ಶುಕ್ರವಾರ, ನವೆಂಬರ್ 8, 2019

1272.ಹೀಗಿರಬಲ್ಲೆ

ಹೀಗಿರಬಲ್ಲೆ..

ಮರವ ಚಿಗುರಿಸಲು ತಿಳಿದಿಲ್ಲ ನನಗೆ
ಆದರೆ ಮನಗಳ ಚಿಗುರಿಸಬಲ್ಲೆ..
ಮನಗಳ ಸುಳ್ಳು ಹೇಳಿ ಉಬ್ಬಿಸಲಾರೆ
ಕಟು ಸತ್ಯವನು ಸಾರಿ ತಿದ್ದಬಲ್ಲೆ...

ಮುಂದೆ ಚೆನ್ನಾಗಿ ಮಾತನಾಡಿ ಹೊಗಳಲಾರೆ
ಹಿಂದೆ ಬೇರೆಯೇ ಹೇಳಿ ತೆಗಳಲೊಲ್ಲೆ
ಎದುರು ಮರ್ಯಾದೆಯ ಕೊಟ್ಟು ಮೇಲೇರಿಸಿ
ಹಿಂದೆ ದ್ವೇಷ ಕಕ್ಕುವ ಕಾರ್ಯ ಮಾಡಲೊಲ್ಲೆ.

ಹೃದಯದಿ ಅಹಿತವ ತುಂಬಿ ನಗುತ ಬದುಕಲಾರೆ
ನೋವ ತೋಡುತ ಹಗುರಾಗಬಲ್ಲೆ.
ಮೆದುಳಲಿ ದುರಾಲೋಚನೆಗಳ ತುಂಬಿಕೊಳ್ಳಲಾರೆ
ಇತರರ ದುಷ್ಟ ಕಾರ್ಯಗಳೆಡೆ ತಲೆ ಹಾಕಲೊಲ್ಲೆ.

ಮಾಡಲಿರುವ ಕಾರ್ಯಗಳ ಬಗ್ಗೆ ಯೋಚಿಸುವೆ
ಇತರರ ಹೀಗಳೆದು ಕೆಳಗಿಳಿಸಲೊಲ್ಲೆ..
ಪರರ ಉತ್ತಮ ಕಾರ್ಯಗಳ ಅಭಿನಂದಿಸುವೆ
ದುಶ್ಚಟಗಳ ನೇರವಾಗಿ ಖಂಡಿಸಬಲ್ಲೆ..

ನನ್ನ ವಚನವ ಪಾಲಿಸಿ ನುಡಿದಂತೆ ನಡೆವೆ
ಹಿರಿಯರಾಣತಿಯ ಮರೆಯಲೊಲ್ಲೆ..
ಕಿರಿಯರಿಗೆ ಗುರುವಾಗಿ ಕೈ ಹಿಡಿದು ನಡೆಸುವೆ.
ನೋವುಣಲು ಆಲೋಚನೆಗಳ ಮಾಡಲೊಲ್ಲೆ..
@ಪ್ರೇಮ್@
08.11.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ