ಮಂಗಳವಾರ, ಜೂನ್ 26, 2018

338.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-1

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ...

ಮಳೆಗಾಲ ಬಂದಾಯ್ತು.ನಮ್ಮ ಹಳ್ಳಿಯ ರೈತರಿಗೆ ಒಂದಿಷ್ಟು ಆರಾಮದ ಕಾಲ. ಹಪ್ಪಳ, ಸೆಂಡಿಗೆ ಮಾಡಿಟ್ಟದ್ದನ್ನು ಒಲೆ ಬುಡದಲ್ಲಿ ಕುಳಿತು ಮೆಲ್ಲುವ ಕಾಲ ಹೋಗಿದೆಯಾದರೂ ಗ್ಯಾಸ್ ಸ್ಟವ್ ಪಕ್ಕದಲ್ಲಿ ನಿಂತುಕೊಂಡು ತಿನ್ನುವ ಕಾಲ ಉಳಿದುದಕ್ಕೆ ಖುಷಿ ಪಡಬೇಕೇನೋ...
ಎಲ್ಲರೂ ಎದ್ದು ಬಂದು ತಮ್ಮ ಬೆಳಗಿನ ಕೆಲಸಗಳನ್ನೆಲ್ಲ ಮುಗಿಸಿ, ಒಟ್ಟಾಗಿ ಒಲೆ ಹತ್ತಿರ ಕುಳಿತು ಅಮ್ಮ ಮಾಡಿಕೊಟ್ಟ ಬಿಸಿ ಬಿಸಿ ಚಹಾ ಸಿಪ್ ಮಾಡುವ ಕಾಲ ಮಾಸಿ ಹೋಗಿದ್ದರೂ ನೆನಪು, ಕಂಪು ಮಾಸಲಿಲ್ಲ ಅಲ್ಲವೇ? ಈಗಿನ ಮಾಡ್ ಅಮ್ಮಂದಿರಿಗೆ ಒಲೆಯಲ್ಲಿ ಅಡಿಗೆ ಮಾಡಲು ಟೈಂ, ಪೇಶೆನ್ಸ್ ಎರಡೂ ಇಲ್ಲ! ಸೌದೆಯೂ ಇಲ್ಲ, ಇದ್ದರೆ ಇಡಲು ಜಾಗವೂ ಇಲ್ಲ!
ಮಗನಿಗೆ ಕಾಲೇಜಿಗೆ ಲೇಟಾಗುತ್ತದೆ,ಮಗಳಿಗೆ ಬಸ್ ತಪ್ಪಿ ಹೋಗುತ್ತದೆ, ಗಂಡನಿಗೆ ಕೆಲಸಕ್ಕೆ ಲೇಟಾಗುವ ಈ ಸಮಯದೊಡನೆ ಓಡುವ ಕಾಲದಲ್ಲಿ ಜೋಕ್ ಮಾಡ್ತಾ ಚಹ ಕುಡಿಯುವ ಕಾಲ ಓಡಿ ಹೋಗಿ ತುಂಬಾ ಟೈಮಾಯ್ತೇನೋ.. ಈಗ ಇರುವ ಟೈಮನೆಲ್ಲಾ ಮೊಬೈಲ್, ಕಂಪ್ಯೂಟರ್ ಗಳು ನುಂಗಿ ಹಾಕಿ, 24ಗಂಟೆ ಸಾಲದಾಗಿದೆ.. ಸೂರ್ಯ ಸಂಜೆ ಮುಳುಗುವುದು ನಿಲ್ಲಿಸುವೆನೆಂದರೂ ಜನ ಬೇಡವೆಂದೆನಲಿಕ್ಕಿಲ್ಲ!
ಕೆಲವರಿಗಂತೂ ಎ.ಸಿ.ಕೋಣೆಯೊಳಗೆ ಹೊಕ್ಕಿಕೊಂಡರೆ ಹಗಲು -ರಾತ್ರಿ ಎಂದರೇನೆಂದೇ  ತಿಳಿಯದು.ಹಲವಾರು ಮಕ್ಕಳಿಗೆ ಸೂರ್ಯನೆಂದರೇನು, ಸೂರ್ಯೋದಯ ಸೂರ್ಯಾಸ್ತ ಎಂದರೂ ಕಣ್ ಕಣ್ ಬಿಡುತ್ತಾರೆ!
ಹಾಲು ಪ್ಯಾಕೆಟ್ ಫ್ರಿಜ್ನಿಂದ ಬರುತ್ತದೆ,ಅಂಗಡಿಯಲ್ಲಿ ಸಿಗುತ್ತದೆ , ನಮಗೆ ಬೇಕಾದ ವಸ್ತುಗಳ ಮೂಲ ಅಂಗಡಿ! ನಮ್ಮ ಮಕ್ಕಳು ಸಿಬಿಎಸ್ಸಿ, ಐಸಿಎಸ್ಸಿ ಕಲಿಯುತ್ತಾ ಎ ಪ್ಲಸ್ ಗ್ರೇಡ್ ಪಡೆಯುತ್ತಿದ್ದಾರೆ, ನಾಲ್ಕು ಕನ್ನಡ ಗಾದೆಗಳು ಗೊತ್ತಿಲ್ಲ, ಮಹಾಭಾರತ,ರಾಮಾಯಣದ ಸರಳ ಪುಸ್ತಕಗಳನ್ನೂ ಓದಿಲ್ಲ! ಇದಕ್ಕೆ ಯಾರು ಹೊಣೆ? ನೆಂಟರು ಬಂದರೂ ಮಾತನಾಡಿಸದೆ ತಮ್ಮಷ್ಟಕ್ಕೆ ತಾವೇ ಇರುವ ಮಕ್ಕಳನ್ನು ಬೆಳೆಸಿದ್ದು ಯಾರು? ಪ್ರೀತಿ,ಪ್ರೇಮದ ಕವನ,ಕತೆ,ಧಾರಾವಾಹಿ, ಸಿನೇಮಾಗಳನ್ನು ಮಕ್ಕಳಿಗೆ ತೋರಿಸಿದವರು ಯಾರು? ಮಾತು ಕಲಿತಾಗಲೇ ಆಟವಾಡಲು ಗನ್ ತೆಗೆದು ಕೊಟ್ಟವರಾರು? ಸಣ್ಣ ಮಗುವನ್ನು ಕುಳ್ಳಿರಿಸಿ ಡಿಶುಂ ಡಿಶುಂ ಪಿಕ್ಚರ್ ನೋಡಿ 'ತನಗಾಗದಿದ್ದರೆ ಗುಂಡು ಹೊಡೆದು ಸಾಯಿಸು' ಎಂಬ ಕಾನ್ಸೆಪ್ಟ್ ಮೂಡಿಸಿದವರು ಯಾರು? ಇದಕ್ಕೆಲ್ಲ ಕಾರಣ ಪೋಷಕರು, ಮಕ್ಕಳೆಡೆಗೆ ಪೋಷಕ-ಪಾಲಕರ ನಿರ್ಲಕ್ಷ್ಯ. ಮಕ್ಕಳಿಗೆ ಬೇಕಾದುದು ಪ್ರೀತಿ-ವಿಶ್ವಾಸ,ಕೇರ್! ನಮಗಿಲ್ಲ ಸಮಯ! ಅಪ್ಪ ಕೆಲಸದಲ್ಲಿ, ಅಮ್ಮ ಧಾರಾವಾಹಿ ನೋಡುವುದರಲ್ಲಿ ಬ್ಯುಸಿ...ಇನ್ಯಾರು ಕೇರ್ ಮಾಡುವವರು? ಹೇಳಿ ಕೊಡುವವರು..ಅಜ್ಜಿ -ಅಜ್ಜಂದಿರನ್ನು ತಂದೆ ತಾಯಿಯರೇ ಮೂಲೆಗುಂಪು ಮಾಡಿರುವಾಗ ಅವರಿಗೆ ಮೊಮ್ಮಕ್ಕಳು ಬೆಲೆ ಕೊಡುವರೇ? ಇಷ್ಟೆಲ್ಲಕ್ಕೂ ಪೋಷಕರು ತಮ್ಮ ಮಕ್ಕಳೆಡೆಗೆ ಸಾಕಷ್ಟು ಸಮಯ, ಪ್ರೀತಿ,ತ್ಯಾಗ, ಕೇರ್ ನೀಡಬೇಕು.ಆಗ ಮಾತ್ರ ಮುಂದಿನ ಜನಾಂಗ ಉತ್ತಮವಾಗಿ ನಮ್ಮನ್ನು ನೋಡಿಕೊಳ್ಳಲು ಸಾಧ್ಯ! ಮಕ್ಕಳು 90% ಕಲಿಯುವುದು ತಮ್ಮ ಹಿರಿಯರನ್ನು ಅನುಕರಿಸಿ!! ನೆನಪಿರಲಿ, ಪೋಷಕರಾಗಿ ಉತ್ತಮ ಸಮಾಜ ನಿರ್ಮಿಸೋಣ. ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ