ಶುಕ್ರವಾರ, ಜನವರಿ 1, 2021

ಲಾಕ್ ಡೌನ್



ಈಗಿನ ಪರಿಸ್ಥಿತಿ

      ಊರಿಗೂರೇ ಲಾಕ್ ಡೌನ್, ಜಿಲ್ಲೆಗೆ ಜಿಲ್ಲೆಯೇ ಕರ್ಫ್ಯೂ, ರಾಜ್ಯಕ್ಕೆ ರಾಜ್ಯವೇ ಬಂದ್, ದೇಶಕ್ಕೆ ದೇಶವೇ ಮೌನ. ಪ್ರಪಂಚವಿಡೀ ಒಂದೇ ಸುದ್ದಿ, ಇಷ್ಟು ಜನರಿಗೆ ಅಟ್ಯಾಕ್, ಇಷ್ಟು ಜನ ಕ್ವಾರೆಂಟೈನ್ಡ್, ಇಷ್ಟು ಜನ ಸೇಫ್, ಇಷ್ಟು ಡೆತ್! ನಾನಂತೂ ಈಗ ನ್ಯೂಸ್ ಚಾನೆಲ್ ನೋಡೋದೇ ಬಿಟ್ಟಿರುವೆ. 
     ಕಾರಣ ಏನು ಗೊತ್ತೇ? ಪ್ರಧಾನಿಗಳ ಮಾತು ಕೇಳಿ ತೆಪ್ಪಗೆ ಮನೆಯೊಳಗೆ ತುಳಿತವರಿಗೇನೂ ಆಗ್ಲಿಲ್ಲ. ಏನಾಗುತ್ತೆ ನೋಡೋಣ ಎಂಬ ಅಹಂಕಾರಿಗಳಿಂದ ಹರಡುತ್ತಿದೆ ರೋಗ! ಅಂತಹ  ಅಹಂಕಾರಿಗಳು ಯಾರು ಏನು ಹೇಳಿದ್ರೂ ಕೇಳಲ್ಲ ಅಂದ್ಮೇಲೆ ಸರಕಾರ ಅವರಿಗೇಕೆ ಖರ್ಚು ಮಾಡಬೇಕೆಂಬುದು ನನ್ನ ಪ್ರಶ್ನೆ. ಪ್ರಪಂಚ ಹಾಗೆಯೇ. ಅನುಸರಿಯುವ, ಕೇಳುವ, ಪಾಪದ ನೂರೈವತ್ತು ಕೋಟಿ ಜನರ ಉತ್ತಮ ಗುಣಗಳನ್ನು ಯಾರೂ ಗಮನಿಸುವುದೇ ಇಲ್ಲ, ಬದಲಾಗಿ ಮೊಂಡು ಹಠ ಹಿಡಿದು ರೋಗ ತಂದ, ದಿನ ನಿತ್ಯ ಹರಡುವ ನಾಲ್ಕೈದು ಸಾವಿರ ಜನರಿಗೆ ಇಡೀ ದೇಶದ ವೈದ್ಯಕೀಯ ತಂಡ, ಪೊಲಿಸ್ ಪಡೆ ಕಾವಲು ಕಾಯುತ್ಚಾ ಪರೀಕ್ಷೆ ನಡೆಸುತ್ತಾ, ಸರಕಾರ ವೆಂಟಿಲೇಟರ್, ಮಾಸ್ಕ್ ಗೆ ದುಡ್ಡು ಸುರಿಯುತ್ತಾ ಕುಳಿತಿದೆ. ಕಲಿಕೆಗಾಗಿ ಶಾಲೆಗೆ ಬಂದ ನೂರಾರು ಮಕ್ಕಳನ್ನು ಬಿಟ್ಟು ಕಲಿಯಲಾಗದೆ ಮನೆಯಲ್ಲೆ ಉಳಿದ ಒಂದು ಮಗುವನ್ನು ಶಾಲೆಗೆ ಕರೆತರಲು ಶಿಕ್ಷಕರ ತಂಡ ಹೋದಂತೆ ಭಾಸವಾಗುತ್ತಿದೆ ನನಗೆ.
    ಸರಕಾರದ ಹಣವೆಲ್ಲ ಹೀಗೇ ಪೋಲಾದರೆ ಅದು ಹೇಗೋ ದೇಶ ಮುಂದುವರೆಯುವುದು? ರೈಲ್ವೆ ಟ್ರ್ಯಾಕುಗಳೆರಡಿರುತ್ತವೆ. ಒಂದು ಮಗು ರೈಲು ಬರದ ಕಡೆ ಆಟವಾಡುತ್ತಿರುತ್ತದೆ. ಹದಿನೈದು ಮಕ್ಕಳು ರೈಲಿನ ದಾರಿಯಲ್ಲೆ ಆಟವಾಡುತ್ತಿರುತ್ತಾರೆ. ಆ ಹದಿನೈದು ಮಕ್ಕಳ ಜೀವ ಉಳಿಸಲು ಸರಿ ದಾರಿಯಲ್ಲಿರುವ ಅಮಾಯಕ ಮಗುವಿನ ಮೇಲೆ ರೈಲು ಹತ್ತಿಸುತ್ತಾರೆ. ಇದೊಂದು ಸಾಮಾನ್ಯ ಕತೆಯೆನಿಸಿದರೂ ಇಡೀ ದೇಶಕ್ಕೆ ಅನ್ವಯಿಸುವುದಿಲ್ಲವೇ? 
   ಸಿನಿಮಾ ತಾರೆಯರ, ಸಿರಿವಂತರ ಮಕ್ಕಳೆಲ್ಲ ಓದುವುದು ಬೇರೆ ಬೇರೆ ದೇಶಗಳಲ್ಲೇ. ಕಾರಣ ಭಾರತದಲ್ಲಿ ಒಳ್ಳೆಯ ಯೂನಿವರ್ಸಿಟಿಗಳಿಲ್ಲವೆಂಬುದು ಅವರಿಗೆ ಗೊತ್ತಿದೆ. ಅವರೆಲ್ಲ ತಂಡೋಪತಂಡವಾಗಿ ಊರಿಗೆ ಬಂದರು, ಕರೋನ ತಂದರು, ಹರಡಿದರು. ಅವರಿಗೇನೂ ಮಾಡದ ಸರಕಾರ ಗುಳೇ ಹೊರಟ ಪಾಪದ ಕೂಲಿ ಕಾರ್ಮಿಕರ ಮೇಲೆ ಕೆಮಿಕಲ್ ಹಾಕಿತು. ವಲಸೆ ಕೆಲಸಗಾರರು ಕೆಲಸ ಕಳೆದುಕೊಂಡರು. ಕ್ಯಾಂಟೀನ್ ನಡೆಸುತ್ತಾ ದಿನಕ್ಕೆ ನೂರಾರು ಜನರ ಹೊಟ್ಟೆ ತುಂಬಿಸುತ್ತಿದ್ದವ ಇಂದು ಹೊಟ್ಟೆಗಿಲ್ಲದೆ ಸಾಯುತ್ತಿದ್ದಾನೆ. ಯಾರದೋ ಸಂತಸಕ್ಕೆ ಮತ್ಯಾರೋ ಬೆಲೆತೆರುತ್ತಿದ್ದಾರೆ.
     ಸಮಾಜದಲ್ಲಿ ದುಡ್ಡಿರುವವರಿಗೆಂದೂ ಬೆಲೆ. ತೆಪ್ಪಗೆ ಬಂದು ಊರಿಡೀ ಸುತ್ತಿ ರೋಗ ಹರಡಿ ಈಗ ಮನೇಲಿ ಬಾಯ್ಮುಚ್ಚಿ ಕುಳಿತವ ತನಗೆ ಖಾಯಿಲೆ ಬಂತೆಂದ ತಕ್ಷಣ ದೊಡ್ಡ ಆಸ್ಪತ್ರೆಗೆ ಹೋಗಿ ಟ್ರೀಟ್ ಮೆಂಟ್ ಪಡೆದು,ಲಕ್ಷಗಟ್ಟಲೆ ಸುರಿದು ತೆಪ್ಪಗೆ ಮನೆಗೆ ಹೋಗುತ್ತಾನೆ. ಅವನಿಗೆ ಸಹಾಯ ಮಾಡಲು ಹೋಗಿ ರೋಗ ಅಂಟಿಸಿಕೊಂಡ ಬಡವ ಸತ್ತೇ ಹೋಗ್ತಾನೆ. ಇದೇ ಸಮಾಜ. ಇಲ್ಲೇ ನಾವು ಬದುಕಬೇಕಾದದ್ದು.
      ಕಾರು, ಬಂಗಲೆ, ಹಣ ಮನುಷ್ಯನನ್ನು ಸಂಕುಚಿತ ಮನೋಭಾವಕ್ಕೆ ತಳ್ಳುತ್ತವೆ. ನಾನು,ನನ್ನದು ಎಂಬ ಭಾವನೆ. ಬೇರೆಯವರನ್ನೆಂದೂ ಅವ ತನ್ನ ಕಕ್ಷೆಯೊಳಗೆ ಬಿಡಲಾರ. ಆದರೆ ಬಡವರ ರೈಲು, ಬಸ್ಸು, ಸರ್ವಿಸ್ ಟ್ಯಾಕ್ಸಿ ಜೀವನದಲ್ಲಿ ಅಡ್ಜಸ್ಟ್ ಮೆಂಟನ್ನು ತನ್ನೊಡನೆ ಇತರರಿಗೂ ಸಹಾಯವಾಗಲಿ ಎಂಬ ಭಾವನೆಯನ್ನು ಬೆಳೆಸುತ್ತವೆ. ಸಿರಿವಂತರಿಗೂ ಬಡವರಿಗೂ ಇರುವ ವ್ಯತ್ಯಾಸ ಇಷ್ಟೆ. 
    ಸಿರಿವಂತಿಕೆಯೆಂದರೆ ಇಲ್ಲಿ ನಾನು ಕೇವಲ ಹಣದ ಮೊತ್ತದ ಬಗ್ಗೆ ಮಾತನಾಡುತ್ತಿಲ್ಲ, ಗುಣವೆಂಬ ಅಮೂಲ್ಯ ವಸ್ತುವನ್ನು ಹೊಂದಿದ ಹೃದಯ ಸಿರಿವಂತಿಕೆಯ ಬಗ್ಗೆಯೂ, ಹಂಚಿ ತಿಂದು, ಸಹಕಾರದಿ ಬದುಕುತ್ತಿರುವ ಮನಗಳ ಬಗ್ಗೆಯೂ. ನಿಮ್ಮನ್ನೊಮ್ಮೆ ನೀವು ಎಲ್ಲಾ ದೃಷ್ಟಿ ಕೋನಗಳಿಂದ ಪರೀಕ್ಷಿಸಿ. ನೀವು ಸಿರಿವಂತ ಹೃದಯದವರೇ? ಏನಂತೀರಿ?
@ಪ್ರೇಮ್@


ಪ್ರೇಮಾ ಉದಯ್ ಕುಮಾರ್
ಸಹಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು
ಸುಳ್ಯ ದ.ಕ
574239

@prem@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ