್ರೂ ಅರ್ಧಕ್ಕರ್ಧ ಫೈಲ್ ಪರೀಕ್ಷೇಲಿ. ಅದೇ ಲವ್ ಲೆಟರ್ ಬರೆಯೋದು, ಪ್ರೊಪೋಸ್ ಮಾಡೋದು, ಓಡಿ ಹೋಗೋದು, ಕೈ ಕೊಡೋದು, ಮಕ್ಕಳು ಆಗೋದು ಇದೆಲ್ಲ ಯಾರೂ ಪಾಠ ಕಲಿಸಬೇಕು ಅಂತ ಇಲ್ಲ, ತಾನಾಗೇ ಕಲಿತುಕೊಳ್ತಾರೆ...ಯಾವ ಶಾಲೆಯಲ್ಲಿ ಕಳ್ಳತನ ಮಾಡಲು, ಬಯ್ಯಲು, ರೈಲು ಬಿಡಲು ಹೇಳಿ ಕೊಡ್ತಾರೆ ಹೇಳಿ? ಆದರೆ ಎಲ್ಲರೂ ಅದರಲ್ಲಿ ಎಕ್ಸ್ಪರ್ಟ್ಸ್...ಅದೇ ಗಣಿತ ಟೀಚರ್ ಎ ಪ್ಲಸ್ ಬೀ ಹೋಲ್ ಸ್ಕ್ವೆರ್ ಸೂತ್ರ ಅಪ್ಲೈ ಮಾಡಿ ಲೆಕ್ಕ ಮಾಡಲು ಎಷ್ಟು ಟೈಮ್ ಚಾಕ್ ವೇಸ್ಟ್ ಮಾಡಿರಲಿಕ್ಕಿಲ್ಲ? ಆದರೂ ಬಾರದು!!
ರೈಲು ಅಂದಾಗ ನೆನಪಾಯಿತು ನೋಡಿ, ರೈಲ್ ಹಾರಿಸೋದು! ಗೊತ್ತಿಲ್ಲ ಅಂತ ಸುಮ್ನೆ ರೈಲ್ ಹಾರಿಸಬೇಡಿ..ಮೊನ್ನೆ ಮೊನ್ನೆ ದೀಪಾವಳಿ ಹಬ್ಬದಲ್ಲಿ ರಾಕೆಟ್ ಹಾರಿಸಿದಷ್ಟೆ ಸುಲಭ ಕನ್ನಡ ಮಾತನಾಡುವವರಿಗೆ ರೈಲು ಹಾರಿಸೋದು!!! ಎಲ್ಲಿಂದ ಎಲ್ಲಿಗೆ ಬೇಕಾದರೂ ರಾಕೆಟ್ ವೇಗದಲ್ಲೇ ರೈಲು ಹಾರಿಸ್ತಾರೆ ಅವ್ರು! ಹಾಗೆಯೇ ನೀವೂ ಕೂಡಾ...ಅಲ್ವೇ?
ರೈಲ್ ಕಾಯೋದು? ಅಭ್ಯಾಸ ಇದೆಯೇ..ಫ್ಲೈಟ್ ಕಾಯೋಕೆ ಅರ್ಧ ಗಂಟೆ ಮುಂಚೆ ಹೋಗ್ಬೇಕು. ರೈಲಿಗೆ ಅಂತ ದಿನಗಟ್ಟಲೆ ಕಾದವರೂ ಇರಬಹುದೇನೋ.. ಕಾದು ಕಾದು ಬಸ್ಸಲ್ಲಿ ಹೋದವರು ಕೂಡಾ ಇರಬಹುದು. ರೈಲ್ ಕಾಯೋ ಕೆಲ್ಸ ಅಲ್ಲ ಮಾರೆ ..ಹೆಣ ಕಾದ ಹಾಗೆ...ಬಾರಿ ಕಷ್ಟ ಅದು...ಮೊನ್ನೆ ಮೊನ್ನೆ ಒಬ್ರು ಪರಿಚಯದವರು ರೈಲು ಹತ್ತಲು ಟ್ರಾಕ್ ಕ್ರಾಸ್ ಮಾಡ್ತಾ ಇರ್ವಾಗ ಇಂಜಿನ್ ಹೊಡೆದು ಒಂದು ಕೈ, ಒಂದು ಕಾಲು ಕಳ್ಕೊಂಡಿದ್ದಾರೆ ಪಾಪ. ಡಾಕ್ಟರರು ಪಟ್ಟಿ ಕೊಟ್ಟರು. ಈಗೆಲ್ಲಾ ಆಸ್ಪತ್ರೆಗಳು ಹೈ ಟೆಕ್ ಅಲ್ವಾ... ಎಲ್ಲಾ ಒಂದೋ ಎರಡೋ ಕೋಟಿ ಸುರಿದು ಎಂ. ಡಿ ಅನ್ನುವ ಕೋರ್ಸ್ ಮಾಡಿ ಬಂದಿರ್ತಾರೆ. ಹಗಲು ದರೋಡೆ ಮಾಡಿಯೇ ಅದನ್ನು ವಾಪಸ್ ಪಡ್ಕೋಬೇಕು. ನಿಮ್ಮ ಜೀವ ವಾಪಸ್ ಬೇಕು ಅಂದ್ರೆ ಹೇಳಿದ ಲಕ್ಷ ಕೊಡಬೇಕು. ಅವರೇ ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಡಲು ಕನಿಕರದಿಂದ ಕೂಡಿದ ಫೋಟೋ ಸಮೇತ ಮೆಸ್ಸೇಜ್ ಟೈಪ್ ಮಾಡಿ ಕೊಡುತ್ತಾರೆ. ನೀವು ಫಾರ್ವರ್ಡ್ ಮಾಡಿದರೆ ಆಯ್ತು. ಪಾಪ , ಪುಣ್ಯ ಬರಲಿ ಅಂತ ಯಾರ್ಯಾರೋ ನಿಮ್ಮ ಅಕೌಂಟಿಗೆ ಒಂದಷ್ಟು ದುಡ್ಡು ಹಾಕಿ ಪುಣ್ಯ ಸಂಪಾದಿಸಿಕೊಂಡು ನಿಮಗಾಗಿ ಒಂದಷ್ಟು ಪ್ರಾರ್ಥನೆ ಮಾಡುತ್ತಾರೆ .ವೈದ್ಯರು ತಮ್ಮ ಮಕ್ಕಳನ್ನು ಯಾವುದೋ ಪ್ರತಿಷ್ಠಿತ ಕಾಲೇಜಿನಲ್ಲಿ ವರ್ಷಕ್ಕೆ ಒಂದಷ್ಟು ಕೋಟಿ ಕೊಟ್ಟು ಎಂಬಿಬಿಎಸ್ ಓದಿಸುತ್ತಾ ಇರುತ್ತಾರೆ..ಮುಂದೆ ಅದೇ..ಎಂಡಿ...
ರೈಲಿನಿಂದ ವಿಷಯ ಹಳಿ ತಪ್ಪಿತೋ ಹೇಗೆ? ಜೀವನ ಪೂರ್ತಿ ಪ್ರೀತಿಸುತ್ತಿದ್ದು ಮದುವೆ ಆಗಲು ಸಾಧ್ಯ ಅಗದವರಿಗೆ ರೈಲು ಹಳಿಯ ಜೀವನ ಅಂತಾರೆ ಅಲ್ವಾ? ಯಾವಾಗಲೂ ಒಟ್ಟಿಗೆ ಜೊತೆಯಲ್ಲೇ ಸಾಗುತ್ತಿದ್ದರು ಒಂದಾಗುವ ಯೋಗ ಇಲ್ಲದ ಬದುಕು. ಇನ್ನೂ ಇದೆ, ಜೀವನದಲ್ಲಿ ಸಾಯಬೇಕು ಅನ್ನಿಸಿದಾಗ ಸೀದಾ ಹೋಗಿ ರೈಲು ಹಳಿಯ ಮೇಲೆ ಮಲಗಿ, ರೈಲಿಗೆ ತಲೆ ಕೊಟ್ಟು ಸಾಯುವುದು ಅತಿ ಸುಲಭದ ವಿಧಾನ ಅಂದುಕೊಂಡ ಕೆಲವರು ತಮ್ಮ ಅಮೂಲ್ಯ ಜೀವನವನ್ನು ರೈಲಿನ ಕೆಳಗೆ ದಾನ ಮಾಡುತ್ತಾರೆ! ಹೀಗೂ ಉಂಟು ಜಗದಲಿ! ಅಂದರೆ ಬದುಕು ಬೇಡ ಅನ್ನಿಸಿದಾಗ ಸಹಾಯ ಮಾಡುವವರಲ್ಲಿ ರೈಲು ಕೂಡಾ ಒಂದು ಎನ್ನಲು ಅಡ್ಡಿ ಇಲ್ಲ ಅಲ್ಲವೇ?
ಇನ್ನೂ ಇದೆ ರೈಲಿನ ಬಗ್ಗೆ ಹೇಳಲು. ರೈಲು ಹಳಿ ತಪ್ಪಿದರೆ ಬಹಳ ಪ್ರಯಾಣಿಕರಿಗೆ ಮಾರಣಾಂತಿಕ ಹೊಡೆತ, ಬದುಕಿನ ಹಳಿ ತಪ್ಪಿದರೆ ನಮ್ಮ ಜೀವ, ಜೀವನಕ್ಕೂ ಅನಾಹುತ. ಎಲ್ಲೂ, ಯಾರೂ ರೈಲಿನ ಹಾಗೆ ಹಳಿ ತಪ್ಪಬಾರದು. ರೈಲಿಗೆ ಮತ್ತೆ ರೈನಿಗೆ ಅದೆಲ್ಲಿಯ ನಂಟೋ ತಿಳಿಯದು. ರೈಲು ರೈನಿಗೆ , ರೈನು ರೈಲಿಗೆ ಹೆದರದು. ರೈನು ಉದ್ದುದ್ದ ಉದ್ದ, ರೈಲು ಅಡ್ಡಡ್ಡ ಉದ್ದ ಅಷ್ಟೇ! ಬದುಕಲ್ಲಿ ರೈಲು ಇರದೇ ಇದ್ದರೂ ಆದೀತು. ರೈನು ಮಾತ್ರ ಬರಲೇ ಬೇಕು. ಇಲ್ಲದಿದ್ದರೆ ರೈತ ಕಂಗಾಲು. ರೈಲಿಲ್ಲದಿದ್ದರೆ ರೈತ ಬದುಕಬಲ್ಲ, ರೈನಿಲ್ಲದಿದ್ದರೆ ನಾವೂ ಬದುಕಿರೋಲ್ಲ ಅಲ್ಲವೇ?
ರೈಲಿನ ಕಾನ್ಸೆಪ್ಟ್ ಬಸ್ಸುಗಳನ್ನು ಜೋಡಿಸುವ ಐಡಿಯಾದಲ್ಲಿ ಬಂತೋ, ಕಲ್ಲಿದ್ದಲು ನೋಡಿ ಬಂತೋ ತಿಳಿಯದು. ಆದರೆ ರೈಲು ಉಗಿಬಂಡಿ ಆಗಿ ಕನ್ನಡಕ್ಕೆ ಬಂದಿದೆ. ಹೀಗೆ ಹೊಗೆ ಉಗುಳುವ ಬಂಡಿ, ಹಳಿಯಲ್ಲಿ ಓಡುವ, ಹಲವಾರು ಜನ ಓಡಾಡುವ, ಬಸ್ಸಿನ ಹಾಗೆ ಸುಸ್ತಾಗದ ಈ ರೈಲಿನ ಬಗ್ಗೆ ಇನ್ನೂ ಬರೆದರೆ ರೈಲಿನಷ್ಟೆ ಉದ್ದವಾಗಿ, ನೀವು ನನಗೆ ರೈಲಿನಷ್ಟು ಉದ್ದದ ಕೋಲು ತರುವುದು ಬೇಡ ಮಾರೇ..ರೈಲು ಪ್ರಯಾಣ ಬಸ್ಸು, ವಿಮಾನದಷ್ಟು, ರಿಕ್ಷದಷ್ಟೂ ದುಬಾರಿ ಅಲ್ಲವೇ ಅಲ್ಲ ಅಲ್ವಾ?ನೀವೇನಂತೀರಿ?
@ಹನಿಬಿಂದು@
29.10.2022
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ