ಶನಿವಾರ, ಜನವರಿ 14, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -157

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -157
ಕಾಡು ನಾಶವಾದರೆ ಮನು ಕುಲವೂ ನಾಶ ಎಂಬ ಮಾತು ನಮಗೆಲ್ಲಾ ತಿಳಿದೇ ಇದ್ದರೂ ನೂರಾರು ವರ್ಷಗಳಿಂದ ಬೆಳೆದು ನಿಂತು ನೆರಳು, ಹೂ, ಹಣ್ಣು, ಗಾಳಿ, ಮಳೆ,ತಂಪಾದ ನೆರಳು, ಪರಿಸರದ ಶುದ್ಧತೆ,  ಆಶ್ರಯ ಕೊಟ್ಟು ನಮ್ಮನ್ನು ರಕ್ಷಿಸುತ್ತಿರುವ ಹೆಮ್ಮರಗಳನ್ನು ಅವುಗಳ ಎಲೆ ಬಿದ್ದು ಕಸ ಆಗುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ಕಡಿದು ಹಾಕುತ್ತಿದ್ದಾರೆ. ರಸ್ತೆಗಳ ಅಗಲೀಕರಣ, ಮನೆ, ಕಾರ್ಖಾನೆಗಳ ಕಟ್ಟುವಿಕೆಯ ಕಾರ್ಯಕ್ಕೆ ಪ್ರತಿದಿನ ಹೆಮ್ಮರಗಳು ನೆಲಕ್ಕುರುಳುತ್ತಲೇ ಇವೆ ಅಲ್ಲವೇ?

ಹಸಿರು... ವಾವ್..ಅದೆಷ್ಟು ಚಂದ! ಹರಿವ ಝರಿ, ಅದು ಉದ್ದಕ್ಕೆ ಬಳುಕಿ ಸಾಗುವ ತೊರೆ, ಹಚ್ಚ ಹಸುರಿನ ಗಿಡಮರ ಬಳ್ಳಿ,. ಅದರ ನಡುವೆ ಪಕ್ಷಿಗಳ ಕಲರವ. ಅದನ್ನು ಆಸ್ವಾದಿಸುತ್ತಾ ಕುಳಿತಾಗ ಅದೇ ಸ್ವರ್ಗ ಅಲ್ವೇ? ಅಂತಹ ರಮ್ಯ ನಿಸರ್ಗದ ನಡುವೆ ನಾವಿದ್ದರೆ ಅದೇ ಸ್ವರ್ಗ. ಅಂತಹ ಸ್ವರ್ಗ ಸಿಗಲಿ ಎಂದು ಬಯಸುವ ನಾವು ಅದನ್ನು ನಾಶ ಮಾಡುತ್ತಿದ್ದೇವೆಯೇ ಹೊರತು "ಕಾಡು ಬೆಳೆಸಿ, ನಾಡು ಉಳಿಸಿ" ಎಂದು ಇತರರಿಗೆ ಕರೆ ಕೊಡುವ ಬದಲು ನಾವೇ ಕೆಡಿಸಿ, ಕಾಂಕ್ರೀಟ್ ಕಾಡು ಬೆಳೆಯುತ್ತಿದ್ದೇವೆ ಅಲ್ಲವೇ?

ಕಾಡು ನಾಶವಾದರೆ ಮನುಕುಲವೂ ನಾಶ. ಇದು ನಮಗೆಲ್ಲ ತಿಳಿದ ವಿಚಾರ. ಆದರೂ ಮನುಕುಲ ನಾಶ ಆಗಬಾರದು ಎಂದು ನಾವು ರಸ್ತೆ ಅಗಲೀಕರಣ ನಿಲ್ಲಿಸಿದ್ದೇವೆಯೆ? ಮನೆ ಕಟ್ಟುವುದು ಕಡಿಮೆ ಮಾಡಿದ್ದೇವೆಯೆ? ಹೊಸ ಹೊಸ ಕಾರ್ಖಾನೆಗಳನ್ನು ತೆರೆಯುವುದನ್ನು ಕಡಿಮೆಗೊಳಿಸಿದ್ದೇವೆಯೇ?  ರಾಸಾಯನಿಕಗಳನ್ನು ಧರೆಗೆ ಸುರಿಯುವುದನ್ನು, ಪ್ಲಾಸ್ಟಿಕ್ ಫೈಬರ್ ವಸ್ತುಗಳನ್ನು ಕಂಡ ಕಂಡಲ್ಲಿ ಎಸೆಯುವುದನ್ನು ಬಿಟ್ಟು ಬಿಟ್ಟಿದ್ದೇವೆಯೇ?  ಉಪಯೋಗಿಸಿ ಎಸೆವ ಪ್ಲಾಸ್ಟಿಕ್ ವಸ್ತುಗಳ ಬ್ಯಾನ್ ಇದ್ದರೂ ನಾವು ಅವುಗಳ ಬಳಕೆ ತೊರೆದಿದ್ದೇವೆಯೇ? ಹಾಗಾದರೆ ಒಳ್ಳೆಯ ಕೆಲಸ ಯಾವುದೂ ಮಾಡದೆ ಕಾಡು ನಾಶ ಆಗಬಾರದು ಎನ್ನುವುದು ಯಾವ ನ್ಯಾಯ? ನೀವೇ ಹೇಳಿ..

ಕಾಡು ಹೇಗೆಲ್ಲಾ ನಾಶವಾಗುತ್ತದೆ ನೋಡೋಣ..ಚಿಕ್ಕ ಮಗುವೊಂದು ಸಣ್ಣ ಚಾಕು ಹಿಡಿದು ಮನೆಯ ಬಳಿ ನೆಟ್ಟ ಮಾವಿನ ಗಿಡವನ್ನು ಗೊತ್ತಿಲ್ಲದೆ ಕಡಿಯುವುದರಿಂದ ಹಿಡಿದು, ರಸ್ತೆ ಅಗಲೀಕರಣಕ್ಕೆ ಉರುಳಿಸುವ ಸಾಲು ಸಾಲು ಹೆಮ್ಮರಗಳವರೆಗೆ, ಕಾರ್ಖಾನೆ, ಮನೆ ಕಟ್ಟಲು, ಜಾಗವನ್ನು ಸಮತಟ್ಟುಗೊಳಿಸುವಲ್ಲಿ ಕಾಡು ನಾಶ ಅಪಾರ. ಜಾಗಗಳ ಕನ್ವರ್ ಶೇಷನ್ ಗಾಗಿ ಸಮತಟ್ಟುಗೊಳಿಸುವುದು ಅಲ್ಲಿರುವ ಎಲ್ಲಾ ಮರಗಳ ನಾಶ, ಇದ್ದ ಮರಗಳ ಕಡಿದು ದುಡ್ಡು ಮಾಡುವವರೂ ಇದ್ದಾರೆ. ಮನೆಯ ಸುತ್ತ ಮುತ್ತ ಇರುವ ಜಾಗಗಳಲ್ಲಿ ಇದ್ದ  ಮರಗಳನ್ನು ಕತ್ತರಿಸದೆ, ಹಾಗೆಯೇ ಬಿಟ್ಟರೆ ಒಳ್ಳೆಯದು ಅಲ್ಲವೇ?

ಕಾಡು ಅಳಿದರೆ ಮನುಕುಲದ ನಾಶ ಹೇಗೆ ಆಗುತ್ತದೆ ಎನ್ನುವ ವಿಚಾರ. ಕಾಡು ಕಡಿದ ಕೂಡಲೇ ಪರಿಸರಕ್ಕೆ ಶುದ್ಧ ಆಮ್ಲಜನಕದ ಪ್ರವಾಹ ಕಡಿಮೆ ಆಗುತ್ತದೆ. ಮನುಜ ಜನಸಂಖ್ಯಾ ಸ್ಪೋಟದಲ್ಲಿ ಮುಂದಿರುವ ಕಾರಣ ಎಲ್ಲರಿಗೂ ಬೇಕಾದ ಜೀವ ವಾಯುವಿನ ಪ್ರಮಾಣ ಕಡಿಮೆ ಆದರೆ ಜನ ಉಸಿರು ಕಟ್ಟಿಯೇ ಸಾಯುತ್ತಾರೆ ದಿಟ. ಅಲ್ಲದೆ ಈಗೀಗ ಎಲ್ಲರಿಗೂ ಉಸಿರುಗಟ್ಟುವ ಖಾಯಿಲೆ ಪ್ರಾರಂಭ ಆಗಿದೆ. ಅಲ್ಲೂ ಮಾನವ ಜನಾಂಗಕ್ಕೆ ಸಾವು.

ಇನ್ನು ಮರಗಳನ್ನು ಧರೆಗೆ ಉರುಳಿಸುವುದರಿಂದ ಮೋಡಗಳನ್ನು ತಡೆದು ಮಳೆ ಸುರಿಸುವವರು ಯಾರು? ಮೋಡಗಳು ಇಲ್ಲದೆ ಮಳೆ ಇಲ್ಲ, ಮಳೆ ಬಾರದೆ ಇದ್ದರೆ ಬೆಳೆ ಇಲ್ಲ, ಬೆಳೆ ಇಲ್ಲದೇ ಇದ್ದರೆ ರಾಷ್ಟ್ರ ಬಡವಾಗುತ್ತದೆ. ಶ್ರೀಲಂಕಾ, ಬ್ರಿಟನ್ ದೇಶಗಳ ಪರಿಸ್ಥಿತಿ ಆಗಿದ್ದೂ ಕೂಡಾ ಹೀಗೆಯೇ. ಯಾವಾಗ ತಿನ್ನುವ ಆಹಾರಕ್ಕೆ ಕುತ್ತು ಬರುವುದೋ ಆಗ ಜನ ಮಹಾ ಸ್ವಾರ್ಥಿಗಳಾಗುತ್ತಾರೆ. ಸಿಕ್ಕಿದ್ದೆಲ್ಲಾ ತಿನ್ನುವ, ನುಂಗುವ ರಕ್ಕಾದರಾಗುತ್ತಾರೆ! ಈಗಂತೂ ಮಾನವ ಮಾಂಸ ತಿನ್ನಲು ಕೂಡಾ ಹೇಸದವರಾಗಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಘಟನೆ ನಿಮಗೆ ಗೊತ್ತಿರಬಹುದು ಅಲ್ಲವೇ?

ನಾವು, ಇತರ ಪ್ರಾಣಿಗಳು ಪರಿಸರಕ್ಕೆ ಬಿಡುವ ಇಂಗಾಲದ ಡೈ ಆಕ್ಸೈಡನ್ನು ವಾತಾವರಣದಲ್ಲಿ ಶುದ್ಧ ಮಾಡಿ ಕೊಡುವುದು ಮರಗಳು. ನಾವು ಮರಗಳನ್ನೇ ಕಡಿದು ಮನೆಯ ಅಂಗಳ ಸ್ವಚ್ಚ ಆಯಿತು ಎಂದು ಬೀಗುತ್ತೇವೆ. ಹಾಗಾದರೆ ನಾವು ಮಾಡುವುದು ಸರಿಯೇ? ನಮ್ಮ ಕಾಲಿಗೆ ನಾವೇ ಕೊಡಲಿ ಹಾಕಿಕೊಳ್ಳುವುದು ಅಲ್ಲವೇ? ಸಾಲು ಮರದ ತಿಮ್ಮಕ್ಕನ ಹೊಗಳಿ ಬಹುಮಾನ ಕೊಡೋದು ಏಕೆ ಎಂದು ಈಗಲಾದರೂ ಗೊತ್ತಾಗಿರಬೇಕು. ಅವರ ನಂತರ ಆ ರೀತಿಯ ಕಾರ್ಯ ಮಾಡುವವರು ಯಾರು? ನಮ್ಮನ್ನು ನಾವೇ ಸಾಕಿಕೊಳ್ಳ ಬೇಕು ಎಂದಾದರೆ ಗಿಡಗಳನ್ನೂ ಮರಗಳನ್ನು ನಾವೇ ಬೆಳೆಸಬೇಕು ಅಲ್ಲವೇ?

ಕಾಡು ಬೆಳೆದರೆ ಹಾಡುತ್ತಾ ಉಣ್ಣಬಹುದು ಎಂದು ಹಿರಿಯರು ಗಾದೆ ಕಟ್ಟಿ ಇಟ್ಟದ್ದು ಸ್ವಂತ ಅನುಭವಗಳಿಂದ ಕಲಿತ ಪಾಠ ಅಲ್ಲವೇ? ಕಾಡಿದ್ದರೆ ಬದುಕು. ಆಹಾರ ಸರಪಣಿ, ಪರಿಸರದ ಸರಪಣಿ ಬದುಕು ಸರಿಯಾಗಿ ನಡೆಯ ಬೇಕಾದರೆ ಕಾಡು ಬೇಕು. ಅರಣ್ಯ ನಾಶ ಹೆಚ್ಚಾದಂತೆ ನಮ್ಮ ಆಯುಷ್ಯವು ಕಡಿಮೆಯಾಗುತ್ತಾ ಹೋಗುತ್ತದೆ. ಅಂದರೆ ಅರಣ್ಯ ಕಡಿಮೆಯಾದ ಹಾಗೆ ಬದುಕೂ ಕಡಿಮೆ. ಆರೋಗ್ಯ ಬೇಕಾದರೆ ಕೋಟಿ ಹಣ ಸುರಿಯಬೇಕು ಇಲ್ಲವೇ ಗಿಡಗಳನ್ನೂ ಮರಗಳನ್ನು ಬೆಳೆಸಬೇಕು. ಮನೆಗೊಂದು ಮಗು, ಊರಿಗೊಂದು ವನ. ಕಾಡಿಲ್ಲದೆ ಇದ್ದರೆ ನಾಡೇ ಇಲ್ಲ ಅಲ್ಲವೇ?

ಗಿಡ ಮರಗಳ ನಾಶ ನಮ್ಮೆಲ್ಲರ ನಾಶ. ನಾವು ತಿಂದ ಹಣ್ಣುಗಳ ಬೀಜಗಳನ್ನು ಜಾಗ ಇರುವೆಡೆ ಎಲ್ಲಾ ಬಿತ್ತೋಣ. ಹೆಚ್ಚು ಹೆಚ್ಚು ಮರಗಳು ಬೆಳೆಯಲು ನಮ್ಮ ಕೈವಾಡ ಭೂಮಿ ಮೇಲಿರಲಿ. ಅದು ಬೆಳೆದು ದೊಡ್ಡದಾದರೆ ಆರೋಗ್ಯದ ಉಡುಗೊರೆ, ಅದೇ ದೊಡ್ಡ ಬಹುಮಾನ! ಈಗಂತೂ ಡಾಕ್ಟರ್ ಹಾಗೂ ಆಸ್ಪತ್ರೆಗಳ ಬಿಲ್ಲು ಲಕ್ಷಕ್ಕೆರಿದೆ. ದುಡಿದ ಹಣವೆಲ್ಲ ಬದುಕಲ್ಲಿ ಒಮ್ಮೆಗೇ ಆಸ್ಪತ್ರೆಗೆ ಸುರಿದು ಬರುವಷ್ಟು ನಮ್ಮ ವೈದ್ಯಕೀಯ ಸೇವೆಗಳು ದುಬಾರಿ ಆಗಿವೆ. ಆದ್ದರಿಂದ ನಮ್ಮನ್ನು ನಾವೇ ನಾಶ ಮಾಡಿಕೊಳ್ಳದೆ ಗಿಡ ಮರಗಳನ್ನು ಬದುಕಿಸಿ ನಾವೂ ಬದುಕೋಣ. ನೀವೇನಂತೀರಿ?
@ಹನಿಬಿಂದು@
01.11.2022

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ