ಶುಕ್ರವಾರ, ಜನವರಿ 1, 2021

ಲೇಖನ-ಹೊಗೆಸೊಪ್ಪೆಂಬ ರಾಕ್ಷಸ


ವಿಷಯ ಏನೆಂದರೆ ದಿನಾಂಕ 8, ಫೆಬ್ರವರಿ 2020
ಶನಿವಾರ ಬೆಳಗ್ಗೆ ನಾಲ್ಕು ಗಂಟೆಗೇ ಎದ್ದು ರಜೆ ಹಾಕಿ ಹೋಗಿ, ಭಾನುವಾರ ಹಿಂದೆ ಬಂದೆ ಕೊಟ್ಟಿಗೆಹಾರದಿಂದ ಸುಳ್ಯಕ್ಕೆ. ಕಾರಣ ನನ್ನ ಅತ್ತೆಯವರನ್ನು ನೋಡಲು ಹೋಗಿದ್ದೆ.
  ಛೆ, ಅದೆಂಥ ನೋಡುವುದು. ಸಿನೆಮಾ ಬರುವ ಮೊದಲು ಥಿಯೇಟರ್ ನಲ್ಲಿ  ತಂಬಾಕು ತಿನ್ನದಿರಿ, ಬಾಯಿ ಕ್ಯಾನ್ಸರ್ ಬರುವುದು ಎಂಬ ಜಾಹೀರಾತು ಬರುತ್ತದಲ್ಲ, ಅದಕ್ಕಿಂತ ಕಡೆಯಾಗಿದೆ. ಸುಮಾರು 50ಸಲ ರೇಡಿಯೇಶನ್, 3ಭಾರಿ ಬಾಯಿಯ ಆಪರೇಶನ್ ಆಗಿದೆ. ಕ್ಯಾನ್ಸರ್ ಸೆಲ್ ಗಳನ್ನೆಲ್ಲ ಸಾಯಿಸಲು ಅದು ಹರಡಿದ ಭಾಗವೆಲ್ಲ ಹಲ್ಲು ಕಿತ್ತು, ಕತ್ತರಿಸಿ ಹಾಕಲು ಆಪರೇಶನ್. ಕಳೆದ  ಅಕ್ಟೋಬರ್ ನಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೆನ್ನೆಯ ಮಾಂಸವನ್ನೆ ಕತ್ತರಿಸಿ, ಎದೆಯ ಮಾಂಸವನ್ನು ತೆಗೆದು ಕೆನ್ನೆಗಂಟಿಸಿದ ಮಹಾ ಸರ್ಜರಿ. ಡಾಕ್ಟರ್ಗಳ ಅಸಮರ್ಥತೆಯಿಂದಲೋ, ಕಣ್ತಪ್ಪಿನಿಂದಲೋ ಆದ ಪ್ರಮಾದದಿಂದಾಗಿ ಅದೇ ಜಾಗಕ್ಕೆ ಮೊದಲಿನ ಆಪರೇಶನ್ ನಿಂದ ಆದ ತಪ್ಪಿಗೆ ಮತ್ತೆರಡು ಬಾರಿ ಮೈನರ್ ಅಂತ ಆಪರೇಶನ್ ಮೇಲೆ ಆಪರೇಶನ್. 
     ಮನೆಯಲ್ಲಿ ನಾವು ಹರಿದ ಬಟ್ಟೆ ತೇಪೆ ಹಾಕಿದ ಹಾಗೆ, ಮುಖಕ್ಕೆ ತೇಪೆ ಕಾರ್ಯ. ಅದನ್ನು ನೋಡಿದ ನಾನು ಟೆನ್ಶನ್ ಗೆ ಬಿ.ಪಿ ಲೋ ಆಗಿ ಎರಡು ದಿನ ಒದ್ದಾಡಿದೆ. 
    ಇದೀಗ ಡಿಸ್ಚಾರ್ಜ್ ಮಾಡಿದ ಬಳಿಕ  ಮಗಳ ಮನೆಗೆ ಹೋಗಿ ಅಲ್ಲಿಂದ ಅವರ ತಾಯಿ ಮನೆಗೆ ಹೋಗಿ ಸ್ವಲ್ಪ ದಿನಗಳಿದ್ದು "ನನಗೆ ನನ್ನ ಮನೆಯಲ್ಲೆ ಇರಬೇಕು" ಎಂದು ಹಠ ಹಿಡಿದಾಗ ನನ್ನ ಪತಿ ಹೋಗಿ ಕರೆತಂದರು. ಜೊತೆಗೆ ಅವರನ್ನು ನೋಜಿಕೊಳ್ಳಲು ಅವರ ತಂಗಿಯವರನ್ನೂ ಕರೆದುಕೊಂಡು ಬಂದರು.
   ತೋಟಕ್ಕೆ ಹೋಗುವಾಗ ಎಲೆ, ಅಡಿಕೆಯ ಜೊತೆ ತಂಬಾಕನ್ನೂ (ಕಡ್ಡಿಪುಡಿಯನ್ನೂ)  ಸೇರಿಸಿ, ಕೊಟ್ಟಿಗೆಹಾರದ ಚಳಿಗೆ ಬಾಯಿಯಲ್ಲೆ ಸುಮಾರು ಹೊತ್ತು ಇಟ್ಟ ಪರಿಣಾಮ ಹಲ್ಲು ನೋವು ಕಾಣಿಸಿಕೊಂಡು, ಹಲ್ಲಿನ ಡಾಕ್ಟರ್ ಬಳಿ ಹೋದಾಗ ಅವರು ಮಂಗಳೂರಿನ ದೇರಳಕಟ್ಟೆಗೆ ಹೆಚ್ಚಿನ ಪರೀಕ್ಷೆಗೆ ಕಳುಹಿಸಿದಾಗಲೇ ಗೊತ್ತಾಗಿದ್ದು ಹೀಗಾಗಿದೆ ಎಂದು. ತಕ್ಷಣ ಮೊದಲನೆ ಆಪರೇಶನ್ 2013ರಲ್ಲಿ. ಅಲ್ಲಿಂದ ಘನ ಆಹಾರ ಬಿಟ್ಟು ದ್ರವ ಸೇವನೆ ಪ್ರಾರಂಭ. ಇಂದಿನವರೆಗೂ.
   ಮಗ ಅವರನ್ನು ಕರೆದುಕೊಂಡು ಹೋಗದ ಆಸ್ಪತ್ರೆಗಳಿಗೆ, ನಾಟಿ ಔಷಧಾಲಯಗಳಿಗೆ, ಹೇಳಿಕೊಂಡ ಹರಕೆಗಳಿಗೆ ಬಹುಶಃ ಲೆಕ್ಕವೇ ಇಲ್ಲ. ಆದರೇನು ಕ್ಯಾನ್ಸರ್ ಕೀಟಾಣುಗಳಿಗೆ ನಮ್ಮ ದೇಹಕ್ಕೆ ಬರಲು ಗೊತ್ತು, ಬಿಟ್ಟು ಹೋಗಲು ಗೊತ್ತಿಲ್ಲವೇನೋ. 
    ಆದರೂ ಮಾನವ ಅದನ್ನು ಓಡಿಸಿ ದೃಢವಾಗಿ ನಿಂತು, ಆರೋಗ್ಯವಾಗಿ ಬಾಳ ಬಲ್ಲ, ಹೇಗೆಂದರೆ ಬದುಕಿನ, ಜೀವ-ಜೀವನದ ಮೇಲಿನ ಪ್ರೀತಿ, ಸದೃಢ ನಿರ್ಧಾರ, ಮಾನಸಿಕ ಸ್ವಸ್ಥತೆ, ಬಲವಾದ ಮನದ ಭಾವನೆಗಳು, ಆಲೋಚನೆಗಳ ಮೂಲಕ. ಯಾರ ಮುಂದೆಯೂ ಅಳದೆ, ನೋವನ್ನು ಸಹಿಸಿ, "ಒಂದು ದಿನ ನಾನು ಗುಣಮುಖನಾಗುವೆ" ಎನ್ನುವ ಭಾವನೆಯೊಂದಿಗೆ ಉತ್ತಮ ಆಹಾರ ಪದ್ಧತಿ. ಹಣ್ಣಿನ ರಸಗಳು, ಎಳನೀರು, ರಾಗಿ ಗಂಜಿ ಇತ್ಯಾದಿ ನಿಯಮಿತ ಸೇವನೆ. ವೈದ್ಯರು ಹೇಳಿದಂತೆ ವ್ಯಾಯಾಮಗಳು, ದೈಹಿಕ ಅಭ್ಯಾಸಗಳನ್ನು ಮಾಡುವುದು.

   ನನ್ನ ಅತ್ತೆಯವರ ಪರಿಸ್ಥಿತಿ ನೋಡಿ ತುಂಬಾ ಬೇಸರ ಹಾಗೂ ಸಂಕಟವಾಯ್ತು. ಊಟ ಬೇಕೆನಿಸುತ್ತದೆ, ಹಸಿವಾಗುತ್ತದೆ, ಆದರೆ ತಿನ್ನಲಾಗದು. ಚಮಚದಲ್ಲಿ ಅರ್ಧರ್ಧವೇ ಬಾಯಿಗೆ ಹಾಕಿದರೂ ನುಂಗಲಾಗುತ್ತಿಲ್ಲ, ನಾಲಗೆ ತಡೆಯುತ್ತದೆ. ಗಟ್ಟಿ, ದಷ್ಟ ಪುಷ್ಟ ಶರೀರವೀಗ ಕಡ್ಡಿಯಂತಾಗಿ, ಶಕ್ತಿಯಿರದೆ ಎದ್ದು ಕುಳಿತುಕೊಳ್ಳಲೂ ಸಾಧ್ಯವಿಲ್ಲ. ಮಾತನಾಡಬೇಕೆನಿಸುತ್ತದೆ ಅವರಿಗೆ. ಮಾತನಾಡಲು ಪ್ರಯತ್ನಿಸುತ್ತಾರೆ. ಗಂಟಲಿನಿಂದ ಗೊರಗೊರ ಸ್ವರ ಬಿಟ್ಟರೆ ಮತ್ತೇನೂ ಕೇಳದು. ಧ್ವನಿ ಪೆಟ್ಟಿಗೆ ಕೆಲಸ ಮಾಡುತ್ತಿಲ್ಲ.
   ಅನ್ನನಾಳಕ್ಕೆ ಹಾಕಿದ್ದ ನೇರ ಪೈಪನ್ನು ಡಾಕ್ಟರ್ ತೆಗೆದು ಬಿಸಾಡಿರುವರು. ಕಾರಣ ಸ್ವಲ್ಪ ಸ್ವಲ್ಪವೇ ಬಾಯಲ್ಲಿ ತಿಂದು,ಕುಡಿದು ಬಾಯಾಡಿಸುತ್ತಾ, ಅಭಾಯಾಸ ಮಾಡಿ ಸರಿಯಾಗಲಿ ಎಂಬ ಕಾರಣಕ್ಕೆ. 
   ಆಧುನಿಕ ವೈದ್ಯ ಲೋಕದ ಸವಾಲು ಈ ಕ್ಯಾನ್ಸರ್. ಮನಸ್ಸನ್ನೂ ಬಿಡದೆ ಕಾಡುವ, ಕೆಲವೊಮ್ಮೆ ಕಾರಣವೇ ಅರಿಯದೆ ಬರುವ, ಗೊತ್ತೇ ಆಗದ, ಸಾವಿಗೆ ಶರಣಾಗಲೇ ಬೇಕಾದ, ಕೆಲವೊಮ್ಮೆ ಆಕಸ್ಮಾತಾಗಿ ಗೆದ್ದು ಬರುವ ಖಾಯಿಲೆಯಿದು. 
   ನೋಡುವಾಗ ನಮ್ಮ ಶತೃಗಳಿಗೂ ಹೀಗಾಗದಿರಲಿ, ನಾವೂ ಕೂಡ ಸಾಯುವ ಸಮಯಕ್ಕೆ ಒಂದೇ ಭಾರಿಗೆ ಗೊಟಕ್ ಅಂತ ಸಾಯಲಿ ದೇವರೇ ಅಂತ ಪ್ರಾರ್ಥನೆ ಮಾಡುವ ಹಾಗಾಗುತ್ತದೆ. 
ಆಸ್ಪತ್ರೆ, ಹಣದ ಖರ್ಚಿಗೆ ಲೆಕ್ಕಾಚಾರವೇ ಇಲ್ಲ. ಒಂದೆರಡು ಸಲವೇ ಆಪರೇಶನ್. ದುಡಿದ ಹಣವೆಲ್ಲ ಮದ್ದು, ಡಾಕ್ಟರ್ ಪಾಲು. ಹಾಗಂತ ಸುಮ್ಮನಿರಲಾದೀತೇ? ಅದೂ ಆಗದು.
   ನಿಮ್ಮ ಮನೆಯಲ್ಲಿರುವ ಹಿರಿಯರು, ಜನರಿಗೆ ನನ್ನ ಕೋರಿಕೆ ಇಷ್ಟೆ. ಎಲೆ, ಅಡಿಕೆ, ಸುಣ್ಣ ತಿನ್ನಲಿ, ಅಡ್ಡಿಯಿಲ್ಲ. ಯಾವುದೇ ಕಾರಣಕ್ಕೂ ಹೊಗೆಸೊಪ್ಪು, ಕಡ್ಡಿಪುಡಿ ತಿನ್ನದಂತೆ, ಬೀಡಿ ಸಿಗರೇಟು ಸೇವನೆ ಮಾಡದಂತೆ, ನಶ್ಯ ಸೇದದಂತೆ ಎಚ್ಚರಿಕೆವಹಿಸಿ. ತಂಬಾಕಿನ ಯಾವುದೇ ರೀತಿಯ ವಸ್ತುಗಳು ದೇಹ ಸೇರದಿರಲಿ. ಅದರ ಹಿಂಸೆ, ನರಕಯಾತನೆ ನೋಡಿದವರಿಗೆ, ಅನುಭವಿಸಿದವರಿಗೇ ಗೊತ್ತು. ಮನುಷ್ಯ ಜನ್ಮ ದೊಡ್ಡದು. ಆರೋಗ್ಯಕರ ವಸ್ತುಗಳನ್ನೇ ತಿಂದು ದೇಹವನ್ನು ತಂಪಾಗಿ, ಆರೋಗ್ಯಕರವಾಗಿರಿಸೋಣ. ಒಂದು ದಿನ ಸಾಯಲಿಕ್ಕಿರುವುದು ಗ್ಯಾರಂಟಿ. ಅಲ್ಲಿವರೆಗೂ ನೋವು ಪಡದೆ, ಪರರಿಗೆ ನೋವು ಕೊಡದೆ ಚೆನ್ನಾಗಿರೋಣ. ಎಲ್ಲರಲ್ಲಿ ವಿನಂತಿ ಇಷ್ಟೆ, ಈ ರೀತಿಯ ಮಾದಕ ವಸ್ತುಗಳಿಂದ ದೂರವಿರಿ, ಉತ್ತಮ ಆಹಾರ, ಹಣ್ಣು ತರಕಾರಿ ತಿನ್ನಿ. ಆರೋಗ್ಯ ಚೆನ್ನಾಗಿರಲಿ. ಆರೋಗ್ಯವೇ ಭಾಗ್ಯ ಅಲ್ಲವೇ? ನೀವೇನಂತೀರಿ?
@ಪ್ರೇಮ್@
09.02.2020



Show quoted text
ಪ್ರೇಮಾ ಉದಯ್ ಕುಮಾರ್ ಸುಳ್ಯ ದ.ಕ
Show quoted text

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ