ಶುಕ್ರವಾರ, ಜನವರಿ 1, 2021

ಪಯಣ

ಪಯಣ

ಹುಟ್ಟು ಸಾವಿದು ಜಗದಿ 
ಬಂದು ಹೋಗುವ ಹಾದಿ
ಜೀವನದ ಪಯಣದಲಿದೆ ನಿಧಿ
ಸಂಗ್ರಹಿಸಬೇಕು ಪ್ರೀತಿಯ ಸಪ್ತಪದಿ

ಬರುತ ಅಳುತಲಿ ನಿಂದು
ಹೋಗುವಾಗ ಪರರ ಅಳಿಸುತಲಿದ್ದು
ಬಿಟ್ಟು ಹೋಗಬೇಕು ಮನತುಂಬಿದ ಭಾವದಿ
ಕಲಿತು ಕಲಿಸುತಲಿ ಕಲಿಯುತಲೇ ಕೊನೆಯುಸಿರು

ಮದ ಮೋಹ ಮತ್ಸರವ ತೊರೆದು
ಸ್ನೇಹ ಸಂತಸ ಸುಖವ ನೆನೆದು
ಪರರಿಗುಪಕಾರ ಮಾಡಿ ಮನದಣಿದು
ಕೂಡಿಟ್ಟ ಹೊನ್ನದೆಲ್ಲ ಇಲ್ಲೆ ತೊರೆದು

ಮನೆ ಕನಕ ಧನರಾಶಿ ಸರ್ವವ ಉಳಿಸಿ
ತಾನುಂಡ ಊಟವನಷ್ಟೆ ನಿಜದಿ ಬಳಸಿ
ನೆಮ್ಮದಿಯ ಕ್ಷಣಗಳನು ಅನುಭವಿಸಿ
ಬೇಸರದ ಘಳಿಗೆಯಲಿ ನೊಂದು ಬೆಂದು

ತಾನೆಂದು ಮೆರೆದವ ಮರೆಯಾದ
ನಾವೊಂದೆ ಎಂದವ ನೆನಪಾಗುಳಿದ
ಜನರಿಗಾಗಿ ದುಡಿದವ ನಕ್ಷತ್ರವಾಗುಳಿದ
ತನಗಾಗೆ ಕೂಡಿಟ್ಟವ ಸ್ಮಶಾನದೊಳಗುಳಿದ..
@ಪ್ರೇಮ್@
17.12.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ