ಮಂಗಳವಾರ, ನವೆಂಬರ್ 12, 2019

1279. ಗಝಲ್-7

ಗಝಲ್

ನೀನು ತಾಯಿ ಮನೆಗೆ ಹೋದೆ ಖುಷಿಯಲಿ ಜಾನು!
ಈ ಒಂಟಿತನವನು ನಾ ಹೇಗೆ ಮರೆಯಲಿ ಜಾನು?

 ಹುಣಸೆ ಮರದ ಒಂಟಿ ಪಿಶಾಚಿಯಂತಾಗಿಹೆನು!
ಯಾರ ಜೊತೆ ಭಾವನೆಗಳ ಹಂಚಿಕೊಳ್ಳಲಿ ಜಾನು?

ಮನವಲ್ಲ ನಿನ್ನ ಹೃದಯದಲ್ಲೆ ನೆಲೆವೂರಿದೆಯಲ್ಲ?
ಹರುಷದಿ ಯಾರೊಡನೆ ಹೊಂದಿಕೊಳ್ಳಲಿ ಜಾನು?

ಸಂಸಾರ ಸಾಗರದಿ ಮಿಂದು ಶುಭ್ರನಾಗುತ್ತಿದ್ದೆ.
ಸಂಗಾತಿ ಇರದ ಮನೆಯಲಿ ಹೇಗಿರಲಿ ಜಾನು?

ನಿಟ್ಟುಸಿರ ಸಹಕಾರ ನಿನ್ನಿಂದ ನನಗಿದೆ ಸದಾಕಾಲ,
ನೀನಿರದೆ ಗುಡಿಯೊಳಗೆ  ಯಾರಿಗೇನೆನಲಿ ಜಾನು?

ಬರದ ಬಾಳಲಿ ಬಂಗಾರವಾಗಿ ನೀ ಬಂದಿರುವೆ.
ಬಡವನ ಬಹಳ ಪ್ರೀತಿಸಲು ಇರು ಬಳಿಯಲಿ ಜಾನು.

ನೀನಿರದ ಕ್ಷಣದಿ ಮರವ ಬಿಟ್ಟ ಬಳ್ಳಿಯಂತಾಗುವೆ,
ನೀನಿಲ್ಲದ ಖಾಲಿ ಮನೆಯಲಿ ಏನ ತಿನ್ನಲಿ ಜಾನು?

ಗಗನ ಸುಮವಾಗಿಹೆ ನೀನಿಂದು ನನ್ನ ಕರೆಗಳಿಗೆ
ಗಹನದಲಿ ಚಿಂತಿಸುತ ಹೇಗೆ ಸುಮ್ಮನಿರಲಿ ಜಾನು?

ಪ್ರೇಮ ಭಾವವ ಮೈದುಂಬಿಸಿಕೊಂಡವಳು ನನ್ನಾಕೆ
ಮುದುಡಿದ ಹೂವಂತಾಗಿಹೆ,ಹೇಗರಳಲಿ ಜಾನು?
@ಪ್ರೇಮ್@
07.11.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ