ಗುರುವಾರ, ಜನವರಿ 2, 2020

1300. ಗಝಲ್-3

ಗಝಲ್

ನಿನ್ನೊಡನೆ ಕಳೆದು ಕಳೆಯುತಿಹ ಕ್ಷಣಗಳು ಅದೆಂಥ ನವಿರು
ಮೌನದಲು ಮಾತಾಡುವ ಭಾಷೆಯದು ನಗುವಂಥ ನವಿರು..

ಕಣ್ಣುಗಳು ಕಲೆತಾಗಿನ ಭಾವದೊಲವ ಅಂದ ಆನಂದ
ಪ್ರತಿ ಸ್ಪರ್ಶಕೂ ಮೃದು ತನು ತಲ್ಲಣ ಮನಕ್ಕೆಂಥ ನವಿರು!

ಹೆಜ್ಜೆಯೊಂದಿಗೆ ಹೆಜ್ಜೆಯನುಭವ ಹೃದಯದ ಹಿಡಿ ಪ್ರೀತಿ
ಮೀಟುವಂತಹ ರಾಗ ರಸದಲಿ ಪಕ್ವ ಲತೆಯಂಥ ನವಿರು!

ದೃಶ್ಯ ಶ್ರವಣದ ನಡುವೆಯಲ್ಲದೆ ನಾಸಿಕದ ಉಸಿರುಸಿರಲಿ
ಕೃಶವೇ ಆಗದೆ ವೇಗದೋಡುವ ಅಲೆಯಂಥ ನವಿರು.

ಇನಿದನಿಯ ಸನ್ನೆಯ ಸಹಿತ ಸವಾಲು ಸವಿನೆನಪಿಗೆ ಸ್ವಾಗತ
ಸಾರ್ಥಕ ಬದುಕಿನ ಸಂತೃಪ್ತಿಯ ನವಿಲಿನಂಥ ನವಿರು..

ಮಹಲಿನಲ್ಲು ಕುಹಕವಿರದ ನಿತ್ಯ ನಮ್ರ ನವೆಯು 
ಮಜಲಿಲ್ಲದ ಮೋಹವದು ಸ್ವಚ್ಛ  ಸ್ನೇಹದಂಥ ನವಿರು

ಹಸಿರ ಮುದವ ವದನಕೆ ನೀಡುವಂದದಿ ಗರಿಗೆದರುವ ಲೋಕ
ಪ್ರೇಮನಾದದಿಂದ ನಾಡಿಬಡಿತ ನಡೆಸುವಂಥ ನವಿರು!
@ಪ್ರೇಮ್@
12.12.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ