ಮಾನವರಾಗೋಣ..
ಎರಡು ಕೋಣೆಗಳ ಇಬ್ಭಾಗಿಸುವ ಗೋಡೆಯಾಗದಿರೋಣ,
ಎರಡು ತುಂಡುಗಳ ಜತೆಗೂಡಿಸುವ ಸೂಜಿಯಾಗೋಣ.//
ಹಾಲು ನೀರುಗಳಂತೆ ಮಿಲನಗೊಂಡ ಸ್ನೇಹಿತರಾಗೋಣ.
ನೀರಲಿ ಕರಗದ ಎಣ್ಣೆಯಂತೆ ಕೋಪಿಸಿ ನಿಲ್ಲದಿರೋಣ!//
ಮನಗಳ ಒಂದೆಡೆ ಜೋಡಿಸಿ ಕಟ್ಟುವ ಇಟ್ಟಿಗೆಯಾಗೋಣ.
ಹೃದಯವ ಒಡೆದು ಕುಟ್ಟಿ ಪುಡಿಮಾಡುವ ಸುತ್ತಿಗೆಯಾಗದಿರೋಣ!//
ಉತ್ತಮ ಆಲೋಚನೆ ಬೆಳೆಸಿಕೊಳ್ಳುವ ಯೋಗಿಗಳಾಗೋಣ.
ಉತ್ತಮ ಕಾರ್ಯವ ಪರರಿಗೆ ತಿಳಿಸುವ ಗುರುಗಳೆ ಆಗೋಣ.//
ತಗ್ಗಿ ಬಗ್ಗಿ ನಡೆಯಲು ಕಲಿಯುವ ವಿದ್ಯಾರ್ಥಿಯಾಗೋಣ.
ಸುಗ್ಗಿಯ ಕಾಲದಿ ಮೈಮನ ಮರೆಯುವ ರೈತನೇ ಆಗೋಣ//
ಊರಿಗೆ ಸಹಾಯ ಹಸ್ತವ ನೀಡುತ ಮುಖಂಡನಾಗೋಣ.
ಸಮಾಜವ ತಿದ್ದುತ, ಸತ್ಯವ ಹೇಳುತ ಕವಿಗಳೇ ಆಗೋಣ.//
ತಪ್ಪನು ತಿಳಿದು ಸರಿಪಡಿಸೆನುತಲಿ ನಾವೂ ಕಲಿಯೋಣ.
ಯೋಗ, ಧ್ಯಾನದಿ ಮೈಮರೆಯುತಲಿ ಆರೋಗ್ಯ ಹೊಂದೋಣ.//
ಪರರಿಗೂ ಕಷ್ಟವು ಇದೆಯೆಂದು ತಿಳಿಯುವ ಹಿತೈಷಿಯಾಗೋಣ
ಅವರವರಿಗೆ ಅವರಷ್ಟಕೆ ಬಾಳಲು ನೆಮ್ಮದಿ ನೀಡೋಣ.//
ತಾನೇ ಪ್ರಪಂಚದಿ ಜ್ಞಾನಿಯು ಎನುತ ಬೀಗದೆ ಬಾಳೋಣ.
ಹಲವಾರು ಭಾಷೆಯ ಕಲಿತು ನಾವು ಗೆಳೆಯರೇ ಆಗೋಣ.//
ಮೂಕ ಪ್ರಾಣಿಗೆ ಕರುಣೆಯ ತೋರುತ ಪ್ರಾಜ್ಞರಾಗೋಣ.
ಮಾನವತೆಯನು ಎತ್ತಿ ಹಿಡಿಯುತ ಮಾನವರಾಗೋಣ.//
@ಪ್ರೇಮ್@
12.11.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ