ಕೊಂದು ಹಾಕಿದರು
ಹೆಮ್ಮರವನು ಕೊಂದು ಹಾಕಿದರು
ಇಂದಿಲ್ಲಿ ಸಮಾಜದ ನಡುವೆ
ಬಿರು ಬಿಸಿಲಿನಲ್ಲಿ, ಸರ್ವರ ಸಮ್ಮುಖದಲ್ಲಿ!
ಯಾರೊಬ್ಬರೂ ತಡೆಯಲಿಲ್ಲ ನನ್ನ ಸಾವನಿಲ್ಲಿ!
ನಾ ಹೆಮ್ಮರವಾಗಿ ಬೆಳೆದಿದ್ದೆ
ಅಗಲ, ಎತ್ತರ ದಷ್ಟಪುಷ್ಟ
ದೇಹದಲ್ಲಿ ಮಾತ್ರವಲ್ಲ, ಮನಸ್ಸಿನಲ್ಲೂ..
ಯಾರಿಗೂ ಕೇಡು ಬಯಸದೆ
ಓದಿ ಬರೆಯುತ್ತಾ, ಲೆಕ್ಕ ಮಾಡುತ್ತಾ
ವಯಸ್ಸನ್ನು ಎನಿಸುತ್ತಾ, ನೆರಳು ಕೊಡುತ್ತಾ..
ಕಿರಿಯರ ಆಶೀರ್ವಾದಿಸುತ್ತಾ, ಹಿರಿಯರ ನೆನೆಯುತ್ತಾ
ನನ್ನಷ್ಟಕ್ಕೆ ನಾನೇ ಬದುಕುತ್ತಿದ್ದೆ
ಹಲ್ಲಿಲ್ಲದಿದ್ದರೂ ನಗುತ್ತಿದ್ದೆ
ಜ್ಞಾನದ ಅಮೃತ ಉಣಬಡಿಸುತ್ತಿದ್ದೆ
ತಾಂತ್ರಿಕ ಯುಗ ಬಂತು ನೋಡಿ!
ಬರೆಯಲು, ಓದಲು ಯಂತ್ರಗಳೇ
ನಮ್ಮ ಮೆದುಳಿನ ಶಕ್ತಿಗೆ ಬೆಲೆ ಇಲ್ಲ
ಸಾವಿರ ಮೆದುಳು ಒಂದೇ ಯಂತ್ರದಲ್ಲಿ ಇದೆಯಂತೆ
ಇನ್ನು ನಾನು ನೀವು ಯಾಕೆ ಬೇಕು?
ರಸ್ತೆ ಅಗಲಿಸ ಬೇಕಂತೆ
ಚತುಷ್ಪಥ, ಅಷ್ಟಪಥ ಬೇಕು
ಅವರು ಮುಂದುವರೆಯಬೇಕಂತೆ ಜನರಿಗೆ!
ನಾ ಹಿರಿಯ, ಎಂದು ಬೀಳುವೇನೋ ಎಂಬ ಭಯ ಅವರಿಗೆ!
ಅಷ್ಟೇ ಅಲ್ಲ, ನನ್ನ ಎಲೆಗಳು!
ಹಿಂದೆ ಗೊಬ್ಬರವಾಗುತ್ತಿದ್ದವು
ಈಗ ಕಸ! ಗುಡಿಸಲು ಕೆಲಸದವರಿಲ್ಲ!
ಸಮಯವೂ ಇಲ್ಲ, ಮನೆ ಪರಿಶುದ್ಧ!
ಮನವೋ! ಅದರ ವಿರುದ್ಧ!
ಜೆಸಿಬಿ ಇಟಾಚಿ ಕ್ರೇನ್ ಎಲ್ಲಾ ಬಂತು
ಜನರೂ ಬಂದರು!
ಕತ್ತಿ, ಕೊಡಲಿ, ಗರಗಸ, ಯಂತ್ರಗಳು
ಅದೆಷ್ಟು ಜನ! ಸಂತಸ ಮೊಗದಿ
ಈಗಿನ ರಾಕ್ಷಸರು!
ಇಷ್ಟು ವರ್ಷ ನೆರಳು ವಿದ್ಯೆ ಕೊಟ್ಟು
ಬಾಳಿ ಬದುಕಿದ, ಬದುಕಿಸಿದ ಹಿರಿಜೀವ
ಈಗ ಕಸ, ವೇಸ್ಟ್, ಡೇಂಜರ್, ಕಿಲ್ಲರ್!
ಅಬ್ಬಾ ! ಈ ಪದಗಳು ನನಗೆ!
ನಾ ದುಡಿದು ಉತ್ತಮ ಗಾಳಿ, ನೀರು, ನೆರಳು, ಮಳೆ, ಹಣ್ಣು, ಹೂವು, ಕಾಯಿ, ಕೊಟ್ಟದ್ದನ್ನು ತಿಂದು
ನನ್ನಾಸರೆಯಲ್ಲಿ ಬೆಳೆದ ಕಿರಿಯರ
ಬೃಹತ್ ಹೆಸರುಗಳು ನನಗೆ!
ನಾ ಸಾಯುತ್ತಿಲ್ಲ, ನನಗೆ ಸಾವು ಬೇಕಿಲ್ಲ
ಆದರೆ ಸಾಯಿಸುತ್ತಾ, ಕೊಲ್ಲುತ್ತಾ ಇದ್ದಾರೆ ನನ್ನ!
ನನ್ನ ಕೊಲ್ಲಲು ಅದೆಷ್ಟು ಜನ!
ಅದೆಷ್ಟು ಯೋಜನೆಗಳು!
ಇಂಗು ತುಂಬಿಸುತ್ತಾರಂತೆ ದೇಹದ ಒಳಗೆ
ಖರ್ಚಿನ ಬಗ್ಗೆ ಲೆಕ್ಕಾಚಾರ ಹೊರಗೆ!
ಆಸ್ಪತ್ರೆ, ಮದ್ದು, ಕಷಾಯ ಬೇಕಿಲ್ಲ ನನಗೆ
ಸಾಕುವವರೂ ಬೇಡ, ಜಾಗವಿದೆಯಲ್ಲ ಸ್ವಂತ!
ನನ್ನ ದೇಹವ ಮಾರಿದ ಹಣ ಬೇಕು ಅವರಿಗೆ!
ಬದುಕು ಈಗ ವ್ಯವಹಾರ, ಕಾಸೇ ಮುಖ್ಯ!
ಕಳೆದ ಹಗಲೆಷ್ಟೋ, ಇರುಳೆಷ್ಟೋ
ನಾ ನೆರಳಿತ್ತು ಕೈ ಹಿಡಿದು ಸಲಹಿದ ಜನರೆಷ್ಟೋ
ನಡೆದ ಹಾದಿ ಎನಿತು ದೂರವೋ?
ಅದ್ಯಾವುದೂ ಪರಿವೆಯೇ ಇಲ್ಲ ಇಂದು
ಜ್ಞಾನ ಸಂಘ, ಪರಿವಾರ, ಯಂತ್ರಗಳ ಎದುರು ಲೆಕ್ಕಕ್ಕಿದ್ದರೆ ತಾನೇ!
ನಾ ಹಿರಿಯ ಎಂಬುದಕ್ಕೆ ಬೆಲೆ ಇಲ್ಲ
ನನ್ನ ಜ್ಞಾನಕ್ಕೂ ಬೆಲೆ ಇಲ್ಲ
ಬದುಕಿನ ಪಾಠಕ್ಕೂ ಬೆಲೆಯೇ ಇಲ್ಲ
ಕಲಿತ ವಿದ್ಯೆಗೂ ಒಲವಿಲ್ಲ
ವಯಸ್ಸು, ಓದು, ಊಹೂಹ್ಜ಼ೂ..
ನಾ ಕಾಡು ಬಿದ್ದು, ಬಿದ್ದು ಹೋಗುವ, ಮುದಿ ಜೀವ
ಇಂಗು ತುಂಬಿಸ ಬೇಕಂತೆ ನನ್ನೊಳಗೆ!
ಗರಗಸದ ಹರಿತ ಸಾಲದಂತೆ ನನಗೆ!
ಕೊಡಲಿ ಚಿಕ್ಕದಾಯಿತಂತೆ!
ಮುರಿದ ಕೊಂಬೆಗಳಿಂದ ದನ, ಜನ, ಮನೆಗೆ ಹಾನಿಯಂತೆ!
ಅದಕ್ಕೆ ನನ್ನ ನಿಧಾನವಾಗಿ ಯಂತ್ರಗಳಿಂದ ಸಾಯಿಸಬೇಕಂತೆ!
ನನ್ನ ಯಾತನೆ! ನನ್ನ ನೋವು!
ಯಾರಿಗೆ ಬೇಕಿದೆ ಅದು?
ಯಾಕಾಗಿ ಬೇಕಿದೆ! ನನ್ನ ಮಾರುವವ ಒಬ್ಬ, ಕತ್ತರಿಸುವವ ನಿತ್ಯ ಹೊಟ್ಟೆ ಪಾಡಿಗಾಗಿ ದುಡಿವ ಕೂಲಿ ಕೆಲಸದವ!
ಹಣ ಮಾಡುವವ ಮಧ್ಯವರ್ತಿ
ಆಜ್ಞೆ ಮಾಡಿದವ ಇನ್ನೊಬ್ಬ!
ಯಾರನ್ನು ದೂರಲಿ ನಾನು?
ಮರ ಕಡಿಸಬೇಕು ಎಂದವನನ್ನೇ?
ಮರ ಹಳತಾಯಿತು, ಬೀಳಬಹುದು ಎನ್ನುವವನನ್ನೇ!
ಮರದ ಎಲೆಗಳು ಕಸ ಎಂದು ಜರುಗಿದವನನ್ನೇ!
ಹಳೆ ಮರವ ಕತ್ತಸರಿಸಿ ಎಂದು ಆಜ್ಞೆ ಕೊಟ್ಟವನನ್ನೇ?
ಹೊಟ್ಟೆ ಪಾಡಿನ ಬದುಕಿಗಾಗಿ ನನ್ನ ಕತ್ತರಿಸಿದವನನ್ನೇ?
ನನ್ನ ಮಾರಿ ಹಣ ಪಡೆದು ಸಾರಾಯಿ ಕುಡಿದವನನ್ನೇ?
ನನ್ನ ಬೆಂಕಿಯಿತ್ತು ಉರಿಸಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸಿದ ತಾಯನ್ನೇ?
ನನ್ನಾಸರೆಯಲ್ಲೇ ಬೆಳೆದು ನನಗೆ ಎರಡು ಬಗೆದವನನ್ನೇ?
ಸಾಯಿಸಿಬಿಟ್ಟರು ನನ್ನ!
ನಾ ಮುದುಕ! ನಾ ಹಳೆ ಮರ!
ನನ್ನಿಂದ ಪ್ರಯೋಜನವಿಲ್ಲ!
ನಾ ಬದುಕಿದ್ದರೂ ಆದಾಯ ಇಲ್ಲ!
ತುಂಡು ತುಂಡಾಗಿ ಕತ್ತರಿಸಿ!
ಮನವ ಛಿದ್ರ ಛಿದ್ರವಾಗಿಸಿ
ದೇಹದ ಹಾಗೆಯೇ!
@ಹನಿಬಿಂದು@
19.08.2022