ಮಂಗಳವಾರ, ನವೆಂಬರ್ 12, 2019

1280. ಗಝಲ್-6

ಗಝಲ್

ನನ್ನ ಕೇಳದೆಯೇ ಹುಡುಗನನ್ನು ನೋಡಿ ಮದುವೆಯೆನುವಾಗ ನಾ ಮೌನ ಸಖಿ!
ಪ್ಯಾರ್ ಎಂದರೇನೆಂದು ನನಗೆ ತಿಳಿಯುವುದಿಲ್ಲವೆಂದು ಅರಿತಾಗ ನಾ ಮೌನ ಸಖಿ..

ಶಾಲೆಗೆ ಹೋಗಿ ಮನೆಗೆ ಬರುವಾಗಲೂ ಪರರಂತೆ ಸ್ವಾತಂತ್ರ್ಯ ಎನಗೆ ಇರಲಿಲ್ಲ. 
ಗೊಂಬೆಯಂತೆ ಸಾಕಿ ಬೆಳೆಸಿ, ತನ್ನಾಕಾಂಕ್ಷೆಗಳ ಹೇರುವಾಗ ನಾ ಮೌನ ಸಖಿ..

ಬೇಕಾದ, ನೋಡಿದ, ಹಲವು ಆಸೆಪಟ್ಟ ವಸ್ತುಗಳ ಖರೀದಿಸುವ ಆಸೆಯೇನೋ ನನಗಿತ್ತು.
ಏನು ಬೇಕು ನಿನಗೆನುವ ಪ್ರಶ್ನೆಗಳೇ ಬರದಾಗ ನಾ ಮೌನ ಸಖಿ..

ಹುಟ್ಟುವಾಗಲೇ ಸರ್ವರೂ ಅವಳು ಹೆಣ್ಣು ಎಂಬ ಹಣೆಪಟ್ಟಿ ತೊಡಿಸಿದರು ಎನಗೆ.
ಗಿಳಿಯಂತೆ ನನ್ನ ಪಂಜರದೊಳು ಇಟ್ಟು ಸಾಕುವಾಗ ನಾ ಮೌನ ಸಖಿ..

ಕ್ಷಣವೂ ಖುಲ್ಲಾ ಬದುಕಲು ಅವಕಾಶಗಳು ಎಂದೂ ಸಿಗಲೇ ಇಲ್ಲ  ಬಾಳಲಿ.
ಕೈಲಿರುವ ವಸ್ತುವನು ಬಾಯಿಗಿಡಲೂ ಹಿರಿಯರ ಕೇಳಬೇಕಾದಾಗ ನಾ ಮೌನ ಸಖಿ..

ಎದ್ದರೂ, ಕುಂತರೂ, ನಿಂತರೂ ಏಕೆ, ಹೇಗೆ, ಎಲ್ಲಿ ಎನುವ ಪ್ರಶ್ನೆಗಳು.
ಸಿರಿತನದ ಸುಳಿಯ ಒಳಗೆ ಸಿಕ್ಕಿ ನಲುಗುವಾಗ ನಾ ಮೌನ ಸಖಿ..

ಪ್ರೀತಿ, ಪ್ರೇಮ, ಇಶ್ಕ್ , ಮೊಹಬ್ಬತ್ ಗಳು ನನ್ನ ಪದಕೋಶದಲಿ ಬರಲೇ ಇಲ್ಲ.
ಕೈ ಹಿಡಿದ ಪುರುಷ ಪುರುಷನಲ್ಲದವನೆಂದು ತಿಳಿದಾಗ ನಾ ಮೌನ ಸಖಿ..
@ಪ್ರೇಮ್@
05.11.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ