ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-60
ಸಂಸಾರ ಅಂದ ಮೇಲೆ ಪ್ರೀತಿ- ನೀತಿ , ಜಗಳ-ಕದನ, ಹುಟ್ಟು- ಸಾವು ಪ್ರತಿ ಮನೆಯಲ್ಲೂ ಸರ್ವೇ ಸಾಮಾನ್ಯ. ಪ್ರತಿಯೊಬ್ಬರ ಮನೆಯ ದೋಸೆಯೂ ತೂತೇ. ಹಾಗೇ ನಾವು 'ಸಿರಿವಂತರು' ಅಂದುಕೊಂಡವರ ಮನೇಲೂ ಇದಕ್ಕೇನೂ ಕಡಿಮೆಯಿಲ್ಲ, 'ದೊಡ್ಡ ಮನೆಗೆ ದೊಡ್ಡ ಬಾಗಿಲು' ಎಂದಂತೆ ಅವರವರ ಕಷ್ಟ ಅವರಿಗೆ ದೊಡ್ಡದೆ. ಟೆನ್ಶನ್ ಇಲ್ಲದ ಮನೆ, ಮನವುಂಟೇ?
ಹಾಗಂತ ಒಂದು ಕುಟುಂಬದ ಜಗಳ, ಮನಸ್ತಾಪಗಳನ್ನು ಬೇರೊಂದು ಕುಟುಂಬದವ ಕೇಳಿದರೂ ಒಂದು ಕುಟುಂಬದ ನಡುವೆ ಸರಿಪಡಿಸಲು ಹೋಗಬಾರದು. ಏಕೆಂದರೆ ಅವ ಮೂರನೆಯವ. ಒಂದು ಉದಾಹರಣೆ ನೋಡಿ. ನಾನಿದ್ದ ಊರಿನಲ್ಲಿ ಒಬ್ಬರು ಬ್ರಾಹ್ಮಣ ಸಾತ್ವಿಕರಿದ್ದರು. ಹೆಸರು ಮುರಳೀಧರ ರಾವ್ ಅಂತ. ಬ್ರಾಹ್ಮಣ ಸಮುದಾಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿರುವ ಕಾರಣ ಅವರಿಗೆ ವಯಸ್ಸು ನಲವತ್ತು ಕಳೆದರೂ ಮದುವೆಯಾಗಿರಲಿಲ್ಲ. ಹಾಗಂತ ಅವರು ಕೆಟ್ಟವರು, ಕಾಮುಕರಂತೂ ಅಲ್ಲ. ತುಂಬಾ ಸೂಕ್ಷ್ಮ ಹೃದಯಿ, ಸೆನ್ಸಿಟಿವ್. ಯಾರಿಗಾದರೂ ನೋವಾದರೆ ಸಹಿಸದವರು.
ಅವರ ಪಕ್ಕದ ಮನೆಯಲ್ಲೆ ರಂಗ ರಂಗಿ ವಾಸವಾಗಿದ್ದರು. ರಂಗ ಶತ ಕುಡುಕ. ವರ್ಷದ ೩೬೫ ದಿನವೂ ಕುಡಿದು ಬಂದು ಹೆಂಡತಿಗೆ ಹೊಡೆಯುವ, ಊರಿಡೀ ಕೇಳುವಂತೆ ಜಗಳವಾಡುವವನು. ಇದನ್ನು ನೋಡಿ, ಕೇಳಿದ ಭಟ್ಟರಿಗೆ ಪಾಪ ಬೇಸರವಾಯಿತು. ರಂಗಿಯನ್ನೂ ಮಕ್ಕಳನ್ನೂ ರಕ್ಷಿಸಬೇಕೆಂದು ಯೋಚಿಸಿದ ಅವರು ರಂಗಿಯ ಬಳಿ ಮಾತನಾಡಿ ಓದಿಗೆ ಮಕ್ಕಳನ್ನು ದೂರದ ಪೇಟೆಯಲ್ಲಿರುವ ಆಶ್ರಮದಲ್ಲಿ ಬಿಡಲು ಹೇಳಿದರು. ರಂಗಿ ಈ ಮಾತನ್ನು ತನ್ನ ಗಂಡನಲ್ಲಿ ಹೇಳಲು 'ನೀನು ಮದುವೆಯಾಗದ ಅವನ ಬಳಿ ಮಾತನಾಡಲು ಏಕೆ ಹೋಗಿದ್ದೆ' ಎನುತಾ ಕತ್ತೆ ತರಹ ಬಡಿಯಲು ಪ್ರಾರಂಭಿಸಿದ ಅವಳಿಗೆ! ರಂಗಿ ನೋವಿನಿಂದ ಚೀರಿದಳು!
ನಮ್ಮ ಭಟ್ರು ಪಾಪ ಇದನ್ನು ಕೇಳಿ ಜಗಳ ಬಿಡಿಸಲು ಹೋದರು. ಅವರ ಜೀವನ ಒಳ್ಳೆಯದಾಗಲೆಂಬ ಸದಾಶಯ ಅವರದು. ಆದರೆ ಅವರನ್ನು ಕಂಡ ರಂಗ ಮಡದಿಗೆ ಮತ್ತಷ್ಟು ಹೊಡೆಯುತ್ತಾ 'ಅದೋ, ನಿನ್ನ ಬಾಡಿಗಾರ್ಡ್ ಬಂದ...'ಎನ್ನುತ್ತಾ, ಭಟ್ಟರಿಗೆ ಚೆನ್ನಾಗಿ ಬೇಡದ ಮಾತುಗಳನ್ನಾಡಿ ಮುಖಭಂಗ ಮಾಡಿ ಕಳುಹಿಸಿದ. ನಿನಗೆ ಹುಡುಗಿ ಸಿಕ್ಕಿಲ್ಲವೆಂದು ನೀನು ನನ್ನ ಮಡದಿಯ ಮೇಲೆ ಕಣ್ಣು ಹಾಕಿರುವೆ, ನಿನಗೇಕೆ ನಮ್ಮ ಕುಟುಂಬದ ವಿಷಯ? ನಾವು ಹೇಗಾದರೂ ಇರುತ್ತೇವೆ, ಕೇಳಲು ನೀನಾರು, ನನ್ನ ಹೆಂಡತಿ ನಾನು ಹೊಡೆಯುವೆ, ಬಡಿಯುವೆ ನೀನಾರು ನಡುವೆ, ನಮಗೆ ಹೇಳಲು ಬರುವ ಮೊದಲು ನಿನಗಾಗಿ ಒಂದು ಹುಡುಗಿ ನೋಡಿ ಸಂಸಾರ ಅಂದ್ರೇನು ಅಂತ ತಿಳಿದುಕೋ, ಮತ್ತೆ ನನ್ನ ಮಡದಿಗೆ ಬುದ್ಧಿ ಹೇಳಲು ಬಾ, ನಾವೇನು ಬೇಕಾದರೂ ಮಾಡಿಕೊಳ್ಳುತ್ತೇವೆ, ಇದು ನಮ್ಮ ಕುಟುಂಬಕ್ಕೆ ಬಿಟ್ಟ ವಿಚಾರ. ನಿನ್ನ ಕುಟುಂಬದ ಬಗ್ಗೆ ನೀನು ಚಿಂತಿಸು...' ಎಂದುಬಿಟ್ಟ ರಂಗ! ರಂಗಿ ಗಂಡನಿಗೆ ಬೆಂಗಾವಲಾಗಿ ನಿಂತಿದ್ದಳು!!!
ಅದಕ್ಕೇ ನಮಗೆ ನಾವೇ ಪರಿಧಿಯೊಂದನ್ನು ಹಾಕಿಕೊಂಡು, ಕುಟುಂಬವನ್ನು ಹೊರಟುಪಡಿಸಿ, ಪರರ ಸಹಾಯಕ್ಕೆ ಅವರ ಕುಟುಂಬದ ನಡುವೆ ಹೋಗದಿರುವುದೇ ಉತ್ತಮವೆಂದು ನನ್ನ ಅನಿಸಿಕೆ. ಪರರ ವಸ್ತು ಪಾಶಾಣ ಅಂತಾರೆ! ಪರರ ಬದುಕಲ್ಲಿ ನಾವೂ ಪಾಷಾಣಗಳೇ ಅಲ್ಲವೇ?!!ನೀವೇನಂತೀರಿ?
@ಪ್ರೇಮ್@
04.01.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ