ಶನಿವಾರ, ಜನವರಿ 14, 2023

ಒಂದಿಷ್ಟು ರಿಲಾಕ್ಸ್ ತಗೊಳ್ಳಿ -154

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 154
ಮತದಾನ ನಮ್ಮ ಹಕ್ಕು . ನಾವೆಲ್ಲ ಮತ ಹಾಕಬೇಕು. ಭಾರತದಲ್ಲಿ ಮತ ಹಾಕದವರೂ ಅದೆಷ್ಟೋ ಮಂದಿ ಇದ್ದಾರೆ. ಕೆಲವೊಂದು ಕಷ್ಟಗಳು ಕೂಡಾ ಇದಕ್ಕೆ ಕಾರಣ. ಅಂಚೆ ಮತಗಳಲ್ಲಿ ಕೆಲವೊಮ್ಮೆ ಹಾಕಿದವರ ಸಂಪೂರ್ಣ ಮಾಹಿತಿ ತಿಳಿಯುವುದರಿಂದ ಕಲಿತವರೆ ಹಿಂದೆ ಮುಂದೆ ನೋಡುತ್ತಾರೆ. ಹಾಗಾಗಿ ಪರಿಸ್ಥಿತಿ ಬದಲಾಗುತ್ತದೆ. 

ಮತ ಚಲಾಯಿಸಲು ಯಾವುದಾದರೂ ಒಂದು ಗುರುತಿನ ಪತ್ರ ಬೇಕು. ಅಣ್ಣನ ಗುರುತಿನ ಪತ್ರ ತಂದು ಹದಿನೆಂಟರ ಒಳಗಿನ ತಮ್ಮ ಅದೆಷ್ಟೋ ಬಾರಿ ಮತ ಹಾಕಿ ಹೋಗುತ್ತಾನೆ. ಒಂದೇ ರೀತಿ ಇರುವ ಕಾರಣ ಅವನನ್ನು ಕಂಡು ಹಿಡಿಯುವುದು ಕಷ್ಟ ಸಾಧ್ಯ. ಹಾಗೆಯೇ ಕಣ್ಣಿಲ್ಲದ, ವಯಸ್ಸಾದ ಹಿರಿಯರೊಂದಿಗೆ ಜೊತೆಗಾರರು ಬಂದು ಅವರೇ ಮತದಾನ ಮಾಡಿ ಹೋಗುವುದು. ಕಾರಣ ಹಿರಿಯರಿಗೆ ಕಾಣಿಸದು! 

ಆದರೆ ಇಷ್ಟೊಂದು ಜನಸಂಖ್ಯೆ ಇರುವ ಇಷ್ಟು ದೊಡ್ಡ ದೇಶ ಭಾರತದ ಚುನಾವಣಾ ವ್ಯವಸ್ಥೆಗೆ ತಲೆದೂಗಲೆ ಬೇಕು. ಮತದಾನದ ಕಾರ್ಯ ನಿರ್ವಹಿಸುವ ಶಿಕ್ಷಕರ ಮತ್ತು ಡಿ ದರ್ಜೆ ನೌಕರರ ಕೆಲಸಗಳು, ಎಫ್ ಡಿ ಎ ಮತ್ತು ಎಸ್ ಡಿ ಎ ಗಳ ಕಾರ್ಯಗಳು ನಿಜವಾಗಲೂ ಮೆಚ್ಚ ಬೇಕಾದದ್ದು. ರಾಷ್ರ ಚುನಾವಣಾ ಅಧಿಕಾರಿ, ರಾಜ್ಯ ಚುನಾವಣಾ ಅಧಿಕಾರಿ, ಜಿಲ್ಲಾ, ತಾಲೂಕು, ಗ್ರಾಮ, ಮತಗಟ್ಟೆ ಅಧಿಕಾರಿವರೆಗೂ ಪ್ರತಿಯೊಬ್ಬರ ಪಾತ್ರವೂ ಹಿರಿದಾದುದು. ಪ್ಯಾಕೆಟ್ ನೊಳಗೆ ಬೇಕು ಬೇಕಾದ ವಸ್ತುಗಳನ್ನೆಲ್ಲ ಸರಿಯಾದ ಕ್ರಮದಲ್ಲಿ ತುಂಬಿಸುವ ಕಾರ್ಯವನ್ನು ಕರಾರುವಕ್ಕಾಗಿ ಮಾಡುವುದು, ಪ್ರತಿ ಮತಗಟ್ಟೆಯನ್ನು ನೋಡಿಕೊಳ್ಳುವುದು, ಎಲ್ಲರನ್ನೂ ಫೋನ್ ಮೂಲಕ ಸಂಪರ್ಕಿಸುವುದು ಇವೆಲ್ಲ ಹೊಗಳಬೇಕಾದ ಕಾರ್ಯಗಳೇ. ಒಂದೊಳ್ಳೆ ವ್ಯವಸ್ಥೆಯಲ್ಲಿ ಒಗ್ಗಟ್ಟಿನ ಮಹತ್ವ ಅತಿ ಮುಖ್ಯ ಎಂಬುದನ್ನು ಸಾರುವ ಕಾರ್ಯಗಳಲ್ಲಿ ಇದೂ ಒಂದಾಗಿದೆ. 

ಒಂದು ಬಲಿಷ್ಠ ರಾಷ್ಟ್ರದ ಒಗ್ಗಟ್ಟು, ಶಿಸ್ತು, ಸಂಯಮ ಕಾಪಾಡುತ್ತಾ ಎಲ್ಲಾ ಕೆಲಸಗಳು ಸರಿಯಾಗಿ ನಡೆಯಲು ಆ ರಾಷ್ಟ್ರದ ಭದ್ರತಾ ಸಿಬ್ಬಂದಿ, ಪೊಲೀಸ್ ಇಲಾಖೆ, ಗಡಿ ಭದ್ರತಾ ಪಡೆ, ಸೈನಿಕರು, ಅರೆ ಸೇನಾ ಪಡೆ, ಆಂತರಿಕ ರಕ್ಷಣಾ ಪಡೆಗಳ ಕಾರ್ಯ ಮೆಚ್ಚಬೇಕು ಅಲ್ಲವೇ? ರಕ್ಷಣೆಯ ಮಹತ್ವದ ಜವಾಬ್ದಾರಿ ಅವರದಾಗಿ ಇರುತ್ತದೆ. ಸಿಬ್ಬಂದಿ ಕೊರತೆ ಕಾಣುವಾಗ ಗೃಹ ರಕ್ಷಕ ದಳ, ಎನ್ ಸಿ ಸಿ, ಹೀಗೆ ಎಲ್ಲರೂ ಅವರವರ ಜವಾಬ್ದಾರಿಯನ್ನು ನಿಭಾಯಿಸಿ ಒಟ್ಟಿನಲ್ಲಿ ಕೆಲಸ ಸಾಗುತ್ತದೆ ಅಲ್ಲವೇ?

ಇನ್ನೂ ಇದೆ. ಆರೋಗ್ಯವೇ ಭಾಗ್ಯ. ಮತದಾನದ ಕಾರ್ಯದಲ್ಲೂ ರಾತ್ರಿ ಹಗಲು ಅಲರ್ಟ್ ಆಗಿ ದುಡಿಯುತ್ತಿರುವ ಆರೋಗ್ಯ ಇಲಾಖೆಯ ನೌಕರರು. ಯಾವ ಕ್ಷಣದಲ್ಲಿ ಆಗಲಿ ನಿಮಗೆ ನಾವಿದ್ದೇವೆ ಎಂದು ಬೆನ್ನೆಲುಬಾಗಿ ನಿಂತವರು. ಉತ್ತಮ ಆರೋಗ್ಯಕ್ಕಾಗಿ ಹೋರಾಡುತ್ತಿರುವವರು. ಅವರ ಜೊತೆಗೆ ಸಾರಿಗೆ ಇಲಾಖೆಯ ಡ್ರೈವರ್ ಮತ್ತು ಕಂಡಕ್ಟರ್ ಗಳು. ಪ್ರತಿ ಅಧಿಕಾರಿಯನ್ನು ಕೂಡಾ ಅವರವರ ಜಾಗಕ್ಕೆ ತಲುಪಿಸುವ ಜವಾಬ್ದಾರಿ ಹೊತ್ತವರು. ಮತದಾನ ಮುಗಿಯುವವರೆಗೂ ಕಾದು ಒಟ್ಟಾಗಿ ಪುನಃ ಹಿಂದೆ ಕರೆದುಕೊಂಡು ಬಂದು ನಿಗಧಿತ ಸ್ಥಳದಲ್ಲಿ ಬಿಡುವ ಕಾರ್ಯ ಶ್ಲಾಘನೀಯ. ಅದರ ಜೊತೆ ರೂಟ್ ಆಫೀಸರ್ ಆಗಿ ಕೆಲಸ ಮಾಡುವ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಮತದಾನದ ಕರ್ತವ್ಯಕ್ಕೆ ಬಂದವರಿಗೆ ನಿಷ್ಠೆಯಿಂದ ಹಾಗೂ ಶ್ರದ್ಧೆಯಿಂದ ಅಡುಗೆ ಮಾಡಿ ಬಡಿಸುವ ಶಾಲಾ ಬಿಸಿ ಊಟದ ಸಿಬ್ಬಂದಿಗಳು, ಯಾರೋ ಅಕ್ಕ ಪಕ್ಕದ ಮನೆಯವರು, ಮತದಾನಕ್ಕೆ ಸರಿಯಾದ ಹಾಗೆ ತಮ್ಮ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸುವ ಪ್ರತಿ ಶಾಲೆಯ ಎಸ್ ಡಿ ಎಂ ಸಿ ಸದಸ್ಯರು, ಮುಖ್ಯ ಶಿಕ್ಷಕರು, ಹಾಗೂ ಶಿಕ್ಷಕ ವೃಂದ ಎಲ್ಲರ ಕಾರ್ಯಗಳನ್ನು ನೆನೆದು ಹೆಮ್ಮೆ ಪಡಬೇಕು ನಾವು. 

ಮತದಾನದ ಮುಂಚೆ, ಆ ಸಮಯದಲ್ಲೂ ವಿದ್ಯುತ್ ಸರಬರಾಜಿನ ವ್ಯವಸ್ಥೆ ಕಲ್ಪಿಸುವ ಮೆಸ್ಕಾಂ, ಬೆಸ್ಕಾಂ ನಂತಹ ವಿದ್ಯುತ್ ಸರಬರಾಜು ನಿಗಮದ ಕಾರ್ಯ ವೈಖರಿ, ಪ್ರತಿ ಹಳ್ಳಿ, ಗ್ರಾಮ, ಪಟ್ಟಣ, ಪುರಸಭೆಯ ಪಂಚಾಯತ್ ನ ನೌಕರರು, ನೀರು ಪೂರೈಕೆ, ಆಹಾರ, ತಂಗಲು ವ್ಯವಸ್ಥೆ ಕಲ್ಪಿಸುವವರು ಇವರೆಲ್ಲರೂ ಚುನಾವಣಾ ಕರ್ತವ್ಯದ ಭಾಗಿಗಳೇ! ಇಷ್ಟೆಲ್ಲಾ ತಯಾರಿ ಮಾಡಿ ಮತಗಟ್ಟೆಗೆ ಯಾರೂ ಮತದಾನ ಮಾಡಲು ಬಾರದೆ ಇದ್ದರೆ...?

 ಇದೀಗ ಮತದಾರರ ಪಾತ್ರ. ಹೌದು, ಮತದಾನಕ್ಕೆ ನಾಯಕನ ಸ್ಥಾನಕ್ಕೆ ಸ್ಪರ್ಧಿಸುವ ಜನ ಸೇವಕರಾಗಿ, ಅಳಲು ಬಯಸುವ ಪ್ರತಿಯೊಬ್ಬನೂ ನಮ್ಮ ದೇಶದ ಸಾಮಾನ್ಯ ಪ್ರಜೆ ಮತ್ತು ಸಾಮಾನ್ಯ ಮತದಾರ. ಅವನು ಉತ್ತಮ ಹಾಗೂ ನಾಯಕತ್ವದ ಗುಣಗಳನ್ನು ಹೊಂದಿದ್ದು, ಎಲ್ಲಾ ಜಾತಿ, ಧರ್ಮ, ವರ್ಗದ ಜನರಿಗೂ ಒಳಿತನ್ನು ಬಯಸುವವನಾಗಿದ್ದರೆ ಜನ ಅವನ ಜಾತಿ, ಧರ್ಮ, ವರ್ಗ ನೋಡದೆ ಅವನಿಗೆ ಮತದಾನ ಮಾಡುವರು. ರಾಜಕೀಯ ಪಕ್ಷಗಳು, ಅವುಗಳ ಅಬ್ಬರದ ಪ್ರಚಾರ ಎಷ್ಟೇ ಇರಲಿ, ಮನಸ್ಸುಗಳು ಒಳ್ಳೆಯದಾದರೆ ಜನ ಒಳ್ಳೆಯ ನಾಯಕನನ್ನು ಬೆಂಬಲಿಸುತ್ತಾರೆ ಎನ್ನುವುದು ಸತ್ಯ. ಆದರೆ ಈಗೀಗ ಜನ ಬದಲಾಯಿಸಿದ್ದಾರೆಯೋ ಅಥವಾ ಜಾತಿ, ಧರ್ಮ, ಪಕ್ಷ, ಹಣಗಳಿಂದ ಜನರ ಮನಸ್ಸನ್ನು ಬದಲಾಯಿಸಲಾಗಿದೆಯೋ ತಿಳಿಯದು. ನಾಲ್ಕು ಜನರ ಮುಂದೆ ಶೋಕಿ ಮಾಡಿದವ, ಹಣ ಇದ್ದವ, ಗುಣ ಇಲ್ಲದವ(ಕೆಲವು ಬಾರಿ),  ಚುನಾವಣೆಯಲ್ಲಿ ನಿಲ್ಲಲು ಅರ್ಹತೆ ಇಲ್ಲದವ, ಹೆಣ್ಣುಗಳಿಗೆ ಗೌರವ ಕೊಡದವರೂ ಕೂಡಾ ಹಣದ ಬಲದಿಂದ ಗೆದ್ದು ಮೆರೆಯುತ್ತಿದ್ದಾರೆ. ಅಂಥವರನ್ನು ನೋಡಿದಾಗ ಪ್ರೀತಿ, ಗೌರವ ಉಕ್ಕಿ ಬರುವ ಬದಲು ರೋಷ, ದ್ವೇಷ, ಅವರನ್ನು ಮತ ಹಾಕಿ ಚುನಾಯಿಸಿದ ಪ್ರತಿಯೊಬ್ಬರ ಮೇಲೆ ಹೇಸಿಗೆ ಹುಟ್ಟುತ್ತದೆ. 

ತಮ್ಮ ಅಮೂಲ್ಯ ಮತಗಳನ್ನು ಯಾರು ಯಾರಿಗೆ ಹಾಕಬೇಕು ಎಲ್ಲವನ್ನೂ ಅರಿತು ಸರಿಯಾದ ರೀತಿಯಲ್ಲಿ ಮತದಾನ ಮಾಡುವ ಸ್ವಾತಂತ್ರ್ಯ ಮತದಾರರಿಗೆ ಇದೆ. ಮೊದಲು ಸ್ಪರ್ಧಿಸುವ ಸಮಯದಲ್ಲೇ ಅವರ ಬಗ್ಗೆ ತಿಳಿದು ಒಳ್ಳೆಯ ನಾಯಕನನ್ನು ತಮಗಾಗಿ ಆರಿಸಬೇಕು. ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಜನತೆ ಇದ್ದರೆ ಅವರು ತಮ್ಮ ಕಾಲಿಗೆ ತಾವೇ ಕೊಡಲಿ ಹಾಕಿ ಕೊಂಡಂತೆಯೆ ಸರಿ. ಅಲ್ಲದೆ ದೇಶದ ಮುಂದೆ ಐದು ವರ್ಷಗಳ ಆಡಳಿತ ಚುಕ್ಕಾಣಿಯನ್ನು ಸರಿಯಾದ ನಾಯಕತ್ವದ ಗುಣ ಇರುವ ಭಾರತೀಯನಿಗೆ ನೀಡಬೇಕು. ಅವನು ಭಾರತ ದೇಶವನ್ನು ಪ್ರಪಂಚದಲ್ಲಿ ತಲೆಯೆತ್ತಿ ನೋಡುವಂತೆ ಮಾಡಬೇಕು. ಹೀಗೆ ಇರಬೇಕು. 

ಆದರೆ ಲಂಚ, ಬಡತನ, ಕುಡಿತ, ಹಿಂಸಾಚಾರ, ಹಣಕ್ಕಾಗಿ ಕೊಲೆ, ದರೋಡೆ, ಕಳ್ಳತನ ತಾಂಡವವಾಡುತ್ತಿರುವ ನಮ್ಮ ದೇಶದಲ್ಲಿ ಲಂಚ ಪಡೆದು ಸಿರಿವಂತನಾಗುವವ ದಿನ ನಿತ್ಯ ಶ್ರೀಮಂತನೇ ಆಗುತ್ತಿದ್ದಾನೆ. ಬಡವ ಕುಡಿತ, ಜೂಜು ಮೊದಲಾದ ಕೆಟ್ಟ ಗುಣಗಳಿಂದ ಬಡವನೆ ಆಗುತ್ತಿದ್ದಾನೆ. ಇದರಿಂದ ಆರೋಗ್ಯ ಕೆಡಿಸಿಕೊಂಡು ಉಚಿತ ಆರೋಗ್ಯ ಸಲಹೆ ಕೇಳುತ್ತಾನೆ, ದುಡಿದದ್ದೆಲ್ಲ ಕುಡಿತಕ್ಕೆ ವ್ಯಯಿಸಿ ಸರಕಾರದಿಂದ ಕುಟುಂಬಕ್ಕೆ ಉಚಿತ ಅಕ್ಕಿ, ಬೇಳೆ, ಬಟ್ಟೆ, ಶಿಕ್ಷಣ ಕೇಳುತ್ತಾನೆ. ಇನ್ನೂ ಕೆಲವರು ಅನಾರೋಗ್ಯ ಪೀಡಿತರು, ದುಡಿಯಲು ಆಗದೆ ಇರುವವರು, ಮಕ್ಕಳು ಇವರನ್ನು ದೂರ ಮಾಡಿ ಹೋಗಿರುತ್ತಾರೆ. ಗಂಡ ಸತ್ತು ಕೆಲಸ ಇಲ್ಲದ ವಿಧವೆಯರ ಪಾಲಿಗೆ ವಿಧವಾ ವೇತನ, ವೃದ್ದಾಪ್ಯ ವೇತನ, ಪಡಿತರಗಳು ಸಹಕಾರಿ. ಇವರೆಲ್ಲರೂ ಮತದಾರರೇ. ಇಂತಹ ಬಡವರ ಹಾಗೂ ನಿರ್ಗತಿಕರ ಮತದಾನಗಳೂ ಕೂಡಾ ಮುಖ್ಯವೇ. 

ಉತ್ತಮ ನಾಯಕನನ್ನು ಪಡೆಯುವುದು, ಮತದಾನದ ಮೂಲಕ ಅವನನ್ನೇ ಆರಿಸುವುದು, ಅವನು ತನ್ನ ದೇಶದ ಹಿತ ಬಯಸುವುದು ಎಲ್ಲದಕ್ಕೂ ಉತ್ತಮ ಪ್ರಜೆಗಳು ಇರಬೇಕಾದುದು ಮುಖ್ಯ. ಅದರಲ್ಲೂ ಶಿಕ್ಷಣ. ಶಿಕ್ಷಣ ಆರ್ಥಿಕತೆ ಮತ್ತು ದೇಶದ ಬೆನ್ನೆಲುಬು. ಅದು ಕೇವಲ ಅಕ್ಷರ ಜ್ಞಾನ ಕೊಡುವ ಶಿಕ್ಷಣ ಆಗಿರದೆ ಬದುಕಿನ, ದೇಶದ ಉನ್ನತಿಗಾಗಿ ದುಡಿಯುವ, ಮಾನವೀಯತೆಗಾಗಿ ಮಿಡಿಯುವ, ಉತ್ತಮರನ್ನು ಆರಿಸುವ, ದೇಶವನ್ನು ಉದ್ಧಾರದ ಪಥದತ್ತ ಕೊಂಡೊಯ್ಯುವ ಶಿಕ್ಷಣ ನಮ್ಮದಾಗಬೇಕು, ನಮಗೆ ಸಿಗಬೇಕು, ಅದಕ್ಕೆ ಪ್ರತಿ ಪೋಷಕರ ಸಹಕಾರ ಬೇಕು. ತಾವೇ ಮಕ್ಕಳಿಗೆ ದುರಭ್ಯಾಸ ಕಲಿಸಿ ಅವರನ್ನು ಹಣಕ್ಕಾಗಿ ಬಳಸಿಕೊಳ್ಳುವ ಪೋಷಕರೂ ಇರುವ ವರೆಗೆ ಮಕ್ಕಳ ಉನ್ನತಿ ಆ ಮೂಲಕ ದೇಶದ ಉನ್ನತಿ ಸಾಧ್ಯವೇ?
ಮತದಾರರೇ, ಮುಂದೆ ಮತದಾನ ಬರಲಿದೆ. ಜಾತಿ, ಪಕ್ಷ ರಾಜಕೀಯ ಮಾಡದೆ, ನಿಮ್ಮ ಏರಿಯಾಕ್ಕೆ ಸರಿಯಾಗಿ ಯೋಚನೆ ಮಾಡಿ ಉತ್ತಮ ನಾಯಕರನ್ನು ಆರಿಸಿ. ಅದರಿಂದ ಊರಿಗೆ, ಜಿಲ್ಲೆಗೆ, ರಾಜ್ಯ, ದೇಶಕ್ಕೆ ಒಳಿತಾಗುವ ಹಾಗಿರಲಿ. ಇಲ್ಲದೇ ಹೋದರೆ ಶೋಕಿಸವವರು ನೀವೇ. ದೇಶದ ಆಡಳಿತಕ್ಕೆ ಒಳ್ಳೆಯ ನಾಯಕರು ಬರಲಿ. ಹತ್ತು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಮಾಡುವವ ನಾಯಕ , ಮಂತ್ರಿ ಆದರೆ ನಮ್ಮ ಮಕ್ಕಳ, ನಮ್ಮ ತೆರಿಗೆಯ, ನಮ್ಮ ದೇಶ ಇನ್ನೂ ಮುಂದಿನ ಪೀಳಿಗೆಯವರೆಗೂ ಮುಂದುವರಿಯಲಾರದು. ಯೋಚನೆ ಮಾಡಬೇಕಾದ್ದು ಅಗತ್ಯವಾಗಿದೆ. ಪಕ್ಷಕ್ಕಾಗಿ ಅಲ್ಲ, ದೇಶಕ್ಕಾಗಿ ಮತ ಹಾಕಿ, ಜಾತಿ ರಾಜಕೀಯ ಬಿಡಿ, ಉತ್ತಮ ವ್ಯಕ್ತಿ ಯಾವುದೇ ಪಕ್ಷ, ಅಥವಾ ಪಕ್ಷೇತರರನಾಗಿ ನಿಂತರೂ ಆರಿಸಬೇಕು. ಇದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ. 
ಭಾರತ ನಮ್ಮ ದೇಶ. ಅದರ ಉದ್ಧಾರ ನಮ್ಮ ಕರ್ತವ್ಯ. ಉತ್ತಮ ಜನ ನಾಯಕರು ನಮ್ಮ ಸೇವಕರು. ಅವರನ್ನು ಆರಿಸುವವರು ನಾವೇ. ನಾವೇ ನಮ್ಮ ದೇಶವನ್ನು ಅಧಃಪತನಕ್ಕೆ ತಳ್ಳದಿರೋಣ. ಸರಿಯಾದ ಕರ್ತವ್ಯ ನಿಭಾಯಿಸಿ ಭವ್ಯ ಭಾರತ ಕಟ್ಟೋಣ. ನೀವೇನಂತೀರಿ?
@ಹನಿಬಿಂದು@
15.10.2022


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ