ಶನಿವಾರ, ಜನವರಿ 14, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -155

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -155

ಭಾರತ  ಹಲವಾರು ಜಾತಿ, ಅನೇಕ ಧರ್ಮ, ವಿವಿಧ ವೇಷ ಭೂಷಣ, ವಿದ ವಿಧ ಸಂಸ್ಕೃತಿಗಳನ್ನು ಒಳಗೊಂಡ ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರ. ಪ್ರಾಣಿ, ಪಕ್ಷಿ, ಕೀಟಗಳನ್ನೂ ಪೂಜಿಸುವ, ಕಲ್ಲು ಮರಗಳನ್ನೂ ದೇವರೆಂದು ನಂಬುವ, ಅಹಂ ಬ್ರಹ್ಮಾಸ್ಮಿ ಎನುವ, ಸೊನ್ನೆಯನ್ನು ಪ್ರಪಂಚಕ್ಕೆ ಉಡುಗೊರೆಯಾಗಿ ಕೊಟ್ಟ, ಹಲವಾರು ಪಂಡಿತರ, ಬುದ್ಧಿವಂತರ, ಋಷಿಗಳ, ಧ್ಯಾನಿಗಳ,ಸಂತರ,ಪಕೀರರ, ಆಯುರ್ವೇದ  ಮಹಾ ಸಿದ್ಧಿ ಪುರುಷರ ದೇಶ. ಅಂಬೇಡ್ಕರ್, ವ್ಯಾಸ ಮಹರ್ಷಿ, ಸ್ವಾಮಿ ವಿವೇಕಾನಂದ, ಮದರ್ ತೆರೆಸಾ,ಅಬ್ದುಲ್ ಕಲಾಂರ ತರಹದ ಅದೆಷ್ಟೋ ಮೇಧಾವಿಗಳ ಬೀಡು. ಹಲವಾರು ಭಾಷೆಗಳ , ಆಚಾರ ವಿಚಾರಗಳ ಗೂಡು. 
ಹೀಗಿರುವಾಗ ಇಲ್ಲಿ ಜೀವಿಸುತ್ತಿರುವ ನಮ್ಮ ಬದುಕು ಹೇಗಿರಬೇಕು? ಅನ್ಯ ಧರ್ಮೀಯರ ಜೊತೆ ನಮ್ಮ ಸಂಬಂಧ ಹೇಗೆ ಸಾಗಬೇಕು? ಇದರ ಕುರಿತಾದ ಒಂದೆರಡು ಅನಿಸಿಕೆಗಳ ಇಲ್ಲಿ ವ್ಯಕ್ತಪಡಿಸುವ ಹೆಮ್ಮೆ ನನ್ನದು.

       ಕ್ರೈಸ್ತ ಮಂದಿರದ ಪಕ್ಕದಲ್ಲಿ ಹರಿ ದರ್ಶನ ಹೋಟೆಲ್, ಅದರ ಬದಿ ಫಾತಿಮಾ ಮಾಲ್, ಕ್ರಿಸ್ತ ಕೃಪಾ ಕಟ್ಟಡದಲ್ಲಿ ದುರ್ಗಾ ಪರಮೇಶ್ವರಿ ಟೀ ಸ್ಟಾಲ್, ಬದಿಯಲ್ಲಿ ಅರಾಫ ಫ್ಯಾನ್ಸಿ ಸ್ಟೋರ್ , ಪಕ್ಕದಲ್ಲಿ ಜಿನ ಪುಸ್ತಕಾಲಯ. ಇದು ನಿಮಗೆ ಭಾರತದಲ್ಲಿ ಮಾತ್ರ ಕಾಣ ಸಿಗುವ ಅನ್ಯೋನ್ಯತೆಯ ದೃಶ್ಯಗಳು. ಇಲ್ಲಿ ಜಾತಿ ಧರ್ಮಗಳನ್ನು ಬಿಟ್ಟು ಜನರಿಲ್ಲ, ಎಲ್ಲಾ ಧರ್ಮದ ಜನರ ಬಿಟ್ಟು ಭಾರತ ಇಲ್ಲ. ಯಾವುದೇ ಹೊರಗಿನ ಶಕ್ತಿ ಭಾರತದಂತಹ ಮಹಾನ್ ದೇಶವನ್ನು ಒಡೆಯ ಬೇಕು ಎಂದಿದ್ದರೆ ಅದು ಮೊದಲು ಧರ್ಮದ ಆಧಾರದಲ್ಲಿ ಒಡೆಯುತ್ತದೆ. ಚರ್ಚ್ ಮೇಲೆ ದಾಳಿ, ದೇವಾಲಯಗಳ ಮೇಲೆ ದಾಳಿ, ಮಸೀದಿಗಳ ಮೇಲೆ ಧಾಳಿ ಮಾಡಿ ಒಂದು ಧರ್ಮದ ಜನರಲ್ಲಿ ಮತ್ತೊಂದು ಧರ್ಮದ ಜನರ ಹೆಸರು ಹೇಳಿಬಿಟ್ಟರೆ ಸಾಕು. ಭಾರತದ ಶಾಂತಿ ಕಡದುತ್ತದೆ. ಇಬ್ಬರ ಜಗಳ ಮೂರನೆಯವರು ಇಲ್ಲಿ ನುಗ್ಗಲು ಆಧಾರ. ಅದಕ್ಕೆ ನಾವು ಆಸ್ಪದ ಕೊಡುವಂತೆ ಇರಬಾರದು ಅಲ್ಲವೇ?

     ನಾವು ಚಿಕ್ಕವರಿರುವಾಗ  ಮನೆಯ ಹತ್ತಿರದ ಕಾಕನ ಅಂಗಡಿಗೆ ಹೋಗುತ್ತಿದ್ದೆವು. ಅಲ್ಲಿ ಮನೆ ಸಾಮಾನು ಕೊಟ್ಟ ಬಳಿಕ ಕಾಕಾ ಕೊಡುತ್ತಿದ್ದ ಚಾಕಲೇಟು ಅಥವಾ ಬಾಳೆಹಣ್ಣಿನ ಬೆಲೆ ಅವರು ಪಡೆಯದೆ "ಮಗು ತಿನ್ನಲಿ" ಎಂದು ಪ್ರೀತಿಯಿಂದ ಕೊಡುತ್ತಿದ್ದ ಆ ನಿಷ್ಕಲ್ಮಶ ಪ್ರೀತಿ ಮರೆಯಲು ಸಾಧ್ಯವೇ? ಯಾವುದೇ ಜಾತಿ ಧರ್ಮದ ಜನರಿರಲಿ, ಮಕ್ಕಳನ್ನು ದೇವರಂತೆ ಕಾಣುತ್ತಾರೆಯೇ ಹೊರತು, ಜಾತಿ - ಧರ್ಮದ ನೆಲೆಗಟ್ಟಿನಲ್ಲಿ ಅವರನ್ನು ಭಾರತದಲ್ಲಿ ದ್ವೇಷಿಸುವುದು ಖಂಡಿತಾ ಇಲ್ಲ. ಈ ಪ್ರೀತಿಯ ಸಂಬಂಧ ಭಾರತದಲ್ಲಿ ಎಲ್ಲಾ ಧರ್ಮದ ಜನರ ಜೊತೆ  ನಮ್ಮದಾಗಿರಬೇಕು ಅಲ್ಲವೇ?

     ಇನ್ನು ನಾವು ಏನಾದರೂ ಸಮಸ್ಯೆಗೆ ಸಿಲುಕಿದಲ್ಲಿ, ಶಾಳೆಯಾಗಲಿ, ಹೋಗುವ ದಾರಿಯೇ ಆಗಲಿ ನಮಗೆ ನೋವಾದಲ್ಲಿ ನಮಗೆ ಮೊದಲು ನೆರವಿಗೆ ಬರುತ್ತಿದ್ದವರು ಅಕ್ಕ  ಪಕ್ಕದ ಮನೆಯವರು ಅಥವಾ ಊರಿನವರು. ಅಲ್ಲಿ " ನಮ್ಮ ಊರಿನ ಮಗು " ಎಂಬ ಭಾವವಿತ್ತೇ ಹೊರತು ಅನ್ಯ ಧರ್ಮದವರ ಮಗು ಎಂಬ ಆಲೋಚನೆ ಎಂದೂ ಹೊಳೆಯದು. ಕಾರಣ ಆ ಕಿರಿಯ ದೃಷ್ಟಿಯಲ್ಲಿ ಜನರನ್ನು ನೋಡುವ ಕಿರಿಯ ಮನಗಳ ದೇಶ ನಮ್ಮ ಭಾರತವಲ್ಲ. ಇಲ್ಲಿರುವುದು "ಸರ್ವೇ ಜನಾಃ ಸುಖಿನೋ ಭವಂತು"  ಎಂಬ ಭಾವ. ಸರ್ವೇ ಧರ್ಮಾ: ಸುಖಿನೋ ಭವಂತು ಎಂದು ಧರ್ಮಗಳ ಆಧಾರದಲ್ಲಿ ಯಾರು ಯಾರನ್ನೂ ವಿಭಾಗಿಸಿ ನೋಡಲಾರರು, ಇದು ನಮ್ಮ ದೇಶ. ನಮ್ಮ ಭಾವನೆಯೂ ಭಾರತೀಯರ ರಕ್ತದ ಒಂದು ಕಣದಲ್ಲೆ ಬಂದಿದೆ, ಅದು ನಾನು ಭಾರತ ಮಾತೆಯ ಪುತ್ರ, ಪುತ್ರಿ ಎಂಬುದು. 

  ಪ್ರತಿಯೊಬ್ಬ ಮಾನವನೂ ಒಂದೊಂದು ಧರ್ಮದ ಕಟ್ಟಲೆಗಳನ್ನು ಪಾಲಿಸಿಕೊಂಡು ಬಂದಿರುತ್ತಾನೆ, ಅವನಿಗೆ ಇಷ್ಟವಾದ ಹೆಸರಿನಲ್ಲಿ ದೇವರನ್ನು ಪೂಜಿಸುತ್ತಾನೆ, ಯೋಗ ಧ್ಯಾನದ ಜೊತೆ ಸೂರ್ಯ ನಮಸ್ಕಾರ ಮಾಡುತ್ತಾನೆ, ದೈಹಿಕ ವ್ಯಾಯಾಮ, ಜಿಮ್, ದಿನಕ್ಕೆ ಐದು ಬಾರಿ ನಮಾಜ್, ಸೂರ್ಯ ಮುಳುಗಿದ ಬಳಿಕ ಊಟ ತಿನ್ನದೆ ಇರಬಹುದು ಅದೆಲ್ಲ ಅವನ ನಂಬಿಕೆಗೆ ಬಿಟ್ಟದ್ದು. ಎಲ್ಲವೂ ದೈಹಿಕ ವ್ಯಾಯಾಮಕ್ಕೆ ಧಾರ್ಮಿಕ ನಂಬಿಕೆ ಹಾಗೂ ಮೆರಗು ಕೊಟ್ಟ ಆರೋಗ್ಯಾಭ್ಯಾಸಗಳು. ಎಲ್ಲವೂ ನಮ್ಮನ್ನು ದೇವರೊಡನೆ ಮಾತನಾಡಿಸುವ ತಂತ್ರಗಳು. ಇಲ್ಲಿ ಒಬ್ಬ ಮನುಷ್ಯ ಯಾವುದನ್ನು ಬೇಕಾದರೂ ಅನುಸರಿಸಬಹುದು. ಅದು ಅವನ ನಂಬಿಕೆಗೆ ಬಿಟ್ಟದ್ದು. ಆದರೆ ನಮ್ಮ ನಂಬಿಕೆ ನಮ್ಮ ಮನೆಯಲ್ಲಿ ಇರಬೇಕೆ ಹೊರತು, ಸಾರ್ವಜನಿಕ ಸಂಸ್ಥೆಗಳಲ್ಲಿ ಹೋಗಿ ನಾನು ಮಾಡಿದ ಹಾಗೆಯೇ ಉಳಿದವರು ಮಾಡಬೇಕು, ಅದುವೇ ಸರಿ ಎಂಬ ಭಾವನೆ ನಮ್ಮಲ್ಲಿ ಇರಬಾರದು. 

ಮುಸಲ್ಮಾನ ರಾಜರು ಭಾರತಕ್ಕೆ ಧಾಳಿ ಮಾಡಿ ಇಲ್ಲಿಯ ಜನರೊಡನೆ ಸೇರಿ ಇಲ್ಲಿ ಇಸ್ಲಾಂ ಧರ್ಮವನ್ನು ಬೆಳೆಸಿದರು. ಭಾರತಕ್ಕೆ ಧಾಳಿ ಮಾಡಿದ ಆಂಗ್ಲರು ಇಲ್ಲಿನ ಜನರನ್ನು ಧರ್ಮ ಬದಲಾಯಿಸಿ ಭಾರತದಲ್ಲಿ ಅಷ್ಟೇ ಅಲ್ಲ ಇಡೀ ಪ್ರಪಂಚದ ವಿವಿಧ ದೇಶಗಳಿಗೂ ನುಗ್ಗಿ ಅಲ್ಲಿಯೂ ಕೂಡಾ ಕ್ರಿಶ್ಚಿಯನ್ ಧರ್ಮವನ್ನು ಸ್ಥಾಪಿಸಿದರು. ಬುದ್ಧ ತನ್ನ ಉತ್ತಮ  ಬೋಧನೆಗಳ ಬಿತ್ತಲು ಅವನನ್ನು ನಂಬಿ ಅವನ ಅನುಯಾಯಿಗಳಾದ ಜನರು ಬೌದ್ಧ ಧರ್ಮವನ್ನು ಹರಡಿದರು. ಅದಕ್ಕೆ ಎಲ್ಲಾ ಧರ್ಮಗಳ ಕೆಲವು ಜನರೂ ಸೇರಿಕೊಂಡರು. ಭಗವಾನ್ ಮಹಾವೀರನ ಉನ್ನತ ಆದರ್ಶಗಳನ್ನು ನೋಡಿದ ಜನ, ಪ್ರತಿ ತೀರ್ಥಂಕರರ ಜೀವನ ಶೈಲಿ, ಸಾಮಾನ್ಯರಲ್ಲಿ ಅಸಾಮಾನ್ಯ ಬುದ್ಧಿವಂತಿಕೆಯ ಬದುಕು , ಅನ್ಯೋನ್ಯತೆ, ಪ್ರಾಣಿ ದಯಾ ಸಂಹಿತೆ ಇತರ ಧರ್ಮದ ಜನರನ್ನು ಕೂಡಾ ಜೈನ ಧರ್ಮಕ್ಕೆ ಕರೆದಿರಬಹುದು. ಆದರೆ ಆ ಶಾಂತ ಜನ "ಅಹಿಂಸೆಯೇ ಪರಮ ಧರ್ಮ "  ಎಂಬ ಸೂತ್ರದೊಂದಿಗೆ ಬಾಳುವಾಗ ಅವರನ್ನು ವಿರೋಧಿಸಲು ಭಾರತೀಯರಾದ ನಮಗೆ ಸಾಧ್ಯವೇ? ಹಾಗಾಗಿ ಜೈನರೊಂದಿಗೂ ಸರ್ವ ಧರ್ಮದ ಜನರೂ ಒಂದಾಗಿ ಬಾಳುವ ದೇಶ ನಮ್ಮ ಭಾರತದ ಹೃದಯಗಳ ರಕ್ತದಲ್ಲೇ ಹರಿದು ಬಂದ ಗುಣ. 

ವೇಷ ಬೇರೆ ಭಾಷೆ ಬೇರೆ ದೇಶ ನಮ್ಮ ಭಾರತ
ಒಂದೇ ತಾಯ ಮಕ್ಕಳಂತೆ ಬೆರೆಯಬೇಕು ಸಂತತ.. ಎಂದ ಕವಿವಾಣಿಗೆ ಸಲಾಂ. ಇಲ್ಲಿನ ಕವಿ ಪುಂಗವರಿಗೆ ಧರ್ಮದ ಎಲ್ಲೆ ಇಹುದೇ? ಶಿಕ್ಷಕ, ಬರಹಗಾರ, ಭಾಷಣಕಾರ, ನಟ, ಕ್ರೀಡಾಳು, ಕಲಾ ಆರಾಧಕ ಯಾರನ್ನೂ ಧರ್ಮದ ಬುನಾದಿಯಲ್ಲಿ  ಭಾರತೀಯರು ಅಳೆಯುವುದಿಲ್ಲ. ಕಾರಣ ಇಲ್ಲಿ ಯಾವುದೇ ಧರ್ಮದ ತಾಯಿ ತನ್ನ ಮಗುವಿಗೆ ಕೃಷ್ಣ ವೇಷ ಹಾಕಿಸಿ, ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿ  ತಮ್ಮ ಮಗುವನ್ನು ನೋಡಿ ತಾನೂ ಖುಷಿ ಪಡುತ್ತಾರೆ. ಅದೇ ರೀತಿ ಫ್ಯಾನ್ಸಿ ಡ್ರೆಸ್ ನಲ್ಲಿ ಯಾರು ಬೇಕಾದರೂ ಸಂತಾ ಕ್ರೂಸ್ ಆಗಬಲ್ಲರು, ಪಕೀರ ಆಗಬಲ್ಲರು, ದಶಾವತಾರ ತೋರಬಲ್ಲರು, ಬುದ್ಧ, ಮಹಾವೀರ, ಗುರು ನಾನಕ್ ಆಗಿ ಸರ್ವರ ರಂಜಿಸಲು, ಯಾವುದೇ ಧರ್ಮದ ಹಂಗಿಲ್ಲದೆ ಆರಾಮವಾಗಿ ತನ್ನಿಷ್ಟದ ಪ್ರಕಾರ ಬದುಕಲು ಸ್ವಾತಂತ್ರ್ಯ ಕೊಟ್ಟ ಭಾರತದ ಮೂಲ ಮಂತ್ರ "ನೀನು ಚೆನ್ನಾಗಿ ಬದುಕು ಮತ್ತು ಇತರರನ್ನು ಬದುಕಲು ಬಿಡು" ಅಷ್ಟೇ. ನಮ್ಮ ಬದುಕಿನಲ್ಲೂ ಈ ನೀತಿಯನ್ನು ಅನುಸರಿಸಿದರೆ ಆಯಿತು. ನೆಮ್ಮದಿಯ ಬಾಳು ನಮ್ಮದಾಗುವುದು ಇಲ್ಲಿ. 

ಶಾಲಾ ಸರಸ್ವತಿ ಪೂಜೆ, ಸಂತಾಕ್ರಾಸನು ಕೊಡುವ ಚಾಕಲೇಟು, ಈದ್ ಮಿಲಾದ್ ಸ್ವೀಟು ತಿಂದು ಬೆಳೆದವರೆ ನಾವೆಲ್ಲ. ಮಹಾಭಾರತ, ರಾಮಾಯಣದ ಕಥೆಗಳು, ಪಾತ್ರಗಳು ಎಲ್ಲಾ ಧರ್ಮದ ಭಾರತೀಯರ ಒಡಲಾಲದಲ್ಲಿ ಸೇರಿ ಹೋಗಿಲ್ಲವೇ? ಗುರು ಬ್ರಹ್ಮ, ಗುರು ವಿಷ್ಣು ಹೇಳಿದ ರೀತಿಯೇ ಕ್ರೂಷೆಯ ಮೇಲೆ ಜನರಿಗಾಗಿ ನೋವುಂಡ ಯೇಸಕ್ರಿಸ್ತರನ್ನು ಗೌರವಿಸದ ಭಾರತೀಯ ಇರುವನೇ? ಮಹಮ್ಮದ್ ಪೈಗಂಬರ್ ಅವರ ದೀನ ದಲಿತರಿಗೆ, ಬಡವರಿಗೆ ಸಹಾಯ ಮಾಡಬೇಕು ಎಂಬ ಮಾತನ್ನು ಪಾಲಿಸದ ಭಾರತೀಯನ ಅದೆಲ್ಲಿ ಕಾಣಲು ಸಾಧ್ಯ? ಬುದ್ಧನ "ಅತಿಯಾಸೆ ಗತಿ ಕೇಡು" ಎಂಬ ನೀತಿ ಅನುಸರಿಸದೆ ಇದ್ದರೆ ಬದುಕು ಸಂತಸವಾಗಿ ಇರಲು ಸಾಧ್ಯವೇ? ಈ ಎಲ್ಲಾ ಧರ್ಮಗಳ ಉತ್ತಮ ಅಂಶಗಳನ್ನು ಬೆಳೆಸಿಕೊಳ್ಳದೆ ನಾವು ಸಮಾಜದಲ್ಲಿ ದಿನ ಕಳೆಯಲು ಸಾಧ್ಯವೇ?

    ಸಂಸ್ಕೃತ, ಕೊಂಕಣಿ, ಉರ್ದು, ಮಲಯಾಳಂ, ಹಿಂದಿ, ತುಳು, ಮರಾಠಿ, ಅರೇಬಿಕ್, ರಾಜಸ್ಥಾನಿ, ತಮಿಳು ಹೀಗೆ ಎಲ್ಲಾ ಭಾಷೆಗಳ ತಿರುಳು ಒಂದೇ, ಸಾಮರಸ್ಯದ ಬದುಕು. ಎಲ್ಲಾ ಮನಗಳು ಬಯಸುವುದು ಭಾರತದಲ್ಲಿ ಏಕತಾನತೆ. ಎಲ್ಲರಿಗೂ ಬೇಕಾದದ್ದು ಶಾಂತಿ, ನೆಮ್ಮದಿ, ಆರೋಗ್ಯ. ಇವಿಷ್ಟನ್ನು ಬೆಳೆಸಿಕೊಂಡು ಹೋಗುವ ಮನಸ್ಸು ನಮಗೆ ಇರಬೇಕು. 

ಕೊಲೆಗಡುಕ, ದೂರ್ತನಾಗದೆ, ಕಳ್ಳತನದಲ್ಲಿ ತೊಡಗದೆ, ಸುಳ್ಳು ಹೇಳದೆ, ಪರಧರ್ಮ ಸಹಿಷ್ಣುವಾಗಿ, ತಾಯಿ ಭಾರತಾಂಬೆಯ ಮಗುವು ನಾನು ಎನ್ನುತ್ತಾ, ನಮ್ಮ ನಂಬಿಕೆಯ  ಧರ್ಮವನ್ನು ಪಾಲಿಸುತ್ತಾ, ಪರ ಧರ್ಮಗಳಿಗೆ ಗೌರವ ನೀಡುತ್ತಾ ಬದುಕು ಕಟ್ಟುವ ಕಾರ್ಯ ನಮ್ಮದಾಗಬೇಕು. ಅದುವೇ ಪ್ರತಿ ಭಾರತೀಯರ ಲಕ್ಷಣ. ಯಾವುದೇ ಇತರ ಧರ್ಮದ ಜನರ ಜೊತೆ ನಮ್ಮ ಕ್ಷಣಗಳು ಒಂದಿಷ್ಟು ನಗು, ಒಂದಿಷ್ಟು ಹರಟೆ, ಸ್ವಲ್ಪ ಸಹಾಯ, ಒಂಚೂರು ಮನುಷ್ಯತ್ವ, ಯಾರನ್ನೂ ನೋಯಸದೆ ಇರುವುದು, ಅವರನ್ನು ಅವರಷ್ಟಕ್ಕೆ ಬಾಳಲು ಬಿಡುವುದು, ಸಾಧ್ಯವಾದರೆ ಸಹಾಯ ಮಾಡುವುದು ಇದಿಷ್ಟು ಒಳ್ಳೆಯ ಗುಣಗಳನ್ನು ನಾವು ಬೆಳೆಸಿಕೊಂಡಿದ್ದೆ ಆದಲ್ಲಿ  ಪರಧರ್ಮ ಸಹಿಷ್ಣುತೆ ಬಂದು ನಾವು ಹಾಗೂ ಇತರ ಭಾರತೀಯ ಮನಗಳು ಉತ್ತಮ ಬಾಂಧವ್ಯದ ಜೊತೆ ಬದುಕು ನಡೆಸಲು ಅನುಕೂಲ. ನೀವೇನಂತೀರಿ?
@ಹನಿಬಿಂದು@
20.10.2022

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ